ಭಾಗ – ೧
ಗಂಟೆ ಬೆಳಗಿನ ಒಂಭತ್ತಾದರೂ ಏಳದ ಸಾಕ್ಷಿಯನ್ನು ನೋಡಿದ ರತ್ನಮ್ಮನ ಮುಖ ಚಿಂತಾಕ್ರಾಂತವಾಯಿತು. ” ಸಾಕ್ಷಿ ಎದ್ದೇಳು ಬೇಗ. ಸೂರ್ಯ ನೆತ್ತಿ ಮೇಲೆ ಬಂದಾಯ್ತು”. ಹಾಂ ಇಲ್ಲ.. ಹೂಂ ಇಲ್ಲ. ಏನಾಗಿದೆ ಇವಳಿಗೆ ಎಂದುಕೊಂಡೇ ತಿಂಡಿ ತಿನ್ನತೊಡಗಿದರು. ಮನಸ್ಸು ತಂತಾನೆ ೩೨ ವರ್ಷಗಳಷ್ಟು ಹಿಂದಕ್ಕೋಡಿತು.
********
ತಾವು ಮದುವೆಯಾಗಿ ಬಂದ ೪ ವರ್ಷಗಳ ಕಾಲವಾದರೂ ಮಡಿಲು ತುಂಬದೇ ಇದ್ದಾಗ ಕನಸ ಹೊತ್ತು ಬಂದ ಜೀವ ಕಮರಿ ಹೋದಂತಾಗಿತ್ತು. ದೇವರ ದಯೆಯೇನೋ ಎಂಬಂತೆ ಅದೇ ವರ್ಷ ಅವರ ಜೀವನದಲ್ಲಿ ಸಾಕ್ಷಿಯ ಆಗಮನವಾಯಿತು. ಹಸುಗೂಸಿನ ಆಟ-ಪಾಠದೊಂದಿಗೆ ದಿನಗಳು ಉರುಳಿದ್ದೇ ಗೊತ್ತಾಗಲಿಲ್ಲ ಗಂಡ-ಹೆಂಡಿರಿಗೆ. ವಿಧಿಬರಹವೇನೋ. ರತ್ನಮ್ಮರ ಯಜಮಾನರು ಅಲ್ಪಾಯುಷಿಯಾಗಿಬಿಟ್ಟರು. ಅಕಸ್ಮಾತ್ತಾದ ಅಪಘಾತ ತಂದ ಆಪತ್ತು ರತ್ನಮ್ಮರ ಪಾಲಿಗೆ ಬರ ಸಿಡಿಲಾಗಿ ಬಡಿದಿತ್ತು. ಮುಂದೇನೆಂದು ತೋಚದೇ ದಿಕ್ಕೆಟ್ಟು ಕುಳಿತಿದ್ದರು.
********
“ಏನಮ್ಮಾ.., ತಿಂಡಿ ತಟ್ಟೆ ಕೈಯ್ಯಲ್ಲಿ ಹಿಡ್ಕೊಂಡು ಇದೇನು ಮಾಡ್ತಾ ಇದ್ದೀಯಾ?” ಎಂಬ ಸಾಕ್ಷಿಯ ಧ್ವನಿ ರತ್ನಮ್ಮರನ್ನು ಎಚ್ಚರಿಸಿತು. “ಏನಿಲ್ಲ, ನಿನಗೂ ತಿಂಡಿ ಕೊಡಲೇನೇ? ಬೇಗ ಮುಖ ತೊಳ್ಕೊಂಡು ಬಾ” ಎಂದರು. “ನನಗೆ ಹಸಿವಿಲ್ಲ, ನೀನು ಬೇಗನೆ ತಿಂಡಿ ಮುಗಿಸ್ಕೊ. ಮಧ್ಯಾಹ್ನ ಊಟಕ್ಕೆ ಹೊರಗಡೆ ಹೋಗೋಣ. ಅಡಿಗೆ ಮಾಡ್ಬೇಡ ಇವತ್ತು” ಎನ್ನುತ್ತಲೇ ಬಿರುಸಾಗಿ ಒಳ ನಡೆದಳು.
ಹೂವಿನ ಗಿಡಕ್ಕೆಲ್ಲಾ ನೀರುಣಿಸಿ, ಅಡಿಕೆ ತೋಟದಲ್ಲೊಂದು ರೌಂಡ್ ಹಾಕಿ ಬರುವಷ್ಟರಲ್ಲಿ ಗಂಟೆ ೧೧.೩೦ ದಾಟಿತ್ತು. ಮತ್ತೆ ಮಗಳ ಮಾತು ನೆನಪಾಯಿತು. ಬೆಳಗ್ಗೆ ಹಸಿವಿಲ್ಲವೆಂದವಳು ಮಧ್ಯಾಹ್ನ ಒಳ್ಳೆ ಮೃಷ್ಟಾನ್ನ ಭೋಜನಕ್ಕೆ ಸಿದ್ಧಳಾಗುವಂತೆ ತೋರುತ್ತಿದ್ದಾಳೆ! ಇವಳು ನನ್ನ ಮಗಳೇನಾ? ಮತ್ತೆ ರತ್ನಮ್ಮರ ಮನಸ್ಸು ಹಿಂದಕ್ಕೋಡಿತು.
********
ಕಂಗೆಟ್ಟು ಕುಳಿತ ರತ್ನಮ್ಮಳಿಗೆ ಅವಳ ಅಣ್ಣ ಶಿವರಾಮ ಬಂದು, “ಹೀಗೆ ಕುಳಿತರೆ ನಿನ್ನ ಮುಂದಿನ ಜೀವನ ಹೇಗೆ ಸಾಗುವುದು? ನಿನ್ನ ಬಗ್ಗೆ ಅಲ್ಲದಿದ್ದರೂ ಸಾಕ್ಷಿಯ ಬಗ್ಗೆಯಾದರೂ ಯೋಚಿಸಿ ನೋಡು. ನೀನು ಧೈರ್ಯದಿಂದ ಮನೆಯನ್ನು ಮುನ್ನಡೆಸಬೇಕು. ಇಲ್ಲವಾದಲ್ಲಿ ನನ್ನ ಜೊತೆಯಾದರೂ ಬಂದುಬಿಡು. ನನ್ನ ಸಂಸಾರದೊಂದಿಗೆ ನೀನು ಮತ್ತು ಸಾಕ್ಷಿ ನನಗೇನು ಭಾರವಲ್ಲ. ಯೋಚಿಸಿ ನಿಧಾನಕ್ಕೆ ನಿನ್ನ ನಿರ್ಧಾರ ತಿಳಿಸು”, ಎಂದು ಹೊರಟುಹೋದನು.
ಬೆಳಗ್ಗೆ ಎದ್ದವರೇ ರತ್ನಮ್ಮ ನೇರವಾಗಿ ಅಣ್ಣನ ಬಳಿ ಬಂದು, “ನೀನು ಹೇಳಿದ್ದು ಸರಿ; ನಾನು ನನಗೋಸ್ಕರವಲ್ಲದಿದ್ದರೂ ಸಾಕ್ಷಿಗಾಗಿ ಮುನ್ನಡೆಯಬೇಕು. ನಿಮ್ಮ ಜೊತೆ ಇರುವುದೇನೋ ಸರಿ. ಆದರೆ, ನಮ್ಮೆಜಮಾನ್ರ ನೆನಪಾದ ಈ ಮನೆಯೇ ನನ್ನ ಕೊನೆಯವರೆಗಿನ ಆಸರೆ. ಕೊನೆಯುಸಿರಿರುವವರೆಗೂ ಇಲ್ಲೇ ಬಾಳಿ ಬದುಕುವುದೆಂದು ನಿರ್ಧರಿಸಿರುವೆ. ಬೇಕಾದಾಗೆಲ್ಲ ನೀನು, ಸುನಂದ ನನ್ನ ಬೆನ್ನಿಗಿರುವಿರೆಂದು ನನಗೆ ಭರವಸೆ ಇದೆ”, ಎಂದರು. “ನಿನಗೆ ಸರಿಯೆನಿಸಿದಂತೆ ಮಾಡು, ಯಾವುದಕ್ಕೂ ಸಹಾಯ ಬೇಕಾದಾಗ ಹಿಂಜರಿಯದೆ ಕೇಳು, ನಾನಿನ್ನು ಬರುತ್ತೇನೆ” ಎಂದು ಶಿವರಾಮ ತಮ್ಮ ಮನೆ ಕಡೆ ನಡೆದರು.
********
ಬೇಗ ಬೇಗನೆ ಅಳಿದುಳಿದ ಮನೆ ಕೆಲಸಗಳನ್ನು ಮುಗಿಸುವಷ್ಟರಲ್ಲಿ ಮತ್ತೆ ಸಾಕ್ಷಿಯ ದನಿ ಕೇಳಿಸಿತು. “ಅಮ್ಮಾ…, ಇನ್ನೂ ರೆಡಿಯಾಗಿಲ್ಲವೇ? ಊಟಕ್ಕೆ ಹೊರಗಡೆ ಹೋಗೋಣವೆಂದಿದ್ದೆನಲ್ಲ? ಬೇಗ ಹೊರಡು. ಇವತ್ತು ಅಪರೂಪಕ್ಕೆ ಬುಧವಾರದಂದು ಗವರ್ನಮೆಂಟ್ ರಜಾ ಬಂದಿದೆ. ಇಲ್ಲಾಂದ್ರೆ ಎಲ್ಲಾ ಕಡೆ ರಶ್ ಇರುತ್ತೆ”. ರತ್ನಮ್ಮ ತಡಬಡಿಸಿಕೊಂಡು ಎದ್ದು, ಕೈಗೆ ಸಿಕ್ಕಿದ ಯಾವುದೋ ಒಂದು ಸೀರೆಯುಟ್ಟು ಹೊರಟು ಬಂದರು.
ಸಾಕ್ಷಿ ಮೌನವಾಗಿ ಕಾರ್ ಓಡಿಸುತ್ತಿದ್ದಳು. ಗಾಡಿ ಹೋಟೆಲೊಂದರ ಎದುರು ಪಾರ್ಕ್ ಮಾಡಿ ಇಬ್ಬರೂ ಒಳಹೊಕ್ಕರು. “ನಾರ್ತ್ ಇಂಡಿಯನ್ ಊಟ ಮಾಡೋಣವೇ?”, ಕೇಳಿದಳು ಸಾಕ್ಷಿ. ಇಷ್ಟು ಹೊತ್ತಿನಲ್ಲಿ ಅವಳು ಮಾತನಾಡಿದ್ದೇ ಆಶ್ಚರ್ಯವೆಂಬಂತೆ ’ಸರಿ’ ಎಂದು ತಲೆ ಅಲ್ಲಾಡಿಸಿದರು ರತ್ನಮ್ಮ. ಅದೂ-ಇದೂ ಮಾತನಾಡುತ್ತಾ ಊಟ ಮುಗಿಸಿ, ಕೈತೊಳೆದು, ಬಿಲ್ ಪಾವತಿಸಿ, ಇಬ್ಬರೂ ಹೊರಡಲನುವಾದರು. ಅಷ್ಟರಲ್ಲಿ ಶಿವರಾಮ-ಸುನಂದಾರೂ ತಮ್ಮ ಮಗನೊಡನೆ ಅಲ್ಲಿಗೆ ಬಂದರು. ಅಣ್ಣನನ್ನು ನೋಡಿದವರೇ, ರತ್ನಮ್ಮ ಓಡಿಹೋಗಿ, “ಮೊದಲೇ ಹೇಳಿದ್ದರೆ, ಪ್ಲಾನ್ ಮಾಡಿಕೊಂಡು ಒಟ್ಟಾಗಿ ಊಟ ಮಾಡಬಹುದಿತ್ತು”, ಎಂದರು. ಅದನ್ನು ಕೇಳಿದ ಸೂರ್ಯ ತಕ್ಷಣವೇ ರತ್ನಮ್ಮರತ್ತ ತಿರುಗಿ, “ಈಗಲೂ ಲೇಟ್ ಆಗಿಲ್ಲ ಅತ್ತೆ; ಬನ್ನಿ, ನಮ್ಮ ಜೊತೆ ಐಸ್ಕ್ರೀಮ್ ತಿನ್ನುವಿರಂತೆ” ಎಂದನು. ಸಾಕ್ಷಿ ಮುಖ ಗಂಟಿಕ್ಕಿ, “ಅಮ್ಮ ನಂಗೆ ಲೇಟಾಗ್ತಿದೆ. ನೀನು ನನ್ನ ಜೊತೆ ಬರ್ತೀಯಾ? ಅಥವಾ ಮಾವ ನಿನ್ನ ಮನೆಗೆ ಡ್ರಾಪ್ ಮಾಡ್ತಾರಾ?” ಕೇಳಿದಳು. ರತ್ನಮ್ಮ ಗಂಭೀರವಾಗಿ, “ನೀನು ಹೊರಡು; ನಾನು ನಿಧಾನಕ್ಕೆ ಬರ್ತೀನಿ” ಎಂದರು. ಅದನ್ನು ಕೇಳುತ್ತಲೇ ಸಾಕ್ಷಿ ಬಿರುಸಾಗಿ ಹೊರನಡೆದುಬಿಟ್ಟಳು.
——————————————————————————————————————–
ಭಾಗ – ೨
ಮಗಳು ಹೋದ ದಾರಿಯನ್ನೇ ದಿಟ್ಟಿಸುತ್ತಾ ನಿಂತಿದ್ದ ರತ್ನಮ್ಮನನ್ನು ನೋಡಿದ ಸೂರ್ಯ, ಅವರತ್ತ ತಿರುಗಿ, “ಇದೇನು ಹೀಗೆ ನಿಂತುಬಿಟ್ಟಿರಿ?, ಬನ್ನಿ ಕೂತ್ಕೊಳ್ಳಿ”, ಎಂದನು. ಎಲ್ಲರೂ ನಿಧಾನಕ್ಕೆ ಮೆನು ನೋಡುತ್ತಾ ಊಟದ ತಯಾರಿ ನಡೆಸಿದರು. ರತ್ನಮ್ಮ, “ನನಗೇನು ಬೇಡ, ಸುಮ್ನೆ ನಿಮ್ಮ ಜೊತೆ ಸ್ವಲ್ಪ ಸಮಯ ಕಳೆಯೋಣ ಅಂತ ಬಂದೆ” ಎಂದರು. ಶಿವರಾಮ ಗಂಭೀರವಾಗಿ, “ರತ್ನಾ, ನನಗೊತ್ತು ನೀನು ಏನೋ ಹೇಳಬೇಕೆಂದು ಇದ್ದೀಯ. ಆದರೆ ಹೇಳ್ತಿಲ್ಲ”.
“ಏನೂ ಇಲ್ಲ”.
“ಸುಳ್ಳು ಹೇಳುವಾಗ ಮುಖ ಕೂಡ ಕಸಿವಿಸಿಯ ಭಾವ ಅನಾಯಾಸವಾಗಿ ವ್ಯಕ್ತಪಡಿಸಿ ಸುಳ್ಳನ್ನೂ ಮರೆಮಾಚುತ್ತದೆ. ಅದೇನು ಹೇಳು”.
“ಹೇಗೆ, ಎಲ್ಲಿಂದ ಶುರು ಮಾಡಲಿ ಗೊತ್ತಾಗ್ತಿಲ್ಲ, ನಂಗೆ ಈ ಸಾಕ್ಷಿದೆ ತಲೆನೋವು”.
“ಅರೇ ಅತ್ತೆ, ಸಾಕ್ಷಿಗೇನಾಗಿದೆ, ಆರಾಮಾಗಿಯೇ ಇದ್ದಾಳಲ್ಲ?”.
“ಅದೇನಪ್ಪ, ಆರಾಮಾಗೇ ಇರ್ತಾಳೆ. ಆದ್ರೆ ಒಂದೊಂದ್ಸಾರಿ ವಿಚಿತ್ರವಾಗಿ ಆಡ್ತಾಳೆ. ಒಂದೊಂದ್ಸಾರಿ ಸಿಕ್ಕಾಪಟ್ಟೆ ಮಾತಾಡ್ತಾಳೆ. ಸಡನ್ನಾಗಿ ಮೌನ! ಏನು ಅಂತ ಕೇಳಿದ್ರೆ ನನ್ನ ಮೇಲೆ ವಿನಾ ಕಾರಣ ರೇಗ್ತಾಳೆ. ಅವಳ ಮನಸಲ್ಲಿ ಏನಿದೆ ಅಂತ ಅರ್ಥ ಆಗ್ತಿಲ್ಲ. ನಿಮ್ಮ ಮನೋವಿಜ್ಞಾನದಲ್ಲಿ ಇದಕ್ಕೇನಾದರೂ ಪರಿಹಾರವಿದ್ರೆ ಹೇಳಪ್ಪ.”
