ಮಾವಿನ ಹಣ್ಣು – ಇದು ನನ್ನ ಬಾಲ್ಯದಲ್ಲಿ ಕಳೆದ ಮಾವಿನ ಹಣ್ಣಿನ ಸವಿಯಾದ ಕಥೆ…ಬಾಲ್ಯದಲ್ಲಿ ಆಸ್ವಾದಿಸಿದಷ್ಟು ಸವಿ ಬಹುಶಃ ಮತ್ತೆಂದೂ ಸವಿಯಯುವುದಿಲ್ಲ ನಾವು – ಅದು ಎಷ್ಟೇ ಕಡಿಮೆಯಿರಲಿ, ಹೆಚ್ಚಿರಲಿ. ಹೇಗೇ ಇರಲಿ. ಆ ಕ್ಷಣಗಳು ಮತ್ತೆ ಮರಳಿ ಬಾರದ ಅಮೂಲ್ಯ ಘಳಿಗೆಗಗಳು! ಈ ಲಾಕ್ ಡೌನ್ ಸಮಯದಲ್ಲಿ ಪೇಟೆಯಿಂದ ತರಿಸಿಕೊಂಡು ಮಾವಿನ ಹಣ್ಣು ತಿನ್ನುತ್ತಿರುವಾಗ ಆ ಬಾಲ್ಯದ ಸ್ವಾದ ಮತ್ತೆ ನೆನಪಾಯಿತು. ಮತ್ತೆ ಈ ಮಾವಿನ ಹಣ್ಣು ಅಷ್ಟೊಂದು ರುಚಿಸಲೇ ಇಲ್ಲ!

“ಗೊರಟಿನೊಟ್ಟಿಗೆ ಓಡು”:

ಆಗೆಲ್ಲಾ ಮಾವಿನ ಹಣ್ಣಿನ ನಮ್ಮ ಪಯಣ ಶುರುವಾಗುತ್ತಿದ್ದುದು ಗುಡ್ಡ – ಬೆಟ್ಟದ, ಕಾಡಿನ ಮಧ್ಯೆ ಇರುತ್ತಿದ್ದ ಕಾಡು ಮಾವಿನ ಹಣ್ಣಿನ ಜೊತೆ. ಶಾಲೆಗೆ ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ನಮ್ಮ ಓಟ ಮಾವಿನ ಮರದ ಬುಡಕ್ಕೆ! ಆಗೆಲ್ಲ ಪರೀಕ್ಷಾ ದಿನಗಳಿಗಿಂತಲೂ ರಜಾ ದಿನಗಳಂದು ಬೆಳಗ್ಗೆ ಬೇಗನೆ ಏಳುತ್ತಿದ್ದೆವು ನಾವು. ಬೆಳಕು ಹರಿಯುತ್ತಿದ್ದಂತೆ ಬೇಗನೆ ಎದ್ದು ಹೋಗಿ; ರಾತ್ರಿಯ ಚಂದಿರನ ತಂಪಿಗೆ, ಮುಂಜಾವಿನ ತಣ್ಣನೆ ಬೀಸುವ ಗಾಳಿಗೆ ಮರದ ಬುಡದಲ್ಲಿ ಬಿದ್ದ ಬುಟ್ಟಿಗಟ್ಟಲೆ ತಾಜಾ ಮಾವಿನ ಹಣ್ಣನ್ನು ಮಗುವಿನಂತೆ ಜೋಪಾನ ಮಾಡಿ ಹೆಕ್ಕಿ ತರುವುದು ನಮಗೆಲ್ಲ ಅತ್ಯಂತ ಪ್ರಿಯವಾದ ಕೆಲಸ. ಬೀಳುವಾಗ ಪೆಟ್ಟಾಗದೆ ಉಳಿದ ಮಾವನ್ನು ಬೇರೆಯೇ ತೆಗೆದಿರಿಸಿ, ಮನೆಯವರ ಕಣ್ಣು ತಪ್ಪಿಸಿ ಅದರಲ್ಲೇ ೧-೨ಹಣ್ಣನ್ನು ಗುಳುಂ ಮಾಡಿಯೇ ಮನೆ ಸೇರುತ್ತಿದ್ದುದು!

