ಬಲೆ ಒಂಜಿ ಚಾ ಪರ್ಕ !
ಬೆಳಗಿನ ಚಹಾ ಸವಿ ಉಂಟಲ್ಲ… ಅದು… ಚಹಾದೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ! ಅದು ಬರಿ ಚಹಾದ ಬಗ್ಗೆ ಅಲ್ಲ, ನೀವು ಬೆಳಗ್ಗೆದ್ದು ಮಾಡುವ ಆತ್ಮವಲೋಕವೆಂದರೂ ತಪ್ಪಾಗಲಾರದೇನೋ.
ಈ ಚಹಾಕ್ಕೆ ನಾನು ಕರಗಿ ಹೋಗಿದ್ದು ನನ್ನ ಅಮ್ಮನಿಂದ 😉 ಇದರ ವ್ಯಸನಿ ಆದ ಕಥೆ ಹೀಗೆ ನೋಡಿ – ಬೆಳಗ್ಗೆ ಬೇಗ ಎದ್ದು ನಿದ್ದೆ ಓಡಿಸಲು, ಎಂದು ಹೇಳಿ ಕಾಲು ಕಪ್ಪಿನಷ್ಟು ಚಹಾ ಕೊಟ್ಟು ಕುಡಿಸಿದ್ದು ಅಮ್ಮನೇ! ಹಾಗೆ ನೋಡಿದರೆ ನನ್ನ ಓದಿಗಾಗಿ ಮೀಸಲಿದ್ದ ಕೋಣೆ – ಅಡುಗೆ ಕೋಣೆ! ಹಾಗಾಗಿ ನನಗೂ ಅಡಿಗೆ ಕೋಣೆಗೂ ಅವಿನಾಭಾವದ ಸಂಬಂಧ. ಹಾಗೆ ಹೈಸ್ಕೂಲಿನಲ್ಲಿಯೋ ಇಲ್ಲಾ ಅದಕ್ಕೂ ಮೊದಲೇ ಶುರುವಾದ ಈ ಬೆಳಗ್ಗೆದ್ದ ಹಾಗೆಯೇ ಕುಡಿಯುವ ಚಹಾದ ಚಟ ನನ್ನಲ್ಲಿ ಗಟ್ಟಿಯಾಗಿ ಬೇರೂರಿದೆ.
ನನಗೆ ಅತ್ಯಂತ ದುಃಖವಾಗಿದ್ದು ಹಾಸನದಲ್ಲಿ ಓದಿಗಾಗಿ ಹಾಸ್ಟೆಲಿನಲ್ಲಿರಬೇಕಾಗಿ ಬಂದ ಸಂದರ್ಭದಲ್ಲಿ. ಅನಿವಾರ್ಯವಾಗಿ ಅಲ್ಲಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಚಹಾದಿಂದ ದೂರವಿದ್ದೆ. ನಂತರ ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸ ಮಾಡುತ್ತಿರಬೇಕಾದರೆ ಶನಿವಾರ ಮತ್ತು ಭಾನುವಾರ ಅನಿವಾರ್ಯವಾಗಿ ಟಾಟಾ ದ ಟೆಟ್ಲೆ ಚಾಯ್ ಅನ್ನು ಆಸ್ವಾದಿಸುತ್ತಿದ್ದೆ. ಬೇರೆ ಯಾವುದೂ ಮಾಡಿಕೊಳ್ಳುವಂತಿರಲಿಲ್ಲ. ಆದರೆ ವಾರದ ದಿನಗಳಲ್ಲಿ ಈ ತೊಂದರೆ ಇರುತ್ತಿರಲಿಲ್ಲ! ನನ್ನಂತೆ ಚಹಾ ಪ್ರಿಯರಾದ ಎರಡು-ಮೂರು ಜನ ಗೆಳತಿಯರು ಜೊತೆಗಾರರಾಗಿದ್ದರು. ಬಹುಶಃ ನಾವು ನಮ್ಮ ಸಂಬಳಕ್ಕಿಂತಲೂ ಜಾಸ್ತಿ ಈ ಚಹಾ ಟೈಮ್ಗೆ ಇದಿರು ನೋಡುತ್ತಿದ್ದೆವು ಎನ್ನಬಹುದೇನೋ! ಆ ಕಾಲದಲ್ಲಿ ಅದೊಂದು ವಿಭಿನ್ನವಾದ ಅನುಭವ. ಅಲ್ಲಿ ಕೂತು ನಾವುಗಳು ಆಗ ನಮ್ಮ ಭವಿಷ್ಯದ ದಿನಗಳ ಬಗ್ಗೆ, ಅಲ್ಲೇ ಮಾತನಾಡುತ್ತಿರುವ ಆಂಟಿಯಂದಿರ ರೀತಿ ಇರಬಹುದಾ ಎಂದು ಏನೇನೋ ಹರಟೆ ಹೊಡೆಯುತ್ತಿದ್ದೆವು. ಈಗ ನಾವು ಜೊತೆಯಾಗಿಲ್ಲದಿದ್ದರೂ ನನಗೆ ಮತ್ತೆ ಅದೇ ನೆನಪಲ್ಲಿ ನಗು ಬರುತ್ತಿದೆ!.
