ಟಿನ್ ಟಿನ್ ಟಿನ್  ….. ಏನಿದು ಶಬ್ದ ಎಂದುಕೊಂಡಿರಾ? ಇದು ನಾವು – ನೀವೆಲ್ಲ ನಮ್ಮ ಬಾಲ್ಯದಲ್ಲಿ ಕೇಳಿಸಿಕೊಂಡಿದ್ದ ಕರೆಗಂಟೆ! ಹೌದು .. ಯಾವುದರ ಕರೆಗಂಟೆ ?? ಅದೇ… ಐಸ್ಕ್ಯಾಂಡಿ…! ಐಸ್ಕ್ಯಾಂಡಿ..ಐಸ್ಕ್ಯಾಂಡಿ..ಟಿನ್ ಟಿನ್ ಟಿನ್..! 

ಎಷ್ಟೊಂದು ವಿಧಗಳಲ್ಲಾ ನಮ್ಮ ಐಸ್ಕ್ಯಾಂಡಿಗಳಲ್ಲಿ? ಬೆಲ್ಲದ ಕ್ಯಾಂಡಿ, ದೂಧ್ ಕ್ಯಾಂಡಿ, ಆರೆಂಜ್ ಕ್ಯಾಂಡಿ, ಕೆಂಪು ಕ್ಯಾಂಡಿ ..ಇತ್ಯಾದಿ ಇತ್ಯಾದಿ. ಸುಮಾರು ಹೆಸರು ಮರೆತು ಹೋಗಿದೆಯೇನೋ?!! ನೆನಪಾದರೆ ನೀವೂ ಹೇಳಿ. ಇದರಲ್ಲಿ ನಮ್ಮ ಭಾಷೆಯ ವಿವಿಧತೆಯೂ ಬೆರೆತು ಹೋಗಿದೆ ನೋಡಿ. ಕನ್ನಡದ ಬೆಲ್ಲ, ಹಿಂದಿಯ ದೂಧ್, ಇಂಗ್ಲೀಷಿನ ಆರೆಂಜ್, ತುಳುವಿನ ಕೆಂಪು! ಆದರೂ ನಾವು ಕನ್ನಡಕ್ಕಾಗಿ ಹೋರಾಟ ಮಾಡಬೇಕಾಗಿದ್ದ ಕಾಲವಲ್ಲ ಅದು. ಕನ್ನಡ ಭಾಷೆ ನಮ್ಮೊಳಗೇ ಒಂದಾಗಿ ಬೆರೆತು ಹೋಗಿತ್ತು. ವಿವಿಧತೆಯಲ್ಲಿ ಏಕತೆ ಸಾರಲು ಬರೀ ಐಸ್ಕ್ಯಾಂಡಿಯೂ ಸಾಕಾಗುತ್ತಿತ್ತು ನಮಗೆ! ಈಗಿನಂತೆ ಯಾವ ಕಪಟ ಹೋರಾಟವೂ ಬೇಕಾಗಿರಲಿಲ್ಲ! ಇರಲಿ ಬಿಡಿ, ನಾವೀಗ ಐಸ್ಕ್ಯಾಂಡಿಯ ಬಗ್ಗೆ ನಮ್ಮ ಮಾತು ಮುಂದುವರೆಸೋಣ.

ನಮ್ಮ  ಬಾಲ್ಯದಲ್ಲಿ ನಾವು ಅವಿಭಕ್ತ ಕುಟುಂಬದ ಸಂತೃಪ್ತ ಜೀವನ ನಡೆಸುತ್ತಿದ್ದ ಕಾಲವದು. ಆದರೆ ನಮ್ಮ ಅಜ್ಜ ತುಂಬಾ ಶಿಸ್ತಿನ ಮನುಷ್ಯ. ಹಾಗೆಯೇ ನಮ್ಮ  ಬಾಲ್ಯವೂ ಕಟ್ಟುನಿಟ್ಟಾಗಿತ್ತು. ಈ ಐಸ್ಕ್ಯಾಂಡಿ ನಮಗೆ ಉಳಿದ ಮಕ್ಕಳಂತೆ ಸುಲಭದ ತುತ್ತಾಗಿರಲಿಲ್ಲ. ಅದು ಯಾವ ನೀರಿನಿಂದ ಮಾಡುತ್ತಾರೋ ಏನೋ? ಏನು ಬಣ್ಣ ಬೆರೆಸುತ್ತಾರೋ ಏನೋ? ಅದನ್ನೆಲ್ಲಾ ತಿಂದು ಅರೋಗ್ಯ ಹಾಳು ಮಾಡಿಕೊಳ್ಳಬೇಡಿ. ಈ ಸುಡುಬೇಸಿಗೆಯಲ್ಲಿ ಶುದ್ಧವಾದ ನೀರು ಕುಡಿಯಿರಿ. ಸುಮ್ಮನೇ ಸಿಕ್ಕಿ-ಸಿಕ್ಕಿದ್ದೆಲ್ಲ ತಿಂದು ಅರೋಗ್ಯ ಹಾಳು ಮಾಡಿಕೊಳ್ಳಬೇಡಿ. ಮಳೆಗಾಲದಲ್ಲಿ ಶಾಲೆ ಶುರುವಾಗುತ್ತಲೇ ಹೇಗೂ ಒಂದು ಬಾರಿ ಶೀತ-ಜ್ವರ ಬರುತ್ತದೆ, ಮುಂತಾದ ಬುದ್ಧಿಮಾತುಗಳನ್ನು ಅಜ್ಜ, ಅಪ್ಪ, ದೊಡ್ಡಪ್ಪ, ಚಿಕಪ್ಪನಿಂದ ೪-೫ ಬಾರಿ ಕೇಳಿಸಿಕೊಳ್ಳಬೇಕಾಗಿದ್ದ ಕಾಲವದು!

