ವಿಷು ವಿಶೇಷ
ಅಮ್ಮ: “ಹೌದು.. ಮೊದಲೆಲ್ಲ ಎಷ್ಟು ಗೌಜಿ ವಿಷುವಿನ ದಿನ”.
ಅಮ್ಮ: “ಹಾಗೇ ..ಈ ವಿಷು ಬಂದಾಗ ದೊಡ್ಡಪ್ಪನ ನೆನಪಾಗುತ್ತದೆ. ಎಲ್ಲರಿಗೂ ನಿತ್ಯಕ್ಕೆ ಉಡಲು ಹೊಸ ವಾಯಿಲ್ ಸೀರೆ ತರುತ್ತಿದ್ದರು ದೊಡ್ಡಪ್ಪ ಆಗ.. “.
ನಾನು: “ಹಾಂ.. ನನಗಿನ್ನೂ ನೆನಪಿದೆ.. ನಾವಷ್ಟೇ ಅಲ್ಲದೇ, ಕೆಲಸದವರೂ ಸಹ ಏನಾದರೊಂದು ಹೊಸ ಬೆಳೆ ತಂದು ಕೊಟ್ಟು, ಅಜ್ಜನ ಕಾಲು ಹಿಡಿಯುತ್ತಿದ್ದರು (ನಮಸ್ಕರಿಸುವುದು). ಆಗಿನದ್ದೆಲ್ಲಾ ಈಗ ಮರೆಯಾಗಿದೆ”.
ಅಮ್ಮ: “ಹೌದು.. ಈಗ ನೀನೇ ಕೆಲಸದವರ ಕಾಲು ಹಿಡಿದು ಕೆಲಸಕ್ಕೆ ಬನ್ನಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವುದೇ ಕೆಲಸ ಮಾಡಲು ಜನರಿಲ್ಲ”.
ನಾನು: “ಹೆಹೆ .. ಅದು ಸರಿ”.
ಕರಾವಳಿಯಲ್ಲಿ ವಿಷು ವಿಶೇಷ
ನಾವು ಮಾತನಾಡಿದ್ದು ಕೇರಳ ಮತ್ತು ಕರಾವಳಿ ಭಾಗದಲ್ಲಿ ಸ್ವಲ್ಪ ವಿಜೃಂಭಣೆಯಿಂದ ಆಚರಿಸುವ ವಿಷು (ಸೌರಮಾನ ಯುಗಾದಿ) ಹಬ್ಬದ ಬಗ್ಗೆ! ಈಗಲೂ ನಮ್ಮಲ್ಲಿ ವಿಷು ಕಣಿ ಇಡುವುದು, ನಮಸ್ಕರಿಸುವುದು, ಆಚರಣೆ ಎಲ್ಲವೂ ಇದೆ. ಆದರೆ, ಈಗ ಎಲ್ಲರೂ ಒಟ್ಟಾಗಿ ಸೇರುವುದು ಅಪರೂಪವಾಗಿದೆ ಅಷ್ಟೇ.
