ನೆನಪಿನ ಬುತ್ತಿ
ಮೊನ್ನೆ ಸಂಜೆ ಜೋರಾಗಿ ಮಳೆ ಬರುತ್ತಿತ್ತು. ಆಗ ಮತ್ತೆ ನೆನಪಾಯಿತು ನೋಡಿ, ಅಜ್ಜಿಯ ನಳಪಾಕಗಳು! ಅದರ ರುಚಿ ಅದನ್ನು ಸವಿದವಿರಿಗೇ ಗೊತ್ತು! ಬೇಸಿಗೆ ರಜೆ ಸಾಧಾರಣ ಮೇ ತಿಂಗಳಿನಲ್ಲಿ ಮುಗಿಯುತ್ತ ಬಂದರೂ ನಾವಿನ್ನೂ ಅಜ್ಜಿಮನೆಯಲ್ಲೇ ಠಿಕಾಣಿ ಹೂಡಿರುತ್ತಿದ್ದೆವು ಕೆಲವೊಮ್ಮೆ! ಹಾಗೆಯೆ ಮಾನ್ಸೂನಿನ ಮುನ್ಸೂಚನೆಯಂತೆ ಜೋರಾಗಿ ಮಳೆ ಬರುವಾಗ ಸಾಯಂಕಾಲಕ್ಕೆ ಅಜ್ಜಿ ಮಾಡುವ ಹಲಸಿನ ಕಾಯಿ ಸೊಳೆಯ ಪಲ್ಯದ ರುಚಿಯೇ ಬೇರೆ. ಅದರ ಒಗ್ಗರಣೆಯ ಘಮ, ಹಲಸಿನ ಕಾಯಿ ಸೊಳೆಯ ಪರಿಮಳ, ಹದವಾಗಿ ಹಾಕಿದ ತೆಂಗಿನ ತುರಿ ಮತ್ತು ಕೊಬ್ಬರಿ ಎಣ್ಣೆ! ವಾವ್..ಆಹಾ ..!
ಹಲಸಿನ ಸೊಳೆ ಪಲ್ಯ :
ಸಾಯಂಕಾಲದ ಹಟ್ಟಿಯ ಕೆಲಸವೆಲ್ಲ ಮುಗಿಸಿ, ಅಂಗಳದಲ್ಲಿ ಬಿಸಿಲಿಗೆ ಒಣಗಲು ಹಾಕಿದ್ದ ಹಪ್ಪಳ-ಸಂಡಿಗೆ, ಸುಲಿಯಲಿರುವ ಅಡಿಕೆ ಇತ್ಯಾದಿಗಳ ವಿಲೇವಾರಿ ಆದ ನಂತರ ೬-೭ ಗಂಟೆಗೆ ಕಾಫಿಯೊಂದಿಗೆ ತಿನ್ನುತ್ತಿದ್ದ ಈ ಸವಿಯ ಅಸಲಿ ಗಮ್ಮತ್ತು ಅನುಭವಿಸಿದವರಿಗಷ್ಟೇ ಗೊತ್ತು! ಯಾವಾಗಲೋ ಒಂದು ಬಾರಿ ಒಂದು ವಾರಕ್ಕಿದ್ದ ಒಡನಾಟದಲ್ಲಿ ಈಗಲೂ ಅಜ್ಜ-ಅಜ್ಜಿಯ ಆರೋಗ್ಯವನ್ನು ತಪ್ಪದೆ ವಿಚಾರಿಸುತ್ತಿರುವ ಗೆಳತಿ ಅಜ್ಜಿ ಮಾಡಿದ ಗುಜ್ಜೆ(ಎಳೆ ಹಲಸಿನಕಾಯಿಯ) ಪಲ್ಯವನ್ನು ಇಂದಿಗೂ ಮರೆತಿಲ್ಲವೆಂದರೆ ನೀವೇ ಯೋಚಿಸಿ, ಅವರ ನಳಪಾಕದ ಬಗ್ಗೆ!
ಹಾಗೆಯೇ ಅಜ್ಜಿ ಮಾಡುವ ಬಗೆ-ಬಗೆ ಪಲ್ಯ, ಚಟ್ನಿ, ಗೊಜ್ಜು ಮತ್ತು ತಂಬುಳಿಗಳು! ಅದೆಲ್ಲಿಂದ ಸೊಪ್ಪು, ಬಳ್ಳಿ, ಎಲೆ ಎಂದು ಹುಡುಕಿ ತಂದು ಮಾಡುತ್ತಿದ್ದರೋ ಗೊತ್ತಿಲ್ಲ. ಈಗೆಲ್ಲ ಅದನ್ನು ಭಟ್ ನ್ ಭಟ್ ಅವರ ಯೂ ಟ್ಯೂಬ್ ವಾಹಿನಿಯೆಯಲ್ಲಷ್ಟೇ ನೋಡಿದ್ದು ನಾನು! ಇರಲಿ ಬಿಡಿ; ಅವರಾದರೂ ಅಜ್ಜಿಮನೆಯ ಸವಿರುಚಿಯನ್ನು ಉಳಿಸಿಕೊಳ್ಳುತ್ತಿದ್ದಾರೆಂದು ಖುಷಿಪಡೋಣ!