“ಪರಿಹಾರ ಏನೋ ಹುಡುಕಬಹುದು, ಆದರೆ, ಅದಕ್ಕೆ ಮೊದಲು ಪ್ರಾಬ್ಲಂ ಅರ್ಥ ಮಾಡ್ಕೋಬೇಕಲ್ಲ?. ಅದೂ ಅಲ್ಲದೆ, ನಿಮಗೇ ಗೊತ್ತಿರೋ ಹಾಗೆ ನನ್ನಿಂದ ಅಂತೂ ಆಗದ ಕೆಲಸ. ನೀವೇ ನೋಡಿದ್ರಲ್ಲ, ನಾನಿದ್ದರೆ ನಿಮ್ಮ ಮಗಳ ಮುಖ ಹೇಗೆ ಗಂಟಾಗುತ್ತೆ ಅಂತ.
“ಅದೇನೋ ಸರೀನಪ್ಪ. ಆದರೆ, ನಿನ್ನ ಜೊತೆ ಓದಿದ ಸ್ನೇಹಿತರು ಯಾರು ಇಲ್ವೇನಪ್ಪಾ ಡಾಕ್ಟರ್ ಸೂರ್ಯ?”
“ಅತ್ತೇ, ನೀವೀಗ ಚಿಂತೆ ಬಿಟ್ಟು ಐಸ್ಕ್ರೀಂ ತಿನ್ನಿ. ನಾನೇನೋ ಒಂದು ದಾರಿ ಹುಡುಕ್ತೀನಿ, ತಲೆ ಕೆಡಿಸ್ಕೋಬೇಡಿ”.
“ಏನೋಪ್ಪಾ, ಏನೋ ಒಂದು ಮಾಡು. ಎಲ್ಲಾ ಸರಿ ಹೋದರೆ ಸಾಕಾಗಿದೆ”.
ಎಲ್ಲರೂ ಬೇರೆ ವಿಷಯ ಹರಟೆ ಹೊಡೆಯುತ್ತಾ ಐಸ್ಕ್ರೀಂ ಖಾಲಿ ಮಾಡಿದರು. ಮನೆಗೆ ಬರುತ್ತಾ ದಾರಿ ಉದ್ದಕ್ಕೂ ರತ್ನಮ್ಮ ಮತ್ತೆ ಹಿಂದಿನದನ್ನು ಮೆಲುಕು ಹಾಕುತ್ತಿದ್ದರು.
********
ಸಾಕ್ಷಿ ಅವಳ ಅಮ್ಮನ ಮುದ್ದಿನ ಮಗಳಾಗಿ, ಆಟ-ಪಾಠ ಎರಡರಲ್ಲೂ ಮುಂದಿದ್ದಳು. ಅದೂ ಅಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ವಿಶೇಷ ಆಸಕ್ತಿ, ಶ್ರದ್ಧೆ. ಎಲ್ಲಾ ಅವರ ಅಪ್ಪ ರಾಮ್ನ ಪಡಿಯಚ್ಚು. ಅವಳಪ್ಪ ಹೋದ್ಮೇಲೆ ರತ್ನಮ್ಮನೆ ಮುಂದೆ ನಿಂತು ೫ ಎಕರೆ ಜಮೀನಿನಲ್ಲಿ ಸ್ವತಃ ದುಡಿಯಲು ಆರಂಭಿಸಿದರು. ತಲೆಗೊಂದು ಸೂರಂತೂ ರಾಮ್ ಬಿಟ್ಟು ಹೋಗಿದ್ದೇ ಇತ್ತು.
ಸಾವಯವ ಕೃಷಿ, ಬಹುಬೆಳೆ, ಮಿಶ್ರಬೆಳೆ ಇತ್ಯಾದಿ ಮಿನಿ-ಮಾಡರ್ನ್ ಪದ್ಧತಿಯನ್ನು ನಿಧಾನಕ್ಕೆ ಅಳವಡಿಸಿಕೊಳ್ಳುತ್ತಾ, ಒಂದೊಂದೇ ಬದಲಾವಣೆಯನ್ನು ತಂದುಕೊಂಡರು ರತ್ನಮ್ಮ. ಇದರಿಂದ ಹೊಟ್ಟೆ-ಬಟ್ಟೆ, ಮಗಳ ವಿದ್ಯಾಭ್ಯಾಸಕ್ಕೆ ಬೇಕಾದಷ್ಟಾಗುತ್ತಿದ್ದರೂ, ಊರವರು, ನೆಂಟರಿಷ್ಟರ ಮಾತುಗಳಿಗೆ ಏನೂ ಕಮ್ಮಿ ಇರಲಿಲ್ಲ. “ಅಯ್ಯೋ, ರಾಮ್ ಕಷ್ಟಪಟ್ಟು ಮಾಡಿಟ್ಟ ಜಮೀನು. ಇವಳು ಒಳ್ಳೆ ಆಡಳಿತ ಮಾಡ್ಕೊಂಡು ಅದನ್ನು ಹಾಳುಗೆಡವುತ್ತಿದ್ದಾಳೆ. ಅಡಿಕೆ, ಭತ್ತ ಬೆಳೆದರೆ ಸಾಕಾಗುತ್ತಿರಲಿಲ್ಲವೇ? ಅದೇನೋ, ಸಾವಯವ ತರಕಾರಿ, ಉದ್ದಿನಬೇಳೆ, ಗೇರು ಕೃಷಿ ಅಂತೆಲ್ಲ ಹೊರಟಿದ್ದಾಳೆ. ಇದೆಲ್ಲ ಉಳಿದ ಹಾಗೇನೇ”, ಎಂದೆಲ್ಲಾ ಆಡಿಕೊಳ್ಳುತ್ತಿದ್ದರು. ಇವೆಲ್ಲಾ ರತ್ನಮ್ಮವರ ಕಿವಿಗೆ ಬೀಳದೇ ಇರಲಿಲ್ಲ. ಆದರೂ ಸಾಕ್ಷಿಗೋಸ್ಕರ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು ಅವರ ಗುರಿಯತ್ತ ದೃಷ್ಟಿ ಹರಿಸಿದರು ರತ್ನಮ್ಮ.
ಪಿಯುಸಿ ಮುಗಿಸುತ್ತಲೇ ಅದುವರೆಗೂ ಬ್ಯಾಂಕ್ ಪರೀಕ್ಷೆ ಬರೆದು ಬಿಕಾಂ ಮಾಡ್ತಾ ಬ್ಯಾಂಕ್ ಉದ್ಯೋಗಸ್ಥೆ ಆಗುತ್ತೇನೆ ಎಂದಿದ್ದ ಸಾಕ್ಷಿ ಇದ್ದಕ್ಕಿದ್ದಂತೆ, ತಾನು ಕೃಷಿ ಪದವೀಧರೆಯಾಗಬೇಕೆಂದು ಹಠ ಹಿಡಿದು ಕುಳಿತಳು. ಅಮ್ಮ, ಮಾವ-ಶಿವರಾಮ, ಯಾರ ಮಾತೂ ಕೇಳದೆ, ಕೃಷಿಯಲ್ಲಿ ಬಿಎಸ್ಸಿ ಮಾಡಲು ಕಾಲೇಜಿಗೆ ಸೇರಿಕೊಂಡ ನಂತರ ಎಂಎಸ್ಸಿ ಮಾಡಿ, ಈಗ ಅದರಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾಳೆ. ಇನ್ನೇನು ಡಾ||ಸಾಕ್ಷಿ ಆಗುವವಳಿದ್ದಾಳೆ. ತನ್ನ ಊರಿನ ಸರಕಾರಿ ಕಾಲೇಜಿನಲ್ಲೇ ಉಪನ್ಯಾಸಕಿಯಾಗಿಯೂ ಕೆಲಸ ಮಾಡುತ್ತಿದ್ದಾಳೆ.
ಹಿಂದೆ ಮೂಗು ಮುರಿದವರೆಲ್ಲ ಈಗ, ರತ್ನಮ್ಮನವರನ್ನು ನೋಡಿ ಕೆಲವೊಂದನ್ನು ತಾವೂ ಸಹ ನಿಧಾನಕ್ಕೆ ಅಳವಡಿಸಿಕೊಂಡರು. ಮಾಡಿದರೆ ರತ್ನಮ್ಮ ಮಾಡಿದಂತೆ ಕೃಷಿ ಮಾಡಬೇಕು. ಗಂಡ ಹೋದ್ಮೇಲೆ ಕಂಗೆಡದೆ ಧೈರ್ಯವಾಗಿ ಜಮೀನಿನಲ್ಲಿ ಉತ್ತಮವಾಗಿ ಕೃಷಿ ಮಾಡಿ, ಒಳ್ಳೆಯ ಪಸಲನ್ನು ಪಡೆದರು. ಮಗಳು ಈಗ ಒಂದು ನೆಲೆಗೆ ಬಂದಿದ್ದಾಳೆ. ಅವಳೂ ಕೃಷಿಯನ್ನೇ ಆಯ್ಕೆ ಮಾಡಿರುವುದು ಇನ್ನೂ ಒಳ್ಳೆಯದು. ರತ್ನಮ್ಮ ಪಟ್ಟ ಕಷ್ಟ ಸಾರ್ಥಕವಾಯಿತೆಂದು ಮಾತನಾಡತೊಡಗಿದರು.
ಸಾಕ್ಷಿ ತಾನು ಪಿ.ಹೆಚ್.ಡಿ. ಸಂಶೋಧನೆ ಆರಂಭಿಸಿದಾಗಲೇ ರತ್ನಮ್ಮನ ಕೃಷಿ ಪದ್ಧತಿಯಲ್ಲಿ ಇನ್ನಷ್ಟು ಬದಲಾವಣೆಗಳನ್ನು ತಂದಳು. ಎಲ್ಲಾ ಆಧುನಿಕ ಸೌಲಭ್ಯಗಳು, ಸರಳ-ಸಾಧನಗಳು ಬರಲಾರಂಭಿಸಿದವು ಮನೆಗೆ, ತೋಟಕ್ಕೆಂದು. ರತ್ನಮ್ಮ ಮಗಳ ಯಾವ ಕಾರ್ಯಕ್ಕೂ ಅಡ್ಡಿ ಮಾಡಲಿಲ್ಲ. ನಿಧಾನವಾಗಿ ತಾವು ಜವಾಬ್ದಾರಿಗಳಿಂದ ಮುಕ್ತರಾಗುವತ್ತ ಗಮನಹರಿಸುತ್ತಾ, ಸದಾ ದೇವರ ಧ್ಯಾನದಲ್ಲಿ ಮುಳುಗಿರುತ್ತಿದ್ದರು.
ಸಾಕ್ಷಿ ಪಕ್ಕದಲ್ಲೆಲ್ಲೋ ಜಮೀನು ಮಾರಾಟಕ್ಕಿರುವುದು ತಿಳಿದು ಅದನ್ನು ಖರೀದಿಸಲು ಅನುವಾದಳು. ಆಗ ಹಾಗೇ ಅತ್ತೆಯನ್ನು ಮಾತನಾಡಿಸಲು ಬಂದಿದ್ದ ಸೂರ್ಯ, “ಇಷ್ಟು ಇರುವುದು ನಿಮ್ಮಿಬ್ಬರಿಗೂ ಸಾಲದೇ? ಸುಮ್ಮನೆ ಯಾಕೆ ಇನ್ನಷ್ಟು ಬೇಕು, ಅದೂ-ಇದೂ ಅಂತ ಒದ್ದಾಡುತ್ತಿದ್ದೀಯಾ ಸಾಕ್ಷಿ? ಅತ್ತೇ, ನೀವಾದರೂ ನಿಮ್ಮ ಮಗಳಿಗೆ ಸ್ವಲ್ಪ ಬುದ್ಧಿ ಹೇಳಬಾರದೇ?” ಎಂದು ಏನೋ ಹೇಳಲು ಹೊರಟಾಗ ಸಾಕ್ಷಿ ಅವನನ್ನು ಅರ್ಧಕ್ಕೇ ತಡೆದು, “ಸೂರ್ಯ, ಇದು ನಮ್ಮ ಮನೆ ವಿಷಯ. ಅನಗತ್ಯವಾಗಿ ಇದರಲ್ಲಿ ನೀನು ಮೂಗು ತೂರಿಸುವ ಅವಶ್ಯಕತೆ ಇಲ್ಲ. ದಯವಿಟ್ಟು ಇಲ್ಲಿಂದ ಹೊರಟುಹೋಗು”, ಎಂದಳು. ಏನೋ ಹೇಳಲು ಬಂದ ರತ್ನಮ್ಮರನ್ನು ತಡೆದು, ಸೂರ್ಯ ಅಲ್ಲಿಂದ ಹೊರಟುಹೋದನು.
ಸಾಕ್ಷಿಗೆ ಮೊದಲಿನಿಂದಲೂ ಸೂರ್ಯನೆಂದರೆ ಅಷ್ಟಕ್ಕಷ್ಟೇ. ಮಾವನ ಮಗನೆಂದು ಒಟ್ಟಿಗೆ ಕೂಡಿ ಬೆಳೆಯುತ್ತಾ, ಆಡುತ್ತಿದ್ದರು ಬಿಟ್ಟರೆ; ಹೇಳಿಕೊಳ್ಳುವಂತಹ ಯಾವುದೇ ತೆರನಾದ ಬಾಂಧವ್ಯ ಅವರ ಮಧ್ಯೆ ಮೊದಲಿನಿಂದಲೂ ಇರಲಿಲ್ಲ. ದೊಡ್ಡವಳಾದಂತೆ ಅವನಿಂದ ಆದಷ್ಟು ದೂರವಾಗಲು ಪ್ರಯತ್ನಿಸುತ್ತಿದ್ದುದು ಎಲ್ಲರ ಗಮನಕ್ಕೂ ಬಾರದಿರಲಿಲ್ಲ. ಆದರೆ ಯಾರೂ ಏನೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಅದರ ಬಗ್ಗೆ.
ಅಂದು ನಡೆದ ಈ ಸಣ್ಣ ಘಟನೆಯ ನಂತರ ಸೂರ್ಯ-ಸಾಕ್ಷಿಯರ ಒಡನಾಟ ಸಂಪೂರ್ಣವಾಗಿ ನಿಂತುಹೋಗಿತ್ತು. ರತ್ನಮ್ಮನಿಗೆ ಎಷ್ಟಾದರೂ ತವರಿನ ಮೋಹ. ಅವರು ಆಗಾಗ್ಗೆ ಅಣ್ಣ-ಅತ್ತಿಗೆಯನ್ನು, ಹಾಗೆಯೇ ಸೂರ್ಯನನ್ನು ಮಾತನಾಡಿಸಿ ಬರುತ್ತಿದ್ದರು. “ಮನೆಗೆ ಬನ್ನಿ, ಸಾಕ್ಷಿಯ ಪರವಾಗಿ ನಾನು ಕ್ಷಮೆ ಕೇಳುತ್ತೇನೆ”, ಎಂದೆಲ್ಲ ಗೋಗರೆಯುತ್ತಿದ್ದರು. ಆಗೆಲ್ಲಾ ಸೂರ್ಯನೇ ಅವರನ್ನು ಸಮಾಧಾನ ಮಾಡಿ, “ಅತ್ತೇ, ನಿಮ್ಮ ಮನೆ ಯಾವಾಗಲೂ ನಮಗಾಗಿ ತೆರೆದಿರುತ್ತದೆ ಎಂದು ಗೊತ್ತು. ಆದರೂ ಕಾಲವೇ ಎಲ್ಲವನ್ನು ನಿರ್ಧರಿಸುತ್ತದೆ. ಸಾಕ್ಷಿಗೂ ಸ್ವಲ್ಪ ಸಮಯ ಕೊಡಿ, ಅವಳ ಮನಸ್ಸಿನಲ್ಲಿ ಏನಿದೆಯೋ ನೋಡೋಣ. ಕಾಲ ಕೂಡಿ ಬಂದಾಗ ನಾವೇ ಬರ್ತೀವಿ. ಆದರೆ, ದಯವಿಟ್ಟು ಈಗಂತೂ ಬಲವಂತ ಮಾಡಬೇಡಿ” ಎನ್ನುತಿದ್ದ. ಪ್ರಸ್ತುತ ವಿಶೇಷ ಮಾನಸಿಕ ತಜ್ಞನಾಗಿ ತನ್ನದೇ ಸ್ವಂತ ಕ್ಲಿನಿಕಿನಲ್ಲಿ ಪ್ರಾಕ್ಟೀಸ್ ಮಡುತ್ತಿರುವ, ಮಗನ ಸಮನಾಗಿ ತಮ್ಮೆದುರಿಗೇ ಮುದ್ದಾಗಿ ಓಡಿ-ಆಡಿ, ಬೆಳೆದ ಸೂರ್ಯನ ಬಗ್ಗೆ ಹೆಮ್ಮೆಯೆನಿಸಿ , ’ಸರಿ’, ಎಂದು ತಲೆ ಅಲ್ಲಾಡಿಸಿ, ಸೋತು ಅಲ್ಲಿಂದ ಹೊರಡುತ್ತಿದ್ದರು ರತ್ನಮ್ಮ ಪ್ರತೀ ಬಾರಿ.
