ಮನೆಗೆ ಬಂದವಳೇ ಸಾರಿಕಾ ತರಕಾರಿ ಚೀಲದಿಂದ ತರಕಾರಿಗಳನ್ನೆಲ್ಲ ತೆಗೆದು ತೊಳೆಯಲು ಒಂದು ಪಾತ್ರೆಯಲ್ಲಿ ಹಾಕಿದಳು. ನಂತರ ನೇರವಾಗಿ ಕೈ ಕಾಲು ಮುಖ ತೊಳೆದುಕೊಂಡು, ಬಟ್ಟೆ ಬದಲಿಸಿ, ತರಕಾರಿ ತೊಳೆಯುವುದರಲ್ಲಿ ನಿರತಳಾದಳು.

“ಇದೇನಿದು? ಒಳ್ಳೆ ನಾರ್ತ್ ಇಂಡಿಯನ್ಸ್ ತರಹ ಬರೀ ಈರುಳ್ಳಿ, ಆಲೂಗಡ್ಡೆ, ಟೊಮೇಟೊ, ಮೂಲಂಗಿ ಮತ್ತೆ ಬೆಂಡೆಕಾಯಿ ತಂದಿದೀಯ? ಕನಿಷ್ಠ ಪಕ್ಷ ಚೀನೀಕಾಯಿನೋ, ಅಥವಾ ಸೌತೇನೋ ತರುವುದಲ್ಲವ? ಇದರಲ್ಲಿ ಏನಂತ ಅಡಿಗೆ ಮಾಡುವುದು?”, ಕೇಳಿದರು ಸುಮಂಗಲ.

“ಸುಮ್ಮನಿರಮ್ಮ. ಅದೇ ಅದೇ ಅಡಿಗೆ ತಿಂದು ಬೇಜಾರಾಗಿದೆ. ಆ ಸೌತೆಕಾಯಿ ದೋಸೆ ತಿಂದು-ತಿಂದು ಬೇಜಾರು ಬಂದಿದೆ ನನಗೆ. ಚಪಾತಿ ಪಲ್ಯ, ಅಥವಾ ನೀನೆ ಮಾಡುವ ಹಾಗೆ ಪೂರಿ – ಗಸಿ ಏನಾದರೊಂದು ಬೇರೆ ಬಗೆಯ ಅಡಿಗೆ ಮಾಡಿದರಾಯಿತು ಬಿಡು ಸ್ವಲ್ಪ ದಿನ. ನಾನು ಸಹಾಯ ಮಾಡುತ್ತೇನೆ”, ಎಂದಳು ಸಾರಿಕಾ.

“ಏನು?! ನೀನು ಅಡಿಗೆ ಮಾಡಲು ಸಹಾಯ ಮಾಡುತ್ತೀಯಾ? ನಿನಗೆ ಅಡಿಗೆ ಕೆಲಸಕ್ಕೇನಾದ್ರೂ ಸಂದರ್ಶನವಿದ್ದಿದ್ದ ಹೇಗೆ? ಒಂದು ದಿನ ಬೆಳಗೆದ್ದು ಕಾಫಿ ಮಾಡಿಕೊಂಡವಳಲ್ಲ. ಈಗ ನೋಡಿದರೆ ಅಡಿಗೆಗೆ ಸಹಾಯ ಮಾಡುತ್ತೇನೆ ಹೇಳ್ತಿದಿಯಲ್ಲ? ಏನಾಗಿದೆ ನಿನಗೆ? ಹುಷಾರಾಗಿದೀಯ ತಾನೇ?!”, ಎಂದು ನಾಟಕೀಯವಾಗಿ ಸಾರಿಕಾಳ ಹಣೆ ಮುಟ್ಟಿ ನೋಡಿದರು.

“ಅಲ್ಲಮ್ಮ, ಮಾಡಿದರೆ ಯಾಕೆ ಮಾಡುತ್ತೀಯಾ ಕೇಳುತ್ತಿದ್ದಿ. ಮಾಡದಿದ್ದರೆ ಯಾಕೆ ಮಾಡಿಲ್ಲ ಎನ್ನುತ್ತೀಯಾ. ನಿನ್ನನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ! ಸಂದರ್ಶನವಿದ್ದದ್ದು ಹೋಟೆಲಿನಲ್ಲಿ ಸ್ವಾಗತಕಾರಿಣಿ ಕೆಲಸಕ್ಕೆ. ನೋಡಬೇಕು ಏನಾಗುತ್ತದೆಂದು”, ಎಂದಳು ಸಾರಿಕಾ ಅಮ್ಮನ ಕೈಯ್ಯನ್ನು ದೂರ ತಳ್ಳುತ್ತ.

