ಆಸ್ಪತ್ರೆಯಲ್ಲಿ ಸುಸಜ್ಜಿತ ಕೋಣೆಯೊಳಗೆ ಕಾಲಿಡುತ್ತಲೇ, ಹಾಸಿಗೆ ಮೇಲೆ ಮಲಗಿದ್ದವನ ಮುಖ ನೋಡಿ ಬೆಚ್ಚಿಬಿದ್ದಳು ಸಾರಿಕಾ! ಅಯ್ಯೋ, ಎಲ್ಲಿ ಬಂದು ಸಿಕ್ಕಿಹಾಕಿಕೊಂಡೆನು ತಾನು? ಯಾಕಾದರೂ ಇಳಿದು ಮುಂದೆ ಹೋಗಬೇಕಾದವಳು ಮತ್ತೆ ಈ ಹುಡುಗಿಯ ಮಾತನ್ನು ಕೇಳಿ ಬಂದೆನೋ? ಯಾಕಾದರೂ ಇಂದು ಮನೆಯಿಂದ ಹೊರಗಡೆ ಹೊರಟೆನೋ? ಹೀಗೆ ಮನದಲ್ಲೇ ಮಂಡಿಗೆ ತಿನ್ನುತ್ತಾ, ಕಾಲಿನ ಹೆಬ್ಬರಳಲ್ಲಿ ನೆಲದ ಮೇಲೆ ರಂಗೋಲಿ ಮೂಡಿಸುತ್ತ ನಿಂತಳು ಸಾರಿಕಾ, ಕಲ್ಲಿನಂತೆ.

ಅದ್ಯಾವುದರ ಪರಿವೆಯಿಲ್ಲದವಳಂತೆ ರಂಜಿತಾ ಖುಷಿಯಿಂದ ಹೇಳಿದಳು, “ನೋಡಣ್ಣಾ, ನಿನ್ನನ್ನು ನೋಡಲು ಯಾರು ಬಂದಿದ್ದಾರೆ ಅಂತ? ನನ್ನ ಜೀವದ ಗೆಳತಿ… ಆಂ..ಊಊಂ ..”, ಅಯ್ಯೋ ಎಂತ ಪೆದ್ದಿ ತಾನು ಇವಳ ಹೆಸರೂ ಕೇಳಿಕೊಂಡಿಲ್ಲವಲ್ಲ? ಎನ್ನುತ್ತಾ ಸಹಾಯಕ್ಕಾಗಿ ಸಾರಿಕಾಳ ಮುಖ ನೋಡಿದಳು. ಸಾರಿಕಾ ಸುಧಾರಿಸಿಕೊಂಡು ನಿಧಾನಕ್ಕೆ, “ಸಾ.ರಿ.ಕಾ..” ಎಂದಳು.

ಆಗ ತಾನೇ ಮಲಗಿದ್ದ ರಜತ್, ನಿಧಾನಕ್ಕೆ ಕಣ್ಣು ತೆರೆದು ತನ್ನೆದುರಿಗಿರುವ, ತಂಗಿಯೊಂದಿಗೆ ಬಂದು ನಿಂತ ಸಾರಿಕಾಳನ್ನು ನೋಡಿ ಹಲ್ಲು ಕಡಿದನು. ಇವಳ್ಯಾಕೆ ಬಂದಳಿಲ್ಲಿ ಅಂದ್ಕೊಂಡನು.

ರಂಜಿತಾ ಉತ್ಸಾಹದಿಂದ, “ಅಣ್ಣ, ನೀನು ಹೇಳು ಈಗ, ಅಮ್ಮ ಹೇಳಿದ್ದು ಸರಿ ಅಲ್ಲ? ನೀನು ಇನ್ನೊಂದು ವಾರವಾದರೂ ರೆಸ್ಟ್ ಮಾಡಬೇಕು. ಡಾಕ್ಟರ್ ಅಣ್ಣ ಹೇಳಿದ ಮಾತನ್ನಾದರೂ ಕೇಳು”, ಎಂದಳು ಅವನು ಮಾತು ಆರಂಭಿಸಿದರೆ ಮಾತ್ರ ಸಾರಿಕಾ ಮಾತನಾಡಲು ಅನುಕೂಲವಾಗುವುದು ಮತ್ತು ತನ್ನ ಉದ್ದೇಶ ಆದಷ್ಟು ಬೇಗ ಈಡೇರಿ, ಅಮ್ಮನೊಂದಿಗೆ  ತಾನು ಮಾಡಿದ್ದ ಚಾಲೆಂಜ್ ಗೆಲ್ಲಬಹುದು ಎಂದುಕೊಳ್ಳುತ್ತ.

