ಇತ್ತೀಚೆಗೆ ಎಲ್ಲ ಕಡೆಯೂ ಈ ಸೈಕಲ್ ಸವಾರಿಯದೇ ಸುದ್ದಿ. ಅದಕ್ಕೆಂದೇ ಬಹಳಷ್ಟು ತಂಡಗಳನ್ನು ಕಟ್ಟಿಕೊಂಡು ಗುಂಪಾಗಿ ಸೈಕ್ಲಿಂಗ್ ಮಾಡಲು ಬೇರೆ – ಬೇರೆ ಕಡೆ ಹೋಗುವುದೇನು, ಆರೋಗ್ಯ, ಫಿಟ್ನೆಸ್ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ಗಳೆಷ್ಟೋ? ನನಗೆ ಇದು ಯಾವುದರ ಬಗ್ಗೆಯೂ ತಕರಾರಿಲ್ಲ. ಎಲ್ಲರೂ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಮತ್ತು ಇತರರ ಸುರಕ್ಷತೆಯನ್ನು ಕಾಪಾಡಿಕೊಂಡು ಒಂದು ಲಿಮಿಟಿನಲ್ಲಿ ಇದನ್ನು ನಡೆಸುತ್ತ ಬಂದರೆ ಯಾರಿಗೂ ಯಾವ ತೊಂದರೆಯೂ ಇಲ್ಲ ಬಿಡಿ.

ಆದರೆ, ನಾನು ಇಲ್ಲಿ ಹೇಳಹೊರಟಿರುವುದು ಮಾತ್ರ ನಮ್ಮ ಕಾಲದ ೩ ಚಕ್ರದ ಸೈಕಲ್ ಬಗ್ಗೆ. ಮೊನ್ನೆ ಮಕ್ಕಳ ದಿನದ ಆಚರಣೆಯೆಂದು ಬೇರೆ-ಬೇರೆ ಶಾಲೆಗಳು ತಮ್ಮದೇ ವಿಶೇಷತೆಗಳೊಂದಿಗೆ ಕೆಲವೊಂದು ವಿಧವಾಗಿ ಸಂಭ್ರಮದಿಂದ ಆಚರಿಸಿದ್ದು ಕಂಡು-ಕೇಳಿ-ತಿಳಿದು ನನಗೆ ನೆನಪುಗಳು ಮತ್ತೆ ನಮ್ಮ ಬಾಲ್ಯಕ್ಕೋಡಿತು. ಹಾಗೆಯೇ ಅಕಸ್ಮಾತಾಗಿ ಕಾಣ ಸಿಕ್ಕ ಅಂದಿನ ನಮ್ಮ ಸೈಕಲ್ ಸಹ ಸಾಕಷ್ಟು ನೆನಪುಗಳನ್ನು ಮರುಕಳಿಸಿತು!