ಹೀಗೆ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲವೆಂದು ದಿನಕ್ಕೆ ೨-೩ ಬಾರಿಯಾದರೂ ಮಾವಿನ ಹಣ್ಣು ಹೆಕ್ಕುವ ನೆಪದಲ್ಲಿ ಕಾಡು-ಮೇಡಿನ ಅಲೆದಾಟ, ಜೊತೆಗೆ ದಿನದ ಆಟ ನಮಗೆ. ಆಗೆಲ್ಲಾ ಈಗಿನಂತೆ ಮೊಬೈಲ್ ಇರಲಿಲ್ಲ, ಹಾಗಾಗಿ ನಾವು ಹೇಳಿದ್ದನ್ನೇ ಕೇಳಬೇಕಷ್ಟೆ ಮನೆಯಲ್ಲಿ. ಯಾಕಿಷ್ಟು ಹೊತ್ತು ಎಂದರೆ – ಮುಳ್ಳಿನ ಹಾದಿಯಲ್ಲಿ ಸಾಗಿ, ಬಲ್ಲೆ ಮಧ್ಯೆ ಹೋಗಿ ಹೆಕ್ಕಬೇಕಿತ್ತು, ಕಳ್ಳರೂ ತೋಟದತ್ತ ನುಗ್ಗಿದಂತನಿಸಿತು, ಹಾಗಾಗಿ ಅದನ್ನೆಲ್ಲ ನೋಡಿಕೊಂಡು, ಅವರನ್ನು ಓಡಿಸಿ ಬರಲು ಇಷ್ಟು ಸಮಯವಾಯಿತು – ಹೀಗೆ ನಮಗೆ ತೋಚಿದ್ದು ಹೇಳುವುದು ನಮ್ಮ ವಾಡಿಕೆಯಾಗಿತ್ತು. ಕೆಲವೊಂದು ಬಾರಿ ಅದು ನಿಜವೂ ಆಗಿದ್ದರಿಂದ ಮನೆಯಲ್ಲಿ ದೊಡ್ಡವರು ಏನೂ ಅನ್ನುತ್ತಿರಲಿಲ್ಲ! ಮಕ್ಕಳ ಆಟದ ನೆಪವೂ ಆಗಿದ್ದರಿಂದ ಅವರ ಕಿರಿಕಿರಿ ಬೇಡವೆಂದು ಗೊತ್ತಾದರೂ; ಅವರೂ ಸುಮ್ಮನಾಗುತಿದ್ದರು! ಸಧ್ಯ! ಆಗ ನಾವಂತೂ ಬಹುಶಃ ಈಗಿನಂತೆ “ಬೋರ್” ಆಗುತ್ತಿದೆ ಎಂದು ಮನೆಯವರನ್ನು ಒಂದು ದಿನವೂ ಗೋಳು ಹೊಯ್ಕೊಂಡಿರಲಿಲ್ಲವೇನೋ. “ಬೋರ್” ಆಗುವಷ್ಟು ಸಮಯವೇ ಇದ್ದಂತನಿಸಿಲ್ಲ ನಮಗಾಗ! 

