ಶರನ್ನವರಾತ್ರಿ! ನಮ್ಮ ಮಂಗಳೂರಿನಲ್ಲಿ ಇದೊಂದು ಸಂಭ್ರಮ ಸಡಗರ ಬಲು ಖುಷಿಯ ಅತಿ ದೊಡ್ಡ ಹಬ್ಬ !

ಇಲ್ಲಿ ಖುಷಿಗೆ ಕಾರಣಗಳು ಒಂದೆರಡಲ್ಲ; ಹತ್ತು ಹಲವು. ಅದು ನಮ್ಮಲ್ಲಿ ನಡೆಯುವ ವಿಶೇಷ ದುರ್ಗಾರಾಧನೆಯೇ ಇರಬಹದು ಅಥವಾ ಹತ್ತು ಹಲವು ವಿಶೇಷ ಪೂಜೆ, ಪುನಸ್ಕಾರಗಳು, ಆಚರಣೆಗಳು, ಶಾರದಾ ಪೂಜೆ, ವಿದ್ಯಾರಂಭ, ಗುರು ವಂದನೆ, ಆಯುಧ ಪೂಜೆ, ನವರಾತ್ರಿ ವೇಷದ ಗೌಜಿ, ಹೀಗೆ ವಿವರಿಸಿ ಮುಗಿಯದ ಪಟ್ಟಿ! ಶಾಲೆಗೆ 10 ದಿನಗಳ ದಸರಾ ರಜೆ ಮಕ್ಕಳಿಗೆ ಇನ್ನೊಂದು ರೀತಿಯ ಸಂಭ್ರಮ! ಮೈಸೂರಿನ ದಸರಾ ಎಷ್ಟೊಂದು ಪ್ರಸಿದ್ಧಿಯೋ ಮಂಗಳೂರಿನಲ್ಲೂ ದಸರಾಕ್ಕೆ ಅದರದ್ದೇ ಆದ ವಿಶೇಷತೆಯಿದೆ, ಕಳೆಯಿದೆ. ಮಂಗಳಾದೇವಿ, ಕಟೀಲು ದುರ್ಗಾ ಪರಮೇಶ್ವರಿ ಹೀಗೆ ಹತ್ತು ಹಲವು ದೇವಿಯ ದೇವಸ್ಥಾನಗಳು, ಅಲ್ಲಿನ ವಿಶೇಷ ಆಚರಣೆಗಳೂ ಅವರದ್ದೇ ಮಹತ್ವ ಹೊಂದಿವೆ.

ಜಾಸ್ತಿ ಹೇಳುವ ಮನಸ್ಸಿಲ್ಲ. ಯಾಕೆಂದರೆ ಅರ್ಧಕ್ಕರ್ಧ ಭಾರತದ ಬೇರೆ ಬೇರೆ ಭಾಗಗಳಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿರುವ ಜನತೆ ನಮ್ಮಲ್ಲಿಗೆ ಬಂದು ಸಂತೆ ಸೃಷ್ಟಿ ಮಾಡಿ ಮೊದಲೇ ಕಿರಿಕಿರಿ ಮಾಡುತ್ತಿದ್ದಾರೆ. ಇನ್ನು ಜಾಸ್ತಿ ಹೇಳಿದಷ್ಟೂ ಜನಪ್ರಿಯತೆ ಹೆಚ್ಚಿ ಹುಚ್ಚು ಹೆಚ್ಚಾಗುವುದೂ ಬೇಡ, ನಾವು ನಮ್ಮ ಊರಿಗೆ ಹೋಗಲು ಹರ ಸಾಹಸಪಡುವುದೂ ಬೇಡ. ಈ ಓವರ್ ಟೂರಿಸಂ ಒಂದು ಶಾಪವೇ. ಎಲ್ಲರಿಗೂ ಮಂಗಳೂರು ಉಡುಪಿ ತಿರುಗುವ ಮರ್ಲು ಮಾರಾಯರೆ. ನಮ್ಮ ಕರ್ಮ! ಎಷ್ಟು ಅಭಿವೃದ್ಧಿ ಆಗುತ್ತದೆಯೋ ಅಷ್ಟೇ ಅಳಿವೂ, ಸಂಸ್ಕೃತಿ ಮತ್ತು ಪ್ರಕೃತಿ ನಾಶವೂ, ಪರಿಸರ ಅಸಮತೋಲನವೂ ಮತ್ತು ಕಿರಿಕಿರಿಯೂ ಈ ನಗರೀಕರಣ ಮತ್ತು ಪ್ರವಾಸಿಗರ ಕಾಟದಿಂದ ಆಗುತ್ತದೆ. ದಯವಿಟ್ಟು ಮಂಗಳೂರನ್ನು ಇನ್ನೊಂದು ಬೆಂಗಳೂರಾಗಿಸಬೇಡಿ!

