ಆಟೋದವನಿಗೆ ವಿಳಾಸ ಹೇಳಿ, ಸಾರಿಕಾ ಸಂದರ್ಶನದ ಸ್ಥಳ ತಲುಪಿದಾಗ ಅದಾಗಲೇ ಸಮಯ ೧೦ ಕಳೆದಿತ್ತು. ಸಂದರ್ಶನಕ್ಕೆ ರಿಪೋರ್ಟಿಂಗ್ ಟೈಮ್ ೯:೩೦ ಎಂದಿತ್ತು ಪತ್ರದಲ್ಲಿ. ಎಷ್ಟಾದರೂ ಇದು ಭಾರತ. ಇಲ್ಲಿ ಅದೂ – ಇದೂ ನೆಪ ಹೇಳಿಯಾದರೂ ಸಮಯಕ್ಕೆ ಸರಿಯಾಗಿ ತಲುಪದೇ ಇದ್ದರೂ ಮುಂದಿನದು ಹೇಗೋ ನಡೆಯುತ್ತದೆಂಬ ಭಂಡ ಧೈರ್ಯದಿಂದ, ಆಟೋ ಬಾಡಿಗೆ ಕೊಟ್ಟು ಕಳುಹಿಸಿ, ಆತ್ಮವಿಶ್ವಾಸದಿಂದ ಒಳಗಡಿಯಿಟ್ಟಳು.
ಆಚೀಚೆ ನೋಡಿದವಳೇ ಅಲ್ಲೇ ಕಾಣಿಸಿಕೊಂಡ ಸ್ವಾಗತಕಾರಿಣಿ ಬಳಿ ವಿವರ ಹೇಳಿದಳು. ಅವಳು ಅಲ್ಲೇ ಎದುರಿಗೆ ಕಾಣಿಸುತ್ತಿದ್ದ ಕಾನ್ಫರೆನ್ಸ್ ರೂಮ್ ತೋರಿಸಿ, ಅಲ್ಲೇ ನಡೆಯುವುದು ಸಂದರ್ಶನ. ಇನ್ನೇನು ಶುರುವಾಗುವುದು, ಒಳಗಡೆ ಕರೆದಾಗ ಹೋಗಿ, ಈಗ ಅಲ್ಲೇ ಎದುರಿಗಿದ್ದ ಸೋಫಾದಲ್ಲಿ ಕುಳಿತುಕೊಳ್ಳಿ ಎಂದಳವಳು.
ಸೋಫಾದಲ್ಲಿ ಕುಳಿತು ಸುತ್ತಲೂ ಕಣ್ಣು ಹಾಯಿಸಿದಳು ಸಾರಿಕಾ. ತನ್ನನ್ನೂ ಸೇರಿಸಿ ಸಂದರ್ಶನಕ್ಕೆ ಬಂದಿರುವುದೇ ೪ ಜನ! ಈಗೆಲ್ಲ ಜನರಿಗೆ ಕೆಲಸ ಮಾಡಲು ಮನಸ್ಸಿಲ್ಲವಾ ಅಥವಾ ಈ ಕೆಲಸದಲ್ಲಿ ಏನಾದರೂ ತೊಂದರೆಯಿದೆಯೇ? ಏನು ಕಥೆಯಪ್ಪಾ?, ಎಂದು ಯೋಚನೆಗೆ ಒಳಗಾದಳು. ಒಂದು ರೀತಿ ಸಣ್ಣ ಭಯವೂ ಆವರಿಸಿಕೊಂಡಿತು. ತಕ್ಷಣವೇ ಸುಧಾರಿಸಿಕೊಂಡಳು. ಹೀಗೆಲ್ಲ ಧೈರ್ಯ ಕಳೆದುಕೊಂಡರೆ ಸಂದರ್ಶನ ಎದುರಿಸಲು ಕಷ್ಟವಾಗುತ್ತದೆ. ತನಗೆ ಈ ಕೆಲಸ ಸಿಕ್ಕಿದರೆ ತಕ್ಕ ಮಟ್ಟಿಗೆ ನಿಭಾಯಿಸುವ ಛಾತಿಯಿದೆ. ಯಾವ ಕಾರಣಕ್ಕೂ ತಾನು ಎದೆಗುಂದಬಾರದೆಂದು ಸ್ವಲ್ಪ ನೀರು ಕುಡಿದು ಮೊಬೈಲ್ ನೋಡುತ್ತಾ ಕುಳಿತಳು ತನ್ನ ಸರದಿಗೆ ಕಾಯುತ್ತ.
