“ಹಲೋ ಸರ್, ಗುಡ್ ಡೇ”, ಹೇಳಿದಳು ಸಾರಿಕಾ ರಜತನ ನೋಡಿ, ಸುಧಾರಿಸಿಕೊಂಡು!

“ಹಲೋ ಮಿಸ್ ಸಾರಿಕಾ, ವೆಲ್ಕಮ್. ತುಂಬಾ ಬೇಗ ಬಂದಿದ್ದೀರಿ ತಾವು. ನಿಮ್ಮ ಕೋರಿಕೆಯಂತೆ ಪರಸ್ಪರ ಪರಿಚಯದ ಕಾರ್ಯಕ್ರಮ ಆಲ್ರೆಡಿ ಮುಕ್ತಾಯವಾಯಿತು. ರಿಪೋರ್ಟಿಂಗ್ ಸಮಯ ೧೦:೩೦ ಎಂದು ಇತ್ತಪ್ಪ ನಾವು ಕಳುಹಿಸಿದ ಸುತ್ತೋಲೆಯಲ್ಲಿ. ನಿಮಗೆ ಅದೂ ಸರಿಹೋಗಿಲ್ಲವೇನೋ? ಹೇಳಿ ಮ್ಯಾಡಮ್, ಯಾವ ರೀತಿ ಸೇವೆ ಮಾಡಲಿ ತಮಗೆ ಇನ್ನು?”, ಎಂದನು ವ್ಯಂಗ್ಯವಾಗಿ ನಗುತ್ತ.

ಕಿರಿಕಿರಿಯೆನಿಸಿದರೂ ತನ್ನದೇ ತಪ್ಪಿರುವ ಕಾರಣದಿಂದ ಅದ್ಯಾಕೋ ವಾದ ಬೇಡವೆಂದು ಸುಮ್ಮನಿದ್ದಳು ಸಾರಿಕಾ.

“ಸಾರಿ ಸರ್, ಅದೂ ..”, ಎಂದು ಏನೋ ಹೇಳಬೇಕೆನ್ನುವಷ್ಟರಲ್ಲಿ ಅವರಿಬ್ಬರನ್ನೂ ತಳ್ಳಿಕೊಂಡೇ ಎಂಬಂತೆ ಸುರಸುಂದರಿಯೊಬ್ಬಳು ಒಳಬಂದಳು.

ಅವಳು ನೇರವಾಗಿ ರಜತ್ ಕೈ ಕುಲುಕಿ, “ಹಲೋ ಸರ್, ಹೋಪ್ ಯು ಆರ್ ಡುಯಿಂಗ್ ಗುಡ್”, ಎಂದು ಹಲ್ಲುಕಿಸಿದು; ನೇರವಾಗಿ ಅವಳ ಗೆಳೆಯರ ಬಳಗ ಸೇರಿಕೊಂಡಳು! ರಜತ್ ನೇರವಾಗಿ ಅಲ್ಲಿಂದ ಬೇರೆಡೆ ನಡೆದನು.

ಸಾರಿಕಾಳನ್ನು ದೂರದಿಂದ ಗಮನಿಸಿದ ಅವಳ ಸಹೋದ್ಯೋಗಿಗಳು ಬರುವಂತೆ ಕೈ ಸನ್ನೆ ಮಾಡಿದ್ದು ಕಂಡು, ತಾನೊಂದು ಕೂಲ್ ಡ್ರಿಂಕ್ ಕೈಯ್ಯಲ್ಲಿ ಹಿಡಿದುಕೊಂಡು ಅತ್ತ ಹೋದಳು ಸಾರಿಕಾ.

ಹಾಡು, ಹರಟೆ, ಗೇಮ್ಸ್ ಎಂದು ಏನೇನೋ ನಡೆದು ಕೊನೆಗೆ ಮಧ್ಯಾಹ್ನದ ಊಟದ ಸಮಯವಾಯಿತು. ಎಲ್ಲರೂ ಬಫೆಯಲ್ಲಿ ಬಡಿಸಿಕೊಂಡು ಅಲ್ಲಲ್ಲಿ ಹಾಕಿದ್ದ ಖುರ್ಚಿಗಳಲ್ಲಿ ಕುಳಿತು ಊಟ ಆರಂಭಿಸಿದರು.

