Heritage City Mysore

ಸಾಂಸ್ಕೃತಿಕ ನಗರಿ ಮೈಸೂರಿನ ಸುತ್ತೊಂದು ಮಾತುಕಥೆ ……..

 

ಮೈಸೂರು…..! ಹೆಸರು ಕೇಳಿದ ತಕ್ಷಣವೇ ನಾನಂತೂ ಇಲ್ಲಿಗೆ ಹೋಗಲು ತುದಿಗಾಲಲ್ಲಿ ತಯಾರಿರುತ್ತೇನೆ. ಹತ್ತು ಹಲವಾರು ಬಾರಿ ಭೇಟಿ ನೀಡಿದರೂ ಪ್ರತಿ ಬಾರಿಯೂ ಅಲ್ಲೇನೋ ಹೊಸ ಅನುಭವ. ಒಂದು ರೀತಿಯ ಹೊಸ ಸೆಳೆತ. ನಾನು ಯಾವಾಗಲೇ ಆದರೂ,  ಎಲ್ಲಿಗೇ ಪ್ರವಾಸ ಹೋಗುವುದೋ ಅಥವಾ ಸುಮ್ಮನೇ ಸಮಯ ಕಳೆಯಲು ಹೋಗಿ ಬರಲಾದರೂ ಆರಿಸುವುದು ಬಹುಷಃ ಇದೇ ಮೈಸೂರನ್ನು.

ಆ ಊರಿನ ಸೆಳೆತವೇ ಅಂತದ್ದು. ಯಾವುದೇ ಪಕ್ಕಾ ಯೋಜನೆ ಯಾ ಯೋಚನೆಯಿಲ್ಲದೆ ನಿಮ್ಮದೇ ಲೋಕದಲ್ಲಿ ವಿಹರಿಸುತ್ತ ಸ್ವಚ್ಛಂದವಾಗಿ ನಿಮ್ಮ ಪಾಡಿಗೆ ಊರಿನ ಸೌಂದರ್ಯ ಆಸ್ವಾದಿಸುತ್ತಾ ಕಾಲ ಕಳೆದೇ ಹೋಗಿಬಿಡುತ್ತದಿಲ್ಲಿ ! ಅದು ಮೈಸೂರಿನ ಅರಮನೆಯೇ ಇರಲಿ, ದೇವರಾಜ ಅರಸು ರಸ್ತೆಯೇ ಇರಲಿ, ಇಲ್ಲಾ ಕುಕ್ಕರಹಳ್ಳಿ ಕೆರೆಯಾಗಲಿ. ಪ್ರತಿ ಬಾರಿಯೂ ಏನೋ ಒಂದು ಹೊಸ ಸೆಳೆತ.

ಅರಮನೆಯ ವೈಭವ (Mysore Palace)

ಮೊನ್ನೆ ಅಕ್ಟೋಬರಿನಲ್ಲಿ ಅಲ್ಲಿಗೆ ಮತ್ತೆ ಭೇಟಿ ನೀಡಬೇಕೆಂದೆನಿಸಿ ಹೊರಟು ನಿಂತಿದ್ದಾಯಿತು. ದಸರ ಸಮಯದಲ್ಲಿ ಕಾಲಿಡಲೂ ಸಾಧ್ಯವಿಲ್ಲದಷ್ಟು ಕಿರಿಕಿರಿ ಜನ ಸಂದಣಿಯಿರುತ್ತದೆಂದು, ಅದು ಕಳೆದು ಒಂದು ವಾರದ ನಂತರದ ವಾರಾಂತ್ಯದಲ್ಲಿ ಹೋಗಿ ಬರುವುದೆಂದು ಹೊರಟಾಯ್ತು. ಆದರೆ ಅರಮನೆಯ ಆ ವೈಭವವನ್ನೂ , ವಾಸ್ತುಶಿಲ್ಪವನ್ನೂ, ಇತಿಹಾಸವನ್ನೂ ಮನದಣಿಯೆ ಮತ್ತೆಅನುಭವಿಸಬೇಕೆಂದವಳಿಗೆ ಅಲ್ಲಿಗೆ ಕೇರಳದಿಂದ ಬಂದಿದ್ದ ಕಾಲೇಜು ಪ್ರವಾಸಿ ತಂಡಗಳ ಕಿಕ್ಕಿರಿದ ಸಂದಣಿ ಮತ್ತು ಚಿರಿಪಿರಿ ಮಾತುಗಳು ತಡೆಯೊಡ್ಡಿದವು. ಇದನ್ನು ಇತ್ತೀಚೆಗೆ ಎಲ್ಲರೂ ಹೇಳುತ್ತಲೇ ಇದ್ದಾರೆ – “ನಮ್ಮಲ್ಲಿ ನಾಗರಿಕ ಪ್ರಜ್ಞೆ ತುಂಬಾ ಕಡಿಮೆ, ಸಾರ್ವಜನಿಕ ಸ್ಥಳ ಅಥವಾ ಪ್ರವಾಸಿ ತಾಣಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪ್ರಜ್ಞೆ ಕೆಲವರಿಗಂತೂ ಇಲ್ಲವೇ ಇಲ್ಲ” ಎಂದು. ಅದು ಅಲ್ಲಿನ ಆ ವಿದ್ಯಾರ್ಥಿಗಳ ವರ್ತನೆಯಿಂದ ನಿಜವೆನಿಸಿತು. ಸಿಟ್ಟು , ಅಸಹನೆಯೂ ತುಂಬಿ ಬಂತು. ಆದರೆ ಆ ಸಾಂಸ್ಕೃತಿಕ ನಗರಿಯಲ್ಲಿ, ಅಲ್ಲಿ ನಿಂತು ಇವರಿಗೆ ಹೇಳುತ್ತಾ ಕೂರುವುದಕ್ಕಿಂತ ನಾವೇ ಎದ್ದು ಹೊರಬರುವುದು ವಾಸಿಯೆನಿಸಿ, ಎದ್ದು ನಡೆದೆವು!