“ಓ ದೇವರೆ. ಹೋಟೆಲಿನಲ್ಲಿ ಕೆಲಸ ಮಾಡುವುದಾ? ಅದೂ ಸ್ವಾಗತಕಾರಿಣಿಯಾಗಿ. ಬೇರೆ ಯಾವ ಕೆಲಸವೂ ಸಿಗಲಿಲ್ಲವಾ ನಿನಗೆ?”.

“ಅದಕ್ಕೆ ಯಾಕೆ ಇಷ್ಟೊಂದು ತಲೆಬಿಸಿ ನಿನಗೆ? ಹೋಟೆಲ್ ಆದರೇನು? ಎಲ್ಲಿ ಆದರೇನು? ಕೆಲಸ, ಕೆಲಸವೇ ತಾನೇ? ಸ್ವಾಗತಕಾರಿಣಿಯಾದರೆ ತಲೆನೋವು ಕಡಿಮೆ. ಮುಂದೆ ಮ್ಯಾನೇಜರ್ ಆಗಲೂಬಹುದು”.

“ಆದರೆ ತಲೆನೋವು ನಿನಗಲ್ಲ. ನಮಗೆ. ನೀನು ದಿನವೂ ಹಲ್ಲು ಕಿಸಿದುಕೊಂಡು ಸ್ವಾಗತ ಕೋರುತ್ತಿರು ಅಲ್ಲಿ ಬಂದವರಿಗೆಲ್ಲ. ನಾವಿಲ್ಲಿ ಯಾರು ಏನು ಮಾಡುತ್ತಾರೋ? ಯಾವ ತಲೆ-ಕೆಟ್ಟ ಹುಡುಗರ ಕೈಯ್ಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೀಯಾಪ್ಪಾ ಎಂದು ಏನೇನೋ ಯೋಚನೆಯಲ್ಲಿ ದಿನಾ ತಲೆ ಹಾಳು ಮಾಡಿಕೊಂಡು ನಿನ್ನ ದಾರಿ ಕಾಯುತ್ತೇವೆ. ನಿನಗೆ ಇದೆಲ್ಲ ಗೊತ್ತಾಗುದಿಲ್ಲ ಮಹರಾಯ್ತಿ!”.

“ನಿನ್ನ ತಲೆ. ಅದೇನು ಅಷ್ಟು ಸುಲಭವ ಹಾಗೆಲ್ಲ ಯಾರು-ಯಾರೋ ಬಂದು ತೊಂದರೆ ಕೊಡಲು? ಅದೂ ಏನು ಅಲ್ಲಿ ನಾನೊಬ್ಬಳೇ ಇರುವುದ? ನೀನು ಸ್ವಲ್ಪ ಧಾರವಾಹಿ ನೋಡುವುದು ಕಮ್ಮಿ ಮಾಡು. ನಿನ್ನ ತಲೆ ಸರಿ ಇರುತ್ತದೆ”, ಎಂದು ಹೊರನಡೆದಳು ಸಾರಿಕಾ.

ಮೊಬೈಲ್ ತೆಗೆದು ನೋಡುವಾಗ ಈಮೈಲ್ ನೋಟಿಫಿಕೇಷನ್ ಕಾಣಿಸಿತು. ಓಪನ್ ಮಾಡಿ ನೋಡಿದರೆ, ತಾನು ಆಯ್ಕೆಯಾಗಿದ್ದು, ೩ ದಿನಗಳೊಳಗಾಗಿ ಖುದ್ದು ಕಾಗದ ಪತ್ರಗಳಿಗೆ ಸಹಿ ಹಾಕಿ, ಅದರ ಮಾರನೇ ದಿನದಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆಯಿತ್ತು. ಅದರೊಂದಿಗೆ ಒಂದು ಅಭಿನಂದನಾ ಪತ್ರವೂ ಜೊತೆಗಿತ್ತು!