ಈಗ ಮತ್ತೆ ನಮ್ಮೂರಿನ ನವರಾತ್ರಿಯ ಬಾಲ್ಯದ ಸವಿನೆನಪಿನತ್ತ ಹೋಗೋಣ. ನನಗಂತೂ ಈಗಲೂ ನವರಾತ್ರಿಯಷ್ಟು ಖುಷಿಯ ಸಮಯ ಮತ್ತೊಂದಿಲ್ಲ! ಅದು ದೇವಿಯ ಭಕ್ತಿಯ ಆರಾಧನೆಯಿಂದ ಸಿಗುವ ಮನಃ ಶಾಂತಿಯೇ ಇರಬಹುದು ಅಥವಾ ಊರಿನೆಲ್ಲೆಡೆಯ ಸಂಭ್ರಮ, ಆಚರಣೆಯ ರೀತಿ-ಪ್ರೀತಿಯೇ ಇರಬಹದು!

ನವರಾತ್ರಿಯ ವೇಷ:

ನವರಾತ್ರಿಯ ಮೊದಲ ೪-೫ ದಿನಗಳ ಕಾಲ ನಮ್ಮಲ್ಲಿ ಅಷ್ಟೇನೂ ಆಚರಣೆಗಳಿಲ್ಲದಿದ್ದರೂ, ಪಿಲಿ ವೇಷ ಮತ್ತು ಬೇರೆ ಬೇರೆ ರೀತಿಯ ವೇಷಗಳನ್ನು ನೋಡುವ ಕುತೂಹಲ ಮತ್ತು ವೇಷ ಹಾಕ್ಕೊಂಡು ತಿರುಗಾಡುವವರಿಗೆ ಅವರದ್ದೇ ಆದ ಒಂದು ಮೆರುಗು. ಈಗೆಲ್ಲ ಇವು ತುಂಬಾ ಕಮ್ಮಿಯಾಗಿದೆ. ಉಡುಪಿಯ ಪಿಲಿ ಕುಣಿತ ಮಾತ್ರ ಸಿನಿಮಾದ ಮೂಲಕ ಪ್ರಸಿದ್ಧಿ ಹೊಂದಿದೆ; ಆದರೆ ಅದನ್ನೂ ಇತ್ತೀಚೆಗೆ ವಿಚಿತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.!