ಆದರೂ ಅರಮನೆಯ ವೈಭವ ಮತ್ತು ಪ್ರತಿ ಕೆತ್ತನೆಯಲ್ಲೂ, ಕಲಾಕೃತಿಯಲ್ಲೂ ಇರುವ ಕಲಾತ್ಮಕತೆ ಮತ್ತು ಭಾವಗಳು ನಮ್ಮನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ನನಗೆ ಹಿಂದೊಮ್ಮೆ ಅಮೆರಿಕಾದ ಫ್ಲೋರಿಡಾದಲ್ಲಿ ಇರುವ ಡಿಸ್ನೀಯವರ ಪ್ರತಿ ಥೀಮ್ ಪಾರ್ಕ್ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆಗ ಅಲ್ಲಿಯ ಕೆಲವು ನಾಗರಿಕರು ಅವರ ಅಲ್ಲಿನ ರೆಸಾರ್ಟ್ಗಳ ವೈಭವೋಪೇತ ಕಲಾಕೃತಿಯನ್ನು ತೋರಿಸಿ ಅದ್ಭುತವೆಂಬಂತೆ ವಿವರಿಸುತ್ತಿದ್ದರೆ; ನನಗೆ ನಮ್ಮ ಮೈಸೂರಿನ ಅರಮನೆ, ಜಯಪುರ, ಜೈಸಲ್ಮೇರಿನ ಅರಮನೆಗಳ ನೆನಪು ಒತ್ತರಿಸಿ ಬರುತ್ತಿತ್ತು. ಅಲ್ಲಿನ ರೆಸಾರ್ಟುಗಳ ಕೆತ್ತನೆಗಳು, ಕಲಾಕೃತಿಯೂ ಅದ್ಭುತವಾಗಿಯೂ, ವೈಭವೋಪೇತವಾಗಿಯೂ ಇದ್ದವು. ಅದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹ ಸಂಸ್ಕೃತಿ, ಕಲಾತ್ಮಕತೆಯನ್ನು ಹತ್ತಿರದಿಂದ ನೋಡಿ ಅನುಭವಿಸಿದ ಮತ್ತು ಇದರ ಮೇಲೆ ಅಪಾರ ಗೌರವವಿರುವ ನನ್ನಂತಹವರಿಗೆ ಯಾವಾಗಲೂ ನಮ್ಮ ಮೈಸೂರಿನ ಕಲಾತ್ಮಕತೆಯೇ ಅದಕ್ಕಿಂತ ಅದ್ಭುತವೆನಿಸುವುದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಎಲ್ಲರಿಗೂ ಇದರ ಬೆಲೆಯ ಅರಿವಿಲ್ಲ ಬಿಡಿ.

ಮೈಸೂರಿನ ಅರಮನೆಯನ್ನು ನೀವೇ ಹೋಗಿ ಕಣ್ಣು ತುಂಬಿಕೊಳ್ಳಿ. ಹಾಗಾಗಿ ರಾತ್ರಿಯ ವಿಶೇಷ ದೀಪಾಲಂಕಾರದ ಚಿತ್ರಪಟ ಮಾತ್ರ ಇಲ್ಲಿ ಹಾಕುತ್ತಿದ್ದೇನೆ! ಹಾಗೆಯೇ ಇನ್ನೊಂದು ಛಾಯಾಚಿತ್ರ ಡಿಸ್ನೀಯ ಎನಿಮಲ್ ಕಿಂಗ್ಡೊಮಿನ ಪಕ್ಕದಲ್ಲಿರುವ ಗ್ರಾಂಡ್ ಫ್ಲೋರಿಡನ್ ರೆಸಾರ್ಟಿನ ಭೇಟಿಯದ್ದು! (Grand Floridian Resort – Disneyland – Animal Kingdom, Florida, USA)

Mysore Palace

ಅರಮನೆಯ ವೈಭವ – ಮೈಸೂರು

 

