ಸಾರಿಕಾಳೇನೋ ಆರಾಮವಾಗಿ ನಿದ್ದೆ ಮಾಡಿದಳು. ತಲೆ ಚಚ್ಚಿಕೊಳ್ಳುವಂತಾಗಿದ್ದು ಸುಮಂಗಲರಿಗೆ! ಈಗ ಏನು ಹೇಳುವುದು ಹುಡುಗನ ಕಡೆಯವರಿಗೆ? ಅವರು ಏನಂದುಕೊಂಡಾರು ನಮ್ಮ ಬಗ್ಗೆ? ಅದಕ್ಕಿಂತ ಮೊದಲು ಗಂಡನಿಗೆ ಏನು ಹೇಳುವುದು? ನನ್ನ ಒತ್ತಾಯಕ್ಕೆ ಮಣಿದು, ಅವಳ ಸ್ವಭಾವ ಗೊತ್ತಿದ್ದರೂ ಕೊನೆಗೂ ಅವರವಿರಲ್ಲಿ ವಿಚಾರಿಸಿ, ಏನೋ ಒಂದು ಸಂಬಂಧ ಕೂಡಿ ಬರುವಂತಾಗಿತ್ತು. ಈಗ ನೋಡಿದರೆ ಹೀಗೆ ಹೇಳುತ್ತಿದ್ದಾಳೆ.

ಅದೇನಾದರೂ ಹೇಳದೇ ಇರುವಂತಹ ವಿಷಯವೂ ಅಲ್ಲವೆಂದು ಸುಸಂದರ್ಭಕ್ಕೆ ಕಾಯುತ್ತಿದ್ದರು. ಅಷ್ಟರಲ್ಲಿ ಊಟಕ್ಕೆ ಬಂದ ಸುಜನ್ ಕೇಳಿದರು, “ಎಲ್ಲಿ ನಿನ್ನ ಮುದ್ದಿನ ಮಗಳು? ಊಟ ಆಯ್ತಾ ಅವಳದ್ದು?”.

ಸಾಗರ್ ಹೇಳಿದನು, “ಅವಳಾಗಲೇ ಕನಸಿನ ಲೋಕದಲ್ಲಿ ತೇಲುತ್ತಿರಬಹುದು. ನಿದ್ದೆ ಮಾಡಿ ಅರ್ಧ ಗಂಟೆ ಆಯಿತು”. “ಓಹ್, ಕನಸಿನ ರಾಜಕುಮಾರನ ಬಗ್ಗೆ ಕಲ್ಪನೆಯೋ ಅವಳಿಗೆ? ಕೊನೆಗೂ ಒಪ್ಪಿದಳಲ್ಲ ನಿನ್ನ ಅಕ್ಕ ಈ ಸಂಬಂಧಕ್ಕೆ? ನಾಳೆಯೇ ಬರಹೇಳುತ್ತೇನೆ ಹುಡುಗನ ಕಡೆಯವರಿಗೆ”.

ಸಾಗರ್ ವಿಷಯ ಏನೆಂದು ತಿಳಿಯದೇ ಪಿಳಿಪಿಳಿ ಕಣ್ಣು ಬಿಟ್ಟು ಅಪ್ಪನತ್ತ ದೃಷ್ಟಿ ನೆಟ್ಟಿದ್ದರೆ, ಸುಮಂಗಲ ತಡವರಿಸುತ್ತ ಹೇಳಿದರು, “ಅದೂ… ನಿಮ್ಮ ಮಗಳ ಕನಸಿನ ರಾಜಕುಮಾರ… ನೀವು – ನಾವು ಹೇಳಿದ ಹುಡುಗನಲ್ಲ. ಅವಳ ಆಫೀಸಿನ ಬಾಸ್ ಅಂತೇ…, ಅದೇನೋ ರಜತ್ ಶರ್ಮ ಎಂದಳಪ್ಪ! ಏನು ಯಾವಾಗ ಹೇಗೆ ಎಂದು ನೀವೇ ವಿಚಾರಿಸಬೇಕಷ್ಟೆ ಅವಳನ್ನು…”, ಸಾಗರ್ ತುಂಡರಿಸಿದನು ಅವರ ಮಾತನ್ನು!

