ಘಟ್ಟದವಳು…! ಹೌದು…, ಅವಳು ಘಟ್ಟದವಳೆ. ಒಟ್ಟಿನಲ್ಲಿ ಪಶ್ಚಿಮ ಘಟ್ಟದ ಮೇಲಿನ ಊರು ಅವಳದು! ಅವಳ ಪರಿಚಯ ನಮಗಾಗಿದ್ದು ನಮ್ಮ ಅಣ್ಣನ ಮೂಲಕ! ಅದೊಂದು ದಿನ ನನ್ನ ಅಣ್ಣ ನಾನು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ ಮೊಬೈಲಿಗೆ ಒಂದು ಸಂದೇಶ ಕಳುಹಿಸಿ, ಕರೆ ಮಾಡಿ ಹೇಳಿದನು, “ಇದು ನಿನ್ನ ಅತ್ತಿಗೆಯಾಗುವವಳ ಈಮೇಲ್ ಐಡಿ ಮತ್ತು ಮೊಬೈಲ್ ನಂಬರ್. ಅವಳ ಜೊತೆ ಬೇಕಾದಾಗ ಮಾತನಾಡಬಹುದು. ಅವಳು ಸ್ವಲ್ಪ ನಿನ್ನ ಹಾಗೆಯೇ. ನಿಮ್ಮಿಬ್ಬರಿಗೆ ಚೆನ್ನಾಗಿ ಜೊತೆಯಾಗಬಹುದು”, ಎಂದು ಇನ್ನೂ ಏನೇನೋ ಹೇಳಿ ಕರೆ ಕಟ್ ಮಾಡಿದನು.
ಈ ಪುಣ್ಯಾತ್ಮ ಹೇಳುವುದಕ್ಕೆ ಮೊದಲೇ ನಮಗೆ ಗುಸು-ಗುಸು ಗಾಳಿ ಸುದ್ದಿಗಳು ಹಾಗೂ ಬೇರೆ-ಬೇರೆ ಮೂಲಗಳ ಮೂಲಕ ಅದಾಗಲೇ ಇವನು ಯಾರೋ ಘಟ್ಟದವಳನ್ನು ಮದುವೆಯಾಗಲಿದ್ದಾನೆಂದು ತಿಳಿದಿತ್ತು. ನಾನಾಗ ಹೇಗಿದ್ದೆನೆಂದರೆ, ಇವನು ಯಾರನ್ನಾದರೂ ಮದುವೆಯಾಗಲಿ, ಎಲ್ಲಾದರೂ ಹೋಗಲಿ. ನಂಗೇನಾಗಬೇಕಾಗಿದೆ. ಏನೋ ಒಂದು, ಎಂದುಕೊಂಡಿದ್ದೆನು. ಆದರೂ, ಮನದ ಮೂಲೆಯಲ್ಲಿ ಒಟ್ಟಿಗೆ ಆಡಿಬೆಳೆದ ಅಣ್ಣ ಇಷ್ಟು ಬೇಗ ಮದುವೆಯಾಗುವ ಸಮಯ ಬಂತಾ ಎಂದೆನಿಸಿದ್ದೂ ಸುಳ್ಳಲ್ಲ. ಜೊತೆಗೆ ಹೇಗಿರಬಹುದು ಈ ಹುಡುಗಿ?, ಎಂಬ ಕೆಟ್ಟ ಕುತೂಹಲ. ಹುಡುಗಿಯರಿಗೆ ಮಾಡಲು ಬೇರೆ ಕೆಲಸ ಬೇಕಲ್ಲ? ಸರಿಯೆಂದು, ಸುಮ್ಮನೆ ಏನೋ ಒಂದು ಹಾಯ್ ಎಂದೇನೋ ಸಂದೇಶ ಕಳುಹಿಸಿದ್ದೆನು ನಾನಾಗ ಅವಳಿಗೆ. ಅವಳು ಕರೆ ಮಾಡಿ ಏನೋ ಮಾತನಾಡಿದ್ದಳು ಕೂಡ!