*******
ರಜತ್ ಆಫೀಸ್ ಒಳಗಡಿಯಿಡುವುದನ್ನು ಕಂಡ ಕೂಡಲೇ ಎಲ್ಲರೂ ತಮ್ಮ – ತಮ್ಮ ಡೆಸ್ಕಿನಲ್ಲಿ ತಮ್ಮ ಕಾರ್ಯದಲ್ಲಿ ತುಂಬಾ ಸೀರಿಯಸ್ ಆಗಿ ಮಗ್ನರಾದಂತೆ ತೋರಿದರು. ಅವನು ಈ ಆಫೀಸಿಗೆ ಬರಲು ಶುರು ಮಾಡಿ ೩ ತಿಂಗಳಷ್ಟೇ ಆಗಿದ್ದರೂ, ಎಲ್ಲರಿಗೂ ಅವನ ಸ್ವಭಾವದ ಪರಿಚಯವಾಗಿತ್ತು. ಅವನು ಬರಲಾರಂಭಿಸಿದ ನಂತರ ರಾಘವ್ ತಾವು ಬರುವುದನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದರು. ಸಂಪೂರ್ಣವಲ್ಲದಿದ್ದರೂ, ತಕ್ಕಮಟ್ಟಿನ ಸ್ವಾತಂತ್ರ್ಯ ಅವನಿಗೂ ಅಗತ್ಯವೆಂದು ಈ ನಿಯಮವಿಟ್ಟುಕೊಂಡಿದ್ದರು. ರಜತ್ ಬಂದ ಹೊಸದರಲ್ಲೇ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದನು ಆಫೀಸಿನಲ್ಲಿ ಮತ್ತು ಅದರ ಕಾರ್ಯ – ವೈಖರಿಗಳಲ್ಲಿ.
ತನಗಾಗಿ ಸಪರೇಟ್ ಕ್ಯಾಬಿನ್ ಅಗತ್ಯವಿಲ್ಲ. ವಿದೇಶಗಳಂತೆ ಅಥವಾ ಕಾರ್ಪೊರೇಟ್ ಸಂಸ್ಕೃತಿಯಂತೆ ಓಪನ್ ಡೆಸ್ಕ್ ಕಾನ್ಸೆಪ್ಟ್ ಅಳವಡಿಸ್ಕೊಂಡಿದ್ದ. ರಾಘವ್ ಮಾತ್ರ ತಮ್ಮ ಕ್ಯಾಬಿನ್ ಹಾಗೆಯೇ ಇರಲಿ ಎಂದಾಗ ಮರುಮಾತನಾಡದೇ ಒಪ್ಪಿಕೊಂಡಿದ್ದನು. ಅವರಿಗೆ ಇದಕ್ಕೆಲ್ಲ ಹೊಂದಿಕೊಳ್ಳಲು ವಯಸ್ಸಿನ ಅಂತರವಿರುವುದರಿಂದ ಸಮಯದ ಅವಶ್ಯಕತೆಯಿದೆಯೆಂದು ಸುಮ್ಮನಾಗಿದ್ದನು.
