“Teaching kids to count is fine, but teaching them what counts is best”.
– Bob Talbert
ನನಗೆ ಮೊದಲಿಂದಲೂ ಬೋಧನಾ ಕಾರ್ಯ ಒಂದು ರೀತಿಯಲ್ಲಿ ಉತ್ಸಾಹದಾಯಕ ಕಾರ್ಯ. ನನಗೆ ತಿಳಿದ ವಿಷಯವನ್ನು ಪ್ರತಿ ಬಾರಿಯೂ ವಿಭಿನ್ನವಾಗಿ, ಸರಿಯಾಗಿ ಅರ್ಥವಾಗುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿ, ಅವರಿಗೆ ಅದರಿಂದ ಒಂದಿನಿತಾದರೂ ಪ್ರಯೋಜನವಾದರೆ ಒಂದು ರೀತಿಯ ಸಾರ್ಥಕ ಭಾವ. ಹಾಗಾಗಿ ಮೊದಲಿಂದಲೂ ನಾನು ಕಲಿತ ಶಾಲೆಗಳಲ್ಲಾಗಲಿ, ಕೆಲಸ ಮಾಡುತ್ತಿರುವ ಸಂಸ್ಥೆಗಳಾಗಲಿ ಅಥವಾ ಕಾಲೇಜು ಅಥವಾ ಯಾವುದಾದರೂ ಶಿಕ್ಷಣ ಸಂಸ್ಥೆಗಳಲ್ಲಾಗಲಿ, ಟ್ರೈನಿಂಗ್ ಕೊಡಲು, ಅಥವಾ ಯಾವುದೇ ವಿಷಯದ ಮೇಲೆ (ನನ್ನ ಪರಿಣತಿಯ ಕ್ಷೇತ್ರದ ವ್ಯಾಪ್ತಿಯೊಳಗೆ ಬರುವಂತದ್ದು) ಬೋಧಿಸಲು ಕೇಳಿಕೊಂಡಾಗಲೆಲ್ಲ ಖುಷಿಯಿಂದಲೇ ಮುಂದಾಗುತ್ತೇನೆ.
ಇಂದಿನ ವಿದ್ಯಾರ್ಥಿಗಳೇ ಈ ದೇಶದ ಮುಂದಿನ ಭವಿಷ್ಯ
“ಇಂದಿನ ವಿದ್ಯಾರ್ಥಿಗಳೇ ಈ ದೇಶದ ಮುಂದಿನ ಭವಿಷ್ಯ” ಎನ್ನುವುದು ನಾವು ಮೊದಲಿಂದಲೂ ಕೇಳುತ್ತ ಬಂದಿರುವ ಮಾತು. ಹಾಗೆಯೇ ಅದು ನಿಜವೂ ಕೂಡ. ಇಂದು ಓದುತ್ತಿರುವ ಮಕ್ಕಳೇ ಮುಂದೊಂದು ದಿನ ಈ ದೇಶವನ್ನು ಮುನ್ನಡೆಸುವ ನಾಯಕರು. ಆದರೆ, ನಿಜವಾಗಿಯೂ ಅಂತಹ ಒಂದು ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು, ಸಮರ್ಥವಾಗಿ ನಿಭಾಯಿಸಲು ಸಶಕ್ತ ವಿದ್ಯಾರ್ಥಿ ಸಮೂಹ ಅಥವಾ ನಾಯಕನ ಗುಣ ಹೊಂದಿರುವ ವಿದ್ಯಾರ್ಥಿಗಳ ತಂಡ ನಿರ್ಮಾಣವಾಗುತ್ತಿದೆಯೇ ನಮ್ಮಲ್ಲಿ? ಅದಕ್ಕೆ ಬೇಕಾದ ಶಿಕ್ಷಣ ವ್ಯವಸ್ಥೆ, ಪೂರಕ ವಾತಾವರಣ ಇದೆಯೇ? ಎಲ್ಲವೂ ಇದ್ದರೂ ಅದನ್ನು ಸದುಪಯೋಗಿಸುವ ಎಷ್ಟು ಜನ ವಿದ್ಯಾರ್ಥಿಗಳು ಇಲ್ಲಿದ್ದಾರೆ?