——————————————————————————————————————–
ಭಾಗ – ೩
ರಾತ್ರಿ ಊಟವಾದ ನಂತರ ಟೆರೇಸ್ ಮೇಲೆ ಬಾಲ ಸುಟ್ಟ ಬೆಕ್ಕಿನಂತೆ ಆಚೀಚೆ ನಡೆದಾಡುತ್ತಿದ್ದ ಸೂರ್ಯನನ್ನು ನೋಡಿದ ಶಿವರಾಮ ಮೆಟ್ಟಿಲೇರಿ ಬಂದು, ಅವನನ್ನು ತಡೆದು ಕೇಳಿದರು, “ರತ್ನ ಹೇಳಿದ್ದು ಅಷ್ಟೊಂದು ಗಂಭೀರ ಸಮಸ್ಯೆ ಅನಿಸುತ್ತಿದೆಯಾ?, ಈ ವಯಸ್ಸಿನಲ್ಲಿ ಇದೆಲ್ಲ ಮಾಮೂಲಿ ಅಲ್ಲವೇ?”. ಸೂರ್ಯ ಗೋಣಾಡಿಸುತ್ತಾ , “ಅಪ್ಪಾ , ಪೂರ್ತಿ ಮೌನ, ಇಲ್ಲ ಪೂರ್ತಿ ಮಾತಾದ್ರೆ ನಾನೂ ನಿಮ್ಮಂತೆಯೇ ಅಂದುಕೊಳ್ಳುತ್ತಿದ್ದೆ. ಆದರೆ ಯಾಕೋ ಅತ್ತೆ ಹೇಳಿದ್ದು ಕೇಳಿದರೆ ಇದು ಗಂಭೀರವೇ ಅನಿಸುತ್ತಿದೆ. ಹಾಗೆಯೇ ಮೊನ್ನೆ ಮಧ್ಯಾಹ್ನ ಸಾಕ್ಷಿಯನ್ನು ನೋಡಿದಾಗಲೂ ಏನೋ ಹೇಳಲಾರದೆ ಚಡಪಡಿಸುತ್ತಿದ್ದಾಳೆ ಅನಿಸಿತ್ತು” ಎಂದನು.
ಕಳೆದ ೪-೫ ದಿನಗಳಿಂದ ಸೂರ್ಯ ತನ್ನದೇ ಯೋಚನೆಯಲ್ಲಿ ಮುಳುಗಿರುತ್ತಿದ್ದುದನ್ನು ಗಮನಿಸಿದ್ದ ಶಿವರಾಮ ಮಗನಿಗೆ ಬುದ್ಧಿ ಹೇಳಲು ಬಂದಿದ್ದರು. ಅವನು ಒಂದು ವಿಷಯ ಮನಸ್ಸಿಗೆ ಹಚ್ಚಿಕೊಂಡರೆ ಅದಕ್ಕೊಂದು ಪರಿಹಾರ ಸಿಗುವವರೆಗೂ ಬಿಡುವವನಲ್ಲ ಎಂದು ಚೆನ್ನಾಗಿಯೇ ತಿಳಿದಿದ್ದರು. “ಅಯ್ಯೋ ಬಿಡು, ನಮ್ಮಲ್ಲಿ ಅವಳೆಲ್ಲಿ ಈಗ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಾಳೆ ಹೇಳು? ಬರೀ ಅಹಂಕಾರ ಅವಳಿಗೆ”, ಎಂದರು . ಸೂರ್ಯ ಏನೋ ಹೇಳ ಹೊರಟಾಗ ಶಿವರಾಮ ತಡೆದು, “ರತ್ನ ಹೇಳಿದಳು ಅಂತ ನೀನು ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡು ತಲೆ ಕೆಡಿಸ್ಕೋಬೇಡ; ನಿನ್ನ ಕೆಲಸದತ್ತ ಗಮನ ಹರಿಸು”, ಎಂದು ಅಲ್ಲಿಂದ ನಡೆದರು. ಸೂರ್ಯ ತನ್ನದೇ ಆದ ಯೋಚನೆಯಲ್ಲಿ ಮುಳುಗಿದ್ದನು.
***
ಸೂರ್ಯ ಬೆಳಗ್ಗೆ ಎದ್ದವನೇ, ತಿಂಡಿ ತಿಂದು ರೆಡಿಯಾಗಿ ನೇರವಾಗಿ ಅತ್ತೆ ಮನೆಗೆ ಬಂದನು. ಅವನನ್ನು ನೋಡಿ ರತ್ನಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ.
“ಬಾರಪ್ಪಾ. ಅಪರೂಪದ ಅತಿಥಿ. ಕೈ-ಕಾಲು, ಮುಖ ತೊಳೆದುಕೋ. ತಿಂಡಿ ತಿನ್ನುವಿಯಂತೆ”.
“ಅದೆಲ್ಲ ಏನೂ ಬೇಡ. ಈಗ ತಾನೆ ಮನೆಯಲ್ಲಿ ಎಲ್ಲಾ ಮುಗಿಸಿಕೊಂಡು ಬಂದೆ”.
“ಹೂಂನಪ್ಪಾ. ನಿನ್ನ ಅತ್ತೆ ಮಗಳು ಮೊದಲೇ ಮನೆಯಿಂದ ಓಡಿಸುತ್ತಾಳೆ. ಇನ್ನು ತಿಂಡಿ-ಗಿಂಡಿ ಅಂತೆಲ್ಲಾ ಉಪಚಾರ ಎಲ್ಲಿ ಸಿಗಬೇಕು ಅಂತ ತಿಂದುಕೊಂಡೇ ಬಂದಿಯೇನೋ”, ಎಂದರು ರತ್ನಮ್ಮ ನಗು ಮುಖವಾದರೂ, ವಿಷಾದದ ದನಿಯಲ್ಲಿ.
ಸೂರ್ಯ ಗಂಭೀರವಾಗಿ, “ನಾನು ನಿಮ್ಮನ್ನೇ ಮಾತನಾಡಿಸಿ ಹೋಗೋಣವೆಂದು ಬಂದೆ. ಆದರೆ ನಿಮ್ಮ ಬಗ್ಗೆ ಅಲ್ಲ, ನಿಮ್ಮ ಮಗಳ ಬಗ್ಗೆ – ಮೊನ್ನೆ ಹೇಳಿದ ವಿಚಾರದ ಬಗ್ಗೆ”, ಎಂದನು.
ರತ್ನಮ್ಮ ನಸುನಕ್ಕು, “ಅಯ್ಯೋ ಬಿಡಪ್ಪ, ಈ ವಯಸ್ಸಿನ ಮಕ್ಕಳಲ್ಲಿ ಇದೆಲ್ಲಾ ಇದ್ದಿದ್ದೇ. ನಾನು ಸುಮ್ಮನೆ ಏನೇನೋ ಕಲ್ಪಿಸಿಕೊಂಡು, ವಿನಾಕಾರಣ ನಿಮ್ಮನ್ನೆಲ್ಲಾ ಚಿಂತೆಗೆ ತಳ್ಳಿಬಿಟ್ಟೆ. ಕ್ಷಮಿಸಪ್ಪ”.
“ಇಲ್ಲ ಅತ್ತೆ ಇದು ಸೀರಿಯಸ್ ವಿಷಯವೇ . ಎಲ್ಲಿ ನಿಮ್ಮ ಮುದ್ದಿನ ಮಗಳು? ಇಷ್ಟು ಬೇಗ ಕಾಲೇಜಿಗೆ ಹೋಗಿಬಿಟ್ಟಳಾ?”.
“ಅವಳು ಅದೇನೋ ಕಾನ್ಫರೆನ್ಸ್ ಅಂತ ನಿನ್ನೇನೆ ಬೆಂಗಳೂರಿಗೆ ಹೋದಳು. ಭಾನುವಾರ ರಾತ್ರಿ ಬರ್ತಾಳೆ”.
“ಹೌದಾ?, ಒಳ್ಳೆಯದೇ ಆಯ್ತು ಬಿಡಿ”.
ಸೂರ್ಯ ರತ್ನಮ್ಮನ ಬಳಿ ಸಾಕ್ಷಿಯ ದಿನಚರಿ, ರೂಮ್, ಹವ್ಯಾಸ, ನಡವಳಿಕೆ ಇತ್ಯಾದಿಗಳ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿ; ಕಾನ್ಫರೆನ್ಸ್ ನಡೆಯುವ ಹೋಟೆಲ್ ವಿಳಾಸ ತಿಳಿದುಕೊಂಡು ಅಲ್ಲಿಂದ ಬೀಳ್ಕೊಂಡನು.
******
“ಅಮ್ಮಾ, ನಾನು ಅರ್ಜೆಂಟಾಗಿ ಕೆಲಸದ ಮೇಲೆ ಬೆಂಗಳೂರಿಗೆ ಹೊರಡಬೇಕು, ಅಪ್ಪಂಗೆ ಹೇಳಿಬಿಡು”, ಸೂರ್ಯ ನೇರವಾಗಿ ತನ್ನ ರೂಮಿಗೆ ಹೋಗಿ ಪ್ಯಾಕಿಂಗ್ ಮಾಡತೊಡಗಿದನು.
“ಅದೆಂಥ ಅರ್ಜೆಂಟು? ನಾಳೆ ಶನಿವಾರ; ನಿನಗೆ ರಜಾ ದಿನ. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಬರೋಣ ಅಂತಿದ್ದೆ. ಭಾನುವಾರ ಅಂತೂ ನೀನು ಕೈಗೆ ಸಿಗುವುದಿಲ್ಲ. ಮತ್ತದೇ ಕ್ಲಿನಿಕ್, ಅದು ಇದು ಅಂತ ಓಡಾಡುತ್ತ ಇರ್ತೀಯ. ಊರಿಗೆ ಉಪಕಾರಿ ಆದರೆ ಅಮ್ಮನಿಗೆ ಸೋಮಾರಿ”.
“ಅಯ್ಯೋ ಇದೇನು? ಊರಿಗೆ ಉಪಕಾರಿ ಮನೆಗೆ ಮಾರಿ ಗಾದೆಯನ್ನು ಬದಲಾಯಿಸಿ ಬಿಟ್ಟಿದ್ದೀಯ?”
” ಮತ್ತೆ ಇನ್ನೇನೋ ಮಾಡ್ಲಿ ? ನೀನು ನಮ್ಮ ಮಗ. ನಮ್ಮ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಗೊತ್ತು. ಆದರೆ, ಹಾಗೇ ಸಮಯವನ್ನು ಸಹ ಸ್ವಲ್ಪ ನಮಗೋಸ್ಕರ ಮೀಸಲಿಡುವುದು ಕಲಿ. ಇಲ್ಲಾ, ಆದಷ್ಟು ಬೇಗ ಮದುವೆಯಾಗಿಬಿಡು. ನಾನು ಸೊಸೆ ಜೊತೆಯಾದರು ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತೇನೆ”.
“ನಿನಗೆ ಹರಟೆ ಹೊಡೆಯೋಕೆ ನಾನು ಮದುವೆಯಾಗಬೇಕೆ? ಆಯ್ತು ಬಿಡು, ಇಬ್ಬರು ಗಂಡಸರು ಇರುವ ಮನೆಯಲ್ಲಿ ನಿನಗೆ ಮಹಿಳಾ ಸಮಪಾಲು ತುಂಬಲಾದರೂ ನಾನು ಮದುವೆಯಾಗುತ್ತೇನೆ. ಈಗ ಮಾತ್ರ ನನ್ನನ್ನು ಬಿಟ್ಟುಬಿಡು”, ಎನ್ನುತ್ತಾ ಸೂರ್ಯ ಕಾರ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟನು.
*******
ಹೋಟೆಲ್ ರಾಯಲ್ ಓಕ್ನಲ್ಲಿ ಗಾಡಿ ಪಾರ್ಕ್ ಮಾಡಿದ ಸೂರ್ಯ, ರಿಸೆಪ್ಷನಿಸ್ಟ್ ಬಳಿ ಬಂದು ತನ್ನ ವಿವರ ತಿಳಿಸಿ, ರೂಮ್ ಕೀ ತೆಗೆದುಕೊಂಡು ಮೆಟ್ಟಿಲೇರಿದ. ಮತ್ತೆ ಹಿಂದಕ್ಕೆ ಬಂದು, “ಇಲ್ಲಿ ಮಿಸ್.ಸಾಕ್ಷಿ ಅವರ ರೂಮ್ ನಂಬರ್ ಹೇಳಬಹುದೇ?” ಎಂದು ಕೇಳಿದನು. “ಸಾರಿ ಸರ್, ಹಾಗೆಲ್ಲ ನಾವು ಹೇಳೋಕಾಗಲ್ಲ” ಎಂದಳು ರಿಸೆಪ್ಷನಿಸ್ಟ್. ” ನಾನು ಅವಳ ದೂರದ ಸಂಬಂಧಿಕ. ಅವರು ಇಲ್ಲೇ ಇದ್ದಾರೆ ಎಂದು ತಿಳಿದು ಹಾಗೆ ಸರ್ಪ್ರೈಸ್ ಕೊಟ್ಟು ಮಾತನಾಡಿಸಿಕೊಂಡು ಬರೋಣ ಅಂತ ಕೇಳಿದೆ. ಫೈನ್”, ಎಂದು ತನ್ನ ರೂಮಿನತ್ತ ನಡೆದನು.
ಅದು ಹೇಗೋ ಕಾನ್ಫರೆನ್ಸ್ ಸ್ಪಾನ್ಸರ್ಸ್, ಅವರು-ಇವರು ಎಂದೆಲ್ಲ ಕಾಡಿ-ಬೇಡಿ ಹರಸಾಹಸಪಟ್ಟು, ಮಾರನೇ ದಿನ ಮಧ್ಯಾಹ್ನದೊಳಗೆ ಸಾಕ್ಷಿ ವಿವರಗಳನ್ನು ಹಾಗೂ ಅವಳ ದಿನಚರಿಯ ವಿವರವನ್ನು ಸಂಪಾದಿಸಿದ ಸೂರ್ಯನ ಮುಖದಲ್ಲಿ ಕಿರುನಗೆ ಮೂಡಿತ್ತು. ಹೇಗಾದರೂ ಮಾಡಿ ಇವತ್ತು ಮಾತನಾಡಿಸಬೇಕು. ಇಲ್ಲ ಅಂದ್ರೆ, ನಾಳೆ ಭಾನುವಾರ! ಮಧ್ಯಾಹ್ನ ಊಟದ ಹೊತ್ತಿಗೆ ಕಾನ್ಫರೆನ್ಸ್ ಸಮಾರೋಪಗೊಂಡು ಅವಳು ಮತ್ತೆ ಮನೆಗೆ ಹೊರಡುತ್ತಾಳೆ. ಇಂಥ ಅವಕಾಶ ಮತ್ತೆ ಯಾವಾಗ ಸಿಗುವುದೋ ಹೇಳಲಾಗದು, ಎಂದು ಮನಸ್ಸಿನಲ್ಲಿ ಏನೋ ಲೆಕ್ಕಾಚಾರ ಹಾಕುತ್ತಿದ್ದನು.
********
ರಾತ್ರಿ ಊಟಮುಗಿಸಿ ಸಾಕ್ಷಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಡೋರ್ ಬೆಲ್ ಶಬ್ದ ಕೇಳಿ ರೂಮ್ ಸರ್ವೀಸ್ ಇರಬೇಕೆಂದು ಬಾಗಿಲು ತೆಗೆದಳು. ಎದುರಿಗೆ ನಿಂತ ಸೂರ್ಯನ ನಗು ಮುಖ ನೋಡಿ ತಬ್ಬಿಬ್ಬುಗೊಂಡಳು. “ಹಲೋ, ಒಳಗೆ ಬರಬಹುದೇ?”, ಕೇಳಿದನು.