ಇನ್ನು ಈ ಕಾಡು ಮಾವಿನ ಹಣ್ಣಿನ ಬಗೆ-ಬಗೆಯ ಪಾಕಗಳೋ (ರೆಸಿಪಿ)! ನನಗೆ ಸುಮಾರಷ್ಟು ಮರೆತೇ ಹೋಗಿವೆಯೇನೋ?. ಲೆಕ್ಕವಿಲ್ಲದಷ್ಟು ಬಗೆಯ ವಿಧ – ವಿಧ ಪದಾರ್ಥ, ತಿಂಡಿ – ತಿನಿಸಾಗುತ್ತಿತ್ತು ಇದರಲ್ಲಿ. ಹಣ್ಣಿನ ಸಾರಿನಲ್ಲೂ ೫-೬ ರೀತಿ ಬೇರೆ ಬೇರೆ ರುಚಿ ಬರುವಂತೆ ತಯಾರಾಗುತ್ತಿತ್ತು  – ಬೆಳ್ಳುಳ್ಳಿ ಒಗ್ಗರಣೆ ಹಾಕಿ, ಹಸಿ ಸಾರು, ಬಿಸಿ ತಿಳಿ ಸಾರು, ಸಿಪ್ಪೆ ಹಾಕಿ ಸಾರು, ಸಿಪ್ಪೆ ಹಾಕದೆ ಸಾರು ಇತ್ಯಾದಿ. ಹಾಗೆಯೇ ಪಾಯಸ, ಹಸಿ ಗೊಜ್ಜು, ಸಾಸಿವೆ. ತೋವೆ, ರಸಂ, ಶರಬತ್ತು, ಬೆಲ್ಲದ ನೀರು, ಜಾಮ್  ಮುಂತಾದವು! ನಿಮಗೆ ಉಳಿದದ್ದು ನೆಂಪಾದರೆ ಹೇಳಿ! ನಮಗೆ – ಮಕ್ಕಳಿಗೆ ಆಗ ಸುಮ್ಮ – ಸುಮ್ಮನೆ ಇಡೀ ಮಾವಿನ ಹಣ್ಣನ್ನು ಹಾಗೆಯೇ ಸವಿಯುವುದೇ ಒಂದು ರೀತಿಯ ಮಜಾ. ಜೊತೆಗೆ ಓರಗೆಯವರಿಂದಿಗೆ, ಅಣ್ಣ – ತಂಗಿಯರೊಂದಿಗೆ ಗೋಳು ಹೊಯ್ದುಕೊಂಡು, ಗೊರಟೆಯನ್ನು ಇನ್ನೇನು ಬಿಸಾಡಬೇಕು ಎನ್ನುವಷ್ಟರಲ್ಲಿ ಹೇಳುವ ಪ್ರಸಿದ್ಧ ಡೈಲಾಗ್, “ಗೊರಟಿನೊಟ್ಟಿಂಗೆ ಓಡು”! ಇದು ಇನ್ನೊಂದು ತರಹದ ಮಜಾ! ಮಾವಿನ ಹಣ್ಣಿನ ಗೊರಟೆಯನ್ನು ಬಿಸಾಡುವ ಮೊದಲು, ಪಕ್ಕದಲ್ಲಿ ಯಾರಿಗೆ ಕೀಟಲೆ ಮಾಡಬೇಕೆಂದಿದ್ದೇವೋ ಅವರ ಹೆಸರು ಕರೆಯುವುದು (ನಿಮ್ಮ ಕೈಯ್ಯಲ್ಲಿ ಮಾವಿನ ಗೊರಟೆಯಿದೆಯೆಂದು ಗೊತ್ತಾಗಬಾರದವರಿಗೆ, ಗೊತ್ತಾದರೆ ಓಕೊಳ್ಳುವುದಿಲ್ಲ ಅವರು!), ಅವರು ಓಕೊಂಡ ಕೂಡಲೇ ಕೈಯ್ಯಲ್ಲಿದ್ದ ಗೊರಟೆಯನ್ನು ದೂರಕ್ಕೆ ಎಸೆಯುತ್ತಾ, “ಗೊರಟಿನೊಟ್ಟಿಗೆ ಓಡು” ಎಂದು ಅವರಿಗೆ ಹೇಳುವುದು ರೇಗಿಸಲು! 

