ನಿಮಗೆ ಪೇರಳೆ ಗೊತ್ತುಂಟಾ? ನೀವು ದಕ್ಷಿಣ ಕನ್ನಡದವರಾದರೆ ಗೊತ್ತಿರುತ್ತದೆ. ಹಾಗೆಯೇ ಅಲ್ಲಿಯವರಿಗೆ ೨ ರೀತಿಯ ಪೇರಳೆ ಗೊತ್ತಿರುತ್ತದೆ. ನನಗೆ ಅದು ಬಾಲ್ಯದ ಮಜದ ನೆನಪೂ ಸಹ ಹೌದು! ಗೊತ್ತಾಗದಿದ್ದರೆ ಮುಂದೆ ಓದಿ!
ಪೇರಳೆ ಅಂತ ನಾವು ಹೇಳುವುದು ಹೆಚ್ಚಾಗಿ ಸೀಬೆ ಹಣ್ಣಿಗೆ. ನಮ್ಮೂರಲ್ಲಿ ಎಲ್ಲರೂ ಸೀಬೆ ಕಾಯಿ / ಹಣ್ಣನ್ನು ಪೇರಳೆ ಎಂದೇ ಹೇಳುವುದು. ಪೇರಳೆಗೆ ಸೀಬೆ ಎಂಬ ಹೆಸರು ನನಗೆ ಹೊಂದಿಕೊಳ್ಳಬೇಕಾದರೆ ತುಂಬಾ ಸಮಯವೇ ಹಿಡಿಯಿತೆನ್ನಬಹುದು. ಇರಲಿ, ಈಗ ಹಿಂದಕ್ಕೆ ಹೋಗೋಣ.
ಅದೊಂದು ಬೇಸಿಗೆ ರಜೆಯ ಸಮಯವಿರಬೇಕು. ನಾನು ಅಜ್ಜಿ ಮನೆಯಲ್ಲಿ ಆಟವಾಡುತ್ತ ಸಮಯ ಕಳೆದು, ರಾತ್ರಿ ಊಟ ಮಾಡುತ್ತಿರಬೇಕಾದರೆ ಅಜ್ಜನಿಗೆ ಹೇಳಿದೆ, “ಇಲ್ಲಿ ಈ ಊಟದ ಕೋಣೆಗೆ ಒಂದು ಫ್ಯಾನ್ ಹಾಕಿಸಬೇಕು. ಇಲ್ಲದಿದ್ದರೆ ನನಗೆ ತುಂಬಾ ಸೆಖೆಗೆ, ಬಿಸಿ ಬಿಸಿ ಊಟ ಮಾಡಲಾಗದೆ ಕಿರಿಕಿರಿಯಾಗುತ್ತದೆ. ಫ್ಯಾನ್ ಯಾವಾಗ ತರುತ್ತೀರಿ?”.
ಅಜ್ಜ: “ನೀನು ಇನ್ನೂ ಒಂದು ವಾರ ಇಲ್ಲಿ ಉಳಿದುಕೊಳ್ಳುವುದಾದರೆ ತಂದುಕೊಡುತ್ತೇನೆ”.
ನಾನು: “ಹಾಗಾದರೆ ನನಗೆ ಈಗಲೇ ಪೇರಳೆ ಬಡಿಸಿ. ಉಳಿದುಕೊಳ್ಳುವ ಬಗ್ಗೆ ಯೋಚಿಸುತ್ತೇನೆ!”
ಅಜ್ಜ: “ಪೇರಳೆ ಈಗ ರಾತ್ರಿ ಎಲ್ಲಿಂದ ತರುವುದು? ನಾಳೆ ಬೆಳಗ್ಗೆ ತೋಟಕ್ಕೆ ಹೋಗಿ ನೋಡೋಣ. ಬೆಳೆದದ್ದಿದ್ದರೆ ಎಲ್ಲವೂ ನಿನಗೆ ಕೊಡುತ್ತೇನೆ, ಈಗ ಬೇಗ ಊಟ ಮುಗಿಸಿಬಿಡು”.
ನಾನು: “ನನಗೆ ಊಟ ಮುಗಿಸಬೇಕಾದರೆ ಪೇರಳೆ ಬೇಕೇ ಬೇಕು. ಇಲ್ಲದಿದ್ದರೆ ಹೇಗೆ ಊಟ ಮಾಡುವುದು? ನಾನು ಊಟ ಅದರೊಂದಿಗೆಯೇ ಮುಗಿಸುವುದು ಎಂದು ಗೊತ್ತಲ್ಲ ನಿಮಗೆ?”
ಈಗ ಅಜ್ಜ- ಅಜ್ಜಿಯರಿಬ್ಬರಿಗೂ ನಿಜವಾಗಿಯೂ ತಲೆಕೆಟ್ಟಿತು. ಮೊದಲೇ ಹಟಮಾರಿ ಹುಡುಗಿ. ತಾನು ಹೇಳಿದ್ದೇ ಆಗಬೇಕು. ಈಗ ನೋಡಿದರೆ ಇಲ್ಲಿ ಇಬ್ಬರೇ ಇರುವಾಗ ಇವಳಿಗೆ ಈ ಪೇರಳೆ ಯಾಕಾದರೂ ನೆನಪಾಯಿತೇನೋ? ನಮ್ಮ ಅವಸ್ಥೆ. ಈಗೇನು ಮಾಡುವುದು? ಎಂದೆಲ್ಲ ಗುಸು-ಪಿಸು ಮಾತನಾಡಿಕೊಂಡರು. ನನಗೆ ಇನ್ನು ಸ್ವಲ್ಪ ಗೋಳು ಹೋಯ್ಕೊಂಡು ಮಜಾ ತೆಗೆದುಕೊಳ್ಳುವ ತವಕ. ಮತ್ತೆ ಹೇಳಿದೆ, “ಅಜ್ಜಿ, ನಿಮಗಾದರೂ ಗೊತ್ತಾಗುತ್ತಿಲ್ಲವಾ? ನನಗೆ ಬೇಗ ಬೇಗ ಪೇರಳೆ ಬಡಿಸಿ!”.