childhoodmemory

childhood memory

ಬಾಲ್ಯದ ಸವಿನೆನಪುಗಳು

ಕೂಡು ಕುಟುಂಬದಲ್ಲಿ ಹುಟ್ಟಿ-ಬೆಳೆದ ನನಗೆ ಬಾಲ್ಯದ ನೆನಪುಗಳು ನಿಜವಾಗಿಯೂ ತುಂಬಾ ಸವಿಯಾದದ್ದು. ಹಾಗೆಯೇ ಈ ಕೂಡು ಕುಟುಂಬದಲ್ಲಿ ಅತ್ತ ದೊಡ್ಡವರೂ ಅಲ್ಲ, ಇತ್ತ ಬರೀ ಸಣ್ಣವರೂ ಅಲ್ಲ ಎಂದಾದರೂ ಸ್ವಲ್ಪ ಕಷ್ಟ ನಿಮಗೆ. ಬೇಕಾದದ್ದು ಬೇಕಾದಾಗ ಸಿಗುವುದಿಲ್ಲ. ಹೊಸತಂತೂ ನಿಮ್ಮ ಪಾಲಿಗೆ ಕನಸಿನಲ್ಲಿಯೂ ಸಿಗುವುದಿಲ್ಲ. ಒಂದೋ ನಿಮ್ಮ ಅಕ್ಕ-ಅಣ್ಣಂದಿರು ಉಪಯೋಗಿಸಿ ಹಳೆತಾದ ಆಟಿಕೆ, ಸೈಕಲ್, ಇತ್ಯಾದಿ. ಇಲ್ಲವೇ, ಹಳೆಯದು ಹಾಳಾಯಿತೆಂದು ನಿಮ್ಮ ತಮ್ಮ-ತಂಗಿಯರಿಗೆಂದು ಹೊಸತಾಗಿ ಖರೀದಿಸಿದ್ದು. ಆದರೆ ಈ ಹೊಸತು ನಿಮ್ಮ ಕೈಗೆ ನೇರವಾಗಿ ದಕ್ಕುವುದಿಲ್ಲ ಬಿಡಿ. ಅವರೆಲ್ಲ ಸಣ್ಣವರು, ಅವರಿಗೆ ಆಡಲು ಕೊಡು, ಇತ್ಯಾದಿ ಇತ್ಯಾದಿ ಮಾತುಗಳಿಗೆ ನೀವು ಕಿವಿಯಾಗಿ, ಹೊಸತು ಹಳೆತಾದ ಮೇಲೆ, ನಿಮಗೆ ಇದ್ದುದರಲ್ಲೇ ತೃಪ್ತಿ ಪಡುವುದು ಬಿಟ್ಟರೆ ಬೇರೆ ದಾರಿಯಿಲ್ಲ.

ಅದೂ ಅಲ್ಲದೇ ಆಗಿನ ಗುಣಮಟ್ಟದ ಸಾಮಗ್ರಿಗಳು ಹಾಳಾಗುತ್ತಿದ್ದುದೇ ಅಪರೂಪ. ಹಾಗೆಯೇ ಒಂದು ವೇಳೆ ಹಾಳಾದರೂ ಅದನ್ನು ಕ್ಷಣ ಮಾತ್ರದಲ್ಲಿ ಏನೋ ಒಂದು ಮಾಡಿ ರಿಪೇರಿ ಮಾಡಿ ಸರಿಪಡಿಸುವ ಕಲೆ ನಮ್ಮ ಮನೆಯ ಹಿರಿಯರಿಗೆ ಅಥವಾ ಸಣ್ಣ-ಪುಟ್ಟ ಕೆಲಸದವರಿಗೆ ತುಂಬಾ ಸುಲಭದ ಕೆಲಸವಾಗಿತ್ತು. ಹಾಗಾಗಿ ಈ ಹೊಸತು ಬರುತ್ತಿದ್ದುದೇ ಅಪರೂಪ.

ಹಾಗೆಂದು ನಾವು ಯಾರೂ ಯಾವತ್ತೂ ಬೇಸರಿಸಿಕೊಂಡವರೂ ಅಲ್ಲ. ಆಗೆಲ್ಲ ಅದೇ ಜೀವನವೆಂದು ಖುಷಿಯಿಂದ ಕಳೆದಿದ್ದ ಕ್ಷಣಗಳವು. ಅದಕ್ಕೇ ಇರಬೇಕು ಅನುಕೂಲಗಳು ಜಾಸ್ತಿಯಾದಂತೆ ಆಸೆಗಳು ಗರಿಗೆದರುತ್ತವೆಯೆನ್ನುವುದು! ಈ ಹೊಸತು ದಕ್ಕುತ್ತಿರಲಿಲ್ಲವೆಂಬ ವಿಚಾರ ನನ್ನ ಮನಕ್ಕೆ ಹೊಕ್ಕದ್ದೇ ಈ ಲೇಖನ ಬರೆಯುತ್ತಿರಬೇಕಾದರೆ ಮಾತ್ರ! ಅಷ್ಟೊಂದು ಹಾಸುಹೊಕ್ಕಿದ್ದೆವು ನಾವು ನಮ್ಮ ಆ ಬದುಕಿಗೆ ಅಂದು. ಆಗೆಲ್ಲ ನಮಗೆ ಹೊಸದು ಬೇಕೇ ಬೇಕೆಂಬ ಕಲ್ಪನೆಯೂ ಬರುತ್ತಿರಲಿಲ್ಲ. ಕಡೇ ಪಕ್ಷ ಇಷ್ಟಾದರೂ ಇದೆಯಲ್ಲ? ಇದರಲ್ಲೇ ಆಡೋಣ, ಇದಕ್ಕೇನಾಗಿದೆ? ಎಂಬ ಭಾವ!