ಅಂತೂ ನನ್ನ ಓದು ಮುಗಿಯುವಷ್ಟರಲ್ಲಿ ಅವರ ಮದುವೆಯೂ ಆಗಿತ್ತು! ಆಗ ಅವಳೊಂದಿಗಿನ ಒಡನಾಟ ಅಷ್ಟಕ್ಕಷ್ಟೇ. ದೂರದ ಊರುಗಳಲ್ಲಿ ಇದ್ದುದರಿಂದಲೋ ಏನೋ? ಅದೂ ಅಲ್ಲದೆ ಫೋನಿನಲ್ಲಿ ಕೂಡ ಕಡಿಮೆ ಮಾತುಗಳು ನಮ್ಮದು. ಅವಳಿನ್ನೂ ನಮ್ಮ ಮನೆಗೆ ಹೊಂದಿಕೊಳ್ಳುತಿದ್ದಳು. ಆಗೆಲ್ಲ ನನಗೆ ಈ ಅಣ್ಣ ಏನು ಹೇಳಿದ್ದೋ ಏನೋ? ಇವಳು ಸ್ವಲ್ಪ ನನ್ನ ಹಾಗೆ ಅಂತೆ, ಇವನ ತಲೆ. ಒಂದೋ, ಇವನಿಗೆ ನನ್ನ ಬಗ್ಗೆ ಸರಿಯಾಗಿ ಗೊತ್ತಿಲ್ಲ, ಅಥವಾ ಅವಳ ಬಗ್ಗೆ ಗೊತ್ತಿಲ್ಲ ಎಂದುಕೊಂಡಿದ್ದೆ. ವರ್ಷಗಳು ಉರುಳಿದಂತೆ ಅವನೇ ಸರಿಯೆನಿಸಿತು, ಅವಳೂ ಸಹ ಸ್ವಲ್ಪ ಮಟ್ಟಿಗೆ ನನ್ನಂತೆಯೇ ಎಂದು ಹೇಳಬಹುದು. ಅದಕ್ಕೆ ನಮಗೆ ಇಷ್ಟು ಒಳ್ಳೆ ಸ್ನೇಹ ಬೆಳೆದಿದ್ದೆಂದು ಈಗ ಅನಿಸುತ್ತಿದೆ. ಏನೋ ಒಂದು, ಒಟ್ಟಿನಲ್ಲಿ ಈಗ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್, ಅಷ್ಟೇ!
ಅಂದ ಹಾಗೆ, ನಾವಿಬ್ಬರೇ ಅಲ್ಲ. ನಾವು ೩-೪ ಜನ ಇದ್ದೇವೆ. ಇವಳೊಬ್ಬಳೇ… ಇವಳಿಗೆ ನಾವು ನಾದಿನಿಯರ ದಂಡೇ ಇದ್ದೇವೆ – 4 ಜನ! ಒಬ್ಬಳಿದ್ದರೇ ಕಷ್ಟ ಈಗಿನ ಕಾಲದಲ್ಲಿ ಕೆಲವರಿಗೆ, ಇನ್ನು ಇಲ್ಲಿ ನಾವು ೪ ಜನ! ನಾವೆಲ್ಲರೂ ಒಳ್ಳೆಯ ಫ್ರೆಂಡ್ಸ್!
ನಾನು ಬೆಂಗಳೂರಿಗೆ ಬಂದು ಸ್ವಲ್ಪ ಸಮಯವಾಗುತ್ತಲೇ ನಮ್ಮ ಓಡಾಟ, ಒಡನಾಟ ಸ್ವಲ್ಪ ಜಾಸ್ತಿಯಾಗಿದ್ದೆನ್ನಬಹುದು. ಹಾಗೆಂದು ನಾವೇನು ತಿಂಗಳಿಗೊಮ್ಮೆಯೂ ಭೇಟಿಯಾಗುತ್ತಿರಲಿಲ್ಲ ಕೆಲವೊಮ್ಮೆ ಬೆಂಗಳೂರಲ್ಲಿ. ನಮ್ಮದೇನಿದ್ದರೂ ಊರಿಗೆ ಹೋದಾಗಲೇ ಭೇಟಿ. ಮನೆಯಲ್ಲಿ ಹಬ್ಬದ ಸಂದರ್ಭ, ಅಥವಾ ಏನಾದರೂ ರಜೆ, ಮದುವೆ ಇತ್ಯಾದಿ ಹತ್ತಿರದ ನೆಂಟರ ಮನೆಯ ಕಾರ್ಯಕ್ರಮ ಹೀಗೆ – ಇವೇ ನಾವು ಭೇಟಿಯಾಗುತ್ತಿದ್ದ ಸಂದರ್ಭಗಳು! ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಬೆಂಗಳೂರಲ್ಲಿ ಸಿಗುತ್ತಿದ್ದರೂ ಹೇಳುವಂತಹ ಭೇಟಿಗಳೇನು ಅಲ್ಲ ಅವೆಲ್ಲ!