ಆದರೆ ನಮ್ಮ ಆಸೆ ಬಿಡಬೇಕಲ್ಲ? ಬೇಡವೆಂದರೆ ಅದೇ ಬೇಕೆಂಬ ಛಲ ನಮ್ಮದು! ಸರಿ.. ಹೇಗೆ ಈಗ ಮನೆಯವರ ಕಣ್ಣು ತಪ್ಪಿಸಿ ಈ ಐಸ್ಕ್ಯಾಂಡಿಯನ್ನು ಸವಿಯುವುದು? ಇದ್ದಾರಲ್ಲ ನಮ್ಮ ಪ್ರತಿಯೊಂದು ಕಾರ್ಯಕ್ಕೂ ಟೊಂಕ ಕಟ್ಟಿ ನಮ್ಮೊಂದಿಗೆ ಬಂದು ಸಾಥ್ ನೀಡುತ್ತಿದ್ದ ನಮ್ಮ ಪ್ರೀತಿಯ ‘ದೊಡ್ಡತ್ತೆ ಮತ್ತು ಸಣ್ಣತ್ತೆ’! ದೊಡ್ಡತ್ತೆಗಿಂತಲೂ ಹೆಚ್ಚಾಗಿ ಸಣ್ಣತ್ತೆ ! ಅದೆಷ್ಟಾದರೂ ಸಣ್ಣವರಿಗೆ ತಾನೇ ಕಿತಾಪತಿಯ ಅರಿವು ಹೆಚ್ಚಿರುವುದು? 

ಬೇಸಿಗೆ ರಜಾ ಶುರುವಾಗುತ್ತಿದ್ದಂತೆ ನಮ್ಮ ಊರಿನ ಬೀದಿ-ಬೀದಿಗಳಲ್ಲಿ ಬರುತ್ತಿದ್ದ ನಮ್ಮ ಪ್ರೀತಿಯ ಐಸ್ಕ್ಯಾಂಡಿ ಮಾರುವವನು! ವ್ಯಾಪಾರದ ಗುಟ್ಟನ್ನು ಚೆನ್ನಾಗಿ ಅರಿತವನಿವನು. ಸಮಯ ಸುಮಾರು ೧೦.೩೦-೧೧ ಗಂಟೆ ಆಗುತ್ತಿದ್ದಂತೆ ನಮ್ಮ ಮನೆಯ ಗೇಟಿನ ಹೊರಗಡೆಯ ಬೀದಿಯಲ್ಲಿ ಒಂದು ಸುತ್ತು ಹಾಕುತ್ತಲಿದ್ದ ಅವನು ಪರಿಸ್ಥಿತಿಯನ್ನು ಅವಲೋಕಿಸಲು. ಸ್ವಲ್ಪ ಹೊತ್ತಿನಲ್ಲೇ ಅಜ್ಜ ಸ್ಕೂಟರಿನಲ್ಲಿ ಗೇಟು ದಾಟಿ ಹೊರಗಡೆ ಪೇಟೆಗೆ ಹೊರಟ ಕೂಡಲೇ ಇವನ ಐಸ್ಕ್ಯಾಂಡಿ ಕರೆಗಂಟೆ ಜೋರಾಗಿ ಆರಂಭವಾಗುತ್ತಿತ್ತು.. ಟಿನ್…ಟಿನ್..ಟಿನ್..! ನಾವು, ಮಕ್ಕಳೂ ಸಹ ಅದಕ್ಕೆಂದೇ ಕಾದಿರುತ್ತಿದ್ದೆವು. ಐಸ್ಕ್ಯಾಂಡಿ ಹಾಕಲು ಪಾತ್ರೆಗಳನ್ನು ಸದ್ದು ಮಾಡುತ್ತಾ ತೆಗೆದಿಡುತ್ತಿದ್ದೆವು. ಅದು ಒಂದು ರೀತಿಯ  ಸೂಚನೆಯೂ ಹೌದು – ಐಸ್ಕ್ಯಾಂಡಿಗೆ ದುಡ್ಡಿನ ಅವಶ್ಯಕತೆಯಿದೆಯೆಂದು! ನಮ್ಮ ಅತ್ತೆಯರ ಬಳಿ ಖರ್ಚಿಗೆಂದಿರುತ್ತಿದ್ದ ಅಲ್ಪ-ಸ್ವಲ್ಪ ದುಡ್ಡಿನ ಬಹುತೇಕ ಪಾಲು ಹೀಗೆ ರಜಾದಲ್ಲಿ ನಮ್ಮ ಬೇಡಿಕೆಗಳಿಗೇ ಮೀಸಲಿರುತ್ತಿತ್ತು. ಎಲ್ಲರಿಗೆ ಬೇಕಾದ ಕ್ಯಾಂಡಿಗಳನ್ನು ಪಟ್ಟಿಮಾಡಿಕೊಳ್ಳುತ್ತಾ ಪಾತ್ರೆ ಮತ್ತು ದುಡ್ಡು ಹಿಡಿದು ಓದುತ್ತಿದ್ದೆವು ನಾವು ಐಸ್ಕ್ಯಾಂಡಿಯ ಬಳಿಗೆ! ಕೆಲವೊಂದು ಬಾರಿ ನಮ್ಮ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ‘ತುಕ್ರನ’ ಕೈಯ್ಯಲ್ಲಿಯೂ ತರಿಸುವುದಿತ್ತು ಐಸ್ಕ್ಯಾಂಡಿ. 

