ಅದೊಂದು ಭಾನುವಾರ ರಜತ್ ಬಹಳ ಖುಷಿಯಾಗಿದ್ದನು. ಬೆಳಗ್ಗೆ ಬೇಗನೆ ಎದ್ದು ಎಲ್ಲೋ ಹೊರಡಲು ತಯಾರಾಗಿದ್ದನ್ನು ಕಂಡು ರಮ ಕೇಳಿದರು, “ಏನೋ? ಭಾನುವಾರ ಇಷ್ಟು ಬೇಗ ಯಾವ ಕಡೆ ಹೊರಟೆ? ತಿಂಡಿ ಬೇಡವಾ?”.

“ಬೇಡಮ್ಮ. ಇವತ್ತು ತುಂಬಾ ಮುಖ್ಯವಾದ ಕೆಲಸವಿದೆ. ಆದಷ್ಟು ಬೇಗ ರಾಯಲ್ ಲಿಲಿಸ್ ಹೋಟೆಲಿಗೆ ಹೋಗಬೇಕು. ಕೆಲವೊಂದು ವ್ಯವಸ್ಥೆಗಳನ್ನು ನಾನೇ ಖುದ್ದು ನಿಂತು ನೋಡಿಕೊಳ್ಳಬೇಕು. ಹಾಗಾಗಿ ತಿಂಡಿ ಬೇಡ. ಹಸಿವಾದರೆ ಅಲ್ಲೇ ಏನಾದರೂ ತಿನ್ನುತ್ತೇನೆ”, ಎಂದು ದಡಬಡಿಸಿಕೊಂಡು ಹೋಗಿ ಕಾರ್ ಹತ್ತಿದನು.

“ಇವನ ಸ್ವಭಾವವೇ ಅರ್ಥವಾಗುವುದಿಲ್ಲಪ್ಪ. ಒಂದೊಂದು ದಿನ ಒಂದೊಂದು ರೀತಿ ಇರುತ್ತಾನೆ. ಏನು ನಡೀತಿದೆ ಗೊತ್ತಿಲ್ಲ ಇವನ ಜೀವನದಲ್ಲಿ. ಅಷ್ಟೊಂದು ಸಿಡುಕುವಾತ ಖುಷಿಯಾಗಿ ಇರುವುದೇ ಅಪರೂಪ. ಇಂದು ನೋಡಿದರೆ ತಾನೇ ಖುದ್ದಾಗಿ ಅಡುಗೆಮನೆಗೆ ಬಂದು ಭಟ್ರಿಗೆ ತನಗೆ ತಿಂಡಿ ಬೇಡವೆಂದು ಹೇಳಿ, ತಯಾರಾಗಿ ಎಲ್ಲೋ ಹೊರಟಿದ್ದಾನೆ!”, ಎಂದು ಮನಸ್ಸಲ್ಲೇ ಲೆಕ್ಕಾಚಾರ ಹಾಕುತ್ತ ಪತಿಯ ಬಳಿ ಕೇಳೋಣವೆಂದು ರಾಘವ್ರನ್ನು ಅರಸುತ್ತ ಗಾರ್ಡನ್ ಬಳಿ ಹೋದರು.

ಇವರು ಬರುವುದನ್ನು ಗಮನಿಸಿದ ರಾಘವ್ ದಿನಪತ್ರಿಕೆ ಬದಿಗಿಟ್ಟು, “ಏನಿವತ್ತು? ಮಹರಾಣಿಯವರು ಅಡಿಗೆ ಮನೆ ಉಸ್ತುವಾರಿ ಬಿಟ್ಟು ಗಾರ್ಡನ್ ಕಡೆ ಬಂದಿದ್ದು? ಎಂತ ಸಮಾಚಾರ? ಹೇಗಿದ್ದಾರೆ ನಿನ್ನ ಮಗ – ಸೊಸೆ, ಆಸ್ಪತ್ರೆ?”, ಕೇಳಿದರು.

“ಅವರ ವಿಷಯ ಬಿಡಿ. ಹೇಗೋ ನಡೆದುಕೊಂಡು ಹೋಗುತ್ತಿದೆ. ಅವರ ಯೋಚನೆಯಿಲ್ಲ ನಂಗೆ. ನಿಮ್ಮ ಮುದ್ದಿನ ಮಗನ ಕಥೆ ಏನು? ವಿಚಿತ್ರವಾಗಿತ್ತು ಅವನ ನಡೆನುಡಿ ಇವತ್ತು ಬೆಳಗ್ಗೆ ಬೆಳಗ್ಗೆ! ಏನು ನಡೀತಿದೆ ನಿಮ್ಮ ಹೊಟೇಲುಗಳಲ್ಲಿ?”.