” ಇಲ್ಲ ಅಂದ್ರೆ ಹೇಳಿ, ಹೊರಗಡೆ ಪಾರ್ಕಿನಲ್ಲಿ ಮಾತನಾಡೋಣ”, ಎಂದನು. ” ನಿಮ್ಮೊಂದಿಗೆ ನನಗೇನು ಮಾತು? ದಯವಿಟ್ಟು ಇಲ್ಲಿಂದ ಹೊರಡಿ” ಎಂದು ಬಾಗಿಲು ಹಾಕಲು ಅನುವಾದಳು. ಅವಳನ್ನು ತಡೆದ ಸೂರ್ಯ, “ಸಾಕ್ಷಿ ಪ್ಲೀಸ್, ೧೦ ನಿಮಿಷ ನಿನ್ನ ಜೊತೆ ಮಾತನಾಡಲು ಅವಕಾಶ ಮಾಡಿಕೊಡು” ಎಂದನು. ಅವಳಿಗೇನನಿಸಿತೋ. ಕುರ್ಚಿಯತ್ತ ಕೈ ತೋರಿದಳು. “ಅದೇನು ಹೇಳಬೇಕೆಂದಿದ್ದೀರೋ ಬೇಗ ಹೇಳಿ ಮುಗಿಸಿ”, ಎಂದಳು. ಅವಳು ಅಷ್ಟು ಹೇಳಿದ್ದೇ ಸಾಕೆಂದು, ಬಾಗಿಲು ಹಾಕಿ, ಸಾಕ್ಷಿಯನ್ನೇ ಅವಲೋಕಿಸುತ್ತಾ ಕುರ್ಚಿಯಲ್ಲಿ ಬಂದು ಕುಳಿತನು.
——————————————————————————————————————–
ಭಾಗ – ೪
ಮೇಜಿನ ಮೇಲಿರಿಸಿದ್ದ ಪುಸ್ತಕವನ್ನೆತ್ತಿಕೊಂಡ ಸೂರ್ಯ, “ಓಹ್ ಐ ಸೀ. ಒಳ್ಳೆ ಪುಸ್ತಕ. ನಿನಗೂ ಮನಃಶಾಸ್ತ್ರದಲ್ಲೆಲ್ಲ ಆಸಕ್ತಿ ಇರುವಂತಿದೆ” ಎಂದ. ಥಟ್ಟನೆ ಅವನ ಕೈಯಿಂದ ಪುಸ್ತಕ ಕಿತ್ತುಕೊಳ್ಳಲನುವಾದ ಸಾಕ್ಷಿ, “ಯಾಕೆ? ಇದೆಲ್ಲಾ ನಿಮ್ಮಂತವರಿಗೆ ಮಾತ್ರ ಮೀಸಲೆ? ನಾವೆಲ್ಲ ಓದಬಾರದೆಂದು ನಿಯಮವೇನಾದರೂ ಇದೆಯೇ?” ಕೇಳಿದಳು. ಸೂರ್ಯ ನಗುತ್ತಾ, “ಇಲ್ಲ, ಹಾಗಲ್ಲ. ನಿಮ್ಮಂತವರಿಗೂ ಇದರಲ್ಲೆಲ್ಲ ಆಸಕ್ತಿ ಇದೆಯಲ್ಲ ಎಂದು ಕುತೂಹಲ ಅಷ್ಟೆ”, ಎಂದನು. ಸಾಕ್ಷಿ ಆವೇಶದಿಂದ ಮುಖ ಗಂಟಿಕ್ಕಿ, “ಹೌದು. ಎಲ್ಲರಿಗೂ ಹಾಗೇ ಅನಿಸುತ್ತೆ. ನಾನು ಏನೇ ಮಾಡಿದರೂ, ಏನೇ ಹೇಳಿದರೂ ಅಸಡ್ಡೆ. ನೀವೆಲ್ಲಾ ಇದೀರಲ್ಲ. ಈ ಪುಸ್ತಕಗಳಿಗಾಗಿಯೇ ಮೀಸಲಿರೋ ಹೈ ಪ್ರೊಫ಼ೈಲ್ ಡಾಕ್ಟರ್ಸ್. ನಾವೆಲ್ಲಾ ಅಕಸ್ಮತ್ತಾಗಿ ಈ ಬಗ್ಗೆ ಮಾತನಾಡಿದರೂ ಎಲ್ಲಾ ನಿಮ್ಮಂತವರ ಸಹವಾಸ, ಹಿನ್ನೆಲೆಯಿಂದ ಎನ್ನುತ್ತಾರೆಯೇ ವಿನಃ, ನಾವು ಓದುಗರೇ ಎಂದು ಒಪ್ಪಿಕೊಳ್ಳುವುದಿಲ್ಲ ಯಾರೂ ಸಹ”.
ಸೂರ್ಯ ಅವಳನ್ನು ತಡೆಯದೆ ಮುಂದಕ್ಕೆ ಏನು ಹೇಳುತ್ತಾಳೆಂದು ಕಾಯುತ್ತಾ ಕುಳಿತ. ಸಾಕ್ಷಿ ಸಡನ್ನಾಗಿ, ಸುಮ್ಮನಾಗಿಬಿಟ್ಟಳು. “ಯಾಕೆ ನಿಲ್ಸಿದೆ? ಮುಂದಕ್ಕೆ ಹೇಳು”, ಎಂದನು. “ಅದೆಲ್ಲಾ ಏನೂ ಬೇಕಾಗಿಲ್ಲ. ನಾನು ಏನೇ ಹೇಳಿದರೂ ಅದಕ್ಕೊಂದು ಕಮೆಂಟ್ ಮಾಡ್ತೀರ”, ಎಂದಳು ಸಾಕ್ಷಿ.
ಅವಳಿಗೆ ಸಿಟ್ಟು ಬರಿಸಿ, ಸ್ವಲ್ಪ ಕೆರಳಿಸಿದರೆ ತಾನಾಗಿಯೇ ಮನಸ್ಸಿನಲ್ಲಿರುವುದೆಲ್ಲ ಬಾಯಿ ಬಿಡುತ್ತಾಳೆ. ಚಿಕ್ಕವಳಿದ್ದಾಗಿಂದಲೂ, ಅವಳು ಹಠವಾದಿ. ವಾದ-ವಿವಾದದಲ್ಲಿ ಅವಳನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ಈಗ ಕನಿಷ್ಟ ಪಕ್ಷ ಕೆಲವೊಂದು ವಿಚಾರಗಳನ್ನಾದರೂ ಬಾಯಿ ಬಿಡಬಹುದೆಂದರಿತ ಸೂರ್ಯ ಅವಳಿಗೆ ಸಿಟ್ಟು ಬರಿಸಲು, “ಈಗ ನೀನು ಸುಮ್ನೇ ಆರೋಪ ಮಾಡ್ತಿದೀಯ. ನಾನು ಕೇಳಿದ್ದರಲ್ಲಿ ಏನು ತಪ್ಪಿದೆ? ’ನೀವೆಲ್ಲಾ ಅಂದ್ರೆ?’, ಇನ್ನೂ ಯಾರು-ಯಾರನ್ನು ಉದ್ದೇಶಿಸಿ ಈ ಮಾತಾಡಿದೆ? ನೀನು ಅಂದುಕೊಂಡಿದ್ದೆ ನಿಜವಾಗಿದ್ದಲ್ಲಿ ನಾನು ಕೇಳಿದ್ದು ತಪ್ಪು ಎಂದು ಸಾಧಿಸಿ ತೋರಿಸು”.
ಸಾಕ್ಷಿ, “ಈಗ ಅದೆಲ್ಲ ಏನೂ ಬೇಕಾಗಿಲ್ಲ, ಏನೋ ಮಾತನಾಡಬೇಕೆಂದು ಹೇಳಿದೆ. ಏನೆಂದು ಬೇಗ ಹೇಳಿ ಹೊರಡು. ತುಂಬಾ ಹೊತ್ತಾಯಿತು”.
“ಯಾಕೆ ಮಾತು ಬದಲಾಯಿಸುತ್ತಿದ್ದೀಯ? ಇಲ್ಲಾ, ಇಷ್ಟುಹೊತ್ತಿನಲ್ಲಿ ನಾನು ಇಲ್ಲಿರುವುದು ಭಯವೇ? ಅವತ್ತು ತೋಟದ ವಿಷಯ ಬಂದಾಗಲೂ ಅಷ್ಟೇ. ಅವಮಾನ ಮಾಡಿ ಕಳುಹಿಸಿದೆ. ಆದರೆ, ಪೂರ್ತಿ ವಿಷಯ ತಿಳಿದುಕೊಳ್ಳುವ, ಕೇಳಿಸಿಕೊಳ್ಳುವ ವ್ಯವಧಾನ, ವಿವೇಚನೆ ನಿನಗೆ ಇರಲಿಲ್ಲ”.
“ಅವತ್ತಿನ ವಿಷಯ ನನ್ನ ವೈಯಕ್ತಿಕ. ಈಗಲೂ ಹಾಗೇ. ಈಗ ಅದನ್ನೆಲ್ಲ ಮಾತನಾಡಿ ನನ್ನ ಕಾನ್ಫರೆನ್ಸಿನ ಯಶಸ್ಸನ್ನು ಹಾಳುಗೆಡವುದು ನಿನ್ನ ಉದ್ದೇಶವಾಗಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು ಸೂರ್ಯ. ಪ್ರತಿಕ್ಷಣ ನೀನು ಇಲ್ಲ, ನಿಮ್ಮ ಮನೆಯವರು ಬಂದು ನನ್ನ ಏಳಿಗೆಗೆ ಅಡ್ಡಗಾಲು ಹಾಕ್ಬೇಡಿ”.
“ವಾವ್ ! ಕಂಗ್ರಾಜುಲೇಷನ್ಸ್, ಇದೆಲ್ಲಾ ನಿನ್ನದೇ ಅರೇಂಜ್ಮೆಂಟ್ಸಾ? ಹೊರಗಡೆ ಬರ್ತಾ, ಎಲ್ಲರೂ ಕಾನ್ಫರೆನ್ಸ್ ತುಂಬಾ ಚೆನ್ನಾಗಿತ್ತು, ವಿಷಯಗಳು ಅದ್ಭುತ ಅಂತೆಲ್ಲ ಮಾತಾಡಿಕೊಂಡಿದ್ದು ಕೇಳಿಸಿತು . ಇದರ ರುವಾರಿ ನೀನೇ ಅಂತ ಈವಾಗಲೇ ಗೊತ್ತಾಗಿದ್ದು. ತಿಳಿದು ಖುಷಿಯಾಯ್ತು”.
“ಸುಮ್ಮನೆ ತಲೆ ತಿನ್ನಬೇಡ. ಜಸ್ಟ್ ಗೆಟ್ ಔಟ್! ನಿಮಗೆಲ್ಲಾ ನಾನು ಹೇಗಿದ್ದರೂ ಪ್ರಾಬ್ಲಮ್. ಹೊರಟು ಹೋಗು”, ಎಂದು ಅವನ ಕೈಯ್ಯಲ್ಲಿದ್ದ “ದ ಪವರ್ ಆಫ಼್ ಸಬ್ಕೋನ್ಷಿಯಸ್ ಮೈಂಡ್” ಪುಸ್ತಕವನ್ನು ಎತ್ತಿಡಲು ಹೋದಳು. ಅಷ್ಟರಲ್ಲಿ, ಅದರಿಂದ ಅವಳ ಒಂದು ಫೋಟೋ ಮತ್ತು ಜಾತಕ ಕೆಳಗಡೆ ಬಿತ್ತು.
“ಅರೇ, ಮದುವೆಯ ತಯಾರಿ ನಡೆಸಿದ್ದೀಯಾ? ನಮಗೆಲ್ಲ ಹೇಳಲೇ ಇಲ್ಲ? ಏನು ವಿಶೇಷ? ಯಾವಾಗ ಮದುವೆ? ಹುಡುಗ ಯಾರು?”, ಎಂದೆಲ್ಲಾ ರೇಗಿಸತೊಡಗಿದ.
ಗಬಕ್ಕನೆ ಅದನ್ನು ಎತ್ತಿಕೊಂಡ ಸಾಕ್ಷಿ, “ನಾನು ಮದುವೆಯಾದರೆ ಸೂರ್ಯನನ್ನು ಮಾತ್ರ” ಎಂದು, ಥಟ್ಟನೆ ಹಲ್ಲು ಕಚ್ಚಿಕೊಂಡಳು.
ಅದನ್ನು ಕೇಳಿದ ಸೂರ್ಯನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೇ ಸಾಕ್ಷಿಯನ್ನು ತಬ್ಬಿ, ಮುತ್ತಿಕ್ಕುವ ಮನಸ್ಸಾದರೂ ತಡೆದುಕೊಂಡು, ಬೇಕಂತಲೇ, “ಯಾರಪ್ಪ ಅದು ನನ್ನ ಹೆಸರಿನವನು, ನಿನ್ನ ಬಾಯ್ ಫ಼್ರೆಂಡ್?”
ಸಾಕ್ಷಿ ಸುಧಾರಿಸಿಕೊಳ್ಳುತ್ತಾ, “ಯಾರೋ ಇದ್ದಾರೆ ಬಿಡು. ನಿನಗೇಕೆ ಅದೆಲ್ಲಾ?” ಎಂದಳು.
ಸೂರ್ಯ ಮತ್ತೆ, “ನಿಜ ಹೇಳು ಸಾಕ್ಷಿ. ಯಾಕೆ ಎಲ್ಲ ವಿಷಯವನ್ನು ಮನಸ್ಸಿನಲ್ಲೆ ಇಟ್ಟುಕೊಂಡು ಕೊರಗುತ್ತೀಯಾ? ಅದು ಸಿಟ್ಟಾಗಲಿ, ದ್ವೇಷವಾದರೂ ಸರಿ; ಪ್ರೀತಿನೇ ಆಗಿರಲಿ, ಹೇಳಿಬಿಡಬೇಕು. ಇಲ್ಲದಿದ್ದಲ್ಲಿ ಮನಸ್ಸಿನಲ್ಲೆ ಭಾವನೆಗಳು ಮಂಡಿಗೆ ತಿನ್ನುತ್ತಾ, ಒಂದೇ ಸಾರಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ನೀನು ’ಸೂರ್ಯ’ ಎಂದು ನನ್ನ ಬಗ್ಗೆಯೇ ಹೇಳಿದ್ದು ಎಂದು ನನಗೆ ಗೊತ್ತು . ಸುಮ್ಮನೆ ತಮಾಷೆ ಮಾಡಲು ಹೊರಟೆ. ಆದರೆ, ಈಗ ಅದು ಅಪಾಯಕಾರಿ ಅಂತ ಅನಿಸ್ತು. ಯಾಕೆ ನಿನಗೆ ನನ್ನ ಮೇಲೆ ಕೋಪ? ಪ್ರೀತಿಯಿದ್ದರೂ ಯಾಕೆ ದೂರ ಹೊಗ್ತಿದೀಯ?”
ಅದನ್ನು ಕೇಳಿದ ಸಾಕ್ಷಿ , “ಪ್ರೀತಿನೂ ಇಲ್ಲ, ಏನೂ ಇಲ್ಲ; ನಾನ್ಯಾಕೆ ನಿನ್ನ ಪ್ರೀತಿಸಲಿ? ನಮ್ಮಿಬ್ಬರ ಗುರಿ ಬೇರೆ-ಬೇರೆ”.
“ಗುರಿ ಬೇರೆ-ಬೇರೆ ಆದರೂ ಜೊತೆಗೆ ಪ್ರಯಾಣಿಸಬಹುದಲ್ಲ? ಮುಂದಿನ ಜೀವನದ ಹಾದಿ ಜೊತೆಯಾಗಿ ಹೆಜ್ಜೆಯಿಡಬಹುದಲ್ಲ?” ಎಂದನು ಸೂರ್ಯ .