“ದೊಡ್ಡಜ್ಜಿಯ ಪ್ರೀತಿಯ ಮಾಂಬಳ” :

ಮಾವಿನ ಹಣ್ಣಿನ ಮಾಂಬಳ! ಇದಕ್ಕೆ ಕನ್ನಡದಲ್ಲಿ ಬೇರೆ ಏನಾದರೂ ಬಳಕೆಯ ಹೆಸರಿದೆಯೋ ನನಗೆ ಗೊತ್ತಿಲ್ಲ. ಆದರೆ, ಇದರೊಂದಿಗೆ ನಮಗೆ ನಮ್ಮೆಲ್ಲರ ಪ್ರೀತಿಯ “ದೊಡ್ಡಜ್ಜಿಯ” ನೆನಪು ಬೆಸೆದಿದೆ! ದೊಡ್ಡಜ್ಜಿ ಹೋದಮೇಲೆ ಬಹುಶಃ ನಮ್ಮಲ್ಲಿ ಮಾಂಬಳ ಮತ್ತೆ ಮಾಡಿಲ್ಲ! ಕಾಡು ಮಾವಿನ ಹಣ್ಣಿನ ತಿರುಳನ್ನು ಬಿಸಿಲಿಗೆ ತೆಳ್ಳಗೆ ಶುಭ್ರವಾದ ಬಟ್ಟೆಯಲ್ಲಿ ಹರಡಿ, ಒಣಗಿಸಿ, ಪ್ರತಿ ದಿನವೂ, ಒಂದಿಷ್ಟು ದಿನ ದಪ್ಪನೆ ಪದರವಾಗುವಷ್ಟು ಮಾಡಿ, ದಾಸ್ತಾನು ಮಾಡಿಟ್ಟು ಬಳಸುತ್ತಿದ್ದ ಒಂದು ಬಗೆಯ ಮಾವಿನ ಖಾದ್ಯ ಅದು. ಅದರಿಂದ ಬೇಕಾದಾಗ ಸಾರು ಸಹ ಮಾಡುತ್ತಿದ್ದ ನೆನಪು. ಇಲ್ಲವಾದಲ್ಲಿ ಹಾಗೆಯೇ ತಿನ್ನಲೂ ಸಹ ಬಲು ರುಚಿ  – ಈಗಿನ ಚಾಕೋಲೇಟಿನಂತೆ! ಇದರ ರೆಸಿಪಿ ‘ಭಟ್ ನ್ ಭಟ್’ನವರು ಇನ್ನೂ ಹಾಕಿಲ್ಲವಾ?! ಪಾರಂಪರಿಕ ಶೈಲಿಯ ಅಡುಗೆ ಪಾಕ ಹೇಳಿಕೊಡಲು ಅವರೇ ಸರಿ!

