ವಿಶ್ವ: “ಲೇ.. ವಿಶಾಲೂ.. ಎಲ್ಲಿದೀಯ? ಬೇಗ ಬಾ..”.

ವಿಶಾಲು: “ಬಂದೆ ರೀ.. ಒಂದು ನಿಮಿಷ…”.

ಸ್ವಗತ (ವಿಶ್ವ) : “ಒಂದು ನಿಮಿಷ ಅಂತೇ.. ಒಂದು ನಿಮಿಷ.. ಇವಳ ಒಂದು ನಿಮಿಷ ಅಂದ್ರೆ ಇನ್ನೊಂದು ಅರ್ಧ ಗಂಟೆಗೆ ಪತ್ತೆಯಾಗೋಲ್ಲ ಇವಳು.. ಎಲ್ಲ ನನ್ನ ಕರ್ಮ!”.

ಸ್ವಗತ (ವಿಶಾಲು): “ಅದೇನು ಬೆಳಗ್ಗೆ ಬೆಳಗ್ಗೆ ೫ ನಿಮಿಷಕ್ಕೊಮ್ಮೆ ಇವರ ಬಳಿ ಇಲ್ಲಿ ಬಾ, ಅಲ್ಲಿ ಬಾ ಅಂತ ಇರೋದೇ ರಾಗ.. ಅಲ್ಲಿ ಹೋಗಿ ನೋಡಿದರೆ ನನ್ನ ಶರ್ಟ್ ಸಿಕ್ಕಿಲ್ಲವೆಂದೋ..ಇಲ್ಲ ಸ್ವಲ್ಪ ಬಿಸಿ ನೀರು ಕೊಡು ಎಂದೋ.. ಕಾಫಿ ಆಯ್ತಾ ಎಂತಲೋ ಏನೋ ಒಂದು ಕೇಳುವುದಿರುತ್ತದಷ್ಟೆ. ಸುಮ್ಮನೆ ಅಡುಗೆ ಕೋಣೆಯಿಂದ ಆ ಬೆಡ್ ರೂಮಿನವರೆಗೂ ನಡೆದು ಕಾಲು ನೋವು ಬಾರಿಸಿಕೊಳ್ಳುವುದಕ್ಕಿಂತ ೨ ಸಲ ಜಾಸ್ತಿ ಬೈಸಿಕೊಂಡರೂ ಪರವಾಗಿಲ್ಲ, ಇವತ್ತಂತೂ ನಾನು ಇಲ್ಲಿನ ಕೆಲಸ ಮುಗಿಸಿಯೇ ಅಲ್ಲಿ ಹೋಗಿ ಏನೆಂದು ಕೇಳುವುದು. ಅದೇನಾಗುತ್ತೋ ನೋಡೇ ಬಿಡೋಣ!”.

ಬೆಳಗೆದ್ದು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ, ತನ್ನಿಷ್ಟದಂತೆ ಚಹಾ ಆಸ್ವಾದಿಸಿ ಬೇಗ ಬೇಗನೆ ಅಡುಗೆ ಕಾರ್ಯದಲ್ಲಿ ನಿರತಳಾಗಿದ್ದಳು ವಿಶಾಲಾಕ್ಷಿ. ವಿಶ್ವ ಏಳುವುದಕ್ಕೆ ಮೊದಲು ಎಷ್ಟು ಕೆಲಸ ಮುಗಿಯುತ್ತದೋ ಅಷ್ಟು ಒಳ್ಳೆಯದು ಎಂದುಕೊಳ್ಳುತ್ತಲೇ ಅವಸರದಲ್ಲಿ ಕೆಲಸ ಮುಗಿಸುವ ಯೋಜನೆಯಲ್ಲಿದ್ದಳು. ಇನ್ನೇನು ತಾನು ಉಪ್ಪಿಟ್ಟಿಗೆ ಹುರಿದದ್ದನ್ನು ತೆಗೆದಿಟ್ಟು, ಒಗ್ಗರಣೆ ಹಾಕಲು ಎಲ್ಲ ತಯಾರಿ ಮಾಡಿಕೊಂಡಿದ್ದಳು. ಅಷ್ಟರಲ್ಲಿ ಮುಂಜಾನೆ ರಾಗ ಶುರುವಾಗಿತ್ತು, “ಲೇ… ವಿಶಾಲೂ.. ಎಲ್ಲಿದೀಯ? ….”. ಅದನ್ನು ಕೇಳುತ್ತಲೇ ಅವಳ ಕೈಯ್ಯಲ್ಲಿದ್ದ ಸೌಟು ಬಾಣಲೆಯೊಳಗೊಂದು ಲಾಗ ಹಾಕಿತ್ತು!