“ವಾಟ್? ರಜತ್? ರಜತ್ ಶರ್ಮ ಆಂಡ್ ಅಕ್ಕ? ವಾವ್. ರಿಯಲಿ? ಯಾರು ಗೊತ್ತಾ ನಿಮಗೆ ಇವರು? ಸಣ್ಣ ವಯಸ್ಸಲ್ಲೇ ತುಂಬಾ ಸಾಧನೆಗೈದ ಫಾರಿನ್ ರಿಟರ್ನ್ಡ್ ಬಿಸಿನೆಸ್ ಟೈಕೂನ್ ಆಫ್ ಮ್ಯಾಂಗಲೋರ್, ಮಂಗಳೂರಿನ ಆಗರ್ಭ ಶ್ರೀಮಂತರಾದ ರಾಘವ್ – ರಮಾ ದಂಪತಿಗಳ ಎರಡನೇ ಮಗ, ನಿಸರ್ಗ ನೆಸ್ಟ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲೀಕರು!”.

“ಯಾರು, ಏನು-ಎತ್ತ, ಕುಲ-ಗೋತ್ರ ವಿಚಾರಿಸಲು ನಾನು ಖಂಡಿತ ಹೋಗಿಲ್ಲ. ಯಾಕೆಂದರೆ ಅವಳ ಬಾಸ್ ಎಂದ ಮೇಲೆ ನಮ್ಮ ಅಂತಸ್ತು , ನಡೆ-ನುಡಿ, ಉಡುಗೆ ಇತ್ಯಾದಿ ಅಜಗಜಾಂತರ ವ್ಯತ್ಯಾಸ ಇದ್ದೇ ಇರುತ್ತದೆ. ಇನ್ನು ಈ ಸಂಬಂಧ ಬೆಳೆಸುವುದೆಂದರೆ ಏನು ತಮಾಷೆಯೇ? ನಮ್ಮಲ್ಲಿ ಮದುವೆ ಬರೀ ಇಬ್ಬರಿಗೆ ಸಂಬಂಧಿಸಿದ ವಿಚಾರವಲ್ಲ, ೨-೩ ಕುಟುಂಬಗಳಿಗೆ ಸಂಬಂಧಿಸಿದ್ದು. ಅವಳು ಹೇಳಿದಳಂತೆ, ನಾವು ಕೇಳಬೇಕಂತೆ. ನೀನೊಬ್ಬ ಅದೊಂದು ಎಂಬಿಎ ಹುಚ್ಚಿನಿಂದಾಗಿ ಇರೋ-ಬರೋ ಬ್ಯುಸಿನೆಸ್ಸ್ಮ್ಯಾನ್ಗಳ ಬಗ್ಗೆ ತಿಳಿದುಕೊಂಡಿರುತ್ತೀಯ. ಅದಕ್ಕೆ ಇಷ್ಟೊಂದು ಉದ್ವೇಗದಲ್ಲಿ ಮಾತನಾಡುತ್ತಿದ್ದಿ. ನಮ್ಮ ಕಷ್ಟ ನಮಗೆ”, ಎನ್ನುತ್ತಾ ಕಣ್ಣೇರು ಒರೆಸಿಕೊಂಡರು ಸುಮಂಗಲ.