ಸಾರಿಕಾ ತನ್ನ ತಟ್ಟೆ ಹಿಡಿದುಕೊಂಡು ಬಂದಾಗ ರಜತ್ ಪಕ್ಕ ಬಿಟ್ಟರೆ ಬೇರೆಲ್ಲೂ ಜಾಗವಿರಲಿಲ್ಲ. ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ರಜತ್ ಕರೆದನು, “ಬನ್ನಿ ಸಾರಿಕಾ, ಇಲ್ಲೇ ಜಾಗವಿದೆಯಲ್ಲ? ಯಾರನ್ನು ಹುಡುಕುತ್ತಿದ್ದೀರಿ? ಯಾರೊಂದಿಗೆ ಊಟ ಮಾಡಬೇಕಿತ್ತು ನಿಮಗೆ? ಬರೀ ನಿಮ್ಮ ಅದೇ ಗೆಳೆಯರೊಂದಿಗೆ ಇದ್ದರೆ ಕಾಂಟ್ಯಾಕ್ಟ್ಸ್ ಬಿಲ್ಡ್ ಹೇಗೆ ಮಾಡಿಕೊಳ್ಳುತ್ತೀರಿ? ಸ್ವಲ್ಪ ಬೇರೆಯವರೊಂದಿಗೂ ಬೆರೆಯುವುದನ್ನು ಕಲೀರಿ”.

ಇವತ್ತು ಯಾರ ಮುಖ ನೋಡಿದೆನೋ ಏನೋ ಬೆಳಗೆದ್ದು? ಈ ಪುಣ್ಯಾತ್ಮ ಕಟುಕುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ ಎಂದುಕೊಂಡಳು. ಬೇರೆ ದಾರಿಯಿಲ್ಲದೆ ಅವನ ಬಳಿ ಹೋಗಿ ಕುಳಿತಳು.

ರಜತ್ ನೇರವಾಗಿ ಕೇಳಿದನು, “ಅಂದ ಹಾಗೆ ಸಾರಿಕಾ ಎಲ್ಲಿ ಮಾಸ್ಟರ್ಸ್ ಓದಿದ್ದು?”. ರಜತ್ ಈ ಪ್ರಶ್ನೆಯನ್ನು ಸಹಜವಾಗಿಯೇ ಯಾವುದೇ ಉದ್ದೇಶವಿಲ್ಲದೆ, ಬರಿ ಅವಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಕ್ಕಾಗಿ ಕೇಳಿದ್ದನು.

ಇವನಿಗೀಗ ತನ್ನನ್ನು ಅವಮಾನಿಸುವುದೇ ಗುರಿಯಾಗಿದೆ ಎಂದ್ಕೊಂಡು ಸಾರಿಕಾ ಹೇಳಿದಳು, “ನಾವೆಲ್ಲ ನಿಮ್ಮಷ್ಟು ಬುದ್ಧಿವಂತರಲ್ಲ. ಬರೀ ಬಿ.ಎ. ಓದಿರುವುದು ನಾನು. ನಿಮ್ಮ ಜಾಬ್ ಆಫರ್ಗೆ ಈ ಕ್ವಾಲಿಫಿಕೇಷನ್ ತಕ್ಕದಾಗಿಯೇ ಇತ್ತಲ್ಲ? ಇನ್ನೇನಾಗಬೇಕಿದೆ? ಅದರಲ್ಲೂ ಹೊಸ ನಿಯಮ ತರುವುದಿದೆಯೇನೋ?”.