ನಾನು ಪ್ರೌಢ ಶಾಲೆಗೆ ವಿಟ್ಲಕ್ಕೆ ಹೋಗಿ ಬಂದು ಮಾಡುತ್ತಿದ್ದಾಗ ನನಗೆ ಶನಿವಾರ ಅತಿಯಾದ ಪ್ರೀತಿಯ ದಿನ. ಏಕೆಂದರೆ ಆ ದಿನ ಮಧ್ಯಾಹ್ನ ನಾನು ಶಾಲೆ ಬಿಟ್ಟ ತಕ್ಷಣ ಎಂದಿನಂತೆ ರೈಟ್ ಪೋಯಿ ಬಸ್ಸಿನಲ್ಲಿ ನೇತುಕೊಂಡು ಹೋಗುತ್ತಿರಲಿಲ್ಲ; ಬದಲಿಗೆ ಅಂಗಡಿಗೆ ಬಂದು ತಾಸುಗಟ್ಟಲೆಯಾದರೂ ಸರಿ, ನನ್ನ ಪ್ರೀತಿಯ ದೊಡ್ಡಪ್ಪನೊಟ್ಟಿಗೆ ಕಾರಿನಲ್ಲಿ ಮನೆಗೆ ಹೋಗುವುದು! ನಿನಗೆ ತಡವಾಗುವುದಿದ್ದರೆ ನೀನು ಬೇಗ ಎಂದಿನಂತೆ ಹೋಗಿಬಿಡು ಎಂದರೂ ನಾನು ಅಲ್ಲಿಂದ ಕದಲುತ್ತಿದ್ದುದು ವಿರಳವೇ. ನನಗೆ ಅಲ್ಲಿಯೇ ಪ್ರತಾಪ್ ಸಿಂಹರ ಬೆತ್ತಲೆ ಜಗತ್ತು ಅಂಕಣ ಓದಿಕೊಂಡು ಟೈಮ್ ಪಾಸಾಗುತ್ತಿತ್ತು! ನಮ್ಮಲ್ಲಿ ಅಪ್ಪ, ದೊಡ್ಡಪ್ಪ ಹಾಗು ಚಿಕ್ಕಪ್ಪ ಇವರು ಯಾರೂ ಎದುರಿಂದ ಪ್ರೀತಿ ತೋರಿಸಿದ್ದಿಲ್ಲ. ಬಹುಷಃ ಹಾಗೆ ಮಾಡಿದರೆ ನಾವು ಅದರ ಪ್ರಯೋಜನ ಪಡೆದುಕೊಂಡು ಅವರಿಗ್ ಉಲ್ಟಾ ಉತ್ತರಿಸಿದರೆ ಎಂಬ ಭಯವೇನೋ ಅವರಿಗೆ! ಯಾವಾಗಲೂ ಅವರೆದ್ದಲ್ಲ ಸ್ಟ್ರಿಕ್ಟ್ ಮೋಡ್ ಆನ್! ಆದರೆ ಚಿಕ್ಕಪ್ಪನೊಂದಿಗೆ ನಮ್ಮ ಸಲಿಗೆ ಜಾಸ್ತಿಯೇ ಇತ್ತು ಬಿಡಿ! ದೊಡ್ಡಪ್ಪನಲ್ಲಿ ನನಗೆ ವಿಶೇಷ ಪ್ರೀತಿ. ಹಾಗಾಗಿ ಅವರೊಂದಿಗೆ ಕಾಲ ಕಳೆಯುವುದು ನನ್ನ ಇಷ್ಟದ ಟೈಮ್ ಪಾಸಿನಲ್ಲೊಂದಾಗಿತ್ತು! ನಾವೇನೂ ಮಾತನಾಡುತ್ತಿರಲಿಲ್ಲ! ನಾನಂತೂ ಮಿತಭಾಷಿ! ಹಾಗಾಗಿ ಬರೀ ಸೈಲೆಂಟ್ ಪಯಣದಲ್ಲೇ ಖುಷಿ ಅನುಭವಿಸುತ್ತಿದ್ದೆ! ನಾವು ಹೆಚ್ಚೆಂದರೆ “ಹೋಗೋಣವೇ?, ಗೇಟು ತೆಗೆ-ಹಾಕು, ಇಲ್ಲೇ ಊಟ ಮಾಡುತ್ತೆಯ? ಮನೆಗೆ ಹೋಗುತ್ತಿಯೋ?, ಟಾಟಾ” ಇಷ್ಟೇ ಮಾತಾಡುತ್ತಿದ್ದದ್ದು!

ದೊಡ್ಡಪ್ಪನೊಂದಿಗಿನ ಸವಾರಿ:

