ಮುಂಗಾರಿನಲಿ ಎಲ್ಲೂ ಸಲ್ಲದ ಮೇಲೆ
ಸುಮ್ಮನೇತಕೆ ಇಲ್ಲಿ ನೆಲೆ ನಿಲ್ಲುವೆ ?
ಸಾಲದೇ?, ಸೀದುಹೋದ ಕಾತುರತೆಗೆ
ಚಾತಕ ಪಕ್ಷಿಯಂತೆ ನೀ ತಳೆದ ನಿಲುವು ?
ಪರಿ – ಪರಿಯಾಗಿ ಬೇಡಿದರೂ ಸಹ ಸಿಗದ
ಕವಡೆ ಕಾಸಿನ ಕಿಮ್ಮತ್ತು ಸಾಕಾಗಲಿಲ್ಲವೇ ?
ನೀನೇ ಕಟ್ಟಿದ ಹಂಗಿನರಗಿನ ಅರಮನೆಯ ವಾಸ
ಪಕ್ಕನೆ ಮತ್ತೇನನ್ನಾದರೂ ನುಡಿಯಿತೇ ಶಕುನದ ಹಕ್ಕಿ ?
ನಿನ್ನೀ ಕನಸಿನ ಸೌಧವ ಬಿಚ್ಚಿಟ್ಟು ಹೆಕ್ಕಿ,
ಮನಬಿಚ್ಚಿ ಗರಿಗೆದರಿ ಮಾತನಾಡುವಾಸೆಗೆ;
ಕೇಳುವ ಕಿವಿಗಳಿಲ್ಲದ ಮೇಲೆ, ಸಾಗರದಲೆಗಳ
ಭೋರ್ಗರೆತಕೆ; ದೋಣಿ ಹಾಯಿಯ ಅಪ್ಪಣೆಯೇತಕೋ ?
ರಭಸದ ಪಯಣದಿ ಸಂತೆಯಲಿ ಸಿಕ್ಕಂತೆ,
ಕಲ್ಲು – ಮುಳ್ಳಿನ ಹಾದಿಯಲಿ ಎಡವಿ ಬಿದ್ದರೂ,
ಜಲಪಾತ ತನ್ನದೇ ಹರಿವಿನಲಿ ಕಿಸಕ್ಕನೆ ನಕ್ಕಂತೆ,
ಮುದದಿ ಹೇಳಿದರೂ, ತಪ್ಪೆಂದು ಅರಿವಾದ ಮೇಲೆ…
ಮನದ ಭಾವಾಂತರಂಗಗಳ ಸುಮಧುರ ದನಿಯ ಕೇಳಿ,
ಸುಮ್ಮನೇ ಕಟ್ಟಿಟ್ಟ ಬುತ್ತಿಯ ಕಳಚಿ ಬಿಡುವೆಯೇ ?
ನಿಂತಲ್ಲೇ ನೆಲೆ ನಿಲ್ಲುವೆಯೇತಕೆ ಬಂಡೆಕಲ್ಲಿನಂತೆ ?
ಮುಂದೆ ಸಾಗಬೇಕಿದೆ ಹೃದಯ ಮಿಡಿತಕೆ ಓಗೊಟ್ಟು.
ಕಾಯಬೇಕೀಗ ಸ್ವಾತಿ ಮುತ್ತಿನ ಮಳೆ ಹನಿಗೆ,
ಹುಡುಕಾಡಬೇಕೀಗ ನದಿಯ ಪ್ರಶಾಂತತೆಗೆ,
ಬಹುಬೇಗ ಕಳೆಯುವುದದು ಕಾಲದ ಮಹಿಮೆ,
ಅನುರಾಗದಿ ಅಂಕುರಿಸಿ, ಮತ್ತೆ ಬಂದೀತೇ ಶ್ರಾವಣ ?
– ಸ್ಮಿತಾ ಆಲಂಗಾರ್