ಈಗ ಅಜ್ಜಿಗೆ ಏನೋ ಹೊಳೆದು, ಮತ್ತೆ ಕೇಳಿದರು, “ನಿನಗಗೆ ನಿಜವಾಗಿಯೂ ಎಂತ ಬೇಕು? ಸರಿಯಾಗಿ ಹೇಳು”.
ನಾನು: “ಅದೇ..ಪೇರಳೆ, ಪೇರು ಮತ್ತೆ ಅಳೆ (ತುಳು ಭಾಷೆ ..)..ಪೇರಳೆ.. ಹಾಲು – ಮಜ್ಜಿಗೆ ಅನ್ನಕ್ಕೆ!”
ಅಜ್ಜಜ್ಜಿಗೆ ನಗು ತಡೆಯಲಾರದೆ ಹೇಳಿದರು, “ಹ.. ಹಾಗಾ.. ಹಾಗೆ ಬಿಡಿಸಿ ಹೇಳು ಮತ್ತೆ.. “.
ನಮ್ಮಲ್ಲಿ ಸೆಖೆ ಜಾಸ್ತಿ ಇರುವಾಗ ಮಜ್ಜಿಗೆ ಅಥವಾ ಮೊಸರನ್ನಕ್ಕೆ ಹುಳಿಯಾಗುತ್ತದೆಂದು ಕೊನೆಯಲ್ಲಿ ಸ್ವಲ್ಪ ಹಾಲು ಸೇರಿಸಿಕೊಂಡು ಊಟ ಮುಗಿಸುವುದು ವಾಡಿಕೆ. ಕನ್ನಡದೊಂದಿಗೆ ನಮ್ಮಲ್ಲಿ ತುಳು ಭಾಷೆಯೂ ಜೀವನಶೈಲಿಯೊಂದಿಗೆ ಹಾಸುಹೊಕ್ಕಿರುವುದರಿಂದ ಕೆಲವೊಂದು ಮಾತುಗಳು ಹೀಗೂ ಬರುತ್ತವೆ. ಅದಕ್ಕೆ ಹಲವರು ಈ ರೀತಿ ಆಗಾಗ್ಗೆ ಭಾಷೆಗಳನ್ನು ಬೆರೆಸಿ ಮಾತನಾಡಿ ಮಜಾ ತೆಗೆದುಕೊಳ್ಳುತ್ತಿರುತ್ತೇವೆ.
ಅಂತೂ ಪೇರಳೆಯೊಂದಿಗೆ ಊಟ ಮುಗಿಸಿ, ಮಾರನೇ ದಿನವೇ ನಾನಂತು ಮನೆಯ ಕಡೆ ಹೆಜ್ಜೆ ಹಾಕಿದ್ದೆ.
(ಕೊನೆಗೆ, ಈ ಫ್ಯಾನಿನ ವಿಚಾರವಾಗಿ ಅಜ್ಜ ನನ್ನ ಸಮಾಧಾನಕ್ಕೆ ಏನೋ ಒಂದು ಹೇಳಿದ್ದರು ಬಿಡಿ. ಆದರೆ, ಅದರೊಂದಿಗೆ ಮುಂದಿನ ಬಾರಿ ಹೋದಾಗ ಫ್ಯಾನಿನ ವ್ಯವಸ್ಥೆಯೂ ಮಾಡಿಯಾಗಿತ್ತು! ಆದರೆ, ಈಗ ಮಾತ್ರ ಊಟ ಮಾಡುವಾಗ ಫ್ಯಾನ್ ಹಾಕಿದರೆ ನನಗೇ ಅದನ್ನು ಸಹಿಸಲಾಗುವುದಿಲ್ಲ. ಮಾಡಿಟ್ಟ ಅಡುಗೆಯೆಲ್ಲ ತಣ್ಣಗಾಗಿ, ತಣ್ಣನೆ ಉಣ್ಣುವುದರಲ್ಲಿ ಏನು ಮಜಾ ಎನಿಸುತ್ತದೆ, ಫ್ಯಾನ್ ಹಾಕಿದವರ ಮೇಲೆ ಸಿಟ್ಟೂ ಬರುತ್ತದೆ. ಅಂದು ಅಜ್ಜ – ಅಜ್ಜಿ ಅದೇ ಮಾತು ಹೇಳಿದ್ದಾಗ ಏನೋ ಒಂದು ರಾಗವೆಳೆದು ಅವರ ಮಾತನ್ನು ಅಲ್ಲಗಳೆದಿದ್ದೆ. ಅದೇನೋ ಹೇಳುತ್ತಾರಲ್ಲ? ಎಲ್ಲದಕ್ಕೂ ಕಾಲ ಕೂಡಿ ಬಂದು, ಅವರವರಿಗೇ ಅನುಭವದೊಂದಿಗೆ ಅರ್ಥವಾಗಬೇಕು ಎಂದು. ನನಗೂ ಹಾಗೆಯೆ ಆಯಿತೇನೋ?! ;))
ನಿಮ್ಮ ಊಟ ಪೇರಳೆಯೊಂದಿಗೆ ಕೊನೆಗೊಳ್ಳುತ್ತದೆಯೇ? ಇಲ್ಲ ಫ್ಯಾನ್ ಸ್ವಿಚ್ ಆಫ್ ಮಾಡುವುದರೊಂದಿಗೋ?
