“ಅಮ್ಮಾ .. ಎಂತ.. ಚಿಕ್ಕಿಯ ಲೆಟರ್ ಬಂತಾ? ಯಾವಾಗ ಬರುತ್ತಾರಂತೆ?”, ನಾನು ಕೇಳಿದ್ದೇ ತಡ ಬೆಕ್ಕುಗಳೊಂದಿಗೆ ಆಡುತ್ತಲಿದ್ದ ತಂಗಿಯ ಕಿವಿ ನಿಮಿರಿ ನಿಂತಿತ್ತು ಮುಂದಿನ ಮಾತುಗಳಿಗೆ.

“ಹಾಂ  .. ಸರಿಯಾಗಿ ಗೊತ್ತಿಲ್ಲ. ಮೊನ್ನೆ ಅಜ್ಜನಿಗೆ ಕರೆ ಮಾಡಿದ್ದಾಗ ನಾಡಿದ್ದು ಆಗಸ್ಟಿನಲ್ಲಿ ಬರಬಹುದೇನೋ ಎಂದಿರಬೇಕು..”.

“ಹಾ.. ಇನ್ನು ೨ ತಿಂಗಳುಗಳು ಮಾತ್ರ ಬಾಕಿ.. ಒಳ್ಳೆದಾಯ್ತು.. ಈಗ ತಂಗಿ ಯಾವ ಕ್ಲಾಸ್? ಅವರುಗಳಿಗೆ ಎಷ್ಟು ವರ್ಷ ವಯಸ್ಸಾಗಿರಬಹುದು?.. ನಾಡಿದ್ದು ನಾವು ಪುತ್ತೂರಿಗೆ ಹೋದಾಗ ಲೈಲಾ ಫ್ಯಾನ್ಸಿಗೆ ಹೋಗುವುದು ಮಾತ್ರ ಮರೆಯಬಾರದು…..”, ಹೀಗೆ ಸಾಗಿತ್ತು ನನ್ನ ಸಂಭಾಷಣೆ ಅಮ್ಮನೊಂದಿಗೆ.

ಚಿಕ್ಕಿಯ ಕುಟುಂಬ ಅಮೆರಿಕದಿಂದ ಭಾರತಕ್ಕೆ ಬಂದು ನಮ್ಮಲ್ಲಿಗೆ ಬರುವಾಗ ಪ್ರಯಾಣದ ಸುಸ್ತು, ಊಟ-ತಿಂಡಿ-ವಾತಾವರಣ ವ್ಯತ್ಯಾಸ, ಜೆಟ್ ಲ್ಯಾಗ್ ಸೇರಿಕೊಂಡು ಅರೆಹಣ್ಣಾಗುತ್ತಿದ್ದರೂ; ಅವರ ಪಾಡಿನ ಒಂದಿಂಚೂ ಕಲ್ಪನೆಯೂ ಇಲ್ಲದೇ, ಇಲ್ಲೇ ಆಡಿಕೊಂಡಿದ್ದ ನಮ್ಮ ಉತ್ಸಾಹಕ್ಕೇನೂ ಕೊರತೆಯಿರುತ್ತಿರಲಿಲ್ಲ! ವಾಟ್ಸಾಪ್, ಫೇಸ್ಬುಕ್ ಬಿಟ್ಟು; ಸರಿಯಾಗಿ ಫೋನ್ ಸಂಪರ್ಕವೂ ಇಲ್ಲದ ಆಗಿನ ಕಾಲದಲ್ಲಿ ೨ ವರ್ಷಗಳಿಗೊಮ್ಮೆ ಬರುವ ಅವರಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತು, ಒಟ್ಟಾಗಿ ಕೂಡಿ-ಆಡಿ-ತಿರುಗಾಡಿ ಅನುಭವಿಸುವ ಸಂಭ್ರಮ ವಿವರಿಸಲಸಾಧ್ಯ.

