ಕಂಡರಿಯದ ಕಡೂರಿನ ಮೊದಲ ಪಯಣ
ಅಂತೂ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಮಿಸಿ ಚಹಾದ ಹೊತ್ತಿಗೆ ಎಲ್ಲರಿಗೂ ಈ ಗಡಸು ನೀರಿನ ಸಹವಾಸ ಸಾಕೆನಿಸಿತ್ತು. ಆದರೆ, ಬೇರೆ ದಾರಿಯಿಲ್ಲದೆ ಅಕ್ಕ – ಬಾವನಿಗೆ ಬೇಜಾರಾಗಬಾರದೆಂದು ಸುಮ್ಮನಿದ್ದೆವು. ಹಾಗೆಯೇ ನಾವೆಲ್ಲ ಸುಮಾರಷ್ಟು ಮುಖವಾಡ ಧರಿಸಿ, ನಗುತ್ತ, ಕಣ್ಣುಮುಚ್ಚಿಕೊಂಡು ಒಂದೇ ಗುಟುಕಿಗೆ ನೀರು ಕುಡಿಯುವ ಅವಸ್ಥೆ ನೋಡಿ, ನಮ್ಮ ಪಾಡಿನ ಬಗ್ಗೆ ಅವರಿಗೆ ಬೇರೆ ಹೇಳಬೇಕಿರಲಿಲ್ಲ!
ತಿರುಗಾಟ
ಮತ್ತೆ ನಿಧಾನಕೆ ಅದೂ-ಇದೂ ಮಾತನಾಡಿಕೊಳ್ಳುತ್ತ ಕಡೂರು ಸುತ್ತ ತಿರುಗಾಡುವ ಬಗ್ಗೆ ಮಾತುಕತೆ ನಡೆಯಿತು. ಕೊನೆಗೆ, ಬೇರೇನೂ ಹೊಳೆಯದೆ ಬೇಲೂರು – ಹಳೇಬೀಡು ನೋಡಿಕೊಂಡು ಬರೋಣವೆಂದು ಮಾತುಕಥೆಯಾಯಿತು. ಅಂತೂ ನಿಧಾನಕೆ ಪ್ಲಾನ್ ಮಾಡಿ, ಪಯಣದ ದಿನ ನಿಗದಿಯಾಗಿ ಹೊರಡುವಷ್ಟರಲ್ಲಿ ಎಲ್ಲರಿಗೂ ಭಾರಿ ಹುಮ್ಮಸ್ಸು. ಮತ್ತೆ ಮಂಗಳೂರು ಟು ಕಡೂರು ಪ್ರಯಾಣದಂತೆ ಆಗದಿದ್ದರೆ ಸಾಕೆಂದು ನಾನು ಮನದಲ್ಲೇ ಕೇಳಿಕೊಂಡೆ!
ಬೆಳಗ್ಗೆ ಬೇಗನೆ ಎದ್ದು ಅಲ್ಲೇ ಯಾವುದೋ ಒಂದು ಸುಂದರವಾದ ಕೆರೆಯಿದೆಯೆಂದು ಅಲ್ಲಿ ಸ್ವಲ್ಪ ಸಮಯ ಕಳೆದೆವು. ಅದು ಬೇಲೂರಿಗೆ ಹೋಗುವಾಗಲೇ ಹೋಗಿದ್ದೋ ಇಲ್ಲ ಬೇರೆ ದಿನ ತಿರುಗಾಡಿದ್ದೋ ಎಂದು ನನಗೆ ಈಗಂತೂ ನೆನಪಿಲ್ಲ! ಅದು ಬಹುಷಃ ಕಡೂರು-ಚಿಕ್ಮಗಳೂರಿನ ಮಧ್ಯೆ ಸಖರಾಯಪಟ್ಟಣದ ಅಯ್ಯನಕೆರೆ ಇರಬೇಕು! ಅದೂ ಸರಿಯಾಗಿ ನೆನಪಿಲ್ಲ. ಏನೋ ಒಂದು. ಅಂತೂ ಒಂದು ಕೆರೆ. ಅಲ್ಲಿ ಕುಳಿತುಕೊಂಡು ಒಂದಿಷ್ಟು ಫೋಟೋಸ್ ತೆಗೆದಿದ್ದು, ಎಲ್ಲರೂ ಕುಳಿತು ಹರಟೆ ಹೊಡೆದಿದ್ದು.
