ದೀಪಾವಳಿ ಹಬ್ಬ ಹತ್ತಿರ ಬರುತ್ತಲಿದೆ. ಎಲ್ಲರೂ ಸಂಭ್ರಮದಿಂದ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡಿರುತ್ತೀರಿ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಸಿಗುವುದು ಮೊಬೈಲ್ ಮೂಲಕ, ಅದೂ ವಾಟ್ಸಪ್ಪ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಇವಳಿಗೆ ಇದರಲ್ಲೂ ನಕಾರಾತ್ಮಕ ಯೋಚನೆಯೇ?; ಅಥವಾ ಏನು ಇವಳ ಪ್ರಾಬ್ಲೆಮ್? ಎಂದು ಬೈಕೊಳ್ಳಬೇಡಿ. ಈ ರೀತಿ ಶುಭಾಶಯ ಕೋರುವುದರಲ್ಲಿ ಯಾವ ತಪ್ಪು-ತೊಂದರೆಯೂ ನನಗೆ ಕಂಡುಬರುತ್ತಿಲ್ಲ. ಆದರೆ ನಾನು ಹೇಳಹೊರಟಿರುವುದು ಈ ಜಿಫ್ (GIF) ಅನಿಮೇಷನ್ ಇರುವ ಶುಭಾಶಯ ಪತ್ರಗಳ ಬಗ್ಗೆ!

ಶುಭಾಶಯ ಪತ್ರ ಮತ್ತು ಡಿಜಿಟಲ್ ಉಡುಗೊರೆ

ನಾನು ನೋಡಿದ ಪ್ರಕಾರ ಬಹಳಷ್ಟು ಮಂದಿ ಈ ‘ಜಿಫ್ (GIF) ಅನಿಮೇಷನ್ ಇರುವ ಶುಭಾಶಯ ಪತ್ರ’ಗಳನ್ನು ಅಥವಾ ‘ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಗಿಫ್ಟ್ (ಉಡುಗೊರೆ) ಪಡೆದುಕೊಳ್ಳಿ’, ‘ಇಲ್ಲಿ ಲಿಂಕ್ ಕ್ಲಿಕ್ ಮಾಡಿ; ಜಾದೂ ನೋಡಿ’, – ಇಂತಹ ಬಹಳಷ್ಟು ರೀತಿಯಲ್ಲಿ ಪರಸ್ಪರ ಶುಭ ಕೋರಿಕೆಯ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಿಂದೆ-ಮುಂದೆ ಯೋಚಿಸದೆ ಇಂತಹುದನ್ನು ಫಾರ್ವರ್ಡ್ ಮಾಡುತ್ತಾರೆ, ಅಥವಾ ಕ್ಲಿಕ್ ಮಾಡುತ್ತಾರೆ. ಕೆಲವೊಮ್ಮೆ ಯಾವುದೋ ಯೋಚನೆಯಲ್ಲಿ ತಿಳಿದೂ – ತಿಳಿದೂ; ನಾನೂ ಸಹ ಮಾಡುತ್ತೇನೆ!

ಜಿಫ್ (GIF) ಅನಿಮೇಷನ್ ಚಿತ್ರ

ನಮ್ಮ ಇದೇ ಉದಾಸೀನತೆ ಅಥವಾ ಅರಿವಿಲ್ಲದ ಒಂದು ಸಣ್ಣ ತಪ್ಪಿಗೇ ಕೆಲವೊಂದು ಅತಿಕ್ರಮಿಗಳು (ಹ್ಯಾಕರ್ಸ್/) ಕಾಯುತ್ತಿರುತ್ತಾರೆ. ಈ ರೀತಿಯ  ಜಿಫ್ (GIF) ಅನಿಮೇಷನ್ ಚಿತ್ರಗಳಲ್ಲಿ ನಮಗರಿವಿಲ್ಲದಂತೆ ಕೆಲವೊಂದು ವೈರಸ್ ನೆಟ್ಟು (ಎಂಬೆಡ್ ಮಾಡಿ); ನಮ್ಮ ಉಪಕರಣಗಳಿಗೆ ತೊಂದರೆಯುಂಟು ಮಾಡುತ್ತಾರೆ. ಇದು ನಮಗರಿವಿಲ್ಲದಂತೆ ನಡೆಯುವ ಒಂದು ಪ್ರಕ್ರಿಯೆ.