ಆದರೆ ಈ ನವರಾತ್ರಿಯ ಸಮಯದಲ್ಲಿ ದೊಡ್ಡಪ್ಪನೇ ಮಧ್ಯಾಹ್ನ ಹಾಗೂ ಸಂಜೆ ಬೇಗನೆ ಹೊರಡುತ್ತಿದ್ದರು. ಏಕೆಂದರೆ ಈ ವೇಷ ಹಾಕುವವರು ತುಂಬಾ ಕಾಟ ಕೊಟ್ಟು ದುಡ್ಡು ಕೇಳುತ್ತಾರೆ ಎಂದು! ಕೆಲವರಿಗೆ ಕೊಟ್ಟಷ್ಟೂ ಸಾಲುತ್ತಿರಲಿಲ್ಲ, ಪದೇ ಪದೇ ಬಂದು ಬೇರೆ ಬೇರೆಯವರ ಬಳಿ ದುಡ್ಡು ಪೀಕಿಸುತ್ತಿದ್ದರು. ಆದರೆ ಆಗಿನ ಕಾಲದಲ್ಲಿ ಅದೇ ಒಂದು ರೀತಿಯ ಖುಷಿ ನಮ್ಮೂರಿನಲ್ಲಿ. ಸಾಮಾನ್ಯವಾಗಿ ಎಲ್ಲ ವ್ಯಾಪಾರಸ್ಥರೂ ಖುಷಿಯಿಂದಲೇ ವೇಷ ಹಾಕಿದವರ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು ಮತ್ತು ಇಷ್ಟಪಟ್ಟು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಈಗ ಈ ವೇಷ ಎಂದು ಹೇಳಿದ್ದೂ ಒಂದು ದೊಡ್ಡ ಗದ್ದಲ ಎಬ್ಬಿಸಲೂ ಬಹುದು, ಅಷ್ಟು ವಿಚಿತ್ರವಾಗಿ ಬದಲಾಗಿದೆ ನಮ್ಮ ಸಮಾಜ. ಕೆಲವೊಂದು ಖುಷಿಗಳಿಗೆ ಬೇರೆಯದೇ ಬಣ್ಣವೆರಚಿ ಅದನ್ನು ತಿರುಚಿತ್ತವೆ ಈ ಸಾಮಾಜಿಕ ಜಾಲತಾಣಗಳು!

ಶಾಲೆಗೆ ರಜ ಆಗಿನ ಕಾಲದಲ್ಲಿ ಕೆಲವೊಮ್ಮೆ ೧೦ ದಿನ ಇರುತ್ತಿರಲಿಲ್ಲ ಆಯ್ತಾ, ಇವಳು ರಜೆ ಎಂದು ಹೇಳಿ ಮಧ್ಯೆ ಅದು ಹೇಗೆ ವೇಷ ನೋಡಿದ್ದು ಅಂತ ಕೇಳ್ಬೇಡಿ! ೨-೩ ದಿನ ಇರುತ್ತಿತ್ತಷ್ಟೇ ನಾನು ಹೈ ಸ್ಕೂಲಿನಲ್ಲಿದ್ದಾಗ! ಪ್ರೈಮರಿಯಲ್ಲಾದರೆ ಮಧ್ಯಾವಧಿ ಪರೀಕ್ಷೆ ಮುಗಿದ್ಕೂಡ್ಲೇ ಶಾರದಾ ಪೂಜೆ ಮಾಡಿಸಿ, ನಂತರ ಶಾಲೆ ಮಕ್ಕಳಿಗೆ ರಜೆ ಕೊಡುತ್ತಿದ್ದರು.! ಕೆಲವೊಮ್ಮೆ ರಜೆಯ ಮಧ್ಯೆ ಇಷ್ಟ ಇರುವವರು ಶಾರದಾ ಪೂಜೆಗೆ ಬನ್ನಿ ಎನ್ನುತ್ತಿದ್ದರು. ನಮ್ಮ ಶಾಲೆಯಲ್ಲಿ ಅದಕ್ಕೆ ಪೂರ್ತಿ ಹಾಜರಾತಿ ಇರುತ್ತಿತ್ತು. ಅದು ಬರಿ ಹಿಂದೂಗಳಲ್ಲ, ಎಲ್ಲ ಮತದವರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದರು. ಏಕೆಂದರೆ ನಮಗದು ವಿದ್ಯಾ ದೇವಿ ಸರಸ್ವತಿಯ ಆರಾಧನೆಯಾಗಿತ್ತು ಹಾಗೂ ಎಲ್ಲರೂ ಖುಷಿಯಿಂದ ಅದರಲ್ಲಿ ಒಂದಾಗಿ ಬೆರೆಯುತ್ತಿದ್ದರು! ಎಲ್ಲರೂ ಜೊತೆಯಲ್ಲಿ ಭಜನೆ ಹಾಡುಗಳನ್ನು ಹಾಡಿ, ಶಾರದಾ ದೇವಿಗೆ ನಮಿಸಿ, ಪ್ರಸಾದ ಸ್ವೀಕರಿಸಿ ಮನೆಗೆ ಮರಳುತ್ತಿದ್ದೆವು.