ಈ ಎಲ್ಲ ಪ್ರಶ್ನೆಗಳು ಕಾಡಲು ಕಾರಣ ಮೊನ್ನೆ-ಮೊನ್ನೆ ವಿದ್ಯಾರ್ಥಿಗಳೊಂದಿಗೆ ಕಳೆಯಲು ಸಿಕ್ಕ ಅವಕಾಶ ಮತ್ತು ಜೀವನದ ಬಗ್ಗೆ ಅಥವಾ ಭವಿಷ್ಯದ ಬಗ್ಗೆ ಅವರಿಗಿರುವ ಕಲ್ಪನೆ ಮತ್ತು ಅವರ ಇಂದಿನ ಜೀವನ ಶೈಲಿ! ವಿದ್ಯಾರ್ಥಿಗಳೊಂದಿಗಿನ ಒಡನಾಟ ಪ್ರತಿ ಬಾರಿಯೂ ಒಂದು ವಿಶೇಷವಾದ ಅನುಭವ. ಈ ಬಾರಿಯೂ ಎಂದಿನಂತೆ ಉತ್ಸಾಹದಿಂದ ತಯಾರಾಗಿದ್ದವಳಿಗೆ ಹಿತೈಷಿಯೊಬ್ಬರು ಸೂಕ್ಷ್ಮವಾಗಿ ವಿದ್ಯಾರ್ಥಿಗಳ ಮನಃಸ್ಥಿತಿ ಮತ್ತು ವಾತಾವರಣದ ಸುಳಿವು ಕೊಟ್ಟಿದ್ದರು. ಅದು ನನಗೆ ನನ್ನ ನಿರೀಕ್ಷೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ಬೋಧನಾ ಶೈಲಿಯಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ತಯಾರಾಗಲು ಸಹಕಾರಿಯಾಯಿತೆಂದೇ ಹೇಳಬಹುದು.
ಥಳುಕು ಬಳುಕಿನ ಸಾಮಾಜಿಕ ಜಾಲತಾಣ
ಈ ಎಲ್ಲದಕ್ಕೂ ಒಂದು ಮುಖ್ಯ ಕಾರಣ ನನಗನಿಸಿದ್ದೆಂದರೆ ಇಂದಿನ ಥಳುಕು ಬಳುಕಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅರೆ ಬೆಂದ ಸುದ್ದಿಗಳು ಮತ್ತು ಜೀವನ ಶೈಲಿಯ ಪ್ರಸ್ತುತಿ. ಅದು ಈ ಮುಗ್ಧ ಮಕ್ಕಳ ಮೇಲೆ ಎಷ್ಟು ಗಾಢವಾದ ಪರಿಣಾಮ ಬೀರುತ್ತದೆ ಎಂದು ಬಹುಶಃ ನಮ್ಮ ಸ್ವಾರ್ಥಿ ರಾಜಕೀಯ ನಾಯಕರುಗಳು ಮತ್ತು ಅದರೊಂದಿಗೆ ತಮ್ಮ ಬೇಳೆ ಬೇಯಿಸಿಕೊಂಡು ಜೀವನ ರೂಪಿಸಿಕೊಳ್ಳುವ ಒಂದಿಷ್ಟು ಪುಢಾರಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಬಿಡಿ. ಇವೆಲ್ಲದರ ಅರಿವಿಲ್ಲದೇ ಅದೇ ಸತ್ಯವೆಂದು ನಂಬಿ, ಅದರಲ್ಲಿ ಮುಳುಗೆದ್ದು ತಮ್ಮ ಜೀವನಕ್ಕೆ ಯಾವುದು ಅಗತ್ಯ, ಯಾವುದು ಅನಗತ್ಯ ಎಂದು ನಿರ್ಧರಿಸಲು ತೊಳಲಾಡುವ ವಿದ್ಯಾರ್ಥಿಗಳ ಪಾಡು ಆ ದೇವರಿಗೇ ಪ್ರೀತಿ.