ಪರಿಹಾರ  – ಡಿಲೀಟ್ – ಜಿಫ್ (GIF) ಅನಿಮೇಷನ್

ಹಾಗಾಗಿ, ಇನ್ನು ಮುಂದೆ ಯಾವುದೇ ರೀತಿಯ ಜಿಫ್ (GIF) ಅನಿಮೇಷನ್ ಚಿತ್ರಗಳು ಬಂದರೆ ಅದನ್ನು ನೇರವಾಗಿ ಓಪನ್ ಅಥವಾ ಡೌನ್ಲೋಡ್ ಮಾಡದೇ ಡಿಲೀಟ್ ಮಾಡಿಬಿಡಿ, ಅಷ್ಟೇ!. ಯಾಕೆಂದರೆ ಪ್ರತಿಯೊಂದು  ಜಿಫ್ (GIF) ಅನಿಮೇಷನ್ ಚಿತ್ರದಲ್ಲಿ ಈ ರೀತಿ ವೈರಸ್ ಇದ್ದೇ ಇರುತ್ತದೆಂದು ಹೇಳಾಗುವುದಿಲ್ಲ. ಅದನ್ನೆಲ್ಲ ಆಳಕ್ಕಿಳಿದು ಇದೆಯೇ?, ಇಲ್ಲವೇ? ಎಂದು ತಿಳಿದು, ನೋಡಿ-ಮಾಡಿ ಎಲ್ಲ ಪೂರೈಸುವಷ್ಟು ಸಮಯವಿದ್ದರೆ ಧಾರಾಳವಾಗಿ ಮಾಡಿ, ಇಲ್ಲವಾದಲ್ಲಿ ಸುಲಭವಾಗಿ ಡಿಲೀಟ್ ಮಾಡಿಬಿಡಿ. ನಿಮಗೆ ಕಳುಹಿಸಿದವರಿಗೂ ಸಹ ಇನ್ಯಾರೋ ಕಳುಹಿಸಿರುತ್ತಾರೆ ಅಥವಾ ಎಲ್ಲಿಂದಲೋ ಸಿಕ್ಕಿರುತ್ತದೆ. ಹಾಗಾಗಿ ಅದರ ಮೂಲ ನಿಮಗೆ ಅಷ್ಟು ಬೇಗ ಸಿಗುವಂತದ್ದೂ ಅಲ್ಲ. ಸುಮ್ಮನೇ ರಾಮಾಯಣ ಯಾಕೆ?, ಇನ್ನೊಬ್ಬನಿಗೆ ಯಾಕೆ ಹೇಳಲಿ? ಎಂದು ಡಿಲೀಟ್ ಮಾಡಿದರೆ ಮುಂದೆ ನಿಮಗೇ ನೆಮ್ಮದಿ.

