ಅಣ್ಣ – ತಂಗಿ ಮತ್ತು ತಿರುಗುವ ಖುರ್ಚಿಯಲ್ಲಿನ ಸಾಮಾನ್ಯ ಜ್ಞಾನ !
ಅದೊಂದು ಭಾನುವಾರ. ಎಂದಿನಂತೆ ಸುಮಾರು 10:30 ರ ಅಂದಾಜು. ಅಜ್ಜ ಚಹಾ ಕುಡಿದು; ಸ್ಕೂಟರ್ ಹಿಡಿದು ಪೇಟೆಗೆ ಹೊರಡುತ್ತಲೇ ನನ್ನ ಸವಾರಿ ನಿಧಾನಕೆ ಅಜ್ಜನ ಓದಿನ ಕೋಣೆಗೆ ಹೊಕ್ಕಿತ್ತು. ಅಜ್ಜ ಇದ್ದಾಗ ಹೋಗುವುದು ಬೇರೆಯದೇ ಇತ್ತು. ಆದರೆ, ಅಜ್ಜ ಇಲ್ಲದಾಗ ಹೋಗಿ ಅಜ್ಜನ “ತಿರುಗುವ ಖುರ್ಚಿಯಲ್ಲಿ” ಕುಳಿತು ತಿರುಗುವುದರಲ್ಲಿ ಇದ್ದ ಮಜವೇ ಬೇರೆ. ಅಜ್ಜ ಇದ್ದಾಗಲೂ ನಮ್ಮನ್ನು ಅದರಲ್ಲಿ ಕೂರಲು ಬಿಡುತ್ತಿರಲಿಲ್ಲವೆಂದೇನಲ್ಲ. ಆದರೆ, ತಿರುಗಿಸಿದರೆ, ನಿಧಾನಕೆ ತಿರುಗಿಸು ಎಂದೋ, ಕೂರುವಾಗ ಜಾಗ್ರತೆ ಕೂರು ಎಂದೋ ಉಚಿತ ಬುದ್ಧಿಮಾತು ಕೇಳಬೇಕಾಗಿತ್ತು ಎನ್ನುವುದೇ ನನ್ನ ಸಮಸ್ಯೆಯಾಗಿತ್ತು ;).

ಅಜ್ಜನ ಖುರ್ಚಿ
ಅಂತೂ ಆ ದಿನ ಅಜ್ಜನ ಖುರ್ಚಿಯಲ್ಲಿ ಕೂತು ನನ್ನ ಪಾಡಿಗೆ ತಿರುಗುತ್ತಾ ಇರಬೇಕಾದರೆ ಅದೆಲ್ಲಿದ್ದನೋ?, ಅಣ್ಣ ಎದುರಿಗಿದ್ದ ಖುರ್ಚಿಯಲ್ಲಿ ಬಂದು ಕುಳಿತನು. ಇನ್ನು ಈ ಖುರ್ಚಿ ಬಿಟ್ಟುಕೊಡಬೇಕಾಗುತ್ತದೆ ಎಂದು ನಾನು ಯೋಚಿಸುತ್ತಿದ್ದರೆ, ಅವನದ್ದು ಬೇರೆಯದೇ ಪ್ರಶ್ನೆ. “ಆಯ್ತಾ ನಿನ್ನ ಕ್ಲಾಸ್ ಪರೀಕ್ಷೆ? ಎಲ್ಲ ಮುಗೀತಾ? ಚೆನ್ನಾಗಿ ಓದಿದ್ದಿ ತಾನೇ?”. (ನಮ್ಮ ಮನೆಯಲ್ಲಿ ಆ ದಿನಗಳಲ್ಲಿ ನಾವು ಮಕ್ಕಳು ಮಾತನಾಡುತ್ತಿದ್ದುದೇ ಅಷ್ಟೇ ವಿಷಯವೇನೋ? ಒಂದು ಆಟದ ಬಗ್ಗೆ.., ಬಿಟ್ಟರೆ ಪಾಠ!. ಬೇರೆ ಏನಾದರೆ ನಮಗೇನಾಗಬೇಕು ಎಂಬ ಭಾವವಿತ್ತೇನೋ? ಒಂದು ರೀತಿ ಯೋಚಿಸಿದರೆ ಅದೇ ಚೆನ್ನಾಗಿತ್ತು ಬಿಡಿ).