ಸುಜನ್ ಮಾತ್ರ ಒಂದೂ ಮಾತನಾಡದೇ ಶಾಂತವಾಗಿ ಊಟ ಮುಗಿಸಿ ಎದ್ದರು. ಹುಡುಗನ ಕಡೆಯವರಿಗೆ ಕರೆ ಮಾಡಿ, “ಸಧ್ಯಕ್ಕೆ ನಮ್ಮ ಮಗಳು ಮದುವೆ ಬೇಡವೆನ್ನುತ್ತಿದ್ದಾಳೆ. ಈಗಿನ ಕಾಲದ ಮಕ್ಕಳು. ದಿನಕ್ಕೊಂದು ಹೇಳುತ್ತಾರೆ, ದಯವಿಟ್ಟು ಕ್ಷಮಿಸಿ ನಿಮಗೆ ತೊಂದರೆ ಕೊಟ್ಟಿದ್ದಕ್ಕೆ. ಸಂಬಂಧಿಕರಾಗುವ ಭಾಗ್ಯವಿದ್ದರೆ ವಿಧಿ ಮತ್ತೆ ನಮ್ಮನ್ನು ಸೇರಿಸಬಹುದು. ಈಗ ನೀವು ಮುಂದುವರೆಸಿ. ಸಿಗೋಣ”, ಎಂದು ಮಾತು ಮುಗಿಸಿದರು ಸೂಕ್ಷ್ಮವಾಗಿ.

“ನೀವು ಏನೂ ಮಾತನಾಡುತ್ತಿಲ್ಲ ಯಾಕೆ?”, ಕೇಳಿದರು ಸುಮಂಗಲ.

“ಏನು ಹೇಳುವುದು? ಎಲ್ಲ ಮಕ್ಕಳು ಹೇಳಿದ್ದೇ ನಡೆಯಬೇಕು ಈಗಿನ ಕಾಲದಲ್ಲಿ. ನೋಡೋಣ ಮುಂದೇನಾಗುತ್ತದೆಂದು. ಅವಳಾಗಿಯೇ ಇನ್ನೊಂದು ೨-೩ ವಾರಗಳಲ್ಲಿ ಈ ಬಗ್ಗೆ ಏನೂ ಮಾತನಾಡದಿದ್ದರೆ ನಾವು ಮಧ್ಯೆ ಪ್ರವೇಶಿಸಿ ನೋಡೋಣ, ಅದುವರೆಗೂ ಅವಳಿಗೂ ಸ್ವಲ್ಪ ಸಮಯ ಕೊಡುವುದು ಒಳ್ಳೆಯದು. ಈಗ ಆ ಬಗ್ಗೆ ತಲೆ ಕೆಡಿಸ್ಕೊಂಡು ನಿನ್ನ ಆರೋಗ್ಯ ಹಾಳುಮಾಡಿಕೊಳ್ಳಬೇಡ. ನಿದ್ದೆ ಮಾಡು”, ಎಂದು ತಮ್ಮ ಕೋಣೆಯತ್ತ ನಡೆದರು ಸುಜನ್!

******

“ಇಲ್ಲಿ ಊಟಕ್ಕೂ ಗತಿ ಇಲ್ವಾ? ಅಡಿಗೆ ಮನೆಯಲ್ಲಿ ಏನೂ ತಯಾರಿಲ್ಲ, ಡೈನಿಂಗ್ ಟೇಬಲ್ ಮೇಲೆಯೂ ಏನೂ ಕಾಣಿಸುತ್ತಿಲ್ಲ. ಇನ್ನೇನು ಹೊಟೇಲಿಂದ ತರಿಸಿ ತಿನ್ನಬೇಕಾ?”, ಕೂಗಾಡುತ್ತಿದ್ದನು ರಜತ್.

ಅವನಿಗೆ ಸಂಜೆ ಸಾರಿಕಾ ಅಣ್ಣನ ಮುಂದೆ ಅವಮಾನ ಮಾಡಿದ್ದು ಸ್ವಲ್ಪವೂ ಇಷ್ಟವಾಗಲಿಲ್ಲ. ಅಣ್ಣನೇನೋ ತಮಾಷೆ ಮಾಡಿಕೊಂಡು ತನ್ನ ಪಾಡಿಗೆ ತಾನು ಆಸ್ಪತ್ರೆಯತ್ತ ನಡೆದಿದ್ದನು. ತಾನು ಮಾತ್ರ ಐಸ್ ಕ್ರೀಮ್ ತಿನ್ನುತ್ತಾ ಟೈಮ್ ಪಾಸ್ ಮಾಡಿ, ರಾತ್ರಿ ಮನೆಗೆ ಬಂದರೆ ಮನೆಯಲ್ಲಿ ಯಾರೂ ಕಾಣಿಸುತ್ತಿಲ್ಲ. ಅಡಿಗೆಯೂ ಇದ್ದಂತಿಲ್ಲ ರಾತ್ರಿಗೆ.