ನೀವು ವಿದ್ಯಾರ್ಥಿಗಳ ಬಳಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಹಾನ್ ನಾಯಕರುಗಳ (ಉದಾ: ರತನ್ ಟಾಟಾ, ಸುಧಾ ಮೂರ್ತಿ) ಬಗ್ಗೆಯಾಗಲಿ, ಅವರ ಪುಸ್ತಕಗಳ ಬಗ್ಗೆ, ಸಾಧನೆಯ ಬಗ್ಗೆ, ದೇಶೀ ನಿರ್ಮಿತ ವಸ್ತುಗಳ ಬಗ್ಗೆಯಾಗಲೀ, ಇನ್ನೇನೋ ಒಂದು ಕೇಳಿ ನೋಡಿ. ಅವರಿಗೆ ಅದರ ಅರಿವು ತುಂಬಾ ಕಡಿಮೆ. ಕೆಲವರಿಗಂತೂ ಇಲ್ಲವೇ ಇಲ್ಲ ಎಂದೇ ಹೇಳಬಹುದು. ಅದೇ ಕನ್ನಡ ಹೋರಾಟದ ಬಗೆಗಿನ ಗಲಾಟೆ, ಸಿನೆಮಾದ ಗಲಾಟೆ, ಬೆಂಗಳೂರು/ಮಂಗಳೂರು ಗಲಭೆಯ ಬಗ್ಗೆ ಕೇಳಿ ನೋಡಿ, ಕಣ್ಣಿಗೆ ಕಟ್ಟಿದಂತೆ ವಿವರಿಸಲು ತಯಾರಿರುತ್ತಾರೆ.
ಅತಿಯಾದ ಆತ್ಮವಿಶ್ವಾಸ
ಇವರೆಲ್ಲಿ ಬಹುತೇಕರು ಎಲ್ಲವೂ ತಮಗೆ ಗೊತ್ತಿದೆ, ತಾವಿನ್ನು ನೌಕರಿ ಮಾಡಿ ಅಥವಾ ತಮ್ಮದೇ ಕಂಪನಿ ತೆರೆದು ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ತಯಾರಾಗಿದ್ದೇವೆ ಎಂಬ ಭಾವ ಹೊತ್ತವರೇ. ಆತ್ಮವಿಶ್ವಾಸ ಒಳ್ಳೆಯದೇ, ಆದರೆ ಅತಿಯಾದರೆ ಅಮೃತವೂ ವಿಷವೆನ್ನುತ್ತಾರಲ್ಲ? ಅದೇ ಅವರ ಬಳಿ ಪ್ರಾಕ್ಟಿಕಲಾಗಿ ಒಂದು ಕಾರ್ಯ ಮಾಡಿಸಿ ನೋಡಿ, ನಿಜದ ಅರಿವಾಗುತ್ತದೆ. ಅದೇನೋ ಹೇಳುತ್ತಾರಲ್ಲ?, ಹೇಳುವುದು ಸುಲಭ, ಮಾಡುವುದು ಕಷ್ಟ. ಹೊರಗಿಂದ ಥಿಯರಿ ಮಾತನಾಡಲು, ನ್ಯೂಸ್ ಚಾನೆಲಿನಲ್ಲಿ ಬೊಬ್ಬಿರಿಯಲು, ಫೇಸ್ಬುಕ್ಕಿನಲ್ಲಿ ಗೀಚುವುದು ಎಲ್ಲವೂ ತುಂಬಾ ಸುಲಭ. ಆದರೆ, ಸಿಸ್ಟಮ್ ಒಳಹೊಕ್ಕು ಅದನ್ನು ಅನುಭವಿಸಿ, ತಮ್ಮ ಬುದ್ಧಿಮತ್ತೆಯನ್ನು ಒರೆ ಹಚ್ಚಿ ಸಮಸ್ಯೆಗಳನ್ನು ಎದುರಿಸಿ, ಪರಿಹರಿಸುವುದು ನಾವಂದುಕೊಂಡಷ್ಟು ಸುಲಭವಲ್ಲ ಎಂಬುದು ನಮಗೇ ಅರಿವಿಲ್ಲದಾಗ, ಈ ವಿದ್ಯಾರ್ಥಿಗಳಿಂದ ಹೇಗೆ ನಿರೀಕ್ಷಿಸಬಹುದು? ಇದೆಲ್ಲ ಈ ಸಾಮಾಜಿಕ ಜಾಲತಾಣಗಳ ಮಾಯಾಜಾಲವಲ್ಲದೇ ಇನ್ನೇನು?
