“Good people do not need laws to tell them to act responsibly, while bad people will find a way around the laws” – Plato.

“ಒಳ್ಳೆಯವರಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಕಾನೂನಿನ ನಿಯಮಗಳ ಅಗತ್ಯವಿಲ್ಲ, ಆದರೆ ಕೆಟ್ಟವರು ಕಾನೂನನ್ನು ಪರಿಪಾಲಿಸದೇ ಇರಲು ತಮ್ಮದೇ ದಾರಿಗಳನ್ನು ಕಾನೂನು ಮೂಲಕವೇ ಹುಡುಕಾಡುತ್ತಿರುತ್ತಾರೆ” ಎಂಬುದು ತತ್ವಜ್ಞಾನಿ ಪ್ಲಾಟೋ ಹೇಳಿದ ಸಾಲುಗಳು.

ಮೊನ್ನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗುತ್ತಿರಬೇಕಾದರೆ ಈ ಮಾತು ನನ್ನನ್ನು ಮತ್ತೆ-ಮತ್ತೆಅಕ್ಷರಷಃ ಕಾಡಿದ್ದು ಸುಳ್ಳಲ್ಲ! ನಮ್ಮಲ್ಲಿ ಬಹಳಷ್ಟು ಕಡೆ ರಾಷ್ಟೀಯ ಹೆದ್ದಾರಿ ಕಾಮಗಾರಿಗಳು ಸಾಗುತ್ತಿವೆ. ಅದರಲ್ಲಿ ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿದ್ದು – ಬೆಂಗಳೂರು-ಮೈಸೂರು ಹೆದ್ದಾರಿ. ಅದೇನೋ ಹೇಳುತ್ತಾರಲ್ಲ, ಪ್ರತಿಯೊಂದರಲ್ಲೂ ಒಳಿತು-ಕೆಡುಕು ಎರಡೂ ಇದ್ದೇ ಇರುತ್ತದೆ ಎಂದು. ಹಾಗೆಯೇ ಇದೂ ಸಹ. ಬಹಳಷ್ಟು ಒಳ್ಳೆಯ ವಿಚಾರಕ್ಕೆ ಪ್ರಚಾರಗೊಂಡರೆ, ಮತ್ತೊಂದಿಷ್ಟು ಕೆಟ್ಟ ಪ್ರಚಾರವೂ ಹೊಂದಿತ್ತು. ಅದೆಲ್ಲದರ ಬಗ್ಗೆ ಅದಾಗಲೇ ಬಹಳಷ್ಟು ಮಂದಿ ಬರೆದಿದ್ದಾರೆ, ಬಹಳಷ್ಟು ಚರ್ಚೆಗಳೂ ನಡೆದಿವೆ.

ಹೇಳಹೊರಟರೆ ಮುಗಿಯದ ವಿಚಾರವಿದು. ಬಹಳಷ್ಟು ವಿಚಾರಗಳನ್ನು ಅದಾಗಲೇ ಹಲವರು ಹಂಚಿಕೊಂಡಿದ್ದಾರೆ. ಹಾಗೆಯೇ ರಾಜೀವ್ ಹೆಗಡೆಯವರು ಹೇಳಿದಂತೆ, ಪಥ ಶಿಸ್ತು ಪಾಲಿಸದಿರುವುದು, ಹರಟೆ ಹೊಡೆಯುವುದು ಇತ್ಯಾದಿಗಳು ಮತ್ತೊಂದಿಷ್ಟು ತಲೆನೋವಿನ ಸಮಸ್ಯೆಗಳೇ ಪ್ರತಿ ಹೆದ್ದಾರಿಯಲ್ಲಿಯೂ! ಏನೇ ಆದರೂ, ಹಲವು ಸಮಸ್ಯೆಗಳನ್ನು ಮೀರಿ ನಿಂತು, ಒಂದು ಒಳ್ಳೆಯ ಕೆಲಸದ ಗುರಿಯತ್ತ ಮಾತ್ರವೇ ತಮ್ಮ ಗಮನಹರಿಸಿ ಯೋಜನೆ ಪೂರ್ಣಗೊಳ್ಳಲು ಪರಿಶ್ರಮಿಸುತ್ತಿರುವ ಪ್ರತಾಪ್ ಸಿಂಹ ಹಾಗೂ ಅವರ ತಂಡದವರ ಮನೋಸ್ಥೈರ್ಯ ಹಾಗೂ ಕಾರ್ಯಕ್ಷಮತೆಯನ್ನು ಮೆಚ್ಚಲೇಬೇಕು. ಅದರೊಂದಿಗೆ, ಹೆದ್ದಾರಿ ಸಂಚಾರ ಸುರಕ್ಷತೆ ಮತ್ತು ನಿಯಮ ಪಾಲನೆ ಬಗ್ಗೆ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಂಡರೆ ಸ್ವಲ್ಪ ಮಟ್ಟಿಗಾದರೂ ನಮ್ಮ ಸೋ ಕಾಲ್ಡ್ ಎಜುಕೇಟೆಡ್ ಯುವ ಜನಾಂಗ  ಎಚ್ಚೆತ್ತುಕೊಳ್ಳಬಹುದೇನೋ?!