ಅವಳಾಗಲೇ ರಮಾಗೆ ಹೇಳಿದ್ದಳು, ಅಣ್ಣನನ್ನು ಒಪ್ಪಿಸಿದರೆ ತನ್ನ ಓದಿನ ಮತ್ತು ಮದುವೆಯ ವಿಚಾರವಾಗಿ ಮನೆಯವರು ಯಾರೂ ತಲೆ ಹಾಕಬಾರೆದೆಂಬ ಅವಳ ಕಂಡಿಷನ್! ಅವಳಿಗೆ ಅಣ್ಣನ ಮೇಲಿನ ಪ್ರೀತಿಯೇನೋ ಇತ್ತು. ಅದಕ್ಕಿಂತ ಹೆಚ್ಚಾಗಿ ತನ್ನ ಸ್ವಾರ್ಥ.

“ಇವರು ಯಾಕೆ ಇಲ್ಲಿಗೆ ಬಂದರು? ಯಾರು ಬರಹೇಳಿದ್ದು? ಇಲ್ಲಿ ಏನು ಕೆಲಸ ಇವರಿಗೆ?” ಸಿಟ್ಟಿನಿಂದ ಕೇಳಿದನು ರಜತ್.

“ಅರೇ ಹೇಳಿದೆನಲ್ಲ? ನಾನೇ ಕರೆದುಕೊಂಡು ಬಂದಿದ್ದು. ನನ್ನ ಸ್ನೇಹಿತೆ ಈಕೆ”, ಗೊಂದಲದಿಂದ ಹೇಳಿದಳು ರಂಜಿತ.

“ಓಹ್ ಹಾಗಾದರೆ ನಮ್ಮ ಕಂಪನಿಯಲ್ಲಿ ಇವರಿಗೆ ಕೆಲಸಕ್ಕೂ ನಿನ್ನದೇ ಶಿಫಾರಸಿತ್ತನಿಸುತ್ತದೆ. ಅದೇ ಅಂದುಕೊಂಡೆ ನಾನು. ಆಫ್ಟರ್ ಆಲ್, ಬಿಎ ಪಾಸ್ ಮಾಡಿದವರೆಲ್ಲ ನಮ್ಮ ಫ್ರಂಟ್ ಡೆಸ್ಕಿಗೆ ಹೇಗೆ ಬಂದು ಸೇರಿಕೊಂಡರೆಂದು? ಮೊದಲು ಇವರನ್ನು ಕರೆದುಕೊಂಡು ಹೊರಗಡೆ ಹೋಗು. ನನಗೆ ನಿದ್ದೆ ಮಾಡಬೇಕು”, ಎಂದನು ರಜತ್.

ಅವನು ಅಷ್ಟು ಹೇಳಿದ್ದೆ ತಡ, ಸಾರಿಕಾ ಹೇಳಿದಳು, “ಸುಮ್ಮನೇ ನಿಮ್ಮ ತಂಗಿಯನ್ನು ಯಾಕೆ ದೂರುತ್ತೀರಿ? ಅವರ ಶಿಫಾರಸು ಇರಲಿಲ್ಲ ನನ್ನ ಬಗ್ಗೆ. ನಾನು ನನ್ನ ಕ್ಯಾಪೆಬಿಲಿಟಿಸ್ ಹೊಂದಿಕೆಯಾಗಿ ಆಯ್ಕೆಯಾದವಳು. ನಿಮ್ಮ ಕಂಪನಿಯ ಕೆಲಸದ ವಿವರಗಳು ಇದ್ದ ಜಾಹಿರಾತಿನಲ್ಲಿ ವಿದ್ಯಾರ್ಹತೆ ಬಗ್ಗೆ ಯಾವುದೇ ಪದವಿ ಇದ್ದರಾಯಿತೆಂದಷ್ಟೇ ಇದ್ದದ್ದು. ಸುಮ್ಮಸುಮ್ಮನೇ ಇದ್ದಬದ್ದಲ್ಲೆಲ್ಲ ಹೋಗಿ ಕೆಲಸ ಮಾಡಲು ನಾನೇನು ಏನೂ ಗೊತ್ತಿಲ್ಲದವಳಲ್ಲ. ನಿಮ್ಮ ತಂಗಿಯೇನೋ ಅಚಾನಕ್ಕಾಗಿ ಸಿಕ್ಕಿ, ಏನೇನೋ ಹೇಳಿ ಅಣ್ಣನ ಆರೋಗ್ಯ ನೋಡಿಕೊಳ್ಳುವಂತೆ ೪ ಬುದ್ಧಿ ಮಾತುಗಳನ್ನು ಹೇಳಬೇಕು; ತನ್ನ ಹಾಗೂ ಮನೆಯವರ ಪರವಾಗಿ ಎಂದು ಕೇಳಿಕೊಂಡರು. ಅದಕ್ಕೆ ಏನೋ ಪಾಪ, ಏನಾಗಿದೆಯೋ ಏನೋ ಎಂದುಕೊಳ್ಳುತ್ತಾ ಬಂದೆ. ಇಲ್ಲಿ ನೋಡಿದರೆ ನೀವು”.

