ಮೊನ್ನೆ ಶೋಭ ದೊಡ್ಡಮ್ಮ ತಮ್ಮ ಮನೆಗೆ ತಂದು ನೆಟ್ಟು ಬೆಳೆಸಿದ ಪಾರಿಜಾತದ ಗಿಡ/ಮರದ ಬಗ್ಗೆ ತಮ್ಮ ಬಾಂಧವ್ಯದ ಭಾವಗಳನ್ನು ಬಿಚ್ಚಿಟ್ಟಾಗ ನನಗೂ ನಮ್ಮ ಅಜ್ಜಿ ಮನೆಯಲ್ಲಿದ್ದ ಪಾರಿಜಾತದ ನೆನಪು ಮತ್ತೆ ಮರುಕಳಿಸಿತು. 

ಪಾರಿಜಾತ … ಅದರ ಘಮ ಅನುಭವಿಸಿದವರಿಗೇ ಗೊತ್ತು. ಅದರ ಹಸಿರ ಹಾಸಿಗೆಯ ಮೇಲೆ ಹರಡಿದ ಶುಭ್ರ ಬಿಳಿಯ ಬಣ್ಣದ ಹೂವುಗಳ ಚೆಂದ ಅಕ್ಷರಗಳಲ್ಲಿ ವಿವರಿಸಲಸಾಧ್ಯ! ಅಜ್ಜಿ ಮನೆಯಲ್ಲಿ ಮಾರ್ಗದಿಂದ ಅಂಗಳಕ್ಕೆ ಕಾಲಿಡುತ್ತಲೇ ಬಲಬದಿಗೆ ಚಿಕ್ಕಿನ ಮರದ ಬಳಿಯೇ ಇದ್ದ ಆ ಪಾರಿಜಾತದ ಮೇಲೆ ನನಗೆ ಬಲು ಪ್ರೀತಿ.

ಅಜ್ಜ-ಅಜ್ಜಿ ಹೇಳಿದಂತೆ ಕೆಳಗಡೆ ಭೂಮಿ ಮೇಲೆ ಬಿದ್ದರೂ ನೀರು ಚಿಮುಕಿಸಿ ದೇವರಿಗೆ ಅರ್ಪಿಸುವಷ್ಟು ಶ್ರೇಷ್ಠವಾದ ಹೂವೆಂದರೆ ಅದು ಬಹುಶಃ ಈ ಪಾರಿಜಾತವೊಂದೇ! ಲಕ್ಷ್ಮಿ ದೇವಿಗೆ ಪ್ರೀತಿ, ಅದು ಕೃಷ್ಣನಿಗೆ ಇಷ್ಟ, ಶಿವ-ಪಾರ್ವತಿಯರಿಗೆ ಪ್ರಿಯ .. ಹೀಗೆ ಏನೇನೋ ಕಥೆಗಳನ್ನು ಕೇಳಿದ್ದರೂ ನನಗದು ಇಷ್ಟವಾಗಿದ್ದು ಅದರ ಘಮ, ಬಣ್ಣ ಮತ್ತು ಅದನ್ನು ಪೋಣಿಸಿ ಮಾಲೆ ಮಾಡಲು ಸೂಜಿ-ದಾರ ಹಿಡಿದು ಸುರಿಯಬಹುದು ಎಂಬ ಸುಲಭದ ದಾರಿಯಿದ್ದದ್ದು ಎಂದು ಹೇಳಬಹುದು! ಬೇರೆಲ್ಲ ಹೂವುಗಳನ್ನೂ ಸರಿಯಾಗಿ ಬಾಳೆ ಬಳ್ಳಿಯಲ್ಲಿ ಕಟ್ಟಿಯೇ ಆಗಬೇಕಿತ್ತು. ಆದರೆ ಇದನ್ನು ಸೂಜಿಯಿಂದ ಪೋಣಿಸುವುದು ಅತಿ ಸುಲಭದ ಕೆಲಸವೆಂದು ನನಗೆ ಈ ಹೂವೆಂದರೆ ಪ್ರೀತಿಯಾಗಿತ್ತೇನೋ?!