ಚಿಕ್ಕವರಿದ್ದಾಗ ಒಟ್ಟಾಗಿ ಬೆಳೆದರೂ ಅಂತಹ ಯಾವುದೇ ಆಕರ್ಷಣೆಯಾಗಲೀ , ಭಾವನೆಗಳಾಗಲೀ ಇರಲಿಲ್ಲ ಸೂರ್ಯನಿಗೆ ಸಾಕ್ಷಿಯ ಬಗ್ಗೆ. ಅವನ ಪದವಿ ಮುಗಿಸುವಷ್ಟರಲ್ಲಿ ಅವಳು ಹಠ ಹಿಡಿದು ಕೃಷಿಯತ್ತ ಗಮನ ಹರಿಸಿ ಮುನ್ನಡೆದಿದ್ದು, ಅವಳ ಛಲ, ಮುದ್ದು ಮುಖ, ನಿಷ್ಕಲ್ಮಶ ನಗು, ಎದುರಿಗ ಕಟುವಾದರೂ , ಅತ್ತೆಯಂತೆಯೇ ಸಹೃದಯತೆ, ಇವೆಲ್ಲಾ ಬೆಳೆದಂತೆ ಅವನನ್ನು ಆಕರ್ಷಿಸಿದ್ದವು. ಆದರೆ ಪರಿಸ್ಥಿತಿಗಳಿಂದಾಗಿ ಮನೆಯವರೊಂದಿಗಾಗಲೀ, ಸಾಕ್ಷಿಯೊಂದಿಗಾಗಲೀ ಈ ಬಗ್ಗೆ ಪ್ರಸ್ತಾಪಿಸಿರಲ್ಲಿಲ್ಲ. ಸಮಯ ಬಂದಾಗ, ಸಂದರ್ಭ ನೋಡಿಕೊಂಡು ಹೇಳಿದರಾಯ್ತು ಎಂದಿದ್ದ. ಇಂದು ಅಕಸ್ಮಾತಾಗಿ ಸಾಕ್ಷಿಯೇ ಬಾಯಿಬಿಟ್ಟು ಹೇಳಿದ್ದು ಅವನ ಖುಷಿಗೆ ಕಾರಣವಾಗಿತ್ತು. ಸಾಕ್ಷಿಯೂ ತನ್ನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದು ಮನಸ್ಸು ಮುದಗೊಂಡಿತ್ತು. ಹಾಗೆಯೇ ಅವನು ಕಲಿತ ಅಲ್ಪ-ಸ್ವಲ್ಪ ಕೈ ಬರಹ ವಿಶ್ಲೇಷಣೆ, ತನ್ನ ಕೌನ್ಸೆಲ್ಲಿಂಗ್ ಅನುಭವ ಇತ್ಯಾದಿಗಳೂ ಸ್ವಲ್ಪ ಮಟ್ಟಿಗಾದರೂ ಕೆಲಸಕ್ಕೆ ಬಂದು; ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದ ಅನುಭವ.
ಮತ್ತೆ ಮಾತು ಮುಂದುವರೆಸಿ ಬೇಕಂತಲೇ, “ನೀನು ಎಷ್ಟೇ ಮರೆಮಾಚಲು ಪ್ರಯತ್ನಿಸಿದರೂ ನಿನ್ನ ಮುಖದಲ್ಲಿ ಭಾವನೆಗಳನ್ನು ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಪ್ರೀತಿ-ಅನುರಾಗದ ಭಾವಗಳು, ಉದ್ವೇಗದಲ್ಲಿದ್ದರೂ, ಕೋಪಗೊಂಡಿದ್ದರೂ, ಎದುರು ಇರುವವರ ಬಗೆಗಿನ ಭಾವ ಪ್ರೀತಿ ಹಾಗೂ ಕಾಳಜಿಯದಾದರೆ; ಕಣ್ಣುಗಳು ಮತ್ತು ಮುಖಭಾವದಲ್ಲಿ ಖಂಡಿತವಾಗಿಯೂ ಒಂದು ಸಣ್ಣ ಮುಗುಳ್ನಗೆ ಕಂಡೇ ಕಾಣಿಸುತ್ತದೆ. ಯಾಕೆ ಹಿಡಿದಿಡಲು ಕಷ್ಟಪಡುತ್ತಿದ್ದೀಯ? ನಾನು ನಮ್ಮ ಮನೆಯಲ್ಲಿ ಅಥವಾ ಅತ್ತೆಯ ಬಳಿ, ಇಲ್ಲಿಗೆ ನಿನ್ನ ಕಾಣಲು ಬರುತ್ತಿರುವ ವಿಚಾರ ಹೇಳಿಲ್ಲ. ನಿನಗೆ ಇಷ್ಟವಿಲ್ಲದಿದ್ದರೆ ಮುಂದೆ ಹೇಳುವುದೂ ಇಲ್ಲ. ಅತ್ತೆಗೆ ಸ್ವಲ್ಪ ಅನುಮಾನ ಬಂದರೂ ಬರಬಹುದು. ಆದರೆ ತುಂಬಾ ದಿನಗಳಿಂದ ನೀನು ಯಾವುದೋ ಅವ್ಯಕ್ತ ಯೋಚನೆಯಲ್ಲಿ ಮುಳುಗಿದ್ದೀಯ ಅನ್ನುವುದು ನನಗೆ ಗೊತ್ತಿಲ್ಲದ ವಿಚಾರವಲ್ಲ. ಪ್ರೀತಿ ಬಗ್ಗೆ, ನನ್ನ ಬಗ್ಗೆ ಅಲ್ಲದಿದ್ದರೂ ಒಬ್ಬ ಒಳ್ಳೆಯ ಸ್ನೇಹಿತನೆಂದು ತಿಳಿದು, ನಿನ್ನ ಮನಸ್ಸಿನಲ್ಲಿರುವ ಕೋಲಾಹಲವನ್ನು ಹೇಳಿ, ಮನಸ್ಸು ಹಗುರ ಮಾಡಿಕೊಳ್ಳಬಾರದಾ? ಇಷ್ಟರ ಮೇಲೆ ನಿನಗೆ ಹಂಚಿಕೊಳ್ಳಲು ಇಷ್ಟ ಇಲ್ಲ, ನನ್ನ ಮೇಲೆ ಭರವಸೆ ಇಲ್ಲ ಅಂದ್ರೆ ಬಿಟ್ಟುಬಿಡು. ಹೆಚ್ಚು ಒತ್ತಾಯ ಮಾಡುವುದಿಲ್ಲ. ನಾನಿನ್ನು ಹೊರಡುತ್ತೇನೆ. ತೊಂದರೆಯಾದರೆ ಕ್ಷಮಿಸು. ಆದರೆ ಒಂದಂತೂ ನಿಜ. ನಾನು ನಿನ್ನನ್ನು ತುಂಬಾ ಇಷ್ಟಪಡುತ್ತೇನೆ. ಬಾಳಸಂಗಾತಿಯಾಗಿ ಒಟ್ಟಿಗೆ ಜೀವನ ಮಾಡಬೇಕೆಂದು ಕಾಯುತ್ತಿರುತ್ತೇನೆ”, ಎಂದು ಹೊರಡಲನುವಾದ.
ಅಷ್ಟರಲ್ಲಿ ಸಾಕ್ಷಿ ಬಾಗಿಲಿಗೆ ಅಡ್ಡಲಾಗಿ ನಿಂತು ’ಗೊಳೋ’ ಎಂದು ಅಳಲು ಶುರು ಮಾಡಿದಳು. ಅವಳ ಅಳು ಮುಗಿಯುವವರೆಗೂ ಕಾದ ಸೂರ್ಯ ನಿಧಾನವಾಗಿ ಅವಳನ್ನು ಕೂರಿಸಿ ಸಮಾಧಾನ ಮಾಡತೊಡಗಿದನು.
ಅವಳು ನಿಧಾನಕ್ಕೆ ತನ್ನ ಒಂದೊಂದೇ ಭಾವನೆಗಳನ್ನು ಬಿಚ್ಚಿಡಲಾರಂಭಿಸಿದಳು.
——————————————————————————————————————–
ಭಾಗ – ೫
“ಚಿಕ್ಕವಳಿದ್ದಾಗಿಂದಲೂ ಅಪ್ಪ ಇಲ್ಲವೆಂದು ಅಮ್ಮನ ಅತಿಯಾದ ಕಾಳಜಿ, ಮುದ್ದಿನಲ್ಲಿ ಬೆಳೆದು ಬಂದವಳು ನಾನು. ಆಗೆಲ್ಲಾ ಅಪ್ಪನ ಕೊರತೆಗಿಂತ ಅಮ್ಮನ ಸಾಧನೆಗಳೇ ನನ್ನ ಕಣ್ಣ ಮುಂದೆ ಅಚ್ಚೊತ್ತಿದ್ದವು. ಅದಕ್ಕೆ ದೊಡ್ಡವಳಾಗುತ್ತಿದ್ದಂತೆ ಕೃಷಿ ಪದವೀಧರೆಯಾಗಬೇಕೆಂದು ಹಠ ಹಿಡಿದೆ. ಹಾಗೆ ಬರ-ಬರುತ್ತಾ ಅದರ ಬಗ್ಗೆ ಒಂಥರಾ ಗೀಳು ಬೆಳೆಸಿಕೊಂಡೆ. ಎಲ್ಲರೂ ಅಮ್ಮನ ಸಾಧನೆಯ ಬಗ್ಗೆ ಹೊಗಳಿದಾಗ ಒಂದು ರೀತಿಯ ಹೆಮ್ಮೆ, ಖುಷಿಯಾದರೂ; ಎಲ್ಲೋ ಒಂದು ಕಡೆ ನನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ನಾನು ಏನೇ ಮಾಡಿದರೂ, ಸಾಧಿಸಿದರೂ ಅದು ನನ್ನ ಸ್ವಂತ ಪರಿಶ್ರಮಕ್ಕಿಂತ ಹೆಚ್ಚಾಗಿ ಅಮ್ಮನ ನೆರಳಿಂದ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಹಾಗೆಯೇ ನನ್ನ ಬಗ್ಗೆ ನಾನೇ ಒಂಥರಾ ಕೀಳರಿಮೆ ಬೆಳೆಸಿಕೊಂಡೆ. ಎಲ್ಲರೂ ಒಬ್ಬಳೇ ಹೆಣ್ಣು ಮಗಳು ಎಷ್ಟು ಧೈರ್ಯವಾಗಿ ಮುನ್ನ್ನಡೆದು, ಎಷ್ಟೊಂದು ಕಷ್ಟ-ನಷ್ಟಗಳನ್ನು ಅನುಭವಿಸಿದರೂ, ಕೊನೆಗೆ ಯಶಸ್ವಿಯಾಗಿ ಒಬ್ಬಂಟಿಯಾಗಿ ಸಂಸಾರ ನಿಭಾಯಿಸಿದಳು, ಎಷ್ಟೊಂದು ಬುದ್ಧಿವಂತೆ ಅಂತೆಲ್ಲ ಅಮ್ಮನ ಬಗ್ಗೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡಾಗಲೆಲ್ಲ್ಲಾ ಕೃಷಿಯಲ್ಲಿ ಸಾಧಿಸಬೇಕೆಂಬ ನನ್ನ ನಿರ್ಧಾರ ಮತ್ತಷ್ಟು ಗಟ್ಟಿಗೊಂಡಿತು”.
“ಎಲ್ಲರೂ ಕಾಲೇಜಿನಲ್ಲಿ ಹೆಣ್ಣು ಮಗಳು ಅಪರೂಪದ ಪದವಿ ಕೋರ್ಸ್ ಆಯ್ಕೆ ಮಾಡಿದ್ದೀಯಾ, ಒಳ್ಳೆಯ ಆಯ್ಕೆ, ಧೈರ್ಯವಂತೆ ನೀನು – ಅಂತೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರೂ, ಕ್ರಮೇಣ ನಾನು ಕೃಷಿ ಹಿನ್ನೆಲೆಯುಳ್ಳವಳು, ಎಂದು ಅಮ್ಮನ ಬಗ್ಗೆ ತಿಳಿದು ಅವಳನ್ನೇ ಹೆಚ್ಚು ಗೌರವಿಸಲಾರಂಭಿಸಿದರು. ನನ್ನ ಪಿಯು ಗೆಳೆಯ-ಗೆಳತಿಯರೆಲ್ಲ ಎಂಜಿನಿಯರಿಂಗ್, ಮೆಡಿಕಲ್ ಅಥವಾ ಬೇರೆ-ಬೇರೆ ಪದವಿ ಪಡೆದು, ಬೇರೆ-ಬೇರೆಡೆ ಉದ್ಯೋಗದಲ್ಲಿದ್ದಾರೆ. ನೀನು ಬಿಡಮ್ಮಾ, ಅಮ್ಮ ಮಾಡಿಟ್ಟ ತೋಟ-ಆಸ್ತಿ ಹೇಗೂ ಇದೆ. ಐದು ಈಗ ಹತ್ತು ಎಕರೆ ಆಗಿದೆ. ನೀನೂ ಏನೂ ಕಮ್ಮಿ ಇಲ್ಲ ಎಂಬಂತೆ ಇಪ್ಪತ್ತಕ್ಕೆ ತಂದಿಟ್ಟಿದ್ದೀಯ. ಸಾಲದ್ದಕ್ಕೆ ಗವರ್ನಮೆಂಟ್ ಉಪನ್ಯಾಸಕಿ ಬೇರೆ. ಏನೂ ಚಿಂತೆ ಇಲ್ಲ ಎಂದು ಆಡಿಕೊಳ್ಳುತ್ತಿದ್ದರು. ಅದನ್ನೆಲ್ಲಾ ಕೇಳಿದಾಗ ಹುಚ್ಚು ಹಿಡಿದ ಹಾಗೆ ಆಗುತ್ತದೆ”.
“ಮನೆಯಾದರೂ ಹೊಸದಾಗಿ, ಚೆನ್ನಾಗಿ ಕಟ್ಟಿಸಿಕೊಳ್ಳೋಣ ಎಂದರೆ, ಯಾವುದಕ್ಕೂ ಅಡ್ಡಿ ಮಾಡದ ಅಮ್ಮ, ಇದು ಅಪ್ಪನ ನೆನಪು. ಈ ಮನೆ ಹಾಗೇ ಇರಬೇಕು ಎಂದಳು. ನಾನು ಬೇರೆ ಜಾಗದಲ್ಲಿ ಮನೆ ಕಟ್ಟಲು ಮನಸ್ಸಾಗದೆ, ಅದನ್ನೇ ಸ್ವಲ್ಪ ವಿಸ್ತರಿಸಿ, ಹೊಸದಾಗಿ ಅಲ್ಟರೇಷನ್ ಮಾಡಿಸಿದೆ. ಅದಕ್ಕೂ ಆಡಿಕೊಂಡರು ಜನ. ಅಮ್ಮ ಅಷ್ಟೊಂದು ಕೃಷಿ ಮಾಡುತ್ತಿದ್ದವಳಿಗೆ ಈಗ ಏನಾಗಿದೆಯೋ ಗೊತ್ತಿಲ್ಲ. ಏನೂ ಬೇಡ ಎಂದು ಸದಾ ದೇವರ ಧ್ಯಾನದಲ್ಲಿ ಮುಳುಗಿರುತ್ತಾಳೆ. ತನಗಾಗಿ ತಾನು ದುಡಿದುಕೊಳ್ಳಬಹುದಲ್ಲ? ಕೈ-ಕಾಲು ಗಟ್ಟಿಯಾಗಿಯೇ ಇದೆಯಲ್ಲ? ಸಮಯದ ಸದುಪಯೋಗಕ್ಕೆ ಹೇಳುತ್ತಿದ್ದೇನೆಯೇ ವಿನಃ ದುಡ್ಡಿನಾಸೆಗಲ್ಲ.”
ಅವಳ ಮಾತನ್ನು ಅರ್ಧಕ್ಕೆ ತುಂಡರಿಸುತ್ತಾ ತುಸು ಕಟುವಾಗಿ ಸೂರ್ಯ, “ಸಾಕ್ಷಿ ನೀನು ಹೈಸ್ಕೂಲ್, ಪದವಿ ಮುಗಿಸುವವರೆಗೂ ನಿನ್ನ ಕೈ ಕಾಲು ಕೂಡ ಗಟ್ಟಿಮುಟ್ಟಾಗಿ ಇದ್ದವಲ್ಲ? ಸಮಯದ ಸದುಪಯೋಗಕ್ಕೆಂದು ಯಾವತ್ತಾದರೂ ಆ ವಯಸ್ಸಿನಲ್ಲಿ ಬಿಡುವಿದ್ದಾಗ ತೋಟದಲ್ಲಿ ಅಡಿಕೆ ಹೆಕ್ಕಿದ್ದಾಗಲಿ, ರಜಾದಿನಗಳಲ್ಲಿ ಅತ್ತೆಗೆ ಮನೆಕೆಲಸದಲ್ಲಿ ಕೈಜೋಡಿಸಿದ್ದಾಗಲಿ ನೆನಪಿದೆಯಾ? ಯಾವತ್ತಾದರೂ ಅತ್ತೆ ನಿನಗೆ ಏನಾದರೂ ಹೀಗೇ ಮಾಡು, ಹಾಗೇ ಮಾಡು ಎಂದು ಗದರಿಸಿದ್ದಾಗಲೀ, ಹೇಳಿದ್ದಾಗಲೀ ನೆನಪಿದೆಯಾ?”
