ಭಾನುವಾರ..! ಭಾನುವಾರ ಬಂತೆದರೆ ಸುತ್ತಾಡಿಕೊಂಡು ಸಮಯ ವ್ಯರ್ಥ ಮಾಡುವವರೆಂದೇ ಪ್ರ(ಕು)ಖ್ಯಾತಿ ಪಡೆದಿರುವ ಬೆಂಗಳೂರಿಗರು ನಾವು! ಈ ಹೆಸರಿಗೆ ಧಕ್ಕೆ ತಂದು; ಹೀಗೆಂದು ಭಾವಿಸುವ ದೊಡ್ಡ ಮಟ್ಟಿನ ಜನಸಮೂಹವನ್ನು ನೋವಿನ ಕೂಪಕ್ಕೆ ತಳ್ಳಿದ ಪಾಪ ನಮಗೆ ಅಂಟಬಾರದೆಂದು ಧೃಢ ಸಂಕಲ್ಪಗೈದು ನಾವು ಕಳೆದ ಭಾನುವಾರ ಜಯನಗರದತ್ತ ಹೊರಟೆವು! 

ಮಧ್ಯಾಹ್ನ ಊಟದ ಹೊತ್ತಿನವರೆಗೂ ಸೂರ್ಯನೇ ಊಟಕ್ಕೆಂದು ಭುವಿಗಿಳಿದು ಬಂದಿದ್ದನೇನೋ ಎಂಬಷ್ಟು ಸೆಖೆ – ಬಿಸಿಲಿತ್ತು. ಎಷ್ಟಾದರೂ ಇದು ನಮ್ಮ ಬೆಂಗಳೂರು. ತನ್ನ ಅಸಲಿಯತ್ತು ತೋರಿಸಲೋ ಬೇಡವೋ ಎಂಬಂತೆ ಮಧ್ಯಾಹ್ನ ೩ ಗಂಟೆಯಾಗುವಷ್ಟರಲ್ಲಿ ಶರವೇಗದ ಕೋಲ್ಮಿಂಚುಗಳು ಬಡಿದು ಇಡೀ ಬೆಂಗಳೂರೇ ಕತ್ತಲಲ್ಲಿ ಮುಳುಗುವುದೇನೋ ಎಂಬಂತೆ ಭಾಸವಾಗುತ್ತಿತ್ತು. ಮುಸುಕಿದ ಮೋಡಗಳೇನೋ ಘಳಿಗೆಗೊಂದು ಅವತಾರವೆತ್ತುವಲ್ಲಿ ಮಗ್ನವಾಗಿದ್ದವು! ವೈಟ್ಫೀಲ್ಡಿನಲ್ಲಿ ಮಳೆ,  ಸರ್ಜಾಪುರದಲ್ಲಿ ತುಂತುರಿಗಿಂತಲೂ ಕಡಿಮೆ; ಆದರೂ ರಸ್ತೆ ಪೂರ್ತಿ ಕೊಚ್ಚಿಹೋಗುವಂತಹ ಕೊಚ್ಚೆ ನೀರು! ಜೆಪಿ ನಗರದ ೮ನೇ ಹಂತದಲ್ಲಿ ಗುಡುಗು – ಮಿಂಚಾದರೆ, ೬-೭ನೇ ಹಂತದಲ್ಲಿ ಬರೀ ಕಾರ್ಮೋಡಗಳು! 

