“ಈಗ ಹೇಳು, ಏನು ವಿಷಯಾಂತ? ಐಸ್ ಕ್ರೀಮ್ ತಿಂದದ್ದಾಯಿತಲ್ಲ?”, ಕೇಳಿದರು ಸುಮಂಗಲ.

“ಏನಿಲ್ಲ, ನಮ್ಮ ಆಫೀಸಿನಲ್ಲಿ ಡ್ರೆಸ್ ಕೋಡ್ ಡಿಸೈನ್ ಮಾಡಲು ಅವಕಾಶ ಸಿಕ್ಕಿತ್ತು. ನಾನು ಮಾಡಿದ್ದು ಆಯ್ಕೆಯಾಯಿತು ಕೊನೆಗೂ. ವೋಟಿಂಗ್ ಎಲ್ಲ ನಡೀತು. ಆದರೆ ನಿಜವಾಗಲೂ ಎಲ್ಲರಿಗೂ ನನ್ನ ಡಿಸೈನ್ ಈ ಮಾಡೆರ್ನ್ ಕಾಲದಲ್ಲಿ ಇಷ್ಟ ಆಗಿದ್ದು ಆಶ್ಚರ್ಯದ ಜೊತೆ, ಖುಷಿಯೂ ಆಯಿತು. ಅದಕ್ಕೆ ಐಸ್ ಕ್ರೀಮ್ ತಂದೆ. ಬೆಳಗ್ಗೆ ಹೊರಡುವಾಗ ಯಾವುದು ಆಯ್ಕೆಯಾಗಿರುತ್ತದೆ ಎಂದು ಸ್ವಲ್ಪ ತಳಮಳದಲ್ಲಿದ್ದೆ. ಪೂರ್ತಿ ಪ್ಯಾಂಟ್ ಶರ್ಟ್ ಅಥವಾ ಇನ್ಯಾವುದೋ ವಿಚಿತ್ರ ಡ್ರೆಸ್ ಹಾಕ್ಕೊಂಡು ಹೋಗಬೇಕಾದ ಸಂದರ್ಭ ಬಂದರೆ ಎಂದು ಕಿರಿಕಿರಿಯಿತ್ತಷ್ಟೆ”, ಎಂದಳು.

“ಅದೆಂತ ಹಳೆ ಡಿಸೈನ್ ಮಾಡಿದೆ?”.

“ಏನಿಲ್ಲ, ಸಿಂಪಲ್. ನೀಲಿ ಬಣ್ಣದ ಖಾದಿ ಸೀರೆ, ಅದಕ್ಕೆ ನಮ್ಮ ಹಳೆಕಾಲದ ಸೂಡಿ ಹೇರ್ ಸ್ಟೈಲ್, ಸಿಂಪಲ್ ಬ್ರೌನ್ ಕಲರ್ ಫ್ಲಾಟ್ ಚಪ್ಪಲ್. ಹುಡುಗರಿಗೆ ಸಿಂಪಲ್ ಬ್ಲೂ ಕಲರ್ ಖಾದಿ ಕ್ಯಾಶುಯಲ್ ಶರ್ಟ್, ಕಾಟನ್ ಜೀನ್ಸ್. ಫ್ಲಾಟ್ ಬ್ಲೂ ಫ್ಲೋಟರ್ಸ್ ಟೈಪ್ ಚಪ್ಪಲ್. ಅಷ್ಟೇ”.

“ಓಹ್ ಅದಾ? ಚೆನ್ನಾಗಿದೆಯಲ್ಲ? ಏನು ಪ್ರಾಬ್ಲಮ್? ನಮ್ಮ ಮಂಗಳೂರಿನ ಸೆಖೆಗೆ ಹಾಗೂ ಜೋರಾದ ಮಳೆಗಾಲಕ್ಕೆ ಇದು ಹೇಳಿ ಮಾಡಿಸಿದಂತಿದೆ. ಅದಕ್ಕೇ ಎಲ್ಲರೂ ಇದನ್ನೇ ಆಯ್ಕೆ ಮಾಡಿದ್ದು ಅಷ್ಟೇ. ನಿಂದೊಳ್ಳೆ ಕಥೆಯಾಯ್ತಲ್ಲ?”

