ಸೀರೆಯ ಮೋಹ

ಸೀರೆ….! ಅಬ್ಬಾ.. ಈ ಸೀರೆಯ ಮೋಹ ಹೆಣ್ಣು ಮಕ್ಕಳನ್ನು ಬಿಟ್ಟುಬಿಡಲು ಸಾಧ್ಯವೇ ಇಲ್ಲ. ಅವರಿಗೆ ಸೀರೆ ಉಡುವ ರೂಢಿ ಅತಿ ಕಡಿಮೆಯಾದರೂ, ಜೀನ್ಸ್, ಸಲ್ವಾರ್ ಧರಿಸುವುದಾದರೂ ಈ ಸೀರೆಯನ್ನು ಕಂಡಾಗ ಮಾತ್ರ ಅದೇನೋ ಮಾಯಾಜಾಲ ಸೆಳೆದಂತಾಗುವುದು! ಬಹಳಷ್ಟು ಬಾರಿ, ಅದೆಷ್ಟೇ ಸೀರೆಗಳು ಅಲ್ಲಿ ಕಪಾಟಿನ ಮೂಲೆಯಲ್ಲಿದ್ದರೂ, ಹೊಸ ಬಣ್ಣವೆಂದೋ, ಹೊಸ ವಿನ್ಯಾಸವೆಂದೋ, ಹೊಸತಾದ ಸಂಗ್ರಹವೆಂದೋ, ಒಟ್ಟಿನಲ್ಲಿ ಏನೋ ಒಂದು ನೆಪದಲ್ಲಿ ಹೊಸತೊಂದು ಸೀರೆ ಮತ್ತೆ ಆ ಕಪಾಟನ್ನು ಆಗಾಗ ಸೇರುತ್ತಿರುತ್ತದೆ!

ಜಾಗತೀಕರಣ

ಇತ್ತೀಚೆಗೆ ಕೆಲವರು ಸೂಕ್ಷ್ಮವಾಗಿ, ಹೇಗಿದ್ದರೂ ಉಡುವುದಿಲ್ಲ, ಮತ್ತೇತಕ್ಕೆ ಎಂದು ಕೆಲವೊಂದು ಬಾರಿ ಸೀರೆಯನ್ನು ನಿರಾಕರಿಸಿ, ಟಾಪ್ಸ್, ಸಲ್ವಾರ್ ಇವುಗಳ ಮೊರೆ ಹೋಗುತ್ತಿದ್ದಾರೆ ಅಷ್ಟೇ. ಆದರೂ ಸೀರೆಗೆ ಬೇಡಿಕೆಯೇನೂ ಕಮ್ಮಿಯಾಗಿಲ್ಲ ಬಿಡಿ. ಎಲ್ಲವೂ ಜಾಗತೀಕರಣವಾದಾಗ (ಗ್ಲೋಬಲೈಝೇಷನ್) ಈ ಸೀರೆಯೂ ಆಗಿಬಿಟ್ಟಿದೆ. ಹಾಗಾಗಿ ವಿದೇಶಿ ಖರೀದಿದಾರರೂ ಇದ್ದಾರಿವಕ್ಕೆ! ಈಗೆಲ್ಲ ಅದೇನೋ ರೆಡಿ ಟು ವೇರ್ ಧೋತಿ, ಸೀರೆ ಸರ್ವೇ ಸಾಮಾನ್ಯ. ಸ್ವಲ್ಪ ವರ್ಷಗಳುರುಳಿದರೆ ಸಾಮಾನ್ಯ ಸೀರೆಗಳು ಕಣ್ಮರೆಯಾಗಿ, ಈ ಸಿದ್ಧ ಉಡುಗೆಗಳೇ ಸೀರೆಯ ಪ್ರಕಾರದಲ್ಲೂ ಮೇಲುಗೈ ಸಾಧಿಸಿದರೆ ಆಶ್ಚರ್ಯವೇನಿಲ್ಲ!

ಇಷ್ಟೆಲ್ಲಾ ಹೇಳಲು ನೆನಪಾಗಿದ್ದೇಕೆಂದರೆ ಮೊನ್ನೆ ಕಪಾಟು ತೆರೆದು, ಒಂದಿಷ್ಟು ಹಳೆಯ ಸೀರೆಗಳಿವೆ. ಅವನ್ನೆಲ್ಲಾ ಯಾರಿಗಾದರೂ ಕೊಟ್ಟುಬಿಡೋಣ. ಇಟ್ಟುಕೊಂಡು ಉಡುವುದಂತೂ ಯಾವ ಕಾಲಕ್ಕೇನೋ ಎನಿಸಿತ್ತು. ಹಾಗಾಗಿ ಕಪಾಟು ತೆರೆದು ಸೀರೆಗಳನ್ನು ಹರಡಿಕೊಂಡು ಕುಳಿತದ್ದಾಯಿತು. ಅಷ್ಟರಲ್ಲಿ  ಒಂದೊಂದೇ ಸೀರೆ ತೆಗೆದು ನೋಡಿದಾಗಲೂ ಒಂದೊಂದು ಕಾರಣ ನೆನಪಾಗಿ, ಎಲ್ಲವೂ ಮತ್ತೆ ಬೆಚ್ಚಗೆ ಕಪಾಟು ಸೇರಿದವು!