ನಮ್ಮ ಬಾಲ್ಯದಷ್ಟು ಸಂಭ್ರಮ ಈಗ ಇಲ್ಲ. ಆಗೆಲ್ಲ ವಿಷುವಿನ ಹಿಂದಿನ ದಿನವೇ ನಾನು ದೊಡ್ಡಮ್ಮನ ಹಿಂದೆ ದೊಡ್ಡ ಕೊಕ್ಕೆ ಹಿಡಿದುಕೊಂಡು ಗುಡ್ಡೆಯತ್ತ ಹೆಜ್ಜೆ ಹಾಕುತ್ತಿದ್ದೆ. ನಂತರ ಕೆಲವೊಮ್ಮೆ ಅಮ್ಮ – ತಂಗಿಯೊಂದಿಗೆ. ಅದರ ಉದ್ದೇಶ, ಎಳೆಯ ಗೇರುಬೀಜ(ಚೋರೆ)ವನ್ನು ಕೊಯ್ದು ತರುವುದು. ಅದನ್ನು ದೇವಕಿ-ಸುಂದರಿ ಅಜ್ಜಿಯರ (ನಮ್ಮಲ್ಲಿಗೆ ಆಗ ಕೆಲಸಕ್ಕೆ ಸಹಾಯ ಮಾಡಲು ಬರುತ್ತಿದ್ದವರು) ಬಳಿ ಬಿಡಿಸಿ ತಯಾರಿಟ್ಟುಕೊಂಡು, ಮಾರನೇ ದಿನ ಪಾಯಸ ನೈವೇದ್ಯ ಮಾಡಿ ಸವಿಯುವುದು. ಇದು ನನಗೆ ಈ ಆಚರಣೆಯ ಭಾಗದಲ್ಲಿ ಒಂದು ಮುಖ್ಯವಾದ ಅಂಶ! ನಾನಂತೂ ಅದರ ರುಚಿಗೆ ಮಾರುಹೋಗಿದ್ದೆ. ಆದರೆ, ಹೆಚ್ಚು ಚೋರೆ ಕೊಯ್ದರೆ ಗೇರುಬೀಜ ಮಾರಾಟಕ್ಕೆ ಕಮ್ಮಿಯಾದರೆ, ಅಪ್ಪ-ದೊಡ್ಡಪ್ಪ ಬೈಯ್ಯುತ್ತಾರಲ್ಲ? ಹಾಗಾಗಿ, ಲೆಕ್ಕದ್ದಷ್ಟೇ ಸಿಗುತ್ತಿದ್ದುದು. ಅದಕ್ಕೇ ಅದು ಅಷ್ಟೊಂದು ರುಚಿಯಾಗಿದ್ದದ್ದೆನೋ?!
ವಿಷು ಕಣಿ
ಅದರೊಂದಿಗೆ, ಬೆಳಗ್ಗೆ ಬೇಗನೆ ಎದ್ದು, ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು, ಹಿಂದಿನ ದಿನವೇ ತಯಾರಿಸಿಟ್ಟಿದ್ದ ವಿಷು ಕಣಿಯನ್ನು ನೋಡಿ ನಮಸ್ಕರಿಸುವುದು. ಎದ್ದ ಕೂಡಲೇ, ದಿನದ ಆರಂಭದಲ್ಲಿ ಇದನ್ನು ನೋಡುವುದು ಶುಭದಾಯಕವೆಂದು ಪ್ರತೀತಿ. ಇದು ಹೊಸ ವರ್ಷದ ಪ್ರತೀಕವೂ ಆದ್ದರಿಂದ, ವರ್ಷವಿಡೀ ಒಳ್ಳೆಯದಾಗಲಿ ಎಂಬ ಹಾರೈಕೆ. ಈ ವಿಷು ಕಣಿಯಲ್ಲಿ ಕನ್ನಡಿ, ಅಕ್ಕಿ/ಭತ್ತ, ಸೌತೆ, ಸ್ಥಳೀಯ ಕಾಲಕ್ಕನುಗುಣವಾಗಿ ಬೆಳೆದ ತರಕಾರಿ ಮತ್ತು ಹಣ್ಣುಗಳು (ಪನ್ನೇರಳೆ, ಜಂಬೂ ನೇರಳೆ, ಗೇರು ಹಣ್ಣು), ವೀಳ್ಯದೆಲೆ, ಅಡಿಕೆ ಮುಂತಾದವನ್ನು ಪೂಜ್ಯ ಭಾವದಿಂದ ದೇವರ ಮುಂದಿರಿಸಿ, ಬೇಡಿಕೊಳ್ಳುವುದು ವಿಶೇಷ.