‘ಜಯನಗರ’ – ನೀವು ಬೆಂಗಳೂರಿಗೆ ಬಂದ ಹೊಸದರಲ್ಲಿ ಯಾವ ಏರಿಯಾದಲ್ಲಿ ನೆಲೆಯೂರುತ್ತೀರೋ ಆ ಜಾಗ ನಿಮಗೆ ಬಹಳ ಆಪ್ತವೆನಿಸುತ್ತದೆ ಎಂದರೆ ಅತಿಶಯೋಕ್ತಿಯಾಗದೇನೋ. ಹಾಗೆಯೇ ಈ ಜಯನಗರವೆಂದರೆ ನನಗಂತೂ ಬಹಳ ಆಪ್ತ! ಮನದಣಿಯುವಷ್ಟು ಕಾಲ ಇಲ್ಲಿ ಕಳೆದರೂ; ಕ್ಷಣ – ಕ್ಷಣಕ್ಕೂ ಮನಸ್ಸನ್ನು ಆವರಿಸಿಬಿಡುತ್ತದೆ ಈ ಜಾಗ! ಅಚ್ಚುಕಟ್ಟಾದ ರಸ್ತೆಗಳು, ವೃತ್ತಗಳು, ತಂಪೆರೆಯುವ ಬೃಹದಾಕಾರದ ಮರಗಳು, ಸಣ್ಣ – ಪುಟ್ಟ ಪಾರ್ಕ್ಗಳು ಮತ್ತು ಗಿಡಗಳು, ಹತ್ತು ಹಲವು ಅಂಗಡಿ ಮುಗ್ಗಟ್ಟುಗಳು, ಆಪ್ತವೆನಿಸುವ ರಾಗಿಗುಡ್ಡ ದೇವಸ್ಥಾನ ಮತ್ತು ನಮ್ಮ ಪ್ರೀತಿಯ ಪುಟ್ಟ ಲೈಬ್ರರಿ! ಹೀಗೆ ಒಂದೆರಡಲ್ಲ ಇಲ್ಲಿ ಇಷ್ಟವಾಗುವುದು!  

೬-೭ ವರ್ಷಗಳಿಂದ ಕನಿಷ್ಟಪಕ್ಷ ಒಂದೆರಡು ಬಾರಿಯಾದರೂ ಜಯನಗರದತ್ತ ಹೋಗಿ ಬಂದರೇನೇ ಮನಸ್ಸಿಗೆ ಸಮಾಧಾನ!  ಅದೇ ನಿರೀಕ್ಷೆಯಲ್ಲಿ ಜಯನಗರದ ಸವಿಯನ್ನು ಸವಿಯಲು ಈ ಬಾರಿಯೂ ಕಾತುರಳಾಗಿ ಕುಳಿತಿದ್ದೆ ನಾನು! ಆದರೆ, ಈ ಬಾರಿ ಬಹಳಷ್ಟು ನಿರಾಸೆಯಾಯಿತು. ಅಭಿವೃದ್ಧಿಯ ನೆಪದಲ್ಲಿ ಆವರಿಸಿರುವ ಮೆಟ್ರೋ ನಿರ್ಮಾಣದಿಂದ ಮದುಮಗಳ ಕಳೆಯಿಂದ ದಿನವೂ ಕಂಗೊಳಿಸುತ್ತಿದ್ದ ಜಯನಗರ; ಗಾಯಗೊಂಡು ಮೂಲೆಗುಂಪಾದ ಹಣ್ಣು ಮುದುಕಿಯಂತೆ ಕಾಣುತ್ತಿದ್ದಾಳೆ! ಕಣ್ಣು ಹಾಯಿಸಿದಷ್ಟೂ ದೂರದವೆರೆಗೂ ಕಾಣಿಸುತ್ತಿದ್ದುದು ಬರೀ ಸಿಮೆಂಟ್ ಮತ್ತು ಕಬ್ಬಿಣದ ನಿರ್ಮಾಣ ಸಾಮಗ್ರಿ ಮತ್ತು ನಿರ್ಮಾಣ ಹಂತದಲ್ಲಿರುವ ಮೆಟ್ರೋದಿಂದ ಇರಿಸುಮುರಿಸಾದ ಹಾದಿಗಳು! 

