ಮೆಲುಕು

Meluku

ಮೆಲುಕು Meluku

ಮೊನ್ನೆ ಅಷ್ಟಮಿಯ ಸಮಯ. ಊರಿಗೆ ಹೋಗಿದ್ದೆವು. ಮತಾಡ್ತ ಮತಾಡ್ತ ಅದು ಇದು ಎಂದು ಕೊನೆಗೆ ಹೊತ್ತು ಹೋಗಿದ್ದೆ ಗೊತ್ತಾಗಿಲ್ಲ! ದೊಡ್ಡಮ್ಮ ಚಾ ಕುಡಿದು ತಿಂಡಿ ತಿಂದು ಹೋಗಿ ಅಂದಾಗ ಒಪ್ಪಲೆ ಬೇಕಾಯ್ತು. ಸರಿ. ಈನ್ನೇನು ಚಹಾದ ಸಮಯವೆ. ಇಲ್ಲೆ ಕುಡಿದು ಹೊರಟರಾಯ್ತು ಅಂದುಕೊಂಡು ಕೂತೆ. ಚಹಾ ತಯಾರಾದ ಕೂಡಲೆ ದೊಡ್ಡಮ್ಮನ ಹೇಳಿಕೆಗೂ ಕಾಯದೆ ಊಟದ ಮೇಜಿನ ಎದುರು ಕುರ್ಚಿ ಹಾಕಿಕೊಂಡು ಕುಳಿತೆ. ಚಹಾ ಕುಡಿದಿದ್ದೂ, ತಿಂಡಿ ತಿಂದಿದ್ದು ಎಲ್ಲಾ ಆಯ್ತು. ಆದರೂ ಮನಸ್ಸಲ್ಲಿ ಅದೇನೋ ತಳಮಳ. ಏನೋ ಕಳೆದುಕೊಂಡಂತಹ ಅನುಭವ!

ಊಟದ ಮೇಜಿನ ಮೇಲೆ ಮೊದಲಿದ್ದ ಮೋಹ, ಕಕ್ಕುಲತೆ , ಅಕ್ಕರೆ ಇಲ್ಲವೇನೋ ಅನಿಸುತ್ತಿತ್ತು. ಮನಸ್ಸು ೧೫ ವರ್ಷಗಳಷ್ಟು ಹಿಂದಕ್ಕೆ ವಾಲಿತು. ಈ ಮೇಜಿಗೆ ೧೫ ವರ್ಷಗಳ ಹಿಂದಿದ್ದ ತಾಕತ್ತು ಇಲ್ಲವೆನಿಸಿತು.! ಏಕೆ? ಇದು ಹಿಂದಿನ ಮರದ ಮೇಜಿಗಿಂತ ಗಟ್ಟಿ ಮತ್ತು ಬಲಿಷ್ಟವಾಗಿದೆ. ಮತ್ತೇತಕೆ? ಏಕೆಂದರೆ ಮೊದಲಿನ ಮೋಹ ಕಕ್ಕುಲತೆ ಮೇಜಿನದಲ್ಲ! ಮೇಜಿನ ಸುತ್ತ ಒಟ್ಟಾಗಿ ಕೂತು ಉಂಡು ತಿಂದು ಮಾಡುತ್ತಿದ್ದ ಕೂಡು ಕುಟುಂಬದ್ದು! ಹೌದು! ಹಿಂದೆ ಮೇಜಿಗೆ ಅದಕ್ಕೆ ಇದಕ್ಕಿಂತ ದುಪ್ಪಟ್ಟು ಬಲವಿತ್ತು! ಅನಿವಾರ್ಯ ಕಾರಣಗಳಿಂದ ಬೇರೆ ಬೇರೆ ಕಡೆ ನೆಲೆಸಿದ್ದರೂ, ಮೊದಲೆಲ್ಲ ಹಬ್ಬ ಹರಿದಿನಗಳಿಗೆ ಒಟ್ಟಾಗಿ ಸೇರುವ ದಿನಗಳಿದ್ದವು. ಈಗ ಅದೂ ದೂರದ ಮಾತಾಗಿದೆ.

