ಹುರುಪಿನ ತಯಾರಿ
ತಂಗಿ ಗಡದ್ದಾಗಿ ೧೦ ದಿನ ಮೊದಲೇ ತಾನು ಮಗನಿಗೆ ಲೋಹದ ಹಕ್ಕಿಗಳ ಕಲರವ ತೋರಿಸಲು ಹೊರಟಿದ್ದೇನೆ ಎಂದಾಗಲೇ ನನಗೆ ಮನದ ಮೂಲೆಯಲ್ಲಿ “ಒಳ್ಳೆಯದೇ, ಆದರೆ ಇವಳಿಗೆ ಅಲ್ಲಿ ಸಾಕು-ಬೇಕಾಗಲಿದೆ. ನೂಕುನುಗ್ಗಲು, ಜನಜಂಗುಳಿಯ ಬಗ್ಗೆ ಗೊತ್ತಿದ್ದೂ ಇಂತಹ ಸಾಹಸಕ್ಕೆ ಕೈ ಹಾಕಲು ಹೊರಟವಳ ಬಗ್ಗೆ ಮೆಚ್ಚಿಗೆಯೂ ಎನಿಸಿತ್ತು. ಅದೇನೋ ಹೇಳುತ್ತಾರಲ್ಲ?, ಮನಸ್ಸಿದ್ದರೆ ಮಾರ್ಗ!. ಹಾಗೆ ಅವಳಿಗೆ ಬೇಕೆನಿಸಿದರೆ, ಅದೇನೇ ಎದುರಾದರೂ ಸರಿ, ಅವಳು ಅದನ್ನು ಸಾಧಿಸಿಯೇ ಸಾಧಿಸುತ್ತಾಳೆ, ಮಾಡಿಯೇ ತೀರುತ್ತಾಳೆ. ಇದು ಅವಳ ಬಗ್ಗೆ ಚಿಕ್ಕಂದಿನಿಂದ ನೋಡಿ ಅರಿವಿದ್ದ ನನಗೂ, ಅಮ್ಮನಿಗೂ ಗೊತ್ತಿರುವ ಗುಟ್ಟು. (ಈಗ ಬಹುತೇಕರಿಗೆ ಗೊತ್ತಾಗಿ ಗುಟ್ಟು ರಟ್ಟಾಗಿದೆ ಎನ್ನುವುದು ಬೇರೆಯದೇ ಮಾತು!).
ಟ್ರಾಫಿಕ್ ದಟ್ಟಣೆ
ಸರಿ, ಬೆಳಗಿನ ೯:೩೦ರ ಪ್ರದರ್ಶನಕ್ಕೆ ಹೋಗುವುದೆಂದು ಮೊದಲೇ ನಿರ್ಧರಿತವಾಗಿತ್ತು. ಬೆಂಗಳೂರಿಗೆ ಬಂದು ವರುಷಗಳು ಕಳೆದರೂ, ಬೆಂಗಳೂರಿನ ಟ್ರಾಫಿಕ್ ದಟ್ಟಣೆಯ ಅರಿವಿದ್ದರೂ, ಎಲ್ಲವೂ ಅಂದುಕೊಂಡಂತೆಯೇ ಆದರೆ, ಅದರಲ್ಲೇನು ಮಜಾ? ಹಾಗೆಯೇ ಇವಳ ಭಂಡಾರ ಹೊರಟ ಮುಹೂರ್ತಕ್ಕೆ ಸರಿಯಾಗಿ ಟ್ರಾಫಿಕ್ ದಟ್ಟಣೆ ಹೆಚ್ಚಿ; ಪ್ರದರ್ಶನದ ತುಸು ಸಮಯ ಮೀರಿ ಅಂತೂ ಹರಸಾಹಸದಿ, ಅದು ಹೇಗೋ ಯಲಹಂಕದ ವಾಯುನೆಲೆ ತಲುಪಿದರೆನ್ನಿ. ಅದೆಲ್ಲದರ ಅರಿವು ಹೊರಟಿದ್ದ ಅವರಿಗೂ ಇದ್ದೇ ಇತ್ತು, ಆದರೆ ಇದು ಸ್ವಲ್ಪ ನಿರೀಕ್ಷಿಸಿದ್ದಕ್ಕಿಂತ ಮೀರಿತ್ತು ಈ ಬಾರಿ!
ಸೂರ್ಯ ಕಿರಣ್, ತೇಜಸ್, ಇತ್ಯಾದಿ..
