“ಓಹ್ ಹಲೋ, ಯಾರೊಂದಿಗೆ ಮಾತನಾಡುತ್ತಿದ್ದೀರಾ ಎಂದಾದರೂ ಗೊತ್ತಿದೆಯಾ ನಿಮಗೆ? ಏನು ಹೇಳುತ್ತಿದ್ದೀರಿ ನೀವು ನಿಮ್ಮ ಬಾಸ್ಗೆ? ಸುಮ್ಮನೇ ಕಿರಿಕಿರಿ ಮಾಡಿದರೆ, ಮನೆಗೆ ಕಳುಹಿಸಬೇಕಾಗುತ್ತದೆ ನೋಡಿ. ನಮ್ಮಲ್ಲಿ ಕೆಲಸ ಮಾಡುವವರೆಲ್ಲ ನಮ್ಮ ಸಂಸ್ಥೆಯ ಬಗ್ಗೆ, ಅದರ ಮಾಲೀಕರ ಬಗ್ಗೆ ತಿಳಿದುಕೊಂಡಿದ್ದರೆ ಕಂಪನಿಗೆ ಅದರಿಂದ ಒಳ್ಳೆಯದು. ನಿಮಗೆ ನೋಡಿದರೆ ಸಂಸ್ಥೆಯ ಎಬಿಸಿಡಿ ಗೊತ್ತಿದ್ದ ಹಾಗಿಲ್ಲ. ಅದೇನು ಕೆಲಸ ಮಾಡುತ್ತೀರೋ ಏನೋ? ಡ್ರೆಸ್ ಕೋಡ್, ಕಲ್ಚರಿಗೆ ಮತ್ತು ಹವಾಮಾನಕ್ಕೆ ಏನು ಸಂಬಂಧ? ಪ್ರೆಸೆಂಟೇಬಲ್ ಆಗಿ ಇರಬೇಕು. ನೀವು ಫ್ರಂಟ್ ಡೆಸ್ಕಿನಲ್ಲಿ ಇರುವುದರಿಂದ ಎಲ್ಲರಿಗಿಂತ ಜಾಸ್ತಿ ಗಮನ ನಿಮ್ಮ ಉಡುಗೆ-ತೊಡುಗೆ, ಮಾತು ಮತ್ತು ಹಾವ-ಭಾವಕ್ಕಿರಬೇಕು. ಅದೇನು ಕಲಿತು ಬಂದಿದ್ದೀರಾ ಇಲ್ಲಿ? ಮಾಧವ್ ಸರ್, ದಯವಿಟ್ಟು ಹೆಚ್.ಆರ್. ಜೊತೆ ಮಾತನಾಡಿ, ಪ್ರತಿ ಸಿಬ್ಬಂದಿಗೂ ಒಂದು ಡ್ರೆಸ್ ಕೋಡ್ ನಿಗದಿಪಡಿಸಿ ಆದಷ್ಟು ಬೇಗ”, ಎಂದು ಕಿರುಚಾಡಿ ಹೊರಡಲನುವಾದನು ರಜತ್.

