ಆಲೂಗಡ್ಡೆಯ ಸುತ್ತ…! 

ಮೊನ್ನೆ ಚೆನ್ನಾಗಿರುವ ಆಲೂಗಡ್ಡೆ ಆರಿಸಿ ತರಲು ಪಟ್ಟ ಅವಸ್ಥೆಯಲ್ಲಿ ಮತ್ತೆ ನಮ್ಮ ಮನೆಯ ಆಲೂಗಡ್ಡೆ ಸಾಂಬಾರ್ ನೆನಪಿಗೆ ಬಂತು. ಆಗೆಲ್ಲ ಮನೆಯಲ್ಲೇ ಬೆಳೆದ ತರಕಾರಿಗಳ ಅಡುಗೆಯದೇ ಕಾರುಬಾರು. ರುಚಿಯಾದ ಹೀರೆ, ಪಟಗಿಲ, ಬೆಂಡೆ, ತೊಂಡೆ, ಹಾಗಲ, ಹರಿವೆ, ಬಸಳೆ.. ಹೀಗೆ ಉದ್ದದ ಪಟ್ಟಿ ನೆನೆಸಿಕೊಂಡರೆ ಬಾಯಲ್ಲಿ ಈಗಲೂ ನೀರು ಬರುತ್ತದೆ!  ಆಗಿನ ರುಚಿ, ಪರಿಮಳ ಈಗಿನ ಯಾವ ತರಕಾರಿಗಳಲ್ಲೂ ಇಲ್ಲ. ರಾಸಾಯನಿಕ ಗೊಬ್ಬರಗಳು ಮಣ್ಣಿನ ಫಲವತ್ತತೆ ಕಸಿದುಕೊಂಡ ಮೇಲೆ ಈಗ ಅದೆಷ್ಟೇ ಆರ್ಗಾನಿಕ್ ಅಂತ ಬೊಬ್ಬಿರಿದರೂ ಖಂಡಿತವಾಗಲೂ ಅಂದಿನ ರುಚಿ, ಪರಿಮಳ, ಬಣ್ಣ ಈಗಿನ ತರಕಾರಿಗಳಲ್ಲಿಲ್ಲ ಬಿಡಿ.

ಈಗ ಮತ್ತೆ ನಮ್ಮ ಆಲೂಗಡ್ಡೆ ವಿಷಯಕ್ಕೆ ಬರೋಣ. ಅಂದು ಪೇಟೆಯಿಂದ ತರುತ್ತಿದ್ದ ತರಕಾರಿಗಳೆಂದರೆ ಬಹುಶಃ ಕ್ಯಾರಟ್ ಬಿಟ್ಟರೆ ಈ ಆಲೂಗಡ್ಡೆ ಅಷ್ಟೇ. ಅಪರೂಪದ ನೆಂಟ ಎಂದೇ ಏನೋ ನಮಗೆಲ್ಲ ಅದರ ಮೇಲೆ ಅಷ್ಟೊಂದು ಮೋಹ ಬೆಳೆದಿದ್ದು. ಹೆಚ್ಚಾಗಿ ಭಾನುವಾರ ಮಧ್ಯಾಹ್ನ ಎಲ್ಲರೂ ಊಟಕ್ಕೆ ಮನೆಯಲ್ಲೇ ಇರುತ್ತಾರೆಂದು ಮಧ್ಯಾಹ್ನಕ್ಕೆ ಆಲೂಗಡ್ಡೆ ಸಾಂಬಾರ್ ಮಾಡುತ್ತಿದ್ದರು ನಮ್ಮಲ್ಲಿ. ಅದರ ರುಚಿ ನೆನೆಸಿಕೊಂಡರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ!. ನಾನು ಮಾಡಿದ ಸಾಂಬಾರನ್ನು ಉಂಡರೆ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ ಇಲ್ಲವೇ ಅತ್ತೆಯಂದಿರು ಮಾಡಿದಂತೆ ಇನ್ನೂ ಸಹ ನನಗಂತೂ ಆ ರೀತಿಯ ರುಚಿಕರ ಆಲೂಗಡ್ಡೆ ಸಾಂಬಾರ್ ಮಾಡಲು ಬರುವುದಿಲ್ಲವೆಂದೇ ಅನಿಸುತ್ತದೆ! 🙂 (ಹೌದು.. ಆದರೆ ಅಕ್ಕ ಇದುವರೆಗೂ ಯಾಕೆ ಈ ಸಾಂಬಾರ್ ಮಾಡಿ ಕೊಟ್ಟಿಲ್ಲ ನನಗೆ ಎಂದು ಈಗ ಮನಸಿಗೆ ಬಂದ ಆಲೋಚನೆ ನೋಡಿ.., ಅವಳ ಕೈರುಚಿ ಇವರದಕ್ಕೆ ಮ್ಯಾಚ್ ಆಗಬಹುದೇನೋ ಎಂದು! ;))