ತನ್ನ ಡೆಸ್ಕಿನಲ್ಲಿ ಕುಳಿತವನೇ ಆ ದಿನದ ತನ್ನ ದಿನಚರಿಯನ್ನು ಒಂದು ಬಾರಿ ನೋಡಿಕೊಂಡು, ಲ್ಯಾಪ್ಟಾಪಿನಲ್ಲಿ ತನ್ನ ಕಾರ್ಯದಲ್ಲಿ ಮಗ್ನನಾದನು. ಅವನಿಗೆ ಯಾವ ಪಿ.ಎ.ಯ ಅಗತ್ಯವೂ ಇರಲಿಲ್ಲ. ತನ್ನ ಕೆಲಸಗಳನ್ನು ತಾನೇ ಮಾಡಿಕೊಂಡಷ್ಟು ಒಳ್ಳೆಯದೆಂಬ ಭಾವ ಅವನದು. ಹಾಗಾಗಿ ಅವನ ಮೀಟಿಂಗುಗಳು, ಅವನ ಟ್ರಿಪ್ಗಳು ಇದ್ಯಾವುದರ ಬಗ್ಗೆಯೂ ಬೇರೆಯವರಿಗೆ ಅಗತ್ಯವಿದ್ದಾಗ ಮಾತ್ರವೇ ಮಾಹಿತಿಯಿರುತ್ತಿತ್ತಷ್ಟೇ.
ರಾಘವ್ದಾದರೆ ಹಾಗಲ್ಲ . ಅವರಿಗೆ ಅವರ ಕಾರ್ಯದರ್ಶಿ ಎಲ್ಲ ವಿವರಗಳನ್ನೂ ನೋಡಿಕೊಂಡು ಉಸ್ತುವಾರಿ ಮಾಡುತ್ತಿದ್ದರು. ಹೀಗಾಗಿ ಅವರ ಪ್ರತಿ ಚಲನವಲನದ ಮಾಹಿತಿ ಆಫೀಸಿನಲ್ಲಿ ಪ್ರತಿಯೊಬ್ಬರಿಗೂ ಇರುತ್ತಿತ್ತು. ತಮ್ಮ ಕೆಲಸಗಳ ಮಧ್ಯೆ ಕೆಲವರು ಅವರಿಲ್ಲದಾಗ, ಪರ್ಸನಲ್ ಕೆಲಸಗಳನ್ನೂ ಮುಗಿಸಿಕೊಳ್ಳುತ್ತಿದ್ದರು.
ರಜತ್ ಬಂದ ಮೇಲೆ ಇವೆಲ್ಲದಕ್ಕೂ ಕಡಿವಾಣ ಬಿದ್ದದ್ದು ಅವರಿಗೆಲ್ಲ ನುಂಗಲಾರದ ತುತ್ತಾಗಿತ್ತು. ಆದರೂ ಅನಿವಾರ್ಯತೆಯಿಂದ ಹೊಂದಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದರು ಪ್ರತಿಯೊಬ್ಬರು. ಇದಕ್ಕೆ ಕಾರಣ, ಬಂದು ೨ ತಿಂಗಳಲ್ಲಿ ಮಾರ್ಕೆಟ್ ಸ್ಟ್ಯಾಂಡರ್ಡ್ ಪ್ರಕಾರ; ರಜತ್ ಪ್ರತಿಯೊಬ್ಬರ ಅರ್ಹತೆಗೆ ಅನುಗುಣವಾಗಿ ಸಂಬಳ ಹೆಚ್ಚು ಮಾಡಿದ್ದನು!
******
ತನ್ನ ಸರದಿ ಬಂದಾಗ ಆತ್ಮವಿಶ್ವಾಸದಿಂದ ಒಳನಡೆದಳು ಸಾರಿಕಾ. ಸಂದರ್ಶನಕಾರರಾಗಿ ಸುಮಾರು ೪೦-೪೫ ಪ್ರಾಯದ ಸೂಟು – ಬೂಟು ತೊಟ್ಟ ವ್ಯಕ್ತಿಯೊಬ್ಬರು ಕುಳಿತಿದ್ದರು. ಅವರನ್ನು ನೋಡಿದ್ದೇ ತಡ, ಸಾರಿಕಾಗೆ ತನ್ನ ಸಾಧಾರಣ ಚೂಡಿದಾರ್ ಮತ್ತು ಹಳೆ ವ್ಯಾನಿಟಿ ಬ್ಯಾಗ್ ನೋಡಿ ಇವರು ಇನ್ನು ಏನನ್ನುತ್ತಾರೋ ಎಂದೆನಿಸಿದರೂ, ನಗುಮುಖದಿಂದಲೇ ವಿಷ್ ಮಾಡಿದಳು. ಅವರು ತೋರಿಸಿದ ಖುರ್ಚಿಯಲ್ಲಿ ಕುಳಿತುಕೊಂಡು ತನ್ನ ಬೈಯೋಡಾಟಾ ಅವರ ಕೈಗಿತ್ತಳು.
