ಇತ್ತೀಚೆಗೆ ನೀವು ನೋಡಿರಬಹುದು. ಈ ವಾಟ್ಸಾಪ್ ಫ಼ೇಸ್ಬುಕ್, ಇನ್ಸ್ಟಾಗಳು ಭಾರತೀಯರ ಜೀವನದಲ್ಲಿ ಎಷ್ಟು ಹಾಸು ಹೊಕ್ಕಿದೆಯೆಂದರೆ ಸ್ವತಃ ಅದನ್ನು ನಡೆಸುತ್ತಿರುವ ನಿರ್ದೇಶಕರೂ, ಸಿಇಒಗಳೂ ಇದನ್ನು ಊಹಿಸಿರಲಿಕ್ಕೂ ಇಲ್ಲ. ಒಂದು ಸರ್ವೆಯ ಪ್ರಕಾರ ಸಾಮಾನ್ಯವಾಗಿ ಒಬ್ಬ ಭಾರತೀಯ ಸರಾಸರಿ 2 ರಿಂದ – 2:45 ಗಂಟೆಗಳಷ್ಟು ಕಾಲ ಸೋಶಿಯಲ್ ಮೀಡಿಯದಲ್ಲಿ ಸಮಯ ಕಳೆಯುತ್ತಾನಂತೆ! ಕೇಳಿ ನೋಡಿ, ನಿಮ್ಮನ್ನೇ ಅಥವಾ ಹತ್ತಿರದಲ್ಲೆ ನಿಂತಿರುವ ಸ್ನೇಹಿತ/ಬಂಧುಗಳನ್ನು! “ಅಯ್ಯೋ! ಟೈಮೇ ಇಲ್ಲ. ತುಂಬಾ ಬಿಜ಼ಿ” ಎನ್ನುವ ರೆಡಿಮೇಡ್ ಉತ್ತರ ಸಿಗುವುದು ಖಂಡಿತ.
ಇದು ತಪ್ಪು ಎಂದು ನಾನೇನು ಹೇಳುತ್ತಿಲ್ಲ. ಅದಕ್ಕಿಂತ ವಿಚಿತ್ರ ಅನಿಸುವುದು ನನಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಷಯಗಳು ಮತ್ತು ಅಲ್ಲಿನ ವಿಚಾರಗಳಿಗೆ ಜನರ ಪ್ರತಿಕ್ರಿಯೆಗಳು! ಕೆಲವೊಂದು ಉದಾಹರಣೆಗಳನ್ನು ನೋಡೋಣ. ನಮ್ಮ ಅಜ್ಜಿಯ ರೆಸಿಪಿಗಳೆಲ್ಲಾ ಈಗೀಗ ಅತಿಯಾಗಿ ಸೋಶಿಯಲ್ ಮೀಡಿಯದಲ್ಲಿ ಹರಿದಾಡುತ್ತಾ ನಿಮ್ಮ ಅಜ್ಜಿಯನ್ನೂ ತಲುಪಿರುತ್ತದೆ ನೋಡಿ. ಹಿಂದೆಂದಿಗಿಂತ ಅತಿಯಾಗಿ ಈಗ ನಿಮಗೆ ವಾಟ್ಸಾಪಿನಲ್ಲಿ ಸಾವಯವ ತರಕಾರಿ, ಸಾವಯವ ಕಲಬೆರಕೆ ರಹಿತ ಬೆಲ್ಲ, ಅಕ್ಕಿಗಿಂತ ಗೋಧಿ ಒಳ್ಳೆಯದು, ಅದಕ್ಕಿಂತಲೂ ನವಣೆ, ಸಿರಿಧಾನ್ಯಗಳು ಒಳ್ಳೆಯದು. ಹಾಗೆಯೇ ಎಷ್ಟೋ ಜನರ ಮನೆಯಲ್ಲಿ ಹಳೆಯ ಮೂಲೆ ಸೇರಿದ್ದ ಮಡಿಕೆ; ಸಾರು ಮಾಡಲು ಮತ್ತೆ ಗ್ಯಾಸ್ ಒಲೆ ಮೇಲೆ ಬಂದಿದೆ ನೋಡಿ! ಹೌದು, ಇದೆಲ್ಲಾ ಒಳ್ಳೆಯ ಬೆಳವಣಿಗೆ ಹಾಗೂ ಆರೋಗ್ಯಕರ. ಆದರೆ ಇದೇ ಮಾತು ಅನಾದಿಕಾಲದಿಂದಲೂ ಹಿರಿಯರು ಹೇಳುತ್ತಾ ಬಂದಾಗ ಯಾಕೆ ರುಚಿಸಿಲ್ಲ? ಈಗ ವಾಟ್ಸಾಪಲ್ಲಿ ಬಂದಿದೆಯೆಂದು ಎಲ್ಲರಿಗೂ ಫ಼ಾರ್ವರ್ಡ್ ಮಾಡಿ ಮಾಡಿ, ನಾವೂ ಟೆನ್ಷನ್ ಮಾಡ್ಕೊಂಡು ಅಂಗಡಿಗೆ ಹೋಗಿ, ಮಡಿಕೆ, ರೂಢಿಯೇ ಇಲ್ಲದ ನವಣೆ, ಸಜ್ಜೆ ಇತ್ಯಾದಿಗಳನ್ನು ತಂದುಕೊಂಡು ಪರದಾಡುವ ಪರಿ ಬೇಕೆ? ಯವುದಾದರೂ ಸಾಮಗ್ರಿ ಸಿಗದಿದ್ದಲ್ಲಿ ಇನ್ನೂ ಮಜ! ಆಕಾಶವೇ ತಲೆಮೇಲೆ ಬಿದ್ದವರಂತೆ ಆಡುವವರಿಗೆ ಏನೂ ಕಮ್ಮಿಯಿಲ್ಲ ಬಿಡಿ. ಇದಕ್ಕೆಲ್ಲಾ ನಿಜವಾಗಿಯೂ ಇಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಇದೆಯೇ? ಹೀಗಾದಲ್ಲಿ ಹೇಗೆ ನಮ್ಮ ಮುಂದಿನ ಜೀವನ? ಎಷ್ಟು ಸಾಧ್ಯವೋ ಅಷ್ಟನ್ನು ಅಳವಡಿಸಿಕೊಳ್ಳೋಣ. ಆಗದಿದ್ದಲ್ಲಿ ಆಗಿಲ್ಲ, ಅದು ಬೇಕಿತ್ತು, ಇದು ಇರಬೇಕಿತ್ತು, ಹಾಗಿರಬೇಕು, ಹೀಗಿದ್ದರೆ ಒಳ್ಳೆಯದು ಎಂದು ಕೊರಗುವ ಬದಲು, ಜಗತ್ತು ನಡೆಯುತ್ತಿದೆಯಲ್ಲ? ಕೇಳರಿಯದ ಕೊರೋನವನ್ನೇ ಎದುರಿಸಿದ್ದಾಗಿದೆ. ಇನ್ನೇನು? ನಮ್ಮಿಂದಾದುದನ್ನು ಪಾಲಿಸೋಣ. ಆಗದಿದ್ದಲ್ಲಿ ಆದಂತಾಗಲಿ ಎಂದು ಮುನ್ನಡೆಯಬಹುದಲ್ಲ? ಎಷ್ಟೋ ವರ್ಷಗಳಿಂದ ರೂಢಿಯಾಗಿದ್ದ ಗಂಜಿಯನ್ನೇ ಊಟ ಮಾಡೋಣ. ಎಲ್ಲರೂ ಬಳಸುವ ಬೆಲ್ಲವನ್ನೇ ಬಳಸೋಣ. ಪ್ರಪಂಚದಲ್ಲಿ ಏನಾಗುತ್ತದೆಯೋ ಅದಕ್ಕಿಂತ ಹೆಚ್ಚಿನದೇನೂ ನಮಗಾಗದು ಬಿಡಿ! ಚಿಂತೆ ಬೇಡ.
