ನಿಧಾನಕ್ಕೆ ಕಣ್ಣು ತೆರೆದು ನೋಡುವಾಗ ಆಸ್ಪತ್ರೆಯಲ್ಲಿ ಮಲಗಿದ್ದನು ರಜತ್! ಏನಾಯ್ತೆಂದು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದನು. ಅಸ್ಪಷ್ಟವಾದ ಚಿತ್ರಣವೊಂದು ಕಣ್ಣ ಮುಂದೆ ಬಂತು. ವೇಗವಾಗಿ ಬಂದ ಲಾರಿ ತಾನು ಬ್ರೇಕ್ ಹಾಕಬೇಕಾದರೆ ಮೊದಲೇ ಬಂದು ತನ್ನ ಗಾಡಿಗೆ ಎದುರಿಂದ ಬಡಿದಿತ್ತು. ಗಾಬರಿಯಲ್ಲಿ ಲೆಕ್ಕಕ್ಕಿಂತ ಹೆಚ್ಚಾಗಿ ಒತ್ತಿದ ಬ್ರೇಕಿನಿಂದಾಗಿ ಗಾಡಿಯೇನೋ ನಿತ್ತಿತ್ತು. ಆದರೆ ಅವನ ಕೈ-ಕಾಲಿಗೆಲ್ಲ ಗಾಯವಾಗಿ, ಶಾಕಿನಿಂದ ಪ್ರಜ್ಞೆ ತಪ್ಪಿ ಸ್ಟಿಯರಿಂಗ್ ವೀಲ್ ಮೇಲೆ ಮಲಗಿದ್ದನು!
ಅವನಿಗೆ ಎಚ್ಚರವಾಗಿದ್ದನ್ನು ಕಂಡು ರಂಜನ್ ಅಲ್ಲೇ ಕಾಯುತ್ತಿದ್ದವನು ತಮ್ಮನ ಹತ್ತಿರಕ್ಕೆ ಬಂದನು. “ಈಗ ಹೇಗನಿಸುತ್ತಿದೆ? ನೋವಿದೆಯಾ ತುಂಬಾ?”, ಮಮತೆಯಿಂದ ಕೇಳಿದನು. “ಏನೂ ಗೊತ್ತಾಗುತ್ತಿಲ್ಲ”, ಎಂದನು ರಜತ್ ನಿಧಾನವಾಗಿ, ವಾಸ್ತವವವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತ.
“ಆ ಲಾರಿ ಡ್ರೈವರ್ ತಪ್ಪಿಸಿಕೊಂಡನು. ತರಚು ಗಾಯ ಆಗಿರಬಹುದು ಅವನಿಗೂ. ಪೊಲೀಸರು ನೋಡಿಕೊಳ್ಳುತ್ತಾರೆ ಅದನ್ನೆಲ್ಲ. ನೀನು ಮೊದಲು ಹುಷಾರಾಗು. ಇನ್ನು ಸಿಟ್ಟಿನಿಂದ ಗಾಡಿ ಓಡಿಸಬೇಡ. ಸ್ವಲ್ಪ ಮುಂಗೋಪವನ್ನು ಕಮ್ಮಿ ಮಾಡಿಕೋ. ಅದು ಒಳ್ಳೆಯದಲ್ಲ. ನಿನ್ನ ಆರೋಗ್ಯ ತುಂಬಾ ಮುಖ್ಯ. ಜಾಗ್ರತೆವಹಿಸು. ಅಮ್ಮ ಬೇಜಾರು ಮಾಡಿಕೊಂಡಿದ್ದಾರೆ. ಅವರ ಸಮಾಧಾನಕ್ಕಾದರೂ ಆದಷ್ಟು ಬೇಗ ಮದುವೆ ಮಾಡಿಕೋ. ನನಗೆ ಕೂಡ ಅದೇ ಸರಿಯೆನಿಸುತ್ತಿದೆ. ನಿನ್ನ ಬದುಕಿಗೆ ಸರಿಯಾದ ದಿಕ್ಕು ಬರಬೇಕಾದರೆ ಒಬ್ಬ ಸಂಗಾತಿಯ ಅಗತ್ಯವಿದೆ. ನೀನು ನೋಡಿದರೆ ಯಾವಾಗ್ಲೂ ಎಲ್ಲರೊಂದಿಗೂ ಸಿಡುಕುತ್ತಲೇ ಇರುತ್ತೀಯ”.