ಯಾವ ಪೂಜೆಯಿದ್ದರೂ ನಾನು ಬೇಗನೆ ಈ ಹೂವಿನ ಬುಟ್ಟಿ ಇಲ್ಲವೇ ಹೂ ಮಾಲೆ ಹಿಡಿದು ಅಜ್ಜನ ಮುಂದೆ ಹಾಜರಾಗುತ್ತಿದ್ದೆ. ನನಗೆ ಬಹಳ ಭಯ-ಭಕ್ತಿಯೆಂದು ಅಜ್ಜ ಭಾವಿಸಿರಬೇಕು. ಆದರೆ ಅವರಿಗೂ ಗೊತ್ತಿದ್ದಂತೆ ನನಗಾಗ ಅತಿ ಆಸೆಯಿದ್ದದ್ದು ಮನೆಯಲ್ಲೇ ತಯಾರಿಸಿದ ಶುದ್ಧವಾದ ಜೇನುತುಪ್ಪ ಹಾಕಿ; ಪೂಜೆಗೆಂದು ಅಜ್ಜನೇ ತಯಾರು ಮಾಡುತ್ತಿದ್ದ ಪಂಚಾಮೃತದ ಮೇಲೆ. ಇದು ಗೊತ್ತಿದ್ದೇ ನಾನು, ತಂಗಿ ಇದ್ದೇವೆಂದರೆ ಅಜ್ಜಿ ಬೇಕೆಂದೇ ಸ್ವಲ್ಪ ಜಾಸ್ತಿಯೇ ಪಂಚಾಮೃತಕ್ಕೆ ಬೇಕಾದ ಸಾಮಗ್ರಿಗಳನ್ನಿಡುತ್ತಿದ್ದರು.

ಒಟ್ಟಿನಲ್ಲಿ ಈಗಲೂ ನನಗೆ ನಮ್ಮ ಮನೆಯಲೊಂದು ಪಾರಿಜಾತದ ಮರವಿರಬೇಕೆಂದೆನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ನಾನು ಅಮ್ಮನ ತಲೆ ತಿನ್ನುತ್ತಾ ಇರುವುದು ಕೆಂಪು ಮತ್ತು ಪಿಂಕ್ ಮಿಶ್ರಿತ ಬಣ್ಣದ ಪುಟ್ಟ-ಪುಟ್ಟ ಲಿಲಿ ಹೂವಿನ ಗಿಡ/ಬಳ್ಳಿ ಬೇಕೆಂದು! ಎಷ್ಟು ಹುಡುಕಿದರೂ ಎಲ್ಲೂ ಕಾಣಸಿಗುವುದಿಲ್ಲ ಆ ಹೂವಿನ ಬಳ್ಳಿಯೀಗ. ಮತ್ತೆ ಆಂತರ್ಜಾಲದಲ್ಲಿ ಹುಡುಕಿ – ಹುಡುಕಿ ಕೊನೆಗೂ ಅದರ ಚಿತ್ರ ಸಿಕ್ಕಿದೆಯೀಗ. ಅದಕ್ಕೆ ನಾವು ಲಿಲಿ ಎಂದರೂ ಕನ್ನಡದಲ್ಲಿ ಸಂಧ್ಯಾರಾಣಿ ಎಂದೂ, ಹಾಗೆಯೇ ರಂಗೂನ್ ಎಂದೂ ಹೆಸರಿದೆಯಂತಪ್ಪ. ಏನೋ ಒಂದು, ಒಟ್ಟಿನಲ್ಲಿ ಆ ಗಿಡದ ಬಳ್ಳಿ ತರಬೇಕು ಆದಷ್ಟು ಬೇಗ! 