ಖುಷಿಯಿಂದ ಕುಣಿದಾಡಿದಳು ಸಾರಿಕಾ. ಅವಳ ಅವತಾರ ನೋಡಿಯೇ ಸುಮಂಗಲಿರಿಗೆ ಅಂದಾಜಾಗಿತ್ತು ಏನು ವಿಷಯವಿರಬಹುದೆಂದು. ಇವಳಿಗೆ ಇವಳ ಅಪ್ಪನೇ ಸರಿಯೆಂದು ತಮ್ಮ ಕಾರ್ಯದಲ್ಲಿ ತೊಡಗಿದರು.

ಸಾಯಂಕಾಲ ಸುಜನ್ ಬಂದಾಗ ಸಾರಿಕಾ ತಾನಾಗಿಯೇ ಅಪ್ಪನಿಗೆ ಪೂರ್ತಿ ವಿವರ ಒಪ್ಪಿಸಿದಳು. ಅವಳ ಹಟದ ಮುಂದೆ ತಾವು ಹೇಳಿದ್ದು ನಡೆಯುವುದಿಲ್ಲವೆಂದು ಅವರಿಗೂ ಗೊತ್ತಿತ್ತು. ಈಗ ಹೇಗೋ ಮದುವೆಮಾಡಿಕೊಳ್ಳಲು ಒಪ್ಪಿದ್ದಾಳೆ. ಆದಷ್ಟು ಬೇಗ ಮದುವೆ ಮಾಡಿಸಿಬಿಟ್ಟರೆ ತಮಗೆ ತಲೆನೋವು ಕಡಿಮೆ. ಈಗ ಕೆಲಸದ ಬಗ್ಗೆ ಕೊಂಕು ನುಡಿದರೆ ಆಮೇಲೆ ಮದುವೆ ಬೇಡವೆಂದು ಕೂತರೆ ಏನು ಮಾಡುವುದು ಎಂದು ಮನದಲ್ಲೇ ಲೆಕ್ಕಾಚಾರ ಹಾಕಿ , “ನಿನ್ನಿಷ್ಟದಂತೆ ಮಾಡು. ಯಾವುದೇ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡ”, ಎಂದರು.

ಸುಮಂಗಲಾರನ್ನು ನೋಡಿ ಗೆಲುವಿನ ನಗೆ ಬೀರಿದಳು ಸಾರಿಕಾ. “ಅಪ್ಪ – ಮಗಳು, ಏನಾದರೂ ಮಾಡಿಕೊಳ್ಳಿ. ನಾಳೆ ಏನಾದರೂ ಹೆಚ್ಚು – ಕಡಿಮೆಯಾದರೆ ನನ್ನ ಬಳಿ ಬರಬೇಡಿ”, ಎಂದು ಗೊಣಗುತ್ತ ರಾತ್ರಿಯ ಅಡಿಗೆ ತಯಾರಿಯಲ್ಲಿ ತೊಡಗಿದರು.

 *****

ಸಾರಿಕಾ ಕೆಲಸಕ್ಕೆ ಸೇರಿ ಒಂದು ವಾರವಾಗುತ್ತ ಬಂದಿತ್ತು. ಒಂದು ವರ್ಷದ ಮಟ್ಟಿಗೆ ಕೆಲವು ಕರಾರುಗಳಿಗೆ ಸಹಿ ಹಾಕಿ, ಆಫರ್ ಲೆಟರ್ ತೆಗೆದುಕೊಂಡು , ಮಾರನೇ ದಿನದಿಂದಲೇ ಕೆಲಸಕ್ಕೆ ಹಾಜರಾದವಳಿಗೆ ಸಾಧಾರಣಮಟ್ಟಿನ ತರಬೇತಿಯೂ ಆಗಿತ್ತು ಒಂದು ವಾರದಲ್ಲಿ. ಮೊದಲಿದ್ದಾಕೆಯ ಜೊತೆಯಲ್ಲೇ ಒಂದು ವಾರ ಕೆಲಸ ಮಾಡಿದ್ದರಿಂದ ಕೆಲಸ ಕಲಿತುಕೊಳ್ಳಲು ಅಷ್ಟೊಂದು ಕಷ್ಟವಾಗಲಿಲ್ಲ ಅವಳಿಗೆ. ಈಗ ಅವಳೇ ನಿಭಾಯಿಸಲು ಅವಕಾಶ ಮಾಡಿಕೊಟ್ಟು, ಇನ್ನೆರಡು ದಿನಗಳಲ್ಲಿ ಮೊದಲಿದ್ದಾಕೆ ಮ್ಯಾಟೆರ್ನಿಟಿ ರಜಕ್ಕೆ ಹೋಗುವವಳಿದ್ದಳು.