“ಏ.. ನೀನು ಏನೇನೋ ಹೇಳಬೇಡ. ನಾನು ಸುಧಾರಿಸ್ಕೊಂಡು ಮೊದಲಿನಂತೆ ಎದ್ದು ಓಡಾಡಲು ಏನೂ ತೊಂದರೆಯಿಲ್ಲ ತಾನೇ? ಯಾವಾಗ ಡಿಸ್ಚಾರ್ಜ್ ಮಾಡಬಹುದು? ಸುಮಾರಷ್ಟು ಕೆಲಸಗಳಿವೆ. ಆದಷ್ಟು ಬೇಗ ಮುಗಿಸಬೇಕಾಗಿತ್ತು”.
“ನಾನು ಡಾಕ್ಟರ್ ಆಗಿ ಮಾತಾಡಿದ್ದಲ್ಲ. ನಿನ್ನ ಅಣ್ಣನೆಂದು ಇಷ್ಟು ಹೊತ್ತು ಸಮಾಧಾನದಲ್ಲಿ ಹೇಳಿದೆ. ಈಗ ಹೇಳುತ್ತೇನೆ ಕೇಳು. ನಿನ್ನ ಕಾಲಿನ ಮೂಳೆಯೊಂದು ಮುರಿದಿದೆ. ಅದು ಸರಿ ಆಗಲು ಪ್ಲಾಸ್ಟರ್ ಹಾಕಿದ್ದೇವೆ. ರೆಸ್ಟ್ ತುಂಬಾ ಮುಖ್ಯ. ಇನ್ನೂ ಸುಧಾರಿಸ್ಕೊಳ್ಳುತ್ತಿದ್ದೀಯಷ್ಟೆ. ನಾಳೆ ಮತ್ತೆ ಕೆಲವೊಂದು ಟೆಸ್ಟ್ ಮಾಡಿ, ರಿಪೋರ್ಟ್ ನೋಡಿ ಮುಂದಿನದನ್ನು ಹೇಳಬೇಕು. ಎಕ್ಸ್ ರೇಯಲ್ಲಿ ಬೇರೇನೂ ತೊಂದರೆ ಕಾಣಿಸಿಲ್ಲ. ನೋಡೋಣ. ಅನಗತ್ಯ ಸ್ಕ್ಯಾನಿಂಗ್ ಮಾಡಿಸುವುದು ಬೇಡವೆಂದು ಬೇರೇನೂ ಮಾಡಿಲ್ಲ. ಕೈಗಾದ ತರಚು ಗಾಯಗಳು ಗುಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನಾಳೆ ಅಥವಾ ನಾಡಿದ್ದು ಡಿಸ್ಚಾರ್ಜ್ ಮಾಡಬಹುದು. ಆದರೆ ರೆಸ್ಟ್ ತುಂಬಾ ಮುಖ್ಯ. ೧೫-೨೦ ದಿನ ಮನೆಯಲ್ಲೇ ಇರು. ಎಲ್ಲೂ ಹೋಗುವಂತಿಲ್ಲ”.
“ಅದೆಂತ ಎಲ್ಲೂ ಹೋಗುವಂತಿಲ್ಲ? ಏನಾಗುವುದಿಲ್ಲ. ನನಗೆ ಆಫೀಸಿನಲ್ಲಿ ಸುಮಾರು ಕೆಲಸಗಳಿವೆ. ಹೋಗದಿದ್ದರೆ ಹೇಗೆ?”, ಇನ್ನೂ ಏನೇನೋ ಹೇಳುತ್ತಲೇ ಇದ್ದನು ರಜತ್. ಅಮ್ಮನನ್ನು ಒಳಕಳುಹಿಸುತ್ತೇನೆಂದು ಹೇಳಿ ತಾನು ಹೊರನಡೆದನು ರಂಜನ್.
*****
ಭಾನುವಾರ ಬೆಳಗ್ಗೆ ಎದ್ದು ಸಾರಿಕಾ ತನ್ನ ಪಾಡಿಗೆ ತಾನು ಎದ್ದು, ತಿಂಡಿ-ಸ್ನಾನ ಮುಗಿಸಿ, ಗೆಳತಿಯ ಮನೆಗೆ ಹೋಗಿಬರುತ್ತೇನೆಂದು ಹೋಗಿದ್ದಳು. ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಅವಳಿಗೆ ಎದುರಾಗಿ ಸಣ್ಣ ಗುಂಪೊಂದು ಸೇರಿಕೊಂಡು ಏನೋ ಗಿಡ ನೆಡುವುದು, ಗೊಬ್ಬರ ಹಾಕುವುದು ಮಾಡುತ್ತಿರುವುದು ಕಂಡಿತು. ಕುತೂಹಲದಿಂದ ಹತ್ತಿರ ಹೋಗಿ ನೋಡಿದಳು. ಸಾವಯವ ಗೊಬ್ಬರದ ಪ್ರಾತ್ಯಕ್ಷಿಕೆಯೆಂದು ತಿಳಿದು ಹೊರಡಲನುವಾದಳು.
