ಭಾಗ – ೮
ಸುನಂದಾರನ್ನು ಸಮಾಧಾನಿಸುತ್ತಾ ಶಿವರಾಮ, “ನೋಡು ಸುನಂದಾ, ಈಗೆಲ್ಲಾ ಮೊದಲಿನಂತಲ್ಲ. ನಮ್ಮ ಕಾಲದಲ್ಲಾದರೆ ಮಕ್ಕಳ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿಗೆ ಹಿರಿಯರ ಸಹಮತ ಇರಲೇಬೇಕಿತ್ತು. ಕಾಲ ಬದಲಾಗಿದೆ. ಈಗೆಲ್ಲಾ ಮಕ್ಕಳ ಮಾತಿಗೆ ಬೆಲೆ ಕೊಡುವುದೇ ಉತ್ತಮ. ಸಾಕ್ಷಿ ಹೊರಗಿನಿಂದ ಸ್ವಲ್ಪ ಒರಟು, ದರ್ಪ ತೋರಿದರೂ, ಮೃದು ಹೃದಯಿ, ಮಿತ ಭಾಷಿ. ಕ್ರಮೇಣ ನಮ್ಮ ಮನೆಗೆ ಹೊಂದಿಕೊಳ್ಳಬಹುದು. ಸೂರ್ಯ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದಾನೆಂದು ಹೇಳಿದಾಗಲೇ, ರತ್ನಂಗೆ ಫೋನ್ ಮಾಡಿ ವಿಚಾರಿಸಿದ್ದೆ. ಅವಳು ಸಾಕ್ಷಿಯೂ ಬೆಂಗಳೂರಿಗೆ ಹೋಗಿರುವ ವಿಚಾರ ತಿಳಿಸಿದಾಗಲೇ ಅಂದುಕೊಂಡಿದ್ದೆ, ನಮ್ಮ ಮಗನ ತಲೆ ತುಂಬಾ ಸಾಕ್ಷಿಯೇ ತುಂಬಿದ್ದಾಳೆಂದು. ನೋಡೋಣ. ಮುಂದೇನಾಗುತ್ತದೋ? ಎಲ್ಲಾ ಋಣಾನುಬಂಧ. ಬೇಗನೆ ತಾಂಬೂಲದ ತಟ್ಟೆ ತಯಾರು ಮಾಡು, ಹೊರಡೋಣ”, ಎಂದರು.
ಕಾರ್ ರತ್ನಮ್ಮನ ಮನೆಯತ್ತ ಹೊರಟಾಗಲೂ ಸುನಂದಾ ಮೌನವಾಗಿದ್ದುಕೊಂಡೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಡಾಕ್ಟರ್ ಸೊಸೆಯೊಂದಿಗೆ ಮಗನೂ ವಿದೇಶದಲ್ಲಿ ಸೆಟ್ಲ್ ಆಗುವುದರ ಬಗ್ಗೆ ಕನಸು ಕಂಡಿದ್ದರು. ಬಂಧು-ಬಳಗಕ್ಕೆಲ್ಲಾ ತಮ್ಮ ತವರು ಮನೆ ವೈಭವದೊಂದಿಗೆ; ಮಗನೂ ಸಿರಿವಂತನಾಗುವುದನ್ನು ತೋರಿಸಿಕೊಳ್ಳುವ ತವಕದಲ್ಲಿದ್ದವರಿಗೆ ಯಾಕೋ ತಮ್ಮ ಮಗ ಸಾಕ್ಷಿಯನ್ನು ಇಷ್ಟಪಟ್ಟಿದ್ದು ಸರಿ ಕಾಣಲಿಲ್ಲ. ಅಣ್ಣ ಹೇಗಿದ್ದರೂ ಅಮೇರಿಕಾದಲ್ಲೇ ಸೆಟ್ಲ್ ಆದ ಡಾಕ್ಟರ್. ಚೇತನಾ ಅಲ್ಲದಿದ್ದರೂ, ಯಾರಾದರೂ ಅವನ ಪರಿಚಯದ ಡಾಕ್ಟರ್ ಹುಡುಗಿಯನ್ನೇ ಸೊಸೆಯಾಗಿ ತಂದುಕೊಳ್ಳಬಹುದಿತ್ತು ಎನ್ನುವ ಆಸೆ ಮನದ ಮೂಲೆಯಲ್ಲಿ ಇನ್ನೂ ಜೀವಂತವಾಗಿತ್ತು.