ಆ ದಿನಗಳದೆಷ್ಟು ಚೆಂದ! ಅಂದು ಅತ್ತೆಯ ಮಕ್ಕಳು, ವಾರಗೆಯವರು ಕೂಡಿ ಆಡಿ ನಕ್ಕು ನಲಿಯುತ್ತಿದ್ದ ದಿನಗಳು. ಈಗ ಎಲ್ಲರೂ ಒಂದೆಡೆ ಸೇರುವುದೇ ಅಪರೂಪದ ಮಾತಾಗಿದೆ. ಅಂದು ಬೇಸಿಗೆ ರಜದಲ್ಲಿ ಬೆಳಗಾಗುತ್ತಲ್ಲೆ ಕ್ರಿಕೆಟ್, ಸ್ವಲ್ಪ ಬಿಸಿಲಾಗುತ್ತಲೆ ಗೋಳಿ ಮರದ ಕೆಳಗೆ ಸಿಕ್ಕಿದ ಕಸ ಕಡ್ಡಿ ಒಟ್ಟುಗೂಡಿಸಿ ಮನೆಯಾಟ, ಅದು-ಇದೂ ಎಂದು ಮದ್ಯಾಹ್ನದ ಊಟದ ಸಮಯಕ್ಕೆ ಮನೆಯ ನೆನಪಾಗುತ್ತಿದ್ದುದು.

ಊಟಕ್ಕಾದರು ಅಷ್ಟೆ. ಎಲ್ಲರೂ ಮೇಜಿನ ಸುತ್ತ ಇಲ್ಲ ಕೆಳಗೆ ಒಟ್ಟಾಗಿ ಕೂತರೆ ಮಾತ್ರವೇ ಊಟ. ಊಟ ಮಾಡುವಾಗ ಊಟ ಮತ್ತು ಪದಾರ್ಥಗಳ ಮೇಲಷ್ಟೆ ಗಮನ. ಟಿವಿ ನೋಡುತ್ತ, ಇಲ್ಲ ಅದು ಬೇಡ, ಈ ಪದಾರ್ಥ ಬೇಡ ಎಂಬುದಕ್ಕೆಲ್ಲ ಸೊಪ್ಪು ಹಾಕೋರೆ ಇರಲಿಲ್ಲ. ಬೇಕಿದ್ದರೆ ತಿನ್ನಿ, ಇಲ್ಲವಾದಲ್ಲಿ ಬಿಡಿ, ಆದರೆ ಯಾವತ್ತೂ ಬಿಸಾಡುವಂತಿಲ್ಲ. ಚಹಾದ ಸಮಯವಾದರೂ ಅಷ್ಟೆ. ಅದಕ್ಕೆ ಈ ಮೇಜಿನ ಶಕ್ತಿ ಕಮ್ಮಿಯಾದಂತೆನಿಸಿದ್ದು.

ಮನೆಯಲ್ಲಿ ತಂದಿಡುತ್ತಿದ್ದ ಕಲ್ಲಂಗಡಿ ಹಣ್ಣು ಎಲ್ಲರಿಗೂ ಊಟದ ನಂತರ ಹಂಚಲು ಮೇಜಿನಲ್ಲಿ ಮುಚ್ಚಿಡುತ್ತಿದ್ದರು. ಹಣ್ಣಿನ ತುದಿಯನ್ನು ಕದ್ದು ಕದ್ದು ತಿಂದು ಯಾರಿಗೂ ಕಾಣದಂತೆ ಓಡಿ ಹೋಗಿ ಮುಗ್ಧರಂತೆ ಕೂರುತ್ತಿದ್ದದ್ದು, ಅಮ್ಮ-ದೊಡ್ಡಮ್ಮ ಯಾರ ಕೆಲಸವೆಂದು ಕೇಳಿದಾಗ ಅಮಾಯಕರಂತೆ ಅಣ್ಣ-ತಂಗಿ ಮುಖ-ಮುಖ ನೋಡುತ್ತಿದ್ದದ್ದು, ನಾವೆ ಕಳ್ಳರೆಂದು ಗೊತ್ತಾದರೂ ಅಪ್ಪಂದಿರ ಬೈಗಳು ಬೇಡವೆಂದು ಸುಮ್ಮನಾಗಿ, ಎಚ್ಚರಿಕೆ ಕೊಡುತ್ತಿದ್ದ ಅಮ್ಮಂದಿರು ಎಲ್ಲ ಈಗ ನೆನಪು ಮಾತ್ರ. ಆಗ ಅಮ್ಮಂದಿರು, ಇದ್ದುದರಲ್ಲಿ ಹಂಚಿಕೊಂಡು ಖುಶಿಯಗಿರುವುದನ್ನ ಅದೆಷ್ಟು ಚೆನ್ನಾಗಿ ಬರೀ ಕಾರ್ಯದಲ್ಲಿ ತೋರಿಸಿಕೊಡುತ್ತಿದ್ದರು. ಈಗ ಅದನ್ನೆ ಮಕ್ಕಳಿಗೆ “ಶೇರಿಂಗ್, ಕೇರಿಂಗು” ಅಂತ ಅದೇನೇನೋ ನಾಟಕವಾಡಿ ಕಲಿಸೋ ಪರಿಸ್ಥಿತಿ!!