ಅಜ್ಜನ ಮನೆಯ ಸಂಭ್ರಮ:

ಇದರ ಮಧ್ಯೆ ಮಧ್ಯಾವಧಿ ರಜೆಗೆ ೨-೩ ದಿನ ಅಜ್ಜನ ಮನೆಗೆ ಹೋಗಿ ಬರುವ ಕಾರ್ಯಕ್ರಮವೂ ಇರುತ್ತಿತ್ತು ನಮ್ಮದು. ನಾನು ಬಹುಷಃ ೪-೫  ನೇ ತರಗತಿಯಲ್ಲಿದ್ದಾಗ ಅಮ್ಮ ನನಗೆ ಲಲಿತಾ ಸಹಸ್ರನಾಮ ಓದಬೇಕೆಂದು ತಾಕೀತು ಮಾಡಿದ್ದು. ಮೊದಲೇ ಮಾಡಿದ್ದರೂ ನಾನು ಬರೀ ಅವರು ಪಠಿಸುತ್ತಿದ್ದಾಗ ಕೇಳುತ್ತಿದ್ದೆನಷ್ಟೇ ಬಿಟ್ಟರೆ, ನಾನಾಗಿಯೇ ಕುಳಿತು ಧ್ಯಾನಿಸುತ್ತಿರಲಿಲ್ಲ. ಒಂದು ಬಾರಿ ಶುರು ಮಾಡಿದ ಮೇಲೆ ನಾನು ಅಲ್ಲಿಂದ ಹಿಂತಿರುಗಿ ನೋಡಿಲ್ಲ. ನನ್ನ ಮೊದಲ ಬಲ ಯಾವಾಗಲೂ ಲಲಿತಾದೇವಿ ಹಾಗೂ ಕಣ್ಣು ಮುಚ್ಚಿ ದುರ್ಗಾ ದೇವಿಯ ಭಕ್ತಿಯ ಆರಾಧನೆ.

ಇನ್ನೊಂದು ಮುಖ್ಯವಾದ ಪಾಠ ನಾನು ಕಲಿತದ್ದು ನನ್ನ ಅಜ್ಜಿಯಿಂದ! ಎಷ್ಟೇ ಸಿಟ್ಟು ಬಂದರೂ, ಕಿರಿಕಿರಿಯಾದರೂ ತಾಳ್ಮೆ ಕಳೆದುಕೊಳ್ಳದೇ ಕಣ್ಣುಮುಚ್ಚಿ ಸಹಸ್ರನಾಮ ಪಠಿಸು! ಯಾವತ್ತೂ ಯಾರೊಂದಿಗೂ ಸಿಟ್ಟು ಮಾಡಿಕೊಳ್ಳಬೇಡ! ಇದು ನಾನು ಕೆಲವೊಂದು ಘಟನೆಗಳ ಮಧ್ಯೆ ಅವರಿಂದ ನೋಡಿ ಕಲಿತದ್ದು, ಅವರು ಹೇಳಿದ್ದಲ್ಲ. ನಮ್ಮ ಬಾಲ್ಯದಲ್ಲಿರುವ ಸುತ್ತಲಿನ ಪರಿಸರ ಮತ್ತು ಜನರ ಸ್ವಭಾವ ತುಂಬಾ ಪರಿಣಾಮ ಬೀರುತ್ತದೆ! ಇದನ್ನು ನಾನು ಈಗಲೂ ಪಾಲಿಸುತ್ತೇನೆ. ಅದು ಕೊಡುವಷ್ಟು ನೆಮ್ಮದಿ ನಿಮಗೆ ಬೇರೆಲ್ಲೂ ಸಿಗದು!

