ಅಮೆರಿಕಾದ ಪಾರಿವಾಳದ ಸಂದೇಶ

ಹೆಸರಿನ ಹುಡುಕಾಟ…

ಅಮ್ಮ, ಚಿಕ್ಕಿ, ತಂಗಿ ಎಲ್ಲರ ತಲೆ ತಿಂದರೂ ಆ ಒಂದು ಪತ್ರದ ಹೆಸರೇನೆಂದು ಸರಿಯಾಗಿ ಗೊತ್ತಾಗಲಿಲ್ಲ. ಅದು ಆಂಗ್ಲ ಭಾಷೆಯಲ್ಲಿ ‘ಏರ್ ಮೇಲ್ ‘ಎಂದೂ, ಹಿಂದಿಯಲ್ಲಿ ‘ಹವಾಯ್ ಪತ್ರ್’ ಎಂದೂ ಕರೆಯಲ್ಪಡುವುದೆಂದು ಗೂಗಲ್ ಮಹಾಶಯ ಎಷ್ಟು ಹೇಳಿದರೂ, ಅದು ನಾನಂದು ಆ ಪತ್ರ ಪೋಸ್ಟ್ ಆಫೀಸಿನಿಂದ ಹಾಗೆ ಹೇಳಿ ಕೊಂಡುಕೊಳ್ಳುತ್ತಿದ್ದುದಲ್ಲ ಎಂದೇ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಹಾಗೆಯೇ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಸಿಗುತ್ತಲೂ ಇರಲಿಲ್ಲ. ಕೊನೆಗೆ ಅದು ಹೇಗೋ ಫಕ್ಕನೆ ನನಗೆ ಚಿರಪರಿಚಿತವಾದ ಹೆಸರು ನೆನಪಾಯಿತು! ಅದು ‘ಹವಾಯ್ ಲೆಟರ್‘! ಹೌದು .. ಅಂದಿನ ಕಾಲಕ್ಕೆ ನಾವದನ್ನು ೨ ಭಾಷೆಗಳನ್ನೂ ಮಿಶ್ರವಾಗಿಸಿ ಹಾಗೆಯೇ ಕರೆಯುತ್ತಿದ್ದದ್ದು!

ಅಂಚೆಯಪ್ಪ  – ಅಂಚೆಯಕ್ಕ!

ಮೊದ-ಮೊದಲು ಅಪ್ಪನಿಗೆ ಪೇಟೆಗೆ ಹೋದಾಗ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದೆವು. ನಾನು ಪೇಟೆಯ ಶಾಲೆಗೆ ಹೋಗಲು ಆರಂಭಿಸಿದ ಮೇಲೆ ಅಂಚೆ ಕಛೇರಿ ದಾರಿಯಲ್ಲೇ ಸಿಗುವುದರಿಂದ ನಾನೇ ತೆಗೆದುಕೊಂಡು ಬರುತ್ತಿದ್ದೆ ಮತ್ತು ಅದನ್ನು ಪೋಸ್ಟ್ ಸಹ ನಾನೇ ಮಾಡುತ್ತಿದ್ದೆ. ಹಾಗೆಯೇ ಅಪ್ಪನಿಗೆ ಮರೆತು ಹೋಗುತ್ತದೆಂದು ಬೈಕೊಳ್ಳುತ್ತಿದ್ದೆ. ಆದರೆ, ಶಾಲೆಗೆ ಹೋಗಿ ಬರುವಾಗ ನಾನೂ ಸಹ ಎಷ್ಟೋ ಬಾರಿ ಪೋಸ್ಟ್ ಮಾಡಲು ಮರೆತು ಬರುತ್ತಿದ್ದೆ! ನನಗೆ ನೆನಪಾಗುತ್ತಿದ್ದುದು ಆ ಪತ್ರದಲ್ಲಿ ನಾನೇನಾದರೂ ನನಗೆ ಮುಖ್ಯವಾದ ವಿಷಯ ಎಂದೆನಿಸಿ ಬರೆದಿದ್ದ ವಿಷಯವಿದ್ದರೆ ಮಾತ್ರ! ಇಲ್ಲವಾದಲ್ಲಿ, ಅಮ್ಮ ‘ಪೋಸ್ಟ್ ಮಾಡಿದ್ಯಾ?’ ಕೇಳಿದಾಗಲೇ ನೆಂಪಾಗುತ್ತಿದ್ದುದು! ನಿಧಾನಕೆ, ಈ ದೂರವಾಣಿ, ಮೊಬೈಲ್ ಬಳಕೆ ಹೆಚ್ಚಿ, ಅದರ ಉಪಯೋಗವೇ ಕಮ್ಮಿಯಾಯಿತೆನ್ನಿ. ಈಗ ಅದೆಲ್ಲ ಬರಿ ನೆನಪು ಮಾತ್ರ!