ವಿಶ್ವ: “ಆಯ್ತಾ..ನಿನ್ನ ಒಂದು ನಿಮಿಷ? ಸ್ವಲ್ಪ ಬೇಗ ಬರುತ್ತೀಯ? ನಿನ್ನ ಅಡುಗೆ ಮನೆಯ ಸದ್ದಿಗೆ ನಾನಿಲ್ಲಿಂದ ಏನು ಕೂಗಿಕೊಂಡರೂ ಕೇಳಿಸುವುದೇ ಇಲ್ಲ ನಿನ್ನ ಕಿವಿಗಳಿಗೆ. ಈಗ ಒಂದು ಬಾರಿ ಬರುತ್ತೀಯೋ ಇಲ್ವಾ ನೀನು?”.

ವಿಶಾಲು: “ಬಂದೇ …. ಇಲ್ಲೇ ಇದ್ದೇನಲ್ಲ? ಏನು?”.

ವಿಶ್ವ: “ಅದೂ .. ಕುಡಿಯುವುದಕ್ಕೆ ಸ್ವಲ್ಪ ಬಿಸಿ ನೀರು ಕೊಡು.. ಕಾಫಿ ಆಮೇಲೆ ಕುಡೀತೇನೆ ಆಯ್ತಾ?”

ವಿಶಾಲು: “ಸರಿ, ಇದನ್ನು ಅಲ್ಲೇ ಬಂದು ಹೇಳಬಹುದಿತ್ತಲ್ಲ? ನಾನಿದಕ್ಕೆ ಇಲ್ಲಿವರೆಗೆ ಬರಬೇಕಾ?”

ವಿಶ್ವ: “ಇಲ್ಲಿಂದ ಹೇಳಿದರೆ ನಿನಗೆ ಕೇಳಿಸುವುದಿಲ್ಲ, ಪ್ರತಿಯೊಂದಕ್ಕೂ ಅಲ್ಲಿ ಬಂದು ಹೇಳಲು ನಂಗೇನು ಬೇರೆ ಕೆಲಸ ಇಲ್ವಾ? ಇಲ್ಲಿ ಆಫೀಸಿನ ವಾಟ್ಸಾಪ್ ಮೆಸೇಜ್ ಅದಾಗಲೇ ತುಂಬಿ ತುಳುಕುತ್ತಿವೆ, ಇನ್ನು ಟೀಮ್ಸ್ ನೋಡಿದರೆ ..ನಿಂಗೇ ಗೊತ್ತಲ್ಲ?.. “, ಅವನಿನ್ನೂ ಏನೇನೋ ಹೇಳುತ್ತಲೇ ಇದ್ದನು, ವಿಶಾಲು ಅದಾಗಲೇ ಅಡುಗೆ ಮನೆ ಸೇರಿ ಬಿಸಿ ನೀರಿಗಿಟ್ಟಾಗಿತ್ತು.

