ಮನೆಗೆ ಬಂದವಳೇ ಸಾರಿಕಾ ಎಲ್ಲರನ್ನೂ ಕರೆದು ಹೇಳಿದಳು, “ಬೇಗ ಬನ್ನಿ, ಐಸ್ ಕ್ರೀಮ್ ಕರಗಿಹೋಗುತ್ತದೆ. ಈಗಲೇ ತಿಂದರೆ ಅದರ ಮಜವೇ ಬೇರೆ. ಫ್ರಿಡ್ಜ್ನಲ್ಲಿ ಇಟ್ಟು ಮತ್ತೆ ತಿಂದರೆ ಇದಕ್ಕೆ ಆ ಸ್ವಾದವಿರುವುದಿಲ್ಲ. ಅಮ್ಮಾ .. ಎಲ್ಲಿದೀಯ? ಬೇಗ ಬಾ”.

ಹಿತ್ತಿಲ ಗಿಡದಲ್ಲಿ ಮಲ್ಲಿಗೆ ಕುಯ್ಯುತ್ತಿದ್ದ ಸುಮಂಗಲ ಕೈ ತೊಳೆದು, ಸೆರಗಿನಲ್ಲಿ ಕೈ ಒರೆಸಿಕೊಳ್ಳುತ್ತಾ ಗಡಿಬಿಡಿಯಲ್ಲಿ ಸಾರಿಕಾಳ ಎದುರು ಬಂದು ಅವಳ ಹಣೆ ಮುಟ್ಟಿ ನೋಡಿದರು. ಸುಜನ್ ಏನಾಯಿತು ಎಂಬಂತೆ ನೋಡಿದರು ಪತ್ನಿಯತ್ತ. ಅದನ್ನು ನೋಡಿ ಸಾಗರ್ ಮುಸಿಮುಸಿ ನಕ್ಕನು.

“ಏನಾಯ್ತೀಗ?” ಕೇಳಿದಳು ಸಾರಿಕಾ.

“ಅಲ್ಲ ಮತ್ತೆ, ಬೆಳಗ್ಗೆ ಅದೇನೋ ಗಡಿಬಿಡಿಯಲ್ಲಿ ಅರ್ಧಂಬರ್ಧ ವಿಷಯ ಹೇಳಿ ಹೋಟೆಲಿಗೆಂದು ಹೋಗಿ ಬಂದೆ. ಅಲ್ಲಿ ಪಾರ್ಟಿ ಎಂದಿದ್ದೆ. ಕೇಳಿದ್ದಕ್ಕೆಲ್ಲ ಬೆಳಗ್ಗೆ ಸಿಡುಕಿದೆ. ಈಗ ನೋಡಿದರೆ ಅಲ್ಲಿ ಊಟವೇ ಇರಲಿಲ್ಲವೇನೋ ಅಂದ್ಕೊಳ್ಳಬೇಕು, ಹಾಗೆ ಬಕಾಸುರಿಯ ಭರದಲ್ಲಿ ಸಂಭ್ರಮದಿಂದ ಐಸ್ ಕ್ರೀಮ್ ತಿನ್ನೋಣ ಎಂದು ಹೇಳುತ್ತಿದ್ದೀಯ. ನೀನು ಹುಷಾರಾಗಿ ಇದ್ದೀಯ ತಾನೇ? ಏನು ಸಮಾಚಾರ?”, ಕೇಳಿದರು ಸುಮಂಗಲ.

“ಅಯ್ಯೋ, ಅದು ಬಿಡು. ಬೆಳಗ್ಗೆ ತಡವಾಯಿತೆಂದು ೪ ಮಾತಾಡಿದೆ ಗಡಿಬಿಡಿಯಲ್ಲಿ, ಸಿಟ್ಟಿಂದ. ಈಗ ಇದರ ಸ್ವಾದ ಸವಿಯೋಣ”, ಎಂದಳು.

“ಇಲ್ಲ, ಏನು ವಿಷಯ ಎಂದು ನೀನು ಹೇಳಲೇ ಬೇಕು. ಐಸ್ ಕ್ರೀಮ್ ತಿಂದು ಸಂಭ್ರಮಿಸುವಂತದ್ದು ಏನಾಯ್ತು? ನಿನಗೆ ಕೆಲಸದಲ್ಲಿ ಭಡ್ತಿ ಏನಾದರೂ ಸಿಕ್ಕಿತ ಇಷ್ಟು ಬೇಗ? ನೀನು ಇಂದು ಬೆಳಗ್ಗೆ ಯಾವಾಗಿನಂತಿರಲಿಲ್ಲ. ಹಾಗೆಯೇ, ಈಗ ನೋಡಿದರೆ ಅದರಿಂದ ಸುಧಾರಿಸಿಕೊಂಡಿದ್ದೀಯ. ಏನಾಯ್ತು?”.