ಈ ಹೂವಿನ ಬಳ್ಳಿಯೂ ಅಜ್ಜನ ಮನೆಯ ಮಾರ್ಗ ಮುಗಿದು ಅಂಗಳಕ್ಕಿಳಿಯುವಲ್ಲೇ ಎಡಬದಿಗೆ ಗಾಢವಾಗಿ ಹಬ್ಬಿತ್ತು. ಪಕ್ಕದಲ್ಲೇ ಸ್ವಲ್ಪ ಮೇಲೆ ದನದ ಕೊಟ್ಟಿಗೆ. ಪ್ರತಿ ಸಾಯಂಕಾಲ ಅಜ್ಜ-ಅಜ್ಜಿ ಹಟ್ಟಿಯ ಕೆಲಸಕ್ಕೆಂದು ಕೊಟ್ಟಿಗೆಗೆ ಬಂದಾಗ ೪-೫ ಗಂಟೆ ಹೊತ್ತಿಗೆಲ್ಲಾ ಕುಣಿದುಕೊಂಡು ನಾನು ಅಜ್ಜನ ಹಿಂದೆ ಹೋಗಿಬಿಡುತ್ತಿದ್ದೆ. ಕೆಲವೊಮ್ಮೆ ತಂಗಿಯೂ ಜೊತೆಯಾಗುತ್ತಿದ್ದಳು. ಅವಳಿಗೆ ಆಟದ ಯೋಚನೆಯಾದರೆ ನನಗೆ ಅಜ್ಜನ ಹಿಂದೆ ಓಡಾಡಿಕೊಂಡು ಪ್ರತಿಯೊಂದು ಕಥೆ ಕೇಳುವ ಕಾತುರ! 

ಅಜ್ಜ ಅಲ್ಲಿಯೂ ಸಹ ಅದಾಗಲೇ ನನಗೆ ಭೌತ ಶಾಸ್ತ್ರದ ಚಲನಶಕ್ತಿಯ ಪಾಠ ಮಾಡುತ್ತಿದ್ದರೆಂದು ಆಮೇಲೆ ತಿಳಿಯಿತು. ಅವರು ಕೊಟ್ಟಿಗೆ ತೊಳೆಯಲು ನೀರು ಬಿಡಲು ಅಲ್ಲಿಯೇ ಇದ್ದ ಸಣ್ಣ ಟ್ಯಾಂಕಿನ ನೀರನ್ನು ಬಳಸುತ್ತಿದ್ದರು. ಅದಕ್ಕೊಂದು ಸಣ್ಣ ಟ್ಯಾಪ್/ಗೇಟ್ ವಾಲ್ವ್ ತರ ಏನೋ ಇತ್ತು. ಇನ್ನೇನು ತೊಳೆದಗುತ್ತಾ ಬಂತೆನ್ನುವಾಗ ಅಜ್ಜ ಹೇಳುತ್ತಿದ್ದರು, “ಇನ್ನು ನೀರು ಮೆಲ್ಲಂಗೆ ನಿಧಾನಕ್ಕೆ ಬಿಡು ಕೂಸೇ. ಒತ್ತಡಕ್ಕೆ ಪೈಪ್ ಒಡೆದು ಹೋಪ ಚಾನ್ಸ್ ಇದ್ದರೂ ಸಣ್ಣಕೆ ಬಿಟ್ಟರೆ ನೀರು ಜಾಸ್ತಿ ವೇಸ್ಟ್ ಆವುತ್ತಿಲ್ಲೆ,.. ಒತ್ತಡ ಬೀಳ್ತಿಲ್ಲೆ”, ಹೀಗೆ ಇತ್ಯಾದಿ ಇತ್ಯಾದಿ ಮಾಮೂಲಿ ಎಂಬಂತೆ ಹೇಳುತ್ತಿದ್ದ ಸಣ್ಣ-ಪುಟ್ಟ ವಿಷಯಗಳೇ ಸಾಕಿತ್ತು ಕಿವಿಕೊಟ್ಟು ಕೇಳಲು ಅಲ್ಲಿ.