“ಹೂಂ, ಏನೋ ಒಂದು. ಒಟ್ಟಿನಲ್ಲಿ ಮುಂದಿನ ತಿಂಗಳಿಂದ ಸುಲಭ ನನ್ನ ಡ್ರೆಸ್ ಸ್ಟೈಲ್. ನಾನು ಸ್ವಲ್ಪ ಗೀತಾ ಮನೆಗೆ ಹೋಗಿ ಬರುತ್ತೇನೆ” ಎಂದು ಹೊರಟಳು ಸಾರಿಕಾ.

“ಇವಳ ಕಥೆ ಕೇಳಿದರೆ ನನ್ನ ಕೆಲಸ ಬಾಕಿ”, ಎಂದುಕೊಳ್ಳುತ್ತಾ ಸುಮಂಗಲ ರಾತ್ರಿಯ ಅಡುಗೆ ತಯಾರಿಯಲ್ಲಿ ತೊಡಗಿದರು.

*****

ಇದಾಗಿ ೨-೩ ತಿಂಗಳುಗಳೇ ಕಳೆದಿತ್ತು. ಎಲ್ಲವೂ ಮಾಮೂಲಿಯಂತೆ ನಡೆಯುತ್ತಿತ್ತು. ಅವರವರ ಕೆಲಸ – ಕಾರ್ಯಗಳಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವಿದ್ದರು. ಅದೊಂದು ಶನಿವಾರ ಸುಜನ್ ಮನೆಗೆ ಬಂದವರೇ ಹೇಳಿದರು, “ನಮ್ಮ ಸಾರಿಕಾಗೆ ಒಂದು ಜಾತಕ ಕೂಡಿ ಬರುತ್ತಿದೆ. ಹುಡುಗನ ಕಡೆಯವರು ನಾಳೆಯೇ ಬಂದು ಹುಡುಗಿ ನೋಡುವ ಶಾಸ್ತ್ರ ಮುಗಿಸಲು ರೆಡಿ ಇದ್ದಾರೆ. ನಿನ್ನ ಮಗಳ ಬಳಿ ಮಾತನಾಡಿ ನೋಡು”, ಎಂದು ಮೊಬೈಲಿನಲ್ಲಿ ಹುಡುಗನ ಫೋಟೋ ತೋರಿಸಿ, ಹಿನ್ನೆಲೆ, ಕುಟುಂಬ ಇತ್ಯಾದಿಗಳ ಬಗ್ಗೆ ಸ್ವಲ್ಪ ವಿವರ ಹೇಳಿದರು.

“ಸರಿ. ಸಂಜೆ ಅವಳು ಮನೆಗೆ ಬಂದಾಗ ಮಾತನಾಡಿ ನೋಡುತ್ತೇನೆ. ಅವಳು ಮದುವೆಯಾಗಲು ಒಪ್ಪಿದ್ದೇ ಹೆಚ್ಚು. ಅವಳ ಮನಸ್ಸು ಬದಲಾಗುವ ಮುನ್ನ, ಆದಷ್ಟು ಬೇಗ ಮದುವೆ ಮಾಡಿಸಿಬಿಟ್ಟರೆ ರಗಳೆ ಇಲ್ಲ. ಒಳ್ಳೆದಾಯ್ತು ನೀವು ಹೇಳಿದ್ದು”, ಎಂದರು ಸುಮಂಗಲ.

*****

ಸಾರಿಕಾ ತನ್ನ ಕೆಲಸ ಮುಗಿಸಿ ಇನ್ನೇನು ಮನೆಗೆ ಹೋಗಬೇಕೆಂದುಕೊಂಡಾಗ ರಜತ್ ಡೆಸ್ಕ್ ಬಳಿ ಬಂದನು ರಂಜನ್ ಜೊತೆ.