ಡೆಸ್ಕಿನಲ್ಲಿ ಕುಳಿತವಳ ಬಳಿ, ಸೂಟುಬೂಟು ಹಾಕಿಕೊಂಡು ಬಂದ ಯುವಕ, ಸಾರಿಕಾಳನ್ನುದ್ದೇಶಿಸಿ,  “ಹಲೋ” ಎಂದನು.

“ಹಲೋ ಸರ್. ವೆಲ್ಕಮ್ ಟು ನಿಸರ್ಗ ನೆಸ್ಟ್ ಹೋಟೆಲ್ಸ್. ಹೌ ಮೇ ಐ ಹೆಲ್ಪ್ ಯು?” ಕೇಳಿದಳು.

“ನಿಮ್ಮ ಹೋಟೆಲ್ ಓನರ್ ಜೊತೆ ಮಾತನಾಡಬೇಕಿತ್ತು”, ಎಂದನು.

“ಒಂದು ನಿಮಿಷ ಸರ್. ಪ್ಲೀಸ್ ವೇಟ್, ಮ್ಯಾನೇಜರ್ ಕರೀತೇನೆ”, ಎಂದಳು.

ಅಷ್ಟರಲ್ಲಿ ಅಲ್ಲಿಗೆ ಬಂದ ಮ್ಯಾನೇಜರ್ ಮಾಧವ್ ಈತನನ್ನು ನೋಡಿದ್ದೇ ತಡ, “ಓಹ್ ಸರ್, ಬನ್ನಿ, ಬನ್ನಿ. ನೀವು ಬರುತ್ತೀರೆಂದು ಮೊದಲೇ ಗೊತ್ತಿದ್ದರೆ ನಾನೆ ಇಲ್ಲಿರುತ್ತಿದ್ದೆ. ದೊಡ್ಡ ಸಾಹೇಬ್ರು ಮೊನ್ನೆ ಬಂದಾಗ ಏನು ಹೇಳಿಲ್ಲ”, ಎಂದರು.

“ಹೇಳಿ ಬಂದರೆ ನಿಮ್ಮ ಕಾರ್ಯವೈಖರಿ ತಿಳಿಯುವುದು ಹೇಗೆ? ನಿಮ್ಮ ರೆಸೆಪ್ಷನಿಸ್ಟ್ನೇ ತೆಗೆದುಕೊಳ್ಳಿ, ಹೋಟೆಲ್ ಓನರ್ ಯಾರು, ಮ್ಯಾನೇಜರ್ ಯಾರು ಎಂದೇ ಇನ್ನೂ ತಿಳಿದುಕೊಂಡಿಲ್ಲ. ಅವರ ಹಾವಭಾವವೋ? ದೇವರಿಗೇ ಪ್ರೀತಿ. ಹಾಕಿರುವುದು ನಮ್ಮ ಹೋಟೆಲ್ ಯುನಿಫಾರ್ಮ್. ಆದರೆ ಅಷ್ಟುದ್ದದ ಜಡೆ. ಇಲ್ಲಿ ಡ್ರೆಸ್ ಕೋಡ್ ಇಲ್ಲವಾ ? ಡ್ರೆಸ್ಸಿಗೆ ತಕ್ಕ ಹಾಗೆ ಹೇರ್ ಸ್ಟೈಲ್ ಚೇಂಜ್ ಮಾಡಿಕೊಳ್ಳಬೇಕು ಎಂದೂ ಗೊತ್ತಾಗುವುದಿಲ್ಲವಾ? ಏನು ಟ್ರೈನಿಂಗ್ ಕೊಟ್ಟಿದ್ದೀರಿ ಇವರಿಗೆ?”, ಎಂದನು ರಜತ್, ಸಾರಿಕಳತ್ತ ವ್ಯಂಗ್ಯ ನೋಟ ಬೀರುತ್ತಾ.

