ಆಗರ್ಭ ಶ್ರೀಮಂತ ಮನೆತನದ, ಸುಂದರ, ಮುಂಗೋಪಿ ಹುಡುಗನೊಂದಿಗೆ, ಸಣ್ಣ ಪೇಟೆಯ, ಸಾಧಾರಣ ಮನೆತನದ ಸಿಂಪಲ್ ಹುಡುಗಿಯ ಪ್ರೇಮಕಥೆ.
___________________________________________________________________________________
“ಬೆಳಗೆದ್ದು ಒಂದು ಲೋಟ ಕಾಫಿ ಕುಡಿಯದಿದ್ದರೆ ತಲೆಯೇ ಓಡುವುದಿಲ್ಲ ನಿನಗೆ. ಅದನ್ನಾದರೂ ನೀನೇ ಮಾಡಿಕೊಳ್ಳುತ್ತೀಯ? ಅದೂ ಇಲ್ಲ. ನಾನು ಕಾಫಿ ಬೆರೆಸಿ ನಿನ್ನ ಮುಂದೆ ಹಿಡಿಯಬೇಕು. ಆದಷ್ಟು ಬೇಗ ನಿನಗೊಂದು ಮದುವೆ ಮಾಡಿಸಿ, ಕಳುಹಿಸಿಕೊಟ್ಟರೆ ಸಾಕಾಗಿದೆ; ತಲೆನೋವು”, ಎಂದು ಪ್ರೀತಿಯಿಂದ ಗದರುತ್ತಲೇ ಸಾರಿಕಾಳ ಮುಂದೆ ಕಾಫಿ ಕಪ್ ಹಿಡಿದು ನಿಂತಿದ್ದರು ಸುಮಂಗಲ!
ಎಲ್ಲೋ ಹೊರಡುವ ತಯಾರಿಯಲ್ಲಿದ್ದ ಸಾರಿಕಾ, ಕಾಫಿ ಕಪ್ ಬದಿಗಿಟ್ಟು, ಅಮ್ಮನ ಕೊರಳನ್ನು ಬಳಸಿ ಅಷ್ಟೇ ಮೃದುವಾದ ದನಿಯಲ್ಲಿ ಹೇಳಿದಳು, “ನನಗೆ ೭-೭ ಜನ್ಮಕ್ಕೂ ನೀನೇ ತಾಯಿಯಾಗಿ ಸಿಗು, ಮತ್ತು ನೀನೇ ಕಾಫಿ ಮಾಡಿಕೊಡುವಂತಾಗಲಿ. ನಾನಂತೂ ಮದುವೆಯ ಯೋಚನೆಯಲ್ಲಿಲ್ಲ!”.
“ಅದು ಏನು ಬೆಳಗ್ಗೆ- ಬೆಳಗ್ಗೆ ಗೊಣಗುತೀಯಪ್ಪಾ? ಎತ್ತ ಕಡೆ ಹೊರಟಿದೆ ನಿನ್ನ ಸವಾರಿ?” ಕೇಳಿದರು ಸುಮಂಗಲ.
“ಇವತ್ತು ಒಂದು ಸಂದರ್ಶನವಿದೆ. ಕಳೆದ ವಾರ ದಿನಪತ್ರಿಕೆಯಲ್ಲಿ ನೋಡಿ, ಅಪ್ಲೈ ಮಾಡಿದ್ದೆ. ಕರೆ ಬಂದಿದೆ. ತಡವಾಯಿತು, ಬೇಗ ಹೊರಡಬೇಕು”, ಎಂದು ಖಾಲಿ ಕಾಫಿ ಕಪ್ ಸುಮಂಗಲರವರ ಕೈಗಿತ್ತು ತನ್ನ ವ್ಯಾನಿಟಿ ಬ್ಯಾಗ್ ರೆಡಿ ಮಾಡಿಕೊಳ್ಳುವುದರಲ್ಲಿ ನಿರತಳಾದಳು ಸಾರಿಕಾ.