ಒಟ್ಟಿಗೆ ಬೆಳಗಿನ ಉಡುಗೊರೆಯೆಂಬಂತೆ ಒಗ್ಗರಣೆ ಸ್ವಲ್ಪ ಸೀದು ಹೋಗಿತ್ತು. ಇನ್ನು ಬೇರೆ ಮಾಡುವಷ್ಟು ಸಮಯ, ತಾಳ್ಮೆ ತನಗೂ ಇಲ್ಲವೆನ್ನುತ್ತ ಅಷ್ಟೊಂದೇನಾಗಿಲ್ಲ ಎಂದುಕೊಳ್ಳುತ್ತಲೇ ಉಪ್ಪಿಟ್ಟು ಮುಂದುವರೆಸಿದಳು! ಜೊತೆಗೆ ಕಾಫಿ ಬೆರೆಸಲು ಬೇಕಾದ ತಯಾರಿಯೂ ಆಗಿತ್ತು. ಬಿಸಿ ನೀರು ಕೊಟ್ಟು ಬಂದು ಕಾಫಿ ಬೆರೆಸಿ, ತಿರುಗಿ ನೋಡಿದರೆ ಪುಣ್ಯಾತ್ಮ ನಾಪತ್ತೆ. ಯಾರೊಂದಿಗೋ ಗೇಟಿನ ಹೊರಗಡೆ ಹೋಗಿ ಹರಟೆ ಹೊಡೆಯುವುದು ಕಾಣಿಸಿತು. ಸರಿಯೆಂದು ತಲೆ ಕೊಡವಿ ಮತ್ತೆ ಉಪ್ಪಿಟ್ಟು ತಯಾರಾಯಿತೆಂದು ಅದಕ್ಕೊಂದಿಷ್ಟು ಕೊತ್ತಂಬರಿ ಸೊಪ್ಪು ಹಾಕಿ, ನಿಂಬೆ ಹಣ್ಣು ಹಿಂಡಿ ಮುಚ್ಚಿಟ್ಟಳು.

ವಿಶ್ವ: “ಇನ್ನು ನೀನು ನಂಗೆ ಕಾಫಿ ಕೊಟ್ಟಿಲ್ಲ?”.

ವಿಶಾಲು:”ಅಲ್ಲೇ ಉಂಟಲ್ಲ? ಕಪ್ಪಿಗೆ ಬಗ್ಗಿಸಿಕೊಳ್ಳಬೇಕಷ್ಟೆ”, ಎನ್ನುತ್ತಾ ಕಾಫಿ ಪಾತ್ರೆ ಕೈಯ್ಯಲ್ಲಿ ಹಿಡಿದಾಗ ಅದು ಚಳಿಗೆ ಅದಾಗಲೇ ಆರಿ ಹೋಗಿತ್ತು. ಮತ್ತೆ ಬಿಸಿಗಿಟ್ಟಳು.

ವಿಶ್ವ: “ಎಲ್ಲಿ ಉಂಟು? ಇನ್ನೂ ಬಿಸಿಯಾಗುತ್ತ ಉಂಟಷ್ಟೆ. ಸುಮ್ಮನೆ ನನ್ನನ್ನು ಒಳ ಕರೆದದ್ದು ನೀನು. ಆ ಪ್ರದೀಪ್ ಅದೇನೋ ಬ್ಯುಸಿನೆಸ್ ವಿಷಯ ಹೇಳುತ್ತಿದ್ದನಪ್ಪ”.

ಕಾಫಿ ಕಪ್ ಅವನ ಕೈಗಿತ್ತು ಮತ್ತೆ ಮಧ್ಯಾಹ್ನದ ಬಾಕ್ಸಿಗೆ ರೆಡಿ ಮಾಡಿಕೊಳ್ಳುವತ್ತ ಗಮನಹರಿಸಿದ್ದಳು ವಿಶಾಲು.