airmail

ಪತ್ರದ ಸಂಭ್ರಮ 

ಇಷ್ಟೆಲ್ಲಾ ಒಕ್ಕಣೆ ಬರೆದಿದ್ದು ಒಂದಾನೊಂದು ಕಾಲದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಚಿಕ್ಕಿಗೆ ಬರೆಯುತ್ತಿದ್ದ ಸುದ್ದಿ ಪತ್ರದ ಬಗ್ಗೆ! ಆಗೆಲ್ಲ ಪತ್ರ ವ್ಯವಹಾರವೇ ಹೆಚ್ಚಿದ್ದ ಕಾಲ. ಕೆಲವೊಮ್ಮೆ ಹೇಳಿಕೊಳ್ಳಲು ಏನೂ ಇಲ್ಲದಿದ್ದರೂ ಸುಮ್ಮನೇ ಏನೋ ಒಂದು ಹೇಳಿ ಬರೆದು ಕಳುಹಿಸುವುದೂ ಇತ್ತು. ಇಲ್ಲದಿದ್ದರೆ, ಎಲ್ಲರನ್ನೂ ಬಿಟ್ಟು ಹೋಗಿ ದೂರದ ಊರಿನಲ್ಲಿ ಭಾವನೆಗಳ ತಾಕಲಾಟದೊಂದಿಗೆ ಗುದ್ದಾಡುತ್ತ, ವಾಸ್ತವತೆಗೆ ಹೊಂದಿಕೊಳ್ಳಲು ಹರಸಾಹಸಪಡುತ್ತಾ, ಮನಸ್ಸು ಗಟ್ಟಿ ಮಾಡಿಕೊಂಡು, ಕಾತುರತೆಯಿಂದ ಪ್ರೀತಿಪಾತ್ರರ ಪತ್ರಕ್ಕೆ ಕಾಯುತ್ತಿರುವವರಿಗೆ ನಿರಾಸೆಯಾಗಬಾರದಲ್ಲ?

ಮಾವು, ಹಲಸಿನ ಸಮಯದಲ್ಲಿ ಹೂವು, ಹಣ್ಣು ಬಿಟ್ಟಿದೆಯೆಂದೋ, ಇನ್ನೆಲ್ಲಿಂದಲೋ ಮಾವಿನ ಮಿಡಿ ತಂದು ಉಪ್ಪಿನಕಾಯಿ ಹಾಕಿಯಾಯಿತೆಂದೋ ಏನೋ ಒಂದು ಬರೆದು ಪತ್ರ ತುಂಬಿ, ಜಾಗ ಕಮ್ಮಿಯಾಯಿತೆನಿಸಿದ್ದೂ ಇದೆ! ಕೆಲವೊಮ್ಮೆಅಕ್ಕನ ಮದುವೆ ನಿಶ್ಚಯವಾಗಿದ್ದು, ಊರಿಗೆ ಬಂದು ಹೋಗುವ ವಿಚಾರ, ಆಗ ಆಗಬೇಕಾಗಿದ್ದ ಕೆಲಸಗಳು, ಇತ್ಯಾದಿ ತುಸು ಗಂಭೀರವಾದ ವಿಚಾರಗಳೂ ವಿನಿಮಯವಾಗುತ್ತಿದ್ದವು. ಅದೇನೇ ಇದ್ದರೂ ಕೆಲವರಿಗೆ ಅದು ಸುಮ್ಮನೇ ಹರಟೆ, ಕಾಲ ಹರಣದ ವಿಚಾರಗಳೆನಿಸಬಹುದೇನೋ? ಆದರೆ, ನಮಗೆ ಪತ್ರದಲ್ಲಿರುತ್ತಿದ್ದ ವಿಚಾರಗಳಿಗಿಂತ ಅದರಲ್ಲಿದ್ದ ಜೀವ ಕಳೆ ಮತ್ತು ಭ್ರಾತೃತ್ವದ ಪ್ರೀತಿಯ ಭಾವಗಳಷ್ಟೇ ಮುಖ್ಯವಾಗಿದ್ದದ್ದು.