ಅಭಿವ್ಯಕ್ತಿ ಸ್ವಾತಂತ್ರ್ಯ
ಹಾಗಂತ ಗಲಾಟೆಗಳ ಅರಿವಿರುವುದು ತಪ್ಪು ಎಂದರ್ಥವ? ಅಲ್ಲ. ಆದರೆ, ಯಾವುದನ್ನು ಎಷ್ಟರಮಟ್ಟಿಗೆ ತಿಳಿದುಕೊಳಬೇಕು ಮತ್ತು ತಮ್ಮ ಜೀವನಕ್ಕೆ ಏನು ಬೇಕು, ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಸಕಾಲಕ್ಕೆ ನಿರ್ಧರಿಸುವ ಗುಣ ತುಂಬಾ ಮುಖ್ಯ. ಈ ಫಾಸ್ಟ್ ಯುಗದಲ್ಲಿ ಎಲ್ಲವೂ ಬಹುವೇಗ ಪಡೆದುಕೊಂಡು ನಮ್ಮ ಯೋಚನಾಶಕ್ತಿಯನ್ನೇ ಕಸಿದುಕೊಂಡಿದೆ ಎನ್ನಬಹುದೇನೋ? ಯಾವುದೋ ವಿಚಾರದ ಬಗ್ಗೆ ಮೊಬೈಲಿನಲ್ಲಿ ಹರಿದಾಡಿದ ಸಣ್ಣ ವಿಡಿಯೋ ತುಣುಕೊಂದನ್ನು ನೋಡಿದ್ದೇ ತಡ, ನಮ್ಮದೇ ಕಲ್ಪನೆಯಲ್ಲಿ ನಮ್ಮ ಅಭಿಪ್ರಾಯ ತಿಳಿಸಲು ಶುರು ಮಾಡಿಬಿಡುತ್ತೇವೆ. ಅದರ ಸತ್ಯಾಸತ್ಯತೆ, ಹಿಂದು-ಮುಂದು ಯೋಚಿಸಲು ಹೋಗುವುದಿಲ್ಲ. “ಫ್ರೀಡಂ ಆಫ್ ಎಕ್ಸ್ಪ್ರೆಶನ್” ಹೆಸರಿನಲ್ಲಿ ಎಲ್ಲರೂ ತಮ್ಮಷ್ಟು ಬುದ್ಧಿವಂತರು ಯಾರೂ ಇಲ್ಲ, ತಾವು ಮತ್ತು ತಮ್ಮ ಮುಂದಾಳು/ಹಿಂದಾಳುಗಳು ಹೇಳಿದ್ದೇ ಸರಿಯೆಂದು ವಾದಿಸುತ್ತಾ ಸತ್ಯವನ್ನು ಸುಳ್ಳು, ಸುಳ್ಳನ್ನು ಸತ್ಯ ಎಂದು ಕ್ಷಣ ಮಾತ್ರದಲ್ಲಿ ನಿರ್ಧರಿಸಿಬಿಡುತ್ತೇವೆ. ಇನ್ನು ಮುಗ್ಧ ಮನಸ್ಸಿನ ವಿದ್ಯಾರ್ಥಿಗಳ ಪಾಡೇನು ಹೇಳಿ.