ಆದರೆ, ನಾನಿಲ್ಲಿ ಹೇಳಹೊರಟಿರುವ ವಿಚಾರ ಮಾತ್ರ ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಇಂತಹ ಒಂದು ಯೋಜನೆಗೆ ನಾವೆಷ್ಟು ಅರ್ಹರು?, ಎಂದು! ಈ ಆತ್ಮಾವಲೋಕನ ಇಂದಿನ ಅತೀ ಅಗತ್ಯವಾಗಿದೆ. ಯಾಕೆಂದರೆ, ಈ ಯೋಜನೆಯ ಮುಕ್ಕಾಲು ಭಾಗ ಪೂರ್ಣಗೊಂಡು ಸರಿಯಾಗಿ ೧-೨ ತಿಂಗಳುಗಳೂ ಕಳೆದಿಲ್ಲ. ಅದಾಗಲೇ, ಇದನ್ನು ಅಲ್ಲಲ್ಲಿ ಬಹಳಷ್ಟು ಕಡೆ ಹಾಳುಗೆಡವಿದ್ದು ಕಾಣಬಹುದು. ಇದು ಸಾರ್ವಜನಿಕರಲ್ಲದೇ, ಇನ್ನು ಯಾರು ಮಾಡಲು ಸಾಧ್ಯ? ಅದು ರಾಜಕೀಯ ಪುಢಾರಿಗಳ ಹಿಂಬಾಲಕರೇ ಇರಲಿ, ರಾಜಕಾರಣಿಗಳೇ ಇರಲಿ ಅಥವಾ ಆಯಾಯ ಸ್ಥಳೀಯ ವ್ಯಾಪಾರಿಗಳು, ನಾಗರಿಕರೇ ಇರಲಿ, ಪೊಲೀಸ್ ವ್ಯವಸ್ಥೆಯೇ ಇರಲಿ. ಅದು ಯಾರೇ ಆದರೂ, ಆತ ಮೊದಲು ಈ ನಾಡಿನ ಒಬ್ಬ ಸಾಮಾನ್ಯ ಪ್ರಜೆಯೇ ತಾನೇ? ಅಲ್ಲಲ್ಲಿ ರಾಜಕೀಯ ನಾಯಕರ ಫ್ಲೆಕ್ಸ್ಗಳೂ, ತುಂಡಾದ ತಂತಿ ಬೇಲಿಗಳೂ, ಹಾಳುಗೆಡವಿದ ರಸ್ತೆ ವಿಭಜಕಗಳೂ, ಕೆಲವು ಕಡೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ-ಕಡ್ಡಿ ಕೊಂಪೆಗಳು! ಒಂದೇ-ಎರಡೇ?!