ಪರೀಕ್ಷೆ ಕಾಟ – ಪೇಚಾಟ
ಈಗ.. ಪರೀಕ್ಷೆ ನಿನ್ನೆಯೇ ಮುಗಿಯಿತು ಎಂದರೆ ಇವನು ಬಾ, ಕ್ರಿಕೆಟ್ ಆಡೋಣ ಎಂದು ಕರೆದು ನನ್ನ ಕೈಯ್ಯಲ್ಲಿ ಬಾಲ್ ಹಾಕಿಸುತ್ತಾನೆ ಎಂದುಕೊಳ್ಳುತ್ತಾ ನಿಧಾನಕೆ ಕ್ಷೀಣ ದನಿಯಲ್ಲಿ ಹೇಳಿದೆ, “ಅದೂ .. ಇಲ್ಲ, ನಾಳೆ ಒಂದು ಪರೀಕ್ಷೆ ಬಾಕಿ ಉಂಟು..”
ಅಣ್ಣ: “ಓಹ್ .. ಹೌದಾ? ಹೂಂ.. ಶನಿವಾರ ಮುಗಿಸಬೇಕಿತ್ತಲ್ಲ? ಸೋಮವಾರ ಒಂದೇ ಅಂತ ಉಂಟಾ? ಇರಲಿ ಬಿಡು, ಅಂದ ಹಾಗೆ ಯಾವ ವಿಷಯ ನಾಳೆ?”
ಏನು ಹೇಳುವುದೆಂದು ತಿಳಿಯದೇ ನಾನು ಅಚಾನಕ್ಕಾಗಿ ಬಾಯಿಗೆ ಬಂದದ್ದನ್ನು ಹಾಗೆ ಹೇಳಿಬಿಟ್ಟೆ, “ಸಮಾಜ ವಿಜ್ಞಾನ!”.
ಅಣ್ಣ: “ಓಹ್ .. ಒಳ್ಳೆದಾಯ್ತು. ಮತ್ತೆ, ಓದಿದ್ದೆಲ್ಲ ಆಯ್ತಾ ಅದಕ್ಕೆ?”
ನಾನು: “ಹಾಂ.. ಎಲ್ಲ ಆಗಿದೆ”
ಅಣ್ಣ: “ಓಕೇ.. ನಮ್ಮ ರಾಜ್ಯದ ರಾಜ್ಯಪಾಲರು ಯಾರು?”.
ಈಗ ಬೆವರುವ ಸರದಿ ನನ್ನದು! ಏಕೆಂದರೆ, ನಾನು ಪಠ್ಯ ಪುಸ್ತಕದಲ್ಲಿರುವುದನ್ನು ಬಿಟ್ಟರೆ ಬೇರೇನಾದರೂ ಓದಿದ್ದರೂ, ಅವಕ್ಕೆಲ್ಲಾ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ! ಆದರೆ, ನನ್ನ ಅಣ್ಣನ ಪ್ರಕಾರ ತಂಗಿ ಓದಿದ್ದಾಳೆಂದರೆ, ಹೇಗಿದ್ದರೂ ಚೆನ್ನಾಗಿ ಓದುವ ಹುಡುಗಿ ಎಂದ ಮೇಲೆ; ಖಂಡಿತವಾಗಿಯೂ ಎಲ್ಲವನ್ನೂ ಅರೆದು ಕುಡಿದಿರುತ್ತಾಳೆಂಬ ಭರವಸೆಯಿತ್ತೇನೋ?!