ದಾರಿಗಡ್ಡ ಬಂದು ನಿಂತು ಸಾರಿಕಾ ಮತ್ತೆ ಹೇಳಿದಳು, “ನಾನು ಹೇಳಿದ್ದು ಸರಿಯಾಗಿಯೇ ಇದೆ. ನೀವು ಎಲ್ಲವನ್ನೂ ಮಿಕ್ಸ್ ಅಪ್ ಮಾಡಿ ಮಾತನಾಡುತ್ತಿದ್ದೀರಿ. ಅದೆಲ್ಲ ಬಿಡಿ. ಒಂದು ವಿಷಯ ನೆನಪಿಡಿ. ಗಿವ್ ರೆಸ್ಪೆಕ್ಟ್ ಅಂಡ್ ಟೇಕ್ ರೆಸ್ಪೆಕ್ಟ್. ಸುಮ್ಮನೇ ಏರು ದನಿಯಲ್ಲಿ ಅರಚಾಡುತ್ತಿದ್ದರೆ; ಸ್ವಲ್ಪ ಸಮಯ ಕಳೆದರೆ ಅದಕ್ಕೆ ಯಾರೂ ಬೆಲೆ ಕೊಡುವುದಿಲ್ಲ. ಈತ ಇರುವುದೇ ಹೀಗೆ, ಏನೂ ಮಾಡಲಾಗದು ಎಂದು ಎಲ್ಲರೂ ನಿರ್ಲಕ್ಷಿಸಲಾರಂಭಿಸುತ್ತಾರೆ. ಹಾಗಾಗಿ, ಕನಿಷ್ಟ ಸಿಬ್ಬಂದಿಗಳೆದುರು ನಿಮ್ಮ ಫಾರಿನ್ ಪದವಿಗೆ ತಕ್ಕಮಟ್ಟಿನ ತೂಕದ ಮಾತಾದರೂ ಆಡಿ!  ಸೀಯು, ಗುಡ್ ಡೇ!”,  ಎಂದು ದಾರಿ ಮಾಡಿಕೊಟ್ಟಳು.

ರಜತ್ ಸಿಟ್ಟಿನಿಂದ ನೇರವಾಗಿ ಕಾರ್ ಹತ್ತಿ ಮನೆಗೆ ಹೊರಟುಬಿಟ್ಟನು.

ಮಾಧವ್ ಬಂದು ಸಾರಿಕಾಳಿಗೆ, “ನೀನು ಹೇಳಿದ ವಿಷಯ ಹೌದಾದರೂ, ಹಾಗೆ ನೇರವಾಗಿ ಸರ್ ಕೋಪಕ್ಕೆ ಗುರಿಯಾಗಬಾರದಿತ್ತು. ಅವರು ಮೊದಲೇ ಮುಂಗೋಪಿ. ಏನು ಮಾಡುತ್ತಾರೋ ಹೇಳಲಾಗದು. ನೀನು ಜೋಪಾನ”, ಎಂದರು.

“ನಾನು ತಪ್ಪು ಮಾಡಿಲ್ಲವೆಂದ ಮೇಲೆ ಯಾಕೆ ಅಳುಕಲಿ? ಏನಾದರೂ ಮಾಡಿಕೊಳ್ಳಲಿ ಆ ಪುಣ್ಯಾತ್ಮ. ಹೇಳಬೇಕಾದ್ದನ್ನು, ಹೇಳಬೇಕಾದವರಿಗೆ, ನೇರವಾಗಿ ಹೇಳುವುದು ನನ್ನ ಸ್ವಭಾವ. ಈ ಕೆಲಸ ಅಲ್ಲದಿದ್ದರೆ ಮತ್ತೊಂದು”, ಎಂದಳು ಸಾರಿಕಾ ಸರಾಗವಾಗಿ.

ಈಗಿನ ಕಾಲದ ಹುಡುಗರೊಂದಿಗೆ ಮಾತೇ ಕಷ್ಟವೆಂದು ಒಳನಡೆದರವರು.

ಸಾರಿಕಾ ತನ್ನ ಪಾಡಿಗೆ ತಾನು ಕೆಲಸದಲ್ಲಿ ಮಗ್ನಳಾದಳು.