“ನೀವೆಂದು ಮೊದಲೇ ಗೊತ್ತಿದ್ದರೆ ಬರುತ್ತಲೇ ಇರಲಿಲ್ಲ ನಾನು. ಆಗ ಇವರು ನಿಮ್ಮ ತಂಗಿಯೆಂದು ಗೊತ್ತಾಗಲಿಲ್ಲ. ಈಗ ಗೊತ್ತಾಯಿತು ಬಿಡಿ. ಅಣ್ಣ – ತಂಗಿ ಎಲ್ಲರೂ ಸಿಲ್ಲಿ. ಒಬ್ಬೊಬ್ಬರದು ಒಂದೊಂದು ಕಥೆ. ಅದೆಂತ ಜನರಪ್ಪ ನೀವೆಲ್ಲ. ವಿಚಿತ್ರ. ನಿಮ್ಮ ಅನುಕೂಲಕ್ಕೆಂದೇ ಇಷ್ಟು ದೊಡ್ಡ ಆಸ್ಪತ್ರೆಗಳಿರುವುದನಿಸುತ್ತದೆ. ಎಲ್ಲರ ಕೈಯ್ಯಲ್ಲಿ ದುಡ್ಡು ಕೀಳುವುದೊಂದೇ ಯೋಚನೆ ಇವರಿಗೆ. ಅದಕ್ಕೆ ನಿಮ್ಮನ್ನು ಇನ್ನೊಂದು ೪-೫ ದಿನ ಇಲ್ಲೇ ಇರಿಸ್ಕೊಂಡು ದುಡ್ಡು ಮಾಡಿ ಕಳುಹಿಸುತ್ತಾರೆ ನೋಡಿ. ನಿಮಗೆ ಅಂತ ದೊಡ್ಡ ಪೆಟ್ಟೇನು ಆದಂತೆ ಕಾಣುತ್ತಿಲ್ಲ ನನಗೆ. ೧-೨ ದಿನದಲ್ಲಿ ಸುಧಾರಿಸಬಹುದು. ಪ್ಲಾಸ್ಟರ್ ತೆಗೆಯಲು ಸ್ವಲ್ಪ ಸಮಯ ಬೇಕಾಗಬಹುದು. ನೀವು ಅಣ್ಣ-ತಂಗಿ ಏನಾದರು ಮಾಡಿಕೊಳ್ಳಿ, ನಾನಿನ್ನು ಹೊರಡುತ್ತೇನೆ”, ಒಂದೇ ಸಮನೆ ಎಲ್ಲವನ್ನೂ ಒಟ್ಟಿಗೆ ಹೇಳಿಮುಗಿಸಿ ಹೊರಡಲು ಬಾಗಿಲ ಬಳಿ ಹೋದವಳನ್ನು ರಜತ್ ಧ್ವನಿ ತಡೆಯಿತು.