“ವಯಸ್ಸು ಐವತ್ತು ದಾಟಿದ ನಂತರ ಹೆತ್ತವರು ಮಕ್ಕಳಂತಾಗುತ್ತಾರೆ. ಮಕ್ಕಳಿಗಿಂತಲೂ, ವಯಸ್ಸಾದಂತೆ ನಿಧಾನವಾಗಿ ಮಗುವಿನಂತಾಗುತ್ತಾರೆ. ಅದೂ ಅಲ್ಲದೆ ನಾವೇನೋ ಯೋಚನೆ ಮಾಡುತ್ತೇವೆ; ಅವರು ಇನ್ನೇನೋ ಅಂದುಕೊಳ್ಳುತ್ತಾರೆ. ಏನೋ ಮಾಡಲು ಹೋಗಿ ಏನೋ ಆಗುವುದು, ಇಲ್ಲಾ ಏನೋ ಹೇಳಲು ಹೋಗಿ ಇನ್ನೇನೋ ಹೇಳುವುದು – ಇವೆಲ್ಲ ಮಾಮೂಲಿ. ಅದೊಂಥರಾ ಹಿಂದಿನ ಕಾಲದಲ್ಲಿ ಹೆಂಡತಿ ಬಸಿರು ಎನ್ನುವುದನ್ನು ನೇರವಾಗಿ ಹೇಳುವ ಬದಲು, ‘ಪಪ್ಪಾಯಿ ತಿನ್ನುವುದಿಲ್ಲ, ಪ್ರಯಾಣ ಮಾಡುವುದಿಲ್ಲ’, ಎಂದಂತೆ. ಈಗಿನ ಕಾಲದಲ್ಲಿ ಹೆಚ್ಚಾಗಿ, ಇರುವುದನ್ನು ಇದ್ದಂತೆ ನೇರವಾಗಿಯೇ ಹೇಳುತ್ತಾರೆ. ಆದರೆ ನಿನ್ನಂಥವರು ಅದರಲ್ಲೂ ಸಾಕಷ್ಟು ಅಪಾರ್ಥಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಏನೂ ಮಾಡಲಾಗುವುದಿಲ್ಲ, ಎಲ್ಲಾ ಜನರೇಷನ್ ಗ್ಯಾಪಿನ ಮಹಿಮೆ!”.
“ತಪ್ಪುಗ್ರಹಿಕೆಯ ಬದಲು, ನೇರ ಸಂವಹನ-ಸಂಭಾಷಣೆಯೇ ಪರಿಹಾರ. ನೀನು ಅದನ್ನೇ ಅತ್ತೆಯ ಜೊತೆ ಯಾವತ್ತಾದರೂ ಡೈರೆಕ್ಟಾಗಿ ಕೇಳಿದ್ದೀಯಾ ? ಅವರು ಯಾಕೆ ಅಷ್ಟೊಂದು ದೇವರ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಅಂತ? ಅವರಿಗೂ ಚಿಕ್ಕಂದಿನಿಂದಲೇ ಕೆಲಸ ಮಾಡಿ, ಅವರು ಅನುಭವಿಸಿದ ನೋವಿಗೆ ಈಗ ಹೊರ ಪ್ರಪಂಚದ ಸಂಪರ್ಕವೇ ಬೇಡವೆಂದು ಕುಳಿತಿರಬಹುದು. ಮಗಳು ಎಲ್ಲ ಜವಾಬ್ದಾರಿ ನಿಭಾಯಿಸುತ್ತಾಳೆ. ಬೇಕಾಗಿದ್ದರೆ ಮಾರ್ಗದರ್ಶನ ಮಾಡಿದರಾಯಿತು ಎಂದೂ ಇರಬಹುದು. ಅದೂ ಅಲ್ಲದೆ, ಕೇವಲ ಹೂವು, ತರಕಾರಿ ತೋಟದಲ್ಲಿ ನಿನಗೀಗ ಅವರ ಮಾತುಗಳು ರುಚಿಸುತ್ತಿಲ್ಲ. ಇನ್ನು ಸಮಗ್ರ ಕೃಷಿಯ ಬಗ್ಗೆ ಕೇಳುತ್ತೀಯಾ ಅವರ ಮಾತು?”
“ಆಗಲೇ ಹೇಳಿದೆನಲ್ಲ. ನಮ್ಮ ಮತ್ತು ಅವರ ಯೋಚನಾಲಹರಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅವರ ಅನುಭವಗಳು, ನಮ್ಮ ಅನುಭವಗಳು ಬೇರೆ-ಬೇರೆ ತೆರನಾದುದು. ಕೆಲವರಿಗೆ ನಮ್ಮಲ್ಲಿರುವ ತುಂಗಾ ನದಿ ನೀರು ಸಿಹಿ ಎನಿಸಿದರೆ; ಇನ್ನು ಕೆಲವರಿಗೆ ದೂರದ ಹಿಮಾಲಯದ ತಪ್ಪಲಿನ ಗಂಗೆಯೇ ಪವಿತ್ರವೆನಿಸಿಬಹುದು. ಎರಡೂ ತಪ್ಪ್ಪಲ್ಲ. ಹುಟ್ಟು-ಹರಿವು, ದಾರಿ ಬೇರೆ-ಬೇರೆಯಾದರೂ, ಕೊನೆಗೆ ಎರಡೂ ಸೇರುವುದು ಸಮುದ್ರವನ್ನೇ” ಎಂದು ನಿಟ್ಟುಸಿರುಬಿಟ್ಟನು.
ಚಿಕ್ಕಂದಿನಿಂದಲೂ ಹತ್ತಿರದಿಂದ ಅತ್ತೆಯನ್ನು ಬಲ್ಲ ಸೂರ್ಯನಿಗೆ, ಅವರು ಅನುಭವಿಸಿದ ಕಷ್ಟ ಕಾರ್ಪಣ್ಯ, ಜೀವನದ ಹಾದಿಯನ್ನು ಅರಿತಿದ್ದರೂ; ಪ್ರಸ್ತುತ ಕೃಷಿಯಲ್ಲಿ ಅವರು ಸಕ್ರಿಯವಾಗಿ ಇಲ್ಲವೆಂಬ ಸಾಕ್ಷಿಯ ಮಾತುಗಳು ಹಿಡಿಸಲಿಲ್ಲ. ಅದಕ್ಕೇ ಅವಳ ಮಾತನ್ನು ಅರ್ಧಕ್ಕೆ ತುಂಡರಿಸಿ, ಅತ್ತೆ ಮೇಲಿನ ಗೌರವದಿಂದ ತನ್ನ ಮಾತುಗಳನ್ನು ಹೇಳಿದನು.
ಮತ್ತೆ ಏನೋ ನೆನಪಾದಂತೆ, ಕಬ್ಬಿಣ ಕಾದಾಗಲೇ ಬಡಿಯಯಬೇಕೆಂದು, “ಅದೆಲ್ಲ ಸರಿ, ಈಗ ನೀನು ನಿನ್ನ ಕಾಲ ಮೇಲೆ ನೀನು ನಿಂತಿದ್ದೀಯ, ಎಲ್ಲಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೀಯಲ್ಲ? ಮತ್ಯಾಕೆ ಸಮಾಜ ನಿನ್ನ ಸಾಧನೆಗಳನ್ನು ಗುರುತಿಸಲಿ ಎನ್ನುವ ಹಂಬಲ? ಎಲ್ಲರೂ ನಿನ್ನನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಭಾವ? ನೀನು ನಿನಗೋಸ್ಕರ ತಾನೆ ಇಷ್ಟೆಲ್ಲ ಕಷ್ಟ ಪಟ್ಟಿರುವುದು? ಯಾವುದಕ್ಕೂ ಕಾಯದೆ, ನಿನ್ನ ಪಾಡಿಗೆ ’ಕಾಯಕವೇ ಕೈಲಾಸ’ ಎಂದಿದ್ದರೆ ಅಲ್ಪಮಟ್ಟಿಗೆ ಸಮಾಜ-ಬಂಧುಗಳು ಗುರುತಿಸುತ್ತಾರೆ. ಈಗ ನಿನ್ನ ನಡವಳಿಕೆಯಿಂದ ಎಲ್ಲರನ್ನೂ ದೂರ ಮಾಡಿಕೊಳ್ಳುತ್ತಿದ್ದೀಯ”.
“ನಾನು ಕಾನ್ಫರೆನ್ಸಿನ ಅರೇಂಜ್ಮೆಂಟ್ಸ್ ಚೆನ್ನಾಗಿದೆ ಎಂದರೆ, ಅದರಲ್ಲಿ ನೀನಾಗಿಯೇ ಕೊಂಕು ಕಂಡುಹಿಡಿಯುತ್ತಿದ್ದೀಯ. ರೂಮಿನ ಬಾಗಿಲು ಏನೋ ತೆರೆದೆ. ಆದರೆ ಮನಸ್ಸು ಬಿಚ್ಚಿ ಮಾತನಾಡಲು ಇಷ್ಟು ಹೊತ್ತು ಬೇಕಾಯಿತು. ಮೊನ್ನೆ ಹೋಟೆಲಿನಲ್ಲಿ ಊಟದ ಹೊತ್ತಿಗೂ ಅಷ್ಟೆ. ಸುಮ್ಮನೆ ಯಾರನ್ನೂ ಮಾತನಾಡಿಸದೆ, ಶುಷ್ಕವಾಗಿ ನಕ್ಕು ಹೊರನಡೆದೆ. ನಮ್ಮ ಅನಿವಾರ್ಯ ಕೆಲಸಗಳಿಂದಾಗಿ ಅತ್ತೆ ಒಬ್ಬರನ್ನೇ ನಾವು ಆಟೋದಲ್ಲಿ ಕಳುಹಿಸಬೇಕಾಯಿತು. ಇದನ್ನೆಲ್ಲಾ ಗಮನಿಸಿದ ನನ್ನ ಅಪ್ಪ-ಅಮ್ಮ ಅಥವಾ ನೀನೇ ಹೇಳುವ ಜನರು ನಿನಗೆ ಅಹಂಕಾರ, ಕಾರಿದ್ದರೂ ಅಮ್ಮನನ್ನು ಒಬ್ಬಳೇ ಬಿಟ್ಟು ಬಂದಿದ್ದಾಳೆ, ಎಂದು ಮಾತಾಡಿಕೊಳ್ಳುತ್ತಾರೆ. ನಾವೇನು ಅದನ್ನು ಬಿಡಿಸಿ ಹೇಳಬೇಕಾಗಿಲ್ಲ ಅವರಿಗೆ. ನೋಡಿಕೊಂಡು ಅವರೇ ಆಡಿಕೊಳ್ಳುತ್ತಾರೆ. ನೀನು ಹೇಳಿದಂತೆ ಅವರಿಗೆ ನಿನ್ನ ಸಾಧನೆಗಳಿಗಿಂತ ಇಂತಹ ನಡೆ-ನುಡಿಗಳೇ ಎದ್ದು ಕಾಣುತ್ತವೆ. ಮತ್ತೆ ಅತ್ತೆ ಅವರ ಪಾಲಿನ ಹೀರೋಯಿನ್ ಆಗುತ್ತಾರೆ. ಎಲ್ಲರನ್ನೂ, ಎಲ್ಲವನ್ನೂ ನೆಗ್ಲೆಕ್ಟ್ ಮಾಡಿ ನಿನ್ನಷ್ಟಕ್ಕೆ ನೀನಿದ್ದರೆ ಸರಿ, ಇಲ್ಲವಾದಲ್ಲಿ ಮತ್ತೆ ನೀನೇ ಹೇಳಿದಂತೆ ಹುಚ್ಚು ಹಿಡಿದಂತಾಗುತ್ತದೆ. ಜನರಿಗೂ ಅದೇ ಬೇಕಾಗಿರುವುದು ಆಡಿಕೊಳ್ಳಲು”.
“ಯಾಕೆ ಸುಮ್ಮನೆ ಎಲ್ಲರಿಂದ ದೂರವಾಗುತ್ತಿದ್ದೀಯ? ನನ್ನ ಮೇಲಿನ ಪ್ರೀತಿ ಅಕಸ್ಮಾತಾಗಿ ಬಾಯಿ ಬಿಟ್ಟೆ. ಆದರೆ ಈಗ ಅದನ್ನು ಒಪ್ಪಿಕೊಳ್ಳಲೂ ತಯಾರಿಲ್ಲ ನೀನು, ವಿಚಿತ್ರ ಹುಡುಗಿ!”.
ಅದುವರೆಗೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ಸಾಕ್ಷಿ ಕೂಡಲೇ, “ನಿನ್ನ ಮದುವೆ ನಿಶ್ಚಯವಾಗಿರುವಾಗ ನಾನ್ಯಾಕೆ ಇದೆಲ್ಲ ಹೇಳಿ ಅಡ್ಡಿಯುಂಟು ಮಾಡಲಿ?” ಎಂದಳು.
“ವ್ಹಾಟ್?!” ಎಂದು ಎದ್ದು ನಿಂತುಕೊಂಡನು ಸೂರ್ಯ, “ನನಗೇ ಗೊತ್ತಿಲ್ಲದೇ ನನ್ನ ಮದುವೆಯೇ?”
ವಿಚಿತ್ರವಾಗಿ ಅವನತ್ತ ನೊಡಿದ ಸಾಕ್ಷಿ ತನ್ನ ಮಾತು ಮುಂದುವರಿಸಿದಳು, “ಹೌದು, ನಿನ್ನದೇ ಮದುವೆ!….”
——————————————————————————————————————–
ಭಾಗ – ೬
ಸಾಕ್ಷಿ ಮತ್ತೆ, “ಹಾಗೆಯೇ ಮೊದಲಿಂದಲೂ ಹೇಳಿಕೊಳ್ಳುವಂತಹ ಸ್ನೇಹಿತರು ಯಾರೂ ನನಗಿಲ್ಲ. ಚಿಕ್ಕಂದಿನಿಂದ ನಿನ್ನೊಂದಿಗೆ ಕೂಡಿ-ಆಡಿ ಬೆಳೆದರೂ, ಬರ-ಬರುತ್ತ ನಮ್ಮಿಬ್ಬರ ಆಯ್ಕೆಗಳು ಬೇರೆ-ಬೇರೆ ಎನಿಸತೊಡಗಿತ್ತು. ಉನ್ನತ ವ್ಯಾಸಂಗಕ್ಕೆ ನೀನು ವಿದೇಶಕ್ಕೆ ಹೋದಾಗ ಯಾರೋ ಆಪ್ತರನ್ನು ಕಳೆದುಕೊಂಡಂತಹ ಏನೋ ಹೇಳಲಾಗದ ಭಾವ ಆವರಿಸಿಕೊಂಡಿತ್ತು. ಕ್ರಮೇಣ, ನನ್ನನ್ನು ನಾನು ಓದಿನಲ್ಲಿ ತೊಡಗಿಸಿಕೊಳ್ಳುತ್ತಾ, ಕೃಷಿ ವಿಸ್ತರಣೆಯತ್ತ ಗಮನಹರಿಸಿದೆ. ಅತ್ತೆ (ನಿನ್ನ ಅಮ್ಮ) ದೇವಸ್ಥಾನದಲ್ಲಿ ಶಿವರಾತ್ರಿಯಂದು ಸಿಕ್ಕಾಗ ಅಮ್ಮನಲ್ಲಿ ಹೇಳುವುದು ಕೇಳಿಸಿಕೊಂಡೆ. ಅಮೆರಿಕದಲ್ಲಿ ಹುಟ್ಟಿ-ಬೆಳೆದು, ಈಗ ಡಾಕ್ಟರ್ ಆಗಿರುವ ಅವರ ಅಣ್ಣನ ಮಗಳು ಡಾ||ಚೇತನಾಳನ್ನು ನಿನಗೆ ಮದುವೆ ಮಾಡಿಸಿಕೊಡುವ ಬಗ್ಗೆ ಮಾತು-ಕಥೆಗಳು ನಡೆಯುತ್ತಿದೆ ಅಂತ. ಅದನ್ನು ಕೇಳಿಸಿಕೊಂಡ ನಾನು ಅವತ್ತಿಂದ ನಿನ್ನಿಂದ ದೂರ ಉಳಿಯಬೇಕೆಂದು ಗಟ್ಟಿ ನಿರ್ಧಾರ ಮಾಡಿದೆ. ಅವತ್ತು ನೀನು ಜಮೀನಿನ ಬಗ್ಗೆ ಹೇಳಿದಾಗ ಬೇಕಂತಲೇ ಜಗಳವಾಡಿ ನಿನ್ನಿಂದ ದೂರವಾದೆ. ಅವತ್ತು ಹೋಟೆಲಿನಲ್ಲಿ ಐಸ್-ಕ್ರೀಮ್ ತಿನ್ನಲು ಕರೆದಾಗಲೂ ಎಲ್ಲಿ ಸೋತು ಬಿಡುತ್ತೇನೋ ಅಂತ ಬಿರುಸಾಗಿ ಯಾರನ್ನೂ ಮಾತನಾಡಿಸದೇ ಹಾಗೆಯೇ ಹೊರಟು ಬಂದೆ”.