ವಿಶಾಲು ಹೆಚ್ಚುತ್ತಿದ್ದ ತರಕಾರಿಗಳತ್ತ ಒಂದು ನೋಟ ಬೀರಿ, “ಅಲಸಂಡೆ ಮತ್ತು ಕಾಳಿನ ಪಲ್ಯವ?”, ಎನ್ನತ್ತಲೇ ಕಾಫಿ ಖಾಲಿ ಮಾಡಿ ಬೇಗ ಬೇಗನೆ ಅವಳೊಂದಿಗೆ ಪಲ್ಯ, ಸಾರು ಮಾಡಲು ಕೈಜೋಡಿಸಿದನು ವಿಶ್ವ. ಅದು ಹೇಗೋ ಚಿರಿಪಿರಿ ಎನ್ನುತ್ತಲೇ ಅಡುಗೆ ಮಾಡಿ ಮುಗಿಸಿದ್ಧರು. ಅಡುಗೆ ಮನೆಯ ಸ್ಟವ್ ಸುತ್ತಲಿಗಿಡಿ ಮೆಣಸಿನ ಹುಡಿ, ಕೊತ್ತಂಬರಿ ಹುಡಿ ಚೆಲ್ಲಿಹೋಗಿತ್ತು ವಿಶ್ವನ ಪಲ್ಯದ ಕಾರುಬಾರಿನಲ್ಲಿ. ನೋಡಿದರೂ ನೋಡದಂತೆ ಇದ್ದುಬಿಟ್ಟು ಬೇಗ ಬೇಗನೆ ಬಾಕ್ಸಿಗೆ ತುಂಬಿಸಿ, ಲ್ಯಾಪ್ಟ್ಯಾಪ್ ಕೈಯ್ಯಲ್ಲಿ ಹಿಡಿದು ಕುಳಿತಳು ವಿಶಾಲು. ವಿಶ್ವನೆದ್ದು ಸ್ನಾನಕೆ ಹೋಗಿಯಾಗಿತ್ತು.

ವಿಶ್ವ: “ಲೇ.. ಇದೇನೇ ಇದು? ಗ್ರೀನ್ ಶರ್ಟಿಗೆ ಇಸ್ತ್ರಿ ಹಾಕಿಟ್ಟಿದ್ದೀಯ? ನಂಗಿವತ್ತು ವೈಟ್ ಬೇಕು, ಕ್ಲೈಂಟ್ ವಿಸಿಟ್ ಇದ್ದರೂ ಆಯ್ತು. ಈಗ ನಾನು ಬೆವರು ಸುರಿಸಿಕೊಂಡು ಇಸ್ತ್ರಿ ಮಾಡಿಕೊಳಬೇಕಿನ್ನು.. “.

ಸ್ವಗತ (ವಿಶಾಲೂ): “ಇಷ್ಟು ಮಾಡಿಕೊಟ್ಟದ್ದೇ ಕಷ್ಟದಲ್ಲಿ. ಮೊದಲೇ ಹೇಳುವುದಕ್ಕಾಗಲ್ವ? ನಂಗೆಂತ ಕನಸು ಬೀಳ್ತದ ಕ್ಲೈಂಟ್ ವಿಸಿಟ್, ಬಿಳಿ ಅಂಗಿ ಬೇಕು ಅಂತೆಲ್ಲ? ಅಲ್ಲಿ ಬಂದು ಅಡುಗೆ ಕೊನೆಯಲ್ಲಿ ಚಿರಿಪಿರಿ ಮಾಡುವ ಬದಲು, ನೋಡಿಕೊಂಡು ಇಸ್ತ್ರಿ ಹಾಕಿಕೊಳ್ಳಬಹುದಿತ್ತಲ್ಲ? ಅವಸ್ಥೆ..”, ಎಂದುಕೊಳ್ಳುತ್ತ ನಿಧಾನಕ್ಕೆದ್ದು ಬಿಳಿ ಶರ್ಟ್ ಇಸ್ತ್ರಿ ಮಾಡತೊಡಗಿದಳು.