ಒಂದು ಬಾರಿ ತಂದರೆ ಮುಗಿಯಿತು. ಅದು ಮನೆಯಲ್ಲಿರುವ ಅತಿ ಸಣ್ಣ ಮಗುವಿಗೆ ಆಡಿ ಮುಗಿದರೂ ಮೂಲೆ ಸೇರದು. ಮತ್ತೆ ಅಕ್ಕ-ಪಕ್ಕದ ಮನೆಯವರಿಗೋ, ಇಲ್ಲವೇ ಕೆಲಸಕ್ಕೆಂದು ಬರುತ್ತಿದ್ದವರ ಮಕ್ಕಳಿಗೋ ಉಪಯೋಗವಾಗುತ್ತಿತ್ತು.  ಅದಕ್ಕೇ ಇರಬೇಕು ಅಂದೆಲ್ಲ ಈ ಕಸದ ನಿರ್ವಹಣೆ ಅಷ್ಟು ಸುಲಭದ ಮಾತಾಗಿತ್ತು. ಈಗ ಇಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ಟಿಕ್ ಆಟಿಕೆಗಳು ಎಷ್ಟೊಂದು ರಾಶಿ ಬೀಳುತ್ತಿರುತ್ತವೆ. ಎಲ್ಲಿ ಕೊಂಡುಹೋಗಿ ಎಸೆಯುವುದು ಇವನ್ನೆಲ್ಲ? ಒಂದು ಬಾರಿ ಹಾಳಾದರೆ ಮುಗಿಯಿತು, ಅದನ್ನೆಸೆದು ಹೊಸತು ತರಬೇಕು. ಬೇಗನೆ ಹಾಳಾಗಿ ರಿಪೇರಿಯಾಗದ ಗುಣಮಟ್ಟದ್ದದು! ಹಾಗೆಯೇ ಹಳೆಯದು ಹೊಸಬರಿಗೆ ವರ್ಜ್ಯ. ಏನೋ ಕಷ್ಟದಲ್ಲಿ ಒಂದೆರಡು ಸಾಮಗ್ರಿಗಳು ಹೊಂದಿಕೆಯಾಗುತ್ತವೆಯೋ ಏನೋ?! ಇರಲಿ ಬಿಡಿ.