ನೀವು ಊರಿಗೆ ಬರುವುದು ಯಾವಾಗ?

ಈ ಪತ್ರಗಳಲ್ಲಿ ನಾನು ಬರೆಯುತ್ತಿದ್ದದ್ದು ಹಿಂದಿನ ಪುಟದಲ್ಲಿ ಅಂಟಿಸಲು ಚೂರು ಜಾಗವಿರುತ್ತಿದ್ದಲ್ಲಿ ಮಾತ್ರ. ಉಳಿದದ್ದೆಲ್ಲ ಅಮ್ಮನಿಗೆ ಮೀಸಲು. ಮನಸ್ಸಿದ್ದರೆ ತಂಗಿಯೂ ಕೆಲವೊಮ್ಮೆ ಏನಾದರೂ ಗೀಚುತ್ತಿದ್ದಳು. ಇಲ್ಲವಾದಲ್ಲಿ ಇಬ್ಬರ ಹೆಸರೂ ಹಾಕಿ ನಾನೊಬ್ಬಳೇ ಏನೋ ಒಂದು ಬರೆಯುತ್ತಿದ್ದೆ. ನಮ್ಮದೇನಿದ್ದರೂ ವಾರ್ಷಿಕ ಪರೀಕ್ಷೆ ಯಾವಾಗ, ಯಾರಿಗೆ ಎಷ್ಟು ಅಂಕ ಬಂತು, ತಂಗಿ – ತಮ್ಮ ಏನು ಮಾಡುತ್ತಿದ್ದಾರೆ? ನೀವು ಊರಿಗೆ ಬರುವುದು ಯಾವಾಗ? ಇವಿಷ್ಟೇ ಸಾಮಾನ್ಯವಾಗಿ ಇರುತ್ತಿದ್ದ ವಿಚಾರಗಳು! ಇದರಲ್ಲಿ ಈ ‘ನೀವು ಊರಿಗೆ ಬರುವುದು ಯಾವಾಗ?’ ಎನ್ನುವುದು ಸರ್ವಂತರ್ಯಾಮಿಯಂತೆ ಪ್ರತಿ ಬಾರಿಯೂ ಉತ್ತರ ಬಂದರೂ, ಬರದಿದ್ದರೂ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ!!