ಆದರೆ, ಒಳ ಹೊಕ್ಕು ನೋಡಿದ ತಕ್ಷಣವೇ ಕಂಡ ಸೂರ್ಯ ಕಿರಣ್ ಮತ್ತು ತೇಜಸ್ ವಿಮಾನಗಳ ಬಾನೆತ್ತರದ ಹಾರಾಟ ಅವರ ಮೊಗದ ತೇಜಸ್ಸನ್ನು ಹೆಚ್ಚಿಸಿದವು! ಹಾಗೆಯೆ ಗಗನಕ್ಕೆ ಚಿಮ್ಮಿ, ಮತ್ತೊಂದು ಮೂಲೆಯಲ್ಲಿ ನೃತ್ಯವಾಡುತ್ತಿದ್ದ ಸಾರಂಗ ಬಿಸಿಲಿನ ಝಳವನ್ನು ಮರೆಮಾಚಿತ್ತು. ಬಾನಂಗಳದ ಪ್ರದರ್ಶನ ಮುಗಿಯುತ್ತಲೇ ಮುಂದಡಿಯಿಟ್ಟರೆ ಕಾಣಿಸಿದ್ದು – ವಿವಿಧ ದೇಶಗಳ ರಕ್ಷಣಾ ಉಪಕರಣಗಳು, ದೇಶೀ ನಿರ್ಮಿತ ಉಪಕರಣಗಳು ಮತ್ತು ಯಂತ್ರಕಗಳ ಪ್ರದರ್ಶನ! ಪ್ರತಿಯೊಂದರ ಹಿಂದೆಯೂ ಒಂದೊಂದು ರೋಚಕ ಕಥಾನಕ, ಸಾಹಸಿ ತಂತ್ರಜ್ಞರು, ಎಂಜಿನೀಯರುಗಳು, ಅಧಿಕಾರಿಗಳು, ಜೊತೆಗೆ ದೇಶವನ್ನು ಕಾಯುವ ಶಿಸ್ತಿನ ಸಿಪಾಯಿಗಳು.. ಅವರೆಲ್ಲರ ಪರಿಶ್ರಮ.. ! ಹೀಗೆ ಅದೊಂದು ಅಧ್ಭುತ ಅನುಭವ!.
ನಮ್ಮ ಹೆಮ್ಮೆ – ನಮ್ಮ ಪೈಲಟ್ಗಳು
ಇವೆಲ್ಲದರ ಮುಂದೆ ಅವಳ ಬೇಗುದಿ, ಸುಸ್ತು ಯಾವ ಲೆಕ್ಕ? ಸುತ್ತಿ-ಸುತ್ತಿ ಬಳಲಿ ಬೆಂಡಾದರೂ, ಮತ್ತೆ ಛಲದಿ ಹೆಜ್ಜೆಯಿಡಲು ಸ್ಫೂರ್ತಿ ನೀಡಿದ್ದು, ಆತ್ಮವಿಶ್ವಾಸದಿಂದ ಎದೆ ಸೆಟೆದು ತಮ್ಮ ಛಾಪನ್ನು ತೋರಿಸುತ್ತ ಗರ್ವದಿ ವಿಮಾನದತ್ತ ನಡೆದು ಬರುತ್ತಿದ್ದ ವಾಯುಸೇನೆಯ ಪೈಲಟ್ಗಳು. ಬಾನೆತ್ತರದಿ ವಿವಿಧ ಕಸರತ್ತನ್ನು ಸಾಕಾರಗೊಳಿಸಿದ ಅವರಲ್ಲಿ ತುಂಬಿದ್ದ ಹುರುಪು ಹಾಗೂ ಅವರೆಲ್ಲರೂ ನಮ್ಮವರೆಂಬ ಆ ಹೆಮ್ಮೆ!
Aero India 2023 – The Runway to Billion Opportunities
ಕೆಲವೊಂದು ಗಜಿಬಿಜಿ, ಕಿರಿಕಿರಿ-ಚಿರಿಪಿರಿಗಳೊಂದಿಗೆ ದಿನವಿಡೀ ಕಳೆದರೂ ಅದೊಂದು ಅವಿಸ್ಮರಣೀಯ ದಿನವೇ ಸರಿ. ಕಳೆದು ಹೋದುದು ಮತ್ತೆ ಹಿಂದಿರುಗಿ ಬಾರದು. ಹಾಗೆಂದು ಅದರ ಬಗ್ಗೆಯೇ ಚಿಂತಿಸುತ್ತ, ಒಳಬರುವಾಗ ಆದ ಟ್ರಾಫಿಕ್ ಕಿರಿಕಿರಿಯ ನಿರಾಸೆಯತ್ತಲೇ ಗಮನ ಕೇಂದ್ರೀಕೃತವಾಗಿದ್ದರೆ, ಒಂದು ಚೆಂದದ ದಿನವಿಡೀ ನಿಸ್ಸಾರವಾಗಿಬಿಡುತಿತ್ತು. ಅದಕ್ಕಿಂತ ಈ ವಾಯು ಪ್ರದರ್ಶನ ನೋಡಲು ಒದಗಿ ಬಂದ ಸುವರ್ಣಾವಕಾಶದ ಸದ್ಬಳಕೆ, ಮಗನೊಂದಿಗಿನ ಹೋರಾಟ ಒಂದು ಉತ್ತಮ ನಿದರ್ಶನ! ಇದಕ್ಕೆಲ್ಲಾ ಪ್ರೋತ್ಸಾಹ, ಸಹಕಾರ ನೀಡಿ, ಅವಳಿಗೆ ಕಂಪನಿ ನೀಡಿದ ಅವರ ಕಂಪೆನಿಯವರನ್ನೂ ಪ್ರಶಂಸಿಸಬೇಕು!