“ಏನಾದರೂ ಮಾಡು, ಎಲ್ಲಾದರೂ ಹೋಗಿ ಬಾ. ಜೋಪಾನ. ತಡ ಮಾಡಬೇಡ. ಹಾಗೆಯೇ ಬರುತ್ತಾ ಪೇಟೆಯಿಂದ ಸ್ವಲ್ಪ ತರಕಾರಿ ತೆಗೆದುಕೊಂಡು ಬಾ. ನಿಮ್ಮಪ್ಪನಿಗೆ ೧ ವಾರದಿಂದ ನೆನಪು ಮಾಡಿ ಮಾಡಿ ನನಗೂ ಸಾಕಾಯಿತು”, ಎಂದು ಹೊರನಡೆದರು ಸುಮಂಗಲ.
ಸಾರಿಕಾ ಮತ್ತು ಸಾಗರ್, ಸುಮಂಗಲ ಹಾಗೂ ಸುಜನರ ಮಕ್ಕಳು. ದೊಡ್ಡವಳು ಸಾರಿಕಾ, ಬಿಎ ಪಾಸಾಗಿದ್ದಳು. ಮುಂದೆ ಓದುವ ಆಸಕ್ತಿಗಿಂತ ಹೆಚ್ಚಾಗಿ ಕೆಲಸಕ್ಕೆ ಸೇರಿಕೊಳ್ಳುವ ಹಂಬಲದಲ್ಲಿದ್ದಳು. ಅಪ್ಪ – ಅಮ್ಮ ತನ್ನ ಮದುವೆ ಮಾಡಿಸುವ ಮೊದಲೇ ಸ್ವಲ್ಪವಾದರೂ ಸಂಪಾದಿಸಿಟ್ಟುಕೊಳ್ಳೋಣವೆಂಬುದು ಅವಳ ತರ್ಕ. ಅವಳಿಗೆ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೂ, ಸಮಾಜ ಹಾಗು ಹೆತ್ತವರಿಗೋಸ್ಕರ ಎಲ್ಲವೂ ಸರಿಹೊಂದಿದರೆ ನೋಡೋಣವೆಂದು ಹೇಳಿದ್ದೇ ತಡ, ದಂಪತಿಗಳು ವರಾನ್ವೇಷಣೆಯಲ್ಲಿ ತೊಡಗಿದ್ದರು!
ಸಾಗರ್ ಇನ್ನೂ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದನು. ಅವನಿಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮಾಡಬೇಕೆಂಬ ಆಸೆ. ಹಾಗಾಗಿ ಅದರ ತಯಾರಿಯಲ್ಲಿ ನಿರತನಾಗಿದ್ದನು. ಇವನು ಎಷ್ಟು ಮಿತಭಾಷಿಯೋ ಆ ಪಾಲಿನದೆಲ್ಲ ಇವನ ಅಕ್ಕನೇ ಮಾತನಾಡುತ್ತಾಳೆಂದು ಎಲ್ಲರೂ ಆಡಿಕೊಳ್ಳುತ್ತಿದ್ದರು!
ಸುಮಂಗಲ – ಸುಜನರದು ಆರಕ್ಕೇರದ, ಮೂರಕ್ಕಿಳಿಯದ ಸಂತೃಪ್ತ ಮಧ್ಯಮ ವರ್ಗದ ಕುಟುಂಬ. ಮಂಗಳೂರಿನ ಹೊರವಲಯದ ತುಂಬೆಯ ಬಳಿ ಇವರ ಮನೆ. ಸುಜನರಿಗೆ ಅಪ್ಪನ ಕಾಲದ ಪಿತ್ರಾರ್ಜಿತ ಮನೆ ಹಾಗೂ ಹಿತ್ತಿಲ ತೋಟವಿತ್ತು. ಹಾಗೆಯೇ ತುಂಬೆ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ವೃತ್ತಿ. ಗೃಹಿಣಿ ಸುಮಂಗಲ, ಹಿತ್ತಿಲ ತೋಟದಲ್ಲಿ ಅಲ್ಪ – ಸ್ವಲ್ಪ ಶಂಕರಪುರ ಮಲ್ಲಿಗೆ ಬೆಳೆದು, ಅದನ್ನು ಕಟ್ಟಿ, ಪೇಟೆಯಲ್ಲಿ ಮಾರಲು ಕೊಡುತ್ತಿದ್ದರು, ಸಂಸಾರದ ಖರ್ಚು ಸರಿಹೊಂದಿಸಲು ತಮ್ಮ ಅಳಿಲು ಸೇವೆಯೂ ಇರಲಿ ಎಂದು.