ನಮ್ಮ ತಂದೆಯ ದೊಡ್ಡಮ್ಮ (ತಂದೆಯ ತಾಯಿಯ ಅಕ್ಕ) ಈ ದೊಡ್ಡಜ್ಜಿ. ಬೆಳ್ಳಂಬೆಳಗ್ಗೆ ಶಿಸ್ತಿನಿಂದ ಶುರು ಮಾಡುತ್ತಿದ್ದರು ಅಜ್ಜಿ ಮಾಂಬಳದ ಕೆಲಸ! “ಬೇಗ ಬಾ ಮೋಳೆ, ಹೊತ್ತಾದರೆ ಮಾಂಬಳ ಮಾಡುಲೆ ಬಿಸಿಲಾವ್ತು”, – ಅಜ್ಜಿ ಇಷ್ಟು ಹೇಳಿದರೆ ಸಾಕು. ಮತ್ತೆ ಅಜ್ಜಿಯ ಮುಖ ನೋಡುತ್ತಿದ್ದುದು ನಾವು ಹೊತ್ತು ತಂದ ಮಾವಿನ ಹಣ್ಣಿನ ಬುಟ್ಟಿಯೊಂದಿಗೆಯೇ. ಇಲ್ಲದಿದ್ದಲ್ಲಿ ಅಜ್ಜಿ ಬಿಡಬೇಕಲ್ಲ? ಅದೂ ಅಲ್ಲದೆ ಸಾಯಂಕಾಲ ಮಿಡಿ ಸೌತೆಕಾಯಿ ಚಪ್ಪರಿಸಲು ಸಿಗುವುದು ಹೇಗೆ? ಅಜ್ಜಿಯ ಜೊತೆ ತೋಟದ ಕಡೆಗಿನ ವಾಕಿಂಗ್ ಮಿಸ್ಸಾದರೆ? ಶ್ … ಇದು ಇದುವರೆಗೂ ಯಾರಿಗೂ ಗೊತ್ತಿಲ್ಲದ ನಮ್ಮ ನಡುವಿನ ಒಳ ಒಪ್ಪಂದ! ಅಜ್ಜಿಯ ಜೊತೆ ನಾನು ವಾಕಿಂಗ್ ಬರೀ ಎಳೆ ಸೌತೆಕಾಯಿಗಲ್ಲ, ಅವರ ಅಳಿಲು, ನವಿಲು – ಇನ್ನೂ ಏನೇನೋ ಮುದವಾದ ಹಾಡು ಮತ್ತು ಕಥೆಗಳನ್ನು ಕೇಳಲು ಸಹ ಉತ್ಸುಕಳಾಗಿ ಹೊರಡುತ್ತಿದ್ದೆ. ಹಾಗೆಯೇ ತರಕಾರಿ ತೋಟದ ಮೊದಲ ಪಾಠವೂ ನನಗೆ ಅವರಿಂದಲೇ ತಿಳಿದದ್ದು. ದೊಡ್ಡಜ್ಜಿ ಕಾಸರಗೋಡಿನವರಾದುದರಿಂದ ಸಾಮಾನ್ಯವಾಗಿ ಎಲ್ಲರನ್ನೂ “ಮೋಳೆ” ಎಂದೇ ಸಂಬೋಧಿಸುತಿದ್ದರು. ಹೀಗಾಗಿ ಅವರು “ಮೋಳೆ” ಎಂದು ಕರೆದರೆ ಸಾಕು, ಮನೆಯ ಹೆಣ್ಮಕ್ಕಳೆಲ್ಲ ಅಲ್ಲಿರುತ್ತಿದ್ದರು! ಅವರೊಂದಿಗಿನ ನಮ್ಮೆಲ್ಲರ ಒಡನಾಟ ಎಷ್ಟು ಹೇಳಿದರೂ ಮುಗಿಯದ ಕಥೆ.

“ಅಟ್ಟದಲ್ಲಿನ ನೀಲಂ” :