“ಹೂಂ.. ನೀನು ಬಿಡುವವಳಲ್ಲ ಇನ್ನು. ಮೊದಲು ಐಸ್ ಕ್ರೀಮ್ ತಿನ್ನು, ಮತ್ತೆ ಹೇಳ್ತೇನೆ”.

“ಸರಿ”, ಎಂದು ಐಸ್ ಕ್ರೀಮ್ ಕಡೆ ಗಮನ ಕೊಟ್ಟರು ಸುಮಂಗಲ.

******

ಮನೆಗೆ ದಡಬಡಿಸುತ್ತಲೇ ಬಂದ ರಜತ್ ನೇರವಾಗಿ ತನ್ನ ರೂಮಿನತ್ತ ನಡೆದನು. ಬಾಗಿಲಿಗೆ ಅಡ್ಡವಾಗಿ ನಿಂತಿದ್ದ ರಂಜಿತ ಹೇಳಿದಳು, “ಅಣ್ಣಾ. ೧೦೦೦/- ರೂಪಾಯಿ ಕೊಟ್ಟರೆ ಮಾತ್ರ ಒಳಗಡೆ ಬಿಡುತ್ತೇನೆ. ಇಲ್ಲದಿದ್ದರೆ ನೀನು ಇಲ್ಲೇ ಹೊರಗಡೆ ಕಾಲ ಕಳೆಯಬೇಕು ಇವತ್ತು”.

“ಸುಮ್ಮನೆ ತಲೆ ತಿನ್ನಬೇಡ. ನನ್ನ ಮೂಡ್ ಸರಿ ಇಲ್ಲ. ಏಳು”, ಎಂದನು ರಜತ್. ಅವಳ ಕೀಟಲೆ ಬುದ್ಧಿ ಬಿಡಬೇಕಲ್ಲ? ಯಾವಾಗಲಿನಂತೆ ನಗುತ್ತಾ , “ನಾನು ಏಳುವುದಿಲ್ಲ. ಎಂತ ಬೇಕಾದ್ರೂ ಮಾಡು. ನಿನ್ನ ಬಳಿ ಕ್ಯಾಶ್ ಇಲ್ಲದಿದ್ದರೆ ನನಗೆ ಯುಪಿಐ ಪೇ ಮಾಡು. ಗೋ ಡಿಜಿಟಲ್ ಬ್ರದರ್…”, ಎಂದಳು ನಾಟಕೀಯವಾಗಿ.

ಪಟಾರನೆ ಅವಳನ್ನು ದೂರಕ್ಕೆ ತಳ್ಳಿ ಒಳನಡೆದು ಬಾಗಿಲು ಹಾಕಿಕೊಂಡನು ರಜತ್. ಅನಿರೀಕ್ಷಿತ ನಡೆಯಿಂದ ಆಘಾತಗೊಂಡಳು ರಂಜಿತ. ಹಾಗೆಯೇ ಕೈಗೂ ಸ್ವಲ್ಪ ತರಚಿದ ಗಾಯವಾಯಿತು ಅವನು ಎಳೆದ ರಭಸಕ್ಕೆ ನೆಲದ ಬಳಿಯಿದ್ದ ಕುರ್ಚಿಯ ಕಾಲಿಗೆ ಕೈ ಹೊಡೆದು! ಗಳಗಳನೆ ಅಳುತ್ತಾ ತನ್ನ ರೂಮಿನತ್ತ ಓಡಿಹೋಗಿ ಬಾಗಿಲು ಹಾಕಿಕೊಂಡದ್ದನ್ನು ಕಂಡ ರಾಘವ್ ಪತ್ನಿಯನ್ನು ಕರೆದರು.