ರಾಗಿಗುಡ್ಡದ ರಸ್ತೆಯಲ್ಲಿ ಯಾವುದೇ ಪರಿಚಯದ ಮುಖಗಳಿಲ್ಲ! ನಾವು ಅಡಿಯಿಟ್ಟ ಸಮಯದ ದೋಷವೋ ಅಥವಾ ನಿಜವಾಗಿಯೂ ಅಲ್ಲೀಗ ಯಾರೂ ಇಲ್ಲವೋ ತಿಳಿದಿಲ್ಲ! ರಸ್ತೆಯ ಬದಿಯಲ್ಲಿದ್ದ ನಮ್ಮ ಪ್ರೀತಿಯ ಲೈಬ್ರರಿ ಅಂಕಲ್ ಎಲ್ಲಿದ್ದಾರೋ ತಿಳಿಯದೀಗ! ಕನ್ನಡ ಪುಸ್ತಕಗಳೊಂದಿಗೆ ಆಪ್ತವಾಗಿ ಬೆರೆಯುವ ಭಾವಗಳು ಎಂದೋ ಕಳೆದುಹೋದಂತೆನಿಸಿತ್ತು. ರಸ್ತೆ ಬದಿಯಲ್ಲಿದ್ದ ಎಳನೀರು ಮಾರುತ್ತಿದ್ದ ಅಣ್ಣನೂ ಕಾಣಿಸುತ್ತಿಲ್ಲ! ಬಿಸಿಲ ಬೇಗೆಗೆ ಒಳ್ಳೆಯ ದರದಲ್ಲಿ , ಒಳ್ಳೆಯ ಎಳೆನೀರನ್ನು ನಿಷ್ಠೆಯಿಂದ ಮಾರುತ್ತಿದ್ದ ಎಳನೀರು ಮಾರಾಟಗಾರನಾತ. ದುಡ್ಡು ತರಲು ಮರೆತುಹೋದರೂ ದಣಿವಾರಿಸಿ ಹೋಗಿ, ಮತ್ತೆ ಕೊಡಿಯೆಂದಾತನಿಗೆ ಲೆಕ್ಕವಿತ್ತೋ; ಇಲ್ಲ, ಬರೀ ಗ್ರಾಹಕರ ಸಂತೃಪ್ತಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನೇನೋ ಗೊತ್ತಿಲ್ಲ!

ಆಧುನಿಕತೆಗೆ ಏನೂ ಕೊರತೆಯಿಲ್ಲವೆಂಬಂತೆ ಕಾಣಸಿಗುತ್ತಿದ್ದ ಬ್ಯಾಂಗಲೋರ್ ಸೆಂಟ್ರಲ್ ಮಾಲ್ ಮಾತ್ರ ಎಂದಿನಂತೆ ಗಿಜಿಗುಡುತ್ತಲಿದೆಯೆನಿಸುತ್ತಿತ್ತು. ಮೊದಲೆಲ್ಲ ನನಗೆ ಮಜವೆನಿಸುತ್ತಿದ್ದುದು ಅಲ್ಲಿರುವ ವಿಲೇಜ್ ಕಾನ್ಸೆಪ್ಟ್!  ಪಟ್ಟಣದ ಮಳಿಗೆಯಲ್ಲಿ ಹಳ್ಳಿ ಮನೆಯ ಭಾವನೆಯ ಸವಿಯ ಅನುಭವಿಸುವ ಸುಯೋಗ! ಇದೆಲ್ಲ ಸೋಜಿಗವೆಂಬಂತೆ ಭಾಸವಾಗುತ್ತಿತ್ತು. ಈಗ, ಬೆಂಗಳೂರಿನಲ್ಲಿ ಬಿಡಿ; ನಮ್ಮ ಹಳ್ಳಿಯ ಊರಿನಲ್ಲೇ ಇಂತಹ ಕಾನ್ಸೆಪ್ಟ್ಗಳು ಬಂದರೆ ಅಚ್ಚರಿಯಿಲ್ಲ! 