ಊರಿನ ಹಬ್ಬ-ಮದುವೆ-ಸಮಾರಂಭಗಳಲ್ಲಿ ಗಮ್ಮತ್ತಿದ್ದದ್ದು ಕೆಲವರು ಅವಳ ಬಳಿ ಕೇಳುತ್ತಿದ್ದುದು, “ನಿನಗೆ ಎಂಗಳ ಹವ್ಯಕ ಭಾಷೆ ಮಾತನಾಡುಲೆ ಬತ್ತ? ಅಡಿಗೆ ಗೊಂತಿದ್ದ? ನಿಂಗ ಘಟ್ಟಲ್ಲಿ ಹೆಚ್ಚು ಬೇಳೆಯೇ ಉಪಯೋಗಿಸುದಲ್ಲ? ಅವಂಗೆ ಈಗೆಲ್ಲ ಅಭ್ಯಾಸ ಆಯಿದಾಯಿಕ್ಕು”, ಹೀಗೆ ಒಂದಲ್ಲ ಎರಡಲ್ಲ, ಹತ್ತು-ಹಲವು ಪ್ರಶ್ನೆಗಳು. ಕೆಲವೊಂದು ತಮಾಷೆಯಾಗಿಯೂ ಇರುತ್ತಿದ್ದವು. ಸರಿಬಿಡಿ, ಅವಳು ಅದಕ್ಕೆಲ್ಲಾ ತಾಳ್ಮೆಯಿಂದಲೇ ಸತ್ಯವನ್ನೇ ಹೇಳಿ ಉತ್ತರಿಸುತ್ತಿದ್ದಳು. ಹೇಗೋ ದಿನಗಳು ಉರುಳಿದಂತೆ ಪ್ರಶ್ನೆಗಳೂ ಸ್ವಲ್ಪ ಕಡಿಮೆಯಾಗತೊಡಗಿದವು. ಅಲ್ಲದೇ, ಅವಳೂ ಸಹ ಊರಿಗೆ ಹೊಂದಿಕೊಂಡಳು ಎನ್ನಬಹುದೇನೋ.
ದೂರದವರಿಗೆಲ್ಲ ನೋಡಿದಾಗ ಅನಿಸುತ್ತಿತ್ತು, ಓಹ್ ಇವಳು ಎಷ್ಟು ಆರಾಮಾಗಿದ್ದಾಳೆ? ಎಲ್ಲರೂ ಇವಳಿಗೆ ಬೇಕಾದಂತೆ ಇದ್ದಾರೆ. ಯಾರೂ ಏನೂ ಹೇಳುವುದಿಲ್ಲ, ಕೇಳುವುದಿಲ್ಲ, ಎಷ್ಟು ಒಳ್ಳೆಯ ಅತ್ತೆ-ಮಾವ, ಗಂಡ-ನಾದಿನಿಯರು ಇತ್ಯಾದಿ ಇತ್ಯಾದಿ. ಆದರೆ ನಿಜ ಏನೆಂದು ಅವಳಿಗೆ ಮಾತ್ರ ಗೊತ್ತು! ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ!