“ಅಯ್ಯೋ ನೋಡು, ನೋಡು! ಮತ್ತದೇ ತಪ್ಪು-ಕಲ್ಪನೆ, ತಪ್ಪು-ಗ್ರಹಿಕೆ. ಅಮ್ಮ ಹೇಳಿದ್ದೇನೋ ಸರಿ. ಆದರೆ ಒಂದು ಮಾತು ನನ್ನಲ್ಲಿ ನೇರವಾಗಿ ಯಾವತ್ತಾದರೂ ಈ ಬಗ್ಗೆ ಕೇಳಿದೆಯಾ? ಈಗೇನೋ ಮಾತು ಬಂತು, ಆ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಾಂದ್ರೆ ನಾನೇನಾದರೂ ಕೆಲಸದ ಮೇಲೆ ವಿದೇಶಕ್ಕೆ ಹೋಗುವ ಸಂದರ್ಭ ಬಂದರೆ, ಒಂದು ವಾರದಲ್ಲಿ ನಾನು ಅಲ್ಲಿ ಅವಳನ್ನು ಮದುವೆಯಾಗಿ, ಮಗು ಕೂಡಾ ಆಯಿತೇನೋ ಅಂದುಕೊಂಡು ಬಿಡುತ್ತೀಯ”, ಎಂದನು ನಾಟಕೀಯವಾಗಿ ಸೂರ್ಯ.
ಸಾಕ್ಷಿ ಅವನ ಮುಖವನ್ನೇ ಅರ್ಥವಾಗದವರಂತೆ ಪಿಳಿ-ಪಿಳಿ ಕಣ್ಣು ಬಿಟ್ಟುಕೊಂಡು ನೋಡತೊಡಗಿದಳು.
ಸೂರ್ಯ ಮಾತು ಮುಂದುವರೆಸುತ್ತಾ, “ನನ್ನ ಅಮ್ಮನಿಗಿಂತ ಅಥವಾ ಅವಳ ತಂದೆ-ತಾಯಿಯರಿಗಿಂತ ಚೇತನಾಳಿಗೆ ಮೊದಲಿನಿಂದಲೂ ನಾನೇ ಹೆಚ್ಚು ಆಪ್ತ. ನಾವಿಬ್ಬರೂ ಒಂಥರಾ ಅಪರೂಪದ ಗೆಳೆಯರಂತೆ. ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳುತ್ತೇವೆ ಮತ್ತು ಚರ್ಚಿಸುತ್ತೇವೆ. ಅದೂ ಅಲ್ಲದೆ, ಇಬ್ಬರದ್ದೂ ಒಂದೇ ಕ್ಷೇತ್ರ – ವೃತ್ತಿ ಆಗಿರುವುದರಿಂದ ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತೇವೆ”.
“ನಾನು ಅವರ ಮನೆಯಲ್ಲಿ ಉಳಿದುಕೊಂಡು ಉನ್ನತ ವ್ಯಾಸಂಗಕ್ಕೆ ಕಾಲೇಜಿಗೆ ಹೋಗಿ ಬರುತ್ತಿದ್ದುದರಿಂದ ಕಾಂಟಾಕ್ಟ್ ಚೆನ್ನಾಗಿ ಉಳಿದುಕೊಂಡಿದೆ. ವಾರಕ್ಕೊಮ್ಮೆಯಾದರೂ ಫೋನ್, ವಿಡಿಯೋ ಕಾಲ್ ಇದ್ದಿದ್ದೇ. ಮಜವೆಂದರೆ, ಚೇತನಾ ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿ ತನ್ನ ಸಹೋದ್ಯೋಗಿ ಮಿತ್ರ ಡಾಕ್ಟರ್ ಒಬ್ಬರನ್ನು ಆಲ್ರೆಡಿ ಪ್ರೀತಿಸುತ್ತಿದ್ದಾಳೆ. ಪದವಿಯಿಂದಲೂ ಇಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ಮನೆಯಲ್ಲಿ ಹೇಳಿಕೊಳ್ಳಲು ಭಯ. ಅದಕ್ಕೆಂದೇ ನನ್ನ ರಾಯಭಾರತನಕ್ಕೂ ಒಂದೆರಡು ಬಾರಿ ಆಗ್ರಹಿಸಿದ್ದಾಳೆ. ಅವರದ್ದು ನಿಜವಾದ ಪ್ರೀತಿಯೇ, ಇಲ್ಲಾ ಬರೀ ಆಕರ್ಷಣೆಯೇ ಎಂದು ತಿಳಿದು; ಮುಂದೆ ಹೆಜ್ಜೆ ಇಡೋಣ ಎಂದು ಅವಳಿಗೆ ಪ್ರತಿಬಾರಿಯೂ ಸಮಯ ನೋಡಿ ಅತ್ತೆ ಹತ್ರ ಮಾತಾಡ್ತೀನಿ ಅಂತ ಮುಂದಕ್ಕೆ ಎಳೆಯುತ್ತಿದ್ದೇನೆ”.
ಸಾಕ್ಷಿ ಏನು ಹೇಳಬೇಕೆಂದು ತೋಚದೆ ಕುಳಿತಿದ್ದಳು.
ಸೂರ್ಯನೇ, “ನೋಡು, ನಾನು ನಿನ್ನನ್ನು ಮನಸಾರೆ ಇಷ್ಟಪಟ್ಟಿದ್ದೇನೆ. ನಿನ್ನ ಒಳ್ಳೆಯ ವ್ಯಕ್ತಿತ್ವ, ಗುಣ-ನಡತೆಗಳನ್ನು ಮೆಚ್ಚಿದ್ದೇನೆ. ನೀನು ಒಂಥರಾ ಬೋಲ್ಡ್ ಆಂಡ್ ಬ್ಯೂಟಿಫುಲ್ ಅಂತ ಇಷ್ಟಪಟ್ಟಿದ್ದೇನೆಯೇ ಹೊರತು, ನಿನ್ನ ಬಳಿ ಇರುವ ಆಸ್ತಿಗಾಗಿಯಾಗಲೀ, ಡಿಗ್ರಿ ನೋಡಿಯಾಗಲೀ ಅಲ್ಲ. ಅದೂ ಅಲ್ಲದೆ ಒಂದೇ ಕ್ಷೇತ್ರದಲ್ಲಿ ಇರುವವರನ್ನು ಮದುವೆಯಾಗಿ ಒಂಥರಾ ಮನೆಯಲ್ಲೂ ಆಸ್ಪತ್ರೆಯ ವಾತಾವರಣ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ”.
“ನನಗೆ ವಿದೇಶದ ವ್ಯಾಮೋಹವೂ ಇಲ್ಲ, ಆಸ್ತಿ-ಹಣದ ಚಿಂತೆಯೂ ಇಲ್ಲ. ಇರುವಷ್ಟು ದಿನ ಅತ್ತೆಯಂತೆ ನೆಮ್ಮದಿಯಾಗಿ ನನ್ನದೇ ಲೋಕದಲ್ಲಿ ವಿಹರಿಸುತ್ತಾ, ಸಂತೃಪ್ತಿಯ ಜೀವನ ನಡೆಸಬೇಕು. ನನ್ನ ಕೈಲಾದಷ್ಟು ಸಮಾಜಕ್ಕೆ ಏನಾದರೂ ಕೊಡಬೇಕು ಅಷ್ಟೆ. ಅದರ ಒಂದು ಸಣ್ಣ ಪ್ರಯತ್ನವಾಗಿ, ಶನಿವಾರ ರಜಾವಿಟ್ಟುಕೊಂಡು, ಭಾನುವಾರ ಬಡವರಿಗಾಗಿ ಉಚಿತವಾಗಿ ಕೌನ್ಸೆಲ್ಲಿಂಗ್, ಚಿಕಿತ್ಸೆ ಇತ್ಯಾದಿ ಮಾಡುತ್ತೇನೆ. ವಾರದ ಬೇರೆ ದಿನಗಳಲ್ಲಿ ಬರುವ ಕನ್ಸಲ್ಟೇಷನ್ ಚಾರ್ಜ್ ನನ್ನ ಜೀವನಕ್ಕೆ ಬೇಕಾದಷ್ಟು ಆಗುತ್ತಿದೆ. ಹಾಗೆಯೇ ಅಪ್ಪ ಮಾಡಿಟ್ಟ ಅಲ್ಪ-ಸ್ವಲ್ಪ ಆಸ್ತಿ, ಜಮೀನು, ಮನೆಯೂ ಇದೆ. ಇದಕ್ಕಿಂತ ಹೆಚ್ಚಿನದಕ್ಕೆ ನಾನು ಆಸೆ ಪಡುವುದಿಲ್ಲ”.
“ನೀನು ನಿಧಾನಕ್ಕೆ ನಿನ್ನ ನಿರ್ಧಾರ ತಿಳಿಸು; ಒತ್ತಾಯವಿಲ್ಲ. ಹಾಗೆಯೇ ನಾನು ನಾಳೆ ಮಧ್ಯಾಹ್ನ ೨.೩೦ಕ್ಕೆ ಹೊರಡಬೇಕೆಂದು ಇದ್ದೇನೆ. ನೀನು ರಾತ್ರಿಯ ಬಸ್ ಬುಕ್ ಮಾಡಿದ್ದೀಯಾ ಎಂದು ಗೊತ್ತು. ನಿನಗೆ ಇಷ್ಟವಿದ್ದಲ್ಲಿ ನನ್ನ ಜೊತೆ ಬರಬಹುದು. ಒಟ್ಟಿಗೆ ಅದೂ-ಇದೂ ಮಾತನಾಡುತ್ತಾ ದಾರಿ ಸವೆಸಬಹುದು. ಹಾಗೆಯೇ ಮುಂದೆ ಬಾಳದಾರಿಯಲ್ಲಿ ಒಂದಾಗಬಹುದು. ಇದಕ್ಕೆ ನಿನ್ನ ಒಪ್ಪಿಗೆ ಇದ್ದಲ್ಲಿ ೨:೩೦ಕ್ಕೆ ಸರಿಯಾಗಿ ಪಾರ್ಕಿಂಗ್ ಬಳಿ ಬಂದು ಬಿಡು. ನನ್ನ ಕಾರ್ ನಿನಗೆ ಗೊತ್ತೇ ಇದೆ”, ಎಂದು ತನ್ನ ರೂಮಿನತ್ತ ಹೊರಟ.
ಏನು ಹೇಳಬೇಕೆಂದು ತೋಚದೇ ಸಾಕ್ಷಿ ಅವನು ಹೋದ ಕಡೆಗೇ ನೊಡುತ್ತಾ ನಿಂತಳು.
——————————————————————————————————————–
ಭಾಗ – ೭
ಮಾರನೇ ದಿನ ಮಧ್ಯಾಹ್ನ ಏನೋ ತಳಮಳದೊಂದಿಗೆ ನಿಮಿಷಕ್ಕೊಂದು ಬಾರಿ ವಾಚಿನತ್ತ ದೃಷ್ಟಿ ಹರಿಸುತ್ತಾ ೨:೧೫ರಿಂದಲೇ ಚಡಪಡಿಸುತ್ತಾ ಪಾರ್ಕಿಂಗಿನಲ್ಲಿ ಕಾಯುತ್ತಿದ್ದ ಸೂರ್ಯನನ್ನು ದೂರದಿಂದಲೇ ನೋಡಿ ಪುಳಕಗೊಂಡಳು ಸಾಕ್ಷಿ. ಮೊದಲಿಂದಲೂ ಪಟಪಟನೆ ಮಾತಾಡುತ್ತಾ, ಎಲ್ಲರೊಂದಿಗೂ ಬೆರೆಯುತ್ತಿದ್ದ ಸೂರ್ಯನನ್ನು ಕಂಡರೆ ಏನೋ ಒಂಥರಾ ಆಕರ್ಷಣೆ ಅವಳಿಗೆ. ಬಿ.ಎಸ್ಸಿ.ಗೆ ಸೇರಿದ ನಂತರ ಅದೇ ಆಕರ್ಷಣೆ ನಿಧಾನಕ್ಕೆ ಮಧುರವಾದ ಪ್ರೀತಿಯ ಭಾವನೆಗೆ ಬದಲಾಗಿತ್ತು. ಆದರೂ ಅವನ ಮನಸ್ಸಿನಲ್ಲೇನಿದೆಯೋ ಎಂದು ಸುಮ್ಮನಾಗಿದ್ದಳು. ಆದರೆ ೬-೭ ತಿಂಗಳುಗಳ ಹಿಂದೆ ಅತ್ತೆ ಹೇಳಿದ ಮಾತು ಕೇಳಿಸಿಕೊಂಡು, ತನ್ನ ಮನಸ್ಸು ಗಟ್ಟಿಮಾಡಿಕೊಂಡು ಅವನಿಂದ ದೂರವಾಗತೊಡಗಿದ್ದಳು. ಹಿಂದಿನ ರಾತ್ರಿ ಸೂರ್ಯನೊಂದಿಗೆ ಮಾತನಾಡಿದ ಮೇಲೆ ಅವಳ ಮನಸ್ಸು ನಿರಾಳವಾಗಿತ್ತು.
ಹಾಗೇ ತನ್ನ ಯೋಚನಾಲಹರಿಯೊಂದಿಗೆ ಸೂರ್ಯನ ಕಾರ್ ಸಮೀಪಿಸಿದಳು ಸಾಕ್ಷಿ. ಗಂಟೆ ೨:೩೦ಆದರೂ ಸಾಕ್ಷಿಯನ್ನು ಕಾಣದೆ, ಅವಳು ಬರುವುದಿಲ್ಲವೇನೋ ಎಂದುಕೊಂಡು ಸೂರ್ಯ ಇನ್ನೇನು ಕಾರ್ ಸ್ಟಾರ್ಟ್ ಮಾಡುವುದರಲ್ಲಿದ್ದ. ಸಾಕ್ಷಿಯನ್ನು ನೋಡಿದ ತಕ್ಷಣ ಸಂತೋಷ ತಡೆಯಲಾಗಲಿಲ್ಲ. ಓಡಿ ಬಂದು ಅವಳ ಲಗ್ಗೇಜ್ ಗಾಡಿಯಲ್ಲಿರಿಸಿ ಅವಳಿಗಾಗಿ ಬಾಗಿಲು ತೆರೆದನು.
ಮುಂದೆ ಸಾಗುತ್ತಾ ಸೂರ್ಯ, “ಅಂತೂ ನಿನಗೂ ನನ್ನ ಮೇಲೆ ಪ್ರೀತಿ ಇದೆಯೆಂದು ಒಪ್ಪಿಕೊಂಡೆಯಲ್ಲ? ನಾನೆಲ್ಲೋ ನನ್ನ ಮಾತುಗಳಿಂದ ಸಿಟ್ಟು ನೆತ್ತಿಗೇರಿ ಮತ್ತೆ ನಿನ್ನ ಹಠವನ್ನೇ ಸಾಧಿಸುತ್ತೀಯೇನೋ ಎಂದುಕೊಂಡಿದ್ದೆ. ಜೊತೆಯಾಗಿದ್ದು ಖುಷಿಯಾಯ್ತು”, ಎಂದನು.