ಕೇಳಿದ ಮೇಲೆ ಏನಾದರೊಂದು ಹೇಳಲೇ ಬೇಕಲ್ಲ? ಇಲ್ಲದಿದ್ದರೆ, ದೊಡ್ಡಮ್ಮನ ಬಳಿ ದೂರು ದಾಖಲಾಗುವುದು ಖಂಡಿತ. ಏನು ಹೇಳುವುದೆಂದು ತಿಳಿಯದೆ, ಬೆಪ್ಪು ತಕ್ಕಡಿಯಂತೆ ಅವನನ್ನೇ ನೋಡುತ್ತಾ ಕುಳಿತರೂ, ಅಣ್ಣನಿಗೆ ನನ್ನ ಮೇಲೆ ಅದೇನೋ ಭರವಸೆ, ನನಗೆ ಗೊತ್ತಿದೆಯೆಂದು!
ಖುರ್ಷಿಯ ಖುಷಿ
ಅವನು ನನ್ನನ್ನು ಹುರಿದುಂಬಿಸುತ್ತಾ, “ಹಾಂ.. ಹೇಳು.. ಅದೇ.. ಕರೆಕ್ಟ್.. ನಿನಗೆ ಗೊತ್ತು.. ಹೇಳು.. ” ಎಂದನು.
ಈಗ ನಂಗೆ ಅಳುವೇ ಬರುವಂತಾಗಿತ್ತು. ಒಂದು ಕಡೆ ಗೊತ್ತಿಲ್ಲವೆಂದು ಬೇಜಾರಾದರೆ, ಇನ್ನೊಂದು ಕಡೆ ದೊಡ್ಡಮ್ಮನ ಬೈಗುಳ ಕೇಳಬೇಕು, ಇಲ್ಲ ಅಣ್ಣನಿಗೆ ಬಾಲ್ ಹಾಕುವ ಕೆಲಸ ಬರಬಹುದೇನೋ ಎಂದು.
ಅವನು ಮಾತ್ರ ಮತ್ತೆ ಮುಂದುವರೆಸುತ್ತಾ, “ನೀನೀಗ ಕೂತಿದ್ದೀಯಲ್ಲ? ಅದೇ ಶಬ್ದದಿಂದ ಶುರುವಾಗುತ್ತದೆ”, ಸುಳಿವು ಕೊಟ್ಟರೆ ಹೇಳಬಹುದೆಂದು ಹುರಿದುಂಬಿಸಿದನು.
ನಾನು: “ಖುರ್ಚಿ.. ”
ಅಣ್ಣ : “ಅಲ್ಲ.. ನಮ್ಮ ಭಾಷೆಯಲ್ಲಿ ಹೇಳು..”
ನಾನು: “ಖುರ್ಷಿ.. ”
ಅಣ್ಣ: “ಹಾಂ.. ಗುಡ್. ಮುಂದೆ.. ಹೇಳು..”
ಇನ್ನು ಹೇಳದೇ ವಿಧಿಯಿಲ್ಲವೆಂದು ಅದೇನು ಬೇಕಾದರೂ ಆಗಲಿ ಎಂದುಕೊಳ್ಳುತ್ತಾ, ನೇರವಾಗಿ ಹೇಳಿದೆ, “ನಂಗೆ ಗೊತ್ತಿಲ್ಲ… ನೀನೇ ಹೇ..ಳು…”.
ಈಗ ಅವನ ಹಣೆ ಮೇಲೆ ನೆರಿಗೆಗಳು ಮೂಡಿ, ದನಿ ಗಡುಸಾಗಿ ಬಂತು, “ಮತ್ತೆ ಎಂತ ಓದಿದ್ದು ನೀನು? ಪುಸ್ತಕದಲ್ಲಿರುವುದು ಮಾತ್ರ ಅಲ್ಲ, ಸಮಾಜ ವಿಜ್ಞಾನ ಎಂದರೆ ಸಾಮಾನ್ಯ ಜ್ಞಾನದ ಅರಿವೂ ಸಹ ನಿನಗಿರಬೇಕು. ಈ ರೀತಿ ತಯಾರಿ ಮಾಡಿಕೊಂಡರೆ ಹೇಗೆ?…. “, ಇನ್ನೂ ಏನೇನೋ ಹೇಳುತ್ತಲೇ ಇದ್ದನು. ನಾನು ಕಣ್ಣು ಪಿಳಿ-ಪಿಳಿ ಬಿಟ್ಟುಕೊಂಡು ಅವನು ಹೇಳಿದ್ದನ್ನೇ ಕೇಳಿಸಿಕೊಳ್ಳುತ್ತಾ ಕುಳಿತಿದ್ದೆನು!