*****

ತನ್ನ ರೂಮಿನಲ್ಲಿ ಸೋಫಾದ ತುಂಬಾ ರಂಜಿತಾಳ ಹಳೆ ಡ್ರೆಸ್ ನೋಡಿ ಉರಿದುಹೋದನು ರಜತ್. ಮೊದಲೇ ಏನೋ ಅಪರೂಪಕ್ಕೆ ವಿಸಿಟ್ ಎಂದು ಹೋಗಿದ್ದಲ್ಲಿ ಆ ತಲೆಕೆಟ್ಟವಳ ಬಳಿ ಬೇಡದ ವಾದವಾಯಿತು. ಮಾಲೀಕನಾದ ತನಗೇ ಅಷ್ಟೆಲ್ಲ ಅನ್ನಬೇಕಾದರೆ ಎಷ್ಟು ಕೊಬ್ಬಿರಬೇಕು ಅವಳಿಗೆ? ಅವಳ ಹಿಸ್ಟರಿ ತಿಳಿದುಕೊಳ್ಳಬೇಕು. ಸರಿಯಾದ ಸಮಯಕ್ಕೆ ತಿರುಗಿಸಿ ಕೊಡಬೇಕು ಅವಳಿಗೆ. ಬುದ್ಧಿ ಕಲಿಸಿಯೇ ತೀರುತ್ತೇನೆ. ಇಷ್ಟೆಲ್ಲಾ ಮಾತನಾಡಿದ್ದಾಳೆಂದರೆ ತುಂಬಾ ಓದಿರುತ್ತಾಳೆ ಮತ್ತು ತಕ್ಕ ಮಟ್ಟಿಗೆ ಸಿರಿವಂತೆಯೇ ಆಗಿರುತ್ತಾಳೆ. ಏನೋ ಟೈಮ್ ಪಾಸಿಗೆಂದು ಕೆಲಸಕ್ಕೆ ಬರುತ್ತಿರುತ್ತಾಳೆ. ಇಲ್ಲದಿದ್ದರೆ ಕೆಲಸ ಹೋದರೆ ಎಂಬ ಚಿಂತೆಗಾದರೂ ಮಾಧವ್ ಹೇಳಿದಾಗ ಸುಮ್ಮನಿರುತ್ತಿದ್ದಳು. ಅಪ್ಪನಿಗೆ ಗೊತ್ತಾಗದ ಹಾಗೆ ಅವಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ತಾನೇ ಖುದ್ದು ವಿಚಾರಣೆ ನಡೆಸಬೇಕು. ಬೇರೆ ಯಾರಿಗೆ ಹೇಳಿದರೂ ವಿಷಯ ಅಪ್ಪನಿಗೆ ತಿಳಿದು ಅವಾಂತರವಾಗುತ್ತದೆ. ಅವರೋ, ಅವಳೇ ಸರಿಯೆಂದು ಹೇಳಿದರೂ ಆಶ್ಚರ್ಯವಿಲ್ಲ!

ಅಷ್ಟರಲ್ಲಿ ಅವನಿಗೆ ಎದುರಾಗಿ ಕಾಲೇಜಿಗೆ ಚಕ್ಕರ್ ಹೊಡೆದು ಬಂದ ರಂಜಿತಾ, “ಹೇಗೆನಿಸುತಿದೆ ಹೊಸ ಕವರ್ ನಿನ್ನ ಸೋಫಾಕ್ಕೆ?”, ಎಂದು ಕೀಟಲೆ ಮಾಡಿದಳು. ಈಗ ಅವನ ಕೋಪ ಅವಳೆಡೆಗೆ ತಿರುಗಿತು. “ಮಾಡಲು ಕೆಲಸವಿಲ್ಲವಾ ನಿಂಗೆ? ಅದೇನು ಡಿಗ್ರಿನೋ ಏನೋ? ಹಾಳಾದ ಸಮಾಜಸೇವೆ ಬಗ್ಗೆ. ಕ್ಲಾಸ್ ಇರುವುದೇ ಅಪರೂಪವೇನೋ ನಿನಗೆ? ಯಾಕೆ ನನ್ನ ಸುದ್ದಿಗೆ ಬಂದು ತಲೆ ಹಾಳುಮಾಡುತ್ತೀಯ? ಸುಮ್ಮನೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಹೋಗು ಇಲ್ಲಿಂದ. ನನ್ನ ರೂಮ್ ಈ ತರ ಇರುವುದು ಇಷ್ಟ ಆಗಲ್ಲ ನಂಗೆ ಎಂದು ಗೊತ್ತಿದೆ ತಾನೇ ನಿನಗೆ?”, ಎಂದನು ಗಂಭೀರವಾದ ದನಿಯಲ್ಲಿ.