ಇದನ್ನು ಅರಿತವನಂತೆ ಸೂರ್ಯ, “ಅಮ್ಮಾ, ಹೀಗೆ ಗಂಟು ಮುಖ ಮಾಡಿಕೊಂಡು, ಮೌನವಾಗಿದ್ರೆ ಹೇಗೆ? ನಿನ್ನ ಇಷ್ಟಕ್ಕೆ ವಿರುದ್ಧವಾಗಿ ಸಾಕ್ಷಿಯ ಕೈ ಹಿಡಿದರೆ ನಾವಿಬ್ಬರೂ ಸುಖವಾಗಿ ಇರ್ತೀವಿ ಅನಿಸುತ್ತಿಲ್ಲ. ಹಾಗೆಯೇ ನಿನ್ನಿಷ್ಟಕ್ಕೆ ವಿರುದ್ಧವಾಗಿ; ಅತ್ತೆಯೂ ಅವಳನ್ನು ನನಗೆ ಮದುವೆ ಮಾಡಿಕೊಡುವುದಕ್ಕೆ ಒಪ್ಪುವುದಿಲ್ಲ. ಆದರೆ, ನಾನು ಬೇರೆ ಯಾರನ್ನೂ ಮದುವೆ ಅಗುವುದೂ ಇಲ್ಲ. ಸುಮ್ಮನೆ ಅಲ್ಲಿ ಹೋಗಿ ಅವಮಾನ ಮಾಡುವುದಕ್ಕಿಂತ ವಾಪಾಸ್ ಹೋಗೋಣ ಬಿಡು”, ಎಂದು ಗಾಡಿ ತಿರುಗಿಸಲನುವಾದನು.
ಶಿವರಾಮ ಅವನನ್ನು ತಡೆದು, “ಒಟ್ಟಾಗಿ ಬಂದ ಆಘಾತಗಳನ್ನು ಜೀರ್ಣಿಸಿಕೊಳ್ಳಲು ಅವಳಿಗೆ ಸ್ವಲ್ಪ ಸಮಯ ಕೊಡು. ಶುಭ ಕಾರ್ಯಕ್ಕೆ ಹೊರಟದ್ದಾಗಿದೆ. ಮುಂದಕ್ಕೆ ಹೋಗೋಣ”, ಎಂದರು.
*****
ಕಾನ್ಫರೆನ್ಸಿಂದ ಬಂದಾಗಿಂದ ಲವ-ಲವಿಕೆಯಲ್ಲಿರುವ ಮಗಳನ್ನು ನೋಡಿದ ರತ್ನಮ್ಮನಿಗೆ ಆಶ್ಚರ್ಯ! ಇತ್ತೀಚೆಗೆ, ಯಾವಾಗಲೂ ಯಾವುದೋ ಯೋಚನೆಯಲ್ಲಿ ತನ್ನ ಪಾಡಿಗೆ ತಾನಿರುವವಳು ಅಂದು ಬೆಳಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ, ಉಪ್ಪಿಟ್ಟು-ಕೇಸರಿಬಾತ್ ಬೇರೆ ಮಾಡಿಟ್ಟಿದ್ದಾಳೆ. ಏನಾಗಿದೆ ಇವಳಿಗೆ?!. ಮನಸ್ಸಲ್ಲೇ ಸಂತೊಷವಾದರೂ ಒಂದು ಮೂಲೆಯಲ್ಲಿ ಸುನಾಮಿಯ ಸೂಚನೆಯೇ ಎಂದು ಭಯವೂ ಆಯಿತವರಿಗೆ.