ಸ್ವಗತ (ವಿಶ್ವ): “ಹೇಳಿಕ್ಕಿಲ್ಲ , ಕೇಳಲಿಕ್ಕಿಲ್ಲ, ತನಗೆ ಕಂಡಂತೆ ಮಾಡಿಡುವುದು. ಏನು ಪ್ರಯೋಜನ? ಇಷ್ಟು ಉಪಕಾರ ಮಾಡಿಕೊಡ್ತೇನೆ ಬೆಳಗ್ಗೆ ಬೆಳಗ್ಗೆ, ಆದರೂ ನಂಗೆ ಬೇಕಾದ ಹಾಗೆ ಏನೂ ಆಗುವುದಿಲ್ಲ ಇಲ್ಲಿ. ಎಲ್ಲರೂ ಎಷ್ಟು ಹೇಳುತ್ತಾರೆ, ನಾನೊಬ್ಬನೇ ಹೀಗೆ ಹೆಲ್ಪ್ ಮಾಡುವುದು ಜಾಸ್ತಿಯಾಯಿತು ಇವಳಿಗೆ”.

ವಿಶ್ವನಿಗೆ ತಿಂಡಿ ತಟ್ಟೆಗೆ ಹಾಕಿಟ್ಟು, ಅಡುಗೆ ಮನೆಯಲ್ಲಿ ಸ್ಟವ್ ಸುತ್ತ ಸ್ವಲ್ಪ ಕ್ಲೀನ್ ಮಾಡಿ, ತಾನು ಸ್ನಾನಕ್ಕೆ ಹೋದಳು ವಿಶಾಲು.

ವಿಶ್ವ: “ಲೇ..ವಿಶಾಲೂ.. ಕೇಳಿಸ್ತಾ?..”.

ವಿಶಾಲು: “ಏನು?..”.

ವಿಶ್ವ: “ಉಪ್ಪಿಟ್ಟಿನ ಒಗ್ಗರಣೆ ಸ್ವಲ್ಪ ಸೀದು ಹೋಗಿದೆ.. ಉಪ್ಪಿಟ್ಟಿನಲ್ಲಿ ಏನಿದ್ದರೂ ಈ ಒಗ್ಗರಣೆಯೇ ಮುಖ್ಯ.. “, ಇನ್ನೂ ಏನೋ ಹೇಳುತ್ತಿದ್ದನು. ವಿಶಾಲೂ ಮಾತ್ರ ನಲ್ಲಿ ನೀರನ್ನು ಜೋರಾಗಿ ಬಿಟ್ಟು ಹೇಳಿದಳು, “ನೀರಿನ ಶಬ್ದಕ್ಕೆ ನಂಗೇನೂ ಕೇಳಿಸ್ತಾ ಇಲ್ಲ, ಮತ್ತೆ ಬಂದು ಮಾತಾಡ್ತೇನೆ..!”.

ವಿಶ್ವ: “ನಿನ್ನದು ಇದ್ದದ್ದೇ. ಇರಲಿ ಬಿಡು”, ಎಂದು ತನ್ನ ಬಾಕ್ಸ್ ತೆಗೆದುಕೊಂಡು, ಲ್ಯಾಪ್ಟ್ಯಾಪ್ ಬ್ಯಾಗ್ ನೇತು ಹಾಕಿಕೊಂಡು ಬಾಗಿಲ ಬಳಿ ನಿಂತಿದ್ದನು ಅವಳು ಸ್ನಾನ ಮುಗಿಸಿ ಹೊರಬರುವಷ್ಟರಲ್ಲಿ. ಅವಳನ್ನು ನೋಡುತ್ತಲೇ ಕೈಬೀಸಿ ಹೊರಟೇ ಬಿಟ್ಟನು. ನಿಡಿದಾಗಿ ಉಸಿರು ಬಿಟ್ಟು ೨ ನಿಮಿಷ ಖುರ್ಚಿಯಲ್ಲಿ ಕುಳಿತುಕೊಂಡು ಸುಧಾರಿಸಿ, ತಾನೂ ಸಹ ಬೇಗನೆ ತಿಂಡಿ ತಿಂದು, ತಯಾರಾಗಿ ಆಫೀಸಿಗೆ ಹೊರಟಳು.