ಹಾಗಾದರೆ ಇವರೆಲ್ಲ ಕೆಟ್ಟವರೆಂದ? ಅಲ್ಲವೇ ಅಲ್ಲ. ನಾನು ಹೇಳಿದ್ದು ಅವಳೂ ಸಹ ಎಲ್ಲರೂ ಅನುಭವಿಸುವಂತಹ ಜೀವನದ ಸಹಜ ಆಗುಹೋಗುಗಳು, ಮಾತುಗಳು, ಸಮಯ ಸಂದರ್ಭಗಳನ್ನು ಎದುರಿಸಿದ್ದಾಳೆ ಎಂದು. ಅತ್ತೆ-ಸೊಸೆ ಭಿನ್ನಾಭಿಪ್ರಾಯಗಳು, ನೆರೆಯವರ ಮುನಿಸು, ಅತ್ತಿಗೆ-ನಾದಿನಿಯರ ವೈಮನಸ್ಸು, ಅವರಿವರ ಮಾತುಗಳು.. ಇತ್ಯಾದಿ, ಇತ್ಯಾದಿ. ಎಷ್ಟೋ ಬಾರಿ ಮೌನವಾಗಿ ಅನುಭವಿಸಿದ್ದಾಳೆ, ಇನ್ನೆಷ್ಟೋ ಬಾರಿ ಹೊರಹಾಕಿದ್ದಾಳೆ, ಕೆಲವು ಬಾರಿ ನಕ್ಕು ಸುಮ್ಮನಾಗಿದ್ದಾಳೆ. ಯಾಕೆಂದರೆ ಅವಳಿಗೆ ಗೊತ್ತಿತ್ತು, ಅದು ಬೇರೆ ಊರಿನವಳು ಎಂದು ಅವಳಿಗೆ ಒಬ್ಬಳಿಗೇ ಆದ ಅನುಭವಗಳಲ್ಲ, ಸಾಮಾನ್ಯವಾಗಿ ಎಲ್ಲರಿಗೂ ಜೀವನದಲ್ಲಿ ಕೆಲವೊಂದು ಹಂತದಲ್ಲಿ ಆಗುವ ಒಳ್ಳೆಯ ಮತ್ತು ಕೆಟ್ಟ, ಕೆಲವೊಮ್ಮೆ ಎರಡೂ ಮಿಶ್ರಿತವಾದ ಸವಿಯೆಂದು. ಕೆಲವೊಮ್ಮೆ ಜನೆರೇಷನ್ ಗ್ಯಾಪ್ ಎಂದಾದರೆ ಇನ್ನು ಕೆಲವೊಮ್ಮೆ ಕೆಲವು ವಿಚಾರಗಳಲ್ಲಿ ಕೆಲವರ ಅನಗತ್ಯ ಮೂಗುತೂರುವಿಕೆ, ಇನ್ನು ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಅನಿವಾರ್ಯತೆ, ಹೊಂದಿಕೊಳ್ಳಬೇಕಾದ ಜೀವನದ ಅನುಭವದ ಪಾಠ.
ನಮ್ಮೂರಿನಲ್ಲಿ ವಿಟ್ಲ ಸೀಮೆ, ಪಂಜ ಸೀಮೆ, ಕುಂಬ್ಳೆ ಸೀಮೆ ಎಂದು ಒಂದೇ ಜಿಲ್ಲೆಯವರೇ ಹೊಂದಿಕೊಂಡುಹೋಗಲು ಹೆಣಗುತ್ತಾರೆ, ನಾ ಮೇಲು ತಾ ಮೇಲು ಎಂದು. ಇನ್ನು ಬೇರೆ ಊರಿನಿಂದ ಬಂದವರ ಕಥೆ ಕೇಳಬೇಕಾ? ಹಾಗೆಂದು ಅವಳು ಯಾರೊಂದಿಗೂ ಸಿಟ್ಟು ಮಾಡಿಕೊಳ್ಳಲಿಲ್ಲ. ನಾನು ನನ್ನ ಅಜ್ಜಿ, ಅಮ್ಮನಿಂದ ಈ ಸಿಟ್ಟು ಬಿಡುವ ಬಗೆ ಕಲಿತದ್ದು ಬಿಟ್ಟರೆ; ನನ್ನ ವಯಸ್ಸಿನವಳಿಂದ ತಾಳ್ಮೆ ಕಲಿತದ್ದೆಂದರೆ ಅದು ಇವಳಿಂದಲೇ. ಅದು ಹೇಗೋ ಈಸಿ ಜೈಸಿದಳೆಂದು ಹೇಳಬೇಕು ಅವಳ ಬಗ್ಗೆ! ಈಗ ಅವಳಿಗೆ ನಮ್ಮ ಊರಿನ ಭಾಷೆ ಚೆನ್ನಾಗಿಯೇ ಮಾತನಾಡಲು ಬರುತ್ತದೆ. ಹಾಗೆಯೇ ಊರಿನಲ್ಲಿ ಮಾಡಬೇಕಾದ ಬಗೆಬಗೆಯ ಹಬ್ಬ-ಹರಿದಿನ-ಪೂಜೆ-ಪುನಸ್ಕಾರಗಳು ಇತ್ಯಾದಿಗಳನ್ನೂ ಇಷ್ಟಪಟ್ಟು ಶ್ರದ್ಧೆಯಿಂದ ಕಲಿತಿದ್ದಾಳೆ.
ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಮಿತಭಾಷಿಯಾಗಿ ನಮ್ಮೊಂದಿಗೆ ಕಡಿಮೆ ಬೆರೆಯುತ್ತಿದ್ದ ಅಣ್ಣ ಮದುವೆಯ ನಂತರ, ಅದೂ ತೀರಾ ಇತ್ತೀಚೆಗೆ ನಮ್ಮೊಂದಿಗೆಲ್ಲಾ ಮನಬಿಚ್ಚಿ ಮಾತನಾಡಲು ಶುರು ಮಾಡಿದ್ದು ಇವಳಿಂದಲೇ ಎನ್ನಬಹುದು! ಹೆಚ್ಚಿನವರಿಗೂ ಅತ್ತಿಗೆ ಬಂದ ಮೇಲೆ ಅಣ್ಣನ ಸಂಬಂಧ ದೂರವಾಗುತ್ತಾ ಹೋದರೆ ನಮ್ಮದು ಉಲ್ಟಾ ಆಗಿದ್ದು ನನಗೆ ಅತ್ಯಂತ ಖುಷಿಯ ಸಂಗತಿ. ನಾನು ನಮ್ಮ ಸೋದರತ್ತೆಯರೆಲ್ಲ ಅಪ್ಪನಿಗೆ ಏನಾದರೂ ಹೇಳಬೇಕಾಗಿದ್ದನ್ನು (ಅದು ಬುದ್ಧಿವಾದವೇ ಇರಲಿ, ಬೇರೇನಾದರೂ ವಿಷಯವೇ ಇರಲಿ) ಅಮ್ಮನ ಬಳಿ ಹೇಳಿದಾಗ ಅವರಿಗೆ ಹೇಳುತ್ತಿದ್ದೆ, “ನೀವು ನೇರವಾಗಿ ನಿಮ್ಮ ಅಣ್ಣನ ಬಳಿ ಹೇಳಬಹುದಲ್ಲಾ? ಯಾಕೆ ಅತ್ತಿಗೆಯ ತಲೆ ತಿನ್ನುತ್ತೀರಿ?”, ಎಂದು! ಈಗ ಅರ್ಥವಾಗುತ್ತಿದೆ, ಅವರು ಹಾಗೆ ಯಾಕೆ ಮಾಡುತ್ತಾರೆಂದು. ಅವರಿಗೂ ಅಣ್ಣಂದಿರಿಗಿಂತ ಅತ್ತಿಗೆಯರೊಂದಿಗೆ ಜಾಸ್ತಿ ಸಲುಗೆ! ಈಗ ನಾವೂ ಸಹ ಅದನ್ನೇ ಮಾಡುವುದು, ಅತ್ತಿಗೆಯ ತಲೆತಿನ್ನುವುದು.