ಪ್ರೀತಿಯ ಆಶೀರ್ವಾದಗಳು

ಹಾಗೆಯೇ ಅದರಲ್ಲಿ ಒಂದು ಸಾಲು, “ತೀರ್ಥ ರೂಪ ಸಮಾನರಾದ ಚಿಕ್ಕಪ್ಪ, ಮಾತೃ ಸಮಾನರಾದ ಚಿಕ್ಕಮ್ಮನವರಲ್ಲಿ ಬೇಡುವ ಆಶೀರ್ವಾದಗಳು” ಎಂದು ಬರೆಯಲು, ಇನ್ನೊಂದು ಸಾಲು, ತಮ್ಮ-ತಂಗಿಯರಿಗೆ ಪ್ರೀತಿಯ ಆಶೀರ್ವಾದಗಳು, ಶುಭಾಶಯಗಳು ಎಂದೋ ಬರೆದು ಜಾಸ್ತಿ ಬರೆಯಲೇ ಜಾಗ ಸಾಲುತ್ತಿರಲಿಲ್ಲ! ಈಗ ಹೀಗೆ ಏನಾದರೂ ಬರೆದರೆ ಇವಳಿಗೆ ತಲೆ ಸರಿ ಇಲ್ಲ ಎಂದರೂ ಎನ್ನಬಹುದೇನೋ? 🙂 ಈಗೆಲ್ಲ ಆಂಗ್ಲದ ಆಕ್ರಮಣವಾದ,  “ಥ್ಯಾಂಕ್ ಯು .., ಸಾರಿ..  ನೈಸ್ ಮೀಟಿಂಗ್ ,  ಥ್ಯಾಂಕ್ಸ್ ಫ಼ಾರ್ ಕಮಿಂಗ್ ..ಎಂಜೋಯ್ಡ್ ಯುವರ್ ಕಂಪನಿ .. “, ಹೀಗೆ ಏನೇನೋ ಒಂದು ಹೇಳಲೇ ಬೇಕು ಅಥವಾ ಒಂದು ವಾಟ್ಸಾಪ್ ಸಂದೇಶವಾದರೂ ಕಳುಹಿಸಬೇಕು. ಅದರ ಪ್ರಭಾವ ಎಷ್ಟಿದೆಯೆಂದರೆ ಅದು ಒಂದು ರೀತಿ ಅವರ ಕರ್ತವ್ಯ ಮಾಡಿದವರಿಗಾದರೂ ಸರಿಯೇ, ಅಥವಾ ಇಷ್ಟಪಟ್ಟು ತಾವಾಗಿಯೇ ಜವಾಬ್ದಾರಿ ತೆಗೆದುಕೊಂಡು ಪ್ರೀತಿಯಿಂದ, ಖುಷಿಯಿಂದ ತಮ್ಮವರೆಂಬ ಭಾವದಿಂದ ಮಾಡಿದ್ದಾದರೂ ಸರಿಯೇ. ಈ ಜನರೇಷನ್ ಗ್ಯಾಪ್ ಹೆಚ್ಚಲು ಇದೂ ಒಂದು ಕಾರಣವೇನೋ?!.

ಕಳೆದು ಹೋಗುವ ಭಯ

ಮೊದಲಿಗೆಲ್ಲ ಈ  ‘ಎಂಜೋಯ್ಡ್ ಯುವರ್ ಕಂಪನಿ’ಯ ಬಾಯಿ ಮಾತು ಅಥವಾ ಸಂದೇಶದ ಅಗತ್ಯವಿರುತ್ತಿರಲಿಲ್ಲ. ಅದರ ನಿಜವಾದ ‘ಎಂಜೋಯ್ಮೆಂಟ್’ ಮುಖಭಾವದಲ್ಲೂ, ಭಾವನೆಗಳಲ್ಲೂ, ಕಣ್ಣುಗಳಲ್ಲೂ ತುಂಬಿರುತ್ತಿತ್ತು! ಅರ್ಥವಾಗುವವರಿಗೆ, ಭಾವಗಳ ಬೆಲೆಯ ಅರಿವಿದ್ದವರಿಗೆ ಇದೂ ಅರಿವಾಗುತ್ತಿತ್ತು! ಪತ್ರಗಳಲ್ಲಿಯೂ ಹೇಳಬೇಕಾಗಿರಲಿಲ್ಲ! ಸುಮ್ಮನೆ ಅನುಭವಿಸಿ, ಅನುಭಾವಿಸುತ್ತಿದ್ದುದು ಅಷ್ಟೇ.