ಮದುವೆಯ ನಂತರ, ಪ್ರತಿಯೊಂದು ಗುಟುಕನ್ನು ಅನುಭವಿಸಿ-ಅನುಭವಿಸಿ ಕುಡಿಯುವುದರ ಬಗ್ಗೆ ತಮಾಷೆ ಮಾಡಿದರು ಸಹ, ನಾನಂತೂ ಇಂದಿಗೂ ಅದನ್ನು ಅನುಭವಿಸಿಯೇ ಕುಡಿಯುತ್ತೇನೆ. ಮೊದಮೊದಲು ನಾನು ಬೇರೆ ಕೆಲಸಗಳನ್ನು ಮಾಡಿಕೊಳ್ಳುತ್ತಾ ಹೇಗೋ ಒಂದು ರೀತಿ ಕುಡಿಯುತ್ತಿದ್ದೆ. ಒಂದೆರಡು ತಿಂಗಳುಗಳ ನಂತರ ನಾನು ನೇರವಾಗಿ ಹೇಳಿದೆ ಇದೊಂದು ಚಹಾಕ್ಕೂ ನನಗೂ ಅವಿನಾಭಾವ ನಂಟಿದೆ. ಅದನ್ನು ಬಿಡಲು ನನ್ನಿಂದ ಸಾಧ್ಯವಿಲ್ಲ. ಅದು ಕುಡಿಯಬೇಕೆಂದು ಕುಡಿಯುವುದಲ್ಲ; ಅದನ್ನು ಅನುಭವಿಸಿ, ಅನುಭಾವಿಸಿ; ಧ್ಯಾನಾಸಕ್ತಳಾಗಿ ಕುಡಿಯುವುದರಲ್ಲಿ ನನಗೆ ವಿಶೇಷ ಆಸಕ್ತಿ. ಈಗ ಎಲ್ಲಾ ಕಡೆಯೂ ನಾನು ಇದನ್ನೇ ಪಾಲಿಸಲಾದರೆ ಅದೇ ಮಾಡುತ್ತೇನೆ. ಇದಿಲ್ಲದೇ ಇಡೀ ದಿನದ ಒಂದು ಚೈತನ್ಯ ಬರಲಾರದು. ಅದಕ್ಕೋಸ್ಕರ ನಾನು ಯಾವುದನ್ನು ತ್ಯಜಿಸಿದರೂ, ಚಹಾ ಕುಡಿಯುವ ಆಸ್ವಾದಿಸುವ, ಸಮಯವನ್ನು ಬಹುಷಃ ಸಧ್ಯಕ್ಕಂತೂ ಖಂಡಿತವಾಗಿಯೂ ಬಿಡಲಾರೆ. ಅವರಿವರು ಏನೆನ್ನುತ್ತಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ನನ್ನದೇ ಆದ ಲೋಕದಲ್ಲಿ ಈ ಸವಿಯ ಸಮಯ ಮೀಸಲಿರಬೇಕು. ಆ ಸಮಯದಲ್ಲಿ ಬರುವ ಯೋಚನೆಗಳು ಮತ್ತೆ ಯಾವತ್ತೂ ಬರಲಾರದು. ಅದೊಂದು ಆತ್ಮೀಯವಾದ ಸಂಬಂಧ. ಗಹನವಾದ ಯೋಚನೆಯಲ್ಲಿ ಮಗ್ನಳಾದರೆ,ಆ ಸಮಯದಲ್ಲಿ ಅದೆಷ್ಟು ವಿಚಾರಗಳು ಬಂದು ಹೋಗುತ್ತವೆ!.