“ಓಹ್ ಕೊನೆಗೂ ಮ್ಯಾಡಮಿಗೆ ನಮ್ಮ ಬಡ ಹೋಟೆಲುಗಳ ಬಗ್ಗೆ ಕೂಡ ವಿಚಾರಿಸಿಕೊಳ್ಳೋಣವೆಂದೆನಿಸಿತಲ್ಲ? ಹೊಸ ಮುಖಗಳು ಬಂದಾಗ, ಅದೂ ಹೊರದೇಶದಲ್ಲಿ ಕಲಿತು ಬಂದ ಯುವ ಪೀಳಿಗೆಗೆ ನನ್ನಂತಹ ಓಬಿರಾಯನ ಕಾಲದ ಜವಾನ ಮಾಡಿದ ಕೆಲವೊಂದು ಸಂಗತಿಗಳು ಹಿಡಿಸುವುದಿಲ್ಲ. ಹಾಗಾಗಿ ಏನೋ ಹೊಸತು ಮಾಡಬೇಕು, ಬೇರೆಯವರಿಗಿಂತ ತಾವು ಆದಷ್ಟು ಬೇಗ ಮೇಲೆ ಬರಬೇಕು, ಎಲ್ಲವನ್ನೂ ಒಮ್ಮೆಲೇ ಬದಲಿಸಬೇಕು ಎನಿಸುವುದು ಸಹಜ. ಹಾಗೆ ನಿನ್ನ ಸುಪುತ್ರ ಕೂಡ ಏನೋ ಮಾಡಲು ಹೊರಟಿದ್ದಾನೆ ನಮ್ಮ ಗ್ರೂಪ್  ಆಫ್ ಹೊಟೇಲ್ಸ್ನಲ್ಲಿ. ಮಾಡಲಿಬಿಡು. ಯಾಕೆ ತಲೆ ಹಾಕುತ್ತೀಯ ಅವನ ಸುದ್ದಿಗೆ? ಬಿಟ್ಟುಬಿಡು ಸ್ವಲ್ಪ ದಿನ. ಅದೇನೋ ಫ್ರಂಟ್ ಡೆಸ್ಕ್ನಲ್ಲಿ ಇರುವವರಿಗೂ ಸಹ ಯುನಿಫಾರ್ಮ್ ಮಾತ್ರವಲ್ಲದೇ ತಲೆಯಿಂದ ಕಾಲಿನವರೆಗೆ, ಕಾರ್ಪೊರೇಟ್ ಸಂಸ್ಕೃತಿಯಂತೆ ಡ್ರೆಸ್ ಕೋಡ್ ಮಾಡುವುದು, ಹಾಗೆಯೇ ಟೀಮ್ ಬಿಲ್ಡಿಂಗ್ ನೆಪದಲ್ಲಿ ನಮ್ಮ ರೈವಲ್ ಹೋಟೆಲಿನಲ್ಲಿ ನೌಕರರಿಗೆ ಆಕ್ಟಿವಿಟೀಸ್, ಪಾರ್ಟಿ ಇತ್ಯಾದಿ ಇತ್ಯಾದಿ ಏನೋ ನಡೀತಿದೆ ಅವನದ್ದು. ನೋಡ್ಬೇಕು ಎಂತೆಲ್ಲ ಮಾಡ್ತಾನೇಂತ. ನೀನು ಆರಾಮಾಗಿರು”.

“ಹೀಗಾ ವಿಷಯ? ಸರಿಬಿಡಿ. ನಿಮಗೆ ಗೊತ್ತಿದ್ದರೆ ಸರಿ. ನನಗೆ ಅವನ ಬೆಳಗಿನ ಅವತಾರ ನೋಡಿ ಏನಾಯಿತಪ್ಪ ಎಂದೆನಿಸಿತು. ತಲೆ ಕೆಟ್ಟು ನಿಮ್ಮ ಬಳಿ ಬಂದೆ ಅಷ್ಟೇ”, ಎಂದು ಮತ್ತೆ ಅಡಿಗೆಮನೆಯತ್ತ ಹೋದರು ರಮಾ!