ಆಗ ಕರೆಯೊಂದು ಕೇಳಿ ಬಂತು, “ಹಲೋ ಮಿಸ್, ಎಲ್ಲಿಗೆ ಹಾಗೇ ಹೋಗುತ್ತಿದ್ದೀರಿ? ಬನ್ನಿ, ಸ್ವಲ್ಪ ವಿಚಾರ – ವಿಮರ್ಶೆ ಮಾಡಿ, ಮಾಹಿತಿ ತಿಳಿದುಕೊಂಡು ಹೋಗಿ. ನಮ್ಮ ಕಾರ್ಯಕ್ರಮದಲ್ಲಿ ಏನಾದರೂ ತೊಂದರೆಯಿದ್ದರೆ ಅದನ್ನು ಕೇಳಿ ಸರಿಪಡಿಸಿಕೊಳ್ಳಲೂ ತಯಾರಿದ್ದೇವೆ ನಾವು. ಬನ್ನಿ!”.
ಯಾಕಾದರೂ ಬೆಳಗ್ಗೆ- ಬೆಳಗ್ಗೆ ಈ ದಾರಿಯಾಗಿ ಬಂದೆನೋ ಎನಿಸಿತು ಸಾರಿಕಾಳಿಗೆ. ತನ್ನ ಗೆಳತಿ ಗೀತಾಳ ಮನೆಗೆ ಹೋಗಿ ಬರುವ ದಾರಿಯಲ್ಲೇ ಪಕ್ಕದಲ್ಲಿ ಒಂದು ಸಣ್ಣ ಪಬ್ಲಿಕ್ ಪಾರ್ಕ್ ಇತ್ತು. ಅದನ್ನು ದಾಟಿಹೋಗುವಾಗ ಯಾಕೆ ಅಷ್ಟೊಂದು ಜನ ಸೇರಿದ್ದರೆಂದು ನೋಡುವ ಸಹಜ ಕುತೂಹಲದಿಂದ ಇಣುಕಿ ನೋಡಿ, ಹೊರಡಬೇಕೆನ್ನುವಷ್ಟರಲ್ಲಿ ಈ ಕರೆ ಅವಳನ್ನು ತಡೆದು ನಿಲ್ಲಿಸಿತ್ತು.
ದನಿ ಬಂದ ಕಡೆ ತಿರುಗಿ ನೋಡಿದಳು. ಗುಂಗುರು ಕೂದಲಿನ, ಜೀನ್ಸ್ ಪ್ಯಾಂಟ್ ತೊಟ್ಟು, ಮೊಡೆರ್ನ್ ಆಗಿ ಕಾಣಿಸುತ್ತಿದ್ದ ಹುಡುಗಿಯೊಬ್ಬಳು ಮೈಕ್ ಹಿಡಿದು ಕರೆದಿದ್ದಳು. ಬೇರೆ ದಾರಿಯಿಲ್ಲದೆ ಅವಳತ್ತ ಹೆಜ್ಜೆ ಹಾಕಿದಳು.
“ನನಗೆ ಈ ಕೃಷಿ, ಗೊಬ್ಬರ ಇತ್ಯಾದಿ ವಿಚಾರಗಳಲ್ಲಿ ಅಷ್ಟೊಂದು ತಿಳುವಳಿಕೆ ಇಲ್ಲ. ಹಾಗೆಯೇ ಆಸಕ್ತಿಯೂ ಇಲ್ಲ. ಕ್ಷಮಿಸಿ. ಏನು ನಡೆಯುತ್ತಿದೆ ಎಂದು ನೋಡಿ ಮುಂದಡಿಯಿಟ್ಟು ಹೋಗುವವಳಿದ್ದೆ ನಾನು. ನನಗೆ ನನ್ನದೇ ಆದ ಕೆಲಸಗಳಿವೆ. ದಯವಿಟ್ಟು ಈ ವಿಚಾರದಲ್ಲಿ ನನ್ನನ್ನು ಒತ್ತಾಯ ಮಾಡಬೇಡಿ. ಅಡಚಣೆಗಾಗಿ ಕ್ಷಮಿಸಿ. ನಾನಿನ್ನು ಬರುತ್ತೇನೆ”, ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಹೇಳಿ ಹೊರಡಲನುವಾದವಳನ್ನು ಕೈ ಹಿಡಿದು ನಿಲ್ಲಿಸಿದಳು ಆ ಹುಡುಗಿ.