ಬೇಲೂರು – ಹಳೇಬೀಡು
ಅಲ್ಲಿಂದ ಬೇಲೂರು – ಹಳೇಬೀಡು ವೈಭವವನ್ನು ಕಣ್ತುಂಬಿಕೊಂಡು ಮರಳಿ ಮನೆ ದಾರಿ ಹಿಡಿದಿದ್ದೆವು. ನಂತರ ತಿನ್ನಲು ಏನಾದರೂ ಸಿಗುವುದೇ ಎಂದು ಹೋಟೆಲ್ ಹುಡುಕಿದ್ದು. ನಾವು ಮೊದಲೇ ಕುಚ್ಚಿಲಕ್ಕಿ ಗಂಜಿ ಊಟ ಮಾಡುತ್ತಿದ್ದ ಪಕ್ಕಾ ಮಂಗಳೂರಿಗರು. ಅದು ಹೇಗೋ ಬೆಳ್ತಿಗೆ ಅನ್ನ ಊಟ ಮಾಡುವುದಂತೂ ಸಾಧ್ಯವಾಗಿತ್ತು. ಆದರೆ, ಇಲ್ಲೆಲ್ಲಾ ಬೆಳಗ್ಗೆ ಬೆಳಗ್ಗೆ ತಿಂಡಿಯೂ ಬಗೆ-ಬಗೆಯ ರೈಸ್ ಐಟಮ್ಸ್ ಎಂದು ತಿಳಿದು ಕುಗ್ಗಿ ಹೋಗಿದ್ದೆವು. ಈಗ ಹೇಗೂ ಮಧ್ಯಾಹ್ನದ ಊಟ ತಾನೇ? ಆದರೂ ಆಗ ನಾವು ಮೊರೆ ಹೋಗಿದ್ದು ಸರ್ವಂತರ್ಯಾಮಿಯಾದ ಇಡ್ಲಿಗೆ! ಆಮೇಲೆ ಯಾರು ಏನು ಉಂಡೆವೋ ನೆನಪಿಲ್ಲ. ಆದರೆ ಎಲ್ಲರಿಗೂ ಪ್ರತಿ ತುತ್ತು ಗಂಟಲ ಕೆಳಗಿಳಿದಿದ್ದಂತೂ ಬಹಳ ತ್ರಾಸದಾಯಕವಾಗಿ ಎಂಬುದಂತೂ ಸುಳ್ಳಲ್ಲ! ಬಹಳಷ್ಟು ವರ್ಷಗಳಿಂದ, ಮಂಡ್ಯ-ಕಡೂರು ಎಂದು ಘಟ್ಟದ ಮೇಲೆ ಜೀವನ ಮಾಡಿ ರೂಢಿಯಿದ್ದ ಬಾವನಿಗಂತೂ ಖಂಡಿತವಾಗಿಯೂ ಇವರೆಲ್ಲರನ್ನೂ ಎಲ್ಲಾದರೂ ಹೊತ್ತು ಹಾಕಿ ಬರೋಣವೆಂದು ಅನಿಸಿರುತ್ತದೆ, ಊಟ-ತಿಂಡಿ-ಪ್ರಯಾಣದ ಮಧ್ಯೆ ನಾವು ಆಡಿದ ರೀತಿಗೆ!
ಮುಂದೆ ಹರಟೆ, ಊಟ-ಆಟ ಎಂದು ೩-೪ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ ಅಕ್ಕನ ಮನೆಯಲ್ಲಿ! ಕೊನೆಗೆ ಊರಿಗೆ ಹೊರಟು ನಿಂತೆವು. ಆಗ ಬಾವ ಕಲ್ಲಂಗಡಿ ಹಣ್ಣು ತೆಗೆದುಕೊಂಡು ಹೋಗುತ್ತೀರಾ? ದಾರಿಯಲ್ಲಿ ಹಸಿವಾದರೆ ತಿನ್ನಬಹುದು ಎಂದ ತಕ್ಷಣ, ಎಲ್ಲರೂ ಒಂದೇ ಉಸಿರಿಗೆ “ಸರಿ, ಇರಲಿ”, ಎಂದು ತಲೆಯಲ್ಲಾಡಿಸಿದ್ದೆವು! ಅದಾಗಲೇ, ಮಂಗಳೂರಿಂದ ಕಡೂರು ತಲುಪಿದ್ದ ಅವಸ್ಥೆಗೆ, ಹಿಂದೆ ಆದ ಅನುಭವಕ್ಕೆ, ಪ್ರಯಾಣಕ್ಕೆ ಹಿಡಿದ ಸಮಯ ನೆನೆಸಿಕೊಂಡು ಯಾರೊಬ್ಬರೂ ಬೇಡವೆನ್ನುವ ಸಾಹಸ ಮಾಡಲಿಲ್ಲ!