ನಮ್ಮಲ್ಲಿ ಚಾಂದ್ರಮಾನ ಯುಗಾದಿ ಹೊಸ ವರ್ಷವೆಂದು ಪರಿಗಣಿಸಲ್ಪಟ್ಟರೂ, ಈ ವಿಷುವನ್ನೂ ಸಹ ಅಷ್ಟೇ ಶ್ರದ್ಧೆಯಿಂದ ಆಚರಿಸುತ್ತೇವೆ. ಇದು ಬಹುಷಃ ಕರಾವಳಿ ಭಾಗದ ಬಹುತೇಕರಲ್ಲಿ ಹೀಗೆಯೇ. ನನ್ನ ಪ್ರಕಾರ ನಮ್ಮ ವೇಷ-ಭೂಷಣ, ಭಾಷೆ, ಆಹಾರ ಪದ್ಧತಿ, ಸಂಸ್ಕೃತಿ-ಸಂಪ್ರದಾಯಗಳು – ಇವೆಲ್ಲವೂ ನಾವಿರುವ ಸ್ಥಳದ ವಾತಾವರಣ, ಹವಾಮಾನ, ಮತ್ತು ಸ್ಥಳ ಮಹತ್ವಕ್ಕೆ ಅನುಗುಣವಾಗಿ ಹೊಂದಿಕೆಯಾಗುತ್ತದೆ. ಅದನ್ನೇ ಈಗೀಗ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಂಡರೆ, ಇನ್ನು ಕೆಲವರು ಸಂಪ್ರದಾಯ ಪಾಲಿಸುತ್ತ, ಅದಕ್ಕೊಂದು ಗೌರವ ಸಲ್ಲಿಸುವತ್ತ ಹೆಜ್ಜೆಯಿಡುತ್ತಿದ್ದಾರೆ.
ಸಮೃದ್ಧಿಯ ಸಂಕೇತ
ಕರಾವಳಿಯಲ್ಲಿ ಈಗ ಜೋರಾಗಿ ಬಿರುಬೇಸಿಗೆ ಶುರುವಾಗಿ, ಸೆಖೆ ಹೆಚ್ಚುವ ಸಮಯ. ಅದಕ್ಕೆಂದೇ, ಹೆಚ್ಚಿನ ನೀರಿನಂಶ ಇರುವ ತರಕಾರಿ, ಹಣ್ಣುಗಳನ್ನು ಸೇವಿಸಬೇಕೆಂದು ಅಂತಹ ಸ್ಥಳೀಯ ಬೆಳೆಗಳನ್ನು ಕಣಿಯಲ್ಲಿರಿಸುವುದು ಇದರ ಒಂದು ಸಂಕೇತ. ಹಾಗೆಯೇ ವೀಳ್ಯದೆಲೆ, ಅಡಿಕೆಯೂ ಸಮೃದ್ಧಿಯ ಸಂಕೇತ. ವರ್ಷ ಪೂರ್ತಿ ಚೆನ್ನಾಗಿ ಮಳೆ-ಬೆಳೆ-ಗಾಳಿ, ಯಾವುದಕ್ಕೂ ಕೊರತೆಯುಂಟಾಗದಿರಲಿ, ಎಂದು ಪ್ರಕೃತಿಯ ಮುಂದೆ ಕೇಳಿಕೊಳ್ಳುವ ಭಾವ.
ಆತ್ಮಾವಲೋಕನ
ಅಂತೆಯೇ ಕನ್ನಡಿ ನೋಡಿಕೊಂಡು, ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಎಂಬುದನ್ನೂ ಸಹ ನಾವು ಅರ್ಥ ಮಾಡಿಕೊಳ್ಳಬೇಕು. ಈಗೆಲ್ಲ ಅದೇನೋ “ನ್ಯೂ ಇಯರ್ ರೆಸೊಲ್ಯೂಷನ್”, ಎಂದು ಹೆಸರುವಾಸಿಯಾಗಿದೆಯಲ್ಲ? ನಮಗೆ, ಇದೆಲ್ಲ ಹೊಸದಲ್ಲ. ನಮ್ಮ ಹಿರಿಯರು ಯಾವತ್ತೋ ಈ ಬಗ್ಗೆ ಸೂಕ್ಷ್ಮವಾಗಿ ನಮಗೆ ತಿಳಿಸಿಕೊಟ್ಟಿದ್ದರು ನೋಡಿ. ಆತ್ಮಾವಲೋಕನ ಮಾಡಿಕೊಂಡು, ಹೊಸ ನಿರ್ಣಯ, ಲಕ್ಷ್ಯಗಳನ್ನು ಇಟ್ಟುಕೊಂಡು ಮುನ್ನುಗ್ಗಿ ಎಂದಿದ್ದಾರೆ!