“ಹೆಲೋ ಮಿಸ್,  ನಮಗೆ ನಾಳೆಗೆ ಒಂದು ಕಾನ್ಫರೆನ್ಸ್ ರೂಮ್ ಬುಕ್ ಮಾಡಬೇಕಿತ್ತು, ನಮ್ಮ ಹಾಸ್ಪಿಟಲ್ ಪರವಾಗಿ ಒಂದು ಡಾಕ್ಟರ್ಸ್ ಟಾಕ್ ಅರೆಂಜ್ ಆಗಿದೆ. ನಾವು ಬುಕ್ ಮಡಿದ ಹೋಟೆಲಿನವರು ಅದೇನೋ ಟೆಕ್ನಿಕಲ್ ಪ್ರಾಬ್ಲೆಮ್ ಅಂತ ಲಾಸ್ಟ ಮಿನಿಟ್ ಕ್ಯಾನ್ಸಲ್ ಮಾಡಿದ್ದಾರೆ. ಹಾಗಾಗಿ ಇನ್ನು ಹೇಗೂ ಆನ್ಲೈನ್ ಇನ್ವಿಟೇಷನ್ ಇರುವುದರಿಂದ ವೆನ್ಯೂ ಬದಲಾಗಿದ್ದು ಸುಲಭವಾಗಿ ಕಮ್ಯುನಿಕೇಟ್ ಮಾಡಬಹುದು. ಹಾಗಾಗಿ ನಾಳೆಗೆ ನಮ್ಮ ಲಾರ್ಜ್ ಹಾಲ್, ನಿಸರ್ಗ ಸೆರೆನಾ ಬುಕ್ ಮಾಡಿ”, ಒಂದೇ ಉಸಿರಿಗೆ ಹೇಳಿದನು ರಂಜನ್.

ರಜತ್ ಎಲ್ಲೋ ದೂರ ನೋಡುತ್ತಾ ಅವನ ಪಕ್ಕದಲ್ಲೇ ನಿಂತಿದ್ದನು.

“ಜಸ್ಟ್ ಎ ಮಿನಿಟ್ ಸರ್, ಲೆಟ್ ಮಿ ಚೆಕ್ ದಿ ಅವೈಲಬಿಲಿಟಿ”, ಎಂದಳು ಸಾರಿಕಾ.

ಅವರ ಮಾತನ್ನು ಅದುವರೆಗೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ ರಜತ್ ಕೂಗಾಡಿದನು, “ಏನು ಪ್ರಾಬ್ಲೆಮ್ ನಿಮ್ಮದು? ಯಾರು ನಿಮ್ಮ ಬಳಿ ಮಾತನಾಡುತ್ತಿರುವುದು ಗೊತ್ತಾ? ಚೆಕ್ ದಿ ಅವೈಲಬಿಲಿಟಿ ಅಂತೇ. ನಮ್ಮ ರೂಲ್ಸ್ ಪ್ರಕಾರ ಕಾನ್ಫರೆನ್ಸ್ ಹಾಲ್ಸ್ ಯಾವತ್ತಿದ್ದರೂ ಫಸ್ಟ್ ಪ್ರಿಯೋರಿಟಿ ನಮ್ಮವರಿಗೆ ಇರುವುದು. ಅವೈಲಬಿಲಿಟಿ ಇದ್ದರೂ, ಇಲ್ಲದಿದ್ದರೂ. ಈಗ ನಾವು ಬುಕ್ ಮಾಡಿದೋರು ಟೆಕ್ನಿಕಲ್ ಪ್ರಾಬ್ಲಮ್ ಎಂದು ಹೇಳಿಲ್ವಾ? ಹಾಗೇ ನಾವೂ ಹೇಳಿದರಾಯಿತು ಬೇರೆಯವರು ಬುಕ್ ಮಾಡಿದ್ದರೆ. ಒಂದು ಸಣ್ಣ ಕೆಲಸಕ್ಕೆ ಫ್ರಂಟ್ ಡೆಸ್ಕಿನಲ್ಲಿ ಇಷ್ಟು ಹೊತ್ತು ಕಾಯಬೇಕಾ? ಇನ್ನು ಲೋಡ್ ಆಗಿಲ್ವ ನಿಮ್ಮ ಡೇಟಾ?”.