ಮುಂದಡಿಯಿಟ್ಟರೆ ಎಂದಿನಂತೆ ಚಿಕ್ಕದಾದರೂ ಚೊಕ್ಕವಾಗಿರುವ ‘ರಾಘವೇಂದ್ರ ಉಪಹಾರ’ ಮತ್ತು ಅಲ್ಲಿನ ಆತ್ಮೀಯತೆ. ಅಲ್ಲಿಗೆ ಬಂದು ತಿಂಡಿ – ಕಾಫಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರನ್ನು ನೋಡಿದಾಗ ಮಾತ್ರ ಮತ್ತೆ ಹಳೆಯ ಜಯನಗರದ ನೆನಪುಗಳು ಮರುಕಳಿಸಿದಂತಾಯಿತು. ಅದೇ ಆತ್ಮೀಯ ಹರಟೆ, ಸ್ವಾದಿಷ್ಟವಾದ ತಿಂಡಿ-ತಿನಿಸುಗಳು – ಅಕ್ಕಿ, ರಾಗಿ ರೊಟ್ಟಿ ಇತ್ಯಾದಿ, ಅದೇ ಗಿಜಿಗಿಡುವ ಕಾಫಿ ಪ್ರಿಯರು, ಹಲ್ಲುಬಿಟ್ಟುಕೊಂಡು ನಾವೇ ಸುಂದರಿಯರಿಲ್ಲಿ ಎಂಬಂತೆ ತಮ್ಮದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುವ ಸುತ್ತಲಿನ ಪಿಜಿಗಳಿಂದ ಬಂದ ಕನ್ಯಾಮಣಿಗಳು, ಅವರಿಗೆ ಕೇಳಿಸಲೆಂದೇ ಗುಸು-ಪಿಸು ಆಡಿಕೊಳ್ಳುತ್ತಿದ್ದ ಹುಡುಗರು! 

ಅಷ್ಟಾದರೂ ಉಳಿದಿರುವುದು ನಮ್ಮ ಪುಣ್ಯವೆಂದುಕೊಂಡು ಕಾರ್ನರ್ ಹೌಸ್ ಐಸ್ ಕ್ರೀಮ್ ಪಾರ್ಲರಿನತ್ತ ಬರುತ್ತಿದ್ದಂತೆಯೇ ಕಿವಿಗೆ ಸೀಸ ಸುರಿದಂತೆ ಹಿಂದಿ ಮಾತನಾಡುವವರ ದಂಡೇ ಎದುರಿಗೆ ಬಂದಿತ್ತು! ಅಂಗಡಿಯಲ್ಲಿದ್ದ ಬಹಳಷ್ಟು ಜನ ಹಾಗೆಯೇ ಅಕ್ಕ ಪಕ್ಕದ ಕೆಲ ವ್ಯಾಪಾರಿಗಳೂ ಹಿಂದಿಯಲ್ಲೇ ವ್ಯವಹರಿಸುತ್ತಿದ್ದುದು ಕೇಳಿ ಮತ್ತೆ ವೈಟ್ ಫೀಲ್ಡ್ ಕಡೆಗೇನಾದರೂ ಬಂದೆವೇನೋ ಎನಿಸುತ್ತಿತ್ತು! ಆದರೆ, ಇದೇ ಸತ್ಯವೆಂಬ ಅರಿವಾಗಿ ಮುಂದಡಿಯಿಟ್ಟೆ.

ಎಲ್ಲರೂ ಸಾಮಾಜಿಕ ಜಾಲತಾಣದಲ್ಲಷ್ಟೇ; ಅಲ್ಲೆಲ್ಲೋ ಅಮೇರಿಕಾದಲ್ಲಿ ಕೂತು ಹಿಂದಿ ಹೇರಿಕೆಯಾಗುತ್ತಿದೆಯೆಂದು ಬೊಬ್ಬಿರಿಯುವಷ್ಟು / ಪೋಸ್ಟ್ / ಕಾಂಮೆಂಟ್ ಮಾಡಿದಷ್ಟು ಸುಲಭವಲ್ಲ ಈ ಸಮಸ್ಯೆಯ ಜಡದ ಆಳವೆಂದು  ವೈಟ್ ಫೀಲ್ಡ್ ಗೆ  ಬಂದ ಹೊಸದರಲ್ಲಿ ಅರಿವಾಗಿತ್ತು ನನಗೆ! ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ನನ್ನೊಂದಿಗೆ ಹಿಂದಿಯಲ್ಲಿ ವ್ಯವಹರಿಸುತ್ತಿದ್ದುದಕ್ಕೆ ಆಕ್ಷೇಪವೆತ್ತಿ, ಕನ್ನಡದಲ್ಲಿ ಮಾತನಾಡಬಹುದಲ್ಲ ಎಂದಾಗ ಅವರು ಹೇಳಿದ ಸಮಸ್ಯೆಗಳು ಕಠಿಣವಾಗಿ ಎಲ್ಲೋ ಹೋಗಿ ತಲುಪಿದೆಯೆಂದೆನಿಸುತ್ತಿತ್ತು. ನೀವೇನೋ ಸುಲಭವಾಗಿ ಹೇಳುತ್ತೀರಾ, ಆದರೆ ನಮ್ಮ ಹೊಟ್ಟೆಪಾಡು, ವ್ಯಾಪಾರವಾಗಬೇಕಾದರೆ ಹಿಂದಿಯಲ್ಲಿ ಮಾತನಾಡಿದರೆ ನಡೆಯುತ್ತದೆ, ಇಲ್ಲದಿದ್ದಲ್ಲಿ ಅವರು ನಮ್ಮೊಂದಿಗೆ ವ್ಯವಹರಿಸುವುದಿಲ್ಲ, ಅದಕ್ಕೆ ನಮ್ಮ ಲಾಭಕ್ಕಾಗಿ ನಾವು ಕಲಿಯುತ್ತಿದ್ದೇವೆ. ಮನೆ ಕೆಲಸಕ್ಕಾದರೂ ಅಷ್ಟೇ, ಹಿಂದಿ ಬರುವುದಿದ್ದಲ್ಲಿ ಮಾತ್ರವೇ ಅವರು ಬರಹೇಳುತ್ತಾರೆ, ನೀವಂತು ನಿಮ್ಮ ಮನೆ ಕೆಲಸಕ್ಕೆ ಕರೆಯುವುದಿಲ್ಲ; ನೀವೇ ಮಾಡಿಕೊಳ್ಳುತ್ತೀರಿ.