ಅವರು ಅದನ್ನು ಬದಿಗಿರಿಸಿ, “ನಾನಾಗಲೇ ನಿನ್ನ ಪ್ರೊಫೈಲ್ ನೋಡಿದೀನಮ್ಮ. ಬಿಎ ಮಾಡಿ, ಈ ಸ್ವಾಗತಕಾರಿಣಿ ಕೆಲ್ಸಕ್ಕೆ ಬರಬೇಕೆಂದು ಯಾಕೆನಿಸಿತು ನಿನಗೆ?”, ಕೇಳಿದರು.
“ಹಾಗಂದರೇನು ಸರ್? ಬಿಎ ಮಾಡಿದವರು ಈ ಕೆಲಸ ಮಾಡಬಾರದೇ? ನನ್ನ ಪ್ರಕಾರ ಯಾರು ಯಾವ ಕೆಲಸ ಬೇಕಾದರೂ ಮಾಡಬಹುದು. ವಿದ್ಯೆ ಒಂದು ಅರ್ಹತೆ ಅಷ್ಟೇ. ಆದರೆ ಅದನ್ನೇ ದೊಡ್ಡದು ಮಾಡಿ, ಕೆಲಸಗಳನ್ನು ವಿಂಗಡಿಸುವುದು ಸರಿಯಲ್ಲ. ಹಾಗಂತ ಕೆಲವೊಂದು ಸ್ಥಾನ ಅಥವಾ ಕೆಲಸಗಳಿಗೆ, ಅದರದ್ದೇ ಅಗತ್ಯ ಪದವಿಗಳು ಬೇಕಾಗುತ್ತದೆ. ನನಗೆ ಯಾವ ಕೆಲಸ ಮಾಡಲೂ ಹಿಂಜರಿಕೆಯಿಲ್ಲ. ಗೊತ್ತಾಗದಿದ್ದರೆ ಕೇಳಿಕೊಂಡು, ಕಲಿತು ಮಾಡುತ್ತೇನೆ”, ಎಂದಳು ಒಂದೇ ಉಸಿರಿನಲ್ಲಿ.
“ನೀನು ಹೇಳುವುದೇನೋ ಸರಿ. ಆದರೆ ಈ ಕೆಲಸದಲ್ಲಿ ಇರುವವರನ್ನೇ ನಾವು ಕೆಲವೊಂದು ಬಾರಿ ಪ್ರಮೋಟ್ ಮಾಡಿ ಫ್ರಂಟ್ ಡೆಸ್ಕ್ ಮ್ಯಾನೇಜರ್ ಕೂಡ ಮಾಡುತ್ತೇವೆ; ಅಗತ್ಯ ಬಿದ್ದಾಗ. ಆಗ ನಿನಗೆ ಸ್ವಲ್ಪ ಮ್ಯಾನೇಜ್ಮೆಂಟ್ ನಾಲೆಜ್ ಬೇಕಾಗುತ್ತದೆ. ಹಾಗಾಗಿ ಕೇಳಿದೆನಷ್ಟೆ. ಈಗಿರುವ ರಿಸೆಪ್ಷನ್ ಹುಡುಗಿ ಮ್ಯಾಟೆರ್ನಿಟಿ ರಜದಲ್ಲಿ ಹೋಗುತ್ತಿದ್ದಾಳೆ. ಅವಳು ಬಿಕಾಂ ಮಾಡಿದ್ದಾಳೆ. ಹಾಗೆಯೇ ನಿನ್ನ ಕೆಲಸ ಈಕೆ ವಾಪಾಸ್ ಬರುವವರೆಗೆ ಮಾತ್ರ. ನಂತರ ಗ್ಯಾರೆಂಟಿ ಕೊಡಲಾಗದಿದ್ದರೂ, ನಮ್ಮ ಬೇರೆ ಹೋಟೆಲಿನಲ್ಲಿ ಹುದ್ದೆ ಖಾಲಿ ಇದ್ದರೆ ನೋಡಿ ಕೊಡಬಹುದು ಮುಂದಕ್ಕೆ. ನಿನಗೆ ಇವೆಲ್ಲ ಒಪ್ಪಿಗೆಯೇ?” ಕೇಳಿದರು.