*****

“ಅಮ್ಮಾ, ನನ್ನ ಇಸ್ತ್ರಿ ಮಾಡಿಟ್ಟ ಬಟ್ಟೆಯ ಮೇಲೆ ಇದೇನಿದು ನಿನ್ನ ಬಟ್ಟೆಗಳ ರಾಶಿ? ನಂಗೆ ಮೊದ್ಲೇ ತಡವಾಗ್ತಿದೆ. ಇಲ್ಲಿ ನೋಡಿದರೆ ನೀನು ಅದಕ್ಕೆ ಇನ್ನಷ್ಟು ಕಿರಿಕಿರಿ ಮಾಡಿಟ್ಟಿದೀಯ. ನಾನು ರೆಡಿಯಾಗಿ ಹೊರಡುವುದು ಯಾವಾಗ ಇನ್ನು? ಟೈಮ್ ಆಗಲೇ ೮.೩೦ ಆಗುತ್ತಾ ಬಂತು. ನೀನು ನೋಡಿದರೆ ಆರಾಮಾಗಿ ತಿಂಡಿ ಮಾಡುವುದರಲ್ಲಿ ಬ್ಯುಸಿ”, ಕೂಗಾಡಿದಳು ಸಾರಿಕಾ.

“ಅಯ್ಯೋ, ಈಗ ಏನಾಯ್ತು ಅಂತ ಇಷ್ಟೊಂದು ಕೂಗಾಡುತ್ತಿದ್ದೀಯ? ಇವತ್ತು ಭಾನುವಾರ ಎತ್ತ ಕಡೆ ನಿನ್ನ ಪಯಣ? ಅದೂ ಅಲ್ಲದೇ ನೀನೇ ಕೇಳಿದೆ ಎಂದು ಚಪಾತಿ – ಗಸಿ ಮಾಡುತ್ತಿದ್ದೇನೆ ತಿಂಡಿಗೆ. ಆ ಬಟ್ಟೆ ನೀನು ಮತ್ತೆ ಮಡಿಚಿ ಒಳಗಿಡಲು ಅಲ್ಲಿ ಇಟ್ಟಿರಬಹುದೆಂದು ಅದರ ಮೇಲೆ ಎಲ್ಲ ತಂದು ಹಾಕಿದೆ. ಎಲ್ಲರ ಒಗೆದ ಬಟ್ಟೆಗಳನ್ನು ಭಾನುವಾರ ನೀನೆ ತಾನೇ ಮಡಚಿಡುವ ವ್ಯವಸ್ಥೆ ಮಾಡುವುದು? ಅಷ್ಟು ಒಳ್ಳೆ ಬಟ್ಟೆ ಹಾಕುವಂತಹ ಯಾವುದೇ ಹಬ್ಬ ಅಥವಾ ಬೇರೆ ಕಾರ್ಯಕ್ರಮಗಳಿಲ್ಲವಲ್ಲ ನಮ್ಮ ಬಳಗದಲ್ಲಾಗಲೀ, ನಿನ್ನ ಸ್ನೇಹಿತರಲ್ಲಾಗಲಿ? ಮತ್ತೆಂತ? ಬಾ ಚಪಾತಿ ಲಟ್ಟಿಸಿಕೊಡು”, ಎಂದರು ಸುಮಂಗಲ.

“ಛೆ, ಹೇಳುವುದೇ ಮರೆತೆ. ನನಗೆ ಇವತ್ತು ಆಫೀಸ್ ಪಾರ್ಟಿ ಇದೆ. ನಮ್ಮ ಗ್ರೂಪ್ ಆಫ್ ಹೊಟೇಲ್ಸ್ನಲ್ಲಿ ಭಾನುವಾರ ರಜವಿರುವ ಎಲ್ಲ ನೌಕರರಿಗೂ ಗೆಟ್ ಟುಗೆದರ್ ಪಾರ್ಟಿ, ಲಿಲಿಸ್ ಹೋಟೆಲಿನಲ್ಲಿ. ೧೦:೩೦ ಕ್ಕೆಲ್ಲಾ ಅಲ್ಲಿರಬೇಕು. ಬರುವುದು ಸಾಯಂಕಾಲ ೪-೫ ಗಂಟೆಯಾಗಬಹುದು. ನಾನೀಗ ಹೊರಡಬೇಕು. ಬೇಗ ಸ್ವಲ್ಪ ಸಹಾಯ ಮಾಡು”, ಬೇಡುವ ದನಿಯಲ್ಲಿ ಕೇಳಿದಳು ಸಾರಿಕಾ.