ಅದ್ಯಾಕೋ ಅವನ ಸ್ವರ ಯಾವಾಗಲಿನಂತಿಲ್ಲವೆಂದು ಅರಿತು, ಸುಮ್ಮನೇ ಜಗಳ ಬೇಡವೆಂದು, ತನ್ನ ಬಟ್ಟೆಗಳೊಂದಿಗೆ ತೆಪ್ಪಗೆ ಹೊರನಡೆದಳು ರಂಜಿತ. ತಂಗಿಯ ಈ ನಡೆ ಅವನಿಗೆ ಹೊಸದಾದ್ರೂ, ಸಧ್ಯ ಹೋದಳಲ್ಲ ಜಾಸ್ತಿ ಕಿರಿಕಿರಿ ಮಾಡದೇ. ಈಗ ತಾನು ಯಾರೊಂದಿಗೂ ಮಾತನಾಡುವ ಮೂಡಿನಲ್ಲಿಯೂ ಇಲ್ಲ ಎಂದುಕೊಂಡು, ಆ ದಿನದ ತನ್ನ ಎಲ್ಲ ಮೀಟಿಂಗ್ಗಳನ್ನು ರದ್ದುಗೊಳಿಸಿ, ಆಫೀಸಿಗೆ ಬರುವುದಿಲ್ಲವೆಂದು ತಿಳಿಸಿದನು.

ಸುಮ್ಮನೇ ಕಾಫಿ  ಮಾಡಲೆಂದು ಅಡಿಗೆ ಕೋಣೆಯತ್ತ ಬಂದಾಗ ದಯಾನಂದ ಭಟ್ರು, “ಏನಾದರೂ ಬೇಕಿತ್ತ?”, ಕೇಳಿದರು. “ಹಾಂ ಸ್ವಲ್ಪ ಸ್ಟ್ರಾಂಗ್ ಕಾಫಿ ಕೊಡಿ ಒಂದು ಕಪ್”, ಎಂದು ಅಲ್ಲೇ ಸ್ಲ್ಯಾಬಿಗೊರಗಿ ನಿಂತು ಏನೋ ಯೋಚನೆಯಲ್ಲಿ ಮುಳುಗಿದನು.

ಭಟ್ರು ಕಾಫಿ ಮಾಡಿ ಕೊಟ್ಟವರೇ, “ಇನ್ನೇನಾದರೂ ಬೇಕಿತ್ತಾ?”, ಕೇಳಿದರು ಅವನು ಕಾಫಿ ಕಪ್ ಕೈಯ್ಯಲ್ಲಿ ಹಿಡಿದು ಇನ್ನೂ ಅಲ್ಲೇ ನಿಂತು ಏನೋ ಯೋಚನೆ ಮಾಡುತ್ತಿರುವುದು ನೋಡಿ. “ಇಲ್ಲ, ಏನು ಬೇಡ”, ಎಂದವನೇ ಕಾಫಿ ಕುಡಿಯಲು ಆರಂಭಿಸಿದನು.

ಕಾಫಿ ಖಾಲಿ ಕಪ್ ಟೇಬಲ್ ಮೇಲಿರಿಸಿದವನಿಗೆ ಅಚಾನಕ್ಕಾಗಿ ಏನೋ ಹೊಳೆದಂತಾಗಿ, ಹೆಚ್. ಆರ್. ಗೆ ಕರೆ ಮಾಡಿದನು. ಕೆಲವೊಂದು ಸೂಚನೆಗಳನ್ನು ಕೊಟ್ಟು, ಆದಷ್ಟು ಬೇಗ ತಿಳಿಸಿ, ಎಂದು ಕರೆ ಕಟ್ ಮಾಡಿ, ಸಣ್ಣಗೆ ವಿಸಿಲ್ ಹೊಡೆಯುತ್ತಾ ಗಾರ್ಡನ್ ಬಳಿ ಹೋಗಿ ಕುಳಿತುಕೊಂಡನು.

ಮುಂದುವರೆಯುವುದು

ಹಿಂದಿನ ಸಂಚಿಕೆ