ವಿಸ್ತೃತ ಭಾಗ :
ಇದನ್ನೇ ಪಾಶ್ಚ್ಯಾತ್ಯರು ಮತ್ತು ವಸಾಹತುಶಾಹಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಲಿಷ್ಠ ಭಾರತವನ್ನು ಮತ್ತೆ ಮೂಲೆಗುಂಪು ಮಾಡಲು ಶತಪ್ರಯತ್ನ ಮಾಡುತ್ತಿರುವುದು ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಇನ್ನು ಆ ವಿದ್ಯಾರ್ಥಿಗಳಿಗೆ ಎಲ್ಲಿಂದ ಅರಿವಾದೀತು? ಭಾರತದಲ್ಲಿರುವಷ್ಟು ಸಂಪನ್ಮೂಲಗಳು ಮತ್ತು ಮಾನವ ಶಕ್ತಿ ಕೆಲವೊಂದು ದೇಶದಲ್ಲಿ ಇದೆ ಬಿಟ್ಟರೆ, ಬೇರೆಲ್ಲರಿಗೂ ನಮ್ಮ ಸಂಪನ್ಮೂಲಗಳ ಮೇಲೆಯೇ ಕಣ್ಣು. ಆದರೆ ನಾವು ಮತ್ತೆ ಚರಿತ್ರೆಯಿಂದ ಪಾಠ ಕಲಿಯದೇ ಸ್ಥಳೀಯ ಗಲಾಟೆಯಲ್ಲೇ ಕಳೆದುಹೋಗುತ್ತಿದ್ದೇವೆ. ವಿಶ್ವೇಶ್ವರಯ್ಯನವರು ಬರಿ ಮೈಸೂರು ರಾಜ್ಯದ ಸ್ವಾರ್ಥಕ್ಕಾಗಿ ಕನ್ನಂಬಾಡಿ ಕಟ್ಟಲಿಲ್ಲ. ಸ್ಥಳೀಯವಾಗಿ ಇರುವ ಸಂಪನ್ಮೂಲವನ್ನು ಇಲ್ಲಿಗೆ ಸದುಪಯೋಗಿಸಿದರೆ, ದೇಶಕ್ಕೆ ತಮ್ಮಿಂದ ಅಷ್ಟಾದರೂ ಸೇವೆ ಸಲ್ಲಿಸಿದಂತಾಗುತ್ತದೆ ಎಂಬುದು ಅವರ ದೂರದೃಷ್ಟಿಯಾಗಿತ್ತು. ಇಂದು ನಮಗೆ ಇಂತಹ ವಿಶಾಲ ಮನೋಭಾವದ ಸ್ಥಳೀಯ ನಾಯಕರ ಕೊರತೆ ಬಹುವಾಗಿ ಕಾಡುತ್ತಿದೆ.