“ಎಕ್ಸ್ಕ್ಯೂಸ್ಮಿ ಸರ್, ನೀವು ಹೇಳಿದ್ದು ಸರಿ. ಆದರೆ ನಿಮಗೆ ಬುಕ್ ಮಾಡಬೇಕಾದರೂ, ಬೇರೆಯವರದ್ದು ಕ್ಯಾನ್ಸಲ್ ಮಾಡ್ಬೇಕಾರು, ಯಾವುದಕ್ಕೂ ನಾನು ಅವೈಲಬಿಲಿಟಿ ಚೆಕ್ ಮಾಡಲೇ ಬೇಕು ತಾನೇ? ಸುಮ್ಮನೇ ಯಾಕೆ ರೇಗಾಡುತ್ತಿದ್ದೀರಿ? ಸರ್ವರ್ ಸ್ಲೋ ಇದೆ ಎಂದು ಬೆಳಗ್ಗೆನೇ ಇಮೇಲ್ ಮಾಡಿದ್ದೇನೆ ಟೆಕ್ನಿಕಲ್ ಟೀಮಿಗೆ. ಯಾರೋ ಕೆಲಸ ಸರಿಯಾಗಿ ಮಾಡ್ಲಿಕ್ಕಿಲ್ಲ, ಇರುವುದನ್ನೆಲ್ಲ ಇನ್ಯಾರದ್ದೋ ತಲೆಮೇಲೆ ಹಾಕುವುದು. ನೀವು ದೊಡ್ಡೋರೆಲ್ಲಾ ಹೀಗೆ ತಾನೇ ಮಾಡುವುದು? ಸುಮ್ಮನೆ ನನ್ನ ಟೈಮ್ ವೇಸ್ಟ್ ಮಾಡ್ತೀರ. ಅದರ ಬದಲು ಸ್ವಲ್ಪ ಸುಮ್ಮನಿದ್ದರೆ ಸರಿಯಾಗಿ ನೋಡಿ, ಆಗಬೇಕಾದ ಕೆಲಸ ಮಾಡಿಕೊಡುತ್ತೇನೆ. ಅದೂ ಅಲ್ಲದೆ, ಮಾಮೂಲಿಯಂತೆ ಪರಿಚಯ ಹೇಳದೆ, ಯಾರ ಜೊತೆ ಮಾತಾಡುವುದು ಗೊತ್ತುಂಟಾ ಅಂತ ಕೇಳಿದರೆ ಏನು ಹೇಳಬೇಕು? ನೋಡಿ, ನನ್ನ ಡ್ಯೂಟಿ ಟೈಮ್ ಬೇರೆ ಮುಗೀತು. ೫:೩೦ ಆಯಿತು. ಇನ್ನೇನಿದ್ದರೂ ನೈಟ್ ಶಿಫ್ಟನೋರು ಇನ್ನೇನು ಬರುತ್ತಾರೆ. ಅವರನ್ನೇ ಕೇಳಿ ನೋಡಿ. ಏನೋ ಹೊರಡುವ ಟೈಂಗೆ ಬಂದಿರಲ್ಲ. ಸ್ವಲ್ಪ ಕೆಲಸ ಮಾಡಿಕೊಟ್ಟು ಹೋಗುತ್ತೇನೆ ಅಂದ್ಕೊಂಡ್ರೆ ನಿಮ್ಮದು ಬೇರೆಯೇ ರಾಗ”, ಎಂದು ಅವನಷ್ಟೇ ಜೋರಾಗಿ ಕೂಗಾಡಿದಳು ಸಾರಿಕಾ.

ಇವರಿಬ್ಬರೂ ಯಾಕೆ ಇಷ್ಟು ಸಣ್ಣ ವಿಷಯಕ್ಕೆ ಇಷ್ಟೊಂದು ಕೂಗಾಡುತ್ತಿದ್ದಾರೆ ಎಂದು ಅರ್ಥವಾಗದೇ ರಂಜನ್ ಸುಮ್ಮನೇ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನೋಡುತ್ತಾ ನಿಂತಿದ್ದ. ಅಷ್ಟರಲ್ಲಿ ಕೂಗಾಡುವುದು ಕೇಳಿಸಿ ಮಾಧವ್ ಅಲ್ಲಿಗೆ ಬಂದರು. “ಯಾಕಪ್ಪ? ಏನಾಯಿತು?”, ಕೇಳಿದರು.

