ಕಂಡರಿಯದ ಕಡೂರಿನ ಮೊದಲ ಪಯಣ 

ಅದು ಬೇಸಿಗೆಯ ರಜವೋ, ಮಧ್ಯಾವಧಿಯ ರಜವೋ ಎಂದು ನನಗೆ ಸರಿಯಾಗಿ ನೆನಪಿಲ್ಲ. ಬಹುಶಃ ಅದು ಬೇಸಿಗೆ ರಜ. ಇರಲಿ ಬಿಡಿ. ಈಗ ವಿಷಯಕ್ಕೆ ಬರೋಣ. ಇದು ನಮ್ಮ ಮೊದಲ ಕಡೂರು ಪ್ರಯಾಣದ ಕಥೆ! ಮೊದಲ ಬಾರಿಗೆ ನಾವೆಲ್ಲ ಆ ಊರು ನೋಡಲು ಹೊರಟಿದ್ದೆವು. ಅದಕ್ಕೆ ಕಾರಣ ನಮ್ಮ ಅಕ್ಕನ ಮದುವೆಯಾಗಿ ಅವಳು ಮತ್ತು ಬಾವ ಸೆಟ್ಲ್ ಆಗಿದ್ದ ಊರದು!

ಹೊರಟ ಗಮ್ಮತ್ತು

ಕಂಡು ಕೇಳರಿಯದ ಊರು. ಜೊತೆಗೆ, ಮದುವೆಯಾದ ನಂತರ ಮೊದಲ ಬಾರಿಗೆ ಅಕ್ಕನೊಂದಿಗೆ ಬಾವನ ಜೊತೆಗೂ ಒಂದಿಷ್ಟು ಸಮಯ ಕಳೆಯುವ ಸದವಕಾಶ. ಹಾಗೆಯೇ ಊರು ಸುತ್ತಲು ಒಂದು ನೆಪ! ಅದಕ್ಕಿಂತ ಹೆಚ್ಚಿನ ಮಜಾ ನಾವು ೪-೫ ಜನ , ಅಪರೂಪಕ್ಕೆ ಒಟ್ಟಿಗೆ ಹೊರಟಿದ್ದು! ನಾನು, ಅಮ್ಮ, ತಂಗಿ ಜೊತೆಗೆ, ಸಣ್ಣತ್ತೆ, ದೊಡ್ಡತ್ತೆ ಮತ್ತು ದೊಡ್ಡತ್ತೆಯ ಮಗಳು! ನನಗೆ ಕಂಪನಿಗೆ ದೊಡ್ಡತ್ತೆಯ ಮಗಳಿದ್ದಳೆಂಬ ಧೈರ್ಯವಾದರೆ ತಂಗಿಗೆ ಅತ್ತೆಯರ ಸಹಕಾರವಿದೆಯೆಂಬ ಕೊಬ್ಬು, ಅಮ್ಮನಿಗೋ..ಒಂದು ಬಾರಿಯಾದರೂ ಅಕ್ಕನ ಮನೆಗೆ ಹೋಗಿ ಮಗಳು ಏನೆಲ್ಲಾ ಕಿತಾಪತಿ ಮಾಡಿದ್ದಾಳೆಂದು ನೋಡುವ ಸದವಕಾಶ ಎಂಬ ಆಸೆ!;) ಉಳಿದವರ ಮನದಲ್ಲಿ ಅದೇನು ಭಾವವಿತ್ತೋ ನನಗಂತೂ ಗೊತ್ತಿಲ್ಲ!