ಮೋಡ ಕವಿದ ವಾತಾವರಣ
ಹಾಗೆಯೇ ಅಕ್ಕನಿಗೆ ಕಷ್ಟವಾಗುತ್ತದೆಂದು, ಅಮ್ಮ ಮತ್ತು ಅತ್ತೆಯರು ಬೇಗನೆ ಎದ್ದು, ಹೊದಿಕೆ – ವಸ್ತ್ರಗಳನ್ನೂ ಒಗೆದಿಟ್ಟು, ಒಂದಿಷ್ಟು ಸಾಮಗ್ರಿಗಳನ್ನೆಲ್ಲಒಪ್ಪವಾಗಿಜೋಡಿಸಿ ಎತ್ತಿಟ್ಟಿದ್ದರು. ಆಗಲೇ ಅಕ್ಕನ ಕಣ್ಣಿನಲ್ಲಿಗಂಗೆ-ಯಮುನೆಬಂದಿದ್ದರು! (ಅವಳೀಗ ನನಗೆ ಬೇಕಾದಷ್ಟು ಬೈಕೊಳ್ಳುತ್ತಾಳೆ ನೋಡಿ, ಈ ರಹಸ್ಯವನ್ನೂ ನನ್ನ ಬ್ಲಾಗಿನಲ್ಲಿ ಹೊರಹಾಕಿ, ಅವಳ ಸಾಹಸಗಾಥೆಯನ್ನು ಜಗಜ್ಜಾಹೀರು ಮಾಡಿದ್ದಕ್ಕೆ !;)) “ಇದನ್ನೆಲ್ಲಾ ಯಾಕೆ ಮಾಡಿದಿರಿ? ನನಗೆ ಏನೂ ಮಾಡಲು ಬರುವುದಿಲ್ಲವೆಂದು ನೀವೆಲ್ಲ ಹೀಗ್ಮಾಡಿದ್ದ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಅವಳದ್ದು. ದೊಡ್ಡವರು ತಬ್ಬಿಬ್ಬಾದರೂ, ಸುಧಾರಿಸಿಕೊಂಡು ಅವಳನ್ನು ಸಮಾಧಾನ ಮಾಡುವಲ್ಲಿ ನಿರತರಾಗಿದ್ದರು. ಬಾವ ಮಾತ್ರ ಮತ್ತೆ ಎಲ್ಲರ ಬಳಿ ಅವಳನ್ನು ಆಡಿಕೊಳ್ಳುವ ಸದವಕಾಶವನ್ನು ಅಲ್ಲೂ ಬಿಟ್ಟುಕೊಡಲಿಲ್ಲ!, “ಅವಳಿಗೆ ನೀವೆಲ್ಲ ಹೊರಡುತ್ತೀರೆಂದು ನಿನ್ನೆಯಿಂದಲೇ ಮೋಡ ಕವಿದ ವಾತಾವರಣ, ಇಂದು ಮಳೆಯಾಯಿತು ಅಷ್ಟೇ”. ಈಗ ಕಣ್ಣೀರಿಟ್ಟ ಮುಖ, ಹುಬ್ಬು ಗಂಟಿಕ್ಕಿ, ಬಾವನತ್ತ ಗುರಾಯಿಸುತ್ತ ತಿರುಗಿತ್ತು! ನಾವೆಲ್ಲರೂ ಮೆತ್ತಗೆ ಅಲ್ಲಿಂದ ಹೊರಬಂದು ಜಾರಿಕೊಂಡೆವು!.