ಅವರು ವಯಸ್ಸಲ್ಲಿ ರಾಘವ್ ಅಷ್ಟೇ ದೊಡ್ಡೋರಾಗಿದ್ದು, ತುಂಬಾ ಹಳೇಕಾಲದಿಂದ ಈ ಹೋಟೆಲಿನಲ್ಲಿ ಮ್ಯಾನೇಜರ್ ಆಗಿದ್ದರಿಂದ ರಂಜನ್, ರಜತ್ ಅವರನ್ನು ಪ್ರೀತಿಯಿಂದ ಏಕವಚನದಲ್ಲೇ ಹೆಸರು ಹಿಡಿದು ಮಾತನಾಡಿಸುತ್ತಿದ್ದರು. ಮಕ್ಕಳಿಗೂ ಇದು ಅಭ್ಯಾಸವಾಗಿತ್ತು. ರಜತ್ ಮ್ಯಾನೇಜ್ಮೆಂಟಿಗೆ ಬಂಡ ಮೇಲೂ ತನ್ನನ್ನು ಇವರು ಸರ್ ಎಂದು ಕರೆಯಬೇಕೆಂದು ಯಾವತ್ತೂ ಬಯಸಿರಲಿಲ್ಲ.

ರಂಜನ್, “ಏನಿಲ್ಲ, ಇವರಿಬ್ಬರೂ ಯಾಕೆ ಇಷ್ಟೊಂದು ಕೂಗಾಡುತ್ತಿದ್ದಾರೆ ಇಷ್ಟು ಸಣ್ಣ ವಿಷಯಕ್ಕೆಂದು ನಂಗೆ ಗೊತ್ತಿಲ್ಲಪ್ಪ.”, ಎಂದು ಇನ್ನೇನೋ ಹೇಳಲು ಹೊರಟಾಗ, ಮಾಧವ್ ಅವರಿಬ್ಬರಿಗೂ “ನೀವು ಒಳಗಡೆ ನನ್ನ ಆಫೀಸಿನಲ್ಲಿ ಕೂತಿರಿ. ನಾನು ಆಗಬೇಕಾದ ಕೆಲಸ ಮಾಡಿಕೊಡುತ್ತೇನೆ. ಸಾರಿಕಾ, ನೀನು ಮನೆಗೆ ಹೊರಡಮ್ಮ. ನಿನಗೆ ಬಸ್ ಮಿಸ್ಸಾದರೆ ಕಷ್ಟ ಮತ್ತೆ”, ಹೇಳಿದರು.

“ಕೆಲಸ ಅರ್ಧಕ್ಕೆ ಬಿಟ್ಟು ಅವರು ಯಾಕೆ ಹೋಗುತ್ತಾರೆ? ತುಂಬಾ ವೃತ್ತಿಪರತೆ ಇರುವವರು ಅವರು. ಹಾಗೆಲ್ಲ ಅವಮಾನ ಮಾಡಬೇಡಿ ಅವರಿಗೆ ನೀವು. ನೀವು ನಿಧಾನಕ್ಕೆ ಮಾಡಿ ಮ್ಯಾಡಮ್ ನಿಮ್ಮ ಕೆಲಸ. ನಾವು ಕಾಯುತ್ತೇವೆ”, ಎಂದನು ರಜತ್ ನಾಟಕೀಯವಾಗಿ.

ಅವನ ವ್ಯಂಗ್ಯದ ನೋಟಕ್ಕೆ ಏನು ಹೇಳಿಯೂ ಪ್ರಯೋಜನವಿಲ್ಲವೆಂದು ಸಾರಿಕಾ ಸುಮ್ಮನೇ ಕಂಪ್ಯೂಟರ್ ನೋಡುವತ್ತ ಗಮನಹರಿಸಿದಳು.