ರಮಾ ಆಸ್ಪತ್ರೆಯ ಯಾವುದೋ ವಿಚಾರವಾಗಿ ಅಕೌಂಟೆಂಟ್ ಬಳಿ ಮಾತನಾಡುತ್ತ ಹೊರಗಡೆ ಕುಳಿತಿದ್ದರು. ಅವರಿಗೆ ರಾಘವ್ ಕರೆದದ್ದು ಕೇಳಿಸಲೇ ಇಲ್ಲ. ರಾಘವ್ ಸಿಟ್ಟಿನಿಂದ ಮಗಳ ರೂಮಿನ ಬಾಗಿಲ ಬಳಿ ಹೋಗಿ ಕರೆದರು, “ರಂಜಿತ, ಏನಾಯ್ತಮ್ಮಾ? ಯಾಕೆ ಅಳುತ್ತಿದ್ದೆ? ಅಣ್ಣ ಏನಾದರೂ ಹೇಳಿದನಾ?”.

ಅಷ್ಟರಲ್ಲಿ ಅಲ್ಲಿಗೆ ಬಂದ ರಂಜನ್ ಕೇಳಿದನು, “ವಾಟ್ ಹ್ಯಾಪನ್ಡ್ ಡ್ಯಾಡ್? ಆ ಕಿರಿಕ್ ಅಣ್ಣ ನನ್ನ ಮುದ್ದಿನ ತಂಗಿಗೆ ಏನು ಮಾಡಿದನು? ಏನೋ ಗಲಾಟೆ ಕೇಳಿಸಿತು. ಅದಕ್ಕೇ ಕೆಳಗಡೆ ಬಂದೆ. ಏನು ಸಮಾಚಾರ?”.

“ಅದು ನನಗೆ ಗೊತ್ತಿದ್ದರೆ ತಾನೇ? ಅದನ್ನೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾ ಇದ್ದೇನೆ. ನಿನ್ನ ಅಮ್ಮನಿಗಂತೂ ಈ ಲೋಕದ ಪರಿವೆಯೇ ಇಲ್ಲ. ಎಲ್ಲಿ ಹೋಗಿದ್ದಾಳೋ?”.

“ಸ್ಟಾಪ್ ಇಟ್ ಡ್ಯಾಡ್. ಮಕ್ಕಳ ವಿಷಯ ಬಂದಾಗ ಅದು; ಅಪ್ಪ – ಅಮ್ಮ ಇಬ್ಬರಿಗೂ ಸಂಬಂಧಿಸಿದ ಜವಾಬ್ದಾರಿ. ಅದನ್ನು ಒಬ್ಬರೇ ನಿಭಾಯಿಸಬೇಕೆಂಬ ಯಾವ ರೂಲ್ಸ್ ಕೂಡ ಇಲ್ಲ. ನಿಮ್ಮಿಂದಾದರೆ ಪ್ರಾಬ್ಲಮ್ ಸಾಲ್ವ್ ಮಾಡಿ, ಇಲ್ಲದಿದ್ದಲ್ಲಿ ಸುಮ್ಮನಿರಿ. ಹೊಸ ಪ್ರಾಬ್ಲಮ್ ಕ್ರಿಯೇಟ್ ಮಾಡಬೇಡಿ!”.

“ಸರಿಯಪ್ಪ. ಎಲ್ಲದರಲ್ಲೂ ನೀವು, ಅಮ್ಮ – ಮಕ್ಕಳು ಹೇಳಿದ್ದೆಲ್ಲಾ ಸರಿ, ನಾನೊಬ್ಬನೇ ತಪ್ಪಿತಸ್ಥ! ನಿಮ್ಮ ಸಹವಾಸ ಬೇಡ ನನಗೆ”, ಎಂದು ಬಿರುಸಾಗಿ ಹೊರನಡೆದರು ರಾಘವ್.

ಮೊಬೈಲ್ ನೋಟಿಫಿಕೇಶನ್ ಬಂದಿದ್ದು ನೋಡಿ ತೆಗೆದುನೋಡಿದ ರಂಜನ್ಗೆ, ತಮ್ಮ – ತಂಗಿಯರ ಸ್ವಭಾವ ಗೊತ್ತಿದ್ದುದರಿಂದ ವಿಷಯ ಅರ್ಧಂಬರ್ಧ ಅರ್ಥವಾಯಿತು. ಮನಸ್ಸಲ್ಲೇ ನಕ್ಕನು. ಇದಕ್ಕೆ ಪರಿಹಾರ ಮೊದಲು ರಜತ್ ಜೊತೆ ಮಾತನಾಡಬೇಕಾದ್ದು ಎಂದು ಅವನ ರೂಮಿನ ಬಳಿ ಹೋಗಿ ಬಾಗಿಲು ತಟ್ಟಿದನು.