ಅಂತೆಯೇ ಇನ್ನೊಂದು ಮುಖ್ಯವಾದದ್ದು ಹಿರಿಯರನ್ನು ಗೌರವಿಸುವುದು. ವಿಷು ಕಣಿ ನೋಡಿದ ನಂತರ, ಎಲ್ಲರೂ ಹಿರಿಯರಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆಯುವುದು. ದೇವರಿಗೆ ನಮಸ್ಕರಿಸಿ ಬಂದ ಕೂಡಲೇ, ಅಮ್ಮ-ದೊಡ್ಡಮ್ಮ- ಚಿಕ್ಕಮ್ಮ ಯಾರಾದರೊಬ್ಬರು ದೊಡ್ಡ ಕಣ್ಣು ಬಿಟ್ಟು ನೋಡಿದರಷ್ಟೇ ನಮಗಾಗ ದೊಡ್ಡವರಿಗೆ ನಮಸ್ಕರಿಸಬೇಕೆಂಬ ಸೂಚನೆ ಬಂತೆಂದು ಅರ್ಥ. ದೊಡ್ಡವರು ಹೇಳದೇ ಒಂದು ಹುಲ್ಲುಕಡ್ಡಿ ಎತ್ತಿದವರೂ ಅಲ್ಲ ನೋಡಿ ನಾವೆಲ್ಲ !;) ಪ್ರತಿ ವರ್ಷವೂ ಗೊತ್ತಿದ್ದರೂ ಸಹ ಅವರು ದೊಡ್ಡ ಕಣ್ಣು ಬಿಟ್ಟು, ಗದರಿಸುವವರೆಗೂ ನಾವು ಅಜ್ಜನ ಕೋಣೆಯತ್ತ ಹೆಜ್ಜೆಯಿಡುತ್ತಿರಲಿಲ್ಲ ಬಿಡಿ!
ಹಿರಿಯರಿಗೆ ಗೌರವ
ಬಾಲ್ಯದಲ್ಲಿ ನಮ್ಮನೆಯಲ್ಲಿ ವಿಶೇಷ ದಿನಗಳಂದು, ಮತ್ತು ಈ ವಿಷುವಿನ ದಿನದಂದು ಹಿರಿಯರಿಗೆ ನಮಸ್ಕರಿಸುವುದು ಇದ್ದೇ ಇತ್ತು. ಆದರೆ, ನಾನು ಬಾಲ್ಯದಲ್ಲಿ ಹಿರಿಯರಿಗೆ ಗೌರವ ಕೊಡಬೇಕಾದುದರ ಬಗ್ಗೆ ಬೇಗನೆ ಕಲಿತುಕೊಂಡದ್ದು ಅಜ್ಜಿ ಮನೆಯಲ್ಲಿ! ಅಲ್ಲಿ ಪ್ರತಿನಿತ್ಯ ಭಜನೆ-ಆರತಿ ಆದ ಮೇಲೆ, “ಲೋಕಃ ಸಮಸ್ತಃ ಸುಖಿನೋ ಭವಂತು”, ಎಂದು ದೇವರಿಗೆ ನಮಸ್ಕರಿಸಿ ಆದ ಕೂಡಲೇ, ಒಟ್ಟಿಗಿದ್ದ ಹಿರಿಯರಿಗೆಲ್ಲ ನಮಸ್ಕರಿಸುವುದು ವಾಡಿಕೆಯಾಗಿತ್ತು. ಅದೂ ಅಲ್ಲದೆ, ಅಲ್ಲಿ ಯಾರೂ ಇಲ್ಲದಿದ್ದರೂ, ನೀವು ಒಬ್ಬರೇ ಇರುವುದಾದರೂ, ಹಿರಿಯರನ್ನು ನೆನೆಸಿಕೊಂಡು, ಅವರಿಗೆ ಗೌರವ ಸಲ್ಲಿಸುವುದಂತೂ ಇದ್ದೆ ಇತ್ತು. ಅದು ಈಗಲೂ ನಾವು ಪಾಲಿಸಿಕೊಂಡು ಬಂದಿರುವುದು, “ಅಜ್ಜಜ್ಜಿ, ಅಪ್ಪ-ಅಮ್ಮ , ಅತ್ತೆ-ಮಾವ – ಹೀಗೆ ಮನೆಯ ಹಿರಿಯರೆಲ್ಲರಿಗೂ ನಮಸ್ಕರಿಸುತ್ತೇವೆ”, ಎಂದು ಮನದಲ್ಲೇ ಹೇಳಿಕೊಳ್ಳುತ್ತಾ ಅವರನ್ನು ನೆನೆಸಿಕೊಂಡು ವಂದಿಸುವುದು. ಮನದಲ್ಲೇ ಹೇಳುವುದಾದರೂ ಕೆಲವೊಂದು ಬಾರಿ ಚಿಕ್ಕಿ ಇದನ್ನು ದೊಡ್ಡದಾಗಿ ರಭಸದಲ್ಲಿ ಹೇಳುವುದನ್ನು ಕೇಳಲು ನನಗೆ ಭಾರಿ ಇಷ್ಟ. “ಅಪ್ಪಮ್ಮ-ಅಕ್ಕ – — ” ಎಂದು ಉದ್ದಕ್ಕೆ ಶುರುವಾಗುವ ಅವಳ ಇಷ್ಟುದ್ದದ ಬೆಳೆಯುತ್ತಾ ಇರುವ ಪಟ್ಟಿಯನ್ನು ಒಂದೇ ಉಸಿರಿಗೆ ರಪ್ಪನೆ ಹೇಳಿ ಮುಗಿಸುವುದು ಚಿಕ್ಕಿಗೆ ಕರಗತವಾದ ಕಲೆ! 🙂
ಸ್ಥಳೀಯ ಸಂಸ್ಕೃತಿ-ಸಂಪ್ರದಾಯಗಳು
ಏನೇ ಆದರೂ, ಸ್ಥಳೀಯ ಸಂಸ್ಕೃತಿ-ಸಂಪ್ರದಾಯಗಳು ಉಳಿದರಷ್ಟೇ ಅದಕ್ಕೊಂದು ಅರ್ಥಪೂರ್ಣ ಬೆಲೆ. ಆದರೆ, ಅದನ್ನು ಗಂಭೀರವಾಗಿ, ಅಜ್ಜ ಆಲದ ಮರಕ್ಕೆ ಸುತ್ತಿದಂತೆ, ನಾನೂ ಸಹ ಹಾಗೆಯೇ ಸುಮ್ಮನೆ ಏನೋ ಒಂದು ಮಾಡುತ್ತೇನೆ. ಅದೇ ಸರಿ ಎಂದು ವಾದಿಸುತ್ತಾ ಕುಳಿತರೆ, ಆ ರೀತಿಯ ಬಲವಂತದ ಆಚರಣೆ ಖಂಡಿತ ಪರಿಪೂರ್ಣವಾಗಲಾರದು. ಪ್ರತಿಯೊಂದರ ಹಿಂದಿನ ಸಾಂಸ್ಕೃತಿಕ, ಸ್ಥಳೀಯ ಮತ್ತು ವೈಜ್ಞಾನಿಕ ಹಿನ್ನೆಲೆ, ಮಹತ್ವವನ್ನು ತಿಳಿದುಕೊಂಡು, ಈ ಕಾಲಕ್ಕೆ ಬೇಕಾದಂತಹ ಬದಲಾವಣೆಗಳನ್ನು ಮಾಡಿಕೊಳ್ಳುತ್ತ ಆಚರಿಸುವುದೇ ಒಂದು ವಿಭಿನ್ನವಾದ ಖುಷಿ. ನಾವು ಹೇಗೆ ಸಂಪ್ರದಾಯಕ್ಕೆ ತಕ್ಕಂತೆ ಹಬ್ಬ ಆಚರಿಸಿದೆವು ಎಂಬುದಕ್ಕಿಂತ; ಸಂಪ್ರದಾಯಕ್ಕೆ ಧಕ್ಕೆ ಬರದಂತೆ, ಹಬ್ಬದ ವಾತಾವರಣವಿದ್ದು, ಎಲ್ಲರಲ್ಲೂ ಒಟ್ಟಾಗಿ ಸಂಭ್ರಮ, ನಗು, ಸಂತೋಷ, ನೆಮ್ಮದಿ ತುಂಬಿರುವುದೇ ಎಲ್ಲದಕ್ಕಿಂತ ಮುಖ್ಯ.
ಚಿತ್ರ ಕೃಪೆ: ವಡ್ಯ ಗೋವಿಂದ ಭಟ್
