ದಟ್ಟವಾದ ಕಪ್ಪು ಕಾಡಿಗೆಯದು
ಶತಪ್ರಯತ್ನ ಮಾಡುತಲಿಹುದು
ಕಂಡರೂ ಕಾಣದಂತಿಹ ಅಶ್ರುಗಳ
ಆ ಕಣ್ರೆಪ್ಪೆಗಳಡಿ ಮರೆಮಾಚಿಡಲು

ಗಾಢ ಬಣ್ಣ ಮೆತ್ತಿದ ತುಟಿಯಂಚಿನಲಿ
ಅವಿತಿಹುದು  ನೋವಿನ ಛಾಯೆ
ಕೆಂಪು ಅಧರದಿ ಮೂಡಿಹ ಶುಷ್ಕ ನಗು
ಮಾಸಿಹುದು ಅಗಾಧ ವಿಷಾದವನು

ಮೊಗದ ತುಂಬಾ ತುಂಬಿದೆ ಥಳುಕು –
ಬಳುಕಿನ ಕೃತಕ ಸೌಂದರ್ಯ ವರ್ಧಕ
ಮೂರ್ತವೆತ್ತ ಗಾಂಭೀರ್ಯ ಬೇಕೆಂದರೂ
ವಿಷದ ಪಡಿಸಲಾರದ ವಿಷಯವದು

ಎಲ್ಲಾ ಮರೆತು ಎಲ್ಲೋ ಮೆರೆಯಬಲ್ಲೆ
ಲೋಕದ ಕಣ್ಣಿಗೆ ಮಣ್ಣೆರಚಬಲ್ಲೆ
ಆ ಪೊರೆಯ ಕಳಚಲಿಹೆನಲ್ಲ ಇಲ್ಲೇ
ಕಣ್ದೆರೆದರೆ ಕಾಣಿಸುವ ನಿನ್ನ ಪ್ರತಿಬಿಂಬ

~ ಸ್ಮಿತಾ ಆಲಂಗಾರ್