ಅಷ್ಟರಲ್ಲಿ ಹೊರಗಡೆ ಗಾಡಿ ಸದ್ದಾದಂತೆನಿಸಿ, ಬಾಗಿಲ ಬಳಿ ಬಂದರು. ಸೂರ್ಯನೊಡನೆ ಗಾಡಿಯಿಂದಿಳಿಯುತ್ತಿದ್ದ ಅಣ್ಣ-ಅತ್ತಿಗೆ, ಜೊತೆಯಲ್ಲಿ ತಾಂಬೂಲದ ತಟ್ಟೆಯನ್ನೂ ನೋಡಿ ಅವಕ್ಕಾದರು! ಮನಸ್ಸು ಗೊಂದಲದ ಗೂಡಾಗಿತ್ತು.
ಶಿವರಾಮ ಬಂದವರೇ, “ಏನು ರತ್ನ? ಒಳಗೆ ಕರೆಯುವುದಿಲ್ಲವೇ?” ಎಂದರು.
ರತ್ನಮ್ಮ ಸುಧಾರಿಸಿಕೊಳ್ಳುತ್ತಾ, “ಬನ್ನಿ-ಬನ್ನಿ” ಎಂದರು.
ಸೂರ್ಯ, “ಏನತ್ತೇ, ಹೆಣ್ಣು ಕೇಳುವುದಕ್ಕೇ ಬಂದಿರುವುದು. ಮಗಳನ್ನು ಮದುವೆ ಮಾಡಿ ಕೊಡುವ ಯೋಚನೆ ಇಲ್ಲವೇ ನಿಮಗೆ?” ಎಂದನು ನೇರವಾಗಿ ಒಳ ಬರುತ್ತಲೇ ಅವರ ಪ್ರಶ್ನಾರ್ಥಕ ಮುಖಭಾವವನ್ನು ಅರಿತವನಂತೆ.
ರತ್ನಮ್ಮ ನಗುತ್ತಾ, “ಹಾಗೇನಿಲ್ಲಪ್ಪಾ. ಬೆಳಗ್ಗೆ ಸಾಕ್ಷಿಯನ್ನು ನೋಡಿ ಸೂರ್ಯ ಇವತ್ತು ಪಶ್ಚಿಮದಲ್ಲಿ ಉದಯಿಸಿದ್ದಾನೇನೋ ಅನಿಸಿತ್ತು. ಈಗ ಸೂರ್ಯ ಮನೆಯವರೊಂದಿಗೆ ನಮ್ಮ ಮನೆಗೇ ಬಂದಿಳಿದಾಗ, ನಿಧಾನವಾಗಿ ಒಂದಕ್ಕೊಂದು ಅರ್ಥ-ಸಂಬಂಧ ಕಾಣಿಸುತ್ತಿದೆ”, ಎಂದರು.
ಸೂರ್ಯ ನಗುತ್ತಾ, “ಹಾಂ ಅತ್ತೇ. ಹಾಗೆಯೇ ಈ ಸೂರ್ಯನ ಬೆಂಗಳೂರು ಪ್ರಯಾಣ ಯಶಸ್ವಿಯಾಯ್ತು. ಹಾಗೆಯೇ ನಿಮ್ಮ ಮಗಳ ಕಾನ್ಫರೆನ್ಸ್ ಕೂಡ!”, ಎಂದನು.
“ಅಂತೂ ನೀನು ಒಳ್ಳೇ ಸೈಕಿಯಾಟ್ರಿಸ್ಟ್ ಅಂತ ಪುರಾವೆ ಸಿಕ್ತು ನೋಡು”, ಎಂದರು ರತ್ನಮ್ಮ.
“ನಿಮ್ಮ ಮಗಳಿಗೆ ಮನಃಶಾಸ್ತ್ರಜ್ಞ ಅಲ್ಲ, ಒಳ್ಳೆಯ ಸ್ನೇಹಿತರೊಬ್ಬರ ಅವಶ್ಯಕತೆಯಿತ್ತು. ಎಲ್ಲಾ ವಿಷಯದಲ್ಲೂ ನೀವೇ ಅವಳ ಗೆಳತಿಯಾದರೂ, ಅವಳ ಈ ಕಥೆಯಲ್ಲಿ ನೀವೇ ವಿಲ್ಲನ್ ಆದುದರಿಂದ ಅದು ನಿಮ್ಮಿಂದಾಗಲಿಲ್ಲ ಅಷ್ಟೆ”, ಎಂದನು ಸೂರ್ಯ.