ಮೈಕ್ ಬೇರೆಯವರ ಕೈಗೆ ಕೊಟ್ಟು, ಸಾರಿಕಾಳನ್ನು ತನ್ನತ್ತ ಎಳೆದುಕೊಂಡು, ಗುಟ್ಟಾಗಿ ಕಿವಿಯಲ್ಲಿ ಮೆತ್ತಗೆ ಹೇಳಿದಳು, “ಸಾರಿ, ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು ಇಂದು. ಆದರೆ ನಂಗೆ ನಿಮ್ಮಿಂದ ತುಂಬಾ ದೊಡ್ಡದೊಂದು ಉಪಕರವಾಗಬೇಕಿದೆ. ನಿಮ್ಮ ನೇರವಾದ ದಿಟ್ಟ ಮಾತನ್ನು ಕೇಳಿ, ನೀವೇ ಅದಕ್ಕೆ ಸರಿಯಾದ ಆಯ್ಕೆ ಎನಿಸಿತು. ಜಸ್ಟ್ ಫೈವ್ ಮಿನಿಟ್ಸ್ ಪ್ಲೀಸ್. ವೇಟ್ ಮಾಡಿ. ಈಗ ಬಂದೆ. ದಯವಿಟ್ಟು ಎಲ್ಲೂ ಹೋಗಬೇಡಿ”.
೫-೭ ನಿಮಿಷಗಳಲ್ಲಿ ಅಲ್ಲಿದ್ದ ಗುಂಪಿನ ೩-೪ ಮುಂದಾಳು ನಾಯಕರಂತಿದ್ದವರಿಗೆ ಏನೋ ಸೂಚನೆಗಳನ್ನು ಕೊಟ್ಟು, ಮತ್ತೆ ವಾಪಾಸ್ ಬಂದು, ಸಾರಿಕಾಳನ್ನು ಎಳೆದುಕೊಂಡು ತನ್ನ ಗಾಡಿಯಲ್ಲಿ ಕೂರಿಸಿ ನೇರವಾಗಿ ಮಂಗಳೂರಿನತ್ತ ತಿರುಗಿದಳು ಆ ಹುಡುಗಿ!
ಸಾರಿಕಾ ಏನು ನಡೆಯುತ್ತಿದೆಯೆಂದು ತಿಳಿದುಕೊಳ್ಳುವ ಮೊದಲೇ ಕಾರಿನಲ್ಲಿ ಬಂಧಿಯಾಗಿದ್ದಳು. ಅವಳಿಗೆ ತುಂಬಾ ಸಿಟ್ಟು ಬರುತ್ತಿತ್ತು. ಯಾರೋ ಹೀಗೆ ಗೊತ್ತು ಪರಿಚಯ ಇಲ್ಲದವರು ಬಂದು, ಏನೊಂದು ವಿವರ ಹೇಳದೇ, ಈ ರೀತಿ ತನ್ನನ್ನು ಎಲ್ಲಿಗೋ ಕರೆದೊಯ್ಯುತ್ತಿರುವುದು ಖಂಡಿತ ಸರಿಯಲ್ಲ. ಈಗ ತಾನು ಸುಮ್ಮನಿರುವುದು ಸರಿಯಲ್ಲವೆಂದುಕೊಂಡು ಮಾತಿಗಿಳಿದಳು.
“ನೀವು ಯಾರು, ಏನು ಒಂದೂ ಗೊತ್ತಿಲ್ಲ ನಂಗೆ. ನಾವೆಲ್ಲಿಗೆ ಹೋಗುತ್ತಿದ್ದೇವೆ? ನನ್ನನು ಯಾಕೆ ನಿಮ್ಮೊಂದಿಗೆ ಕರೆದೊಯ್ಯುತ್ತಿದ್ದೀರಿ? ನಾನು ಮನೆಯಲ್ಲಿ ಗೆಳತಿಯ ಮನೆಗೆ ಹೋಗಿಬರುತ್ತೇನೆಂದು ಹೇಳಿ ಹೊರಟವಳು. ನಂಗೆ ಮಾಡಲು ಬೇರೆ ಕೆಲಸವಿದೆ. ದಯವಿಟ್ಟು ಗಾಡಿ ನಿಲ್ಲಿಸಿ”.
ಮುಂದುವರೆಯುವುದು…