ಮಗಳ ಅವಸ್ಥೆ ನೋಡಲಾಗದೇ, ಸೀದುಹೋದ ಚಪಾತಿಯನ್ನು ಒಲೆಮೇಲೆಯೇ ಬಿಟ್ಟು ಗ್ಯಾಸ್ ಆಫ್ ಮಾಡಿ ಬಂದರು ಸುಮಂಗಲ. ಏನಾಗಿದೆ ಇವಳಿಗೆ? ಯಾವುದಕ್ಕೂ ಕೇರ್ ಮಾಡದೇ, ಯಾವ ಸಂದರ್ಭ ಬಂದರೂ ಧೈರ್ಯದಲ್ಲಿ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಇಲ್ಲ ಬೇರೆಯವರನ್ನು ದಬಾಯಿಸಿಯಾದರೂ ತಾನೇ ಸರಿ ಎಂದು ವಾದಿಸುತ್ತಿದ್ದಳು ಮಾತಿನಮಲ್ಲಿ. ಇವತ್ತು ನೋಡಿದರೆ ಅಯ್ಯೋ ಪಾಪ ಎಂದು ಹೇಳುವಂತೆ ಕಾಣಿಸುತ್ತಿದೆ. ಯಾವುದಕ್ಕೂ ಬಟ್ಟೆಯನ್ನೆಲ್ಲ ಬದಿಗಿರಿಸಿ, ರೆಡಿಮಾಡಿ ಕೊಟ್ಟು ಸಾಯಂಕಾಲವೇ ವಿಚಾರಿಸೋಣವೆಂದು, “ನೀನು ಸ್ನಾನಕ್ಕೆ ಹೋಗು, ನಾನು ಮತ್ತೆ ಇಸ್ತ್ರಿ ಮಾಡಿ ಕೊಡ್ತೇನೆ”, ಎಂದರು.

“ಸರಿ”, ಎಂದಷ್ಟೇ ಹೇಳಿ ಸ್ನಾನಕ್ಕೋಡಿದಳು ಸಾರಿಕಾ.

*****

ಅಂತೂ-ಇಂತೂ ಸಾರಿಕಾ ಲಿಲಿಸ್ ತಲುಪಿದಾಗ ಸಮಯ ೧೧ ಕಳೆದಿತ್ತು. ಎಲ್ಲ ಕಡೆ ಬಣ್ಣ- ಬಣ್ಣದ ಬಟ್ಟೆ ಹಾಕಿಕೊಂಡು, ಕೈಯ್ಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದುಕೊಂಡು, ಮುಖದ ತುಂಬಾ ಮೇಕ್ ಅಪ್ ಮೆತ್ತಿಕೊಂಡ ಹುಡುಗಿಯರು, ಮತ್ತು ಟಿಪ್ – ಟಾಪಾಗಿ ತಯಾರಾಗಿ, ಸುಂದರ ಕನ್ಯೆಯರನ್ನು ಇಂಪ್ರೆಸ್ ಮಾಡಲು ಹರಸಾಹಸಪಡುತ್ತಿರುವ ಕೆಲವು ಹುಡುಗರು! ಅವರ ಮಧ್ಯೆ ಬೇಕೋ-ಬೇಡವೋ; ಹಲ್ಲುಗಿಂಜಿಕೊಂಡು, ಫಾರ್ಮಲ್ ಡ್ರೆಸ್ಸಿನಲ್ಲಿ ಮಿಂಚುತ್ತಾ, ಅದೂ – ಇದೂ ವಿಚಾರಿಸಿಕೊಳ್ಳುತ್ತಿರುವ ಲಿಲಿಸ್ ಹೋಟೆಲಿನ ಸಿಬ್ಬಂದಿಗಳು!

ಯಾವ ಕಡೆ ಹೋಗಬೇಕೆಂದು ತಿಳಿಯದೇ, ಪರಿಚಯದ ಮುಖವನ್ನರಸುತ್ತಿದ್ದಾಗ ರಜತ್ ಅವಳ ಬಳಿ ಬಂದು ನಿಂತನು!

ಮುಂದುವರೆಯುವುದು

ಹಿಂದಿನ ಸಂಚಿಕೆ