ಹೀಗೆ ನಾವು ಮನೆಯವರೆಲ್ಲರೂ ಸಾಧಾರಣ ಈ ಚಹಾ ಚಟ ಅಂಟಿಸಿಕೊಂಡವರೇ. ತಂಗಿಗೂ ಸಹ ಚಹಾ ಕುಡಿಯದೇ ದಿನ ಬೆಳಗಾಗುವುದಿಲ್ಲ. ಅದಲ್ಲದೇ ಇನ್ನೊಂದು ಇಂಪಾರ್ಟೆಂಟ್ ವಿಷಯ ಈ ಚಹಾ ಕುಡಿಯುವ ಕಪ್ಪು.! ಬಿಳಿ ಕಪ್ಪು, ಬಣ್ಣ ಬಣ್ಣದ ಕಪ್ಪು, ಮಣ್ಣಿನದ್ದು , ಮತ್ತೊಂದು. ಹಾಗೆ ಚಹಾದಲ್ಲೂ ವೆರೈಟಿ. ಮಸಾಲ ಚಹಾ, ಗ್ರೀನ್ ಟೀ, ಲೆಮನ್ ಟೀ ಮತ್ತೊಂದು ಲೆಕ್ಕವಿಲ್ಲದಷ್ಟು ಚಹಾಗಳು! ಒಂದೊಂದಕ್ಕೂ ಅದರದ್ದೇ ರುಚಿ ಇದೆ. ಆದರೆ ಹಾಲು ಹಾಕಿ ನಾವು ನಮಗೆ ಅಭ್ಯಾಸವಾದ ಒಂದು ರೀತಿಯ ಚಹಾ ಕುಡಿಯುವುದು ಅದನ್ನು ಆಸ್ವಾದಿಸುವುದಿದೆಯಲ್ಲ…? ಅದು ಒಂದು ಆಹ್ಲಾದಕರ ವಿಚಾರ.
ಮತ್ತೆ ಉಳಿದ ಹೊತ್ತಿನಲ್ಲಿ ಬೇರೆ ಬೇರೆ ನೆಪದಲ್ಲಿ ಚಹಾ ಕುಡಿಯುವುದು ಇದ್ದದ್ದೇ. ಅಪ್ಪನ ಸ್ನೇಹಿತರು ಬಂದಾಗ, ಅಪ್ಪನೊಂದಿಗೆ ಕುಡಿಯುತ್ತಿದ್ದ ಚಹಾ, ಮನೆಯ ಪಕ್ಕದ ದೇವಸ್ಥಾನದಲ್ಲಿ ಏನೋ ಒಂದು ಸಮಾರಂಭ ಇರುವಾಗ ಬಂದು ಹೋಗುವವರಿಗೆ ಮಾಡಿಕೊಡುವ ಚಹಾ, ಬೆಳಗ್ಗಿನಿಂದ ಮನೆಯ ಯಾವದೋ ಸಮಾರಂಭದಲ್ಲಿ ಭಾಗವಹಿಸಿ ಸುಸ್ತಾದಾಗ ಸಾಯಂಕಾಲ ಮಾಡುವ ಚಹಾ, ಒಂದು ಸಣ್ಣ ಗೆಟ್ ಟುಗೆದರ್ ಎಂದು ಮಾಡುವ ಚಹಾ, ಯಾವದೋ ಒಂದು ಅಂಗಡಿಯ ಚಹಾದ ಸವಿ, ಅಕ್ಕ-ತಂಗಿಯರು ಒಟ್ಟಾಗಿ ಸೇರಿದಾಗ ಮಾಡಿ ಕುಡಿಯುವ ಚಹಾ, ಬೆಳಗೆದ್ದು ಚಹಾ ಮಾಡಿ ಕುಡಿಯುವಾಗ ನನಗೊಂದಿಷ್ಟು ಕೊಡು ಎಂದು ಹೇಳುವ ಮಾವನವರೂ, ಅದು ಗೊತ್ತಿದ್ದೂ ಸ್ವಲ್ಪ ಹೆಚ್ಚೇ ಮಾಡಿದ್ದರೂ, “ಓಹ್, ನಾನು ಸಕ್ಕರೆ ಹಾಕಿ ಆಯಿತು” ಎಂದು ಹೇಳಿದರೂ ಒಂದು ಸಿಪ್ ಕೊಟ್ಟು ಬರುವ ಚಹಾ, ಹೀಗೆ ಹತ್ತು ಹಲವಾರು! ಮತ್ತೆ ನಮ್ಮೂರಿನಲ್ಲಂತೂ ಪ್ರಸಿದ್ಧ ಹೇಳಿಕೆ ಇದು ನೋಡಿ, “ಬಲೆ ಚಾ ಪರ್ಕ!” (ಬನ್ನಿ ಚಹಾ ಕುಡಿಯೋಣ). ಬನ್ನಿ ಮತ್ತೆ!