“ಹೌದು ಡಾಕ್ಟರೇ. ಆ ಕ್ಷಣಕ್ಕೆ ಸಿಟ್ಟು ನೆತ್ತಿಗೇರಿದರೂ ರಾತ್ರಿಯಿಡೀ ಮುಕ್ತ ಮನಸ್ಸಿಂದ ನೀನು ಹೇಳಿದ ಮಾತುಗಳ ಬಗ್ಗೆ ವಿಚಾರ ಮಾಡಿ ನೋಡಿದೆ. ನೀನು ಹೇಳಿದ್ದರಲ್ಲೂ ಅರ್ಥವಿದೆಯೆನಿಸಿತ್ತು. ಹಾಗೆಯೇ, ಯಾವಾಗಲೂ ಯಾರೂ ನನ್ನ ಜಾಗದಲ್ಲಿ ನಿಂತು ನೋಡುತ್ತಿಲ್ಲ ಎಂದು ಕೊರಗುವ ಬದಲು, ನಾನೂ ಒಂದು ಬಾರಿ ಬೇರೆಯವರ ಜಾಗದಲ್ಲಿ ನಿಂತು ಯಾಕೆ ನೋಡಬಾರದೆನಿಸಿತ್ತು. ಆಮೇಲೆ ಸಮಾಧಾನ ಮಾಡಿಕೊಂಡೆ. ಚೇತನಾಳ ಬಗ್ಗೆ, ನಿನ್ನ ಪ್ರೀತಿ ನಿವೇದನೆ ಎಲ್ಲ ಕೇಳಿದ ಮೇಲೆ; ನನ್ನ ಮನಸ್ಸಾಕ್ಷಿಯನ್ನೊಮ್ಮೆ ಕೇಳಿ ನೋಡಿದೆ. ನಿನ್ನ ನಿಷ್ಕಲ್ಮಶ ಪ್ರೀತಿಯನ್ನು ನಿರಾಕರಿಸುವುದು ಮೂರ್ಖತನವೆನಿಸಿತು” ಎಂದಳು ಸಾಕ್ಷಿ.
“ಹೌದು, ಅದೆಲ್ಲಾ ಇರಲಿ. ಆ ಜಾತಕ ಫೊಟೋ ಹೊತ್ತುಕೊಂಡು ಯಾಕೆ ತಿರುಗಾಡುತ್ತಿದ್ದೀಯಾ? ಯಾರನ್ನಾದರೂ ಪಟಾಯಿಸೋ ಯೋಚನೆ ಏನಾದರೂ ಮಾಡಿದ್ದೆಯಾ ಹೇಗೆ?”, ಕೇಳಿದನು ಸೂರ್ಯ.
“ಅಯ್ಯೋ ಇಲ್ಲಪ್ಪ!. ಬೆಂಗಳೂರಿಗೆ ಹೊರಡ್ತಾ ಹೊರಬಂದಾಗ ಅಮ್ಮ ಅದನ್ನು ಊಟದ ಮೇಜಿನ ಮೇಲಿರಿಸಿದ್ದರು. ಏನೋ ಲೆಕ್ಕಾಚಾರ ಹಾಕುತ್ತಿದ್ದಾರೆಂದು ಅನಿಸಿ, ಚರ್ಚಿಸಲು ಸಮಯವಿಲ್ಲ, ಪರಿಸ್ಥಿತಿ ಕೈ ಮೀರೋದು ಬೇಡ ಅಂತ ಸೀದಾ ಅದನ್ನು ಅಮ್ಮಂಗೆ ಗೊತ್ತಾಗದಂತೆ ಎತ್ತಿಕೊಂಡು ಬಂದೆ. ಈಗ ಮನೆಯೆಲ್ಲಾ ಹುಡುಕಿ ಹೊಸ ಜಾತಕ ಮಾಡಿಸಲೂ ಕೊಟ್ಟಾಗಿರುತ್ತದೆ ನೋಡು. ಅವರ ಬೈಗುಳಕ್ಕೂ ರೆಡಿಯಾಗಿರಬೇಕೀಗ ನಾನು ಹೋಗುತ್ತಾ”, ಎಂದಳು ನಗುತ್ತಾ ಸಾಕ್ಷಿ.
ಆ ದಿನ ಗೌರಿ ಹಬ್ಬ. ಮಾರನೇ ದಿನ ಗಣೇಶ ಹಬ್ಬ. ಸಾಲಾಗಿ ಬಂದ ಲಾಂಗ್ ವೀಕೆಂಡಿನ ಟ್ರಾಫಿಕಿನ ಮಧ್ಯೆ ಅದೂ-ಇದೂ ಮಾತಾಡುತ್ತಾ, ’ರತ್ನಗಿರಿ’ ತಲುಪುವಷ್ಟರಲ್ಲಿ ಇಬ್ಬರಿಗೂ ಸುಸ್ತಾಗಿತ್ತು. ಸಾಕ್ಷಿ ಮನೆ ಮುಂದೆ ಕಾರ್ ನಿಲ್ಲಿಸಿದ ಸೂರ್ಯ, ಅವಳಿಗೆ ಲಗ್ಗೇಜ್ ತೆಗೆಯಲು ನೆರವಾದನು.
ಸಾಕ್ಷಿ ತೂಕಡಿಸುತ್ತಾ, “ಮನೆಗೆ ಬರುವುದಿಲ್ಲವೇ? ಇಲ್ಲಾ ಇಲ್ಲೇ ಮಲ್ಕೋಬಹುದಲ್ಲವೇ? ನಾಳೆ ಹೋದರಾಯ್ತು” ಎಂದಳು.
ಸೂರ್ಯ ಅವಳ ಕೆನ್ನೆ ತಟ್ಟಿ, “ಅಯ್ಯೋ ಮಹರಾಯ್ತಿ, ಏನೂ ಬೇಡ. ಗಂಟೆ ೧೧ ಆಯ್ತು. ಅತ್ತೆ ಮಲಗಿಬಿಟ್ಟಿರುತ್ತಾರೆ. ನೀನು ಬೇರೆ ಪ್ಲಾನ್ ಬದಲಿಸಿ, ಮಧ್ಯಾಹ್ನದ ಬಸ್ಸಿನಲ್ಲಿ ಬರುತ್ತೇನೆ, ತಲುಪುವಾಗ ೧೨ ಗಂಟೆ ಎಲ್ಲಾ ಆಗಬಹುದು. ಇನ್ನೊಂದು ಮನೆ ಕೀ ಇದೆ, ಬಾಗಿಲು ಹಾಕ್ಕೊಂಡು ಮಲ್ಕೊಳ್ಳಿ ಅಂದಿದ್ದೀಯ ಅವರಿಗೆ. ಅದೂ ಅಲ್ಲದೆ ನಾನೂ ಅಪ್ಪ-ಅಮ್ಮನಿಗೆ ನಿನ್ನ ನೋಡುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರ ಬಗ್ಗೆ ಹೇಳೇ ಇಲ್ಲ. ಏನೋ ಕೆಲಸ ಇದೆ ಎಂದು ಸಬೂಬು ಹೇಳಿ ಹೊರಟಿದ್ದೆ. ಇಲ್ಲಾಂದ್ರೆ ಅಮ್ಮನ ರಾಮಾಯಣ ಗೊತ್ತಲ್ಲ?”, ಎಂದನು.
“ಪರವಾಗಿಲ್ಲ, ಆಮೇಲೆ ನಿಜ ಹೇಳಿದರಾಯ್ತು. ಹೌದು, ನನ್ನನ್ನು ಇಲ್ಲೇ ಮಾತನಾಡಿಸಬಹುದಿತ್ತಲ್ಲ? ಅದಕ್ಕೆಂದು ಅಷ್ಟು ದೂರ ಬರುವ ಅವಶ್ಯಕತೆಯೇನಿತ್ತು?”.
“ನಾನು ಕರೆದರೆ ನೀನು ಬರುತ್ತಿದ್ದೆಯಾ? ನಿನ್ನೆ ನನ್ನನ್ನು ನೋಡಿದ ತಕ್ಷಣ ಬಾಗಿಲು ಹಾಕಿಕೊಳ್ಳುವುದರಲ್ಲಿದ್ದೆ. ಇದೇ ಸರಿಯಾಗಿತ್ತು. ಬೆಂಗಳೂರಲ್ಲಿ ಆರಾಮವಾಗಿ, ಮುಕ್ತವಾಗಿ ಮಾತನಾಡಲು ಅವಕಾಶವಿತ್ತು. ಇಲ್ಲೋ, ಯಾರೋ ನೆಂಟರು, ಇಲ್ಲ ಇನ್ಯಾರೋ ನಮ್ಮನ್ನು ಜೊತೆಯಲ್ಲಿ ನೋಡೋದು, ನಮ್ಮ ಮನೆಗಳ ಸಂಬಂಧ ಅಷ್ಟೇನು ಚೆನ್ನಾಗಿಲ್ಲವೆಂದು ಖುಷಿಯಾದವರೆಲ್ಲಾ ಮತ್ತೆ ರೆಕ್ಕೆ-ಪುಕ್ಕ ಕಟ್ಟಿ ಇಲ್ಲ-ಸಲ್ಲದ ಕಥೆ ಹೇಳೋದು, ನೀನು ಮತ್ತೆ ನನ್ನನ್ನು ನೇರವಾಗಿ ಕೇಳೋ ಬದಲು ಅವರ ಮಾತನ್ನೇ ನಂಬುವುದು ಇತ್ಯಾದಿ, ಇತ್ಯಾದಿ… ಬೇಕಾ ಇವೆಲ್ಲಾ? ನನ್ನ ಬೆಂಗಳೂರು ಪ್ರಯಾಣದ ಪ್ರತಿಫಲ ತುಂಬಾ ಅಮೂಲ್ಯವಾದ ಯಶಸ್ಸು – ಬಯಸದೇ ಬಂದ ಭಾಗ್ಯ. ಮತ್ತೆ ಲಾಂಗ್ ಡ್ರೈವ್ ಹೋಗೋಣವೇ?” ಎಂದು ಕಣ್ಣು ಮಿಟುಕಿಸಿದನು ಸೂರ್ಯ.
ಸಾಕ್ಷಿ ತಕ್ಷಣ ನಗುತ್ತಾ, “ಏನೂ ಬೇಡ, ಗುಡ್ ನೈಟ್”, ಎಂದು ಒಳಗಡಿಯಿಟ್ಟಳು.
“ಗುಡ್ ನೈಟ್, ನಾಳೆ ಸಿಗ್ತೀನಿ”, ಎಂದು ತನ್ನ ಮನೆಯತ್ತ ಹೊರಟನು ಸೂರ್ಯ.
*****************
ಮಾರನೇ ದಿನ ಬೆಳಗ್ಗೆ ಸುನಂದಾ ಸ್ನಾನ ಮಾಡಿ ಬಂದು ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಚಡಪಡಿಸುತ್ತಿದ್ದರು.
ಹಾಲಲ್ಲಿ ಕುಳಿತಿದ್ದ ಶಿವರಾಮ ನೋಡಿ, “ಅದೇನೇ? ಹಬ್ಬಕ್ಕೆ ತಿಂಡಿ ಏನು ಮಾಡೋದಂತ ರೆಸಿಪಿ ನೋಡ್ತಿದೀಯಾ ಆಗಾಗ ಮೊಬೈಲಿನಲ್ಲಿ?”.
ಸುನಂದಾ, “ನಂಗೆ ನಂದೇ ಚಿಂತೆ. ನಿಮಗೆ ಎಲ್ಲಾದರಲ್ಲೂ ತಮಾಷೆ” ಎಂದರು.
“ಏನಾಯ್ತು ಈಗ?”.
“ಚೇತನಾ ಮತ್ತು ಸೂರ್ಯರ ಜೋಡಿ ಚೆನ್ನಾಗಿರುತ್ತದೆ ಅಂತ ಕನಸು ಕಾಣುತ್ತಾ ಇದ್ದೆ. ಹಾಗೇ ಈ ಸರ್ತಿ ಅವರು ಇಂಡಿಯಾಗೆ ಬಂದಾಗ ಹೆಣ್ಣು ಕೇಳೋ ಶಾಸ್ತ್ರಾನೂ ಮುಗಿಸಿಬಿಡೋಣವೆಂದೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದಂತೆಯೇ ಹೀಗಾಗಿ ಬಿಡ್ತು ನೋಡಿ?”.
“ಸ್ವಲ್ಪ ಬಿಡಿಸಿ, ಅರ್ಥ ಆಗೋ ಹಾಗೆ ಏನಾಯ್ತು ಅಂತ ಹೇಳು”.
“ನಮ್ಮ ಚೇತನಾ ಅದ್ಯಾರೋ ಫ಼ಾರಿನ್ ಹುಡುಗನನ್ನು ಇಷ್ಟಪಟ್ಟಿದ್ದಾಳಂತೆ. ಅವನನ್ನೇ ಮದುವೆಯಾಗಬೇಕೆಂದು ಹಠ ಹಿಡಿದು ಕುಳಿತಿದ್ದಾಳಂತೆ. ನಮ್ಮಣ್ಣನೂ ಬೈದು ಬುದ್ಧಿ ಹೇಳೋದು ಬಿಟ್ಟು; ಅವಳ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದಾನಂತೆ. ಈ ಫಾರಿನ್ ಮದ್ವೆ ಎಲ್ಲಾ ಎಷ್ಟು ದಿನಾಂತ ಉಳಿಯುತ್ತದೆ ಹೇಳಿ?” ಎಂದು ಅಳು ಮುಖ ಮಾಡಿದರು ಸುನಂದಾ.
ಅಲ್ಲೇ ದಿನಪತ್ರಿಕೆ ಓದುತ್ತಿದ್ದ ಸೂರ್ಯ ಅವರತ್ತ ತಿರುಗಿ, “ಅಮ್ಮಾ, ರಾಬರ್ಟ್ ತುಂಬಾ ಒಳ್ಳೆ ಹುಡುಗ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದಾರೆ. ಅವರನ್ನು ಅವರ ಪಾಡಿಗೆ ಬಿಟ್ಟು ಬಿಡು. ನಾನು ನನ್ನ ಕೆಲವು ಸ್ನೇಹಿತರ ಮೂಲಕ ಸಾಕಷ್ಟು ವಿಚಾರಿಸಿಯೇ ಈ ಮಾತನ್ನು ಹೇಳುತ್ತಿರುವುದು. ಡೋಂಟ್ ವರಿ”, ಎಂದನು.
“ಓಹೋ! ನೀನೂ ಕೂಡಾ ಅವಳ ಪರ ವಹಿಸಿದೆಯಾ?. ನೋಡ್ರೀ, ಕೇಳಿ ನಿಮ್ಮ ಮಗನನ್ನು. ಇವನೂ ಇನ್ಯಾವ ವಿದೇಶಿ ಹುಡುಗಿಯನ್ನು ನಮ್ಮ ಮನೆಗೆ ತರಬೇಕೆಂದಿದ್ದಾನೋ, ದೇವರೇ ಕಾಪಾಡಪ್ಪಾ”, ಎನ್ನುತ್ತಾ ಕುಸಿದು ಕುಳಿತರು ಸುನಂದಾ.
ಸೂರ್ಯ ಎದ್ದು ನಿಂತು, “ಹಾಗೆಲ್ಲ ಏನೂ ಆಗಲ್ಲ. ಇಬ್ಬರೂ ಬೇಗನೆ ರೆಡಿಯಾಗಿ. ಹೆಣ್ಣು ಕೇಳುವ ಶಾಸ್ತ್ರ ನಿನ್ನಾಸೆಯಂತೆ ಇವತ್ತೇ ಮುಗಿಸಿಬಿಡೋಣ. ಆದರೆ ಫ಼ಾರಿನ್ ಹುಡುಗಿಯಲ್ಲ, ರತ್ನತ್ತೆ ಮಗಳನ್ನು”, ಎಂದು ನಗುತ್ತಾ ಸ್ನಾನಕ್ಕೆ ನಡೆದನು.
ಸುನಂದಾ ಕುರ್ಚಿಗೊರಗುತ್ತಾ, “ಏನ್ರೀ ಆಗಿದೆ ಇವನಿಗೆ? ಆ ಅಹಂಕಾರದ ಹುಡುಗಿ ನಮ್ಮ ಮನೆ ಸೊಸೆಯಾಗೋದಾ? ಸಾಧ್ಯಾನೆ ಇಲ್ಲ. ನೀವೆ ನಿಮ್ಮ ಮುದ್ದಿನ ಮಗನಿಗೆ ಸ್ವಲ್ಪ ಬುದ್ಧಿ ಹೇಳಿ”, ಎಂದರು.
——————————————————————————————————————–
ಮುಂದುವರೆಯುವುದು…
Read the Next Final Episode Here