ಕೆಲವೊಮ್ಮೆ ಮಾತಿಗೆ ಘಟ್ಟದವಳು ಎಂದು ಕರೆಸಿಕೊಂಡಾಗಲೂ ನಮ್ಮೆದುರಿಗೆ ಬೇಸರಿಸಿಕೊಳ್ಳದೇ, ಇನ್ನು ಕೆಲವೊಮ್ಮೆ ನೇರವಾಗಿ ನಮ್ಮನ್ನು ಬೈಕೊಂಡಾದರೂ ನಮ್ಮೊಂದಿಗೆ ಬೆರೆತವಳು ನಮ್ಮ ಅತ್ತಿಗೆ. ನಿಜ ಹೇಳಬೇಕೆಂದರೆ ಅವಳನ್ನು ಅತ್ತಿಗೆ ಎಂದು ಈ ಲೇಖನದಲ್ಲಿ ಮಾತ್ರವೇ ಹೇಳಿದ್ದು ನಾನು! ಇಲ್ಲದಿದ್ದರೆ ಅವಳು ವಯಸ್ಸಿನಲ್ಲಿ ನಂಗಿಂತ ೧ ತಿಂಗಳು ದೊಡ್ಡವಳಾದರೂ ನಾನಂತೂ ಮೊದಲಿಂದಲೂ ಅವಳ ಹೆಸರು ಹಿಡಿದೇ ಕರೆದು ರೂಢಿಯಾಗಿಬಿಟ್ಟಿದೆ.
ಮನೆಯಲ್ಲಿ ಈಗಲೂ ದೊಡ್ಡವರೆಲ್ಲ ಸಂದರ್ಭ ಬಂದಾಗಲೆಲ್ಲ, ಅಣ್ಣನ ಹೆಂಡತಿ ವಯಸ್ಸಿನಲ್ಲಿ ಸಣ್ಣವಳಾದರೂ ಅತ್ತಿಗೆ ಎಂದು ಗೌರವದಿಂದ ಕರೆಯಬೇಕೆಂದು ತಾಕೀತು ಮಾಡುತ್ತಾರೆ. ನಾವಿಬ್ಬರೂ ಮುಖ-ಮುಖ ನೋಡಿಕೊಂಡು ನಕ್ಕು ಸುಮ್ಮನಾಗುತ್ತೇವೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವಳ ಹೆಸರೇ ಕರೆಯುತ್ತೇನೆ ನಾನು. ನಮ್ಮದು ಅತ್ತಿಗೆ-ನಾದಿನಿಗಿಂತ ಮೀರಿದ ಒಂದು ರೀತಿಯ ಸ್ನೇಹದ ಬಾಂಧವ್ಯ. ಹಾಗಾಗಿ ನಾವ್ಯಾರೂ ಉಳಿದ ಫಾರ್ಮಾಲಿಟಿಸ್ ಬಗ್ಗೆಯಾಗಲಿ, ಮಾತುಗಳಿಗಾಗಲಿ ಕಿವಿಗೊಡುವುದಿಲ್ಲ.
ಕೆಲವೊಂದು ಬಾರಿ ಊರಿಗೆ ಹೋದಾಗ ದೊಡ್ಡಮ್ಮ ಸಂಭ್ರಮದಿಂದ ಅತ್ತಿಗೆ ಈಗ ಹೀಗೇನೋ ಮಾಡುತ್ತಿದ್ದಾಳಂತೆ, ಅದೂ – ಇದೂ ಎಂದು (ಸಂಗೀತ ಕಲಿಯುತ್ತಾಳೆಂದೋ, ಹಾಡುತ್ತಾಳೆಂದೋ) ಏನೋ ಹೇಳುವಾಗ ಮೌನವಾಗಿ ಕೇಳಿಸ್ಕೊಂಡು ನಕ್ಕು ತಲೆಯಾಡಿಸುತ್ತಿದ್ದೆ ನಾನು; ಅವರಿಗೆ ಬೇಜಾರಾಗಬಾರದೆಂದು. ಈಗ ಅವರೇ ಹೇಳುತ್ತಾರೆ, “ನಿನಗೆ ಗೊತ್ತಿಲ್ಲದೆಯಾ? ನಿಮ್ಮ ೪ ಜನಕ್ಕೆ ನಮ್ಮೆಲ್ಲರಿಗಿಂತ ಮೊದಲು ಹೇಳಿರುತ್ತಾಳೆ ಅವಳು. ನಾನು ಸುಮ್ಮನೇ ಒಂದು ವಿಷಯ ಎಂದು ನಿನ್ನೊಂದಿಗೆ ಸೊಸೆಯ ವಿಚಾರ ಹಂಚಿಕೊಳ್ಳಬೇಕಷ್ಟೆ. ಮಹಾನ್ ಫ್ರೆಂಡ್ಸ್ ನೀವೀಗ. ನೀವೆಲ್ಲ ಒಂದೇ ಪಾರ್ಟಿ ಅಲ್ಲ? ನಮ್ಮದೇನಿದೆ ಹೇಳಲು ಇಲ್ಲಿ ಕೂತು?” ಎಂದು!