ಅದಲ್ಲದೇ ಅದನ್ನು ಕಳುಹಿಸಿದವರು ಮುಕ್ತ ಮನಸ್ಸಿಂದ ಈ ಲೇಖನದಲ್ಲಿ ಹೇಳಿದ್ದರ ಬಗ್ಗೆ ಯೋಚನೆ ಮಾಡುವವರಾಗಿದ್ದರೆ ಇದರ ಕೊಂಡಿಯನ್ನು ಬೇಕಿದ್ದರೆ ಅವರೊಂದಿಗೆ ಹಂಚಿಕೊಳ್ಳಿ. ಆದರೆ, ಅದರ ಬದಲು, “ನಿನಗೇನು ಗೊತ್ತು?, ಇದನ್ನು ಬರೆದವರಿಗೇನು ಗೊತ್ತು? ಸುಮ್ಮನೇ ಏನೇನೋ ಹೇಳಬೇಡ. ಅವರೆಲ್ಲ ಯಾರು – ಯಾರೋ ದೊಡ್ಡ ಮನುಷ್ಯರು ಉಪಯೋಗಿಸುತ್ತಾರೆ. ಇದನ್ನೆಲ್ಲ ಮಾಡುತ್ತಾರೆ. ಏನೂ ಆಗುವುದಿಲ್ಲ. ನೀನು ಯಾಕೆ ತಲೆ ತಿನ್ನುತ್ತೀಯಾ, ಏನೋ ನಿನಗೊಬ್ಬನಿಗೇ ಗೊತ್ತಿರುವಂತೆ?” ಎಂದೆಲ್ಲ ತಪ್ಪು ತಿಳಿದುಕೊಳ್ಳುವ ಒರಟರಾಗಿದ್ದರೆ ಸುಮ್ಮನಿದ್ದುಬಿಡಿ. ಹಬ್ಬದ ಸಮಯದಲ್ಲಿ ರಗಳೆ ಯಾತಕ್ಕೆ?

ವೆಬ್ ಕೊಂಡಿಗಳು – ಗೇಮ್ ಆಪ್ – ಕೃತಕ ಬುದ್ಧಿವಂತಿಕೆ

ಅದಲ್ಲದೆ  ಕೆಲವೊಂದು ವೆಬ್ ಲಿಂಕಿನಲ್ಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ  ಹಲವು ರೀತಿಯ ಪ್ರಶ್ನೋತ್ತರ ಶೈಲಿಯ ಆಪ್ ಇರುತ್ತದೆ. ನಿಮ್ಮ ಹುಟ್ಟಿದ ತಿಂಗಳು ಹೇಳಿ, ನಿಮ್ಮ ಸ್ವಭಾವ ಅರಿಯಿರಿ, ನಿಮ್ಮ ನಾಯಿಮರಿ ಹೆಸರು ಹೇಳಿ, ಬಹುಮಾನ ಗೆಲ್ಲಿ ಇತ್ಯಾದಿ-ಇತ್ಯಾದಿ. ಇವೆಲ್ಲವೂ ಸುರಕ್ಷಿತ ಎಂದು ಹೇಳಲಾಗದು. ಗೊತ್ತೋ – ಗೊತ್ತಿಲ್ಲದೆಯೋ ಆದಷ್ಟು ಇಂತಹುದರಿಂದ ದೂರವಿರಿ.

ಹಾಗೆಂದು ಸಾಮಾಜಿಕ ಜಾಲತಾಣ ಬಳಸಬೇಡಿ ಎಂದಲ್ಲ. ನಿಮ್ಮ ವೈಯಕ್ತಿಕ ವಿಚಾರಗಳನ್ನು – ವಿವರಗಳನ್ನು ಅತಿಯಾಗಿ ಕೇಳುವ  ಕೃತಕ ಬುದ್ಧಿವಂತಿಕೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ) ಲಿಂಕ್ ಅಥವಾ ಗೇಮ್ ಆಪ್ ಇತ್ಯಾದಿಗಳಿಂದ ದೂರವಿರಿ. ಫೇಸ್ಬುಕ್ ಅಥವಾ ಜಿಮೇಲಿನಂತಹ ನಿಜವಾದ ಅಗತ್ಯ ವೆಬ್ ಕೊಂಡಿಗಳಲ್ಲಿ ಕೆಲವೊಂದು ವಿವರಗಳನ್ನ ಕೊಡುವುದು ಅನಿವಾರ್ಯ, ಇಲ್ಲವಾದಾಲ್ಲಿ ಅವರೂ ಸಹ ಕೆಲವೊಂದು ವಿಚಾರಗಳನ್ನು ತಿಳಿಯಲು ಅಥವಾ ನಮ್ಮ ವೆಬ್ ಅಕೌಂಟ್ ಸುರಕ್ಷಿತವಾಗಿಸಲು ತೊಂದರೆಯಾಗುತ್ತದೆ. ‘https://’  ಅಥವಾ ಬೀಗದ ಚಿತ್ರವಿದ್ದರೆ, ಸಾಮಾನ್ಯವಾಗಿ ಸುರಕ್ಷಿತ ವೆಬ್ ಕೊಂಡಿಗಳಾಗಿರುತ್ತವೆ. ಅವುಗಳ ಉಪಯೋಗಕ್ಕೆ ತೊಂದರೆಯಿಲ್ಲ.