*******
“ನನಗೆ ಲೇಟ್ ಆಗ್ಲಿಂತಾನೆ ಈಗ ನನಗಿಂತ ಮೊದಲು ಅವಳು ಸ್ನಾನಕ್ಕೆ ಹೋಗಿದ್ದಲ್ಲ? ಇವತ್ತು ಬೇಗ ಆಫೀಸಿಗೆ ಹೋಗಬೇಕಿದೆ ನನಗೆ ಎಂದು ಗೊತ್ತಿದೆ ಅವಳಿಗೆ. ಆದರೂ ನಿಮ್ಮೆಲ್ಲರ ಮುದ್ದಿನಿಂದ ಈ ರೀತಿ ಕೀಟಲೆ ಮಾಡುತ್ತಾ ನನಗೆ ಇರಿಟೇಟ್ ಮಾಡುತ್ತಿರುತ್ತಾಳೆ. ಯಾರಿಗೆ ಹೇಳಲಿ ನಾನು?”, ಎಂದು ಕೋಪದಿಂದ ಬಡಬಡಿಸುತ್ತಾ ಹಾಲಿನಲ್ಲಿ ಆಚೀಚೆ ಹೆಜ್ಜೆ ಹಾಕುತ್ತಿದ್ದನು ರಜತ್.
ಇವನ ಕೋಪಕ್ಕೆ ತುತ್ತಾದರೆ ಕಷ್ಟವೆಂದು ಅಡಿಗೆಯ ದಯಾನಂದ ಭಟ್ರು ಮೆತ್ತಗೆ ಡೈನಿಂಗ್ ಟೇಬಲಿನಲ್ಲಿ ತಿಂಡಿಗೆ ಎಲ್ಲಾ ರೆಡಿ ಮಾಡಿಟ್ಟು, ಸರಕ್ಕನೇ ಅಡಿಗೆ ಮನೆ ಸೇರಿಕೊಂಡರು. ಇದನ್ನು ಗಮನಿಸಿದ ರಮಾ ಹೊರಗಡೆ ಬಂದು ಅವನನ್ನು ಸಮಾಧಾನ ಮಾಡುವಲ್ಲಿ ನಿರತರಾದರು.
“ನಿನಗೆ ಗೊತ್ತಿದೆ ತಾನೇ ಅವಳ ಸ್ವಭಾವ? ನೀನು ಮೊದಲೇ ಯಾಕೆ ಹೇಳಬೇಕಿತ್ತು, ಇವತ್ತು ನಿನಗೆ ಬೇಗ ಹೋಗಬೇಕಿತ್ತೆಂದು? ಈಗ ಕಾಯುವ ತಾಳ್ಮೆಯಿಲ್ಲದಿದ್ದರೆ ಅವಳ ರೂಮಿನಲ್ಲಿರುವ ಬಾತ್ ರೂಮಿನಲ್ಲಿ ಸ್ನಾನ ಮಾಡಿ ಬಾ. ಸುಮ್ಮನೇ ಬೆಳಗ್ಗೆ – ಬೆಳಗ್ಗೆ ನನ್ನ ತಲೆ ಹಾಳು ಮಾಡಬೇಡಿ ಅಣ್ಣ – ತಂಗಿ ಸೇರಿಕೊಂಡು”, ಎಂದರು ರಮಾ.
“ಹೌದೌದು. ನಿನಗೆ ಯಾವಾಗಲೂ ನನ್ನ ತಪ್ಪೇ ಕಾಣಿಸುವುದು. ಅವಳಿಗೆ ಯಾರೂ ಏನೂ ಹೇಳಬೇಡಿ. ನನಗೆ ನನ್ನ ರೂಮಿನಲ್ಲಿ ಬಿಟ್ಟರೆ ಬೇರೆಲ್ಲೂ ಸರಿಹೋಗುವುದಿಲ್ಲವೆಂದು ನಿನಗೂ ಚೆನ್ನಾಗಿ ಗೊತ್ತಿದೆ.”, ಎಂದು ಇನ್ನೂ ಏನೋ ಹೇಳಬೇಕೆನ್ನುವಷ್ಟರಲ್ಲಿ ಅವನ ಅತ್ತಿಗೆ ಕಾಂಚನ ಗಡಿಬಿಡಿಯಲ್ಲಿ ಮೆಟ್ಟಿಲಿಳಿದು ಬರುವುದು ಕಾಣಿಸಿತು.