ಮರಳಿ ಗೂಡಿಗೆ
ಹಿಂದಿರುಗಿ ಬರುವಾಗ ಬಸ್ಸಿನುದ್ದಕ್ಕೂ ನಮ್ಮದೇ ಸಾಮ್ರಾಜ್ಯ ಎಂಬಂತೆ ದೊಡ್ಡದಾಗಿ ಹರಟೆ ಹೊಡೆಯುತ್ತ, ನಿರುಮ್ಮಳವಾಗಿ ಪ್ರಯಾಣಿಸಿದೆವು. ಎಷ್ಟಾದರೂ ಮರಳಿ ನಮ್ಮ ಊರಿಗೆ ಹೋಗುತ್ತಿರುವುದು ತಾನೇ? ಗುರುತು ಪರಿಚಯವಿಲ್ಲದ ಊರಿನ ಮೊದಲ ಪಯಣದಲ್ಲೇ ಯಶಸ್ವಿಯಾಗಿದ್ದೆವು ಎಂದ ಮೇಲೆ; ಇನ್ನು ಮರಳಿ ಊರಿಗೆ ಹೋಗುವಾಗ ಯಾಕೆ ಭಯ? ಅದೂ ಅಲ್ಲದೆ, ತಂಪೆರೆಯಲು ಕಲ್ಲಂಗಡಿಯೂ ಜೊತೆಯಾಗಿತ್ತಲ್ಲ? ಅಂತೂ ಊರಿಗೆ ಮರಳಿ ಬಂದು ಬಾವಿಯ ನೀರು ಕುಡಿದು, ಕುಚ್ಚುಲಕ್ಕಿ ಗಂಜಿ ಉಂಡು, ನಮ್ಮದೇ ಹಾಸಿಗೆಯಲ್ಲಿ ಉರುಳಿಕೊಂಡ ಮೇಲೆಯೇ ಅವೆಲ್ಲದರ ಬೆಲೆ ಮತ್ತೆ ಅರಿವಿಗೆ ಬಂದಿದ್ದು!
ಅಕ್ಕರೆ
ಇದನ್ನೆಲ್ಲಾ ಈಗ ನೆನೆಸಿಕೊಂಡರೆ ನಗು ಬರುತ್ತದೆ. ಅಂದಿನ ಜೀವನಕ್ಕೂ, ಇಂದಿನದಕ್ಕೂ ಅಜಗಜಾಂತರ ವ್ಯತ್ಯಾಸ. ಅದು ಪ್ರಯಾಣವೇ ಇರಲಿ, ಊರುಗಳ ಅಭಿವೃದ್ಧಿಯೇ ಆಗಿರಲಿ, ಜೀವನಶೈಲಿ, ಮತ್ತೆ ಊಟ-ತಿಂಡಿ ಇತ್ಯಾದಿ. ಈಗ ಎಲ್ಲಊರಿನಲ್ಲಿ ಎಲ್ಲವೂ ಸಿಗುತ್ತದೆ. ಸಿಗದಿದ್ದರೆ, ಬೆರಳ ತುದಿಯಲ್ಲಿ ಮೊಬೈಲ್ ಕುಟ್ಟಿಕೊಂಡು ಆರ್ಡರ್ ಮಾಡಿಕೊಳ್ಳಬಹುದು. ಅದೂ ಸಾಧ್ಯವಿಲ್ಲವೆಂದರೆ, ಎದ್ದು ಸೀದಾ ಬೇಕಾದಲ್ಲಿಗೆ ಹೊರಟುಹೋಗಿ ತೆಗೆದುಕೊಂಡು ಬರುವುದು! ಎಲ್ಲವೂ ಇಷ್ಟು ಸುಲಭವಾಗಿ ಕೈಗೆಟುಕುವಂತೆ ಇರಬಾರದು. ಇದರಿಂದ ಸ್ಥಳೀಯ ಸವಿಯ ನವಿರಾದ ಅನುಭವಗಳನ್ನು ಕಳೆದುಕೊಳ್ಳುತ್ತೇವೆನೋ? ಅದೇನೋ ಹೇಳುತ್ತಾರಲ್ಲ? ಎಲ್ಲವೂ ಗ್ಲೋಬಲೈಜ್ಡ್ ಈಗ. ಅನುಕೂಲ, ಅನಾನುಕೂಲ ಎರಡೂ ಇವೆ. ಆದರೂ 2000ನೇ ಇಸವಿಗಿಂತ ಮೊದಲಿನ ಜೀವನವೇ ಸುಂದರ, ಮತ್ತು ಒಂದು ರೀತಿ, ಆ ಜೀವನ ಮಾಧುರ್ಯ ತುಂಬಿ ಹೃದಯಕ್ಕೆ ಹತ್ತಿರವಾಗಿತ್ತು! ನೀವೇನಂತೀರಿ?