“ನನ್ನ ಬಗ್ಗೆ ಹೇಳುವುದು ನನಗೆ ಅಭ್ಯಾಸವಾಗಿ ಹೋಗಿದೆ. ಆದರೆ ನನ್ನ ತಂಗಿಯ ಬಗ್ಗೆ ಏನೇನೋ ಮಾತನಾಡಬೇಡಿ. ಹಾಗೆಯೇ ನಮ್ಮಣ್ಣ – ಅತ್ತಿಗೆ ಸೇರಿ ಕಷ್ಟಪಟ್ಟು ಕಟ್ಟಿದ ಆಸ್ಪತ್ರೆಯ ಬಗ್ಗೆಯೂ ಅಷ್ಟೇ. ದುಡ್ಡು ಮಾಡುವುದು ನಮ್ಮ ಉದ್ದೇಶವಾಗಿದ್ದರೆ ಬೇರೆ ಏನೇನೋ ದಾರಿಗಳಿವೆ. ಆದರೆ ಎಲ್ಲರಿಗೂ ಅನುಕೂಲವಾಗಲಿ ಎಂದು ಮಾಡಿರುವುದು ಆಸ್ಪತ್ರೆಯ ಫ್ಯಾಸಿಲಿಟೀಸ್. ಇದಕ್ಕೆಲ್ಲ ನಿಮ್ಮ ಸರಕಾರದಿಂದ ದುಡ್ದು ಏನೇನೂ ಬರುವುದಿಲ್ಲ. ನಮ್ಮ ಕೈಯಿಂದ ಪೂರ್ತಿಯಾಗಿ ಹಾಕಲು ಸಾಕಾಗುವುದೂ ಇಲ್ಲ. ಅದಕ್ಕೆ ಸೌಕರ್ಯಕ್ಕೆ ತಕ್ಕಂತಹ ದರ ನಿಗದಿಯಾಗಿದೆ ಪ್ರತಿಯೊಂದಕ್ಕೂ. ೩-೪ ಜನ ಸರ್ಜನ್ಸ್ ಇದ್ದರೂ, ಅತ್ತಿಗೆಯ ಅಭಿಪ್ರಾಯ, ನಿರ್ದೇಶನ ಅಥವಾ ಮೇಲುಸ್ತುವಾರಿ ಇಲ್ಲದೇ ವಿನಾ ಕಾರಣ ಒಂದು ಆಪರೇಷನ್ ಕೂಡ ನಡೆಯುವುದಿಲ್ಲ ಇಲ್ಲಿ. ಸುಮ್ಮನೇ ತಿಳಿಯದೇ ಏನೇನೋ ಮಾತನಾಡಬೇಡಿ!”.

ಸಾರಿಕಾಳಿಗೆ ಆಸ್ಪತ್ರೆಯ ಬಗ್ಗೆ ತಾನು ಮಾತನಾಡಿ ತಪ್ಪು ಮಾಡಿದೆನೆಂದೆನಿಸಿತು, ಅವನ ಮಾತನ್ನು ಕೇಳಿ. ಹಾಗೆಯೇ ಅಂದು ಭೇಟಿಯಾಗಿದ್ದ ಅವನ ಅಣ್ಣನ ಬಗ್ಗೆ ಗೌರವ ಇನ್ನೂ ಹೆಚ್ಚಿತು. ಹೋಟೆಲಿನಲ್ಲಿ ಗಲಾಟೆಯಾದ ದಿನವೇ ರಂಜನಿನ ಸೌಮ್ಯ ಸ್ವಭಾವ, ತಾಳ್ಮೆ ಅವಳಿಗೆ ಇಷ್ಟವಾಗಿತ್ತು. ಮನಸ್ಸಲ್ಲೇ, ಇವರ ಮನೆಯಲ್ಲಿ ಈ ಡಾಕ್ಟರ್ ಒಬ್ಬರೇ ಸ್ವಲ್ಪ ಬುದ್ಧಿಯಿರುವಂತೆ ಇದ್ದಾರೆ. ಈ ಅಣ್ಣ – ತಂಗಿಗೆ ಬರೀ ಅಹಂಕಾರ, ಎಂದುಕೊಳ್ಳುತ್ತಿದ್ದಳು.