“ಯಾಕೆ, ಏನಾಯಿತು ಅತ್ತಿಗೆ? ಯಾಕಿಷ್ಟು ಗಾಬರಿಯಾಗಿದ್ದೀರಿ? ಅಣ್ಣ ಫೋನ್ ಮಾಡಿದ್ದನ ಲಂಡನ್ನಿಂದ? ಏನು ತೊಂದರೆ?”, ಎಂದು ಕೇಳಿದನು.
ಅವಳು ಓಡು ನಡಿಗೆಯಲ್ಲೇ, “ಅಣ್ಣನದು ಏನೂ ತೊಂದರೆಯಿಲ್ಲ. ಈ ವೀಕೆಂಡ್ ಹಿಂದಿರುಗಿ ಬರುತ್ತಿದ್ದಾರೆ. ಆಸ್ಪತ್ರೆಗೆ ಹೋಗಬೇಕು. ಎಮರ್ಜೆನ್ಸಿ ಕೇಸ್ ಬಂದಿದೆ, ಅದೂ ನಿಮ್ಮ ಅಣ್ಣ ಇಲ್ಲದ ಸಮಯದಲ್ಲಿ ಏನೋ ಆಕ್ಸಿಡೆಂಟ್ ಕೇಸ್. ನಾನು ಫಸ್ಟ್ ಟೈಮ್ ಈ ತರಹದ ಕೇಸ್ ತೆಗೆದುಕೊಳ್ಳುತ್ತಿರುವುದು. ಅಣ್ಣ ಇದ್ದಿದ್ದರೆ ಇಷ್ಟು ಟೆನ್ಶನ್ ಇರುತ್ತಿರಲಿಲ್ಲ”, ಎಂದು ಕಾರ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟಳು.
“ಓಹ್”, ಎಂದು ರಜತ್ ಉದ್ಗಾರ ತೆಗೆಯುತ್ತಲೇ, ರಮ ಹೇಳಿದರು, “ಶೀ ಕ್ಯಾನ್ ಹ್ಯಾಂಡಲ್ ಇಟ್, ಡೋಂಟ್ ವರಿ. ನೀನು ನಿನ್ನ ಕೆಲಸ ನೋಡಿಕೋ. ಅವಳ ಸ್ನಾನ ಆಯಿತು ನೋಡು”. ಏನೂ ಮಾತನಾಡದೇ ಸುಮ್ಮನೇ ರೂಮಿನತ್ತ ಹೆಜ್ಜೆ ಹಾಕಿದನು ರಜತ್. ಹಾಗೆಯೇ ಅಣ್ಣ ರಂಜನಿಗೆ ಒಂದು ವಾಟ್ಸಾಪ್ಪ್ ಮೆಸೇಜ್ ಮಾಡಲು ಮರೆಯಲಿಲ್ಲ.