ಈ ಆಲೂಗಡ್ಡೆ ನಮ್ಮನ್ನು ಎಷ್ಟು ಆವರಿಸಿಬಿಟ್ಟಿತ್ತೆಂದರೆ, ಸೋಮವಾರ ಬೆಳಗ್ಗೆ ಸಹ ನಾವು ನಾ ಮೊದಲು, ತಾ ಮೊದಲು ಎಂದು ಓಡಿ ಬಂದು ಊಟದ ಮೇಜಿನ ಬಳಿ ಬಟಾಟೆ ಹೋಳುಗಳಿಗಾಗಿ ಜಗಳ ಕಾಯುತ್ತಿದ್ದೆವು. ನಾವು ಈ ರೀತಿ ಮಾಡುತ್ತೇವೆಂದು ಗೊತ್ತಿದ್ದೇ ಮನೆಯಲ್ಲಿ ರಾತ್ರಿಯೇ ಅಮ್ಮಂದಿರು ಸಮಪಾಲೆಂದು ಲೆಕ್ಕ ಇಟ್ಟು ಮಕ್ಕಳಿಗಾಗಿ ೬-೭ ಹೋಳುಗಳನ್ನು ತೆಗೆದಿರಿಸುತ್ತಿದ್ದರು. ಬೇರೆ ದಿನಗಳಲ್ಲಾದರೆ ಬೆಳಗಿನ ಗಂಜಿಯೊಂದಿಗೆ ಹಿಂದಿನ ದಿನದ್ದು ಯಾವುದನ್ನೂ ಮುಟ್ಟಿಯೂ ನೋಡದಿರುತ್ತಿದ್ದ ನಾವು ಬಟಾಟೆ ಮೋಡಿಗೆ ಮಾತ್ರ ಅಡಿಯಾಳುಗಳಾಗಿದ್ದೆವು! ಅದರಲ್ಲೂ ಬೆಳಗ್ಗೆ-ಬೆಳಗ್ಗೆ ಬಟಾಟೆಗೆ ಜಗಳವಾಡಿ, ಮನೆಯವರ ಕೈಯ್ಯಲ್ಲಿ ಒಂದೆರಡು ಬೈಸಿಕೊಂಡು ತಿಂದರೆ ಮಾತ್ರ ತಿಂದದ್ದು ಗಂಟಲಲ್ಲಿ ಚೆನ್ನಾಗಿ ಇಳಿಯುತ್ತಿದ್ದುದು ನಮಗೆ. ಆ ದಿನ ಗಂಜಿಗೆಂದು ಮಾಡಿದ ಬೋಳು ಹುಳಿ ಮಾತ್ರ ಅಳುತ್ತಾ, ಬಟಾಟೆಗೆ ಶಪಿಸುತ್ತಾ ನಮ್ಮ ಬಟಾಟೆ ಜಪಕ್ಕೆ ಮೂಕ ಸಾಕ್ಷಿಯಾಗಿರುತಿತ್ತು!

ನಮ್ಮಲ್ಲಿ ಆಲೂಗಡ್ಡೆಗೆ ಬಟಾಟೆ ಎಂದೇ ಹೇಳಿ ರೂಢಿ. ಹಾಗಾಗಿ ಕೆಲವೊಂದು ಬಾರಿ ಇಂದಿಗೂ ನಾನು ಬೆಂಗಳೂರಿನ ಮರುಕಟ್ಟೆಗಳಲ್ಲೂ ಪಕ್ಕನೆ, “ಬಟಾಟೆ ಇಲ್ವಾ?”, ಎಂದು ಕೇಳಿಬಿಡುತ್ತೇನೆ! ಮತ್ತೆ ತಿದ್ದಿಕೊಂಡು ಆಲೂಗಡ್ಡೆ ಎನ್ನುವಷ್ಟರಲ್ಲಿ, ತರಕಾರಿ ಮಾರುವವರು ತರಕಾರಿ ದರದಲ್ಲಿ ನನ್ನನ್ನು ಮಂಗ ಮಾಡಿಯಾಗಿರುತ್ತದೆ! ಏನು ಮಾಡುವುದು? ಅಷ್ಟೊಂದು ಆವರಿಸಿದೆ ಈ ಬಟಾಟೆ ಚಿಕ್ಕಂದಿನಿಂದ. ಈಗಲೂ ಸಹ ನನಗೆ ಪ್ರಿಯವಾದ ತರಕಾರಿಯೆಂದರೆ ಅದು ಈ ಬಟಾಟೆಯೇ! 😉 ಮಸಾಲೆ ದೋಸೆ – ಭಾಜಿ, ಪೂರಿ – ಭಾಜಿ, ಆಲೂಗಡ್ಡೆ ಸಾಂಬಾರ್, ಚಪಾತಿ – ಬಟಾಟೆ-ಬಟಾಣಿ ಗಸಿ  .. ಹೀಗೆ ಮನೆಯಲ್ಲಿ ನಾವು ಚಿಕ್ಕವರಿದ್ದಾಗ ವಿಶೇಷವೆಂದು ಅಪರೂಪಕ್ಕೆ ಮಾಡುತ್ತಿದ್ದ ಅಪರೂಪದ ಕಾಂಬಿನೇಷನ್ಗಳೇ ನನಗೆ ಇಂದಿಗೂ ಪ್ರಿಯವಾದವು. ನನಗೆ ಮಾತ್ರ ಅಲ್ಲ, ಕೇಳಿದರೆ ಅಕ್ಕ, ಅಣ್ಣ, ತಂಗಿಯಂದಿರಿಗೂ ಇದುವೇ ಇರುತ್ತದೆ ಬಿಡಿ! 😉

ಹಿಂದಿನ ಬುತ್ತಿ