ಇನ್ನು ಕೆಲವರು ಇದ್ದಾರೆ. ಅವರು ಎಷ್ಟು ಮುಗ್ಧರೆಂದರೆ ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೆಲ್ಲವೂ ಸತ್ಯವೆಂದೇ ನಂಬಿದ್ದಾರೆ. ವರ್ತಮಾನ/ನ್ಯೂಸ್ ಫ಼ಾರ್ವರ್ಡ್ ಬಂದಿದ್ದೆಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಾರೆ. ತಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರಲಾರಂಭಿಸುತ್ತಾರೆ. ಇವತ್ತು ಒಬ್ಬರ ಪರವಾಗಿ ವಾದಕ್ಕೆ ನಿಂತವರು, ನಾಳೆ ಇನ್ಯಾರೋ, ಇನ್ನೇನೋ, ಇನ್ನೆಲ್ಲೋ ಬದಲಾಯಿತೆಂದು ಇನ್ನೊಬ್ಬರ ಪರ ನಿಲ್ಲುತ್ತಾರೆ. ಕ್ಷಣ ಮಾತ್ರದಲ್ಲಿ ತಮ್ಮ ನಿಲುವು ಬದಲಾಯಿಸುತ್ತಾರೆ. ತಾವು ಹೇಳುತ್ತಿರುವುದು, ತಮ್ಮದೇ ಮೂಗಿನ ನೇರಕ್ಕೆ ವಾದ ಮಾಡುತ್ತಿರುವುದು ಹಾಗೂ ತಮ್ಮ ಮಾತುಗಳು ಸತ್ಯಕ್ಕೆ ತುಂಬಾ ದೂರವಾಗಿದೆಯೆಂದು ಗೊತ್ತಿದ್ದರೂ ತಮ್ಮದೇ ಧೋರಣೆಗಳನ್ನು ಹರಿಬಿಡುತ್ತಿರುತ್ತಾರೆ. ಇವೆಲ್ಲದರ ಮಧ್ಯೆ ಇದರ ಉತ್ತಮ ಲಾಭ ಇನ್ಯಾರಿಗೋ ಅವರಿಗರಿವಿಲ್ಲದಂತೆಯೇ ಆಗಿರುತ್ತದೆ. ಅದ್ಯಾವುದರ ಪರಿವೆಯೇ ಇಲ್ಲದೆ ಅವರು ಇನ್ನೊಂದು ಸುದ್ದಿಯ ಹಿಂದೆ ಬಿದ್ದಾಗಿರುತ್ತದೆ. ಈ ಸೋಶಿಯಲ್ ಮೀಡಿಯದಿಂದಾಗಿ ಟಿ.ವಿ. ಮತ್ತು ದಿನಪತ್ರಿಕೆ ಮಾಧ್ಯಮದವರ ಪಾಡಂತೂ ಕೇಳುವವರೇ ಇಲ್ಲ ಬಿಡಿ. ಪ್ರತಿ ಬಾರಿಯೂ ಯಾವುದೇ ಚಾನಲ್ ಹಾಕಿ ನೋಡಿ. ಎಲ್ಲರೂ ನಮ್ಮಲ್ಲೇ ಮೊದಲು, ಬ್ರೇಕಿಂಗ್ ನ್ಯೂಸಿನಲ್ಲಿ ಮುಳುಗಿರುತ್ತಾರೆ. ಪ್ರತಿ ಸುದ್ದಿಯೂ ಬ್ರೇಕಿಂಗ್ ಅಲ್ಲದಿದ್ದರೆ ಅದು ಸುದ್ದಿಯೇ ಅಲ್ಲ. ಪ್ರೈಮ್ ಟೈಂನಲ್ಲೂ ಅದೇ ಸುದ್ದಿ, ಉಳಿದ ಹೊತ್ತಿನಲ್ಲೂ ಅದೇ ಸುದ್ದಿ. ಎಲ್ಲಿಯವರೆಗೆಂದರೆ ಸುದ್ದಿಯ ಕೊರತೆ ಎದ್ದು ಕಂಡು, ಸಿಕ್ಕ-ಸಿಕ್ಕಿದ ವಿಷಯಗಳೆಲ್ಲವೂ ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟು, ಈ 24/7 ಚಾನಲ್ಗಳು ನಿಜವಾದ ಅಗತ್ಯವೇ ಎನಿಸುವಂತಾಗಿದೆ.