 

Lock-Safe

Digital-Lock-Safe

 

https-safe-to-use

https-safe-to-use

ಕೆಲವೊಂದು  ವೆಬ್ ಕೊಂಡಿ ಮಧ್ಯೆ ಇನ್ನೇನೋ ವಿಚಾರಗಳು ಬಂದು ಕ್ಲಿಕ್ ಮಾಡಿ ಹೋಗುತ್ತದೆ. ಅದರ ಅಗತ್ಯ ನಮಗಿಲ್ಲ. ಆದಷ್ಟು ಬೇಗ ಅರಿವಾದ ತಕ್ಷಣ ಅದರಿಂದ ಹೊರಬನ್ನಿ. ‘ಲಾಗಿನ್  ವಿಥ್ ಫೇಸ್ಬುಕ್, ಜಿಮೇಲ್ ‘, ‘ಕ್ಲಿಕ್ ಟು ನೋ ಮೋರ್ ‘ , ಎಂದೆಲ್ಲ ಕೆಲವೊಂದು ಬಾರಿ ಇವೆಲ್ಲವೂ ಗೊಂದಲವುಂಟು ಮಾಡುವುದು ಸಹಜ. ಹಾಗಾದಾಗ ನಿಮಗೆ ಗೊತ್ತಾಗದಿದ್ದಲ್ಲಿ, ಅಗತ್ಯವಿದ್ದರೆ, ಕೂಡಲೇ ಆಗಬೇಕಿದ್ದರೆ ಇದರ ಬಗ್ಗೆ ತಿಳಿದಿರುವ ನಿಮ್ಮ ಹತ್ತಿರದವರ ಬಳಿ ಕೇಳಿ-ತಿಳಿದುಕೊಳ್ಳಿ. ಅರ್ಜೆಂಟ್ ಇಲ್ಲವಾದಾಲ್ಲಿ ನಿಧಾನಕ್ಕೆ ಕೇಳಿಕೊಳ್ಳಿ ಅಥವಾ ನಿಮ್ಮ ವಿವೇಚನೆಗೆ ಬಂದಂತೆ ಮಾಡಿ! ಕೇಳಿ ತಿಳಿದುಕೊಳ್ಳಲು ಹಿಂದೇಟುಹಾಕಬೇಡಿ! ಮಕ್ಕಳು – ಮೊಮ್ಮಕ್ಕಳು ಬೈಕೊಳ್ಳಬಹುದು ಬಿಡಿ, “ಎಂತ ಕಿರಿಕಿರಿ ಮಾರಾಯರೆ ನಿಮ್ಮದು?” ಎಂದೆಲ್ಲ. ಆದರೂ ಕೇಳಿಕೊಳ್ಳಿ, ಯಾಕೆಂದರೆ ಎಷ್ಟೇ ಕಿರಿಕಿರಿಯಾದರೂ ಅವರಿಗೆ ಉಣ್ಣಲು-ತಿನ್ನಲು-ನಡೆಯಲು, ಓದಿ-ಬರೆಯಲು ನೀವೇ ಕಲಿಸಿದ್ದಲ್ಲ? ಅಡಿಪಾಯ ನಿಮ್ಮದೇ ನೋಡಿ 😉

ಅತಿಯಾದರೆ ಅಮೃತವೂ ವಿಷ!