ಮೇ ತಿಂಗಳ ಕೊನೆಯಾಗುತ್ತಿದ್ದಂತೆ ಬೆಳೆದ ಕಸಿ ಜಾತಿಯ ಮಾವಿನ ಹಣ್ಣಿನ ಸಮಯ ಆರಂಭ ನಮ್ಮಲ್ಲಿ. ಮರಕ್ಕೆ ಹತ್ತಿ ಜೋಪಾನ ಮಾಡಿ ಬೆಳೆದ ಕಾಯಿಗಳನ್ನು ಆರಿಸಿ ಕೊಯ್ದು, ಅಟ್ಟದಲ್ಲಿ (ನಮ್ಮೂರಿನ ಹಳೆ ಕಾಲದ ಮನೆಗಳ ಒಂದು ರೀತಿ ಮಹಡಿ ನೆಲ) ಗೋಣಿಯ ಮೇಲೆ ಹರಡಿ ಇಡುತ್ತಿದ್ದರು. ಇದಕ್ಕೆ ಸ್ವಲ್ಪ ಬಿಗಿಯಾದ ನಿಯಮಗಳಿತ್ತು! ಕಾಡು ಮಾವಿನಂತೆ ಬೇಕಾ-ಬಿಟ್ಟಿಯಾಗಿ ತಿನ್ನುವಷ್ಟು ಇರುತ್ತಿರಲಿಲ್ಲವಾದುದರಿಂದ ಕೂಡಿಟ್ಟ ಹಣ್ಣಿನ ಸಮಪಾಲು ಮಾಡಿ ಎಲ್ಲರಿಗೂ ಹಂಚುವುದು ದೊಡ್ಡಮ್ಮನ ಉಸ್ತುವಾರಿಯಲ್ಲೇ! ಅವರ ಕಣ್ಣು ತಪ್ಪಿಸಿ ಅಟ್ಟಕ್ಕೆ ಹೇಗೂ ನಮಗೆ ಪ್ರವೇಶ ಸಿಗುತ್ತಿರಲಿಲ್ಲ. ಗುಟ್ಟಾಗಿ ಹೋದರೂ ಶಬ್ದವಾಗುತ್ತಿತ್ತು. ಅದೂ ಅಲ್ಲದೆ ಅದು ಕಾಯಿ ಮಾವು. ಹಣ್ಣಾಗಿದ್ದು ಆಗಲೇ ಹಿಂದಿನ ರಾತ್ರಿ ಹಂಚಿ ತಿಂದಾಗಿರುತ್ತಿತ್ತಲ್ಲ?!  ಹಗಲು ಹೊತ್ತು ಆಗಲೇ ಶಾಲೆಗಳು ಆರಂಭವಾಗಿರುತ್ತಿತ್ತು ನಮಗೆ. ಅದೂ ಅಲ್ಲದೆ ಸಾಯಂಕಾಲ ಶಾಲೆ ಮುಗಿಸಿ ಬಂದ ಮೇಲೆ, ಮನೆಯ ಎಲ್ಲರೂ ಧಾರಾವಾಹಿಗಳಲ್ಲಿ ಮುಳುಗಿರುತ್ತಿದ್ದರು. ಆದರೆ ಅಟ್ಟದ ಪ್ರವೇಶ ದ್ವಾರವಿದ್ದುದು ಎಲ್ಲರ ಮಧ್ಯೆ ಇದ್ದ ಜಗುಲಿಯ ಮೂಲಕವೇ! ಅದಕ್ಕೆ ನಾವು ನಮ್ಮ ಪಾಡಿಗೆ ಅದರ ತಂಟೆಗೆ ಹೋಗದೆ ಇರುತ್ತಿದ್ದೆವು.

ಇದರಲ್ಲೂ ಉತ್ಸುಕತೆಯಿಂದ ಕಾಯುತಿದ್ದುದು ನಾವು , ಮಾವಿನ ಹಣ್ಣು ಸೀಸನ್ ಇನ್ನೇನು ಮುಕ್ತಾಯವಾಗಿ, ಶಾಲೆಗಳೂ ಸರಿಯಾಗಿ ಆರಂಭಗೊಂಡಿರುವ ಜೂನ್ ಕೊನೆಯ ವಾರದಲ್ಲಿ, ಮನೆಯ ಮಕ್ಕಳಿಗೆಂದು ವಿಶೇಷವಾಗಿ ನೀಲಂ ಹಣ್ಣನ್ನು ಹೆಚ್ಚಿ ಹಂಚುವ ಬದಲು, ಇಡಿಯಾಗಿ ಪೂರ್ತಿ ನಮಗೇ ಒಂದೊಂದು ತಿನ್ನಲು ಕೊಡುತ್ತಿದ್ದುದು! ಅಮ್ಮ, ಚಿಕ್ಕಮ್ಮ , ದೊಡ್ಡಮ್ಮ – ಯಾರು ಅಂದು ಮಾವಿನ ಹಣ್ಣು ಹಂಚಲು ಕೂತಿರುತ್ತಾರೋ, ಅವರಲ್ಲಿ ನಮಗೆ ನಾವೇ ಭಾರಿ ಶಿಫಾರಸ್ಸು ಶುರು ಮಾಡಿಕೊಳ್ಳುತ್ತಿದ್ದೆವು. ಸಾಮಾನ್ಯವಾಗಿ ಜಾಸ್ತಿ ಹಣ್ಣುಗಳಿದ್ದಾಗ ಆ ರೀತಿ ಹಂಚಿಕೆಯಾಗುತ್ತಿದ್ದುದರಿಂದ, ಅಟ್ಟದಲ್ಲಿ ಹಣ್ಣನ್ನು ಆಯ್ಕೆ ಮಾಡಿ ನಾವೇ ದೊಡ್ಡವರೊಂದಿಗೆ ತರುತ್ತಿದ್ದುದುರಿಂದ ನಮಗೂ ಅಂದಾಜಿರುತ್ತಿತ್ತು ಯಾವ ದಿನ ಇಡೀ ಮಾವಿನ ಹಣ್ಣು ಸವಿಯುವ ಅವಕಾಶವೆಂದು. ಹೀಗಾಗಿ ನಮ್ಮ ಖುದ್ದು ಪ್ರಶಂಸೆಯನ್ನು ನಾವೇ ಶುರು ಮಾಡಿಕೊಳ್ಳುತ್ತಿದ್ದೆವು – ಆದಷ್ಟು ದೊಡ್ಡ ಹಣ್ಣು ನಮಗೇ ಸಿಗಲೆಂಬ ದೂರಾಲೋಚನೆಯಿಂದ! 