ತಂಗಿಯೂ ಸಹಸ್ರನಾಮ ಪಠಣ ಮಾಡುವುದು ಕಲಿತ ಮೇಲೆ ನಾವು ಮತ್ತೆ ಸೌಂದರ್ಯ ಲಹರಿಯ ಕೆಲವು ಶ್ಲೋಕಗಳನ್ನು ಕಲಿತೆವು. ದೇವಿಯ ಭಜನೆ ಹಾಡುಗಳನ್ನು ಖುಷಿಯಿಂದ ಹಾಡುವುದನ್ನು ಕಲಿತೆವು. ದೇವಿ ಕ್ಷಮಾಪಣಾ ಸ್ತೋತ್ರವನ್ನು ಕಲಿತೆವು. ಇದೆಲ್ಲವೂ ನಮಗೆ ಒಂದು ರೀತಿಯ ನೆಮ್ಮದಿಯ ತಾಣ. ತುಂಬಾ ಸಣ್ಣವರಿದ್ದಾಗ ಅಜ್ಜನ ಮನೆಯಲ್ಲಿ ದುರ್ಗಾ ಪೂಜೆಗೆ ಅಜ್ಜಿ ಮಾಡುವ ಚಿತ್ರಾನ್ನ ಪ್ರಸಾದದ ಸವಿಗೆ ಕಾಯುತ್ತಿದ್ದೆವು. ಅಜ್ಜಿಯ ಈ ಕೈರುಚಿ ಅದು ಒಂದು ರೀತಿ ದೇವಿ ಕೃಪೆ. ಅದು ದುರ್ಗಾ ಪೂಜೆಗೆ ಮಾಡುವ ಪ್ರಸಾದಕ್ಕೆ ಹಾಗೂ ಅಜ್ಜಿ ಮಾಡಿದರೆ ಮಾತ್ರ ಆ ರುಚಿ! ಮತ್ತೆ ನಾವೆಲ್ಲ ಸ್ವಲ್ಪ ದೊಡ್ಡವರಾದ ಮೇಲೆ ಲಲಿತ ಸಹಸ್ರನಾಮ ಪಠಣೆ ಹಾಗೂ ಭವತಾರಿಣಿ ಸ್ತೋತ್ರ ಹೇಳುವುದು ಕಡ್ಡಾಯವಾಯಿತು ನೋಡಿ ಅಜ್ಜಿ ಮನೆ ಭೇಟಿಯಲ್ಲೂ! ಈಗ ನನಗೆ ಭವತಾರಿಣಿ ಸ್ತೋತ್ರ ಮಾತ್ರ ಅಷ್ಟಾಗಿ ನೆನಪಿಲ್ಲ!

ಅಜ್ಜನ ಮನೆಯಲ್ಲೂ, ನಮ್ಮಲ್ಲೂ ಪುಸ್ತಕ ಪೂಜೆಗಿಡುವುದು ಇನ್ನೊಂದು ಆಚರಣೆ. ಇದು ಬಹುತೇಕ ಎಲ್ಲಾ ಕಡೆ ಇಂದಿಗೂ ಇರುವ ಆಚರಣೆ! ಶಾರದಾ ಪೂಜೆಯ ದಿನ ಅದರಲ್ಲಿ ೧-೨ ಪುಟಗಳಾದರೂ ಕಡ್ಡಾಯವಾಗಿ ಓದಿ ನಮಿಸಬೇಕಿತ್ತು. ಹಿರಿಯರು ಭಗವದ್ಗೀತೆ, ಮತ್ತಿತರ ಪುರಾಣಗಳನ್ನು ಓದುತ್ತಿದ್ದರು. ನಾವು ಮಾತ್ರ ಈ ಪರೀಕ್ಷೆ ಮುಗಿದು ರಜೆ ಇರುವಾಗ ಇವರದ್ದೆಂತ ಉಪಟಳವೆಂದು ರಪಕ್ಕೆಂದು ನಮ್ಮ ಓದಿನ ೧-೨ ಪಠ್ಯ ಪುಸ್ತಕಗಳನ್ನಿಟ್ಟು ಓದಿದ ಶಾಸ್ತ್ರ ಮಾಡಿ, ಆಡಲು ಓಡುತ್ತಿದ್ದೆವು!