ಮಾಧವ್ ರಂಜನ್ ಕಡೆ ನೋಡಿ ಕಣ್ಸನ್ನೆ ಮಾಡಿ ಪಕ್ಕಕ್ಕೆ ಕರೆದರು. ಆಮೇಲೆ ಅವರಿಬ್ಬರ ಕೋಳಿ ಜಗಳ ತುಂಬಾ ಮೊದಲಿಂದ ನಡೆದು ಬರುತ್ತಿದೆಯೆಂದು ಪೂರ್ತಿ ವಿಷಯ ವಿವರಿಸಿದರು. ಶುರುವಿನಲ್ಲಿ ಇದು ಅಲ್ಲಿಗೇ ನಿಲ್ಲಬಹುದೆಂದು ಮಾಧವ್ ಈ ವಿಚಾರ ಯಾರ ಬಳಿಯೂ ಹಂಚಿಕೊಂಡಿರಲಿಲ್ಲ. ಇಂದು ಮತ್ತೆ ಅವರಿಬ್ಬರ ಜಗಳ ಮುನ್ನೆಲೆಗೆ ಬಂದಾಗ, ಹೇಗೂ ರಂಜನ್ ಜೊತೆಗಿದ್ದಾನೆ. ರಜತ್ ಅಣ್ಣನ ಮಾತು ಕೇಳುತ್ತಾನೆ. ಹಾಗಾಗಿ ಒಂದು ಹಿಂಟ್ ಕೊಟ್ಟರೆ ತನ್ನ ಜವಾಬ್ದಾರಿಯೂ ನಿಭಾಯಿಸಿದಂತೆ ಆಗುತ್ತದೆ ಎಂದು ಸೂಕ್ಷ್ಮವಾಗಿ ವಿಷಯದ ವಿವರ ಹೇಳಿ ತಮ್ಮ ಹೆಗಲ ಮೇಲಿಂದ ಏನೋ ಭಾರ ಇಳಿದಂತೆ ನಿಟ್ಟುಸಿರುಬಿಟ್ಟರು ಮಾಧವ್.

ರಜತ್ ಇನ್ನೂ ಸಾರಿಕಾಳ ಎದುರಿಗೆ ನಿಂತು ಕಾಯುತ್ತರುವುದನ್ನು ನೋಡಿದ ರಂಜನ್, ಮಾಧವ್ ಅವರಿಗೆ ನೀವು ಒಳಗಿರಿ, ಬಂದೆ ಎಂದು ಹೇಳಿ ಡೆಸ್ಕ್ ಬಳಿ ಬಂದನು.

ಸಾರಿಕಾ ಕಂಪ್ಯೂಟರ್ ಕ್ಲಿಕ್ ಮಾಡುತ್ತ ಇನ್ನೂ ಏನೋ ತಡಕಾಡುತ್ತಿದ್ದಳು.

ರಂಜನ್ ಕೀಟಲೆ ದನಿಯಲ್ಲಿ ನಗುತ್ತ ಸಣ್ಣಕೆ ರಜತ್ ಕಿವಿಯಲ್ಲಿ ಹೇಳಿದನು, “ಏನಪ್ಪಾ ರಜತ್? ನಿಮ್ಮ ಹುಡುಗಿಯ ಬಗ್ಗೆ ನಮಗೆ ಹೇಳಲೇ ಇಲ್ಲ? ಯಾವಾಗಿಂದ ಶುರುವಾಗಿದ್ದು ಈ ಸ್ನೇಹ?”.

ರಜತ್ ಸಿಟ್ಟಿಂದ ಹೇಳಿದನು, “ವಾಟ್ ನಾನ್ ಸೆನ್ಸ್? ನಿನ್ನ ತಲೆ. ಆ ಮಾಧವ್ ನಿನ್ನ ತಲೆಗೆ ಏನು ತುಂಬಿಟ್ಟರೋ ಏನೋ? ಅವರು ಹೇಳಿದ್ದೆಲ್ಲ ನಂಬಬೇಡ”.

“ಏ ಅವರೇನೂ ಹೇಳಿಲ್ಲ. ನಿಮ್ಮ ಕೋಳಿಜಗಳದ ಪುರಾಣ ಅಷ್ಟೇ ಅವರು ವಿವರಿಸಿದ್ದು. ನಾನು ನನ್ನ ಕಣ್ಣಿಗೆ ಕಂಡದ್ದನ್ನು ಹೇಳಿದ್ದು”.

“ಏನು ನಿನ್ನ ತಲೆ ಕಂಡದ್ದು? ಜಗಳಕ್ಕೂ ಸ್ನೇಹಕ್ಕೂ ವ್ಯತ್ಯಾಸ ಗೊತ್ತಿಲ್ವ?”.

“ಜಗಳದಿಂದಲೇ ತಾನೇ ನನ್ನ ಮತ್ತು ಕಾಂಚನ ಫ್ರೆಂಡ್ಶಿಪ್ ಆಗಿದ್ದು? ಅದೆಲ್ಲ ನಿನಗೆ ಈಗ ಅರ್ಥವಾಗುವುದಿಲ್ಲ”, ಎಂದು ಇನ್ನೂ ಏನೇನೋ ಹೇಳುತ್ತಿದ್ದನು.