ಸರಿ, ನೀವು ಹಿಂದಿ ಕಲಿತಂತೆ ಅವರೂ ಕನ್ನಡ ಕಲಿಯಬಹುದಲ್ಲ ನೀವು ಕನ್ನಡದಲ್ಲೇ ಮಾತನಾಡಿ ಅನಿವಾರ್ಯತೆ ಬೆಳೆಸಿಕೊಂಡರೆ ಎಂದಾಗ, ನಮಗೆ ಹೊಟ್ಟೆಪಾಡು, ನಾನೊಬ್ಬಳು ಮಾತನಾಡಿದರೆ ಸಾಕೇ? ಎಲ್ಲರೂ ಹಾಗೆ ಮಾಡಬೇಕಲ್ಲ? ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಯೋಚನೆಯಲ್ಲಿ ಉಳಿದವರು ನನಗಿಂತ ಚೆನ್ನಾಗಿ ಹಿಂದಿ ಮಾತನಾಡಿ ಅವರೊಂದಿಗೆ ವ್ಯವಹರಿಸುತ್ತಾರೆ, ನನಗಿದು ಅನಿವಾರ್ಯತೆ ಎಂದಿದ್ದರು.ಸಣ್ಣ ಪುಟ್ಟ ವ್ಯಾಪಾರಿಗಳದ್ದೇ ಹೀಗಿರುವಾಗ ಇನ್ನು ದೊಡ್ಡವರ ಬಗ್ಗೆ, ಕಾರ್ಪೊರೇಟ್ ಆಫೀಸುಗಳ ಬಗ್ಗೆ ಏನು ಹೇಳುವುದು ಎಂದುಕೊಳ್ಳುತ್ತಾ ನಾನು ಕನ್ನಡಿಗರ ಒಗ್ಗಟ್ಟಿನ ಬಗ್ಗೆ ಮನಸಾರೆ ನಕ್ಕು ಮುಂದಡಿಯಿಟ್ಟಿದ್ದೆ ಅಂದು! 