ನಂತರ ಆಯುಧ ಪೂಜೆ, ಅಂಗಡಿ ಪೂಜೆ! ಆಗಿನ ಕಾಲದಲ್ಲಿ ನಮ್ಮಲ್ಲಿ ಭತ್ತ ಬೆಳೆತ್ತಿದ್ದೆವು. ಅದರ ಕೊಯ್ಲು ಮಾಡಿ ತರಲು ಅಪ್ಪ ಟಿಲ್ಲರ್ ಉಪಯೋಗಿಸುತ್ತಿದ್ದರು. ಅದರೊಂದಿಗೆ ಮನೆಯಲ್ಲಿದ್ಧ ಬೇರೆ ಉಪಕರಣಗಳು, ಗಾಡಿಗಳು, ಆಯುಧ, ಅಜ್ಜನ ಬಂದೂಕು, ಇತ್ಯಾದಿ ಇತ್ಯಾದಿ. ಹೆಚ್ಚಾಗಿ ಇದೆಲ್ಲ ದೀಪಾವಳಿ ಅಥವಾ ತುಳಸೀ ಪೂಜೆಯಂದು ಒಟ್ಟಿಗೆ ಮಾಡುತ್ತಿದ್ದರು.

ವಿದ್ಯಾ ದಶಮಿ / ವಿಜಯ ದಶಮಿ:

ನವರಾತ್ರಿಯ ಕೊನೆಯ ದಿನ ಗುರು ವಂದನೆ, ವಿದ್ಯಾರಂಭ, ಹೊಸ್ತು ನಮಗೆ. ಶಾಸ್ತ್ರೀಯವಾಗಿ ಸಂಗೀತ, ನೃತ್ಯ ಕಲಿಯುವವರು ಅಥವಾ ಕಲಾರಾಧಕರು ತಮ್ಮ ಗುರುಗಳಿಗೆ ಕಾಣಿಕೆ ಸಲ್ಲಿಸಿ ವಂದಿಸುತ್ತಿದ್ದರು. ಹಾಗೆಯೇ ಅಪ್ಪನ ಕೈಯ್ಯಲ್ಲಿ ಮನೆಯಲ್ಲೇ ಬೆಳೆದ ಅಕ್ಕಿಯಲ್ಲಿ ಬರೆದು ಮಾಡಿಸಿಕೊಂಡ ಮೊದಲ ಅಕ್ಷರಾಭ್ಯಾಸ. ಈ ಹೊಸ್ತಿನ ದಿನ ಮನೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಪೂಜೆ ಮಾಡಿ ಮನೆಗೆ ಕಟ್ಟುವುದು, ಕೆಸುವಿನೆಲೆಯ ಮೆಣಸು ಬೆಂದಿ, ಹೊಸ್ತಿಲಿಗೆ ಹೊಸ ರಂಗೋಲಿ ಹಾಗೂ ಹುಲ್ಲಿನ ಮಧ್ಯೆ ಬೆಳೆಯುವ ಪೊಲಿ ಬಳ್ಳಿಯನ್ನು ಕಟ್ಟಿ ಮಾಡಿದ ಅನ್ನ  ಹಾಗೂ ಅಕ್ಕಿ ಅಥವಾ ಹಾಲಿಟ್ಟು ಪಾಯಸದ ಸವಿ ! ಆ ನೆನಪುಗಳೇ ಎಂಥ ಗಮ್ಮತ್ತು! ಬರೆದಷ್ಟೂ ಮುಗಿಯದು ಇಂದಿಗೂ ನವರಾತ್ರಿಯ ಕಥೆಗಳು ಹಾಗೂ ಆಚರಣೆಗಳು. ಎಲ್ಲರಿಗೂ ನವರಾತ್ರಿಯ ಶುಭಾಶಯಗಳು!

 

Navaratri-DurgaPooja

Navaratri-DurgaPooja

 

Navaratri-DurgaPooja

 

 

Navaratri-DurgaPooja

 

Happiness-Navaratri-Good-Over-Evil