ಸಾರಿಕಾಳಿಗೆ ಅವರಿಬ್ಬರೂ ತಮ್ಮ ಬಗ್ಗೆಯೇ ಮಾತನಾಡುತ್ತಿರುವುದು ಮತ್ತು ಅದು ಕೀಟಲೆ ಮಾಡುತ್ತಿರುವುದೆಂದು ಅರ್ಥವಾಗಿತ್ತು. ಆದರೂ ಮುಖದಲ್ಲಿ ಯಾವ ಭಾವವೂ ತೋರದೆ, ಗಂಭೀರವಾಗಿ, “ಸರ್, ಬುಕಿಂಗ್ ಆಗಿದೆ. ಖಾಲಿ ಇತ್ತು. ನಿಮ್ಮ ಮೊಬೈಲಿಗೆ ಸಂದೇಶ ಮತ್ತು ಇಮೇಲ್ ಕಳುಹಿಸಿದ್ದೇನೆ. ಸರ್ವರ್ ಟೆಕ್ನಿಕಲ್ ಪ್ರಾಬ್ಲಮ್ ಕೂಡ ಸಾಲ್ವ್ ಆಗಿದೆ. ಹ್ಯಾವ್ ಎ ಗುಡ್ ಡೇ ಸರ್”, ಎಂದು ಅವರ ಉತ್ತರಕ್ಕೂ ಕಾಯದೆ ತನ್ನ ಬ್ಯಾಗ್ ಹಿಡಿದು ಹೊರಟಳು.

*****

ಮನೆಗೆ ಬಂದವಳೇ ಸಾರಿಕಾ ಸ್ನಾನ ಮುಗಿಸಿ, ದೇವರಿಗೆ ವಂದಿಸಿ ಅಮ್ಮನ ಬಳಿ ಬಂದು ಕುಳಿತಳು. ಇದೇ ಒಳ್ಳೆ ಸಂದರ್ಭವೆಂದು ಸುಜನ್ ಹೇಳಿದ ಮಾತನ್ನು ಮುಂದಿಟ್ಟರು ಸುಮಂಗಲ. ಸರಕ್ಕನೆ ಎದ್ದು ನಿಂತು ಸಾರಿಕಾ ಹೇಳಿದಳು, “ಇಲ್ಲಮ್ಮ, ನನಗೆ ಮದುವೆ ಬೇಡ. ಸುಮ್ಮನೆ ಕಿರಿಕಿರಿ. ನಾನು ಹೀಗೆ ಇರುತ್ತೇನೆ ಒಬ್ಬಳೇ”.

“ಏನಾಗಿದೆ ನಿನಗೆ?. ಒಂದೊಂದು ದಿನ ಒಂದೊಂದು ಮಾತನಾಡಬೇಡ. ನೀನು ಒಪ್ಪಿದ ಮೇಲೆ ತಾನೇ ನಾವು ಮುಂದುವರೆದಿದ್ದು? ಈಗ ಹೀಗೆ ಹೇಳಿದರೆ ಹೇಗೆ?”.

“ನೋಡೋಣ, ನನ್ನ ತಲೆ ಸರಿಯಿಲ್ಲ. ಈಗ ಸುಮ್ಮನಿರು. ಏನೋ ಒಂದು ಹೇಳು ಅವರಿಗೆ”, ಎಂದು ತನ್ನ ರೂಮಿನತ್ತ ನಡೆದಳು ಸಾರಿಕಾ.

“ನೀನು ಆ ಕೆಲಸಕ್ಕೆ ಸೇರಿದ ಮೇಲೆ ಹೀಗೆ ಬದಲಾಗಿದ್ದು. ಮೊದಲೆಲ್ಲ ಎಷ್ಟು ಆರಾಮಾಗಿದ್ದೆ? ಮೊದಲು ಆ ಕೆಲಸ ಬಿಡು. ಅಲ್ಲಿ ಏನಾಗುತ್ತಿದೆ?”, ಎನ್ನುತ್ತಾ ಅವಳನ್ನು ಹಿಂಬಾಲಿಸಿದರು ಸುಮಂಗಲ.