ಹೇಗಾದರೂ ಮಾಡಿ ಸಧ್ಯಕ್ಕೆ ಒಂದು ಅನುಭವಕ್ಕೆ ಕೆಲಸ ಸಿಕ್ಕಿದರಾಯಿತೆಂದು ಸಾರಿಕಾ, “ನನಗೆ ಎಲ್ಲವೂ ಓಕೆ”, ಎಂದಳು.
“ಸರಿ. ನಾನು ನಮ್ಮ ಮೇಲಧಿಕಾರಿಗಳ ಬಳಿ ಚರ್ಚಿಸಿ, ಮುಂದಿನ ವಿಚಾರ ತಿಳಿಸುತ್ತೇನೆ”, ಎಂದರು.
ಸಾರಿಕಾ ಯಾವುದೇ ಹಿಂಜರಿಕೆಯಿಲ್ಲದೇ, ನೇರವಾಗಿ ಕೇಳಿದಳು, “ಅದರ ಅರ್ಥ ನಾನು ಆಯ್ಕೆಯಾಗಿದ್ದೇನೆ ಎಂದೋ ಅಥವಾ ನಂಗಿಂತ ಮೊದಲು ಬಂದ ೩ ಜನರಿಗೂ ಇದೇ ಮಾತು ಹೇಳಿದ್ದೀರಾ?”.
“ಹೆಹೆ, ಇಲ್ಲಮ್ಮ. ಆ ಬಗ್ಗೆ ನಾನೇನೂ ಹೇಳುವಂತಿಲ್ಲ ನಮ್ಮ ಕಂಪನಿ ಪಾಲಿಸಿ ಪ್ರಕಾರ. ಆದರೂ ಆಫ್ ದ್ ರೆಕಾರ್ಡ್ ಹೇಳುತ್ತಿದ್ದೇನೆ; ಬಂದವರಲ್ಲಿ ನೀನು ಮತ್ತು ಇನೊಬ್ಬ ಹುಡುಗ ಆಯ್ಕೆಯಾಗಿದ್ದೀರಿ ಎಂದೇ ಹೇಳಬಹುದು. ಆದರೆ ನಿಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಸ್ವಲ್ಪ ಗೊಂದಲದಲ್ಲಿದೆ ನನಗೆ. ಹಾಗಾಗಿ ಇಬ್ಬರಿಗೂ ನಿನಗೆ ಹೇಳಿದ ಮಾತನ್ನು ಹೇಳಿದ್ದೇನೆ”, ಎಂದರು.
“ಓಕೆ, ಧನ್ಯವಾದಗಳು”, ಎಂದು ಹೊರಟಳು ಸಾರಿಕಾ.
*******
ಹೋಟೆಲಿನ ಎದುರು, ಬಾಗಿಲ ಬಳಿ ಸಾರಿಕಾಳಿಗೆ ಎದುರಾಗಿ ರಾಘವ್ ಒಳಬಂದರು. ಅವರನ್ನು ಮೇಲಿಂದ ಕೆಳಗೆ ಒಂದು ಬಾರಿ ನೋಡಿದವಳೇ ಸಾರಿಕಾ ಮನಸ್ಸಲ್ಲೇ ಅಂದುಕೊಂಡಳು, “ಯಪ್ಪಾ , ಈ ಮಂಗಳೂರಿನ ಸೆಖೆಗೆ ಅದು ಹೇಗೆ ಈ ಸೂಟುಬೂಟಿನಲ್ಲಿ ಓಡಾಡುತ್ತಾರೋ ಏನೋ? ಇವರೇ ಇರಬೇಕು ಆ ಸಂದರ್ಶನಕಾರರು ಹೇಳಿದ ಮೇಲಧಿಕಾರಿ. ಹತ್ತಿರ ಸುಳಿಯುತ್ತಲೇ ಘಮ್ ಎಂದು ವಿದೇಶಿ ಪರ್ಫ್ಯೂಮ್ ವಾಸನೆ!”.