“ಅರೇ, ನಾನೆಲ್ಲಿ ಹಾಗೆ ಕೇಳಿದೆ? ನಿಮ್ಮ ಬಗ್ಗೆ ಹೀಗೆ ತಿಳಿದುಕೊಳ್ಳೋಣವೆಂದು ಕೇಳಿದೆನಷ್ಟೆ. ಸುಮ್ಮನೆ ಊಟ ಮಾಡಿ ಎದ್ದು ಹೋದರೆ ನಿಮಗೂ ಬೋರ್ ಆಗಬಹುದೆಂದುಕೊಂಡು ಕೇಳಿದೆನಪ್ಪ. ನೀವು ನೋಡಿದರೆ ಏನೇನೋ ಊಹಿಸಿಕೊಂಡು ವಿಚಿತ್ರವಾಗಿ ಆಡುತ್ತಿದ್ದೀರಿ”, ಎಂದನು.

“ನಿಮ್ಮ ಸ್ವಭಾವ ಗೊತ್ತಿರುವುದಕ್ಕೇ ಹಾಗೆ ಹೇಳಿದೆನು. ಸುಮ್ಮನೇ ಬೇಕಾ ಈಗ ಈ ವಾದ ಎಲ್ಲರ ಮುಂದೆ?”, ಎಂದು ಅನ್ನ ಬಡಿಸಿಕೊಳ್ಳಲು ನಡೆದಳು ಸಾರಿಕಾ.

ಇವಳ ಬಳಿ ನೇರವಾಗಿ ಇವಳ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಆಗದ ಮಾತಿನ್ನು ಎಂದು ತನ್ನ ಊಟ ಮುಗಿಸಿ ಎದ್ದು ರೆಸೆಪ್ಷನ್ ಬಳಿ ನಡೆದನು ರಜತ್.

ಎಲ್ಲರ ಊಟ ಮುಗಿಯುತ್ತ ಬಂದಂತೆ, ಸುಮಾರ್ ೩ ಗಂಟೆಗೆಲ್ಲ ಕಂಪನಿ ಹೆಚ್ಆರ್ ಮೈಕ್ ಹಿಡಿದು ಅನೌನ್ಸ್ ಮಾಡಿದರು, “ದಯವಿಟ್ಟು ಎಲ್ಲರೂ ಊಟ ಮುಗಿಸಿ ಐಸ್ ಕ್ರೀಮ್ ತೆಗೆದುಕೊಂಡು ಬಂದು ಕಾನ್ಫರೆನ್ಸ್ ಹಾಲಿನಲ್ಲಿ ಸಭೆಗೆ ಸೇರಿ. ಕೆಲವೊಂದು ತುಂಬಾ ಮುಖ್ಯವಾದ ವಿಚಾರಗಳನ್ನು ಹಂಚಿಕೊಳ್ಳುವುದಿದೆ”.

ಈಗ ಅಪ್ಪ್ರೈಸಲ್ ಟೈಮ್ ಅಲ್ಲ, ಎಲ್ಲರಿಗೂ ಮೊನ್ನೆ – ಮೊನ್ನೆಯಷ್ಟೇ ರಜತ್ ಬಂದ ಕೂಡಲೇ ಇನ್ಕ್ರಿಮೆಂಟ್ ಬೇರೆ ದೊರೆತಿದೆ. ಇನ್ಯಾವುದರ ಬಗ್ಗೆಯಪ್ಪ ಎಂದುಕೊಂಡು ಎಲ್ಲರೂ ತಮ್ಮ – ತಮ್ಮಲ್ಲೇ ಗುಸು – ಗುಸು ಮಾತು ಶುರುವಿಟ್ಟುಕೊಂಡರು. ಆದರೂ ಕೇಳದೆ ಬೇರೆ ದಾರಿಯಿಲ್ಲವೆಂದು ಕುತೂಹಲದಿಂದ ಸಭೆ ಸೇರಿದರು.