ಹಾಗೆಯೇ ಯಾವುದೇ ಕಾಯಿದೆ-ಕಾನೂನುಗಳು ಬರಲಿ. ನಿಜವಾದ ಅನುಷ್ಠಾನ ಎಷ್ಟು ಬೇಗ ಜನರನ್ನು ತಲುಪುತ್ತದೆಯೋ, ಅದಕ್ಕಿಂತ ಶರವೇಗದಲ್ಲಿ ಸುಳ್ಳು-ಸುದ್ದಿಗಳು, ವಿವಾದಾತ್ಮಕ ಹೇಳಿಕೆಗಳು ಜನರ ಮನಸ್ಸಲಿ ಮನೆ ಮಾಡುತ್ತಲಿವೆ ಈ ವಾಟ್ಸಾಪ್, ಫೇಸ್ಬುಕ್ಕಿನಿಂದಾಗಿ! ರೈತರಿಗಾಗಿ ಮಾಡಿದ ಕೃಷಿ ಮಸೂದೆಯೇ ಇರಲಿ, ಅಥವಾ ಸಿನಿಮಾವೊಂದರ ರಿಮೇಕೇ ಇರಲಿ, ಇಲ್ಲಾ ಸಂಸತ್ತಿನ ಅಧಿವೇಶನವೇ ಇರಲಿ. ಎಲ್ಲದರಲ್ಲೂ ಪರಿಣಿತಿ ಉಳ್ಳವರಂತೆ ಅರ್ಧ ವಿಚಾರಗಳನ್ನು ತಿಳಿದು ಚರ್ಚೆಯಲ್ಲಿ ಭಾಗವಹಿಸುವವರಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ಅದು ಅವರ ಕ್ಷೇತ್ರವಾಗಿರಲಿ ಬಿಡಲಿ, ತಾವು ತಮ್ಮ ಮನ ಬಂದಂತೆ, ಯಾರೋ ಹೇಳಿದ ಹೇಳಿಕೆಗಳೇ ಸತ್ಯವೆಂದು ನಂಬಿ ಅವರ ಹಿಂಬಾಲಕರಾಗಿ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಸುಮ್ಮನೇ ಹೇಳಿಕೆ ಕೊಡುವುದು, ಕಾಮೆಂಟ್ ಮಾಡುವುದಕ್ಕೆ ಯಾರೂ ಹಿಂದೆ ಬೀಳುವುದಿಲ್ಲ. ಇದು ಅಂತರ್ಜಾಲ ಯುಗ. ಹಾಗಾಗಿ ಇಲ್ಲಿ ಎಲ್ಲವೂ ವೇಗವಾಗಿ ಆಗಬೇಕಲ್ಲ? ಅಷ್ಟೊಂದು ಪುರುಸೊತ್ತು ಯಾರಿಗಿದೆ? ನಾವೇ ಎಲ್ಲರಿಗಿಂತ ಮುಂದು ಎಂದು ತೋರಿಸಿಕೊಳ್ಳಬೇಕಲ್ಲ? ಪ್ರತ್ಯಕ್ಷ ಕಂಡರೂ ಪರಾಂಬರಿಸಿ ಗಾದೆ ಮಾತು ಫ಼ಾರ್ವರ್ಡ್ ಮಾಡಲು ಮಾತ್ರ ಚೆನ್ನಾಗಿದೆ, ಅಳವಡಿಸಿಕೊಳ್ಳಲಲ್ಲವೇನೋ ಅವರ ಪ್ರಕಾರ!
ಪ್ರತಿಯೊಂದರಲ್ಲೂ ಹೀಗೆಯೇ. ಅತಿಯಾದರೆ ಅಮೃತವೂ ವಿಷವೆಂದಂತೆ. ಸೋಶಿಯಲ್ ಮೀಡಿಯಾವನ್ನು ಒಬ್ಬ ಜವಾಬ್ದಾರಿಯುತ ನಾಗರಿಕರಂತೆ ಯೋಗ್ಯವಾಗಿ, ಸದ್ಬಳಕೆಗೆ ವಿನಿಯೋಗಿಸಿದರೆ ಸರಿ. ಇಲ್ಲವಾದಲ್ಲಿ ಅದೂ ಸಹ ಅಪಾಯಕಾರಿಯೆ. ಬರೆದಷ್ಟು ಮುಗಿಯದ ವಿಚಾರ ಬಿಡಿ ಈ ಒಂದು ವಿಷಯ. ಅಗ್ಗವಾಗಿ ಸಿಗುವುದು ಯಾವತ್ತಿಗೂ ಅತಿಯಾದ ಬೆಲೆ ತೆರುವ ವಿಚಾರವಾಗುತ್ತಿರುವುದು ಮಾತ್ರ ಸುಳ್ಳಲ್ಲ. ಕಡಿಮೆ ಬೆಲೆಯ ಇಂಟರ್ನೆಟ್ ಡೇಟಾ ಪ್ಯಾಕ್ಗಳೂ, ಅಗ್ಗದ ಬೆಲೆಯ ಸ್ಮಾರ್ಟ್ ಫೋನುಗಳೂ! ಇರ್ಲಿ ಬಿಡಿ. ಈ ಬರಹವನ್ನು ಫ಼ೇಸ್ಬುಕ್ಕಿನಲ್ಲಿ ಹಾಕಿ ಜನರ ಕಮೆಂಟ್ ನೋಡಬೇಕಿದೆ ನನಗೆ. ಇನ್ನೊಮ್ಮೆ ಸಿಗೋಣ!