ಅಜ್ಜಿ ನನ್ನ ತವರಿಗೆ ಬಂದಾಗ ಈಗಲೂ ಕೆಲವೊಮ್ಮೆ ಬಗೆ-ಬಗೆ ಸೊಪ್ಪಿನ (ಕೊಡಿ) – ಹಸಿರೆಲೆ ಚಿಗುರಿನ ಚಟ್ನಿ ಮಾಡಿಕೊಡಿ ಎಂದು ತಲೆ ತಿನ್ನುತ್ತೇನೆ ನಾನು! ಹಾಗೆಯೇ ಅಜ್ಜಿಗೆ ಕಷ್ಟವಾಗದಿರಲಿ ಎಂದು ಒಂದಿಷ್ಟು ಚಿಗುರೆಲೆಗಳನ್ನು ತಂದಿತ್ತರೆ ಅಜ್ಜಿ ಮತ್ತೆ ಸೆರಗಿನ ತುದಿಯಲ್ಲಿ ಇನ್ನೊಂದಿಷ್ಟು ಸೊಪ್ಪು ಹಿಡಿದು ಬರುತ್ತಾರೆ. ನನಗೆ ಸಿಕ್ಕದ ಬಗೆಗಳು ಅವರಿಗೆ ಹೇಗೆ ಸಿಗುವುದು ಎಂಬುದೇ ನನಗೆ ಕಗ್ಗಂಟು! ಅದೆಲ್ಲ ಎಷ್ಟೊಂದು ಆರೋಗ್ಯಕರ ರುಚಿಗಳು.
ಹಾಗೆಯೇ ಬಗೆ-ಬಗೆಯ ಪಾಯಸ, ಸಿಹಿ ತಿಂಡಿಗಳು, ಕುರುಕಲು ತಿಂಡಿಗಳು. ಅದನ್ನೆಲ್ಲ ಕೆಲವೊಮ್ಮೆ ನಾನು, ತಂಗಿ, ಅಮ್ಮ-ಚಿಕ್ಕಮ್ಮ ಹೀಗೆ ನಾವೆಲ್ಲರೂ ರೆಸಿಪಿ ಕೇಳಿ ಮಾಡುತ್ತೇವೆ. ಅದರಲ್ಲಿ ಅಮ್ಮ, ಚಿಕ್ಕಮ್ಮ, ತಂಗಿ ಸ್ವಲ್ಪ ಪರಿಣಿತರೇ ಬಿಡಿ. ನನಗೆ ಮಾತ್ರ ಅದು ಹೇಗೆ ಮಾಡಿದರೂ ಅಜ್ಜಿ ಮಾಡಿದ ರುಚಿ ಬರುವುದಿಲ್ಲ ನಾನು ಮಾಡಿದರೆ! ಹಾಗೆಯೇ ಅಜ್ಜಿ ಮಾಡಿದಂತೆ ಸಮತೋಲಿತವಾಗಿ ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಬಸಳೆ ಸೊಪ್ಪಿನ ಸಾಂಬಾರ್ ಮಾಡಲು ನಮಗ್ಯಾರಿಗೂ ಬರುವುದಿಲ್ಲ ಬಿಡಿ. ಇದರ ಸವಿ ಸವಿದ ಎಲ್ಲರೂ ಖಂಡಿತವಾಗಿಯೂ ಹಾಗೆಯೇ ಹೇಳುವರಷ್ಟೇ!
ಹಲಸಿನ ಬೇಳೆಯ ಪಾಯಸವೂ ಅಷ್ಟೇ. ಅಜ್ಜನಿಗೆ ಮಾತ್ರವಲ್ಲದೇ; ನಮ್ಮೆಲ್ಲರಿಗೂ ಪ್ರೀತಿಯೆಂದು ಯಾವುದಾದರೂ ಒಂದು ಸಂದರ್ಭದಲ್ಲಿ ಎಲ್ಲರೂ ಸೇರಿದಾಗ ವರ್ಷಕ್ಕೆ ಒಂದು ಬಾರಿಯಾದರೂ ಈಗಲೂ ಈ ಪಾಯಸ ಮಾಡಿಯೇ ಮಾಡುತ್ತಾರೆ ಅಜ್ಜಿ. ಅದನ್ನು ಮಾಡಲು ಇರುವ ಕೆಲಸ, ಕಷ್ಟ ನೋಡಿ ನಾವೆಲ್ಲ ಸೋಮಾರಿಗಳು, ಅದನ್ನು ಮಾಡುವ ಕನಿಷ್ಠ ಪ್ರಯತ್ನವನ್ನೂ ಮಾಡುವ ಗೋಜಿಗೆ ಹೋಗುತ್ತಿಲ್ಲ ಇತ್ತೀಚೆಗೆ. ಆದರೆ ಅಜ್ಜಿಗೆ ಮಾತ್ರ ಇನ್ನೂ ಅದೇ ಉತ್ಸಾಹ. ಹಲಸಿನ ಮುಳುಕನ (ಒಂದು ರೀತಿಯ ಸಿಹಿ), ಎಳೆ ಸೌತೆಕಾಯಿಯ ಸಿಹಿ, ಪಾಯಸ, ಕೆಂಡದಲ್ಲಿ ಸುತ್ತು ಹಾಕಿದ ಬದನೆ ಗೊಜ್ಜು ಹೀಗೆ ಹೇಳುತ್ತಾ ಹೋದರೆ ಅದು ಮುಗಿಯುವುದೇ ಇಲ್ಲವೇನೋ!