ಕೊನೆಗೆ ಹೇಳಿದನು, “ಅಲ್ಲಿರುವ ಇಂದಿನ ದಿನಪತ್ರಿಕೆ ತೆಗೆ, ಅದರಲ್ಲಿ ನೋಡು. ಮೊದಲ ಪುಟದಲ್ಲಿ ಉಂಟಲ್ಲ? ಓದು. ಹೇಳು, ಈಗ ಯಾರು ರಾಜ್ಯಪಾಲರು?”
ದಡಬಡಾಯಿಸುತ್ತ ಎದುರಿನ ಟ್ರೇಯಲ್ಲಿದ್ದ ಅಂದಿನ ದಿನಪತ್ರಿಕೆ ಎತ್ತಿಕೊಂಡು ನಿಧಾನಕೆ ಓದಿ ಹೇಳಿದೆನು, “ಖುರ್ಷಿದ್ ಆಲಂ ಖಾನ್.. .. !”
ಅಣ್ಣ: “ಹಾಂ.. ಕರೆಕ್ಟ್. ನಮ್ಮ ದೇಶದ ಪ್ರಧಾನಿ ಯಾರು?”.
ನಾನು ಹಿಂದಿನ ದಿನವಷ್ಟೇ ಟಿವಿ ವಾರ್ತೆಯಲ್ಲಿ ಪದೇ ಪದೇ ಕೇಳಿಸಿಕೊಂಡಿದ್ದ ಕಾರಣ ಥಟ್ ಅಂತ ಹೇಳಿದ್ದೆ, “ಪಿ ವಿ ನರಸಿಂಹ ರಾವ್”.
ಅಣ್ಣ: “ಗುಡ್. ಸರಿಯಾಗಿ ಓದಿಕೋ”, ಎಂದು ಅಲ್ಲಿಂದ ಜಾಗ ಖಾಲಿ ಮಾಡಿದನು!
ಸಾಮಾನ್ಯ ಜ್ಞಾನ
ಈ ಘಟನೆ ಬಹಶಃ ನಾನು 3ನೇ ತರಗತಿಯಲ್ಲಿದ್ದಾಗ ನಡೆದ್ದದ್ದು. ಇದರ ಪ್ರಭಾವ ಎಷ್ಟಿತ್ತೆಂದರೆ; ಮುಂದೆ ನಾನು ಚುನಾವಣೆಯ ಫಲಿತಾಂಶ ಬಂದು, ಸಚಿವ ಸಂಪುಟ ಘೋಷಣೆಯಾಗುತ್ತಲೇ, ಕ್ಯಾಬಿನೆಟ್ ಸಚಿವರ ಪಟ್ಟಿ ಬಿಡುಗಡೆಯಾಗಿ ದಿನಪತ್ರಿಕೆಯಲ್ಲಿ ಬಂದಿದ್ದನ್ನು ಕತ್ತರಿಸಿಕೊಂಡು ಜೋಪಾನವಾಗಿ ತೆಗೆದಿರಿಸಿಕೊಳ್ಳುತ್ತಿದ್ದೆ. ಇಲ್ಲವೇ, ಬಾಯಿಪಾಠ ಮಾಡಿಕೊಳ್ಳುತ್ತಿದ್ದೆ. ಇಲ್ಲದಿದ್ದರೆ ಅಣ್ಣ ಕೇಳಿದಾಗ ಹೇಳಲು ಬೇಕಲ್ಲ!? 😉
ಅದೂ ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಂದಿನ ಬಿಜೆಪಿಯ ಸ್ಥಳೀಯ ನಾಯಕರುಗಳಾದ ಧನಂಜಯ ಕುಮಾರ್, ರುಕ್ಮಯ ಪೂಜಾರಿಯವರೆಲ್ಲ ನಮ್ಮಲ್ಲಿಗೆ ಒಂದು ದಿನ ಊಟಕ್ಕೆಂದು ಬಂದಿದ್ದಾಗ, ಧನಂಜಯ ಕುಮಾರ್ ಅವರು ಹೀಗೆ ಮಕ್ಕಳನ್ನು ೪ ಮಾತನಾಡಿಸಿ ಕೇಳಿದ್ದರು, “ನೀನು ಯಾವ ಕ್ಲಾಸ್? ಹೇಗಿದೆ ಪಾಠ ಎಲ್ಲ?”