ಎಲ್ಲರೂ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದಾಗಲೇ ಸೂರ್ಯನಿಗೆ ತನ್ನ ತಪ್ಪಿನ ಅರಿವಾಗಿದ್ದು. ಕೂಡಲೇ, “ಅದೆಲ್ಲಾ ಬಿಡಿ; ಒಟ್ಟಿನಲ್ಲಿ ಈಗ ಎಲ್ಲಾ ಸರಿ ಹೋಗಿದೆ, ಚೆನ್ನಾಗಿದೆ. ಎಲ್ಲಿ ನಿಮ್ಮ ಮಗಳು? ತಾನು ಮಾಡಿದ ಉಪ್ಪಿಟ್ಟು-ಕೇಸರಿಬಾತನ್ನು ತಾನೊಬ್ಬಳೇ ತಿಂದು ಖಾಲಿ ಮಾಡುತ್ತಿದ್ದಾಳಿರಬೇಕು” ಎಂದು ಸಾಕ್ಷಿಯ ರೂಮಿನತ್ತ ನಡೆದನು. ಎಲ್ಲರ ಎದುರಿಗೆ, ಸಾಕ್ಷಿಯೊಂದಿಗೆ ಮಾತನಾಡಿದ ವಿಚಾರಗಳನ್ನು ವಿವರಿಸಿ, ರತ್ನಮ್ಮ-ಸಾಕ್ಷಿಯರಿಗೆ ಬೇಜಾರು-ಮುಜುಗರವುಂಟುಮಾಡುವುದು ಬೇಡವಾಗಿತ್ತು ಅವನಿಗೆ.
ರತ್ನಮ್ಮ ಎದ್ದು, ಸುನಂದಾರೊಡಗೂಡಿ, ಹಬ್ಬದ ಅಡುಗೆ ತಯಾರಿಗೆ ಒಳಗಡಿಯಿಟ್ಟರು. ಮಗಳ ಮದುವೆ ಮಾತು-ಕಥೆ, ಬಹು ದಿನಗಳ ನಂತರ ಎಲ್ಲರೂ ಜೊತೆಯಾಗಿ ಹಬ್ಬ ಆಚರಿಸುತ್ತಿರುವುದು ಇವೆಲ್ಲಾ, ಅವರ ಸಂಭ್ರಮಕ್ಕೆ ಕಾರಣವಾಗಿದ್ದವು. ಎಲ್ಲವೂ ಸುಖಾಂತ್ಯವಾಗುತ್ತಿದೆಯೆಂದು ಶಿವರಾಮರೂ ನಿರಾಳವಾಗಿ ತೋಟದತ್ತ ಹೆಜ್ಜೆ ಹಾಕಿದರು.
*** ಮುಕ್ತಾಯ ***
“ಹೇ, ಒಬ್ಬಳೇ ಇಲ್ಲೇನು ಮಾಡುತ್ತಿದ್ದೀಯಾ? ಸಾಕು ನಿನ್ನ ನಾಟಕ”, ಎಂದು ರೂಮಿನಲ್ಲಿ ಒಬ್ಬಳೇ ಕುಳಿತಿದ್ದ ಸಾಕ್ಷಿಯ ಕಿವಿ ಹಿಂಡಿದನು ಸೂರ್ಯ.
“ಏನು?”, ಎಂಬಂತೆ ಮುಗ್ಧವಾಗಿ ಅವನತ್ತ ನೋಡಿದಳು ಸಾಕ್ಷಿ.
