ಮುಂಜಾವಿನ ಅರುಣ ರಾಗದ ಹೊತ್ತಲಿ,
ಹನಿ ಮುತ್ತಿಕ್ಕಿದ ಕದವ ತೆರೆದ ಪರಿಯಲಿ,
ಕಣ್ಣಿಗೆ ಕಂಡ ಭಾವವು ಅದೆಂತದೋ ?

ಪಟ-ಪಟನೆ ಆಡಿದ ಮಾತದೆಂತದೋ ?
ಲಗು-ಬಗೆಯಲಿ ಎಲ್ಲ ತೊರೆದು ನಿಂತು,
ದಿಟ್ಟಿಸಿ ನೋಡಿದ ನೋಟವದೆಂತದೋ?

ಸಾಲಂಕೃತ ಜರತಾರಿ ಸೀರೆಯ ಮರೆಯಲಿ,
ತುಟಿಗಳಂಚಿನಲಿ ಕಳೆಕಟ್ಟಿದ ನಸುನಗುವಲಿ
ಮರೆಯಾಗಿ ಕುಳಿತಿದ್ದವು ಮನದ ಭಾವಗಳು!

ಹಿಂದೆ ಸರಿದು ನೋಡಿದರೆ ಕಾಣಸಿಗುತಲಿತ್ತು,
ಹೃದಯಾಂತರಾಳದ ಭಾವಗಳ ತರಂಗದಲಿ,
ಹಿಡಿದಿಟ್ಟ ಸೋಜಿಗದ ಅಳಿಸಲಾಗದ ಕ್ಷಣಗಳು!

ನಕ್ಕು, ಚೆಂದಕೆ, ಮುದದಿ ನುಡಿದ ಮಾತುಗಳಿಗೆ,
ಮನದ ಮಗ್ಗುಲ ಒಲವಿಂದ ಬದಲಿಸಿದರೂ,
ತಿರುಗಿ ಕೇಳುತಿತ್ತು, ಸಾವಿರ ಪ್ರಶ್ನೆಗಳಿಗೆ ಉತ್ತರ!

– ಸ್ಮಿತಾ ಆಲಂಗಾರ್