ಗಂಟುಮೂಟೆ ಕಟ್ಟಿಕೊಂಡು ೮:೩೦ರ ದಾವಣಗೆರೆ ಬಸ್ ಹತ್ತಲು ಉತ್ಸಾಹದಿಂದ ಮಂಗಳೂರಿನ ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದವರಿಗೆ ಹತ್ತು ಸಲ ಯಾವ ಬಸ್ ಎಲ್ಲಿಂದ ಬರುತ್ತಿದೆಯೆಂದು ಕೊರಳು ಉದ್ದ ಮಾಡಿ ನೋಡುವುದೇ ಕೆಲಸ.  ಅಂತೂ ಬಸ್ ಬಂದು, ಹತ್ತಿ ಕುಳಿತು, ಎಲ್ಲರನ್ನೂ ಹೊತ್ತ ಬಸ್ ಹೊರಟಾಗಲೇ ನೆಮ್ಮದಿಯ ನಿಟ್ಟುಸಿರು. ನಿಧಾನಕೆ ಹೊರಟ ಬಸ್ಉಜಿರೆ ತಲುಪಿದಾಗಲೇ ನನಗಂತೂ ಮುಂದೆ ಘಾಟಿ ಹತ್ತಬೇಕೆಂಬ ವಿಷಯ ನೆನೆದೇ ಹೊಟ್ಟೆಯೆಲ್ಲ ತೊಳಸಿದಂತಾಗಿತ್ತು. ೮:೩೦ಕ್ಕೆ ಹೊರಟರೆ ೧:೩೦ಕ್ಕೆಲ್ಲ ಕಡೂರಿನಲ್ಲಿರುತ್ತೀರೆಂದು ಬಾವ ಹೇಳಿದ್ದರಿಂದ ಎಲ್ಲೂ ಏನೂ ತಿನ್ನದೇ, ಬೆಳಗಿನ ತಿಂಡಿಯೊಂದು ಬಿಟ್ಟರೆ ಮತ್ತೇನೂ ಇಲ್ಲದೆ ಕುಕ್ಕರಿಸಿ ಕುಳಿತಿದ್ದೆವು ನಾವೆಲ್ಲ, ಕಿಟಕಿಯ ಹೊರಗಿನ ಸೊಬಗನ್ನು ಸವಿಯುತ್ತ.

ಚಾರ್ಮಾಡಿ ಘಾಟಿ

ಚಾರ್ಮಾಡಿ ಘಾಟಿಯ ಸೊಬಗನ್ನು ಸವಿಯುದೇ ಒಂದು ಚೆಂದ. ಆಗೆಲ್ಲ ಮೊಬೈಲ್, ಜಿಪಿಎಸ್, ಕ್ಯಾಮೆರಾ ಎಂದೆಲ್ಲ ಇರದಿದ್ದ ಕಾರಣ ನಾವು ಆ ಸೊಬಗನ್ನು, ಪ್ರಯಾಣದ ಸವಿಯನ್ನು ಮನಸಾರೆ ಆನಂದಿಸುತ್ತಿದ್ದೆವು, ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೆವು!