ಸಾಮಾಜಿಕ ಜಾಲತಾಣದಲ್ಲೆಲ್ಲಾ ಕನ್ನಡ ಚಲನಚಿತ್ರಗಳಿಗೆ ಬೆಂಬಲ ದೊರಕಬೇಕೆಂದು ಉಗ್ರ ಹೋರಾಟ ಮಾಡುತ್ತಿರುವುದನ್ನು ಕಂಡು; ಅದೇ ನಿರೀಕ್ಷೆಯಲ್ಲಿ ಕನ್ನಡಿಗರೆಲ್ಲರೂ ನಮ್ಮ ಮಲೆನಾಡಿನ ಕಥೆಯಿರುವ ಹಾಸ್ಯ ಮಿಶ್ರಿತ ಚಿತ್ರವೊಂದನ್ನು ಖಂಡಿತವಾಗಿಯೂ ನೋಡುತ್ತಾರೆಂದುಕೊಳ್ಳುತ್ತ, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಲನಚಿತ್ರ ನೋಡೋಣವೆಂದು ಮುಂದೆ ಚಿತ್ರಮಂದಿರಕ್ಕಡಿ ಇಟ್ಟೆವು. ನಾನಂತೂ ಈ ಹೋರಾಟಗಳಿಂದ ಎಷ್ಟು ಪ್ರಭಾವಿತಳಾಗಿದ್ದೆನೆಂದರೆ ಚಿತ್ರಮಂದಿರ ತುಂಬಿ ತುಳುಕಿ ಹೌಸ್ ಫುಲ್ ಆಗಿರಬಹುದೆಂಬ  ಯೋಚನೆಯೊಂದಿಗೆ ಒಳ ನಡೆದಿದ್ದೆ. ಸುತ್ತಲೂ ನೋಡಿದರೆ ಬೆರಳೆಣಿಕೆಯಷ್ಟು ಜನ; ಅದರಲ್ಲೂ ಬಹುತೇಕರು ಮಲೆನಾಡಿನವರೇ! 

ಹೌದಲ್ಲ? ಪೈಸೆಗೆ ಪೈಸೆ ಲೆಕ್ಕವಿಟ್ಟು, ಕಷ್ಟಪಟ್ಟು ದುಡಿಯುವ ಮಲೆನಾಡಿನ ಅಡಿಕೆ ಬೆಳಗಾರರ ಚಿತ್ರದಲ್ಲಿ ವಿವರಿಸಿದ ಪಾತ್ರಗಳೂ, ಅದರ ಹಾಸ್ಯ ಮಿಶ್ರಿತ ವ್ಯಂಗ್ಯಗಳು, ದುಡ್ಡಿಗಾಗಿ ಮತ್ತು ದುಡ್ಡಿನಿಂದಾಗಿ ನಡೆಯುವ ತಿಕ್ಕಾಟಗಳು, ಇವೆಲ್ಲಾ ಅದನ್ನು ಅನುಭವಿಸಿದ ಮಲೆನಾಡಿಗರಷ್ಟೇ ಅರ್ಥ ಮಾಡಿಕೊಂಡು ಮನಸಾರೆ ನಗಲು ಸಾಧ್ಯ. ಬಹಳಷ್ಟು ಮಂದಿಗೆ ವಿವರಿಸಿದರೂ ಅರ್ಥವಾಗದ ಕಗ್ಗಂಟದು. ಮಳೆಯೋ ಅಥವಾ ಪ್ರೈಮ್ ,  ಹಾಟ್  ಸ್ಟಾರ್ , ಐಪಿಎಲ್ ಪರಿಣಾಮವೋ, ಕೆಜಿಎಫ್ ಮಹಿಮೆಯೋ, ಸ್ಟಾರ್ ವ್ಯಾಲ್ಯೂ ಇಲ್ಲವೆಂದೋ , ಕನ್ನಡಿಗರ ಮನಸ್ಥಿತಿಯೋ ತಿಳಿಯದು, ಇದ್ದಿದ್ದು ಮಾತ್ರ ಕಡಿಮೆ ಜನ!