“ಯಾರು? ಏನಾಗಬೇಕಿತ್ತು? ಸುಮ್ಮನೇ ಈಗ ನನ್ನ ತಲೆ ತಿನ್ನಬೇಡಿ. ನನ್ನ ಮೂಡ್ ಸರಿ ಇಲ್ಲ”, ಎಂದನು ರಜತ್.

“ನಾನು, ರಂಜನ್”, ಎಂದನು ರಂಜನ್ ಗಂಭೀರವಾಗಿ.

“ನೀನಾ? ಎಂತ ವಿಷಯ? ಈಗ ನೆನಪಾಯಿತಾ ನನ್ನ ಬಗ್ಗೆ?”, ಕೇಳುತ್ತಾ ಬಾಗಿಲು ತೆಗೆದನು ರಜತ್.

ಯಾವುದೇ ಒತ್ತಡವಿದ್ದರೂ, ಮೂಡ್ ಸರಿ ಇಲ್ಲದಿದ್ದರೂ ಅಣ್ಣ – ತಮ್ಮಂದಿರು ಸೇರಿದಾಗ ಅವರಿಬ್ಬರೂ ಯಾವಾಗಲೂ ಸ್ನೇಹಿತರಂತೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಾಗಾಗಿಯೇ ರಜತ್ ನೇರವಾಗಿ ಬೇರೇನೂ ಹೇಳದೆ ಬಾಗಿಲು ತೆರೆದಿದ್ದು ಅಣ್ಣನಿಗಾಗಿ.

“ಏನಪ್ಪಾ? ಯಾಕೆ ರಂಜಿತಾಳಿಗೆ ಬೇಸರ ಮಾಡಿದೆ? ಏನು ನಡೀತು?”, ಕೇಳಿದನು ರಂಜನ್.

“ಏನಿಲ್ಲ, ಹೀಗೇ ಏನೋ ಆಫೀಸ್ ವಿಚಾರದಲ್ಲಿ ತಲೆ ಕೆಡಿಸ್ಕೊಂಡು ಬರುತ್ತಾ ಇದ್ದೆ. ಇವಳಿಗೆ ಇವಳದ್ದೇ ಕಾಟದ ಚಿಂತೆ. ಒಂದು ಚೂರು ಬೇರೆಯವರ ಬಗ್ಗೆ ಗಮನವಿಲ್ಲ. ಏನೋ ಸಿಟ್ಟಿನಲ್ಲಿ ತಳ್ಳಿದ್ದು ಹೆಚ್ಚಾಯಿತು. ಏನು ಮಾಡುವುದು? ಸ್ವಲ್ಪ ಹೊತ್ತು ಬಿಟ್ಟು ನಾನೇ ಸಮಾಧಾನ ಮಾಡುತ್ತೇನೆ. ಅಪ್ಪ ಕಿರಿಕಿರಿ ಮಾಡದಿದ್ದರಾಯಿತು ಅಷ್ಟೇ”, ಹೇಳಿದನು ರಜತ್.

“ಅಪ್ಪ ಆಗಲೇ ಬಂದು ಹೋದರು. ಇನ್ನು ಇಂದು ಅವರು ನಿಮ್ಮ ಸುದ್ದಿಗೆ ಬರುವುದಿಲ್ಲ. ಏನಾಯಿತು ಆಫೀಸಲ್ಲಿ? ಇವತ್ತು ನೀನೆ ಅರೇಂಜ್ ಮಾಡಿದ ಪಾರ್ಟಿ ತಾನೇ ಇದ್ದದ್ದು?”, ಕೇಳಿದನು ರಂಜನ್.

“ಏನಿಲ್ಲ, ಮಾಮೂಲಿ ಸಣ್ಣ – ಪುಟ್ಟ ರಗಳೆಗಳು. ಇವತ್ತು ಹೊಸ ಡ್ರೆಸ್ ಕೋಡ್ ಲಾಂಚ್ ಮಾಡಿದೆವು. ನಾನು ಏನೇನೋ ಯೋಚಿಸಿ, ಉದ್ಯೋಗಿಗಳೇ ಆಯ್ಕೆ ಮಾಡಿದ ಡ್ರೆಸ್ ಕೋಡ್ ಚೆನ್ನಾಗಿರುತ್ತದೆ, ಅವರಿಗೂ ಕಂಫರ್ಟ್ ಇರುತ್ತದೆಂದು, ಡ್ರೆಸ್ ಕೋಡ್ ಡಿಸೈನ್ ಮಾಡಿ, ಪ್ರೊಪೋಸ್ ಮಾಡಿಕೊಡಲು ಮತ್ತು ಆಯ್ದ ೪-೫ ಡಿಸೈನ್ಗಳಲ್ಲಿ ವೋಟಿಂಗ್ ಮೂಲಕ ಮೆಜಾರಿಟಿ ಬಂದದ್ದನ್ನು ಸೆಲೆಕ್ಟ್ ಮಾಡಲು ಹೇಳಿದ್ದೆ. ಅದೇ ನನಗೆ ತಿರುಗುಬಾಣವಾಯಿತು!”.