ಸಾರಿಕಾ ಕ್ಷಮೆ ಕೇಳಬೇಕೆನ್ನುವಷ್ಟರಲ್ಲಿ ರಂಜನ್ ಮತ್ತು ಕಾಂಚನ ಒಳಬಂದರು. ಸಾರಿಕಾಳನ್ನು ನೋಡಿ ಆಶ್ಚರ್ಯದಿಂದ ಕೇಳಿದನು ರಂಜನ್, “ಅರೇ ನೀವಿಲ್ಲಿ? ನಾವೆಷ್ಟೇ ಹೇಳಿದರು ನಿಮ್ಮ ಬಾಸ್ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ ನೋಡಿ. ನೀವೊಮ್ಮೆ ಹೇಳಿನೋಡಿ. ಬೇಕಿದ್ದಲ್ಲಿ ಅವನ ಕೆಲಸಗಳ ಜವಾಬ್ದಾರಿಯೂ ಸ್ವಲ್ಪ ಮಟ್ಟಿಗೆ ನೀವೇ ನಿಭಾಯಿಸಬಲ್ಲಿರೆಂದು ಹೇಳಿನೋಡಿ ಇವನಿಗೆ. ನೀವು ಬಂದಿದ್ದುಒಳ್ಳೆಯದೇ ಆಯಿತು. ನೀವೇ ಸರಿ ಇವನಿಗೆ! ಕಳ್ಳ, ನಮಗೆ ಗೊತ್ತಾಗದಂತೆ ನಿಮ್ಮನ್ನು ಇಲ್ಲಿಗೆ  ಕರೆಸಿಕೊಂಡಿದ್ದಾನೆ ನೋಡಿ”, ಎಂದು ಕಣ್ಣು ಮಿಟುಕಿಸಿದನು. ರಂಜನ್ ಪ್ರಕಾರ, ಯಾರು ಏನೇ ಹೇಳಿದರೂ ಅವರಿಬ್ಬರೂ ಜೋಡಿಹಕ್ಕಿಗಳು! ಸಾರಿಕಾ ಮತ್ತು ರಜತ್ ಮಧ್ಯೆ ಅಂದಿನ ಜಗಳ ನೋಡಿದ ಮೇಲೆ ಅವನು ತನ್ನದೇ ಕಲ್ಪನೆಯಲ್ಲಿದ್ದ!

ಎಲ್ಲವನ್ನೂ ಕೇಳಿಸಿಕೊಂಡ ರಂಜಿತಾ ಈಗ ಗೊಂದಲದ ಗೂಡಾಗಿದ್ದಳು! ನಿಧಾನಕ್ಕೆ ಸುಧಾರಿಸಿಕೊಂಡು, “ನೀವೆಲ್ಲ ಏನು ಹೇಳುತ್ತಿದ್ದೀರೋ ನನಗೊಂದೂ ಅರ್ಥವಾಗುತ್ತಿಲ್ಲ. ಸ್ವಲ್ಪ ಬಿಡಿಸಿ ಹೇಳಿ”.

ಅಷ್ಟರಲ್ಲಿ ರಮಾ ಗಡಿಬಿಡಿಯಲ್ಲಿ ಒಳಗಡೆ ಬಂದು, “ರಜತ್, ಪ್ಲೀಸ್ ಬಿ ಕೇರ್ಫುಲ್. ಏನೇನೋ ಮಾತನಾಡಿಬಿಡಬೇಡ. ಮೀಡಿಯಾ ಈಸ್ ಹಿಯರ್. ಅವರಿಗೆ ಇದು ಆಕ್ಸಿಡೆಂಟ್ ಕೇಸ್ ಆದ್ದರಿಂದ ಬೇಗನೆ ಸುದ್ದಿ ತಲುಪಿದೆ. ಇನ್ನು ನಮ್ಮ ರೈವಲ್ ಹೋಟೆಲಿನ ಬಗ್ಗೆ ಹೇಳುವುದೇ ಬೇಡ. ಅವರದ್ದೇ ಪತ್ರಿಕೆ ಬೇರೆ ಇದೆ. ಯೋಚಿಸಿ ಮಾತನಾಡು”, ಎಂದು ಪತ್ರಕರ್ತರಿಗೆ ದಾರಿ ಮಾಡಿ ಕೊಟ್ಟರು.