ಎಲ್ಲರೂ ಸೇರಿದ್ದನ್ನು ಗಮನಿಸಿದ  ಹೆಚ್ಆರ್ ಶುರು ಮಾಡಿದರು, “ನಮ್ಮ ಕಂಪನಿಯ ಡ್ರೆಸ್ ಕೋಡ್ ಸ್ವಲ್ಪ ಬದಲಾವಣೆ ಅನಿವಾರ್ಯವೆಂದು ಮನಗಂಡು ನಿಮ್ಮೆಲ್ಲರ ವೋಟಿಂಗ್ ಮೂಲಕ ಆಯ್ಕೆಯಾದ ಹೊಸ ವಿನ್ಯಾಸದ ಯುನಿಫಾರ್ಮ್ ಮತ್ತು ಉಳಿದ ವಿಚಾರಗಳನ್ನು ಡಿಜಿಟಲೀ ಲಾಂಚ್ ಮಾಡಲು ನಮ್ಮ ರಜತ್ ಸರ್ ಅವರನ್ನು ವೇದಿಕೆಗೆ ಕರೆಯುತ್ತಿದ್ದೇನೆ”.

ನಗುಮುಖದಿಂದ ವೇದಿಕೆ ಮೇಲೆ ಹೋದ ರಜತ್, “ನಾನು ಸಹ ನಿಮ್ಮಷ್ಟೇ ಕಾತುರದಿಂದ ಕಾಯುತ್ತಿದ್ದೇನೆ, ನೀವೇ ಆಯ್ಕೆ ಮಾಡಿದ ನಿಮ್ಮ – ನಮ್ಮ ಹೊಸ ಡ್ರೆಸ್ ಕೋಡ್ ನೋಡಲು. ನಾನು ಕಲಿತಿರುವಂತೆ, ಉದ್ಯೋಗಿಗಳನ್ನು ಸಹ ನಮ್ಮ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಇಷ್ಟದಂತೆ ಕೆಲಸ ಮಾಡಿದರೆ ಅದರಿಂದ ನಮಗೂ ತೃಪ್ತಿ, ನಿಮಗೂ ಲಾಭ. ಯಾವಾಗಲೂ ಇಲ್ಲಿ ನೀವೇ ಮೊದಲು. ಇದು ನಮ್ಮ ಧ್ಯೇಯವಾಗಬೇಕು”, ಎಂದು ತನ್ನ ಹಾರ್ವರ್ಡಿನ ಬ್ಯುಸಿನೆಸ್ ಚಾಣಾಕ್ಷತೆಯನ್ನೆಲ್ಲಾ ಇಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸುವ ಅವಕಾಶವೆಂದು ಇನ್ನೂ ಏನೇನೋ ಹೇಳುತ್ತಿದ್ದನು ಉತ್ಸಾಹದಿಂದ!

ಹಾಗೆ ಮಾತನಾಡುತ್ತ ಪ್ರೊಜೆಕ್ಟರ್ ಮೇಲೆ ಬಂದ ಚಿತ್ರವನ್ನು ನೋಡಿ, ಒಂದು ಕ್ಷಣ ದಂಗಾದರೂ, ಸುಧಾರಿಸಿಕೊಂಡು ಚಪ್ಪಾಳೆ ತಟ್ಟಿದನು, “ವಾವ್, ವಂಡರ್ಫುಲ್. ತುಂಬಾ ಚೆನ್ನಾಗಿದೆ ನಿಮ್ಮೆಲ್ಲರ ಈ ಆಯ್ಕೆ. ನೈಸ್. ಮುಂದಿನ ತಿಂಗಳಿಂದ ಇದೇ ನಿಮ್ಮ ಡ್ರೆಸ್ ಕೋಡ್, ಧನ್ಯವಾದಗಳು. ಹೋಪ್ ಯು ಆಲ್ ಹ್ಯಾವ್ ಹ್ಯಾಡ್ ಎ ನೈಸ್ ಟೈಮ್ ಟುಡೇ”, ಎಂದು ಹೇಳಿ  ಹೆಚ್ಆರ್ಗೆ ಗುಟ್ಟಾಗಿ ಏನೋ ಹೇಳಿ, ಸರಕ್ಕನೇ ಅಲ್ಲಿಂದ ಹೊರಟುಹೋದನು ರಜತ್!

ಅವನು ಹೊರನಡೆದ ವೇಗ ನೋಡಿ ಗೆಲುವಿನ ನಗೆ ನಕ್ಕಳು ಸಾರಿಕಾ.

ಮುಂದುವರೆಯುವುದು

ಹಿಂದಿನ ಸಂಚಿಕೆ