ಅದೊಂದು ನಿರಾಳ ಭಾವ ಆಗ! ಈಗ ಇದೂ ಸಹ ಒಂದು ರೀತಿಯಲ್ಲಿ ಫೋಮೋ (ಫಿಯರ್ ಆಫ್ ಮಿಸ್ಸಿಂಗ್ ಔಟ್, ಕಳೆದು ಹೋಗುವ ಭಯ) ಭಾವ! ನಾನು ಹಾಗೆ ಹೇಳದಿದ್ದರೆ ಅವರೇನಾದರೂ ಅಂದುಕೊಂಡರೆ? ಅಥವಾ ಹೇಳಿದರೆ ಇವರೇನಾದರೂ ಅಂದುಕೊಂಡರೆ? ಯಾವುದಕ್ಕೂ ಒಂದು ವಾಟ್ಸಾಪ್ ಮೆಸಜು ಹಾಕಿಬಿಡುತ್ತೇನೆ. ಹಾಕಿದ ಮೇಲೆ  ತಕ್ಷಣ ಆ ಕಡೆಯಿಂದ ಉತ್ತರ ಬಾರದಿದ್ದರೆ, “ಅಯ್ಯೋ, ಅವರೇನು ಅಂದುಕೊಂಡರೋ?”, ಎಂದು ಇನ್ನೊಂದು ರೀತಿಯ ಚಿಂತೆ.

ವಾಟ್ಸಾಪ್ ಭಾವ 

ಆಗಿನ ಕಾಲಕ್ಕೆ ನಮ್ಮ ಸಂಬಂಧಗಳ ಬಂಧದ ಕೊಂಡಿಯೆಂದರೆ ಈ ಪಾರಿವಾಳಗಳ ಸಂದೇಶ ಪತ್ರಗಳೇ! ಈಗ ಅದು ವಾಟ್ಸಾಪ್ ನುಂಗಿಬಿಟ್ಟಿದೆ. ಅದಕ್ಕೆ ಭಾವದ ಸರಿಯಾದ ಬಣ್ಣನೆ ಗೊತ್ತಿಲ್ಲ! ಬರಿಯ ಸಂದೇಶ ವಾಹಕಗಳಷ್ಟೇ. ವಾಟ್ಸಾಪ್ ಸಂದೇಶದಲ್ಲಿ ಒಂದು ಹೇಳಿದರೆ, ಇನ್ನೊಂದು ಎಂಬ ಭಾವಾರ್ಥ ಬರುತ್ತದೆ. ಅದು ಹಾಗೆ ಬರುತ್ತದೋ, ಅಥವಾ ಜನರು ಅರ್ಥ ಮಾಡಿಕೊಳ್ಳುವುದು ಬದಲಾಗಿದೆಯೋ? ಏನೋ ಒಂದು, ಇರಲಿ ಬಿಡಿ.

ಕೊನೆಯ ಸಾಲುಗಳು 

ಈಗ ಚಿಕ್ಕಿಗೆ ಹವಾಯ್ ಪತ್ರ ತಂದು ಬರೆದು ಕಳುಹಿಸಿದರೆ ಬರೆಯಲು ವಿಷಯವೇ ಸಿಗದೇನೋ?! ಏನೆಂದು ಬರೆಯಲಿ? ಮೊನ್ನೆ ಮೊನ್ನೆಯಷ್ಟೇ ವಿಡಿಯೋ ಕಾಲ್ ಮಾಡಿ ಮಾತನಾಡಿಯೂ ಆಗಿದೆ! ನೀವು ಯಾರಿಗಾದರೂ ಪತ್ರ ಬರೆದಿದ್ದೀರ? ಹೇಗಿತ್ತು ನಿಮ್ಮ ಅನುಭವ? ಮದುವೆಯಾದ ಹೊಸದರಲ್ಲಿ, ಮೊದಲ ಬಾರಿ ಘಟ್ಟದ ಮೇಲಿನ ಊರಿಗೆ ಹೋಗಿ ಹೊಸ ಜೀವನ ಆರಂಭಿಸಿದ ಅಕ್ಕನಿಗೆ ಬರೆದ ಪತ್ರಗಳ ಮಜವೇ ಬೇರೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ. 🙂 ಅದುವರೆಗೂ ಇದನ್ನು ಓದಿ, ಆನಂದಿಸಿ!

ಹಿಂದಿನ ಬುತ್ತಿ