ಒಳಗಡೆ ಬಂದವರೇ ರಾಘವ್, ಸಂದರ್ಶನಕಾರರಾದ, ಅವರ ಆ ಹೋಟೆಲಿನ ಮ್ಯಾನೇಜರ್ ಆದ ಮಾಧವ್ ಅವರ ಬಳಿಬಂದು, ಆ ದಿನದ ಸಂದರ್ಶನದ ವಿವರ ಕೇಳಿದರು.
ನಡೆದುದನ್ನು ವಿವರಿಸಿದ ಮೇಲೆ ಮಾಧವ್ ಹೇಳಿದರು, “ನನಗೆ ಯಾಕೋ ಆ ಹುಡುಗಿಯೇ ಉತ್ತಮ ಆಯ್ಕೆ ಅನಿಸಿತು. ಅವಳಲ್ಲಿ ತುಂಬು ಆತ್ಮವಿಶ್ವಾಸವಿದೆ. ಹಾಗೆಯೇ ಮುಂದೆ ನಮಗೆ ದೊಡ್ಡ ತಲೆನೋವಾಗುವ ಯಾವ ಲಕ್ಷಣವೂ ಕಾಣಿಸಲಿಲ್ಲ. ಇದು ಟೆಂಪರರಿ ಕೆಲಸ ಎಂದಾಗಲೂ ತನಗೇನು ಅಭ್ಯಂತರವಿಲ್ಲವೆಂದೇ ಹೇಳಿದಳು. ಆದರೆ ಆ ಹುಡುಗ ಹಾಗಲ್ಲ. ಅವನು ಈ ಕೆಲಸ ಟೆಂಪರರಿ ಆದರೂ, ಮುಂದೆ ನಿಮ್ಮದೇ ಸಂಸ್ಥೆಯ ಬೇರೆ ಹೋಟೆಲಿನಲ್ಲಿ ಕೆಲಸ ಕೊಡಿಸುವುದು ನಿಮ್ಮ ಕರ್ತವ್ಯ ಎಂದು ಏನೇನೋ ಮಾತನಾಡಿದನು. ಈಗಲೇ ಹೀಗೆ, ಮುಂದೆ ಹೇಗೋ ಏನೋ? ಅವನು ಹೇಳಿದ್ದು ಒಂದು ರೀತಿಯಲ್ಲಿ ಸರಿಯಾದರೂ; ನಮ್ಮ ವಹಿವಾಟುಗಳನ್ನೂ ನಾವು ನೋಡಿಕೊಳ್ಳಬೇಕಲ್ಲ? ಅಷ್ಟೊಂದೆಲ್ಲ ಬಜೆಟ್ ಇಲ್ಲ ಸಧ್ಯಕ್ಕೆ ನಮಗೆ”.
“ನೀವು ಹೇಳಿದ ಮೇಲೆ ಮುಗಿಯಿತು ಬಿಡಿ. ಆಫರ್ ಲೆಟರ್ ಹಾಗೂ ಕರಾರು ಪತ್ರ ಟೈಪ್ ಮಾಡಿ, ನನ್ನ ಸಹಿ ತೆಗೆದುಕೊಳ್ಳಿ. ನಂತರ ಇಂದೇ ಆ ಹುಡುಗಿ ಇಮೇಲ್ ಅಥವಾ ಪೋಸ್ಟ್ ಮಾಡಿ”, ಎಂದು ಬೇರೇನೋ ಕೆಲಸವಿದೆಯೆಂದು ಅಲ್ಲಿಂದ ಮೇನ್ ಡೆಸ್ಕಿನತ್ತ ನಡೆದರು.