Charmadi Ghat

ಮಧ್ಯೆ ಮಧ್ಯೆ ನಾವು ಕಂಡು ಕೇಳರಿಯದ ಕೆಲವು ಊರುಗಳು ಬಂದು ಹೋಗುತ್ತಿದ್ದರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಚಿಕ್ಕಮಗಳೂರು ಕಳೆದ ನಂತರ ಮಾತ್ರ ನಮ್ಮೆಲ್ಲರ ತಲೆ ಹಾಳಾಗಲು ಶುರುವಿಟ್ಟುಕೊಂಡಿತು. ಒಂದೆಡೆ ನಾವು ಸರಿಯಾದ ಬಸ್ ಹತ್ತಿದ್ದೇವೋ ಇಲ್ಲವೋ ಎಂದು ಗಾಬರಿ. ಇನ್ನೊಂದು ಕಡೆ ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಎಲ್ಲಿಗೆ ತಲುಪಿದೆವೋ, ಇನ್ನೆಷ್ಟು ದೂರವಿದೆಯೋ ಎಂದು ಆತಂಕ. ಜೊತೆಗೆ ಕಂಡಕ್ಟರ್, ಡ್ರೈವರ್ ಇಬ್ಬರೂ ಬೇರೆ ಊರಿನವರಾದ ಕಾರಣ ನಮಗೆ ಅಷ್ಟಾಗಿ ಅವರ ಮಾತಿನ ರಭಸ, ಭಾಷೆಯ ಕೆಲವು ಶಬ್ದಗಳು ಇತ್ಯಾದಿ ಅರ್ಥವಾಗದೇ ಕಣ್ಣು ಪಿಳಿಪಿಳಿ ಬಿಡುತ್ತ, ಒಂದು ಬಾರಿ ತಲುಪಿದರೆ ಸಾಕೆಂದು ಕುಳಿತಿದ್ದೆವು. ಸಮಯ ೨ ದಾಟಿತ್ತು. ತದೇಕಚಿತ್ತದಿಂದ ಎಷ್ಟೇ ಸಣ್ಣ ಊರು ಬಂದರೂ, ನಾವೆಲ್ಲರೂ ಕಣ್ಣಗಲಿಸಿ ಊರಿನ ಅಂಗಡಿಗಳಲ್ಲಿದ್ದ ಬೋರ್ಡ್ ಓದಿ ಎಲ್ಲಿಗೆ ತಲುಪಿದೆವೆಂದು ಕಿಟಕಿಯಾಚೆಗೆ ದೃಷ್ಟಿ ಹರಿಸಿದ್ದೆವು!

 ಕಡೂರಿನ ನೀರು

ಅಂತೂ ಇಂತೂ ೨:೩೦ಕ್ಕೆಲ್ಲ ಕಡೂರು ಬಸ್ ಸ್ಟಾಂಡ್ ತಲುಪಿದಾಗ ಇಳಿದುಕೊಂಡು, ಬಾವನನ್ನು ಕಂಡಾಗಲೇ ನಮ್ಮೆಲ್ಲರ ಮನದಲ್ಲಿ ನೆಮ್ಮದಿಯ ನಿಟ್ಟುಸಿರು! ಅದುವರೆಗೂ ಹೇಳಿಕೊಳ್ಳದಿದ್ದರೂ, ಪ್ರತಿಯೊಬ್ಬರೂ ಒಂದು ರೀತಿಯ ಆತಂಕದಲ್ಲೇ ಇದ್ದೆವು. ಖುಷಿಯಿಂದ ಬಾವನೊಂದಿಗೆ ಮನೆಗೆ ಹೊರಟು ನಿಂತವರನ್ನು, ಮನೆಯಲ್ಲಿ ಅಕ್ಕನೊಂದಿಗೆ ಸ್ವಾಗತಿಸಿದ್ದು ನೀರು! ಆ ನೀರು ಬಾಯಿಗಿಟ್ಟವರೇ, ನಮ್ಮೆಲ್ಲರ ಮುಖ ಚಿರುಟಿಹೋಯಿತು! ಅದು ಕಡೂರಿನ ಗಡಸು ನೀರು. ನಮ್ಮಲ್ಲಿ ಕೆಲವರಿಗೆ ಬೋರಿನ ನೀರು ಕುಡಿದು ಅಭ್ಯಾಸವಿದ್ದರೂ, ಇಷ್ಟೊಂದು ಗಡಸು ನೀರಿನ ಸವಿ ಸವಿದದ್ದು ಇದೇ ಮೊದಲು! ಮುಖ ಬಿಳುಚಿಕೊಂಡರೂ ತೋರಿಸಿಕೊಳ್ಳದೇ ನಸುನಕ್ಕು, ಊಟಕ್ಕಡಿಯಿಟ್ಟೆವು!

ಮುಂದುವರೆಯುವುದು

ಹಿಂದಿನ ಬುತ್ತಿ

Leave a Reply

Your email address will not be published.

Time limit is exhausted. Please reload CAPTCHA.