sarees

ನೆನಪಿನ ಬುತ್ತಿ

ಒಂದು ಸೀರೆ ತೆಗೆದು ನೋಡಿದೆ. ಅದಕ್ಕೆ ೧೦ ವರ್ಷಗಳಾಗುತ್ತಾ ಬಂತು. ಅದನ್ನು ೨ ವರ್ಷಗಳ ಹಿಂದೆ ತಂಗಿಯ ಮದುವೆಗೆ ಉಟ್ಟಿದ್ದೆ. ಇನ್ನು ಉಡಲು ಆಗದು. ಸರಿ, ಅದನ್ನು ಕೊಡೋಣವೆಂದು ಕೈಯ್ಯಲ್ಲಿ ಹಿಡಿದಾಗ ಅದು ಮದುವೆಗೆ ಅಪ್ಪ – ಅಮ್ಮ ಕೊಟ್ಟ ಸೀರೆ ಎಂದು ಮನಸ್ಸು ಮತ್ತೆ ಮತ್ತೆ ಹೇಳಿತು. ಹೋಗಲಿ ಬಿಡು. ಇದು ಇರಲಿ ಎಂದು ಮತ್ತೆ ಕಪಾಟಿನೊಳಗೆ ಸೇರಿತು.

ಇನ್ನೊಂದು ಸೀರೆ ಬಿಡಿಸಿ ನೋಡಿದೆ. ಅದು… ಓಹ್ .. ಇದು ಸಹ ೧೦ ವರ್ಷ ಕಳೆದ ಸೀರೆ. ಆದರೆ ಇದನ್ನು ಮತ್ತೆ ಮತ್ತೆ ಆಗಾಗ ಉಡುತ್ತೇನೆ. ಹೊಸದಾದ ರವಿಕೆಯೂ ಹೊಲಿಸಿಯಾಗಿದೆ. ಇದು ಸೋದರ ಮಾವ – ಅತ್ತೆ ಕೊಟ್ಟ ಸೀರೆ. ಇದನ್ನು ಕೊಡಲಾಗದು. ಇದು ಬೇಕೇ ಬೇಕು. ಸರಿ, ಅದೂ ಕೂಡ ಮತ್ತೆ ಕಪಾಟು ಸೇರಿತು!

ಅರೇ .. ಇದು ಚಿಕ್ಕಿ ಕೊಟ್ಟ ಮೈಸೂರ್ ರೇಷ್ಮೆ ಸೀರೆ. ಇದನ್ನು ಹೇಗೆ ಕೊಡುವುದು? ಇದೂ ಇರಲಿ. ಸರಿ.. ಆ ಹಳದಿ ಬಣ್ಣದ್ದು?.. ಅದೂ .. ಅದು ಯಜಮಾನರು ಕೊಡಿಸಿದ ಮೊದಲ ಸೀರೆ. ಸರಿ..ಅದೂ ಇರಲಿ. ಇದು.. ಇದು.. ಅಮ್ಮ ಕೊಟ್ಟದ್ದು, ಇದು ನಂಗಿಷ್ಟವೆಂದು ತಂಗಿ ಕೊಟ್ಟದ್ದು, ಇದು ಅಪರೂಪದ ಬಣ್ಣದ್ದು. ಈ ಕಡೆ ಇರುವುದು ನಾನೇ ಬೇಕೆಂದು ತೆಗೆದುಕೊಂಡಿರುವುದು. ಇದು ಧಾರೆ ಸೀರೆ. ಆದರೆ, ಅದು ಈಗ ಸ್ವಲ್ಪ ಬಣ್ಣ ಮಾಸಿದಂತೆ ತೋರುತ್ತಿದೆ. ಮಗದೊಂದು ತಂಗಿ-ಚಿಕ್ಕಮ್ಮ ಸೇರಿ ಅವಳ ಮದುವೆಗೆಂದು ಕೊಡಿಸಿದ್ದು. ಇರುವುದೇ ಈ ೬-೭ ಸೀರೆಗಳು. ಇರಲಿ ಬಿಡು. ಅಲ್ಲಿಗೆ ಸೀರೆಗಳನ್ನು ಓಡಿಸುವ ಕಾರ್ಯಕ್ಕೆ ಮುಕ್ತಾಯ ಹಾಡಲಾಯಿತು!

ಎಷ್ಟು ಸೀರೆ ಉಂಟು?

ಬಹುಷಃ ಎಲ್ಲರಿಗೂ ಇದೇ ಕಾರಣಕ್ಕೆ ಕಪಾಟು ತುಂಬಾ ಸೀರೆ ತುಂಬಿದ್ದರೂ, ಹೊರಗೂ ಹಾಕಲಾರದೇ, ಕೆಲವೊಂದನ್ನು ಉಡಲು ಆಗದೆ, ಹೊಸತು ಸೇರಿಕೊಳ್ಳುತ್ತಾ ಕಪಾಟು ಭರ್ತಿಯಾಗುವುದೇನೋ?! ಅಂದ ಹಾಗೆ, ನಿಮ್ಮ ಬಳಿ ಎಷ್ಟು ಸೀರೆ ಉಂಟು?

ನಿಮ್ಮ ಸೀರೆ ಜೋಪಾನ!