“ಬೆಂಗಳೂರಿನಲ್ಲಿ ಬಾದಾಮಿ” :

ಈ ಆಲ್ಪ್ಹಂಸೋ, ಸಿಂಧೂರ – ಈ ಹಣ್ಣುಗಳ ಪರಿಚಯವಾಗಿದ್ದು ನನಗೆ ಬೆಂಗಳೂರಲ್ಲೇ! ಆದರೆ ನನ್ನ ಫೇವರಿಟ್ ಈಗಲೂ ನಮ್ಮಲ್ಲಿನ “ನೀಲಂ” ಮಾವಿನ ಹಣ್ಣೇ! ಬಿಟ್ಟರೆ ಮಲ್ಲಿಕಾ ಮತ್ತಿನ್ನೊಂದು ಅಷ್ಟೇ! ಆದರೆ ಬೆಂಗಳೂರಲ್ಲೂ, ಇಲ್ಲಿಗೆ ಬಂದ ಮೊದಲೆರಡು ವರ್ಷ ಸ್ನೇಹಿತೆ ವಿನುತಾಳ ದಯೆಯಿಂದ ಅವರ ತೋಟದಲ್ಲಾದ ಬಾದಾಮಿ ಮತ್ತು ಕೆಲವೊಂದು ಕಸಿ ಮಾವಿನ ಸವಿ ಸವಿಯಲು ಸಿಗುತ್ತಿತ್ತು. ಅವರಪ್ಪ ಮುದ್ದೇ ಬಿಹಾಳದಿಂದ (ವಿಜಯಪುರ ಜಿಲ್ಲೆ) ಬಸ್ಸಿನ ಮೂಲಕ ಮಾವಿನ ಹಣ್ಣಿನ’ಬುಟ್ಟಿಯನ್ನು ಕಳುಹಿಸಿಕೊಡುತ್ತಿದ್ದರು ನಮಗೆಂದು. ಈಗ ಆ ಬಾದಾಮಿಯ ಸವಿಯೂ ಮರೆಯಾಗಿದೆ. ಬಹುಶಃ ನನಗಿಂತ ಹೆಚ್ಚಾಗಿ ಅಮೆರಿಕಾದಲ್ಲಿರುವ ಗೆಳತಿ ಇದನ್ನು ನೆನಪಿಸಿಕೊಳ್ಳುತ್ತಿರಬೇಕು!

“ರಸಾಯನ” :

ಮಾವಿನ ಹಣ್ಣಿನೊಂದಿಗಿನ ನಿಮ್ಮ ಸವಿ ನೆನಪನ್ನು ಹಂಚಿಕೊಳ್ಳಿ. ಈ ಮಾವಿನ ಹಣ್ಣಿನ ರಸಾಯನ (ಸೀಕರಣೆ) ಯಾರೂ ಬೇಡವೆನ್ನಲಾಗದ ಇನ್ನೊಂದು ಪಾಕ!. 

– ಸ್ಮಿತಾ ಅಲಂಗಾರ್