ರಜತ್ ಸ್ನಾನ ಮುಗಿಸಿ ಬರುವಷ್ಟರಲ್ಲಿ, ರಮಾ, ರಾಘವ್ ಜೊತೆ ರಂಜಿತ ತಿಂಡಿ ತಿನ್ನುತ್ತ ಇದ್ದಳು. ತಿಂಡಿ ತಿನ್ನಲು ಕುಳಿತವನೇ ಮೂಗಿಗೆ ಗುದ್ದುವಂತೆ ಮುಷ್ಠಿ ಮಾಡಿದನು ರಜತ್. “ಡ್ಯಾಡಿ, ನೋಡಿ ಅಣ್ಣ ಸುಮ್ಮನೇ ತೊಂದರೆ ಕೊಡುತ್ತಿದ್ದಾನೆ, ತಿಂಡಿ ತಿಂದು ಕಾಲೇಜಿಗೆ ಹೊರಡಬೇಕು ನಾನು”, ಎಂದು ಕಿರುಚುವ ದನಿಯಲ್ಲಿ ಕೂಗಿದಳು ರಂಜಿತ. ರಜತ್ ಏನಾದರೂ ಹೇಳುವ ಮೊದಲೇ, ರಾಘವ್ ಹೇಳಿದರು, “ಅವನಿಗಂತೂ ಟೈಮ್ ಸೆನ್ಸ್ ಇಲ್ಲ. ನೀನಾದರೂ ಸಮಯಕ್ಕೆ ಸರಿಯಾಗಿ ನಿನ್ನ ಕಾಲೇಜು, ಕೆಲಸದತ್ತ ಗಮನಹರಿಸು”, ಎಂದರು. ಇನ್ನು ತಾನು ಏನು ಹೇಳಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾದನು ರಜತ್.
ರಮಾ – ರಾಘವ್ ಕುಟುಂಬ, ಮಂಗಳೂರಿನ ಆಗರ್ಭ ಶ್ರೀಮಂತ ಮನೆತನದಲ್ಲಿ ಒಬ್ಬರು. ಇವರಿಗೆ ಮೂವರು ಮಕ್ಕಳು.
ದೊಡ್ಡವನು ರಂಜನ್, ಪ್ರಖ್ಯಾತ ಮೂಳೆ ತಜ್ಞ ವೈದ್ಯ. ಅವನ ಶ್ರೀಮತಿ ಡಾಕ್ಟರ್ ಕಾಂಚನ. ಈಕೆ ನ್ಯೂರೋ ಸರ್ಜನ್ (ನರ ಶಸ್ತ್ರ ಚಿಕಿತ್ಸೆ ಪ್ರವೀಣೆ). ಇಬ್ಬರೂ ಸೇರಿಕೊಂಡು ಮಂಗಳೂರಿನಲ್ಲಿ ತಮ್ಮದೇ ಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿದ್ದರು.
ಎರಡನೆಯವನು ರಜತ್. ಹಾರ್ವರ್ಡಿನಲ್ಲಿ ಎಂಬಿಎ ಮಾಡಿ, ಈಗ ತಾನೇ ಅಪ್ಪನ ಗ್ರಾನೈಟ್ ಮತ್ತು ಹೋಟೆಲ್ ವ್ಯವಹಾರದಲ್ಲಿ, ಹೋಟೆಲ್ ವ್ಯವಹಾರವನ್ನು ಆಯ್ಕೆಮಾಡಿಕೊಂಡು ಪಾಲುದಾರಿಕೆಯಲ್ಲಿ ತೊಡಗಿದ್ದನು. ತಮಗೆ ಪೂರ್ತಿ ನಂಬಿಕೆ ಬರುವವರೆಗೆ ಮಗನಿಗೆ ಸಂಪೂರ್ಣ ಅಧಿಕಾರ ಕೊಡಲು ರಾಘವ್ ಇನ್ನೂ ತಯಾರಿರಲಿಲ್ಲ. ಇವನಿಗೋ, ಹಣ ಮತ್ತು ವಿದ್ಯೆ; ಎರಡೂ ಒಟ್ಟಿಗಿದ್ದರೆ ಏನು ಬೇಕಾದರೂ ಸಾಧಿಸಬಹುದು, ಬದುಕಿನಲ್ಲಿ ಎಲ್ಲವೂ ಸಿಕ್ಕೇ ಸಿಗುವುದು ಇವೆರಡಿದ್ದರೆ, ಬೇರೇನೂ ಬೇಡ ಎಂಬ ಅಚಲ ನಂಬಿಕೆ. ಸ್ವಲ್ಪ ಅತಿಯಾದ ಆತ್ಮವಿಶ್ವಾಸವೆನ್ನಬಹುದು! ಹಾಗೆಯೇ ಒರಟ, ಮುಂಗೋಪಿ ಈತ. ಅದಕ್ಕೇ ಮನೆಯ ಯಾರೊಬ್ಬ ಕೆಲಸದವರೂ ಇವನೆದುರು ಬರುತ್ತಿರಲಿಲ್ಲ. ತನ್ನ ಗಾಡಿಗೆ ಈತನೇ ಡ್ರೈವರ್. ಬೇರೆಯವರು ಹೇಗೆ ಓಡಿಸಿದರೂ ಸರಿಯಾಗದು ಈತನಿಗೆ!