ಮಂಗಳೂರಿನ ಪ್ರಖ್ಯಾತ ಹೋಟೆಲಿನ ಮಾಲೀಕರು, ಆಗರ್ಭ ಶ್ರೀಮಂತರು, ಅವರದೇ ಆಸ್ಪತ್ರೆ, ಮನೆಯಲ್ಲಾದ ಮಾತುಕಥೆ, ಆ ದಿನ ಹೋಗಬೇಕಾಗಿದ್ದ ಆರತಕ್ಷತೆ, ಅವರ ಸಂಬಂಧ, ಕುಡಿತದಿಂದ ವಾಹನ ಚಲಾವಣೆ, ಇವೆಲ್ಲವೂ ಅವರ ಲಿಸ್ಟಿನಲ್ಲಿದ್ದವು ರಜತ್ಗೆ ಕೇಳಬೇಕಾದ ಪ್ರಶ್ನೆಗಳಲ್ಲಿ.

ಪ್ರಖ್ಯಾತಿ ಪಡೆದರೆ ಇದೇ ತೊಂದರೆ ಎಂದುಕೊಂಡು ರಂಜನ್ ಹೇಳಿದನು, “ದಯವಿಟ್ಟು ಜಾಸ್ತಿ ಏನೂ ಕೇಳಬೇಡಿ. ಅವನಿಗೆ ರೆಸ್ಟ್ ತುಂಬಾ ಅಗತ್ಯವಿದೆ. ಆದಷ್ಟು ಬೇಗ ಮುಗಿಸಿಬಿಡಿ”.

ಸರಿಯೆಂದು ತಲೆ ಅಲ್ಲಾಡಿಸಿ ಒಬ್ಬರಾದ ಮೇಲೊಬ್ಬರು ಕೆಲವೊಂದು ಸಂಬಂಧಪಟ್ಟ ವಿಷಯ ಕೇಳಿದರೆ, ಇನ್ನು ಕೆಲವರು ಅಸಂಬಂದ್ಧ ಪ್ರಶ್ನೆಗಳನ್ನು ಕೇಳಿ ತಲೆ ತಿಂದರು. ಮೊದಲೇ ಸುಸ್ತಾಗಿದ್ದ ರಜತ್, ತನ್ನ ಕೋಪವನ್ನು ತಡೆಹಿಡಿದು ಕಷ್ಟಪಟ್ಟು ಏನೋ ಹೇಳಿಕಳುಹಿಸಿದನು ಅವರನ್ನೆಲ್ಲ.

ಫೋಟೋ ತೆಗೆಯಲು ಅನುಮತಿಯಿಲ್ಲದಿದ್ದರೂ, ರಜತ್ ಅವರ ಕಂಪನಿಯ ರೈವಲ್ ಕಂಪನಿ, ಹೋಟೆಲ್ ಲಿಲಿಸ್ ಮಾಲೀಕತ್ವದಲ್ಲಿರುವ “ದಿ ಮಂಗಳೂರು ಲಿಲಿಸ್” ಪತ್ರಿಕೆಯ ಪತ್ರಕರ್ತೆ ಸೂಕ್ಷ್ಮವಾಗಿ ಸಾರಿಕಾಳನ್ನು ಅಲ್ಲಿ ಗಮನಿಸಿ, ಪಕ್ಕನೆ ಯಾರಿಗೂ ಕಾಣದಂತೆ, ರಜತ್ ಹಾಗೂ ಸಾರಿಕಾ ಕವರ್ ಆಗುವಂತೆ ಮೊಬೈಲಿನಲ್ಲೇ ಒಂದೆರಡು ಫೋಟೋ ತೆಗೆದುಕೊಂಡಳು. ಅವಳು ಅವರಿಬ್ಬರನ್ನೂ ಲಿಲಿಸ್ ಹೋಟೆಲಿನಲ್ಲಿ ನಡೆದ ನಿಸರ್ಗ ಗೆಟ್ ಟುಗೆದರ್ ಪಾರ್ಟಿಯಲ್ಲಿ ನೋಡಿದ್ದಳು. ಆ ಫೈಲ್ ತೆಗೆದರೆ ಒಳ್ಳೆ ಕಥೆ ಸಿಗಬಹುದು, ಈ ಬಾರಿ ತನ್ನ ಪ್ರಮೋಷನ್ ಪಕ್ಕಾ ಎಂದು ಮನದಲ್ಲೇ ಖುಷಿಯಲ್ಲಿ ತೆಲಾಡುತ್ತ ಹೊರನಡೆದಳು!

ಮುಂದುವರೆಯುವುದು…

ಹಿಂದಿನ ಸಂಚಿಕೆ