“ಎಂತ ತಿರುಗುಬಾಣ? ಅಂತದ್ದೇನಾಯ್ತು?”.

“ನಂಗೆ ಆಧುನಿಕ ಉಡುಪು ಮತ್ತೆ ಡ್ರೆಸ್ ಕೋಡ್ ಮಾಡಿಸಬೇಕೆಂದಿತ್ತು. ಈಗಿನ ಕಾಲದವರೆಲ್ಲರೂ ಅದನ್ನೇ ಆಯ್ಕೆ ಮಾಡುವರೆಂಬ ಅತಿಯಾದ ಆತ್ಮವಿಶ್ವಾಸದಿಂದ ಎಲ್ಲವನ್ನೂ ಅವರಿಗೆ ಬಿಟ್ಟಿದ್ದು ನನಗೆ ಮುಳುವಾಯಿತು. ಯಾವುದೋ ಹಳೆ ಕಾಲದ ಖಾದಿ ಬಟ್ಟೆ, ಜುಟ್ಟು ಹೀಗೆ ಏನೇನೋ ಮಾಡಿಟ್ಟಿದ್ದಾರೆ! ಡ್ಯಾಮ್ ಇಟ್!”, ಎಂದನು ರಜತ್, ಬೇಕೆಂದೇ ಸಾರಿಕಳೊಂದಿಗಿನ ಶೀತಲ ಸಮರ ಮುಚ್ಚಿಟ್ಟು!

“ಹೂಂ. ಅದೇನೋ ಸರಿ. ನಾವು ಕಲಿತದ್ದನ್ನು ಪ್ರಾಕ್ಟಿಕಲ್ ಆಗಿ ಇಂಪ್ಲಿಮೆಂಟ್ ಮಾಡುವಾಗ ನಾವು ಕಲಿತದ್ದೆಲ್ಲಿ ಮತ್ತು ಅದನ್ನು ಅಳವಡಿಸುತ್ತಿರುವುದು ಎಲ್ಲಿ ಎಂದೂ ನೀನು ಯೋಚನೆ ಮಾಡಬೇಕಲ್ಲ ರಜತ್? ಇಲ್ಲಿ ಎಲ್ಲವೂ ವಿದೇಶದಂತೆ ಅಲ್ಲ. ಸ್ವಾತಂತ್ರ್ಯ ಒಳ್ಳೆಯದೇ. ಆದರೆ ಎಷ್ಟು ಬೇಕೋ ಅಷ್ಟೇ ಇರಬೇಕು. ಇಲ್ಲಿನ ಜನರಿಗೆ ಯಾವುದಾದರೂ ಮೊದಲು ಕೆಟ್ಟದ್ದೊಂದೇ ಅರ್ಥವಾಗುವುದು. ತಾಳ್ಮೆ, ಪರಿಜ್ಞಾನ ಕಡಿಮೆ. ಇನ್ಮುಂದೆ ಜೋಪಾನ. ಇದೇನೋ ಚಿಕ್ಕ ವಿಚಾರ. ಆದರೆ ಇದು ನಿನ್ನ ಇಷ್ಟಕ್ಕೆ ವಿರುದ್ಧವಾಗಿ ನಡೆಯಿತು. ನಾಳೆ ಇನ್ನೇನೋ ಆಗಬಹುದು. ಅದಕ್ಕೆ ಹೇಳಿದೆ.  ಈಗ ಯಾವುದಕ್ಕೂ ಮೊದಲು ಹೋಗಿ ರಂಜಿತಾಳನ್ನು ಸಮಾಧಾನ ಮಾಡು”, ಎಂದನು ರಂಜನ್.

“ಸರಿ”, ಎನ್ನುತ್ತಾ ತಂಗಿಯ ರೂಮಿನತ್ತ ನಡೆದನು ರಜತ್.

ಮುಂದುವರೆಯುವುದು

ಹಿಂದಿನ ಸಂಚಿಕೆ