ಅವನು ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಹೇಳಿದನು, “ನೋಡು ಸಾಕ್ಷಿ, ಹೀಗೆ ಹೇಳುತ್ತೀನಿ ಅಂತ ಬೇಜಾರು ಮಾಡಿಕೊಳ್ಳಬೇಡ, ತಪ್ಪು ತಿಳಿಯಬೇಡ. ಮುಂದೆಯೂ ನಮ್ಮ ಜೀವನದಲ್ಲಿ ತುಂಬಾ ಜನ ಆಡಿಕೊಳ್ಳುವವರು, ಹಿಂದಿಂದ ಮಾತನಾಡಿಕೊಳ್ಳುವವರು ಇರುತ್ತಾರೆ. ಅದಕ್ಕೆಲ್ಲಾ ನೀನು ಸಿದ್ಧಳಿರಬೇಕು. ನನ್ನ ಅಮ್ಮನ ಬಗ್ಗೆಯೂ ನಿನಗೆ ಗೊತ್ತೇ ಇದೆ. ಹಾಗೆಯೇ ನನ್ನ-ನಿನ್ನ ಅಥವಾ ನಮ್ಮ ಮನೆಯವರ ಬಗ್ಗೆ, ವಿವಿಧ ಬಗೆಯಾಗಿ ಮಾತನಾಡಿ; ನಮ್ಮ ಹಾಗೂ ನಮ್ಮ ಮನೆಯವರ ನಡುವೆ ಬಿರುಕು ನೋಡಿ ಸಂತೋಷಪಡುವವರಿಗೇನೂ ಬರವಿರುವುದಿಲ್ಲ. ಏನೇ ಕೇಳಿಸಿಕೊಂಡರೂ, ಏನೇ ಆದರೂ ನೀನು ನನ್ನಲ್ಲಿ ಅಥವಾ ಮನೆಯವರ ಬಳಿ ನೇರವಾಗಿ ವಿಚಾರಿಸದೆ ನಿನ್ನದೇ ನಿರ್ಧಾರಗಳಿಗೆ ಬಂದು ಬಿಡಬೇಡ. ದುಡುಕಬೇಡ. ಎಲ್ಲವನ್ನೂ ನಿಧಾನಕ್ಕೆ ನನ್ನೊಂದಿಗೆ ಚರ್ಚಿಸು. ಹಾಗೆಯೇ, ಸಾಧ್ಯವಾದರೆ, ನಿನ್ನಲ್ಲಿ ಕಿವಿಮಾತು ಹೇಳಿ ಆಡಿಕೊಂಡವರನ್ನೂ ಜೊತೆಗೆ ಕರೆ ತಂದು ಎದುರು-ಬದುರಾಗಿ ಮಾತನಾಡುವ ಸದವಕಾಶವಿದ್ದರೆ ಅದು ಇನ್ನೂ ಉತ್ತಮ. ಅವರಿಗೂ ಒಳ್ಳೆಯ ಅನುಭವ” ಎಂದನು ಕಣ್ಣು ಮಿಟಿಕಿಸುತ್ತಾ.
ಅವಳು ನಗುತ್ತಾ, “ನೀನು ನನ್ನ ಜೊತೆಯಿರುವಾಗ ನನಗೆ ಯಾರ ಯೋಚನೆಯೂ ಇಲ್ಲ”, ಎಂದು ಅವನೆದೆಗೊರಗಿದಳು.
**********************
ಕೊನೆ ಮಾತು:
ಹೆಣ್ಣು ಭಾವ ಜೀವಿ. ಅವಳ ಕಲ್ಪನೆಗಳು ಊಹೆಗೂ ಮೀರಿದ್ದು. ಕೆಲವೊಂದು ಬಾರಿ ತನ್ನ ಯೋಚನಾಲಹರಿಗಳಿಂದ ಹೊರಬರಲು ಹರಸಾಹಸಪಡುತ್ತಿರುತ್ತಾಳೆ. ಅದರಲ್ಲೂ ಸಾಕ್ಷಿಯಂತಹ ಅಂತರ್ಮುಖಿ ಹುಡುಗಿಯರಿಗೆ ಇದು ಬಹಳ ಸೂಕ್ಷ್ಮ ಹಾಗೂ ಕಷ್ಟಕರವಾದ ಸಂಗತಿ. ಹೊರಗಡೆ ಎಷ್ಟೇ ನಾರ್ಮಲ್ ಆಗಿ ಕಂಡರೂ ಅವರ ಮನಸ್ಸಿನೊಳಗಿಂದ ಅವರಿಗರಿವಿಲ್ಲದಂತೆ, ಸಮುದ್ರದಲೆಗಳ ಭೋರ್ಗರೆತಗಳಾಗುತ್ತಿರುತ್ತವೆ. ಅಪರೂಪಕ್ಕೆ, ರತ್ನಮ್ಮನಂತಹ ಸಹೃದಯಿ, ಸಂವೇದನಾಶೀಲರೂ ಆದ ಆಪ್ತರೂ, ಸೂರ್ಯನಂತಹ ಗೆಳೆಯ-ಗೆಳತಿಯರು ಇಂತಹುದನ್ನು ಗುರುತಿಸಿ, ಇದರಿಂದ ಹೊರಬರಲು ಸಹಾಯ ಮಾಡಿ, ಸಾಂತ್ವನ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನೆಷ್ಟೋ ಮಂದಿಯಲ್ಲಿ ಕೆಲವೊಂದು ಜ್ವಾಲಾಮುಖಿ ಹಾಗೆಯೇ ಅವರಿಗೇ ಅರಿವಿಲ್ಲದಂತೆ ಒಳಗಿಂದಲೇ ಕುದಿಯುತ್ತಿರುತ್ತದೆ.