ವಿವಿಧತೆಯಲ್ಲಿ ಏಕತೆ
ದಕ್ಷಿಣ ಭಾರತದ ರಾಜ್ಯಗಳೆಲ್ಲ ನಮ್ಮದು ಒಂದು ಸ್ವತಂತ್ರ ದೇಶ, ಭಾರತಕ್ಕೆ ಏನಾದರೆ ನಂಗೇನು? ಡೆಲ್ಲಿಯಲ್ಲಿರುವ ಆಡಳಿತ ನಮಗೆ ಬೇಡ ಎಂದು ಯೋಚಿಸುವ ಮೊದಲು, ಪ್ರತ್ಯೇಕ ದೇಶವಾದರೆ ನಮ್ಮಲ್ಲಿ ಎಲ್ಲಾ ರೀತಿಯ ಸಂಪನ್ಮೂಲ, ಸಂಪತ್ತು ಇದೆಯಾ? ಎಂದು ಯೋಚಿಸಿದ್ದಾರೆಯೇ? ಎಲ್ಲವನ್ನೂ ಮುದದಿಂದ ಮತ್ತೆ ಶುರು ಮಾಡಲು ಆಗುವ ವೆಚ್ಚವೆಷ್ಟು ಎಂಬುದಾದರೂ ಇವರಿಗೆ ಅಂದಾಜಿದೆಯೇ? ಇದೇ ನಾವು ಇಷ್ಟೊಂದು ಬಲಿಷ್ಠವಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೆ, ವೀರ ನಾಯಕರುಗಳಿಗೆ ಸಲ್ಲಿಸುತ್ತಿರುವ ಗೌರವವೇ? ಎಂದು ಒಂದು ಕ್ಷಣ ಯೋಚಿಸಿದರೂ ಸಾಕು, ಉತ್ತರ ಸಿಗುತ್ತದೆ. ಹಾಗಂತ ಬರಿ ಡೆಲ್ಲಿಯನ್ನು ನಂಬಿ ಜೀವನ ಸಾಗಿಸಬೇಕೇ? ಇಲ್ಲ, ಸ್ಥಳೀಯ ನಾಯಕತ್ವದ ಅಗತ್ಯ ಖಂಡಿತ ಇದೆ. ಸ್ಥಳೀಯತೆಯನ್ನು ಕಾಯ್ದುಕೊಂಡು, ಇಲ್ಲಿನ ಭಾಷೆ, ನೆಲ-ಜಲಕ್ಕೆ ಗೌರವ ಕೊಡಲೇ ಬೇಕು. ಅದಕ್ಕೆ ಕುತ್ತು ಬಂದಲ್ಲಿ ಹೋರಾಡಲೇ ಬೇಕು. ಆದರೆ ಅದು ಪ್ರತ್ಯೇಕತೆಯ ಕೂಗಾಗಬಾರದು, ಏಕತೆಯ ಕೂಗಾಗಿರಬೇಕು ಅಷ್ಟೇ.
“Teaching is the greatest act of optimism.” – Colleen Wilcox
ಇವೆಲ್ಲದರ ಮಧ್ಯೆ, “ಶಿಕ್ಷಕ ವೃತ್ತಿ ಒಂದು ಆಶಾದಾಯಕ ಕಾರ್ಯ” – ಎಂಬ ಮಾತಿನಂತೆ ಇನ್ನೂ ಸಹ ಸಹಸ್ರಾರು ಶಿಕ್ಷಕ-ಶಿಕ್ಷಕಿಯರು ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವತ್ತ ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ ಎಂಬುದೇ ಸಮಾಧಾನಕರ ಸಂಗತಿ. ಹಾಗೆಯೇ ಇವೆಲ್ಲದರ ಸದುಪಯೋಗಕ್ಕೆ ಮುಂದಾಗಿರುವ ಬೆರೆಳೆಣಿಕೆಯ ಕೆಲವೊಂದಿಷ್ಟು ವಿದ್ಯಾರ್ಥಿಗಳು ಕೂಡ ಈ ದೇಶವು ಮುನ್ನಡೆಯಲು ಇರುವ ಭರವಸೆಯ ಬೆಳಕು. ದೇಶ ಮುಂದುವರೆದಾಗ ಮಾತ್ರ ಗಾಂಧೀಜಿಯವರ, “‘ಪ್ರಜಾಪ್ರಭುತ್ವ ಎಂಬುದು ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಬೇಕು” ಎಂಬ ಮಾತಿಗೆ ಒಂದು ಬೆಲೆ.
Image Credits: https://www.dreamstime.com/group-diverse-young-students-standing-together-classroom-image156212396