ಈಗ ಅಂತೂ ಊರಿನಲ್ಲಿ ಎಲ್ಲರಿಗೂ ಗೊತ್ತಾಗಿಬಿಟ್ಟಿದೆ ಕೆಲವೊಂದು ವಿಚಾರಗಳಲ್ಲಿ ನಾವೆಲ್ಲರೂ ಒಂದೇ ಪಾರ್ಟಿ ಎಂದು. ಕೆಲವು ಸಣ್ಣ-ಪುಟ್ಟ ಅಭಿಪ್ರಾಯ ಭೇದಗಳಿದ್ದರೂ, ಅದು ನಮ್ಮ ವೈಯಕ್ತಿಕ ನೋಟ ಮತ್ತು ಕೆಲವೊಂದು ವಿಚಾರಧಾರೆಗಳಷ್ಟೇ. ಅದನ್ನು ಪರಸ್ಪರ ಗೌರವಿಸಿಯೇ ಗೌರವಿಸುತ್ತೇವೆ. ಅದು ಪ್ರತಿಯೊಬ್ಬರಿಗೂ ಗೊತ್ತಿರುವುದಕ್ಕೇ ಕೆಲವೊಂದು ವಿಚಾರಗಳನ್ನು ಅಲ್ಲಿಗೇ ಬಿಟ್ಟು ಮುನ್ನಡೆಯುತ್ತೇವೆ ಸಂದರ್ಭಕ್ಕನುಸಾರವಾಗಿ.
ಅಂದ ಹಾಗೆ, ಇಲ್ಲಿ ಹಾಕಿರುವುದು ಅವಳೇ ಬಿಡಿಸಿದ ಚಿತ್ರ. ಅದನ್ನು ಅವಳು ನಮ್ಮೊಂದಿಗೆ ಕಳೆದ ವರ್ಷ ಹಂಚಿಕೊಂಡಾಗಲೇ ನನಗೆ ಈ ಘಟ್ಟದವಳು ಹೊಳೆದಿದ್ದು. ಅದು ಹೊರಬರಲು ಅವಳ ಹುಟ್ಟಿದಹಬ್ಬವೇ ಬರಬೇಕಾಯಿತು ನೋಡಿ. “ಲೇ .. ಹ್ಯಾಪಿ ಬರ್ತ್ ಡೇ ಕಣೆ… ಹ್ಯಾವ್ ಆ ಗ್ರೇಟ್ ಇಯರ್ ಅಹೆಡ್ .. ಚೆನ್ನಾಗಿ ಕತ್ತರಿಸು ನಮ್ಮಣ್ಣನ ಜೇಬನ್ನು.. ಆಮೇಲೆ ಈ ವೀಕೆಂಡ್ ನಮಗೂ ಒಂದು ಪಾರ್ಟಿ ಕೊಡಿಸು 😉 .. ಟೇಕ್ ಕೇರ್ ..”.