ತನ್ನ ಕೆಲಸದ ವಿಚಾರ ಬಂದಿದ್ದು ಕೇಳಿ ಮತ್ತೆ ಕೆರಳಿದಳು ಸಾರಿಕಾ. ನೇರವಾಗಿ ದಿಟ್ಟಿಸಿ ಹೇಳಿದಳು, “ಹಾಂ, ಹೌದು. ಏನೇನೋ ನಡೀತಿದೆ ಆಫೀಸಲ್ಲಿ. ನಾನು ನಮ್ಮ ಸಿಇಓನ ಇಷ್ಟ ಪಡುತ್ತಿದ್ದೇನೆ. ಏನೀಗ?”, ಎಂದು ಸಿಟ್ಟಿನ ಭರದಲ್ಲಿ ಬಾಗಿಲು ಎಳೆದುಕೊಂಡಳು.

ಕೋಪದಲ್ಲಿ ಅವಳು ಏನು ಹೇಳಿದ್ದಾಳೆಂಬುದೇ ಅವಳಿಗರಿವಿರಲಿಲ್ಲ. ಅದರ ಪರಿಣಾಮವೂ ಯೋಚಿಸದೇ ಏನೋ ಬೀಸುವ ದೊಣ್ಣೆಯಿಂದ ತಪ್ಪಿಸಲೆಂದು ಅಚಾನಕ್ಕಾಗಿ ಅಂದಿನ ದಿನದ ಆಗುಹೋಗುಗಳಿಂದ ಬಾಯಿಗೆ ಬಂದಂತೆ ಹೇಳಿದ್ದಳು.

ಯಾರಿಗೆ ಬೇಕು ಈ ಮದುವೆ, ಸಂಸಾರ? ಅಕ್ಕ-ಪಕ್ಕದಲ್ಲಿರುವರೊಂದಿಗೇ ನೆಮ್ಮದಿಯಿಂದ ಬದುಕಲಾಗಲ್ಲ ನಮಗೆಲ್ಲ. ಇನ್ನು ಯಾರೋ ಗೊತ್ತು – ಪರಿಚಯ ಇಲ್ಲದವರ ಮನೆಯವರೊಂದಿಗೆಲ್ಲ ಹೊಂದಿಕೊಂಡು ಯಾರು ಬದುಕುವುದು? ಬೇಕಾ ಅದೆಲ್ಲ?

ಮತ್ತೆ ಹಾಸಿಗೆಯಲ್ಲಿ ಬಿದ್ದುಕೊಂಡು ಯೋಚಿಸಿದಳು. ಇದೇ ಒಳ್ಳೆ ದಾರಿ. ಈ ಮದುವೆಯಿಂದ ತಪ್ಪಿಸ್ಕೊಳ್ಳಲು. ಅವರು ಆಗರ್ಭ ಶ್ರೀಮಂತರೆಂದು ತಿಳಿದು ಸಧ್ಯಕ್ಕೆ ನಾನು ಹೇಳುವ ತನಕ ಮನೆಯವರು ಅವರ ಬಳಿ ಕೇಳಲು ಹೋಗುವುದಿಲ್ಲ.  ಹಾಗೆಯೇ ಬೇರೆ ಮಾತುಕಥೆಯೂ ನಡೆಯುವುದಿಲ್ಲ. ಆ ಕೆಲಸಕ್ಕೆ ಅದು ಹೇಗೋ ಹಠ ಮಾಡಿ ಹೋಗಿಬರುತ್ತಿರಬಹುದು. ಆ ರಜತ್ ಕಣ್ಣಿಗೆ ಬೀಳದಿದ್ದರಾಯಿತು. ಎಚ್ಚರಿಕೆಯಿಂದ ಇರಬೇಕು. ಸಿಟ್ಟಲ್ಲಿ ಏನೋ ಹೇಳಿದರೂ, ಆದದ್ದೆಲ್ಲ ಒಳ್ಳೆಯದಕ್ಕೇ ಎಂದುಕೊಂಡು ಅಲ್ಲೇ ನಿದ್ದೆ ಹೋದಳು ಸಾರಿಕಾ!

ಮುಂದುವರೆಯುವುದು

ಹಿಂದಿನ ಸಂಚಿಕೆ