ಸೈಕಲ್ ಸವಾರಿ 

ಈ ನಮ್ಮ ೩ ಚಕ್ರದ ಸೈಕಲ್ ಓಡಿಸಲೂ ಸಹ ನಮ್ಮ ಮಧ್ಯೆ ನಡೆಯುತ್ತಿದ್ದ ತಕರಾರು ಅಷ್ಟಿಷ್ಟಲ್ಲ. ಭತ್ತದ ಕೊಯ್ಲಿನ ಸಮಯದಲ್ಲಿ ಜಾಗದ ಕೊರತೆ. ಗೊತ್ತಿಲ್ಲದೇ ಭತ್ತದ ಮೇಲೆ ತಪ್ಪಿ ಹೋಗಿಬಿಟ್ಟರಂತೂ ಮುಗಿಯಿತು ಕಥೆ! ಹಿಂದೆ ಕೂರುವುದು ಯಾರು? ಮುಂದೆ ಓಡಿಸುವುದು ಯಾರು? ಎಂಬ ಚರ್ಚೆ. ಕೊನೆಗೆ ಎಲ್ಲ ತೀರ್ಮಾನವಾಗಿ ಒಂದು ನಿರ್ಧಾರಕ್ಕೆ ಬರುವ ವೇಳೆಗೆ ಅತ್ತೆಯ ಮಕ್ಕಳೂ ಸೇರಿ ಇರುವ ೫-೬ ಮಂದಿಯಲ್ಲಿ ಇಬ್ಬರಿಗೆ ಬೇರೇನೋ ಆಟದ ಯೋಚನೆಯಾಗಿ ಎದ್ದು ಹೋಗಿಬಿಡುತ್ತಿದ್ದರು. ಸರಿಯೆಂದು ಇನ್ನಿಬ್ಬರು ಇನ್ನೇನು ಸೈಕಲಿನಲ್ಲಿ ಹೊರಡಬೇಕು ಅಷ್ಟರಲ್ಲಿ ಚಿಕ್ಕವಳಾದ ತಂಗಿಯದ್ದು ತಾನೂ ಬರುತ್ತೇನೆಂಬ ಹಠ! ಹೀಗೆ ಒಬ್ಬೊಬ್ಬರದು ಒಂದೊಂದು ಗೋಳು. ಆದರೂ ಅದೆಷ್ಟೇ ಓಡಿಸಿದರೂ ಇಂದಿಗೂ ಸಹ ಗಟ್ಟಿಯಾಗಿಯೇ ಉಳಿದುಕೊಂಡಿದೆ ನಮ್ಮ ಸೈಕಲ್.

childhood memory

childhood memory

ಕೊನೆಗೆ ಅಕ್ಕ-ಅಣ್ಣನಿಗೆ ೩ ಚಕ್ರಗಳದ್ದು ಹೋಗಿ ೨ ಚಕ್ರಗಳದ್ದು ಬಂದಾಗ ನಾವು ಅದಾಗಲೇ ಬೇರೆಡೆಗೆ ನಮ್ಮ ೩ ಚಕ್ರಗಳ ಸೈಕಲ್ ಹಿಡಿದು ಹೊರಟಾಗಿತ್ತು. ಹಾಗಾಗಿ ೨ ಚಕ್ರಗಳ ಬ್ಯಾಲೆನ್ಸ್ ಇಂದಿಗೂ ಬಂದಿಲ್ಲ. ಅದರೊಂದಿಗೆ ೨ ಚಕ್ರಗಳ ಸೈಕಲಿನಿಂದ ಬಿದ್ದು ಕೈ – ಮೂತಿ ಪೆಟ್ಟು ಮಾಡಿಕೊಂಡು ಫ್ಯಾಮಿಲಿ ಹಿಸ್ಟರಿಯನ್ನು ಸಧ್ಯಕ್ಕಂತೂ ರಿಪೀಟ್ ಮಾಡಿಲ್ಲ ನಾನು ಮತ್ತು ನನ್ನ ತಂಗಿ! ಉಳಿದವರದ್ದು ಆ ಅನುಭವವೂ ಆಗಿದೆ!

ಏನೇ ಆದರೂ ಬಾಲ್ಯದ ಆಗಿನ ನೆನಪುಗಳು ಶಬ್ದಗಳಲ್ಲಿ ಎಷ್ಟು ವರ್ಣಿಸಿದರೂ ಅರ್ಥವಾಗುವಂತದ್ದಲ್ಲ!  ಅದೇನಿದ್ದರೂ ಅನುಭವಿಸಿದವರಿಗೇ ಗೊತ್ತು. ನಿಮ್ಮ ಸೈಕಲ್ ಸವಾರಿಯ ನೆನಪಿದೆಯೇ?!

ಮುಂದಿನ ಬುತ್ತಿ