ನಿರ್ದೇಶಕರು ಹೇಳಿದಂತೆ, ಹಾಸ್ಯಭರಿತವಾದ ಚಿತ್ರ ತುಂಬಾ ಚೆನ್ನಾಗಿಯೇ ಮೂಡಿ ಬಂದಿದೆ. ಮಲೆನಾಡಿನ ದರ್ಶನ, ಅನುಭವ ಕಥನಗಳು, ಜೀವನದ ಮೌಲ್ಯಗಳು ಎಲ್ಲವನ್ನೂ ಒಂದೇ ಬಾರಿಗೆ ೨ ಗಂಟೆಯಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಪ್ರಮುಖ ವಿಚಾರಗಳನ್ನು ಸ್ವಲ್ಪ ಎಳೆಯಾಗಿ ಬಿಡಿಸಿ, ಹಾಸ್ಯದ ಲೇಪನ ಕೊಟ್ಟು ಚೆಂದವಾಗಿ ಚಿತ್ರಿಸಿದ್ದಾರೆ. ದಿಗಂತ್ – ಐಂದ್ರಿತಾ, ರಂಜನಿಯವರ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಎಲ್ಲಾ ಪಾತ್ರಧಾರಿಗಳು, ನಟ – ನಟಿಯರು ಉತ್ತಮವಾದ ಸಾಥ್ ನೀಡಿದ್ದಾರೆಂದೇ ಹೇಳಬಹುದು. ಸಿನಿಮಾದ ತಾಂತ್ರಿಕ ವಿಚಾರಗಳಲ್ಲಿ ಅಷ್ಟೊಂದು ಪರಿಣಿತರಲ್ಲದಿದ್ದರೂ, ಹೊಸಬರು ಮಾಡಿರುವುದರಿಂದ ಕೆಲವೊಂದು ವಿಚಾರದಲ್ಲಿ ಅನುಭವದ ಕೊರತೆ ಕಂಡರೂ, ಅದು ಬರಿ ಬೇರೆ ಹೊಸ ಅನುಭವಿ ಸಿನೆಮಾಗಳೊಂದಿಗಿನ ಹೋಲಿಕೆಯಿಂದ ಮಾತ್ರವೇ  ಕಂಡುಬರಬಹುದು. 

ಒಟ್ಟಿನಲ್ಲಿ ನಮ್ಮ ಸಮಸ್ಯೆಗಳನ್ನು ಬದಿಗಿರಿಸಿ, ೨ ಗಂಟೆಗಳ ಕಾಲ ಸ್ವಲ್ಪ ಮನಸಾರೆ ನಕ್ಕು ಹಗುರಾಗಲು ಯಾವುದೇ ಕೊರತೆಯಿಲ್ಲದ; ಕುಟುಂಬಸಮೇತ ನೋಡಿ ಬರಬಹುದಾದ ಮಲೆನಾಡಿನ ಸೊಗಡಿನ ಸುಂದರ ಚಿತ್ರಕಥೆ. ಹಾಗೆಯೇಮನಸ್ಸಿಗೆ ಮುದ ನೀಡುವ ಹಾಡುಗಳೆರಡು. 

ಮತ್ತೆ ಹೊರಡಲನುವಾದಾಗ ಅನಿಸಿದ್ದು ಅದೇ ..!  ಲೂಸಿಯಾ ಸಿನಿಮಾ ನೋಡಿದಾಗ ಚಿತ್ರಮಂದಿರ ಹೌಸ್ ಫುಲ್ಲಾಗಿತ್ತು. ಈಗ ಜಯನಗರ ಬದಲಾಗಿದೆ.. ಚಿತ್ರಮಂದಿರವೂ, ಜನರೂ, ಕಾಲವೂ, ಚಿತ್ರವೂ ಬದಲಾಗಿದೆ! 

ತೆರೆಯ ಮೇಲೆ ನಡೆಯುತ್ತಿರುವುದಕ್ಕೂ ತೆರೆಯ ಹಿಂದೆ ನಡೆಯುವುದಕ್ಕೂಅಜಗಜಾಂತರ ವ್ಯತ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮದಲ್ಲಿ ನಡೆಯುವ/ ತೋರಿಸುವ ಹೋರಾಟಕ್ಕೂ; ನೈಜತೆಗೂ, ಸತ್ಯಕ್ಕೂ ಹಿಡಿದ ಕನ್ನಡಿಯಂತೆ ಮತ್ತೆ-ಮತ್ತೆ ಜಯನಗರದಲ್ಲಿ ಆಸ್ವಾದಿಸಲು ಏನೂ ಇಲ್ಲವೇನೋ ಎಂಬಂತೆ ಬರಿದನಿಸಿತ್ತು! ಮನಸ್ಸೂ ಬರಿದಾಗಿತ್ತು.