ಅವರು ಬಂದಾಗಲೆಲ್ಲ ತಂಗಿಗೆ ಖುಷಿಯಾಗಿ ಕುಣಿಯುವಂತಾಗುತ್ತಿದ್ದುದಕ್ಕೆ ಇನ್ನೊಂದು ಕಾರಣ ಅವಳ ಗೊಂಬೆಗಳ ಸಂಗ್ರಹಕ್ಕೆ ಹೊಸ ಸೇರ್ಪಡೆಯಾಗುವುದು ಎಂದು! ಮೊದಲ ಬಾರಿ ಹೋಗಿ ಬಂದಾಗ ಅವಳಿಗೆಂದು ತಂದು ಕೊಟ್ಟ ಬೊಂಬೆಯಲ್ಲಿ ಮನದಣಿಯೆ ಆಡುವ ಚೆಂದ ನೋಡಿ, ಚಿಕ್ಕಿ ಮತ್ತು ತಂಗಿ ಅವಳಿಗಾಗಿ ಎಂದೇ  ವಿಶೇಷ ಆಸ್ಥೆ ವಹಿಸಿ ಒಂದು ಗೊಂಬೆ ತರುತ್ತಿದ್ದರು! 🙂

ತಂಗಿ ರಜಾ ದಿನಗಳಲ್ಲಿ ಅದರೊಂದಿಗೆ  ಆಡಿ ಸಂಭ್ರಮಿಸುತ್ತ, ಆಡಲು ಬಾ ಎಂದು ಅಮ್ಮ ಅಥವಾ ನನ್ನನ್ನು ಗೋಳು ಹೊಯ್ಯುತ್ತ ಕುಳಿತರೆ, ನಾವಿಬ್ಬರೂ ಅದನ್ನು ತಂದು ಕೊಟ್ಟವರನ್ನು ಬಾಯ್ತುಂಬ ಒಂದೆರಡು ಬೈದುಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆವು! 😉 ಆದರೆ, ಆಡಲು ಕುಳಿತರೆ ನಾವೂ ಸಹ ಮತ್ತೆ ಇಹಲೋಕ ಮರೆತು, ಕಳೆದುಹೋಗುತ್ತಿದ್ದೆವು ಎಂಬುದು ಬೇರೆಯೇ ಮಾತು.

dolls

Dolls

ಇದೆಲ್ಲ ಸುಮಾರು ೨೫-೨೭ ವರ್ಷಗಳಿಂದ ತಂಗಿ ತುಂಬಾ ಜತನದಿಂದ ಕಾಯ್ದುಕೊಂಡು ಬಂದಿದ್ದ ಗೊಂಬೆಗಳ ಸಾಲನ್ನು ಮೊನ್ನೆ ಊರಿಗೆ ಹೋಗಿದ್ದಾಗ ನೋಡಿ ಮತ್ತೆ ನೆನಪುಗಳಾಗಿ ಕಾಡತೊಡಗಿತ್ತು. ಅವನ್ನೀಗ ಅಕ್ಷರಗಳ ರೂಪಕ್ಕಿಳಿಸಿದ ಮೇಲೆ ಏನೋ ಒಂದು ರೀತಿಯ ಪುಟ್ಟ ಸಮಾಧಾನ!. ಈಗೆಲ್ಲ ಸಾವಿರಗಟ್ಟಲೆ ಬೊಂಬೆಗಳು ಬೇಕು- ಬೇಕಾದಂತೆ ಇಲ್ಲೇ ಸಿಗುತ್ತವೆ ಬಿಡಿ. ಆದರೆ, ಅಂದಿನ ಆ ಬಾಂಧವ್ಯ, ಕಾತುರತೆ, ಅಕ್ಕರೆ, ನಗುವನ್ನು ತಂದು ಕೊಡುವ ಶಕ್ತಿ ಈಗಿನ ಈ ವೇಗದ ಯುಗದಲ್ಲಿ ಇವು ಯಾವುದಕ್ಕೂ ಇಲ್ಲವೇನೋ?

ಹಿಂದಿನ ಬುತ್ತಿ…

ಮುಂದಿನ ಬುತ್ತಿ …