ಕೂಡಿ – ಆಡಿ, ನೋವ-ನಲಿವ ಹಂಚಿಕೊಂಡ ಕೈಗಳು
ಕಾಣದಂತೆ ಮುಸುಕಿದ್ದವು ಬಿಗುಮಾನದ ಬೇಗೆಗಳು |
ಹತ್ತಿರವಿದ್ದರೂ ದೂರ ಸರಿದಿವೆ ಬೆಸೆದಿದ್ದ ಬಂಧಗಳು
ಸೆರಗಿನ ಕೆಂಡದಂತೆ ಸುಡುತಿದೆ ಸಂಬಂಧಗಳು ||

ರೆಕ್ಕೆ-ಪುಕ್ಕ ಬಲಿತ ಮೇಲೆ ತನ್ನದೇನಿದೆಯೆಂದು
ದೂರತೀರವ ಸೇರಿತ್ತು ಬರಿದಾದ ಮನ ತನ್ನದೆಂದು|
ಗುಟಿಕನಿತ್ತು ಗುಬ್ಬಿಯೇನೋ ಅಳಿಯಿತು
ಕಂಡರೂ ಕಾಣಿಸದ ಕಣ್ಣೀರು ಮಾತ್ರ ಉಳಿಯಿತು ||

ಕಾರ್ಮೋಡ ಸರಿದು, ಮಳೆಯು ಸುರಿದು
ಹಗುರಾಗಬೇಕಿದೆ ಮನದ ಮಾತುಗಳ ನುಡಿದು |
ತಂಗಾಳಿಯ ಬೀಸಣಿಕೆ ಬೀಸಬೇಕಿದೆ ಅರಿವಿನ ಬೆಳಗು
ಎತ್ತರಕ್ಕೆ ಇನ್ನೂ ಬೆಳೆಯಬೇಕಿದೆ ಭ್ರಾತೃತ್ವದ ಮೆರುಗು ||

– ಸ್ಮಿತಾ ಆಲಂಗಾರ್