**************************
ಕಥೆಯನ್ನು ಓದಿ, ಅಭಿಪ್ರಾಯವನ್ನು ವ್ಯಕ್ತಪಡಿಸಿದ, ಪ್ರೋತ್ಸಾಹಿಸಿದ ಎಲ್ಲಾ ಸಹೃದಯ ಓದುಗರಿಗೂ ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಅಭಿಪ್ರಾಯ, ಸುಧಾರಣೆ, ಸಲಹೆ-ಸೂಚನೆ, ಅನಿಸಿಕೆಗಳನ್ನು ದಯವಿಟ್ಟು ತಿಳಿಸಿ. ಮುಂದಿನ ಬರಹಕ್ಕೆ ಸ್ಪೂರ್ತಿಯಾಗುವುದು, ಸುಧಾರಣೆಗಳನ್ನು ಅಳವಡಿಸಿಕೊಳ್ಳಲೂ ಅನುಕೂಲವಾಗುವುದು.
ಬಹಳಷ್ಟು ಸ್ನೇಹಿತರು, ಸಹಪಾಠಿಗಳು ಕಥೆ ಚೆನ್ನಾಗಿದೆ, ಕೆಲವೊಂದು ತಮ್ಮ ನಿಜ ಜೀವನಕ್ಕೂ ತಾಳೆಯಾಗುತ್ತವೆ, ಸಾಕ್ಷಿ-ಸೂರ್ಯರ ಪ್ರೀತಿಯ ಎಳೆಯೂ ಚೆನ್ನಾಗಿ ಮೂಡಿಬಂದಿದೆ ಎಂದೆಲ್ಲಾ ತಿಳಿಸಿದ್ದೀರಿ. ಬರಹಗಾರರಿಗೆ ತಮ್ಮ ಕಥೆಗಳು ನೈಜತೆಗೆ ಹತ್ತಿರವಾಗಿವೆ ಎಂದು ಕೇಳುವುದು ಬಹು ಸಂತಸದ ವಿಚಾರ. ಎಲ್ಲರಿಗೂ ಶುಭವಾಗಲಿ. ಧನ್ಯವಾದಗಳು.
ವಿಶೇಷ ಸೂಚನೆ:
ಈ ಕಥೆಯ ಎಲ್ಲಾ ಪಾತ್ರಗಳು, ಘಟನೆಗಳು ಕೇವಲ ಕಾಲ್ಪನಿಕ ಹಾಗೂ ಲೇಖಕರ ಸ್ವರಚನೆಯಾಗಿರುತ್ತದೆ. ಯಾವುದೇ ಘಟನೆ ಅಥವಾ ವ್ಯಕ್ತಿಗತ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ. ಲೇಖಕರ ಅನುಮತಿಯಲ್ಲದೇ ಯಾವುದೇ ರೂಪದಲ್ಲಿ ಇವನ್ನು ನಕಲು ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ.
– ಸ್ಮಿತಾ ಆಲಂಗಾರ್