ಹಾಗೆಯೇ ನನಗೆ ಖುಷಿ ಕೊಡುವ ಒಂದು ವಿಷಯವೆಂದರೆ ತಂಗಿ ಕೆಲವೊಮ್ಮೆ ನನಗೆ ಪ್ರೀತಿಯಿಂದ “ನೀನು ಅಜ್ಜಿಯ ಹಾಗೆ ಸಿಕ್ಕಿ-ಸಿಕ್ಕಿದ್ದನ್ನೆಲ್ಲ ಹಾಕಿ ಅಡಿಗೆ ಮಾಡುತ್ತಿ”, ಎನ್ನುವುದು. ಕನಿಷ್ಠ ಪಕ್ಷ ಅಜ್ಜಿಯ ಈ ಒಂದು ಒಳ್ಳೆಯ ಗುಣವಾದರೂ ನನ್ನಲ್ಲಿದೆಯಲ್ಲಾ ಎಂದು ಹೆಮ್ಮೆ! ಅಜ್ಜಿ ಹಾಗೆಯೇ. ಯಾವುದನ್ನೂ ಹಾಳು/ಪೋಲು (ವೇಸ್ಟ್ ) ಮಾಡುವಂತಹವರಲ್ಲ. ಅದು ಕಲ್ಲಂಗಡಿ ಹಣ್ಣಿನ ಸಿಪ್ಪೆಯೇ ಆಗಿರಲಿ, ಹೀರೆಕಾಯಿ ಸಿಪ್ಪೆಯೇ ಆಗಲಿ, ಇನ್ನೇನು ಹಾಳಾಗುತ್ತದೆಂಬಂತಿರುವ ಯಾವುದಾದರೂ ಸೊಪ್ಪಿರಲಿ. ಏನಿಲ್ಲದಿದ್ದರೆ ಕೊನೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ಹಾಕಿ ರುಚಿಯಾದ ಒಂದು ಸವಿ ಸಿದ್ಧಪಡಿಸುವ ಕಲೆ ಅವರದು. ಅದನ್ನು ಮನೆಯವರಿಗೆ ತಿನ್ನಿಸಿ “ಏನೇನೆಲ್ಲ ಮಾಡುತ್ತೀಯಾಪ್ಪಾ ನೀನು?”, ಎಂದು ಹೇಳಿಸಿಕೊಂಡರೆ ನನಗೂ ಒಂದೆಡೆಯಲ್ಲಿ ಅಜ್ಜಿಯನ್ನು ಹೀಗೆಯೇ ಬೈಕೊಳ್ಳುವ ಅಜ್ಜನ ನೆನಪಾದರೆ ಮತ್ತೊಂದೆಡೆ ಒಳಗೊಳಗೇ ನಗು!
ಹೀಗೆ ಹೇಳುತ್ತಾ ಹೋದರೆ ಇದು ಮುಗಿಯದ ಕಥೆ. ಇದು ನನ್ನೊಬ್ಬಳ ಅಜ್ಜಿಯ ಸವಿರುಚಿಯ ಕೈ ಚಳಕದ ಮಾತಲ್ಲ. ಬಹುಶಃ ಹೆಚ್ಚಿನ ಅಜ್ಜಿಯಂದಿರೂ ಹೀಗೆಯೇ ಅನಿಸುತ್ತದೆ! ನಿಮ್ಮ ಅಜ್ಜಿಯ ನಳಪಾಕದ ಬಗ್ಗೆ ಹೇಳಿ!

ಬಹಳ ಉತ್ತಮ ಬರಹ.. ಅಜ್ಜಿಯ ಹಾಗೂ ಅವರ ಅಡಿಗೆಯ ಸಿಹಿ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಅವಕಾಶ ನಿಮ್ಮ ಬರಹದಿಂದ ಚಿಗುರೊಡೆಯುವಂತಾಗಿದೆ ಧನ್ಯವಾದ.. ಅಜ್ಜಿ ಮನೆಯ ಈ ನೆನಪುಗಳು ನಿಜಕ್ಕೂ ಅವಿಸ್ಮರಣೀಯ.. ಮುಂದಿನ ಬರಹಕ್ಕೆ ಶುಭಹಾರೈಕೆಗಳು..
ಧನ್ಯವಾದಗಳು.