ಇವನ ಕೂಗಾಟ ಕೇಳಿ ದಯಾನಂದ ಭಟ್ರು ಬಂದು ಕೇಳಿದರು, “ಬೇಗನೆ ಏನಾದರೂ ಮಾಡಿಕೊಡಲೇ? ರಾತ್ರಿಗೆ ಅಡಿಗೆ ಬೇಡ. ಎಲ್ಲರೂ ಯಾರೋ ಸಂಬಂಧಿಕರ ರಿಸೆಪ್ಶನ್ ಎಂದು ಹೊರಗಡೆಯೇ ಊಟವಾಗುತ್ತದೆ ಎಂದಿದ್ದರು ಅಮ್ಮ. ಹಾಗಾಗಿ ನಾನು ಬೆಳಗ್ಗೆ ಉಳಿದಿದ್ದ ಸ್ವಲ್ಪ ಉಪ್ಪಿಟ್ಟು ತಿಂದು ಮಲಗಿಬಿಟ್ಟಿದ್ದೆ. ನೀವು ಬಂದದ್ದು ಗೊತ್ತಾಗಲಿಲ್ಲ”.

“ಇನ್ನೇನು ಮಾಡುವುದು ನಿಮ್ಮ ತಲೆ? ನಾನೂ ಅಲ್ಲೇ ಹೋಗಿ ತಿನ್ನುತ್ತೇನೆ ಬಿಡಿ”, ಎಂದು ರಭಸವಾಗಿ ಗಾಡಿ ಕೀ ಹಿಡಿದು ಹೊರನಡೆದನು. ಅವರಿಗೆ ಅವನ ಈ ನಡೆ ಹೊಸದೇನಲ್ಲ. ಸುಮ್ಮನೇ ಹಿಂದಿರುಗಿ ಮತ್ತೆ ಮಲಗಿದರವರು.

ರಜತ್ ವೇಗವಾಗಿ ಗಡಿ ಓಡಿಸುತ್ತಾ ಮನಸ್ಸಲ್ಲೇ ನಕ್ಕನು.

ಅವನ ಕ್ಲೋಸ್ ಕಸಿನ್ ಮದುವೆ ಆರತಕ್ಷತೆಯಿತ್ತು. ಈ ಗಜಿಬಿಜಿಯಲ್ಲಿ ಮರೆತೇ ಹೋಗಿದ್ದನು. ಪ್ರೀತಿಯಿಂದ ರಜತ್ಗೆ, ಬಾರದಿದ್ದಲ್ಲಿ ಕೊಲೆ ಮಾಡುವ ಬೆದರಿಕೆಯೂ ಹಾಕಿಹೋಗಿದ್ದಳು ಅವಳು. ಆದರೂ ಭಟ್ರ ಮುಂದೆ ಮರೆತುಹೋಯಿತೆಂದು ತೋರಿಸಿಕೊಳ್ಳಲು ಅವನ ಮನಸ್ಸು ಒಪ್ಪಿರಲಿಲ್ಲ.

ಅವಳೊಂದಿಗೆ ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ, ಗಾಡಿ ಓಡಿಸುತ್ತಿದ್ದನು ರಜತ್. ಅಷ್ಟರಲ್ಲಿ ಅವನ ಗಾಡಿಗೆ ಅಡ್ಡವಾಗಿ ತೀಕ್ಷ್ಣವಾದ ಬೆಳಕು ಬೀರುತ್ತಾ ಲಾರಿಯೊಂದು ಮುನ್ನುಗ್ಗಿತು.

ಮುಂದುವರೆಯುವುದು

ಹಿಂದಿನ ಸಂಚಿಕೆ