ಹಾಗೆಯೇ ನೀವು ಈ ಹಾದಿಯಲ್ಲಿ ತಡ ರಾತ್ರಿ ಸಾಗುತ್ತಿರಬೇಕಾದರೆ ಖಂಡಿತವಾಗಲೂ ಒಂದೆರಡು ಸಣ್ಣ ಚಲಿಸುವ ಟೆಂಪೋ / ಗಾಡಿಗಳಲ್ಲಿ ಅಲ್ಲಲ್ಲಿ ಸಿಗರೇಟ್-ಚಹಾ ಮಾರುವ ವ್ಯಾಪಾರಿಗಳೂ ಕಾಣಸಿಗುತ್ತಾರೆ. ಅದಲ್ಲೆಕ್ಕಿಂತ ನನಗೆ ಅಚ್ಚರಿಯೆನಿಸುವುದು ಇಂತಹ ಎಕ್ಸ್ಪ್ರೆಸ್ ವೇ ಬೇಕೆಂದು ಹಠ ಹಿಡಿದು ಅದಕ್ಕೆಂದೇ ಉದ್ದುದ್ದಕ್ಕೆ ತಮ್ಮದೇ ಗೆಳೆಯರ ಗುಂಪಿನಲ್ಲಿ ಯಾವುದೇ ವಿದೇಶಿ ನಾಯಕನಿಗಿಂತಲೂ ಕಡಿಮೆಯಿಲ್ಲವೆಂದು ಪೋಸ್ ಕೊಡುತ್ತಾ ಸಾವಿರಾರು ಸಾಧ್ಯತೆಗಳೂ, ವಿದೇಶಿ ಯೋಜನೆಗಳೂ ಇತ್ಯಾದಿಗಳ ಬಗ್ಗೆ ಗಂಟೆಗಟ್ಟಲೆ ಹರಟೆಹೊಡೆಯುವ ವಿದ್ಯಾವಂತರೆಂದು ಕರೆಸಿಕೊಳ್ಳುವ ಯುವಕ-ಯುವತಿಯರು. ಇವರೇ ಇಂತಹ ಕಡೆ ವ್ಯಾಪಾರ-ವಹಿವಾಟಿಗೆ ಉತ್ತೇಜನ ಕೊಟ್ಟು, ಸಿಗರೇಟ್ ಸೇದುತ್ತ ಪೋಸ್ ಕೊಟ್ಟುಕೊಂಡು, ಸಾಮಾಜಿಕ ಜಾಲತಾಣದಲ್ಲಿ “ಎಂಜೋಯ್ಡ್ ಲಾಂಗ್ ಡ್ರೈವ್, ಕುಡ್ ಬಿ ಮೇಡ್ ಬೆಟರ್”, ಎಂದೆಲ್ಲ ಎಕ್ಸ್ಪ್ರೆಸ್ ವೇನಲ್ಲಿ ವಿಡಿಯೋ ಮಾಡಿ ಹಂಚಿಕೊಳ್ಳುವುದು!

ಅಷ್ಟೊಂದು ಪುರೊಸೊತ್ತಿನಲ್ಲಿ ಸಿಗರೇಟ್ ಸೇದಬೇಕೆಂದಿದ್ದರೆ, ಕೆಳಗಿಳಿದು ಸರಿಯಾದ ಅಂಗಡಿಯಲ್ಲೇ ನಿಲ್ಲಿಸಬಹುದಲ್ಲ? ಇದಕ್ಕೆಲ್ಲ ಎಕ್ಸ್ಪ್ರೆಸ್ ವೇಯ ಅಗತ್ಯವಾದರೂ ಏನಿದೆ ಇವರಿಗೆ? ಇದು ನಮ್ಮಲ್ಲಿನ ವಿಪರ್ಯಾಸವೇ ಸರಿ. ವಿದೇಶದಲ್ಲಿ ಇಂತಹದ್ದಕ್ಕೆಲ್ಲ ಕಾನೂನು ಉಲ್ಲಂಘನೆ ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಿಕ್ಷೆಗೊಳಪಡಿಸುತ್ತಾರೆಂದು ಯಾರೂ ಸಹ ಇಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ. ಹಾಗಿದ್ದರೆ ಇಲ್ಲಿನವರಿಗೆ ಈ ಎಕ್ಸ್ಪ್ರೆಸ್ ವೇ ಯೋಜನೆಯ ಅಥವಾ ಪರಿಕಲ್ಪನೆಯ ಬಗ್ಗೆ ಸ್ವಲ್ಪ ಮಟ್ಟಿನ ಸಾಮಾನ್ಯ ಜ್ಞಾನವೂ ಇಲ್ಲವೆಂದೇ? ಅಥವಾ ಏನಾದರಾಗಲಿ, ಇಲ್ಲಿ ಹೇಗಿದ್ದರೂ ನಡೆಯುತ್ತದೆ, ಕೊನೆಗೆ ಸಿಸ್ಟಮ್ ಸರಿ ಇಲ್ಲವೆಂದು ದೂರಿದರೆ ಮುಗಿಯಿತಲ್ಲ ಎನ್ನುವ ಅಹಂಕಾರಿ/ಉದಾಸೀನ ಪ್ರವೃತ್ತಿಯೇ?

