ಒಲವಿನ ಓಲೆ

ನಿನ್ನೊಲವಿನ ವಿಸ್ಮಯದ ಜಗದಲಿ
ಅಕ್ಕರೆಯ ನಗೆಯ ಬಾಳಬಂಡಿಯಲಿ
ನೀ ಮರಳಿ ಮರುಕಳಿಸಿದ ಪ್ರೀತಿಯೊಳು
ನನ್ನೆದೆಯಲಿ ತುಂಬಿದೆ ನಿನ್ನೊಲವಿನ ಬಾಳು

ತನ್ಮಯಳಾದೆನು ನಾ ಈ ಬಣ್ಣದ ಚಿತ್ತಾರದಲಿ
ನಿನ್ನ ಕಂಗಳ ಕೊಳದಿ ತುಂಬಿಹ ಬೆಳಕಿನ ಕಿರಣದಲಿ
ಸದಾ ನಗೆಯಿರಲಿ ನಿನ್ನ ತುಟಿಯಂಚಿನಲಿ
ನಿನ್ನಾ ನಗೆ ಹೊಳೆಯುವುದು ನನ್ನೀ ಮುಂಗುರುಳಿನಲಿ

ಮುಸ್ಸಂಜೆಯ ತಿಳಿ ನೀಲಿ ಆಗಸದಿ ನೀನಿಟ್ಟ ದೀಪ
ಕಳೆದಿದೆ ಕತ್ತಲ ಅಕ್ಕರೆಯ ಸವಿಗಾನದಲಿ
ಇಬ್ಬನಿಯು ಮುತ್ತಿಕ್ಕಿದೆ ಹೂವಿನ ಗೊಂಚಲಲಿ
ಶರದೃತುವಿನ ಆಗಮನವಾಗಿದೆ ನನ್ನ ಬಾಳಿನಲಿ

~ ಸ್ಮಿತಾ