ಅದಕ್ಕೆ ಈಗ ಈ ಮೇಜು ಮೊದಲಿನಷ್ಟು ಆತ್ಮೀಯವೆನಿಸುತ್ತಿಲ್ಲ.ಆದರೂ, ಇದೆಲ್ಲವನ್ನು ಅನುಭವಿಸುವ ಅವಕಾಶ ಕೊಟ್ಟ ಅಮ್ಮಂದಿರಿಗೆ ನಿಜವಾಗಿಯೂ ಅಭಿನಂದನೆ ಸಲ್ಲಿಸಬೇಕು. ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ೩ ಜನ ವಾರಗಿತ್ತಿಯರೂ, ಬೇರೆ -ಬೇರೆ ಕೌಟುಂಬಿಕ ಹಿನ್ನಲೆಯಿಂದ ಬಂದವರು. ಆದರೆ ಮೂವರೂ ಅದೆಷ್ಟು ಬೇಗನೆ ಆ ಮನೆಗೆ ಹೊಂದಿಕೊಂಡರೆಂದು ಈಗಲೂ ನಮಗೆ ಯಕ್ಷ ಪ್ರಶ್ನೆಯೆ.

ಅನಿವಾರ್ಯ ಕಾರಣಗಳಿಂದ ಅಜ್ಜನ ಮಾತಿನಂತೆ ಬೇರೆ-ಬೇರೆಯಾಗಿ ಇರಬೇಕಾಗಿ ಬಂದರೂ, ಇಂದಿಗೂ ಒಟ್ಟಾಗಿಯೆ ಇದ್ದಾರಿವರು, ಮನದಾಳಗಳಲ್ಲಿ. ಅಣ್ಣ-ತಮ್ಮಂದಿರು ಜಗಳವಾಡಿದರೂ, ಸಣ್ಣ-ಪುಟ್ಟ ಮಾತುಗಳು ಬಂದು ಹೋದರೂ, ಇವರುಗಳು ನಿರ್ಲಿಪ್ತರು. ಯವತ್ತೂ ಮಾತಿಗೆ-ಮಾತಾಡಿದ್ದಾಗಲಿ, ಸಿಟ್ಟು ಮಾಡಿಕೊಂಡದ್ದಂತು ನೋಡಿದ್ದಿಲ್ಲ ಇದುವರೆಗೂ. ಇದೇ ಜೀವನವೆಂದು ಕಲಿಸಿ ಕೊಟ್ಟ ಮಹಾನುಭಾವರು. ಮಕ್ಕಳೆದುರಿಗಂತೂ ಇವರು ತುಟಿ-ಪಿಟಿಕ್ಕೆಂದಿದ್ದಿಲ್ಲ.ಅದೆಲ್ಲವೂ ಈಗ ನೆನಪು ಮಾತ್ರವೆ. ಅದಕ್ಕೆ ಮೇಜು ಮೊದಲಿನಷ್ಟು ಆತ್ಮೀಯವೆನಿಸುತ್ತಿಲ್ಲ. ಅದು ಬರೀ ಮೇಜೀಗ. ಮೊದಲಿನ ಸೋಜಿಗದ ಕಲ್ಲಲ್ಲ!!


– ಸ್ಮಿತಾ ಆಲಂಗಾರು