“ಸಾರಿ ಸರ್, ಹೊಸಬರಲ್ವ? ನಿಮ್ಮ ಪರಿಚಯವಿಲ್ಲ ಬೇರೆ. ಇನ್ನೂ ಟ್ರೇನಿಂಗ್ ನಡೀತಿದೆ. ಇನ್ನೊಂದೆರಡು ದಿನಗಳಲ್ಲಿ ಎಲ್ಲ ಸರಿಯಾಗುತ್ತದೆ”, ಎಂದು ಮಾಧವ್ ಸಮಜಾಯಿಷಿ ಕೊಡುತ್ತಿರಬೇಕಾದರೆ, ಸಾರಿಕಾ ಡೆಸ್ಕಿನಿಂದ ಸರಿದು, ನೇರವಾಗಿ ರಜತ್ ಬಳಿ ಬಂದು ಹೇಳಿದಳು, “ನಿಮ್ಮ ಯೂನಿಫಾರ್ಮಿಗೆ ತಕ್ಕ ಹಾಗೆ ಡ್ರೆಸ್ ಕೋಡ್ ಮಾಡಿಸದೇ ಇದ್ದದ್ದು ನಿಮ್ಮ ತಪ್ಪು. ಹಾಗಾಗಿ ನಾನು ನನಗೆ ಇಷ್ಟಬಂದಂತೆ ತಲೆ ಬಾಚಿಕೊಳ್ಳುತ್ತೇನೆ. ಅದೂ ಅಲ್ಲದೆ ಈ ಸೆಖೆಗೆ ನಿಮ್ಮ ಯೂನಿಫಾರ್ಮ್ ಕೂಡ ಕಷ್ಟಪಟ್ಟು ಹಾಕಿಕೊಳ್ಳುತ್ತಿರುವುದು. ಎಲ್ಲಿ ನೋಡಿದರೂ ಸೂಟುಬೂಟು, ಟೈ, ಕೋಟು, ಮುಖ ತುಂಬಾ ಕೃತಕ ನಗು. ಹವಾಮಾನಕ್ಕೆ ತಕ್ಕ ಹಾಗೆ ಉಡುಪುಗಳನ್ನು ನಿಗದಿ ಮಾಡಿಸದ ಸಂಸ್ಥೆ ನಿಮ್ಮದು. ನಿಮ್ಮ ಪರಿಚಯ ಒಂದು ಬಾರಿಯೂ ಮಾಡಿಸದೇ, ನೀವೇ ಮಾಲೀಕರು ಎಂದು ಹೇಗೆ ಗೊತ್ತಾಗಬೇಕು? ನಿಮ್ಮ ಇಂಡಕ್ಷನ್ ಪ್ರೋಗ್ರಾಮಿನಲ್ಲಿ ಕಡೇಪಕ್ಷ ಒಂದು ಫೋಟೋವಾದರೂ ಕೊಡಿಸಿ ಮುಂದಿನ ಹೊಸಬರಿಗೆಲ್ಲ. ಅಟ್ ಲೀಸ್ಟ್ ಯಾರು-ಯಾರೆಂದು ಗೊತ್ತಿರಲು. ನಾನು ಓನರ್ ಕರೆಸಲು ಅಧಿಕಾರವಿರುವುದು ಮ್ಯಾನೇಜರಿಗೆ ಎಂದು ತಿಳಿದುಕೊಂಡೇ ಅವರನ್ನು ಕರೆಯುತ್ತೇನೆ ಎಂದು ಹೇಳಿದ್ದು. ಅವರು ಮಾಲೀಕರೆಂದು ನಾನೇನಾದರೂ ಹೇಳಿದೆನಾ? ಮಾತು ಶುರು ಮಾಡಿದವರು ನೀವು, ಹೆಲೋ ಹೇಳಿದ ನಂತರ, ನಾನು ಹೌ ಮೇ ಈ ಹೆಲ್ಪ್ ಎಂದಾಗ, ತಮ್ಮ ಪರಿಚಯ ಮಾಡಿಕೊಳ್ಳಬೇಕಾಗಿದ್ದು ಸರಿಯಾದ ಶಿಷ್ಟಾಚಾರ. ಅದು ಬಿಟ್ಟು ನೇರವಾಗಿ ಓನರ್ ಕರೆಯಿರಿ ಎಂದಿದ್ದು ನಿಮ್ಮ ತಪ್ಪು. ಬೇರೆಯವರ ಬಗ್ಗೆ ಕಾಮೆಂಟ್ ಮಾಡುವ ಬದಲು ನಿಮ್ಮ ನಡವಳಿಕೆಯೂ ಸರಿಯಾಗಿರಬೇಕು”, ಎಂದಳು ಒಂದೇ ಉಸಿರಿಗೆ.

ಮುಂದುವರೆಯುವುದು

ಹಿಂದಿನ ಸಂಚಿಕೆ