ಅದೇನೇ ಇರಲಿ. ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕುಗಳು, ಸೌಕರ್ಯಗಳು ಇತ್ಯಾದಿಗಳ ಬೇಡಿಕೆಯಿಡುವ ಪ್ರತಿಯೊಬ್ಬ ಪ್ರಜೆಗೂ ತನ್ನ ನಾಡಿನ ಪ್ರತಿ, ತನ್ನ ನಾಡಿನ ಸಂಪನ್ಮೂಲಗಳ ಬಗ್ಗೆ ಒಬ್ಬ ಉತ್ತಮ ನಾಗರಿಕನಾಗಿ ತಾನು ಹೇಗೆ ನಡೆದುಕೊಳ್ಳಬೇಕೆಂಬ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಮಾತ್ರವೇ ಯಾವುದೇ ಯೋಜನೆಯ ಸದುದ್ದೇಶ ತನ್ನ ಪ್ರತಿಫಲ ಕೊಡಬಲ್ಲದಷ್ಟೇ. ಇಲ್ಲವಾದಲ್ಲಿ, ಪ್ರತಿಯೊಂದು ವಿಚಾರವೂ ಸುಮ್ಮನೆ ಪರಸ್ಪರ ಕೆಸರೆರಚಾಟದಲ್ಲಿ ಮುಗಿದು ಹೋದರೆ,  ಈ ದೇಶದ ಯೋಜನೆಗಳು ಎಷ್ಟೇ ಬಲಿಷ್ಠವಾಗಿದ್ದರೂ ಅದರ ಉದ್ದೇಶವನ್ನು ಈಡೇರಿಸಲು ಸಾಧ್ಯವೇ ಇಲ್ಲ. ಹೊಸ ವರ್ಷದಲ್ಲಿ ಎಲ್ಲರದೂ ಒಂದೊಂದು ಹೊಸ ಬಗೆಯ ನಿರ್ಣಯವಿದ್ದರೆ (New Year Resolution!), ನಾವು ಯಾಕೆ ಒಬ್ಬ ಜವಾಬ್ದಾರಿಯುತ ನಾಗರಿಕರಂತೆ ವರ್ತಿಸುತ್ತೇವೆಂದು ನಿರ್ಣಯಿಸಿ, ನಮ್ಮಿಂದ ದೊಡ್ಡ ಉಪಕಾರವಲ್ಲದಿದ್ದರೂ, ಸಾರ್ವಜನಿಕ ಸಂಪನ್ಮೂಲಗಳನ್ನು ಹಾಳುಗೆಡವದೇ, ಕಾನೂನು ಪಾಲಕರಾಗಿ, ನಿರುಪದ್ರವಿಗಳಾಗಿ ಜೀವಿಸಬಾರದು?

Merry Christmas and Happy New Year 2023 Ahead! We have a Long Way to Go.. India…!

Leave a Reply

Your email address will not be published.

Time limit is exhausted. Please reload CAPTCHA.