ಪ್ರತಿಯೊಂದರಲ್ಲೂ ಎಷ್ಟು ಒಳ್ಳೆಯದಿದೆಯೋ  ಅಷ್ಟೇ ಕೆಟ್ಟದ್ದೂ ಇದೆ. ಹಾಗೆಂದು, ತಪ್ಪು ಕಲ್ಪನೆಯೊಂದಿಗೆ ಅದರ ಸಹವಾಸವೇ ಬೇಡವೆಂದು ಡಿಜಿಟಲ್ ಪ್ಲಾಟ್ ಫಾರಂ ಉಪಯೋಗಿಸಲು ಹಿಂಜರಿಯಬೇಡಿ. ಇದು ಇಂದಿನ ಅಗತ್ಯ. ಕೆಲವೊಮ್ಮೆ ಅದರ ಉಪಯೋಗ, ಕಲಿಕೆ ಅನಿವಾರ್ಯವೂ ಆಗಿಬಿಟ್ಟಿದೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳಿ, ಎಚ್ಚರಿಕೆಯಿರಲಿ ಎಂದಷ್ಟೇ ಹೇಳಿದ್ದು! ಉದಾಹರಣೆಗೆ ಸಕ್ಕರೆ ಅಥವಾ ಸಿಹಿ. ಅತಿಯಾದರೆ ಅದೂ ಕೆಟ್ಟದ್ದೇ. ಆದರೆ ಹಾಗೆಂದು ಅದರಿಂದ ತೊಂದರೆಯೇ ಬೇಡ, ದೂರವಿರುತ್ತೇನೆ ಎಂದರೆ ನಿಮಗದರ ಸವಿ ಸಿಗದು ಅಷ್ಟೇ. ಅದೇ ನೀವು ವಿವೇಚನಾಯುತವಾಗಿ ಬಳಸಿದಲ್ಲಿ ಅದು ಖಂಡಿತ ಸಿಹಿಯಾಗಿರುತ್ತದೆ!  ಅದು ಒಂದು ವ್ಯಸನವೂ ಆಗಬಾರದು ನೋಡಿ!

ಹೇಳಿದಷ್ಟು ಮುಗಿಯದ ಬಹಳ ಆಳವಾದ, ವಿಶಾಲವಾದ ಮತ್ತು ಜಾಗರೂಕರಾಗಿರಬೇಕಾದ ವಿಚಾರವಿದು. ದೀಪಾವಳಿಗೆ ಇಷ್ಟು ಸಾಕೆನಿಸುತ್ತದೆ!

ಡಿಜಿಟಲ್ ಯುಗದ ಒಳಿತು-ಕೆಡುಕು – ಅರಿವು

ಎಲ್ಲರೂ ‘ಹ್ಯಾವ್ ಎ ಸೇಫ್ ದೀಪಾವಳಿ’ ಎಂದರೆ, ನಾನು ‘ಹ್ಯಾವ್ ಎ ಡಿಜಿಟಲಿ ಸೇಫ್ ವನ್’ ಎನ್ನೋಣವೆಂದಿದ್ದೇನೆ! ಇರಲಿ ಬಿಡಿ, ಖುಷಿಯಿಂದ ಮತ್ತೆ  ಹಳಬರಂತೆ ಹೊಸದಾಗಿ ಮನ-ಮನೆಯಲ್ಲಿ ದೀಪಾವಳಿಯ ಬೆಳಕು ಹೊರಹೊಮ್ಮಲಿ. ಜ್ಞಾನಾರ್ಜನೆಯ ಪ್ರತೀಕವಾದ ಈ ಹಬ್ಬದ ಸಂದರ್ಭದಲ್ಲಿ ನೀವು ಇಂದಿನ ಅಗತ್ಯವಾದ ಡಿಜಿಟಲ್ ಯುಗದ ಒಳಿತು-ಕೆಡುಕುಗಳನ್ನು ಅರಿತು ಬೆಳಕಿನೆಡೆಗೆ ನಡೆಯಲು ಈ ಬರಹ ಸಹಾಯವಾಗಬಹುದು ಎಂದು ಆಶಿಸುತ್ತೇನೆ!

Ref – can-you-get-a-virus-from-a-gif