ಮೂರನೆಯವಳು ಎಲ್ಲರ ಮುದ್ದಿನ ತಂಗಿ, ರಂಜಿತಾ. ಕಾಲೇಜಿನಲ್ಲಿ ಬಿ ಎಸ್ ಡಬ್ಲ್ಯೂ (Bachelor of Social Work), ಮೊದಲ ವರ್ಷ ಓದುತ್ತಿದ್ದಳು. ಈಕೆಗೆ ರಜತ್ ಕಂಡರೆ ಏನೋ ವಿಚಿತ್ರ ಅಕ್ಕರೆ, ಅವನಿಗೆ ತೊಂದರೆ ಕೊಡುತ್ತ, ಅಪ್ಪನ ಕೈಯ್ಯಲ್ಲಿ ಬೈಗಳು ತಿನ್ನಿಸುತ್ತ ದಿನಗಳೆದರೆ ಅದೇ ಒಂದು ಟೈಮ್ ಪಾಸ್ ಆ ದಿನಕ್ಕೆ!
ಇವಳ ಬುದ್ಧಿ ಗೊತ್ತಿದ್ದರೂ, ರಾಘವ್ ಕೂಡ ಸ್ವಲ್ಪ ಮುಂಗೋಪಿಯಾದ್ದರಿಂದ ರಮಾ ಹೆಚ್ಚೇನೂ ಹೇಳುತ್ತಿರಲಿಲ್ಲ ಈ ಬಗ್ಗೆ ಯಾರೊಂದಿಗೂ. ಅವರು ತಮ್ಮ ಪಾಡಿಗೆ ಆಸ್ಪತ್ರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರಷ್ಟೇ.
ಎಂಬಿಎ ಓದಿದ್ದರೂ ಸಹ ಅದ್ಯಾಕೋ ರಾಘವ್ ಪತ್ನಿಗೆ ತಮ್ಮ ವ್ಯವಹಾರದಲ್ಲಿ ಯಾವುದೇ ಜವಾಬ್ದಾರಿಯನ್ನು ವಹಿಸಿರಲಿಲ್ಲ. ಚಿಕವರಿದ್ದಾಗಿಂದ ೩ ಮಕ್ಕಳ ಲಾಲನೆ-ಪಾಲನೆಯಲ್ಲಿ ಚೂರೂ ಕುಂದಾಗದಂತೆ ನೋಡಿಕೊಂಡ ಅಮ್ಮನ ಬಗೆಗಿದ್ದ ಅಪಾರ ಪ್ರೀತಿ-ಗೌರವ ಹಾಗೂ ಸ್ನೇಹದಿಂದ, ರಂಜನ್ ಅಮ್ಮನ ಮನದಾಳದ ಮಾತನ್ನು ಅರಿತು; ಅವರು ಕೇಳದಿದ್ದರೂ, ಆಸ್ಪತ್ರೆ ಜವಾಬ್ದಾರಿಯನ್ನುಅವರಿಗೆ ವಹಿಸಿದ್ದನು. ಅವರು ಮೃದುವಾಗಿ ನಿರಾಕರಿಸಿ, ಸೊಸೆಗೆ ಒಪ್ಪಿಸಲು ಹೊರಟಾಗ ಕಾಂಚನ ಸಹ, “ನನಗೆ ಬರೀ ಕುಯ್ಯುವುದು, ಕೊರೆಯುವುದು ಗೊತ್ತು, ಹಾಗೆಂದು, ಈ ವ್ಯವಹಾರವೆಲ್ಲ ನನ್ನಿಂದಾಗದು. ನಿಮಗೂ ಒಳ್ಳೆ ಟೈಮ್ ಪಾಸ್, ಬನ್ನಿಅತ್ತೆ”, ಎಂದು ಒಪ್ಪಿಸಿದ್ದಳು.