ಗಂಗೆ, ಗೌರಿ, ತುಂಗೆ, ಕಪಿಲೆ, ಕಾವೇರಿ ಹೀಗೆ.. ,, ಈಗ ಎಲ್ಲ ದನ-ಕರುಗಳ ಹೆಸರುಗಳು ನೆನಪಿಗೆ ಬರುತ್ತಿಲ್ಲ. ಆದರೂ ಕರು ಹುಟ್ಟಿದ ಕೂಡಲೇ ನಾನು ಮತ್ತು ತಂಗಿ ಏನಾದರೊಂದು ಹೆಸರು ಇಟ್ಟುಬಿಡುತ್ತಿದ್ದೆವು. ಅಜ್ಜ-ಅಜ್ಜಿ ಕೊಟ್ಟಿಗೆಯಲ್ಲಿ ಹಾಲು ಕರೆದು, ಹುಲ್ಲು ಹಾಕಿ, ಹಿಂಡಿ ಕೊಟ್ಟು , ಕೊಟ್ಟಿಗೆ ತೊಳೆದು ಎಂದು ಹತ್ತು-ಹಲವು ಕೆಲಸ ಮುಗಿಸಿ ಮನೆಯತ್ತ ಹೊರಡಲನುವಾದರೆ ನಾನು ಮತ್ತೆ ತಿರುಗುತ್ತಿದ್ದುದು ಈ ಲಿಲಿ ಹೂವಿನ ಬಳ್ಳಿಯೆಡೆಗೆ.

ಅದರ ಬಣ್ಣಕ್ಕೋ, ಹೂಗೊಂಚಲ ಚೆಂದಕ್ಕೋ, ಮತ್ತೊಂದಕ್ಕೋ ಗೊತ್ತಿಲ್ಲ. ಅದನ್ನು ಕೊಯ್ದುಕೊಂಡು ಅಂಗಿಯಲ್ಲಿ ಕಟ್ಟಿಕೊಂಡು ಮನೆಯಲ್ಲಿ ಹರಡಿ ಹಾಕುವುದೋ, ಇಲ್ಲ ಅಲ್ಲೇ ಗಿಡದ ಬಳಿಯೇ ಆಟವಾಡಿ ರಾಶಿ ಹಾಕಿ ಬರುವುದೋ.. ಹೀಗೆ ಏನಾದರೊಂದು ಮಾಡಿಕೊಂಡಿರುತ್ತಿದ್ದೆವು ನಾವು. ಅದಕ್ಕೇ ಇರಬೇಕು ನನಗೀ ಹೂಬಳ್ಳಿಯ ಮೇಲೆ ಅಷ್ಟೊಂದು ಅಕ್ಕರೆ. 

ಮಂಜು ಮುಸುಕಿದ ಮುಂಜಾವಿನಲಿ
ಹನಿ-ಹನಿ ಇಬ್ಬನಿ ತಬ್ಬಿದ ಇಳೆಯಲಿ
ಆಗಸದಿಂದ ನೇಸರನ ಕಿರಣಗಳೊಂದಿಗೆ
ಧರೆಗಿಳಿದ ಪಾರಿಜಾತದ ಘಮವೂ …!

ಗೂಡಿಗೆ ಮರಳುವ ಹಕ್ಕಿಗಳ ಚಿಲಿಪಿಲಿಯಲಿ
ಹಾರುವ ದುಂಬಿಗಳ ನಾದ ಝೇಂಕಾರದಲಿ
ಗಾಢ ಹಸಿರ ಸಿರಿಯ ಮೇಲೆ ಹರಡಿ ಬಿದ್ದಂತೆ
ಹೊಂಬಣ್ಣದ ಲಿಲಿ ಹೂವಿನ ಕಿಲಕಿಲ ನಗುವೂ …!

ಮುದ್ದಿನ ತಂಗಿಯೊಂದಿಗೆ ಮನದಣಿಯೆ
ಮಣ್ಣಲಿ ಆಡಿದ ಆಟಗಳೊಂದಿಗೆ
ನೆನಪಿನಾಳದಿ ಮರೆಯಾಗಿ ಕುಳಿತಿವೆ
ಅಜ್ಜನ ಮನೆಯ ಸವಿನೆನಪುಗಳು !

ಮುಂದಿನ ಬುತ್ತಿ…