ಈ ಐಸ್ಕ್ಯಾಂಡಿಯನ್ನು ನಾವು ಸವಿಯುತ್ತಿದ್ದುದು ಮಾತ್ರ ನಮ್ಮ ಅಜ್ಜನ ಕೋಣೆಯ ಹಿಂಬದಿಯಲ್ಲಿಯೇ! ಬಗೆ-ಬಗೆಯ ಐಸ್ಕ್ಯಾಂಡಿಗಳನ್ನು ಗಬ-ಗಬನೆ ತಿನ್ನುವ ಮಜವೇ ಬೇರೆ! ಅಮ್ಮ , ದೊಡ್ಡಮ್ಮ, ಚಿಕ್ಕಮ್ಮ ಇದಕ್ಕೆ ಮೂಕ ಪ್ರೇಕ್ಷಕರು. ಅತ್ತೆಯರೂ ನಮ್ಮೊಂದಿಗೆ ಸೇರಿ ಐಸ್ಕ್ಯಾಂಡಿ ಸವಿಯುತ್ತಿದ್ದರು! ಅದಕ್ಕೇ ನನಗೆ ಯಾವಾಗಲೂ ಅನಿಸುವುದು. ನಿಮ್ಮ  ಬಾಲ್ಯದ ಕೆಲವು ದಿನಗಳನ್ನಾದರೂ ನಿಮ್ಮ ಅತ್ತೆಯರೊಂದಿಗೆ ಕಳೆಯದಿದ್ದರೆ ಅದೊಂದು ರೀತಿಯಲ್ಲಿ ನೀರಸ ಜೀವನವೇ ಸರಿ! 

ಈಗ ಅದೆಷ್ಟೋ ಬಗೆಯ ಕ್ಯಾಂಡಿಗಳು, ಐಸ್ಕ್ಯಾಂಡಿಗಳು ಬಂದಿವೆ. ಹಾಗೆಯೇ ಮನೆ-ಮನೆಗಳಿಗೆ ರೆಫ್ರಿಜಿರೇಟರ್ಗಳೂ ಬಂದಿವೆ. ಆದರೂ ಬಾಲ್ಯದಲ್ಲಿ ಸವಿದ ಐಸ್ಕ್ಯಾಂಡಿಯ  ಮಜವೇ ಬೇರೆ! ಈಗ ನೀವು ಬೆಲ್ಲ ಕ್ಯಾಂಡಿ ಸವಿದರೆ ಅದಕ್ಕೆ ಮೊದಲಿನ ರುಚಿ ನನಗಂತೂ ಸಿಗಲಿಲ್ಲ. ಅದು ಯಾವ ನೀರಿನಿಂದ, ಬೆಲ್ಲದಿಂದ ತಯಾರಿಸಿದ್ದಾದರೂ ಆಗಿನ ಐಸ್ಕ್ಯಾಂಡಿಯ ರುಚಿಯೇ ಬೇರೆ!

ನಿಮ್ಮ  ಜೀವನದಲ್ಲಿ, ಬಾಲ್ಯದಲ್ಲಿ ಸವಿದ ಐಸ್ಕ್ಯಾಂಡಿಗಳ ಸವಿಗಥೆಯಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.!