**********
ಒಂದು ವರ್ಷದಿಂದ ಬರೆಯಬೇಕೋ ಬೇಡವೋ ಎಂದು ಯೋಚನೆ ಮಾಡಿ – ಮಾಡಿ ಬರೆದ ಬರಹವಿದು. ಎಷ್ಟೋ ಬಾರಿ ಯಾರಾದರೂ ಏನಾದರೂ ಅಂದುಕೊಂಡರೆ, ಅತ್ತೆ-ಸೊಸೆ ಅಥವಾ ನಾದಿನಿಯರ ಬಗ್ಗೆ ಕೆಟ್ಟದಾಗಿ ಕಲ್ಪಿಸಿಕೊಂಡರೆ, ಹೀಗೆ; ಏನೇನೋ ಸಲ್ಲದ ಗೊಂದಲಗಳು ಮನದ ಮೂಲೆಯಲ್ಲಿ. ಮತ್ತೆ ಕೆಲವೊಂದು ಬಾರಿ ಎಲ್ಲ ಚೆನ್ನಾಗಿದೆಯೆಂದು ಹೇಳಿದ ತಕ್ಷಣ ಕೆಲವೊಮ್ಮೆ ಅಚಾನಕ್ಕಾಗಿ ಏನೇನೋ ಆಗಿಹೋದ ಅನುಭವಗಳು ಬೇರೆ ಜೊತೆಯಾಗಿವೆ ಬದುಕಿನುದ್ದಕ್ಕೂ. ಹಾಗಾಗಿ ಅದೇನೋ ಮೂಢನಂಬಿಕೆಯೆಂದು ನನ್ನನ್ನು ಜರಿದರೂ ಪರವಾಗಿಲ್ಲ, ಅದೊಂದು ರೀತಿಯ ಹಿಂಜರಿಕೆಯಾಗಿ ಬರೆಯಲು ಹಿಂದೇಟು ಹಾಕಿದ್ದು ಸುಳ್ಳಲ್ಲ. ಈಗ ಅದೊಂದು ರೀತಿಯ ಧೈರ್ಯ ಬಂತು, ಈ ಒಂದು ವರ್ಷದಲ್ಲಿ ನಡೆದ ಬೆಳವಣಿಗೆಗಳಿಂದ.
೧೨ ವರ್ಷಗಳ ಒಡನಾಟದಲ್ಲಿ ಅವಳ ಸ್ವಭಾವದ ಬಗ್ಗೆ ಅರಿವಾಗಿ ಒಂದು ರೀತಿಯ ನಂಬಿಕೆ, ವಿಶ್ವಾಸ. ಯಾರು ಏನೇ ಹೇಳಿದರೂ, ಮಾಡಿದರೂ, ಆಡಿಕೊಂಡರೂ ಅವಳು ನಮ್ಮ/ನನ್ನ ಬಳಿ ನೇರವಾಗಿ ವಿಚಾರಿಸದೆ ಎಲ್ಲವನ್ನೂ ಬಿಟ್ಟು ದೂರ ನಡೆಯುವವಳಲ್ಲ, ಅದು ಅವಳ ಸ್ವಭಾವವೂ ಅಲ್ಲ. ಏನಾದರೂ ತಪ್ಪು ಕಲ್ಪನೆ ಅಥವಾ ಭಿನ್ನಾಭಿಪ್ರಾಯಗಳು ಮುಂದೆ ಯಾವುದೋ ಸಂದರ್ಭದಲ್ಲಿ ಒದಗಿಬಂದರೂ ಅಣ್ಣನನ್ನೂ ಸಹ ಜೊತೆಯಲ್ಲಿ ಕೂರಿಸಿಕೊಂಡೇ ನಮ್ಮೊಂದಿಗೆ ನೇರವಾದ ಮಾತುಕತೆಗಳಿಂದ ಏನಿದ್ದರೂ ಬಗೆಹರಿಸಿಕೊಳ್ಳುವ ದಾರಿ ಹುಡುಕಲು ಅವಳು ನಮ್ಮ ಜೊತೆಯಾಗುತ್ತಾಳೆ ಎಂದು! ಬೇರೆಯವರ ಮಾತಿಗಿಂತ ನಮ್ಮ ಮಾತಿಗೆ ಜಾಸ್ತಿ ಬೆಲೆ ಕೊಡುವಳೆಂದು.
Once Again,… Wish You a Very Happy Birthday… !