. ನಾನು ನೇರವಾಗಿ, “ಹಾಂ.. ಎಲ್ಲ ಚೆನ್ನಾಗಿದೆ. ನಾನು ೫ನೇ. ನೀವು ಯಾವ ಮಂತ್ರಿ?” ಎಂದುಬಿಟ್ಟಿದ್ದೆ! ಯಾಕೆಂದರೆ ಇವರ ಹೆಸರಿನ್ನೂ ದಿನಪತ್ರಿಕೆಯಲ್ಲಿ ಬಂದಿರಲಿಲ್ಲವಲ್ಲ? ಯಾವುದಕ್ಕೂ ಇವರ ಹೆಸರು ಮತ್ತು ಸಂಪುಟ ಸ್ಥಾನ ಎಲ್ಲರಿಗಿಂತ ಮೊದಲು ನನಗೆ ತಿಳಿದಿರಲಿ ಎಂದುಕೊಂಡಿದ್ದೆ! ಅವರು ಆ ಬಾರಿ ಚುನಾವಣೆಗೆ ನಿಲ್ಲುತ್ತಾರೆಂದು ಘೋಷಣೆಯಾಗಿತ್ತಷ್ಟೆ, ಆದರೆ ಇನ್ನೂ ಚುನಾವಣೆ ಮುಗಿದಿರಲಿಲ್ಲ ಎಂಬುದು ನನಗೆ ಆಗ ತಿಳಿದಿರಲಿಲ್ಲ!
ಸವಿ ನೆನಪು
ಏನೇ ಆದರೂ, ಆ ದಿನಗಳ ಸೊಬಗನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸಂಗತಿಗಳು ಬಹುಶಃ ಅಣ್ಣನನ್ನೂ ಸೇರಿಸಿ, ನಮ್ಮಲ್ಲಿ ಯಾರಿಗೂ ನೆನಪಿರಲಿಕ್ಕಿಲ್ಲ ಬಿಡಿ. ಅದೇನೋ ಹೇಳುತ್ತಾರಲ್ಲ? ಎಲ್ಲ ಅನುಭವಿಸಿದವರಿಗೆ ಮಾತ್ರ ನೆನಪಿರುವುದು ಅಂತ. ಸಾಮಾನ್ಯ ವಿಚಾರ ಎಂಬಂತೆ ಪ್ರಶ್ನೆ ಕೇಳಿದವರಿಗೆ ಯಾಕೆ ನೆನಪಿರುತ್ತದೆ? ಉತ್ತರಿಸಬೇಕಾದಾಗ ಗೊತ್ತಿಲ್ಲದೇ ಕಳೆದ ಆ ಭಯ, ಆತಂಕದ ಕ್ಷಣಗಳನ್ನು ಅನುಭವಿಸಿದ್ದು ನಾನಲ್ಲ?
ನಿಮ್ಮ ಸಾಮಾನ್ಯ ಜ್ಞಾನ ಬೆಳೆಯಲು ಯಾರು ಕಾರಣ? ನಮ್ಮೊಂದಿಗೆ ಹಂಚಿಕೊಳ್ಳಿ.. ! 🙂
ಟಿಪ್ಪಣಿ: ಇಲ್ಲಿರುವ ಅಜ್ಜನ ತಿರುಗುವ ಖುರ್ಚಿಯ ಚಿತ್ರ ಇತ್ತೀಚಿನದು. ಇದು ಈಗಲೂ ಇದೆ. ಆದರೆ, ತುಂಬಾ ಹಳೆಯದಾಗಿ ಬಣ್ಣ ಮಾಸಿದೆ, ಸ್ವಲ್ಪ ಬಡಕಲಾಗಿದೆ.