DisneyGarndFloridanResort

ಡಿಸ್ನೀ ರೆಸಾರ್ಟ್ಸ್

ಆರ್ ಕೆ ನಾರಾಯಣ ಮನೆ (R K Narayan House)

ನಂತರ ನಮ್ಮ ಸವಾರಿ ಹೊರಟಿದ್ದು ಯಾದವಗಿರಿಯಲ್ಲಿರುವ ಆರ್ ಕೆ ನಾರಾಯಣ ಅವರ ಮನೆಗೆ. ನೀವು ಸಾಹಿತ್ಯ ಪ್ರಿಯರಾದರೆ ಒಂದು ಬಾರಿಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು. ಅವರ ಮಾತು ಕೃತಿ, ಜೀವನದ ಪ್ರಮುಖ ಘಟನಾವಳಿಗಳನ್ನು ಇಲ್ಲಿ ಜೋಪಾನವಾಗಿ ಸಂರಕ್ಷಿಸಿಡಲಾಗಿದೆ. ಆದರೆ ಅವರ ಕೃತಿಗಳು ಅಲ್ಲಿ ಲಭ್ಯವಿಲ್ಲದ್ದು ಸ್ವಲ್ಪ ಬೇಸರದ ಸಂಗತಿ. ಅವರ ಮಾತುಗಳನ್ನು ಅಲ್ಲೇ ಹೋಗಿ ನೋಡಿದರೆ ಚೆಂದ. ಆದರೂ ಕೆಲವು ಇಲ್ಲಿ ಪ್ರಸ್ತುತ ಪಡಿಸುತ್ತಿದೇನೆ ನೋಡಿ. ಆ ಕಾಲಕ್ಕೇ ಎಂತಹ ಅದ್ಭುತ ಯೋಚನೆಗಳು ಆ ಮಹಾನುಭಾವನದ್ದು. ಅದಕ್ಕೇ ಹೇಳುವುದಿರಬೇಕು ಸಾಹಿತ್ಯ ಯಾವಾಗಲೂ ಪ್ರಸ್ತುತವೆಂದು!

 

RK Narayan

RK Narayan

RK Narayan

RK Narayan

 

ಕುಕ್ಕರಹಳ್ಳಿ ಕೆರೆ – ಪಯಣದ ಮುಕ್ತಾಯ (Kukkarahalli Lake)

ಮತ್ತೆ ಮೈಸೂರಿನ ಬೇರೆ ಬೇರೆ ಭಾಗಗಳಲ್ಲಿ ಸುತ್ತಾಡಿ, ಕೊನೆಗೆ ಮರುದಿನ ಮನದಣಿಯೆ ಕುಕ್ಕರಹಳ್ಳಿ ಕೆರೆಯ ತಟದಲ್ಲಿ ಮುಂಜಾವಿನ ನಡಿಗೆ ಮುಗಿಸಿ ಬೆಂಗಳೂರಿಗೆ ಹೊರಟು ನಿಂತಾಗ ಮನದಲ್ಲಿದ್ದದ್ದು ಒಂದೇ – “ಮತ್ತೆ ಯಾವಾಗ ಮೈಸೂರಿನ ಭೇಟಿ? ಮತ್ತೆ ಯಾವಾಗ ಅರಸು ರಸ್ತೆಯಲ್ಲಿ ಸುಮ್ಮನೆ ಸುತ್ತಾಡಿ ಮನ ಹಗುರ ಮಾಡಿಕೊಳ್ಳುವುದು?!”. ಇಲ್ಲಿಗೂ ಈಗ ನಗರೀಕರಣದ ಬಿಸಿ ತಟ್ಟುತ್ತಿರುವುದು, ಕಂಡ ಕಂಡಲ್ಲಿ ಕಸದ ರಾಶಿ, ಪ್ರವಾಸಿಗರ ಬೇಜವಾಬ್ದಾರಿಯುತ ವರ್ತನೆ, ಮುಗಿಲೆತ್ತರಕ್ಕೆ ತಲೆಯೆತ್ತಿ ನಿಲ್ಲುತ್ತಿರುವ ಕಟ್ಟಡಗಳು ಮೈಸೂರನ್ನು ಮೈಸೂರಾಗಿಯೇ ಇರಲು ಬಿಡುವುದೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು!

ಆದರೂ ಮೈಸೂರನ್ನು ಇನ್ನೂ ಚೆನ್ನಾಗಿ, ಅಧ್ಭುತವಾಗಿ ವಿವರಿಸಲು ಸಾಧ್ಯವಾಗಿಲ್ಲ ಇಲ್ಲಿ ಎನಿಸುತ್ತಿದೆ. ಅದನ್ನು ಬಹುಷಃ ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಅನುಭವಿಸಿಯೇ ಆನಂದಿಸಬೇಕು. ಎಷ್ಟು ಬರೆದರೂ, ಹೇಳಿದರೂ ಅದು ಕಡಿಮೆಯೇ!

Culture and Beauty of Indian Palaces & Places